ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು

ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು

ಬರಹ

ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿರಲಿಲ್ಲ ;

ನಾನೂ ಎಷ್ಟೋ ಪುಸ್ತಕ ಕೊಳ್ಳುತ್ತಿದ್ದೆ, ಕೊಳ್ಳುತ್ತ ಬಂದಿದ್ದೇನೆ. ಇನ್ನು ಮುಂದೆ ಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ.

ಆದರೆ ಅನೇಕ ಒಳ್ಳೆಯ ಪುಸ್ತಕ ನನ್ನ ಹತ್ತಿರ ಸಂಗ್ರಹವಾಗಿವೆ , ಮಾಸ್ತಿ , ಪಿ. ಲಂಕೇಶ್ , ಜಯಂತ ಕಾಯ್ಕಿಣಿ ಅವರ ಪುಸ್ತಕಗಳು , ನಾನೇಕೆ ನಾಸ್ತಿಕ? (ಭಗತ್ ಸಿಂಗ್ ) ಪುಸ್ತಕ , ಎ ಎನ್ ಮೂರ್ತಿರಾಯರ ಪೂರ್ವಸೂರಿಗಳೊಡನೆ. ಎಸ್. ಕೆ. ನಾಡಿಗ್ ರ ವ್ಯಂಗ್ಯಚಿತ್ರ ಪುಸ್ತಕ , ಬಿ.ಜಿ.ಎಲ್. ಸ್ವಾಮಿ , ಶ್ರೀನಿವಾಸ ವೈದ್ಯ ಅವರ ಹಾಸ್ಯಪುಸ್ತಕಗಳು, ಉಡುಪಿ ಚಿತ್ರಕುಟೀರದ ರಂಗೋಲಿ ಪುಸ್ತಕಗಳು. ರಂಗಣ್ಣನ ಕನಸಿನ ದಿನಗಳು , ಈಶ್ವರಯ್ಯ ಅವರ ಸರಸ ,ಕತ್ತರಿಸಿಟ್ಟುಕೊಂಡ ಅ. ರಾ. ಸೇ. ಅವರ ಹಾಸ್ಯ ಲೇಖನಗಳು , 'ಪುಟ್ಟ ರಾಜಕುಮಾರ' , ಗಂಗವ್ವ ಗಂಗಾಮಾಯಿ, ತೇಜಸ್ವಿಯವರ ಜುಗಾರಿ ಕ್ರಾಸ್ ,ಚಿದಂಬರ ರಹಸ್ಯ ಇವೆಲ್ಲ ಸದಾಕಾಲಕ್ಕೂ ಸಂತೋಷ ಕೊಡುವ ಪುಸ್ತಕಗಳು. ಇವುಗಳಿಂದ ನಾನು ಅಗಲಲಿಕ್ಕಿಲ್ಲ . ಯಾವಾಗ ಬೇಕೆಂದರೆ ಓದಿದರೆ ಸಂತೋಷ ಕೊಡುತ್ತವೆ . ಇನ್ನೇನು ಬೇಕು? ನಮಗೆ ಸಂತೋಷವಾದರೆ ಆಯಿತಲ್ಲವೆ ?

ಇನ್ನು ಉಳಿದ ಪುಸ್ತಕಗಳನ್ನು ಏನು ಮಾಡಬೇಕು ಅನ್ನುವ ಪ್ರಶ್ನೆ . ಓದಬೇಕು ಎಂದು ತಂದು ಓದಿಸಿಕೊಳ್ಳದ ಪುಸ್ತಕಗಳು , ಸಾಮಾನ್ಯವೆನಿಸಿದ ಪುಸ್ತಕಗಳು , ನಾನು ಇನ್ನೊಮ್ಮೆ ಎಂದೂ ಓದಬಯಸದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕು ? ಹಾಗೆ ವಿಲೇವಾರಿ ಮಾಡಿದಾಗ ತಾನೆ ಹೊಸವಕ್ಕೆ ಜಾಗ ? ಯಾರಿಗಾದರೂ ಕೊಡೋಣವೆಂದರೆ ಇವತ್ತು ಓದುಗರೇ ಕಮ್ಮಿ , ಬಲವಂತಕ್ಕೆ ಯಾರು ಓದಿಯಾರು ? ಸೆಕಂಡ್ ಹ್ಯಾಂಡ್ ಅಂಗಡಿಗೆ ಕೊಡೋಣವೆಂದರೆ , ನಾನಿರುವದು ಮುಂಬೈಯಲ್ಲಿ. ಹಾಗೇ ಇಟ್ಟುಕೊಂಡರೆ ಇವುಗಳಿಗಾಗಿ ನಾವು ಖರ್ಚು ಮಾಡಿದ ಹಣ ನೆನಪಾಗುತ್ತದೆ. ಅದಕ್ಕೆ ನೇರವಾಗಿ ದಿನಪತ್ರಿಕೆಗಳೊಂದಿಗೆ ರದ್ದಿಗೆ ಹಾಕಿಬಿಡುತ್ತೇನೆ.

