ಕರ್ಮಯೋಗಿ-ಭಾಗ ೨(ಚಿತ್ತ)

ಕರ್ಮಯೋಗಿ-ಭಾಗ ೨(ಚಿತ್ತ)

ಬರಹ

ಅಷ್ಟು ಸಣ್ಣ ಹುಡುಗನ ಬಾಯಿಂದ ಈ ತರಹದ ಮಾತುಗಳನ್ನು ಕೇಳಿದ ಭಾಗೀರಥಮ್ಮನವರು, ಮಗ ಎಷ್ಟು ಬೇಗ ಮಾನಸಿಕವಾಗಿ ಬೆಳೆದು ಬಿಟ್ಟಿದ್ದಾನೆ,ನಮ್ಮೆಲ್ಲರ ಕಷ್ಟಗಳನ್ನು, ದುಃಖವನ್ನೂ  ಅರಿತು ಈ ರೀತಿಯ ಮಾತನಾಡುತ್ತಿದ್ದಾನೆ ಎಂದು ಮನಗಂಡು, ಆನಂದದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತರಾಗಿ ಹೇಳಿದರು "ಬೇಡ ಕಣೋ ಮಾರುತಿ.ಈ ತರ ಎಲ್ಲಾ ಮಾತಾಡಬೇಡ. ನೀನು ನಮ್ಮಗಳಿಗೋಸ್ಕರ ಇಲ್ಲಿಯ ತನಕ ಪಟ್ಟ ಶ್ರಮವೇ ಸಾಕಪ್ಪ. ನಮ್ಮದು ಹೇಗೋ ನಡೆಯುತ್ತೆ.ನೀನಿನ್ನೂ ಬೆಳೆದು ಫಲ ನೀಡಬೇಕಾದ ಮರ. ಈ ಸಸಿಯನ್ನ ಇಲ್ಲಿಯೇ ಚಿವುಟಿದರೆ ಆ ದೇವನೂ ನಮ್ಮನ್ನ ಮೆಚ್ಚಲಾರ. ಆದ್ದರಿಂದ ನೀನು ಶಿವಮೊಗ್ಗಾಕ್ಕೋ, ಮೈಸೂರಿಗೋ ಹೋಗಿ ಕಾಲೇಜು ಸೇರಿಕೊಂಡು ನಿನ್ನ ಓದನ್ನು ಮುಂದುವರೆಸು. ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ನಿನ್ನ ಬಾಳನ್ನು ಹಸನು ಮಾಡಿಕೋ. ಆಮೇಲೆ ನಮ್ಮ ಬಗ್ಗೆ ಯೋಚನೆ ಮಾಡು.ಅಲ್ಲಿಯವರೆಗೆ ನಮ್ಮಗಳ ಯೋಚನೆಯನ್ನು ಬಿಟ್ಟುಬಿಡು".

 

ಭಾಗೀರಥಮ್ಮನ ಮಾತನ್ನು ಕೇಳಿದ ಎಲ್ಲರೂ "ಹೌದು ಕಣೊ ಮಾರುತಿ, ನಿನ್ನ ನಿರ್ಧಾರ ಸರಿಯಲ್ಲ.ಅಮ್ಮನ ಮಾತಿನಂತೆ ನಡೆದುಕೋ" ಎನ್ನುತ್ತಿದ್ದಂತೆಯೇ, ಅಲ್ಲಿಯೇ ನಿಂತು ಇವೆಲ್ಲವನ್ನೂ ನೋಡುತ್ತಾ, ಎಲ್ಲಾ ಮಾತುಗಳನ್ನೂ ಕೇಳುತ್ತಿದ್ದ ಭಟ್ಟರು "ಲೇ ಮಾಣಿ, ನನ್ನನ್ನ ಒಂದೂ ಮಾತೂ ಕೇಳದೆ ನೀ ಇಂತಾ ನಿರ್ಧಾರ ತಗಳ್ಳೂದ. ನೀ ನನ್ನ ಮೇಲಿಟ್ಟ ವಿಶ್ವಾಸ ಇಷ್ಟೇನಾ" ಅಂತ ಚೆನ್ನಾಗಿ ಬೈದ್ರು. ಮತ್ತೆ ಅವರೇ ಮಾರುತಿಯ ಅಪ್ಪ, ಅಮ್ಮನನ್ನುದ್ದೇಶಿಸಿ "ನೀವೇನು ಯೋಚನೆ ಮಾಡಬೇಡಿ.ಇನ್ನು ಮುಂದೆ ಮಾರುತಿ ಕಾಲೇಜಿಗೆ ಸೇರಿ ಅವನ ಓದು ಪೂರಾ ಮುಗಿಯುವ ತನಕ ಅವನ ಜವಾಬ್ದಾರಿ ನನ್ನದೇ" ಅಂತಾ ಹೇಳಿ ಎಲ್ಲರ ಮನಸ್ಸಿನಲ್ಲಿ ಮುಂದೆ ಹೇಗೋ, ಎಂತೋ ಅಂತಿದ್ದ ಭಯ, ದುಗುಡ ಎಲ್ಲವನ್ನೂ ಇಳಿಸಿ ನಿರಮ್ಮಳವಾಗಿ ಉಸಿರಾಡುವಂತೆ ಮಾಡಿದರು.

