ಚಾಲುಕುಡಿ ಟ್ರೇನು
*********************************************************************
೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗೆ ಸಿನಿಮಾ ಪತ್ರಕರ್ತರ ತಂಡ ಭೇಟಿ ಕೊಟ್ಟಿತ್ತು. ಹಾಗೆ ಚಾಲುಕುಡಿಗೆ ಹೋದ ಪತ್ರಕರ್ತರಲ್ಲಿ ನಾನೂ ಒಬ್ಬ. ಚಾಲುಕುಡಿಗೆ ಹೋಗಿದ್ದು ಬಸ್ಸಿನಲ್ಲಿ. ಮರಳಿ ಬೆಂಗಳೂರಿಗೆ ಬಂದಿದ್ದು ಟ್ರೇನಿನಲ್ಲಿ. ಸಂಜೆಯ ಹೊತ್ತು ಟ್ರೇನಿನಲ್ಲಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ನೋಡಿದ್ದನ್ನು, ಅನುಭವಿಸಿದ್ದನ್ನು ಮತ್ತು ಕಲ್ಪಿಸಿಕೊಂಡಿದ್ದನ್ನು ಸೇರಿಸಿಕೊಂಡು ಬರೆದದ್ದು ಇದು. ನನ್ನ ಮಟ್ಟಿಗೆ ಇದೊಂದು ಸತ್ಯ ಕತೆ.
**********************************************************************
ಚಾಲು ಕುಡಿ
ಚೆಂದದ ಹೆಸರು. ಕೇರಳದ ತ್ರಿಶೂರಿನ ಪಟ್ಟಣ. ಪಟ್ಟಣ ಎಂದರೆ ಪಟ್ಟಣ. ಊರು ಎಂದರೆ ಊರು. ಹಳ್ಳಿ ಎಂದರೆ ಹಳ್ಳಿ.
ಚಾಲುಕುಡಿಯಲ್ಲೊಂದು ಬೆಂಗಳೂರಿದೆ. ಬೆಂಗಳೂರಿನಲ್ಲೊಂದು ಚಾಲುಕುಡಿಯಿದೆ. ಚಾಲುಕುಡಿಯಿಂದ ಬೆಂಗಳೂರಿಗೆ ಟ್ರೇನಿನಲ್ಲಿ ಪಯಣಿಸುವಾಗ ಕಣ್ಣೆಂಬ ಲೆನ್ಸು ಅಸಂಖ್ಯ ಸಲ ಕ್ಲಿಕ್ಕಾಗಿದೆ. ತಲೆಯೆಂಬ ಕ್ಯಾಮರಾದಲ್ಲಿ ಸ್ನ್ಯಾಪ್‌ಗಳಿಗೆ ಮಿತಿಯಿಲ್ಲ. ಮಿದುಳ ಹಾಳೆಗಳಲ್ಲಿ ಚಿತ್ರಗಳು ಚೆಂದವಾಗಿ, ವಕ್ರವಾಗಿ, ಅಸ್ಪಷ್ಟವಾಗಿ ಪ್ರಿಂಟಾಗುತ್ತವೆ. ಕೆಲವು ಶೇಕ್ ಆದ ಚಿತ್ರಗಳು!
ಚಾಲುಕುಡಿಯಿಂದ ಹೊರಟ ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಕೊನೆಗೆ ಬೆಂಗಳೂರಿಗೇ ಬಂದು ತಲುಪಿರಬಹುದಾದರೂ ಅದು ಉತ್ತರ ಕನ್ನಡದ ಕಿರವತ್ತಿಗೆ ಬಂದಿತ್ತು. ಕವಡಿಕೆರೆಯ ಬರಗೋಡಿ ಮೋರಿ, ಗವೆಗುಳಿ ಮಾಚಣ್ಣನ ಗ್ಯಾರೇಜು, ಚಿಕ್ಕೊಡೆ ಗದ್ದೆಗಳನ್ನೆಲ್ಲ ತೋರಿಸಿತು ಎಂದರೆ ವಿಚಿತ್ರವೆನಿಸಬಹುದು. ಕಿರವತ್ತಿಗೆ ಟ್ರೇನಿಲ್ಲ!
