ಗಳಗೇಶ್ವರ ದೇವಸ್ಥಾನ - ಗಳಗನಾಥ

ಗಳಗೇಶ್ವರ ದೇವಸ್ಥಾನ - ಗಳಗನಾಥ

ಬರಹ

ನಿರ್ಮಾತೃ: ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರ (೧೦೪೨-೧೦೬೮)
ಸ್ಥಳ: ಹಾವೇರಿ ಜಿಲ್ಲೆಯ ಗಳಗನಾಥ

ಗದಗದಿಂದ ಶಿರಹಟ್ಟಿ ಮೂಲಕ ಬೆಳ್ಳಟ್ಟಿಗೆ ಬಂದು ಇಲ್ಲಿಂದ ೧೮ ಕಿಮಿ ಚಲಿಸಿದರೆ ಇಟಗಿ ಎಂಬ ಊರು. ಗದಗ ಜಿಲ್ಲೆಯ ಕೊನೆಯ ಊರಿದು. ಬೆಳ್ಳಟ್ಟಿಯಿಂದ ಹಾವೇರಿ ಜಿಲ್ಲೆಯ ಗಡಿವರೆಗೆ ರಸ್ತೆ ತೀರಾ ಕೆಟ್ಟದಿತ್ತು. ಇಟಗಿಯಿಂದ ೪ ಕಿಮಿ ಚಲಿಸಿದರೆ ಹಾವೇರಿ ಜಿಲ್ಲೆಯ ತೆರೆದಹಳ್ಳಿ. ಇಲ್ಲಿಂದ ರಸ್ತೆ ಚೆನ್ನಾಗಿತ್ತು. ಅಬ್ಬಾ ಎಂದು ನಿಟ್ಟುಸಿರುಬಿಟ್ಟ ನಮ್ಮ ಚಾಲಕ. ತೆರೆದಹಳ್ಳಿಯಿಂದ ೧೨ ಕಿಮಿ ಪ್ರಯಾಣಿಸಿದರೆ ಗಳಗನಾಥ. ಹಾವೇರಿಯಿಂದ ಗುತ್ತಲ ಮೂಲಕ ೪೬ಕಿಮಿ ಕ್ರಮಿಸಿಯೂ ಗಳಗನಾಥ ತಲುಪಬಹುದು. ಇಲ್ಲಿ ಗಳಗೇಶ್ವರ ದೇವಾಲಯವಿರುವುದರಿಂದ ಗಳಗನಾಥ ಎಂಬ ಹೆಸರು ಊರಿಗೆ. ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತಿದ್ದ ಗಳಗನಾಥರ ಹುಟ್ಟೂರು ಕೂಡಾ ಈ ಊರೇ. ಹಳ್ಳಿಯಲ್ಲಿ ಇನ್ನೊಂದು ಕಿಮಿ ಚಲಿಸಿ ತುಂಗಭದ್ರಾ ನದಿಯ ದಂಡೆಗೆ ಬಂದರೆ ಭವ್ಯವಾದ ಗಳಗೇಶ್ವರ ದೇವಾಲಯ. ನದಿ ತಟದ ಪ್ರಶಾಂತ ಮತ್ತು ಸುಂದರ ಪರಿಸರದಲ್ಲಿ ಊಟ ಮುಗಿಸಿ ನಂತರ ದೇವಾಲಯ ನೋಡಲು ತೆರಳಿದೆ.

ತುಂಗಭದ್ರಾ ನದಿ ತಟದಲ್ಲಿ ಎತ್ತರದ ಅಧಿಷ್ಠಾನದ ಮೇಲೆ ಗಳಗೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ನೋಡಲು ಅತ್ಯಾಕರ್ಷಕವಾಗಿರುವ ದೇವಸ್ಥಾನ. ಶಿಲ್ಪಕಲೆಯಲ್ಲಿ ಅಷ್ಟೇನೂ ವೈಶಿಷ್ಟ್ಯತೆಯಿರದಿದ್ದರೂ, ದೇವಾಲಯದ ಆಕಾರ ಮತ್ತು ಗರ್ಭಗುಡಿಯ ಮೇಲಿನ ಗೋಪುರದ ನಿರ್ಮಾಣ ಶೈಲಿ ಬೆರಗುಗೊಳಿಸುತ್ತವೆ. ಹನ್ನೊಂದನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಚಾಳುಕ್ಯ ಶೈಲಿಯಲ್ಲಿದೆ. ಗರ್ಭಗುಡಿ ಮತ್ತು ವಿಶಾಲವಾದ ಅಂತರಾಳವನ್ನು ಹೊಂದಿರುವ ಈ ದೇವಾಲಯವನ್ನು ಪ್ರವಾಹದಿಂದ ಹಾನಿಯಾಗದಿರಲಿ ಎಂದು ಎತ್ತರವಾದ ಅಧಿಷ್ಠಾನದ ಮೇಲೆ ಭವ್ಯವಾಗಿ ನಿರ್ಮಿಸಲಾಗಿದೆ. ನಕ್ಷತ್ರಾಕಾರದ ಅಡಿಪಾಯ ಮೇಲಕ್ಕೆ ಹೋದಂತೆ ಕಿರಿದಾಗುತ್ತಾ ಹೋಗುವುದು. ನವರಂಗವು ವಿಶಾಲವಾಗಿರುವುದರಿಂದ ಮುಖಮಂಟಪವೂ ವಿಶಾಲವಾಗಿದ್ದು ಬಹಳ ಸುಂದರವಾಗಿದೆ. ನವರಂಗವನ್ನು ೩ ಕಡೆಗಳಿಂದ ಪ್ರವೇಶಿಸಬಹುದು. ಈ ದೇವಾಲಯದಲ್ಲಿ ೨ ನಂದಿ ಮೂರ್ತಿಗಳಿವೆ. ನವರಂಗದಲ್ಲೊಂದು ದೊಡ್ಡ ನಂದಿ ವಿಗ್ರಹವಿದ್ದರೆ ದೇವಾಲಯದ ಹೊರಗಡೆ ಅಂದರೆ ನವರಂಗದ ಮುಖ್ಯ ದ್ವಾರದ ಮುಂದೆ ಸಣ್ಣ ಸ್ತಂಭದ ಮೇಲೆ ಮತ್ತೊಂದು ನಂದಿಯ ಮೂರ್ತಿಯನ್ನು ಇರಿಸಲಾಗಿದೆ.