 

ಅಮ್ಮನ ಪ್ರೀತಿಯ ಮಾತು, ಪ್ರೇಮಮಯಿ ಭಟ್ಟರ ವಿಶ್ವಾಸದ ನುಡಿಗಳನ್ನು ಕೇಳಿದ ಮಾರುತಿಯ ಮನಸ್ಸು ಸ್ವಲ್ಪ ಮಟ್ಟಿಗೆ ತಿಳಿಯಾಗಿತ್ತು. ಬರೀ ಕಷ್ಟಗಳನ್ನೇ ಅನುಭವಿಸುತ್ತಾ ಬೆಳೆದ ತಾನು ಆ ಸಮಯದಲ್ಲಿ ತೆಗೆದುಕೊಂಡ ನಿರ್ಧಾರ ತನ್ನ ಮನದಾಳದ ಮಾತಲ್ಲ, ಅನುಭವಿಸಿದ ಯಾತನೆಯಿಂದ ಮನ ಕುರುಡಾಗಿ ಆಡಿಸಿದ ಮಾತು ಅಂತ ಅವನಿಗೂ ಅನ್ನಿಸಿತು. ಭಟ್ಟರು ಹೇಳಿದ ಮಾತನ್ನು ಕೇಳಿ ಮನಸ್ಸಿನ ಕತ್ತಲೆ ಕಳೆದು ಪ್ರಕಾಶಮಾನವಾಗಿ ಮುಖದಲ್ಲಿ ನಗೆ ಅರಳಿತ್ತು. ಆ ಕ್ಷಣದಲ್ಲಿ ಅಲ್ಲಿ ನಿಂತವರು ಭಟ್ಟರಲ್ಲ ಸಾಕ್ಷಾತ್ ದೇವರು ಅನ್ನಿಸಿ ಓಡಿ ಹೋಗಿ ಅವರ ಕಾಲಿಗೆರಗಿದ್ದ.ಭಟ್ಟರು ಅವನನ್ನ ಹಿಡಿದೆತ್ತಿ "ನನಗೆ ನಿನ್ನ ಪ್ರ್‍ಈತಿ  ಒಂದೇ ಸಾಕಪ್ಪ, ಮೊದಲು ನಿನ್ನ ಹೆತ್ತವರಿಗೆ ನಮಸ್ಕರಿಸು" ಎಂದು ಅವನನ್ನು ಆ ಕಡೆ ಕಳಿಸಿದರು.

 

ಈ ಘಟನೆಗಳೆಲ್ಲಾ ನಡೆದು ಮಾರುತಿಯ ಬೇಸಗೆ ರಜೆಯೂ ಮುಗಿಯುವ ಹೊತ್ತಿಗೆ ಅವನು ಮೈಸೂರಿಗೆ ಕಾಲೇಜು ಸೇರಲು ಹೊರಟು ನಿಂತ. ಭಟ್ಟರು ಖುದ್ದಾಗಿ ತಾವೇ ಮಾರುತಿಯ ಮನೆಗೆ ಬಂದು ಕಾಲೇಜು ಸೇರಲಿಕ್ಕೆ ಬೇಕಾದ ಹಣ ಮತ್ತು ಅವನ ಕೆಲವು ದಿನಗಳ ಕೈಖರ್ಚಿಗಾಗುವಷ್ಟು ದುಡ್ಡು ಕೊಟ್ಟು, ಮೈಸೂರಿನಲ್ಲಿರುವ ತಮ್ಮ ಸ್ನೇಹಿತನೊಬ್ಬನ ಮನೆಯಲ್ಲಿ ಮಾರುತಿಯ ತಕ್ಷಣದ ವಸತಿ ವ್ಯವಸ್ಥೆ ಮಾಡಿ, ಮಾರುತಿಯ ಕೈಯಲ್ಲೇ ಗೆಳೆಯನಿಗೊಂದು ಪತ್ರವನ್ನೂ ಬರೆದು ಕೊಟ್ಟರು. ಮನೆಯವರನ್ನೂ, ಭಟ್ಟರನ್ನೂ ಬೀಳ್ಕೊಂಡು, ಮನದಲ್ಲಿ ಹೊಸೆದ ಹೊಸ ಕನಸಿನ ಪ್ರಭೆಯಿಂದ ಮುಖದಲ್ಲಿ ಸಂತಸದ ನಗೆಯನ್ನು ಹೊತ್ತು, ಉಜ್ವಲ ಭವಿಷ್ಯದೆಡೆಗೆ ಹೊರಟಿದ್ದೇನೆಂಬ ಉತ್ಸಾಹದಿಂದ ಮೈಸೂರಿನ ಬಸ್ಸನ್ನೇರಿದ ಮಾರುತಿ.