ಚಾಲುಕುಡಿ ರೈಲ್ವೇ ಸ್ಟೇಷನ್‌ನಲ್ಲಿ ಯಲ್ಲಾಪುರ ಬಸ್‌ಸ್ಟ್ಯಾಂಡ್ ಹಮಾಲಿ ಪಾಂಡು ಸಿಕ್ಕಿದ್ದ. ಪಾಂಡು ಎಂದರೆ ಪಾಂಡುವಲ್ಲ. ಮುಖ ಬೇರೆ ಇರಬಹುದು. ಮೈಕಟ್ಟು ಬೇರೆ ಇರಬಹುದು. ಮಲಯಾಳಿ ಮಾತಾಡುತ್ತಿರಬಹುದು. ಆದರೆ ಅವನು ಲಗೇಜ್‌ಗಳನ್ನು ಹಳಿ ದಾಟಿಸಿದ. ೨೫ ರೂಪಾಯಿಗೆ ಒಂದೇ ಒಂದು ರೂಪಾಯಿ ಕಡಿಮೆ ಹಮಾಲಿ ಮುಟ್ಟಲು ಒಪ್ಪಲಿಲ್ಲ. `ಇಂದು ಯಾರೂ ಗಿರಾಕಿ ಸಿಗಲಿಲ್ಲವಾಗಿ ೨೫ ರೂಪಾಯಿಗೆ ಹಮಾಲಿ ಮಾಡಿದೆ. ಇಲ್ಲದಿದ್ರೆ ೫೦ಕ್ಕೆ ಕಡಿಮೆ ಒಂದು ರೂಪಾಯಿ ಕೊಟ್ಟರೂ ಮುಟ್ಟುತ್ತಿರಲಿಲ್ಲ' ಎಂದ. ಅವನಲ್ಲಿ ಪಾಂಡು ಕಂಡದ್ದೇ ಆಗ.
ಟ್ರೇನು ಅಂದೂ ಬೇಗ ಬರಲಿಲ್ಲ. ಸ್ಟೇಷನ್‌ನ ಮುಂದೆ ಕೂಲಿಯೊಬ್ಬ ಕಬ್ಬಿಣದ ಹಳಿಗೆ ಆಯಿಲ್ ಬಡಿಯುತ್ತ ಸಾಗುತ್ತಿದ್ದ. ಆತ ಹಾಗೇ ಹೋದರೆ ಒಂದು ದಿನ ಬೆಂಗಳೂರು ತಲುಪುತ್ತಾನೆ. ಅದಕ್ಕೆ ಎಷ್ಟು ದಿನ ಹಿಡಿಯಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ನಮಗಿಂತ ಮೊದಲಂತೂ ಮುಟ್ಟಲಿಕ್ಕಿಲ್ಲ ಎಂದು ಸಮಾಧಾನ ಮಾಡಿಕೊಳ್ಳುವಷ್ಟರಲ್ಲಿ ಟ್ರೇನು ಬಂತು.
ಟ್ರೇನು ಹತ್ತುವಾಗ ಮಂಗಳೂರು ನೆನಪಾಯಿತು. ಮೊಟ್ಟ ಮೊದಲ ಸಲ ನಾನು ಟ್ರೇನು ಹತ್ತಿದ್ದು ಮಂಗಳೂರಿನಲ್ಲಿ.
ಕಿಟಕಿ ಪಕ್ಕದಲ್ಲಿ ಕುಳಿತುಕೊಂಡೆ, ಟ್ರೇನು ಬೆಂಗಳೂರ ಕಡೆಗೆ ಹರಿಯುತ್ತಿತ್ತು. ಸ್ವಲ್ಪವೇ ಹೊತ್ತಿನಲ್ಲಿ ಕಣ್ಣಿಗೆ ಬಿತ್ತು ಒಂದು ಕೊಳಚೆ. ಅಲ್ಲಿ ನನಗೆ ಕಂಡಿದ್ದು ಜಡ್ಡಿ. ಜಡ್ಡಿ ಎಂದರೆ ನಾನು ಮೊದಲ ಸಲ ನೋಡಿದ ಯಲ್ಲಾಪುರದ ಕೊಳಚೆ.
