ದೊರೆ ನಗುವುದಕ್ಕೆ ಏನು ಮಾಡಬೇಕು?

ದೊರೆ ನಗುವುದಕ್ಕೆ ಏನು ಮಾಡಬೇಕು?

ಬರಹ

(ನಗೆ ನಗಾರಿ ನಗದು ಬ್ಯೂರೋ)

ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ ತ್ಯಾಗಗಳು ಅಪಾರ. ರಾಜ ಪ್ರಭುತ್ವವಿದ್ದಾಗಲೇ ಈ ಸಂಸ್ಕೃತಿಗೆ ಓನಾಮ ