ಕುರಿಗಳು ಸಾರ್...ನಾವು....

ಕುರಿಗಳು ಸಾರ್...ನಾವು....

ಬರಹ

ಸದನದ ಕಲಾಪದಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ಕಲಿತುಕೊಳ್ಳಿ,ಸದನದ ಗೌರವನ್ನು ಕಾಪಾಡಿ,ನಿಮ್ಮ ಹದ್ದು ಮೀರಿದ ವರ್ತನೆಯಿಂದಾಗಿ ಸದನದ ಮರ್ಯಾದೆ ಬೀದಿಗೆ ಬಂದಿದೆ. ನಾನು ಕೇವಲ ನನ್ನ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸುತ್ತಿದ್ದೇನೆ,ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂಬುದಾಗಿ ಕಟುವಾದ ಶಬ್ದಗಳಲ್ಲಿ'ಮಹಾಮಂಗಳಾರತಿ'ಮಾಡಿದ್ದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು.

ಬುಧವಾರ(ಮಾ.12)ದಂದು ಸಂಸತ್ ಕಲಾಪದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಎಡಪಕ್ಷಗಳು ಕೋಲಾಹಲ ಎಬ್ಬಿಸಿದ್ದವು.ಕಳೆದ ಮೂರು ದಿನಗಳಿಂದ ಸದನದ ಕಲಾಪದಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ ಆರ್‌ಎಸ್‌‌ಎಸ್ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಎಡಪಕ್ಷ ಮತ್ತು ಬಿಜೆಪಿ ಪಕ್ಷದ ಸಂಸದರು ವಾಗ್ದಾಳಿ ನಡೆಸಿದ್ದು, ಸ್ಪೀಕರ್ ಅವರು ಇದೊಂದು ರಾಜ್ಯದ ವಿಷಯ ದಯವಿಟ್ಟು ಕಲಾಪದಲ್ಲಿ ಕೋಲಾಹಲ ಎಬ್ಬಿಸಬೇಡಿ ಎಂದು ಪರಿ,ಪರಿಯಾಗಿ ಮನವಿ ಮಾಡಿಕೊಂಡರೂ ಕೂಡ ಸಂಸದರ ಆರ್ಭಟ ಮುಂದುವರಿದಾಗ ಅವರು ತರಾಟೆಗೆ ತೆಗೆದುಕೊಂಡ ಪರಿ ಇದು.

ಜನಪ್ರತಿನಿಧಿಗಳು ಎನಿಸಿಕೊಂಡವರಿಗೆ ಚಟರ್ಜಿಯವರು ಹೇಳಿದ ಮಾತಿನಲ್ಲಿ ಯಾವ ತಪ್ಪಿದೆ ಹೇಳಿ. ಎಷ್ಟು ಬಾರಿ ಸ್ಪೀಕರ್ ಚಟರ್ಜಿ ಅವರು ಸಂಸದರನ್ನು ಶಿಸ್ತಿನಿಂದ ವರ್ತಿಸಲು ಗದರಿಸಿಲ್ಲ,ಆದರೂ ಬುದ್ಧಿ ಬಂದಂತಿಲ್ಲ.ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಯಿತು ಅಷ್ಟೇ.

ಸಂಸತ್‌‌ನಲ್ಲಿ ನಮ್ಮ ಘನಂದಾರಿ ಸಂಸದರುಗಳು ಆರೋಪ-ಪ್ರತ್ಯಾರೋಪ, ಕೋಲಾಹಲ,ವಾಗ್ವಾದಗಳಿಂದಾಗಿಯೇ ಸದನದ ಕಲಾಪಗಳು ಮುಂದೂಡಲ್ಪಡುತ್ತಿವೆ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಆ ಕಾರಣಕ್ಕಾಗಿಯೇ ಸ್ಪೀಕರ್ ಅವರು ಕಟುವಾದ ಶಬ್ದಗಳಲ್ಲಿ ಅವರನ್ನು ಟೀಕಿಸಿದ್ದರು. ಅವರ ಟೀಕೆಯಲ್ಲಿಯೂ ಅರ್ಥವಿದೆ,ಸಂಸತ್‌‌ನಲ್ಲಿ ನಡೆಯುವ ಪ್ರತಿ ಒಂದು ನಿಮಿಷದ ಕಲಾಪಕ್ಕೆ ಸರಾಸರಿ 20ಸಾವಿರ ರೂಪಾಯಿ ಖರ್ಜಾಗುತ್ತದೆ. ಅಧಿಕೃತವಾಗಿ ಈವರೆಗೆ ಎಷ್ಷು ಹಣ ವ್ಯಯವಾಗಿದೆ ಎಂಬುದನ್ನು ಸರಕಾರ ಅಧಿಕೃತವಾಗಿ ನೀಡಿಲ್ಲವಾದರೂ ಕೂಡ ಸುಮಾರು ಆರು ತಿಂಗಳ ಹಿಂದೆ ನ್ಯಾಶನಲ್ ಸೋಶಿಯಲ್ ವಾಚ್ ಕೋಅಲಿಶನ್ ಎಂಬ ಸರಕಾರೇತರ ಸಂಸ್ಥೆಯೊಂದು ಬಿಡುಗಡೆ ಮಾಡಿದ ಸಮೀಕ್ಷಾ ವರದಿಯ ಪ್ರಕಾರ,1996-1998ರಲ್ಲಿ 11ನೇ ಲೋಕಸಭೆಯ ಸಂಸತ್ ಕಲಾಪದಲ್ಲಿ ಸಂಸದರ ಕೋಲಾಹಲದಿಂದ ಶೇ.5.28ರಷ್ಟು ಸಮಯ ನಷ್ಟವಾಗಿತ್ತು. ಈ ಅಂಕಿ-ಅಂಶ 12ಲೋಕಸಭೆಯ ಕಲಾಪದಲ್ಲಿ ಶೇ.10.66ಕ್ಕೆ ಏರಿಕೆ ಕಂಡಿದ್ದು,1999-2004ರಲ್ಲಿ 22.4ರಷ್ಟು ಸಮಯ ವ್ಯರ್ಥವಾಗಿತ್ತು.!!