 

ಭಟ್ಟರು ಕೊಟ್ಟ ವಿಳಾಸದಿಂದ ಮೈಸೂರಿನಲ್ಲಿರುವ ಅವರ ಸ್ನೇಹಿತ ಸುಬ್ಬಯ್ಯನ ಮನೆಯ ಬಾಗಿಲು ತಟ್ಟಿದ ಮಾರುತಿಯನ್ನು ಕಮಲಮ್ಮ ಆತ್ಮೀಯತೆಯಿಂದ ಬರಮಾಡಿಕೊಂಡರು. ಅವನು ಪ್ರಯಾಣದ ಆಯಾಸವನ್ನು ಕಳೆದು ಒಳ್ಳೆಯ ಊಟ ಮಾಡಿ ಮುಗಿಸುವಷ್ಟರಲ್ಲಿ ಸುಬ್ಬಯ್ಯನವರು ಮನೆಗೆ ಬಂದರು. ಮಾರುತಿಯನ್ನು ಮಾತನಾಡಿಸಿ ತಮ್ಮ ಗೆಳೆಯ ಕಳುಹಿಸಿ ಕೊಟ್ಟ ಪತ್ರವನ್ನು ಓದಿದ ಸುಬ್ಬಯ್ಯ ಕೆಲವು ದಿನಗಳಲ್ಲೇ ಮಾರುತಿಯ ವಾಸಕ್ಕೊಂದು ಕೋಣೆಯನ್ನು ಹುಡುಕಿ ಕೊಡುವುದಾಗಿಯೂ, ಅಲ್ಲಿಯವರೆಗೆ ನಿಸ್ಸಂಕೋಚವಾಗಿ ತಮ್ಮ ಮನೆಯಲ್ಲಿ ಉಳಿಯಬಹುದೆಂದೂ ಹೇಳಿದರು.

 

