ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು?

Submitted by ಮಂಜುಬೊಮ್ನಳ್ಳಿ on Fri, 01/04/2008 - 14:26
ಬರಹ

ಕೊಡಚಾದ್ರಿ ಸುದ್ದಿಯಲ್ಲಿದೆ. ಅಲ್ಲಿಗೆ ೧೦ ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಸಮೀಪದ ನಾಗೋಡಿಯಲ್ಲಿ ೩ ಕೋಟಿ ರೂ.ನ ರೆಸಾರ್ಟ್ ಇವುಗಳ ಅಗತ್ಯವನ್ನು ಪ್ರಶ್ನಿಸಿ ಕೇಮಾರು ಸಾಂದಿಪನಿ ಆಶ್ರಮದ ಈಶವಿಠಲದಾಸ ಸ್ವಾಮಿ ಮತ್ತು ಹಿಂದೂ ಸೇನೆಯ ಪ್ರಮೋದ ಮುತಾಲಿಕ ಹೈಕೊರ್ಟಿನಲ್ಲಿ ಕೇಸು ಜಡಿದಿದ್ದಾರೆ. ಕೋರ್ಟು ಕಾರಣ ಕೇಳಿ ಸರ್ಕಾರಕ್ಕೆ ನೋಟೀಸ್ ನೀಡಿದೆ.
ಇತ್ತ ಮಾಜಿ ಶಾಸಕ ಅರಗ ಜ್ನಾನೇಂದ್ರ ರಸ್ತೆ - ರೆಸಾರ್ಟು ಅಂದ್ರೆ ಕೊಡಚಾದ್ರಿಯ ಅಭಿವ್ರದ್ಧಿ. ‘ಡೆವಲಪ್ಮೆಂಟು’ ಆದ್ರೆ ಸ್ಥಳೀಯರ ಜೀವನ ಮಟ್ಟ ಉತ್ತಮಗೊಳ್ಳುತ್ತದೆ. ಇದನ್ನು ಬೇಡ ಅನ್ನೋರು ಅಭಿವ್ರದ್ಧಿ ವಿರೋಧಿಗಳು ಅನ್ನುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ ಇರೋ ರೆಸಾರ್ಟು ಜನಸಾಮಾನ್ಯರಿಗಲ್ಲ ಅನ್ನೋದಂತೂ ನಿಜ, ಅದು ಹೇಗೆ ಸ್ಥಳೀಯರಿಗೆ ಸಹಾಯ ಮಾಡುತ್ತದೋ ಗೊತ್ತಿಲ್ಲ.
ಕೇಮಾರು ಸ್ವಾಮಿಜಿಯ ಕಾವಿ ಬಟ್ಟೆಗೆ ಹಸಿರು ಛಾಯೆ ಬಂದಿದ್ದರೆ ಸ್ವಲ್ಪ ಸಮಾಧಾನವಾಗುತ್ತಿತ್ತೇನೋ. ಕೊಡಚಾದ್ರಿ ಧಾರ್ಮಿಕ-ಆಧ್ಯಾತ್ಮಿಕ ಶಕ್ತಿಕೇಂದ್ರ, ರಸ್ತೆ ಅಲ್ಲಿಯ ಅಧ್ಯಾತ್ಮಿಕ ವಾತಾವರಣಕ್ಕೆ ಘಾಸಿ ಮಾಡುತ್ತದೆ, ಅಲ್ಲಿಗೆ ಜೀಪುಗಳು ಬರೋದೂ ಬೇಡ ಅನ್ನುವ ಇವರಿಗೆ ಕೊಡಚಾದ್ರಿ ಪರಿಸರದ ಅಪರೂಪದ ಅತಿ ಸೂಕ್ಷ್ಮ ಜೈವಿಕ ವ್ಯವಸ್ಥೆಯ ಕುರಿತಾಗಲೀ, ರಮ್ಯಾದ್ಭುತ ನಿಸರ್ಗ ಸ್ರಷ್ಟಿಯ ಬಗ್ಗೆಯಾಗಲೀ ಅದೆಷ್ಟು ಕಾಳಜಿಯಿದೆಯೋ ತಿಳಿಯದು.

ಬೆಟ್ಟಕ್ಕೆ ರಸ್ತೆ ಅಂದ್ರೆ ಮಾಲಿನ್ಯದ ರಹದಾರಿ, ಕೊಡಚಾದ್ರಿ ತನ್ನೆಲ್ಲ ನಿಸರ್ಗ ಸಂಪತ್ತಿನೊಂದಿಗೆ ಮೂಲರೂಪದಲ್ಲಿ ಉಳಿಯಬೇಕು ಎನ್ನುವ ಅಭಿಪ್ರಾಯವಿರುವವರೂ ಸಹ ನಿಧಾನಕ್ಕೆ ಕೊಡಚಾದ್ರಿ ಪರಿಸರ ಸಂರಕ್ಷಣ ವೇದಿಕೆಗೆ ಬೆಂಬಲ ಸೂಚಿಸತೊಡಗಿದ್ದಾರೆ. ಕಾಂಕ್ರೀಟ್ ರಸ್ತೆ ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಹೇಗೆ ಅನುಕೂಲವೋ ಹಾಗೆ ಕಳ್ಳನಾಟಾ ಹೊಡೆಯುವವರಿಗೆ, ಅನಧಿಕ್ರತ ಗಣಿಗಾರಿಕೆಗೆ, ಪ್ಲಾಸ್ಟಿಕ್ ಸಂಸ್ಕ್ರತಿಯ ಸ್ವೇಛ್ಚಾಚಾರಕ್ಕೆ ಹಾದಿಯಾಗಲಿದೆ ಎನ್ನುವ ಭಯಮಿಶ್ರಿತ ಕಳಕಳಿ ಅವರದು.
ಕೊಡಚಾದ್ರಿಯ ರಸ್ತೆ-ರೆಸಾರ್ಟಿನ ವಿಷಯ ದಿನದಿಂದ ದಿನಕ್ಕೆ ಗೊಂದಲಮಯವಾಗುತ್ತ ಸಾಗಿದೆ. ಲಾಭ-ನಷ್ಟಗಳ ಲೆಕ್ಕಚಾರ ನಡೆದಿದೆ. ರಸ್ತೆ-ರೆಸಾರ್ಟಿನ ನೆಪದಲ್ಲಿ ಸ್ವಹಿತ ರಾಜಕೀಯದ ಗಾಳಿಯಿಂದಲೇ ಕೊಡಚಾದ್ರಿ ಪರಿಸರ ಮಲಿನಗೊಳ್ಳುವ ಅಪಾಯ ಕಾಣಿಸುತ್ತಿದೆ.

ಲೇಖನ ವರ್ಗ (Category)