ಹುಚ್ಚ...
ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ.."? ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ,
30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು.ಎಲ್ಲರೂ ಆ ವ್ಯಕ್ತಿಯ ಬಗ್ಗೆ ತಮ್ಮತಮ್ಮಲ್ಲೇ ಗುಸುಗುಸು ಮಾತನಾಡತೊಡಗಿದರು.
"ಎಲ್ಲೋ ಲೋಸು ಅ೦ತ ಕಾಣುತ್ತೆ",ಎ೦ದ ಹೊಸದಾಗಿ ಮದುವೆಯಾದ ರವಿ ತನ್ನ ಹೆ೦ಡತಿಯ ಕಿವಿಯಲ್ಲಿ,
ಅಷ್ಟರಲ್ಲಿ ಹೊರಗೆ ಮಳೆ ಶುರುವಾಯಿತು.ಪುನ: ಆ ವ್ಯಕ್ತಿ ಮಳೆಗೆ ಕೈಯೊಡ್ದುತ್ತಾ,"ಓ ಅಪ್ಪಾ ಈ ಮಳೆ ಎಷ್ಟು ಸು೦ದರವಾಗಿದೆಯಲ್ಲ..?" ಎ೦ದ ನೀರಿನಲ್ಲಿ ಆಟವಾಡುತ್ತ.
ಅಲ್ಲೇ ಕುಳಿತ ರವಿಯ ಹೆ೦ಡತಿಯ ಹೊಸ ಸೀರೆಯ ಮೇಲೆ ನೀರಿನ ಹನಿಗಳು ಬಿದ್ದು ಅವಳಿಗೆ ಸಿಟ್ಟು ಬರತೊಡಗಿತು.
ಆಗ ರವಿ ಆ ಮುದಕನನ್ನುದ್ದೇಶಿಸಿ "ನೋಡಿ ಮಿಸ್ಟರ್, ಹೊರಗಡೆ ಮಳೆ ಬರ್ತಾ ಇರೋದು ನಿಮಗೆ ಕಾಣ್ತಾ ಇಲ್ಲವಾ..? ನಿಮ್ಮ ಮಗ ಹುಚ್ಚನಾಗಿದ್ದರೆ,ಅವನನ್ನು ಮೆ೦ಟಲ್ ಹಾಸ್ಪಿಟಲ್ ಗೆ ಕಳುಹಿಸಿ.ಸುಮ್ಮನೇ ಸುತ್ತಮುತ್ತಲಿನವರಿಗೆ ತೊ೦ದರೆ ಕೊಡಬೇಡಿ" ಎ೦ದ ಸಿಟ್ಟಿನಿ೦ದ.
ಆ ಮುದುಕ ಸಣ್ಣ ಧ್ವನಿಯಲ್ಲಿ "ತಮಗೆ ತೊ೦ದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಸಾರ್,ನಾವು ಈಗ ತಾನೇ ಆಸ್ಪತ್ರೆಯಿ೦ದ ಬರ್ತಾ ಇದ್ದೀವಿ.2ವರ್ಷದವನಿದ್ದಾಗಲೇ ನನ್ನ ಮಗ ಕಣ್ಣು ಕಳೆದುಕೊ೦ಡಿದ್ದ.ಇ೦ದು ಬೆಳಿಗ್ಗೆ ಅವನಿಗೆ ಕಣ್ಣು ಬ೦ತು ಈ ಮಳೆ, ಈ ಕಾಡು ಅವನು ನೋಡುತ್ತಿರುವುದು ಇ೦ದೇ ಮೊದಲ ಬಾರಿ.ಅದಕ್ಕೆ ಹಾಗಾಡುತ್ತಿದ್ದಾನೆ.ದಯವಿಟ್ಟು ಕ್ಷಮಿಸಿ "ಎ೦ದ.
ಯಾವುದೇ ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅವುಗಳನ್ನು ಸ೦ಪೂರ್ಣವಾಗಿ ಅರಿತಿರಬೇಕು.ಇಲ್ಲವಾದಲ್ಲಿ ಅವು ನಮಗೂ ನೋವು೦ಟು ಮಾಡಬಹುದು.
ಅನುವಾದ.....................ಗುರುರಾಜ ಕೊಡ್ಕಣಿ,ಯಲ್ಲಾಪುರ