ಮರುದಿನವೇ ಮಾರುತಿ ಮೈಸೂರಿನ ಕಾಲೇಜಿನಲ್ಲಿ ಪ್ರವೇಶ ಪಡೆದು ಸುಬ್ಬಯ್ಯನವರ ಮನೆಯಿಂದಲೇ ಕಾಲೇಜಿಗೆ ಹೋಗಿ ಬರಲಾರಂಭಿಸಿದ. ಒಂದೆರಡು ವಾರವಾಗುವಷ್ಟರಲ್ಲಿ ಸುಬ್ಬಯ್ಯನವರು ಮಾರುತಿಗೆಂದು ಒಂದು ಬಾಡಿಗೆ ಕೋಣೆಯನ್ನು ವ್ಯವಸ್ಥೆ ಮಾಡಿ ಮನೆಗೆ ಬರುವಷ್ಟರಲ್ಲಿ ಅವರಿಗೊಂದು ಟೆಲಿಗ್ರಾಮ್ ಬಂದಿತ್ತು. ಗರ ಬಡಿದವರಂತೆ ನಿಂತ ಸುಬ್ಬಯ್ಯನಿಗೆ ಕಮಲಮ್ಮ ಬಂದು ಕೂಗಿದಾಗಲೇ ಎಚ್ಚರ. "ಭಟ್ಕಳದಲ್ಲಿದ್ದ ನನ್ನ ಸ್ನೇಹಿತ ಭಟ್ಟ, ಹೋಟೆಲ್ ಇಟ್ಕೊಂಡಿದ್ನಲ್ಲ, ಅವನು ಹೋಗಿಬಿಟ್ನಂತೆ ಕಣೆ" ಎನ್ನುತ್ತಾ ಅಲ್ಲೆ ಕುರ್ಚಿಯ ಮೇಲೆ ಕುಸಿದು ಕುಳಿತರು. ಆಗಷ್ಟೆ ಕಾಲೇಜು ಮುಗಿಸಿ ಬಂದ ಮಾರುತಿಗೂ ಈ ವಿಷಯ ತಿಳಿದು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದ ಹಾಗಾಯಿತು. ಸುಬ್ಬಯ್ಯ ಮತ್ತು ಮಾರುತಿ ಭಟ್ಕಳಕ್ಕೆ ಹೋಗುವುದೆಂದು ನಿರ್ಧರಿಸಿ ತಕ್ಷಣ ಹೊರಟರು.ಭಟ್ಟರ ಕ್ರಿಯೆಗಳೆಲ್ಲ ಮುಗಿದ ಮೇಲೆ ಸುಬ್ಬಯ್ಯ ಮೈಸೂರಿಗೆ ಹೊರಟು ನಿಂತಾಗ, ಏನೂ ತೋಚದ ಮಾರುತಿ ತನ್ನ ಮನೆಗೆ ವಾಪಾಸಾಗಿದ್ದ. ಮನೆಯಲ್ಲಿ ಅಪ್ಪ, ಅಮ್ಮ ಎಲ್ಲ ಇಷ್ಟು ಸಣ್ಣ ವಯಸ್ಸಿಗೇ ಭಟ್ಟರನ್ನು ಬಲಿ ತೆಗೆದುಕೊಂಡ ವಿಧಿಯನ್ನು ಹಳಿಯುತ್ತಿದ್ದರೆ, ಆ ವಿಧಿಯ ಬಗ್ಗೆ, ತನ್ನ ಮುಂದಿನ ಓದಿನ ಬಗ್ಗೆ ಯೋಚಿಸುತ್ತಾ ಮಾರುತಿ ಖಿನ್ನನಾಗಿ ಕುಳಿತ.

 

ತನ್ನ ಭವಿಷ್ಯದ ಕುರಿತು ಕಂಡ ಕನಸೆಲ್ಲಾ ನುಚ್ಚು ನೂರಾಗಿ, ಮತ್ತೆ ಮೈಸೂರಿಗೆ ಹೋಗಿ ಅಲ್ಲಿಯ ವಸತಿಯ ಮತ್ತು ವೈಯಕ್ತಿಕ ಖರ್ಚು ವೆಚ್ಚಗಳನ್ನೂ, ನಂತರದ ವರ್ಷಗಳ ಕಾಲೇಜಿನ ವೆಚ್ಚವನ್ನು ಯಾರ ಸಹಾಯವೂ ಇಲ್ಲದೆ ಭರಿಸಲು ಅಶಕ್ತನಾದ ಮಾರುತಿಯ ಮುಂದಿನ ವಿದ್ಯಾಭ್ಯಾಸ ಅಷ್ಟಕ್ಕೇ ಕಮರಿ ಹೋಯಿತು. ಅಲ್ಲೇ ಹತ್ತಿರದ ಸೊರಬದ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕನ ಜಾಗವೊಂದು ಖಾಲಿ ಇದೆ ಎಂದು ತಿಳಿದ ಮಾರುತಿ ಅಲ್ಲಿಗೊಂದು ಅರ್ಜಿ ಹಾಕಿದ ಸ್ವಲ್ಪ ದಿನದಲ್ಲೇ ಶಾಲೆಯ ಅಧ್ಯಾಪಕನಾಗಿ ಕೆಲಸ ಸಿಕ್ಕಿತು. ಅಂತೂ ಕೊನೆಗೂ ಅವನಲ್ಲಿದ್ದ ಹತಾಶೆಯ ಮನೋಭಾವ ಕಡಿಮೆಯಾಗಿ ಸ್ವಲ್ಪ ಲವಲವಿಕೆ ಮೂಡಿ ಸೊರಬಕ್ಕೆ ಪ್ರಯಾಣ ಬೆಳೆಸಿದ.

