ಮೊಳಗುವ ಹಾಡುಗಳು
ತೂ ಬಿನ್ ಬತಾಯೇ ಮುಜೆ ಲೇ ಚಲ್ ಕಹೀ...
ಜಹಾನ್ ತೂ ಮುಸ್ಕುರಾಯೇ ಮೇರಿ ಮಂಝಿಲ್ ವಹೀ...
ಅದ್ಯಾಕೋ 'ರಂಗ್ ದೇ ಬಸಂತಿ' ಸಿನಿಮಾದ ಈ ಹಾಡು ಕೇಳಿದ ಮೇಲೆ ತಲೆಯಿಂದ ಆಚೆಯೇ ಹೋಗ್ವಲ್ದು.
ರೂಮಿನಿಂದ ಹೊರಬರುತ್ತಿದ್ದಂತೆಯೇ ಇದನ್ನ ಮುಂಜಾನೆ ಹಾಡಿ ಅಪ್ಪನ ಕೈಲಿ "ಬೆಳಗಾಗಿ ದೇವರನಾಮ ಇಲ್ಲ, ಸಂಧ್ಯಾವಂದನೆ - ಪೂಜೆ ಪುನಸ್ಕಾರವಂತೂ ಇಲ್ಲವೇ ಇಲ್ಲ... ಕೆಟ್ಟ ರಾಗದಲ್ಲಿ ಸಿನಿಮಾ ಹಾಡು ಹೇಳ್ತೀಯ! ಅಚಾರ ವಿಚಾರ ಒಂದೂ ಇಲ್ಲ" ಅಂತ ಬೈಸಿಕೊಂಡದ್ದಾಯಿತು.
ಮಧ್ಯಾಹ್ನ ಕ್ರಿಕೆಟ್ ನೋಡಲು ಕುಳಿತು ಭಾರತದವರು ಗೆಲ್ಲುತ್ತಿರುವ ಸಂಭ್ರಮದಲ್ಲಿ ಮತ್ತೊಮ್ಮೆ ಬಾಯ್ಬಿಟ್ಟಾಗ ಹಚ್ ಜಾಹಿರಾತಿನಲ್ಲಿ ಬರುವಂತೆ ನಮ್ಮಣ್ಣನ ಮಗನೂ (ಜಾಹಿರಾತಿನ ಮಗುವಿನಂತೆಯೇ) ಅಳೋಕೆ ಶುರುಮಾಡ್ದಾಗ ನನಗೆ ಗೊತ್ತಿಲ್ಲದೇಯೇ ನನ್ನ ಬಾಯಲ್ಲಿ ಬರುತ್ತಿರೋ ಈ ಹಾಡಿನ ಬಗ್ಗೆ ಒಂದಷ್ಟು cautious ಆಗಿ ಇರೋದು ನನಗೇ ಒಳಿತು ಎಂದು ಮನಸ್ಸಿನೊಳಗೇ ತೀರ್ಮಾನವಾಯ್ತು.
ಆದರೇನು ಮಾಡೋದು, ಎರಡು ಮೂರು ದಿನಗಳಿಂದ ನನ್ನ ಪ್ಲೇಲಿಸ್ಟಿನಲ್ಲಿ ಈ ಹಾಡುಗಳು ಇದ್ದದ್ದರ ಪರಿಣಾಮವಾಗಿ ಕೊನೆಗೆ ಮನಸ್ಸಿನಲ್ಲಿ ಅದೇ ಹಾಡು ತಂತಾನೇ ಗುನುಗುತ್ತ ಈಗ ತಲೆಯಿಂದ ಆಚೆ ಹೋಗದೆ ಹಾಡಿನ ಅಹ್ಲಾದ ಹೋಗಿ ರೇಜಿಗೆಯಾಗಿಬಿಟ್ಟಿದೆ! ಎಂಥ ಮಹಾತ್ಮೆ, ಸಂಗೀತದ್ದು.