ನನ್ನ ಓದಿನ ಸಂತೋಷ ಹಂಚಿಕೊಳ್ಳಲಿಕ್ಕೆ ಸಂಪದ ಒಳ್ಳೆಯ ಮಾರ್ಗ ತೋರಿತು. ಪುಸ್ತಕ ವಿಮರ್ಶೆ ಅನ್ನುವ ದೊಡ್ಡ ಹೆಸರಿನಡಿಯಲ್ಲಿ ನನಗೆ ಸಂತೋಷ ಕೊಟ್ಟ ಪುಸ್ತಕಗಳ ಬಗ್ಗೆ ನನ್ನ ತಿಳುವಳಿಕೆಯ ಮಿತಿಯಲ್ಲಿ ಬರೆಯುತ್ತಿದ್ದೇನೆ. ನಾನು ಒಳ್ಳೆಯ ಟಾಯಪಿಸ್ಟ್ ಅಲ್ಲವಾದ್ದರಿಂದ ಕಡಿಮೆ ಪದಗಳಲ್ಲಿ ಸಂತೋಷಕೊಟ್ಟ ಓದಿನ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ. ಯಾರಿಗಾದರೂ ಇದರಿಂದ ಉಪಯೋಗವಾದರೆ ಅಥವಾ ತೋರು ಬೆರಳಿನಂತೆ ಮಾರ್ಗದರ್ಶಿಯಾದರೆ ಸಾಕು.

ಪುಸ್ತಕಗಳನ್ನು ಯಾಕೆ ಸಂಗ್ರಹಿಸಬೇಕು , ನಮ್ಮ ಮಕ್ಕಳು ಓದುತ್ತವೆಯೇ ? ಎಂದಾರೋ ವಿಚಾರ ಮಾಡಿದ್ದಾರೆ . ಯಾವುದನ್ನೇ ಏಕೆ ಸಂಗ್ರಹಿಸುತ್ತೇವೆ ? ಬೆಲೆಯುಳ್ಳದ್ದೆಂದೋ ಅಥವಾ ಮುಂದೆ ಉಪಯೋಗ ಬಂದೀತೆಂದೋ ತಾನೆ ? ಆಸ್ತಿ ಯಾಕೆ ಮಾಡಿಡುತ್ತಾರೆ , ಮಕ್ಕಳು ಹಾಳು ಮಾಡಬಹುದಲ್ಲವೆ , ನಾವು ಕಟ್ಟಿದ ಮನೆಯಲ್ಲಿ ಅವರು ಇರುವ ಸಾಧ್ಯತೆ ಎಷ್ಟು ? ಹಾಗೆಯೇ ಪುಸ್ತಕಗಳು ಕೂಡ. ನಮಗೆ ಸಂತೋಷ , ಲಾಭ ಕೊಟ್ಟ ಪುಸ್ತಕಗಳು ಮುಂದೂ ನಮಗೂ ನಮ್ಮ ಮಕ್ಕಳಿಗೂ ಸಂತೋಷ ಕೊಡಲಿ ಎಂದು ಸಂಗ್ರಹಿಸೋಣ. ಇತರ ಪುಸ್ತಕಗಳನ್ನು ವಿಲೇವಾರಿ ಮಾಡೋಣ . ಚಂ. ಪಾ. ರವರು ತಮ್ಮ ಕವನದಲ್ಲಿ

ಹೂವು , ತಾರೆ , ಹೆಣ್ಣಿನ ಬಗ್ಗೆ
ನಾವು ಹಾಡುವದು ಬೇಡ
ಅಂತ ಹೇಳುವದು ಬೇಡ ಗೆಳೆಯ

ಎಂದು ಹೇಳುವ ಹಾಗೆ ಪುಸ್ತಕಗಳ ಸಂಗ್ರಹವೇ ಬೇಡ , ಓದುವದೇ ಬೇಡ ಎನ್ನುವದು ಬೇಡ.