 

ಆ ಸಣ್ಣ ವಯಸ್ಸಿಗೇ ಜೀವನದಲ್ಲಿ ವಿವಿಧ ರೀತಿಯ ಅನುಭವಗಳನ್ನು ಪಡೆದ ಮಾರುತಿ ಬಂದದ್ದನ್ನೆಲ್ಲಾ ಒಳಿತಾಗಲಿಕ್ಕೆ ಬರುವುದು ಎನ್ನುವ ಭಾವದಿಂದ, ಕಾನೂನನ್ನು ಅಭ್ಯಾಸ ಮಾಡಿ ವಕೀಲಿ ವೃತ್ತಿಯನ್ನು ಹಿಡಿಯಬೇಕೆಂದಿದ್ದ ಆಸೆಯನ್ನು ಅಲ್ಲಿಯೇ ಚಿವುಟಿ ಹಾಕಿದ.

 

ಅಧ್ಯಾಪಕ ವೃತ್ತಿಯಲ್ಲಿ ದೊರೆಯುತ್ತಿದ್ದ ಅಲ್ಪ ಸಂಬಳದಲ್ಲಿ ಬಹುಪಾಲನ್ನು ಮನೆಗೆ ಕಳುಹಿಸುತ್ತಿದ್ದ. ಅಷ್ಟಾದರೂ ತಂದೆಯ ಔಷಧಿ, ತಮ್ಮ, ತಂಗಿಯರ ವಿದ್ಯಾಭ್ಯಾಸ, ಮನೆಯ ಖರ್ಚು ಇವನ್ನೆಲ್ಲ ತೂಗಿಸುವುದು ಭಾಗೀರಥಮ್ಮನಿಗೆ ಕಷ್ಟವೇ ಆಗಿತ್ತು. ತಾನೇ ಸಂಪಾದಿಸುತ್ತಿದ್ದರೂ ಬರೀ ಗಂಜಿಯನ್ನು ಕುಡಿದು ಕಳೆದ ದಿನಗಳೆಷ್ಟೊ ಇದ್ದವು ಮಾರುತಿಗೆ. ತನ್ನ ಕಷ್ಟವನ್ನೂ ಎಂದೂ ಮನೆಯವರಲ್ಲಿ ಹೇಳಿಕೊಳ್ಳದೆ ಅವರ ಕಷ್ಟಗಳಿಗೆಲ್ಲ ತಾನೊಬ್ಬನೇ ದಿಕ್ಕು ಎಂಬಂತೆ ಪ್ರತೀ ತಿಂಗಳೂ ಸಂಬಳದ ಸಿಂಹಪಾಲನ್ನ ಮನೆಗೆ ಕಳಿಸುತ್ತಿದ್ದ. ತಾ ಕಂಡ ಕನಸು, ಮುಂದಿನ ಭವಿಷ್ಯ ಯಾವುದರ ಬಗ್ಗೆಯೂ ಯೋಚಿಸದೆ, ಅದು ಕೈಗೂಡದ್ದಕ್ಕೆ ಯಾರನ್ನೂ ದೂಷಿಸದೆ ಮನೆಯವರ ಯೋಗ ಕ್ಷೇಮವೇ ತನ್ನ ಬಾಳಿನ ಗುರಿಯೆಂಬಂತೆ ಮೈ ಮನಸ್ಸುಗಳನ್ನು ದೃಢಗೊಳಿಸಿಕೊಂಡ.

 

ಹೀಗೆಯೇ ಎರಡು ವರ್ಷಗಳುರುಳಿದವು. ಅಷ್ಟು ಹೊತ್ತಿಗೆ ಅಣ್ಣ ಶ್ರೀನಾಥನ ಓದು ಮುಗಿದು ಅವನಿಗೂ ನೌಕರಿ ಸಿಕ್ಕು ಮನೆಗೊಬ್ಬಳು ಸೊಸೆಯೂ ಬಂದಾಗಿತ್ತು. ಅವನು ಹೆಂಡತಿಯೊಡನೆ ದೂರದ ಊರಿನಲ್ಲಿ ಸಂಸಾರ ಹೂಡಿದ್ದ. ಆದರೂ ಮನೆಯ ಆರ್ಥಿಕ ಪರಿಸ್ಥಿತಿಯಲ್ಲೇನೂ ಸುಧಾರಣೆ ಕಂಡಿರಲಿಲ್ಲ. ಶ್ರೀನಾಥನಿಗೆ ಅವನ ಸಂಸಾರವನ್ನು ತೂಗಿಸುವುದೇ ಸರಿ ಹೋಗಿತ್ತು. ಜೊತೆಗೆ ಈಗೊಂದು ಮಗು ಬೇರೆ ಆಗಿತ್ತು. ಮಾರುತಿಗೂ ಯಾಕೋ ಈ ಅಧ್ಯಾಪಕ ವೃತ್ತಿ ಸಾಕೆನಿಸಿತ್ತು. ಕೊನೆಗೂ ಅವನ ಸ್ವಪ್ರಯತ್ನದಿಂದ ಒಂದು ಸರ್ಕಾರಿ ನೌಕರಿ ಸಿಕ್ಕಿತು. ಅದೂ ಹತ್ತಿರದ ಸಾಗರದಲ್ಲೇ ಮೊದಲ ಪೋಸ್ಟಿಂಗ್ ಆಯಿತು. ಹಾಗಾಗಿ ಒಂದು ಬಾಡಿಗೆ ಮನೆ ಮಾಡಿ ಮನೆಯವರನ್ನೆಲ್ಲಾ ಅಲ್ಲಿಗೇ ಕರೆ ತಂದು ಸಂಸಾರ ಶುರು ಮಾಡಿದ.

