ಗಂಡನ ಕಾರಣದಿಂದ ಹೆಂಡತಿ How ದಪ್ಪ?

ಗಂಡನ ಕಾರಣದಿಂದ ಹೆಂಡತಿ How ದಪ್ಪ?

ಬರಹ

ಮೊನ್ನೆ ಒಂದು ಸುದ್ದಿ ಓದಿದೆ. ಹೆಣ್ಣುಮಕ್ಕಳು ತಮ್ಮ ಗಂಡ ಅಥವಾ ಪ್ರೇಮಿಯ ಪ್ರೀತಿಯ ಕಾರಣದಿಂದಲೇ ದಪ್ಪ ಆಗುತ್ತಾರಂತೆ. ಹಾಗಂತ ಇಂಗ್ಲೆಂಡಿನ ಸಂಶೋಧನಾ ವರದಿಯೊಂದು ಹೇಳಿದೆಯಂತೆ.
ಇದನ್ನು ಓದಿ ನನಗೊಮ್ಮೆ ಖುಷಿಯಾಗಿದ್ದಂತೂ ನಿಜ. ಏಕಂದರೆ ನನ್ನ ಹೆಂಡತಿಯನ್ನು ನಾನು ಮದುವೆಯಾದ ಮೇಲೆ, ಅವಳು ತುಂಬಾ ದಪ್ಪ ಆಗಿದ್ದಾಳೆ. ಅಂದರೆ ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಅಂತಾಯಿತು. ಈ ವಿಷಯವನ್ನು ಹೇಳಿ ಸ್ವಲ್ಪ ಜಂಭ ಕೊಚ್ಚಿಕೊಳ್ಳೋಣ ಅನ್ನಿಸಿ ಅವಳಿಗೆ ಫೋನ್ ಮಾಡಿದೆ (ಅವಳು ಈಗ ಅವಳ ತಾಯಿ ಮನೆಯಲ್ಲಿದ್ದಾಳೆ. ನಾನೂ ಅವಳೂ ಈಗ ಬಾಣಭಟ್ಟನ ನಿರೀಕ್ಷೆಯಲ್ಲಿರುವುದು ನಿಮಗೆಲ್ಲಾ ಗೊತ್ತಿರತಕ್ಕಂಥ ವಿಚಾರವೇ).
ಈ ವಿಚಾರವಾಗಿ ಅವಳ ಪ್ರತಿಕ್ರಿಯೆ- ಮಳ್ಳ, pregnent ಆದಾಗ ಎಲ್ಲ ಹೆಂಗಸರೂ ದಪ್ಪ ಆಗ್ತಾರೆ ಅಂದಿದ್ದು ಬಿಟ್ಟರೆ-ಅಷ್ಟೇನೂ ಉತ್ಸಾಹದಾಯಕವಾಗಿರಲಿಲ್ಲ. ಬಹುಶಃ ಈ ವಿಷಯವನ್ನೇ ಆ ಸಂಶೋಧನಾ ವರದಿ ಹೇಳಿರಬಹುದು ಎಂಬ ಗುಮಾನಿ ಅವಳದ್ದು.
ಇರಲಿ, ಇಷ್ಟೆಲ್ಲಾ ಆದಮೇಲೆ ನನ್ನಲ್ಲಿ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
೧. ಮದುವೆಗೆ ಮುಂಚೆ ನಾನು ಕಡ್ಡಿ ಕಡ್ಡಿಯಾಗಿದ್ದೆ. ಮದುವೆ ಫಿಕ್ಸ್ ಆದ ದಿನದಿಂದ ಮದುವೆಯ ದಿನದವರೆಗೆ ಇದ್ದಕ್ಕಿದ್ದಂತೆ ನನ್ನಲ್ಲಿ ಭಾರೀ ಬದಲಾವಣೆ ಜಾರಿಗೆ ಬಂತು. ಅಂದರೆ ಸ್ವಲ್ಪವೇನು, ತುಂಬಾನೇ ದಪ್ಪವಾಗಿಬಿಟ್ಟೆ. ಆದರೆ ನಂತರ ಮತ್ತೆ ಯಥಾಸ್ಥಿತಿ- ಕಡ್ಡಿ ಕಡ್ಡಿ. ಹೀಗೇಕಾಯ್ತು?
೨. ಸಂಶೋಧನಾ ವರದಿ ಬರೀ ಮಹಿಳೆಯರನ್ನಷ್ಟೇ ಗಣನೆಗೆ ತೆಗೆದುಕೊಂಡು ಪುರುಷರನ್ನು ಕಡೆಗಣಿಸಿದ್ದು ತಪ್ಪಲ್ಲವೇ. ಗಂಡನ ಪ್ರೀತಿಯಿಂದ ಹೆಂಡತಿ ದಪ್ಪವಾಗ್ತಾಳೆ ಅಂತಾದ್ರೆ ಹೆಂಡತಿ ಪ್ರೀತಿಯ ಕಾರಣದಿಂದ ನನ್ನಂಥ ಗಂಡ ದಪ್ಪವಾಗಬೇಕಿತ್ತಲ್ಲ?
೩. ಗಂಡನ ಪ್ರೀತಿಯಿಂದ ಹೆಂಡತಿ ದಪ್ಪವಾಗ್ತಾಳೆ ಅಂತಾದ್ರೆ size doesn't matter ಅನ್ನೋ ಥರ ದಪ್ಪವಿರುವ ಮಹಿಳೆಯರಿಗೆ ಗಂಡನ ಪ್ರೀತಿ ಅತಿಯಾದ ಅಮೃತ ವಿಷದಂತಾಗಿರಬಹುದೇ?
(ತೆಳ್ಳಗಿರುವವರು ಮತ್ತು ದಪ್ಪಗಿರುವವರ ಕ್ಷಮೆ ಕೋರುತ್ತಾ)

-ಸುರೇಶ್ ಕೆ.