ಬಾಳನಾಳುವ ಯೋಗಿ
ಭಾವ ಗಂಗೆಯಲಿ ಬಂದ ಜೀವ ತರಂಗವಿದು
ಹುಟ್ಟು ಸಾವುಗಳೊಳಗೆ ಬದುಕಬೇಕು
ಬಾಳ ಪುಟಗಳ ತಿರುವಿ ನೋಡಬೇಕು..
ನಾವು ಈ ಭುವಿಯಲ್ಲಿ ಹುಟ್ಟಿದ್ದೇವೆ ಅಂದರೆ ಭುವಿಯಂತೆ, ನಾವು ಚಲಿಸಬೇಕು.ಪ್ರಕೃತಿಯ ಚಲನದಲ್ಲಿ ಚಲನವಾಗಿ ನಡೆಯಬೇಕು ಆಗಲೇ ಹುಟ್ಟಿಗೊಂದು ಅರ್ಥ.ಈ ಬದುಕೆಂಬುದು ನಮ್ಮ ಕೈಯ್ಯಲ್ಲಿರುವ ವರ. ಸಿಕ್ಕಿರುವುದು ಮೂರು ದಿನಗಳ ವರವಾದರೂ ನೂರು ದಿನದಂತೆ ಬದುಕಿ ತೋರಿಸುವುದು ನಿಜವಾದಕಲೆ.
ಇಲ್ಲಿ ನಾವು ಸುಖ ದುಃಖಗಳೊಡನೆ ಪಯಣಿಸಬೇಕು. ಆದರೆ ಸುಖವೆಂಬುದು ಭ್ರಮೆಯೆಡೆಗೆ ಒಯ್ಯುವ ಮಾಯೆ ಆಗಬಾರದು,ದುಃಖವೆಂಬುದು ಪತನದ ದಾರಿಯಾಗಬಾರದು. ಸುಖದಲ್ಲಿ ಸಂತಸವಿದೆಯೇ?! ದುಃಖಗಳು ರಸ್ತೆಯ ಹಂಪುಗಳಿದ್ದಂತೆ,ಒಮ್ಮೆ ನಿಲ್ಲುವ ಕೆಂಪು ಸಿಗ್ನಲ್ಗಳಿದ್ದಂತೆ. ನಿಂತಾಗ ನೂರು ಜನರ ನಡುವೆ ನೂರು ಮಾತುಗಳನರಿಯಲು, ಹೊಸ ಪಾಠಗಳ ಕಲಿಯಲು ಮರೆಯಬಾರದು.ಬದುಕಬೇಕು ಬದುಕಿನ ಚಲನೆಯಲ್ಲೇ ಶಕ್ತಿ ಇದೆ. ಸರೋವರದ ನಿಂತ ನೀರಿನ ಮೇಲೆ ಎಸೆದ ಸಣ್ಣ ಕಲ್ಲು ಇಡೀ ಸರೋವರದಲ್ಲೂ ಅಲೆಗಳನ್ನು ಮೂಡಿಸುತ್ತದೆ. ಪ್ರತಿ ಕಣ ಕಣವನ್ನೂ ಕಂಪಿಸುತ್ತದೆ. ಈ ಬದುಕೂ ಅಷ್ಟೇ! ಚಲನೆ ಇಲ್ಲದ ನಿಂತನೀರಾದರೆ ಸುಖ ದುಃಖ ಎಂಬ ಸಣ್ಣ ಕಲ್ಲು ಎಬ್ಬಿಸುವ ದೊಡ್ಡ ಅಲೆಗೆ ಅಲ್ಲಾಡಿ ಅಲ್ಲಿಯೇ ಮಲಗುತ್ತದೆ.ನಿಂತ ನೀರಂತಿರುವ ಜೀವನವೆಂದರೆ ಬರಿ ಅದೇ ತಲ್ಲಣ ಕಂಪನ ಅಲೆ!
ಬದುಕಿಗೊಂದು ಮಹತ್ತರ ಆಸೆ ಇರಬೇಕು. ಅದರತ್ತ ಅನ್ವೇಷಣೆ ಇರಬೇಕು. ನಾವು ಸುತ್ತಲಿನ ಪರಿಸರದ ಸಮಾಜದ ಅಚ್ಚರಿಯನ್ನು,ಸೌಂದರ್ಯವನ್ನು, ಬೆಳದಿಂಗಳ ಕಂಪನ್ನು, ತಂಗಾಳಿಯ ತಂಪನ್ನೂ ಆಸ್ವಾದಿಸಿ ನಾವು ನಮ್ಮೊಳಗಿನ ಸಿಹಿಯನ್ನು ಅರಿಯಬೇಕು.
ಈ ಅಗೊಚರ ಧೂಳ ಕಣಗಳೂ ಅದೆಷ್ಟೋ ಸಾಸಿರ ವರ್ಶಗಳಿಂದ ಸೂರ್ಯನ ಧಗೆಗೆ ಕಾದು, ಮಳೆಯ ರಭಸದಿ ಸವೆದು ಬದಲಾಗಿದೆ ,ಬದಲಾಗುತ್ತಿದೆ. ನಾವು ಸುಪ್ತರಾಗುವವರೆಗೂ ಸತ್ವಯುತವಾಗಿ ನಡೆಯೋಣಾ.
ನಾಟಕದಳನುವಿಂದ ಬೆರೆತದನು ಮೆಚ್ಚೆನಿಸಿ
ನೋಟಕನುಮಾಗಿ ತಾಂ ನಲಿದು ನಲಿಯಿಸುವಾ
ಪಾಠವನು ಕಲಿತವನೆ ಬಾಳನಾಳುವ ಯೋಗಿ
ಆಟಕಂ ನಯವುಂಟು ಮಂಕುತಿಮ್ಮ.