 

ಕೆಲಸದ ದೃಷ್ಟಿಯಿಂದ ಅವನ ಭವಿಷ್ಯಕ್ಕೊಂದು ಭದ್ರತೆ ಬಂದಿತು. ಅವನಿಗೂ ತನ್ನ ಮೇಲೆ ಸ್ವಲ್ಪ ಭರವಸೆ ಬಂತು. ತಮ್ಮ, ತಂಗಿಯರಿಗೆ ಒಂದು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುವುದು ಸಾದ್ಯ ಎಂದು ಅನ್ನಿಸಿತು. ಮಗನಿಗೆ ಹೊಸ ಕೆಲಸ ಸಿಕ್ಕಿದ್ದರಿಂದಲೂ ಮತ್ತು ಇದು ಸೂಕ್ತ ವಯಸ್ಸು ಎನ್ನಿಸಿದ್ದರಿಂದಲೂ ಭಾಗಿರಥಮ್ಮ ಮಾರುತಿಗೆ ಮದುವೆ ಮಾಡಲು ತಯಾರಿ ನಡೆಸಿದರು. ಈ ಸುದ್ದಿ ತಿಳಿದ ಮಾರುತಿ, ತನಗೆ ಮದುವೆಯೇ ಬೇಡ, ನಾನು ನಿಮ್ಮನ್ನೆಲ್ಲ ನೋಡಿಕೊಂಡು ಹೀಗೇ ಇದ್ದು ಬಿಡುತ್ತೇನೆ ಎಂದು ವರಾತ ಹಿಡಿದ. ತಾನಿರುವ ಸಂಸಾರವನ್ನೂ, ಅದು ಪಡುತ್ತಿರುವ ಸುಖವನ್ನೂ ನೋಡಿದ ಮಾರುತಿಗೆ ಅದೇಕೋ ಮದುವೆ, ಮಕ್ಕಳು, ಸಂಸಾರ ಇಂತಹ ವಿಷಯಗಳ ಮೇಲಿನ ಆಸಕ್ತಿಯೇ ಬತ್ತಿ ಹೋಗಿತ್ತು. ಇವನ ಮಾತನ್ನು ಕೇಳಿದ ಭಾಗೀರಥಮ್ಮ "ನಿನ್ನ ಹೆಸರೇನೋ ಮಾರುತಿ ಇರಬಹುದು, ಹಾಗಂತ ನೀನು ಮದುವೆ ಮಾಡಿಕೋ ಬಾರದು ಅಂತೇನು ಇಲ್ಲ ಕಣೊ, ಯಾವ ಯಾವ ವಯಸ್ಸಲ್ಲಿ ಏನೇನು ಆಗ್ಬೇಕೋ ಅವೆಲ್ಲ ಆದರೇನೆ ಚಂದ" ಅಂತ ಹೇಳಿ ಅಂತೂ ಇಂತೂ ಮಗನನ್ನು ಒಪ್ಪಿಸಿ ಕಲ್ಯಾಣಿಯೊಡನೆ ಮಾರುತಿಯ ಮದುವೆಯನ್ನು ಮಾಡಿಯೇ ಬಿಟ್ಟರು.