ಟ್ರೇನಿನಲ್ಲಿ ಹೋಗುತ್ತ ನನಗೆ ಬರಗೋಡಿ ಮೋರಿಯ ಪಕ್ಕದಲ್ಲಿ ಸೌದೆ ಹೊತ್ತು ಹೋಗುವ ಕವಡಿಕೆರೆ ಹೆಂಗಸರು ಸಿಕ್ಕಿದರು. ಇನ್ನೊಂದು ಸ್ಟೇಷನ್‌ಗೆ ತಲುಪುವಾಗ ಹಳಿ ಪಕ್ಕದಲ್ಲಿ ಪೇರಿಸಿಟ್ಟ ಕಬ್ಬಿಣದ ರಾಡುಗಳು, ಬಾರ್‌ಗಳ ಮಧ್ಯೆ ಗವೆಗುಳಿ ಮಾಚಣ್ಣನ ಗ್ಯಾರೇಜು.
ಕಾಲಕ್ಕುಡಿ ಬಂತು. ಅದನ್ನು ದಾಟುವಾಗ ಕಂಡ ಮರದ ತುಂಡುಗಳ ರಾಶಿಯಲ್ಲಿ ಕಿರವತ್ತಿಯ ಟಿಂಬರ್ ಡಿಪೋ, ಯಲ್ಲಾಪುರ ರೇಂಜ್ ಆಫೀಸಿತ್ತು. ಮುಂದಿನ ಸ್ಟೇಷನ್‌ನಲ್ಲಿ ಬೇಡುತ್ತ ಕುಳಿತ ಮಸಿ, ಮುಸುರೆ ಬಳಿದುಕೊಂಡು ಸಿಂಬಳ ಸುರಿಸುತ್ತಿರುವ ಮಕ್ಕಳ ಕಂಗಳಲ್ಲಿ ಸೊಮಾಲಿಯಾ. ಪಕ್ಕದಲ್ಲಿಯೇ ಕೋಲಾ ಕಂಪನಿ ಹೈಟೆಕ್ ಜಾಹೀರಾತಿನಲ್ಲಿ ಅಮೆರಿಕ!
ಟ್ರೇನಿನಲ್ಲಿ ಹೋಗುವಾಗ ನಮಗೆ ಮನೆಯ ಮುಖ ಕಾಣುವುದಿಲ್ಲ. ಬರಿ ಹಿತ್ತಲುಗಳು. ಬರಿ ಹಿಂಬದಿಯ ಬಾಗಿಲುಗಳು. ಯಾವಾಗಲೂ ಟ್ರೇನು ಹಿತ್ತಲಲ್ಲೇ ಪ್ರಯಾಣಿಸುತ್ತದೆ. ಹಾಗೇ ಟ್ರೇನಲ್ಲಿ ಹೋಗುತ್ತಲೇ ಇರುವಾಗ ಬಸ್ಸು ಕಂಡರೆ, ಬಸ್ಸಲ್ಲಿ ಹೋಗುವಾಗ ಟ್ರೇನು ಕಂಡರೆ ಆಗುವಂಥ ಪುಳಕ.
ಹಿತ್ತಲಾದುದರಿಂದ ಎಲ್ಲಿ ನೋಡಿದರೂ ತಿಪ್ಪೆ ಸುರಿದ ಚಿತ್ರ. ಡೊಂಕಳ್ಳದ ಗಿಡ್ಡಾ ಸಿದ್ದಿಯ ಮನೆಯ ಹಿಂದಿನ ದರೆಯಂತೂ ಎಷ್ಟು ಸಲ ಕಂಡಿತೆಂದು ಲೆಕ್ಕವಿಲ್ಲ. ಕಟ್ಟೆಯ ಮೇಲೆ ಮಕ್ಕಳ ನೋಡಿದಾಗಲೆಲ್ಲ ಬಾಯಿಪಾಠ!
