ಪ್ರಿಯತಮೆಗೊಂದು ಪತ್ರ

ಪ್ರಿಯತಮೆಗೊಂದು ಪತ್ರ

ಬರಹ

ಪ್ರಿಯೆ,
ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಹೆಚ್ಚಾಗಿದೆ. ನಿನ್ನನ್ನು ಕಾಣಬೇಕೆಂಬ ಆತುರ ಈಗ
ನನ್ನ ಮನದಲ್ಲಿಲ್ಲ. ಏಕೆಂದರೆ ನಿನ್ನ ಅನುಚಿತ ವರ್ತನೆ
ದಿನ ದಿನಕ್ಕೂ ಅಧಿಕವಾಗುತ್ತಿದೆ. ಅಂದು ನೀನು ಹೇಳಿದ ಮಾತಿನಿಂದ
ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೆಂದು ಗೊತ್ತಾಯಿತು. ಮೊದಲು
ನಿನ್ನ ಮುಖದರ್ಶನ ಯಾವಾಗ ಮಾಡುವೆನೋ
ಎಂದು ಕಾಯುತ್ತಿದ್ದೆ. ಆದರೆ ಈಗ ನಿನ್ನನ್ನು ನೋಡುವುದು ಬೇಡ
ಅನ್ನಿಸುತ್ತದೆ. ನಾವಿಬ್ಬರೂ ಒಂದಾದರೆ ಯಾವಾಗಲೂ
ದುಃಖವನ್ನನುಭವಿಸಬೇಕಾಗುತ್ತದೆ. ಅದರ ಬದಲು ದೂರವಾದರೆ
ಸುಖದಿಂದಿರಬಹುದು. ನಿನ್ನ ಕಾಗದಗಳನ್ನು ಓದಿದಾಗ
ಹಿಂದೆ, ನಡೆದದ್ದೆಲ್ಲ ನೆನೆದು ದುಃಖವಾದರೂ ಸದ್ಯಕ್ಕೆ ನನ್ನ
ಮನಸ್ಸಿಗೆ ಏನೋ ಒಂದು ತರಹದ ಸಮಾಧಾನವಾಯಿತು.
ಕಡೆಯದಾಗಿ ಒಂದು ಮುಖ್ಯವಾದ ವಿಷಯ ಹೇಳುತ್ತೇನೆ.
ಇನ್ನು ಮುಂದೆ ನೀನು ನನಗೆ ಪತ್ರ ಬರೆಯುವುದು
ಬೇಡ. ನನ್ನನ್ನು ಮರೆತು ಬಾಳು. ನನ್ನಿಂದ ದೂರಾಗು
ವುದಕ್ಕೆ ದಯವಿಟ್ಟು ತಡಮಾಡಬೇಡ. ನಿನಗೆ ಶುಭವಾಗಲಿ.
ಇನ್ನು ಮುಂದೆ ಕನಸಿನಲ್ಲಿಯೂ ಕೂಡ ನಿನ್ನನ್ನು ನೆನೆಸಿಕೊಳ್ಳಲಾರೆ.

ಪ್ರಿಯೆ, ಮತ್ತೊಮ್ಮೆ ಈ ಕಾಗದವನ್ನು ಒಂದು ಸಾಲು ಬಿಟ್ಟು ಒಂದು ಸಾಲಿನಂತೆ ಓದು.