ಹೀಗಾಗಿದ್ದು ಮೊದಲ ಬಾರಿಯೇನಲ್ಲ. ಹಿಂದೆ ಹಲವು ಹಾಡುಗಳು ಹೀಗೆಯೇ ತಲೆಯಿಂದ ಹೊರಗೆ ಹೋಗುವ ಮಾತೆತ್ತದೇ ಕೂತದ್ದುಂಟು. ಒಮ್ಮೆ ಶಿವಮೊಗ್ಗದಲ್ಲಿ ಕ್ಲಾಸಿಕಲ್ ಹಾಡೊಂದರ ಟ್ಯೂನು ಗೊಣಗುತ್ತ ಮನೆಯೆದುರು ಆಗ ತಾನೇ ಫ್ರೆಶ್ ಆಗಿ ರೋಡನ್ನಲಂಕರಿಸಿದ್ದ ಸಗಣಿಯ ಮೇಲೆ ಪಾದವಿರಿಸಿ ಪ್ರಾಕ್ಟಿಕಲ್ ಕ್ಲಾಸು ಚಕ್ಕರ್ ಹಾಕುವಂತೆ ಮಾಡಿಕೊಂಡುಬಿಟ್ಟಿದ್ದೆ. (ಬಸವನಗುಡಿಯಲ್ಲಿ ಓಡಾಡಿದವರಿಗೆ ಇಂತಹ ಅನುಭವಗಳು ಬೇಕಾದಷ್ಟಾಗಿರುತ್ತೆ. ಸರ್ಕಾರದ ರೋಡು ತಮ್ಮ ಧನಕರುಗಳ ಕೊಟ್ಟಿಗೆಯೆಂದೇ ನಂಬಿರುವವರು ಬಸವನಗುಡಿಯಂತೆ ಶಿವಮೊಗ್ಗದಲ್ಲೂ ಬಹಳ ಮಂದಿ). ಪುಣ್ಯಾತ್ಮರಾದ ಜೂನಿಯರ್ ಲೆಕ್ಚರರ್ ಒಬ್ಬರು ಕೊನೆಯಲ್ಲಿ ಗುಟ್ಟಾಗಿ ಅಟೆಂಡೆನ್ಸ್ ಹಾಕಿ ಪ್ರಾಕ್ಟಿಕಲ್ ತಪ್ಪಿಸಿಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತ ಸ್ವಲ್ಪದರಲ್ಲೇ ತಪ್ಪಿಸಿ ನನ್ನ ಮಾರ್ಕುಗಳನ್ನು ಉಳಿಸಿದ್ದರು.
ಮತ್ತೊಮ್ಮೆ ಅದೇ ಶಿವಮೊಗ್ಗದಲ್ಲಿ ಎ ಪಿ ಎಮ್ ಸಿ ಯಾರ್ಡಿನಲ್ಲಿ ಲೂನಾ ಓಡಿಸಿಕೊಂಡು ಹೋಗುತ್ತಿರುವಾಗ ಅವತ್ತಿನವರೆಗೂ ನನ್ನ ಬಾಯಲ್ಲಿದ್ದ ಹಾಡೊಂದರ ಟ್ಯೂನು ಹಟಾತ್ತನೆ ತಪ್ಪಿಹೋಗಿ ಅದನ್ನು ನೆನಪು ಮಾಡಿಕೊಳ್ಳಲು ತಲೆಕೆಡಿಸಿಕೊಂಡಿದ್ದೆ. ತಲೆಕೆಡಿಸಿಕೊಂಡು ಆಗಿದ್ದ ಅವಾಂತರದಲ್ಲಿ ಎ ಪಿ ಎಮ್ ಸಿ ಗೇಟು ದಾಟಿದ ಕ್ಷಣದಲ್ಲೇ ಅಡ್ಡಬಂದ ಹಂದಿಯನ್ನು ತಪ್ಪಿಸಹೋಗಿ ಪಕ್ಕದಲ್ಲಿ ಮನೆಯೊಂದರ ಕಾಂಪೌಂಡಿಗೆ ಹೋಗಿ ಗುದ್ದಿದ್ದೆ! ಶಿವಮೊಗ್ಗದಲ್ಲಿ ಸುಸುಜ್ಜಿತ ಬಡಾವಣೆಗಳು - ಸ್ಲಮ್ಮು ಎಂಬ ಭೇದವಿಲ್ಲದೇ ರಾಜಾರೋಷವಾಗಿ ಹಂದಿಗಳು ಓಡಾಡಿಕೊಂಡಿರುತ್ತವೆ. ಆ ಸರ್ತಿ ಮಾತ್ರ ಅದರ ರಾಜಾರೋಷ ಹೆಚ್ಚಾಗಿ ನನಗೆ ಬುದ್ಧಿ ಕಲಿಸಲೆಂದೇ ಅದು ಅಡ್ಡ ಬಂದಿತ್ತೋ ಏನೊ. ಒಟ್ನಲ್ಲಿ ಲೂನ ಆಗಿದ್ದರಿಂದ ಅಷ್ಟಾಗಿ ಪೆಟ್ಟುಗಳಾಗದೆ ಪಾರಾಗಿದ್ದೆ.