ಕಲಪಾಟದಲ್ಲಿ ಟ್ರೇನು ನಿಂತುಕೊಂಡಿತು. ಬೂಟುಗಾಲಿನ ದಡಬಡ ಸದ್ದು. ಮಧ್ಯೆ ಗೆಜ್ಜೆಯ ಘಲ್ ಘಲ್! ಕಣ್ತೆರೆದರೆ ನನ್ನ ಪಕ್ಕದಲ್ಲಿ ಒಬ್ಬಳು ಹುಡುಗಿ.
***
ಕಲಪಾಟದಿಂದ ನಾನು ಸೆಟೆದು ಕುಳಿತೆ. ಸೀರಿಯಸ್ಸಾಗಿ ಖುಷ್ವಂತ್ ಸಿಂಗ್ ಕಥೆ ಓದತೊಡಗಿದೆ. ಕುಳಿತ ಶೈಲಿಯಲ್ಲಿ ಸುಧಾರಣೆಯಾಯಿತು. ಹೊರಕ್ಕೆ ನೋಡುವ ರೀತಿ ಬೇರೆಯಾಯಿತು. ಎದುರಿಗೆ ಕುಳಿತುಕೊಂಡು ನನ್ನೊಡನೆ ಹರಟುತ್ತಿದ್ದ ಪುಟ್ಟಿಯೊಂದಿಗೆ ನನ್ನ ಹರಟೆ ಹೆಚ್ಚು ಗಂಭೀರವಾಯಿತು!
ಪೊಲಿಯೋ ಆಗಿ ಕಾಲು ಸೊಟ್ಟಾದ ಹುಡುಗನೊಬ್ಬ ಕಸ ದೂಡುತ್ತ ಬಂದ. ಕಾಲುಕ್ಕುಡಿಯಲ್ಲಿಯೂ ಒಬ್ಬ ಹೀಗೇ ಬಂದಿದ್ದ. ಆದರೆ ಈ ಸಲ ನಾನು ಅವನಿಗೆ ಐದು ರೂಪಾಯಿ ಕೊಟ್ಟೆ. ಅವನೊಂದಿಗೆ ಚೆನ್ನಾಗಿ ಮಾತಾಡಿದೆ. ಅವನ ಕಷ್ಟ ಸುಖ ವಿಚಾರಿಸಿದೆ.
ಎದುರು ಸೀಟಲ್ಲಿ ಕುಳಿತ ಮುದುಕನೊಬ್ಬ ನೀರು ಕೇಳುತ್ತಿದ್ದುದಕ್ಕೆ ನಾನು ಯಾರಿಗೂ ಕೊಡದೇ ಗುಟ್ಟಾಗಿ ಇಟ್ಟುಕೊಂಡಿದ್ದ ಬಿಸಿಲೇರಿ ಬಾಟಲನ್ನೇ ಧಾರಳವಾಗಿ ನೀಡಿದೆ. ಎದುರಿಗೆ ಕುಳಿತಿದ್ದ ಪುಟ್ಟಿಯನ್ನು ಮತ್ತಷ್ಟು ಮುದ್ದಿಸಿದೆ. ಅವಳಿಗೆ ಓಶೋ ಕತೆಯನ್ನು ಇಂಗ್ಲೀಷಿನಲ್ಲಿ ಹೇಳಿ ಸಂಭ್ರಮ ಪಟ್ಟೆ.
ಅಷ್ಟರಲ್ಲಿ ನಮ್ಮದೇ ಕಂಪಾರ್ಟ್‌ಮೆಂಟ್‌ನಲ್ಲಿ ಇಬ್ಬರ ಮಧ್ಯೆ ಜಗಳ ಶುರುವಾಯಿತು, ಕಾರಣವೇ ಇಲ್ಲದೇ. ಟ್ರೇನಲ್ಲಿ ಸಹ ಪ್ರಯಾಣಿಕನೊಂದಿಗೆ ಜಗಳ ಮಾಡುವುದಕ್ಕೆ ಕಾರಣ ಏನಿರುತ್ತದೆ? ಮಲಯಾಳಿ ಮಲಯಾಳಿಯಲ್ಲಿ ಬಯ್ಯುತ್ತಿದ್ದ. ಇನ್ನೊಬ್ಬ ತಮಿಳಿಗ. ಆತನಿಗೆ ತಮಿಳು ಬಿಟ್ಟರೆ ಬೇರೆ ಗೊತ್ತಿಲ್ಲ. ನನಗೆ ಎರಡೂ ಭಾಷೆ ಗೊತ್ತಿಲ್ಲ. ಆದರೂ ನಾನು ವಿಶ್ವಸಂಸ್ಥೆಯ ಶಾಂತಿದೂತನಂತೆ ಅವರ ಮಧ್ಯೆ ಹೋಗಿ ಸಂಧಾನ ಮಾಡುವ ಪ್ರಯತ್ನ ಮಾಡಿದೆ. ಸಣ್ಣ ಸಣ್ಣ ಕಾರಣಕ್ಕೆ ಜಗಳ ಮಾಡುವುದು ಎಷ್ಟು ಸಿಲ್ಲಿ ಎಂದು ವಿವರಿಸಿದೆ.