 

ಸಂಸಾರದ ಬಂಧನದಲ್ಲಿ ಸಿಲುಕಿದ ಮಾರುತಿಗೆ ಅಲ್ಲಿ ನಿರಾಶೆಯೇನೂ ಆಗಲಿಲ್ಲ. ಗುಣವಂತೆಯಾದ, ಅವನ ದಾರಿಗೆಂದೂ ಅಡ್ಡ ಬರದೆ, ಆ ದಾರಿಯನ್ನೇ ತನ್ನದಾಗಿಸಿಕೊಂಡ ಪತ್ನಿ, ಎರಡು ಮಕ್ಕಳು, ತಮ್ಮ ಭವಿಷ್ಯದ ಕನಸನ್ನು ಅಣ್ಣನ ಸಹಾಯದಿಂದ ನನಸಾಗಿಕೊಳ್ಳಲು ಹೊರಟ ತಮ್ಮ, ತಂಗಿಯರು, ಎಲ್ಲವೂ ಮಾನಸಿಕವಾಗಿ ಅವನನ್ನು ಗಟ್ಟಿಯಾಗಿಸಿದವು. ಅಷ್ಟು ದೊಡ್ಡ ರಥವನ್ನು ಎಳೆಯಲು ತನಗೊಬ್ಬನಿಗೇ ಕಷ್ಟ ಎನ್ನಿಸಿದರೂ ಅವನಲ್ಲಿದ್ದ ಸಂಯಮ, ಸಹನೆ, ಬೇರೆಯವರ ಕಷ್ಟಕ್ಕೆ ತುಡಿಯುವ ಮನಸ್ಸು ಇವೆಲ್ಲವೂ ಅವನಿಗೆ ಆ ರಥವನ್ನು ಮುನ್ನಡೆಸಲು ಅಗೋಚರವಾಗಿ ಸಹಾಯ ಮಾಡಿದಂತ ಗುಣಗಳು.

 

ಇಷ್ಟರ ಮಧ್ಯೆ ತಂದೆಯ ಕಾಯಿಲೆ ಮತ್ತೆ ಉಲ್ಬಣಿಸಿ, ಯಾವ ಚಿಕಿತ್ಸೆಗೂ ಬಗ್ಗದೆ ಎಲ್ಲರನ್ನೂ ಬಿಟ್ಟು ನಡೆದರು. ತಂದೆಯ ಅನುಪಸ್ಥಿತಿಯನ್ನೂ ಮಾರುತಿಯೇ ತುಂಬ ಬೇಕಾದ ಪರಿಸ್ಥಿತಿ ಉಂಟಾಯಿತು. ಈಗ ತಮ್ಮ, ತಂಗಿಯರಿಗೆ ಮಾನಸಿಕವಾಗಿ ಮಾರುತಿಯೇ ತಂದೆಯೂ ಆದನು. ಈ ಎಲ್ಲಾ ಅನುಭವಗಳು ಅವನನ್ನು ಮತ್ತಷ್ಟು ಪ್ರಬುದ್ಧನನ್ನಾಗಿ ಮಾಡಿದವು. ಜೀವನ ಕುಡಿಸುತ್ತಿರುವ ರಸವನ್ನು, ಅದು ಸಿಹಿಯಿರಲಿ, ಕಹಿಯಿರಲಿ, ಸಮಚಿತ್ತನಾಗಿ ,ಯಾವ ಉದ್ವೇಗಕ್ಕೂ ಒಳಗಾಗದೆ ಸವಿಯುವಂತ ಒಂದು ಮನಸ್ಥಿತಿಯನ್ನು ತನಗೆ ತಾನೆ ನಿರ್ಮಾಣ ಮಾಡಿಕೊಂಡುಬಿಟ್ಟಿದ್ದ ಮಾರುತಿ.

 

ವರುಷಗಳುರುಳಿದಂತೆ ಮಾರುತಿಗೆ ಉದ್ಯೋಗದ ಕ್ಷೇತ್ರದಲ್ಲೂ ಬಡತಿ ದೊರೆತು ಒಳ್ಳೆಯ ಸ್ಥಾನವನ್ನು ತಲುಪಿದ್ದ.ತಮ್ಮಂದಿರೆಲ್ಲಾ ರೆಕ್ಕೆ, ಪುಕ್ಕ ಕಟ್ಟಿಕೊಂಡು ದಿಗಂತಕ್ಕೆ ಹಾರಿದ್ದರು. ಈಗ ತಮ್ಮ ತಮ್ಮ ಗೂಡಿನಲ್ಲಿ ಮರಿಗಳೊಡನೆ ಸಂತೋಷದಿಂದಿದ್ದಾರೆ. ತಂಗಿಯೂ ಒಳ್ಳೆಯ ಮನೆ ಸೇರಿ ಸುಖವಾಗಿದ್ದಾಳೆ. ಮಾರುತಿಯ ಮಕ್ಕಳೂ ಅಪ್ಪ ಮಾಡಿದ ಪುಣ್ಯದ ಫಲವೆಂಬಂತೆ ವಿದ್ಯಾವಂತರಾಗಿ , ಜೀವನದಲ್ಲಿ ಒಳ್ಳೆಯ ಸ್ಥಾನವನ್ನ ಪಡೆದುಕೊಂಡಿದ್ದಾರೆ. ತಾನಾಗಿಯೇ ಏನನ್ನೂ ಬಯಸದ ಮಾರುತಿಗೆ ಆಗಿದ್ದೆಲ್ಲವೂ ಈಗ ಒಳಿತಾಗಿಯೇ ಇದೆ. ಭಾಗಿರಥಮ್ಮನೂ ತಮ್ಮ ಕಡೆಗಾಲದವರೆಗೂ ಮಾರುತಿಯ ಜೊತೆಯಲ್ಲೇ ಇದ್ದು ಅವನ ಮನೆಯಲ್ಲೇ ಕೊನೆಯುಸಿರೆಳದರು.