14ನೇ ಲೋಕಸಭೆಯ ಚಳಿಗಾಲದ ಅಧಿವೇಶನ ಕಳೆದ ವರ್ಷ ಜುಲೈ 24ರಂದು ಆರಂಭಗೊಂಡು ಆಗೋಸ್ಟ್ 30ಕ್ಕೆ ಮುಕ್ತಾಯವಾಗಿತ್ತು.ಒಟ್ಟು 28ದಿನಗಳು ಸಂಸತ್ ಕಲಾಪಕ್ಕೆ ಲಭಿಸಿದ್ದವು.ಇದರಲ್ಲಿ ಆಗೋಸ್ಟ್ 9(ರಕ್ಷಾ ಬಂಧನ),ಆ.15(ಸ್ವಾತಂತ್ರ್ಯ ದಿನಾಚರಣೆ) ಹಾಗೂ ಆ.16(ಜನ್ಮಾಷ್ಟಮಿ)ಯ ಮೂರು ರಜಾದಿನಗಳು ಸೇರಿದ್ದರಿಂದ ಚಳಿಗಾಲದ ಅಧಿವೇಶನದಲ್ಲಿ 25ದಿನಗಳು ದೊರೆತಿದ್ದವು.ಪ್ರತಿ ದಿನ ಸರಾಸರಿ ಆರು ಗಂಟೆ ಕಲಾಪಕ್ಕೆ ಸುಸೂತ್ರವಾಗಿ ತೆಗೆದುಕೊಂಡರು 150 ಗಂಟೆಗಳಲ್ಲಿ ಪ್ರಮುಖ ರಾಷ್ಟ್ರೀಯ ವಿಷಯಗಳು,ಚರ್ಚೆ ಹಾಗೂ ಸಂವಿಧಾನ ತಿದ್ದುಪಡಿಯಂತಹ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬಹುದಾಗಿತ್ತು.

ಆದರೆ ಅಧಿವೇಶನದ ಪ್ರಥಮ ದಿನವೇ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಭಯೋತ್ಪಾದನೆ,ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಿ ಕೋಲಾಹಲ ನಡೆಸಿ, ಸಭಾತ್ಯಾಗ ಮಾಡಿದ್ದವು.ಹೀಗೆ ವಿರೋಧಪಕ್ಷಗಳು ಸಭಾತ್ಯಾಗ,ಕಲಾಪಕ್ಕೆ ಅಡ್ಡಿ, ಕೋಲಾಹಲ ಸೇರಿದಂತೆ ಎರಡೂ ಸದನಗಳಲ್ಲಿ 35ಗಂಟೆಗಳಷ್ಟು ಕಾಲ ವ್ಯರ್ಥ ಮಾಡಿದ್ದವು.ಇದು ದಾಖಲೆಯ ಮಟ್ಟದಲ್ಲಿ ಅಂದರೆ ಶೇ.38ರಷ್ಟು ಸಮಯವನ್ನು ಹಾಳುಗೆಡವಿದ್ದಾರೆ.ಕಳೆದ ಹತ್ತು ವರ್ಷಗಳಿಂದ ಸಂಸತ್ ಅಧಿವೇಶನದ ಕಲಾಪದಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲೇ ಇಲ್ಲವಂತೆ,ಪ್ರಸ್ತುತ ಫೆಬ್ರುವರಿ 27ರಿಂದ ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿಯೂ ಕೋಲಾಹಲ,ಹಾರಾಟ ಮಿತಿಮೀರಿದೆ.

ಸಂಸದರ ಕೋಲಾಹಲದಿಂದಾಗಿ ಈಗಾಗಲೇ 42ಮಿಲಿಯನ್(800,000ಡಾಲರ್)ನಷ್ಟು ಹಣ ನಷ್ಟವುಂಟಾಗಿದೆ. ಸಂಸತ್ ಕಲಾಪಕ್ಕೆ ಭಾರೀ ಹಣ ವ್ಯಯವಾಗುತ್ತಿದ್ದು, ನೀವು ಅಮೂಲ್ಯವಾದ ಸಮಯವನ್ನು ಕೊಲ್ಲುತ್ತಿದ್ದೀರಿ ಎಂದು ಚಟರ್ಜಿ ಅವರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲಿ ತಪ್ಪೇನಿದೆ,ಇಷ್ಟು ದೊಡ್ಡ ಮಟ್ಟದ ಹಣ ಪೋಲಾಗುತ್ತಿರುವುದು ಜನಸಾಮಾನ್ಯರದ್ದು!!ಆದರೂ ನಾವು ನಮ್ಮ ಸಂಸದರು ಸಂಸತ್‌‌ನಲ್ಲಿ ಅದೇನೋ ಕಡಿದು ಗುಡ್ಡೆ ಹಾಕುತ್ತಾರೆ ಅಂತ ಅವರನ್ನು ಆರಿಸಿಕಳುಹಿಸುತ್ತೇವೆ.ಎಷ್ಟಾದರೂ ನಾವು ಕವಿ ನಿಸಾರ ಕವನದಂತೆ, ಕುರಿಗಳು ಸಾರ್,ನಾವು ಕುರಿಗಳು....