ನಿಲ್ದಾಣ ಬರುತ್ತಿತ್ತು. ಟ್ರೇನು ನಿಲ್ಲುತ್ತಿತ್ತು. ಟ್ರೇನು ಹೋಗುತ್ತಿತ್ತು. ನಿಲ್ದಾಣ ಹೋಗುತ್ತಿತ್ತು. ನಾನು ಕಿಟಕಿಯಿಂದ ಹೊರಗಡೆ ನೋಡುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ. ಸೇಲಂ ಬಂತು. ಟ್ರೇನು ನಿಂತಿತು.
ಎದುರಿಗಿದ್ದ ಪುಟ್ಟಿ ಕೇಳಿದಳು.`ಟ್ರೇನು ಯಾವ ಕಡೆ ಹೋಗುತ್ತಿದೆ?' ಎಂದು. `ಟ್ರೇನು ಉತ್ತರಕ್ಕೆ ಹೋದಷ್ಟೇ ವೇಗವಾಗಿ ದಕ್ಷಿಣಕ್ಕೆ ಹೋಗುತ್ತಿದೆ' ಎಂದು ಪುಟ್ಟಿಯಲ್ಲಿ ಹೇಳಿ ನಕ್ಕೆ. ಅಷ್ಟರಲ್ಲಿ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಸೂಟ್‌ಕೇಸ್ ಎತ್ತಿಕೊಂಡು ಹೊರಟಿದ್ದಳು. ಸೇಲಂ ಸ್ಟೇಷನ್‌ನಲ್ಲಿ ಇಳಿದವಳ ಮುಖವನ್ನು ಕಿಟಕಿಯಿಂದ ನೋಡಿದೆ. ಅವಳಲ್ಲಿ ಜಾನಕಿಯಿದ್ದಳು. ಜಾನಕಿ ನಾನು ಮೊದಲು ಪ್ರೀತಿಸಿದ ಹುಡುಗಿ
***
ಸೇಲಂ ದಾಟಿ ಟ್ರೇನು ಹೋಗುತ್ತಿತ್ತು. ನಾನು ಪುನಃ ಕಿಟಕಿಯಿಂದ ಹೊರ ದಿಟ್ಟಿಸತೊಡಗಿದೆ. ಹೇಗೆ ಹೇಗೋ ಕುಳಿತುಕೊಂಡೆ. ಪುಟ್ಟಿಯ ಜೊತೆ ಮಾತಾಡುವುದರಲ್ಲಿ ಉತ್ಸಾಹವಿರಲಿಲ್ಲ. ಖುಷ್ವಂತ್ ಸಿಂಗ್ ಪುಸ್ತಕ ಬ್ಯಾಗು ಸೇರಿತು. ಮುದುಕನಿಗೆ ಸಹಾಯ ಮಾಡುವಲ್ಲಿ ನನಗೆ ಉತ್ಸಾಹ ಉಳಿಯಲಿಲ್ಲ. ತಮಿಳಿಗ ಮತ್ತು ಮಲಯಾಳಿ ಮತ್ತೆ ಜಗಳ ಶುರುಮಾಡಿದ್ದರು. ನಾನು ತಲೆಕೆಡಿಸಿಕೊಳ್ಳಲಿಲ್ಲ.