 

    ತನ್ನನ್ನು ಸಾಕಿ ಇಷ್ಟೆತ್ತರಕ್ಕೆ ಏರುವಂತೆ ಮಾಡಿದ ಅಣ್ಣನನ್ನು ತಮ್ಮ, ತಂಗಿಯರು ನೆನೆಯುವರೋ ಇಲ್ಲವೋ ಎಂಬ ಪ್ರಶ್ನೆ ಮಾರುತಿಯ ಮನದಲ್ಲೆಂದೂ ಬಂದೇ ಇಲ್ಲ. ಒಮ್ಮೊಮ್ಮೆ ಕಲ್ಯಾಣಿಯೇ ಈ ವಿಷಯವನ್ನು ಕೆದಕಿದರೆ ಮಾರುತಿಯ ಮುಖದಲ್ಲಿ ಮೂಡುವುದು ಅದೇ ಮಗುವಿನಂತ ನಗೆ, "ನನ್ನನ್ನು ಹೊಗಳಲಿ, ಜೀವನವೆಲ್ಲಾ ನನ್ನನ್ನು ನೆನೆಸಿಕೊಳ್ಳಲಿ ಎಂದು ನಾ ಅವರನ್ನು ಸಾಕಲಿಲ್ಲ. ಅವರ  ಹಣೆಯಲ್ಲಿ ಅದು ಬರೆದಿತ್ತು ಅದು ಆಗಿದೆ ಅಷ್ಟೆ. ಅದರಲ್ಲಿ ನನ್ನ ದೊಡ್ಡತನವೇನೂ ಇಲ್ಲ.ಎಲ್ಲ ಆ ದೇವರ ಚಿತ್ತ. ಇದನ್ನು ನೀನೂ ತಿಳಿದುಕೊಂಡು ಅನುಸರಿಸು. ಜೀವನದಲ್ಲಿ ಸುಖವಾಗಿರುವೆ" ಎಂಬುದೇ ಮಾರುತಿ ಕಲ್ಯಾಣಿಗೆ ನೀಡುತ್ತಿದ್ದ ಉತ್ತರ.

 

ಅವನು ತನ್ನ ಸ್ವಂತ ಮಕ್ಕಳ ವಿಷಯದಲ್ಲೂ ಹೇಳುತ್ತಿದ್ದದ್ದು ಇದೇ ಮಾತನ್ನು. ಯಾರಿಂದಲೂ ಏನನ್ನೂ ಬಯಸದ, ದೇವರಲ್ಲೂ ಸಹ ಅದು ಬೇಕು, ಇದು ಬೇಕು ಎಂದು ಬೇಡದ, ಹೆತ್ತವರಿಗೆ ಮಗನಾಗಿ, ಒಡಹುಟ್ಟಿದವರಿಗೆ ಹಿರಿಯನಾಗಿ, ಕಟ್ಟಿಕೊಂಡ ಹೆಂಡತಿಗೆ ಒಳ್ಳೆಯ ಪತಿಯಾಗಿ, ಮಕ್ಕಳಿಗೆ ತಂದೆಯಾಗಿ, ಸಮಾಜಕ್ಕೆ ಸತ್ಪ್ರಜೆಯಾಗಿ , ತಾ ಮಾಡಿದ ಕೆಲಸಗಳನ್ನೆಲ್ಲಾ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿ, ಮುಂದೆಯೂ ಅದನ್ನೇ ಅನುಸರಿಸುವ , ಕರ್ಮವೇ ತಪಸ್ಸೆಂದು ತಿಳಿದ ಮಾರುತಿ ಕರ್ಮ ಯೋಗಿಯಲ್ಲವೇ?