ಇನ್ನು ಪರೀಕ್ಷೆ ಬರೆಯುವಾಗ ತಲೆಯೊಳಗೊಂದು ಟ್ಯೂನು ಸುಳಿದರೆ ಅವತ್ತಿನ ಕಥೆ ಮುಗೀತಿತ್ತು. ಒಂದೆರಡು ಸಾರಿ ಬೇರೊಂದು ಟ್ಯೂನು ಹೇಳಿಕೊಳ್ಳೋದೊ ಅಥವಾ ಮತ್ತೇನೋ ವದರಿಕೊಂಡು ಹಳೇ ಟ್ಯೂನು ಮರೆಯುವಂತೆ ಮಾಡಿಕೊಂಡು ಮುಂದಕ್ಕೆ ಸಾಗಬೇಕಿತ್ತು. ಹಾಗಾಗದಿದ್ದಾಗೆಲ್ಲ ಇಂಜಿನೀಯರಿಂಗ್ ನಲ್ಲಿ ಬಂದ ಅಂಕಗಳು ೫೦ರ ಕೆಳಗೇ!
ಮೊನ್ನೆ ಯಾಹೂನಲ್ಲಿಯೂ ('Ask yahoo'ನಲ್ಲಿ) ನನ್ನಂತೆಯೇ ಪರದಾಡಿದವನೊಬ್ಬ ಇದರ ಬಗ್ಗೆಯೇ ಪ್ರಶ್ನೆ ಹಾಕಿದ್ದು ನೋಡಿ ಈ ಕಷ್ಟ ನನ್ನೊಬ್ಬನದೇ ಅಲ್ಲ ಎಂದು ಖುಷಿಯಾಯ್ತು. ಹೀಗಾಗುವುದು ಯಾಕೆ ಎಂಬುದು ಇದುವರೆಗೂ ಮಾನವನ ತಿಳುವಳಿಕೆಗೆ ಬಾರದ ನಿಗೂಢಗಳಲ್ಲೊಂದು ಎಂದೂ ತಿಳಿದು ಬೇಸರವಾಯ್ತು. ಆದರೆ ಮತ್ತೆ ಮತ್ತೆ ಅದೇ ಹಾಡುಗಳನ್ನ ಕೇಳೋದರಿಂದ ಹೀಗಾಗಬಹುದಂತೆ. ಬಿ ಬಿ ಸಿ ಲೇಖನದ ಪ್ರಕಾರ ಹಾಡುಗಳು ಕೇಳಿದ ೯೬% - ೯೭% ಜನರಿಗೆ ಈ ಕಷ್ಟ ಒದಗಿಬರುತ್ತದಂತೆ!
ಯಾವ ಹುಳವೂ ಕಿವಿ ಹೊಕ್ಕದಿದ್ದರೂ ತಲೆತಿನ್ನುವಂತೆ ಕೊರೆಯುವ ಈ ತಾಪತ್ರಯಕ್ಕೆ "earworm" ಅಂತ ಕರೀತಾರಂತೆ!!
- ಹೆಚ್ ಪಿ