ಇಲ್ಲಿ ಎಲ್ಲವೂ ದೊಡ್ಡ ಆಕಾರದ್ದೇ! ನವರಂಗದಲ್ಲಿ ೪ ದೊಡ್ಡ ಗಾತ್ರದ ಚಾಳುಕ್ಯ ಕಾಲದ ಕಂಬಗಳಿವೆ. ನವರಂಗದಲ್ಲಿರುವ ನಂದಿ ಬೃಹತ್ ಆಕಾರದ್ದು. ನಂತರ ದೇವಾಲಯದ ಬಾಗಿಲು ೧೨ ಅಡಿ ಎತ್ತರವಿದೆ. ಬಾಗಿಲಿನೊಳಗೆ ಕಾಲಿರಿಸಿದರೆ ಅಂತರಾಳದಲ್ಲಿ ೫ ಅಡಿ ಎತ್ತರವಿರುವ ವಿಷ್ಣು, ಗಣಪತಿ ಮತ್ತು ಸೂರ್ಯನ ಶಿಲ್ಪಗಳಿವೆ. ನಂತರ ಮುಂದೆ ಗರ್ಭಗುಡಿಯಲ್ಲಿ ಸುಮಾರು ಎರಡುವರೆ ಅಡಿ ಎತ್ತರವಿರುವ ಶಿವಲಿಂಗ.

ಇಲ್ಲಿ ದೊರಕಿರುವ ಕೆಲವು ಶಾಸನಗಳಲ್ಲಿ ನದಿಯ ರೇಖಾಚಿತ್ರಗಳಿವೆ. ಈ ದೇವಾಲಯ ಚಾಳುಕ್ಯ ದೊರೆ ಸೋಮೇಶ್ವರನ ಕಾಲಕ್ಕೆ ಸೇರಿದ್ದು ಎಂದು ಈ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲೆ ಸಮೀಪದಲ್ಲಿ ಮಲ್ಲೇಶ್ವರ, ಹೊನ್ನೇಶ್ವರ ಮತ್ತು ದತ್ತಾತ್ರೇಯ ಗುಡಿಗಳಿದ್ದು ಇವುಗಳಲ್ಲಿ ಹೊನ್ನೇಶ್ವರ ಮತ್ತು ದತ್ತಾತ್ರೇಯ ಗುಡಿಗಳು ಒತ್ತುವರಿಗೆ ಗುರಿಯಾಗಿವೆ. 

ದೇವಸ್ಥಾನದ ನವರಂಗದಲ್ಲಿ ಕುಳಿತುಕೊಂಡರೆ ಅದೊಂದು ಸುಂದರ ದೃಶ್ಯ. ಮುಂದೆ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿ. ಬೀಸುವ ತಣ್ಣನೆಯ ಗಾಳಿ. ಅಲ್ಲಿಂದ ಎದ್ದು ಬರಲು ಮನಸೇ ಆಗುತ್ತಿರಲಿಲ್ಲ. ಆ ದಿನ ನಾನು ಭೇಟಿ ನೀಡಿದ ಎಲ್ಲಾ ಸ್ಠಳಗಳಲ್ಲಿ ನನಗೆ ಬಹಳ ಇಷ್ಟವಾದದ್ದು ಗಳಗನಾಥದ ಗಳಗೇಶ್ವರ ದೇವಾಲಯ. ಶಿಲ್ಪಕಲೆಯಲ್ಲಿ ಲಕ್ಕುಂಡಿಯ ದೇವಾಲಯಕ್ಕೆ ಗಳಗೇಶ್ವರ ದೇವಾಲಯ ಸಾಟಿಯಾಗಲಾರದು. ಆದರೆ ದೇವಾಲಯದ ಆಕಾರ, ೨ ನಂದಿಗಳಿರುವ ವಿಶೇಷ ಮತ್ತು ಎಲ್ಲದಕ್ಕೂ ಮಿಗಿಲಾಗಿ ಶತಮಾನಗಳಿಂದಲೂ ದೇವಾಲಯದ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿಯ ಮೋಹಕ ದೃಶ್ಯ. ಇವೆಲ್ಲವನ್ನೂ ಪರಿಗಣಿಸಿದರೆ ಇಂತಹ ಸ್ಥಳ ಮತ್ತೊಂದಿರಲಾರದು.