ನನ್ನ ಕೂದಲು ಕೆದರಿತು. ಇನ್ ಶರ್ಟ್ ಹಾಳಾಯಿತು. ನನಗೆ ಸರಿ ಮಾಡಿಕೊಳ್ಳುವ ಆಸೆಯಾಗಲಿಲ್ಲ. ಹೊರಗಡೆ ನೋಡುತ್ತ ಕುಳಿತೆ. ಪುನಃ ಸೊಮಾಲಿಯಾ, ಮಾಚಣ್ಣನ ಗ್ಯಾರೇಜು ಮತ್ತು ಕಿರವತ್ತಿ ಟಿಂಬರ್ ಡಿಪೋ...ರಾತ್ರಿಯಾಯಿತು. ನಿದ್ರೆ ಬಂತು. ಬೆಂಗಳೂರು ಬಂದಾಗ ಬೆಳಗಾಗಿತ್ತು.
***
ಚಾಲುಕುಡಿಯಿಂದ ಬಂದು ತುಂಬಾ ದಿನಗಳಾಗಿವೆ. ನಾನು ಆಫೀಸಲ್ಲಿ, ಮನೆಯಲ್ಲಿ, ರಸ್ತೆಯಲ್ಲಿ, ಲಿಡೋ ಥಿಯೇಟರಿನಲ್ಲಿ, ಮಣಿಪಾಲ ಸೆಂಟರ್‌ನಲ್ಲೆಲ್ಲೆಲ್ಲ ಯೋಚಿಸುತ್ತಿರುತ್ತೇನೆ. ನನಗೆ ಚಾಲುಕುಡಿಯಿಂದ ಬರುವಾಗ ನನ್ನ ಎದುರಿಗೆ ಯಾರು ಕುಳಿತಿದ್ದರು ಎನ್ನುವುದು ನೆನಪಿಲ್ಲ. ಚಾಲುಕುಡಿಯಲ್ಲಿ ನನ್ನ ಪಕ್ಕ ಯಾರಿದ್ದರು ಎನ್ನುವುದು ನೆನಪಿಲ್ಲ. ಕಲಪಾಡಿಯಿಂದ ಸೇಲಂ ತನಕ ನನ್ನ ಪಕ್ಕದಲ್ಲಿ ಕುಳಿತು ಪ್ರಯಾಣಿಸಿದವರ ಮುಖ ನೆನಪಿಲ್ಲ. ಆದರೆ ಅವಳು ಹು..ಡು...ಗಿ ಎನ್ನುವುದು ಮಾತ್ರ ಸ್ಪಷ್ಟವಾಗಿ ನೆನಪಿದೆ.
ನಾನು ಈವರೆಗೆ ಎಲ್ಲೆಲ್ಲೋ ಸುತ್ತಿದ್ದೇನೆ, ಟ್ರೇನಲ್ಲಿ, ಬಸ್ಸಲ್ಲಿ! ನನ್ನ ಪಕ್ಕದ ಸೀಟುಗಳಲ್ಲಿ ಯಾರ್ಯಾರೋ ಕುಳಿತಿದ್ದಾರೆ. ನನಗೆ ಅವರ ಮುಖಗಳು ನೆನಪಿಲ್ಲ. ಅವರು ಮುದುಕರೋ, ಹುಡುಗರೋ ಎನ್ನುವುದು ನೆನಪಿಲ್ಲ. ಆದರೆ ಹುಡುಗನೋ ಹುಡುಗಿಯೋ ಎಂದು ಮಾತ್ರ ಸ್ಪಷ್ಟವಾಗಿ ನೆನಪಿದೆ. ಅಪ್ರಯತ್ನಪೂರ್ವಕವಾಗಿ ನೆನಪಿದೆ. ಅದರಷ್ಟೇ ಖಚಿತವಾಗಿ ಮಧುರೈಗೆ ಹೋಗುವಾಗ ನನ್ನ ಮೈಮೇಲೆ ವಾಂತಿ ಮಾಡಿದ ಹುಡುಗ ನೆನಪಿದ್ದಾನೆ!
ಪರಮೇಶ್ವರ ಗುಂಡ್ಕಲ್
gundkal @ rediffmail.com