ಸೋಮೇಶ್ವರ ದೇವಾಲಯ - ಹರಳಹಳ್ಳಿ
ಸ್ಥಳ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹರಳಹಳ್ಳಿ.
ಹಾವೇರಿಯಿಂದ ಗುತ್ತಲ ದಾಟಿ ಮುಂದೆ ಕವಲೊಡೆಯುವ ರಸ್ತೆಯಲ್ಲಿ ಬಲಕ್ಕೆ ತಿರುಗಿ ತುಂಗಭದ್ರಾ ನದಿಯ ಸೇತುವೆಯ ಮೊದಲು ಎಡಕ್ಕೆ ಹೊರಳಿ ಕಬ್ಬಿನ ಹೊಲಗಳ ನಡುವೆ ೨ ಕಿಮಿ ಮಣ್ಣಿನ ರಸ್ತೆಯಲ್ಲಿ ಚಲಿಸಿದರೆ ಹರಳಹಳ್ಳಿಯ ಸುಂದರ ಸೋಮೇಶ್ವರ ದೇವಾಲಯವು ಕಾಣಸಿಗುವುದು. ಇದು ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯ. ಸಿಕ್ಕಿರುವ ಶಾಸನಗಳಲ್ಲಿ ಹರಳಹಳ್ಳಿಯನ್ನು 'ವಿಕ್ರಮಪುರ' ಎಂದು ಉಲ್ಲೇಖಿಸಲಾಗಿದೆ.
ತುಂಗಭದ್ರಾ ನದಿಯ ತಟದಲ್ಲಿರುವ ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಸುತ್ತಲು ಚಪ್ಪಡಿ ಕಲ್ಲು ಹಾಸುವ ಕೆಲಸ ನಡೆಯುತ್ತಿದೆ. ನದಿಯಲ್ಲಿ ಆಗಾಗ ನೆರೆ ಬರುವುದರಿಂದ ಹರಳಹಳ್ಳಿಯ ಹಳ್ಳಿಗರಿಗೆ ಬೇರೆಡೆ ವಸತಿ ಸೌಕರ್ಯವನ್ನು ನೀಡಲಾಗಿದೆ. ಆದರೂ ಕೆಲವರು ಅಲ್ಲೇ ದೇವಸ್ಥಾನದ ಎದುರಿಗೇ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಸರಿಯಾದ ಸಮಯಕ್ಕೆ ಭಾರತೀಯ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡಿದೆ. ಇನ್ನು ಸ್ವಲ್ಪ ತಡವಾಗಿದ್ದಲ್ಲಿ ಈ ಸುಂದರ ದೇವಾಲಯದ ಅತಿ ಸಮೀಪದವರೆಗೆ ಮನೆಗಳಾಗುತ್ತಿದ್ದವು.
ದೇವಾಲಯವು ೩ ಗರ್ಭಗುಡಿಗಳನ್ನು ಹೊಂದಿದ್ದು, ೩ ಗರ್ಭಗುಡಿಗಳಿಗೂ ಗೋಪುರಗಳಿವೆ ಮತ್ತು ಎಲ್ಲಾ ಗರ್ಭಗುಡಿಗಳಲ್ಲೂ ಶಿವಲಿಂಗವಿದೆ. ದೇವಸ್ಥಾನದ ನವರಂಗ ಸಣ್ಣದಾಗಿರುವುದರಿಂದ ಇದರ ಮುಖಮಂಟಪವೂ ಸಣ್ಣದಿದೆ. ಈ ನವರಂಗಕ್ಕೆ ಒಂದೇ ದ್ವಾರ ಮತ್ತು ಇದು ದೇವಾಲಯದ ಪ್ರಮುಖ ದ್ವಾರವೂ ಹೌದು.
ಈ ದೇವಾಲಯದಲ್ಲೊಂದು ವೈಶಿಷ್ಟ್ಯವಿದೆ. ಹೆಚ್ಚಿನ ದೇವಾಲಯಗಳಲ್ಲಿ ನವರಂಗದಿಂದ ಒಳಗೆ ಕಾಲಿಟ್ಟರೆ ಅಂತರಾಳ, ನಂತರ ಗರ್ಭಗುಡಿ ಇರುವುದರಿಂದ, ಗರ್ಭಗುಡಿಯನ್ನು ಪ್ರವೇಶಿಸಬೇಕಾದರೆ ಅಂತರಾಳದ ಮೂಲಕವೇ ಬರಬೇಕು. ಆದರೆ ಇಲ್ಲಿ, ಅಂತರಾಳದ ಸುತ್ತಲೂ ಪ್ರದಕ್ಷಿಣೆ ಹಾಕಲು ಇರುವಂತೆ ನಾಲ್ಕೈದು ಅಡಿಗಳಷ್ಟು ಅಗಲವಿರುವ ಪಡಸಾಲೆಯೊಂದಿದೆ. ಆದ್ದರಿಂದ ನವರಂಗದಿಂದ ಒಳಗೆ ಕಾಲಿಟ್ಟರೆ ಈ ಪಡಸಾಲೆ ಮತ್ತು ನಂತರ ಅಂತರಾಳ. ಅಂತರಾಳದಲ್ಲಿ ದಿಕ್ಕಿಗೊಂದರಂತೆ ೪ ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳು ನೇರವಾಗಿ ಸುತ್ತಲೂ ಇರುವ ಪಡಸಾಲೆಗೆ ತೆರೆದುಕೊಳ್ಳುತ್ತವೆ. ಹಾಗೇನೇ ಪಡಸಾಲೆಯಿಂದಲೂ ೪ ಬಾಗಿಲುಗಳು ತೆರೆದುಕೊಳ್ಳುತ್ತವೆ - ೩ ಗರ್ಭಗುಡಿಗಳಿಗೆ ೩ ಬಾಗಿಲುಗಳು ಮತ್ತು ನಾಲ್ಕನೇಯದು ದೇವಾಲಯದ ಹೊರಗೆ/ಒಳಗೆ ಪ್ರವೇಶಿಸಲು ನವರಂಗದೆಡೆಗೆ. ಹಾಗಿರುವುದರಿಂದ ಇಲ್ಲಿ ಗರ್ಭಗುಡಿಗಳನ್ನು ಅಂತರಾಳದೊಳಗೆ ಕಾಲಿಡದೆ, ಪಡಸಾಲೆಯ ಮುಖಾಂತರವೇ ಪ್ರವೇಶಿಸಬಹುದು!
ದೇವಾಲಯದ ಕೆತ್ತನೆ ಕೆಲಸ ಅದ್ಭುತ. ನವರಂಗದ ಜಗುಲಿಯ ಹೊರಭಾಗದ ಮೇಲೆ ಮಿಥುನ ಶಿಲ್ಪಗಳೂ ಇದ್ದವು. ಉಳಿದಂತೆ ೩ ಗೋಪುರಗಳ ರಚನೆ ಸುಂದರವಾಗಿದೆ ಮತ್ತು ಅವುಗಳ ಮೇಲಿನ ಶಿಲ್ಪಕಲೆ ಕೂಡಾ. ಪ್ರಮುಖ ಗರ್ಭಗುಡಿಯ ಗೋಪುರದ ಹಿಂಭಾಗ ಮಿಂಚು/ಸಿಡಿಲು ಬಡಿದು ಹಾನಿಗೊಳಗಾಗಿದೆ.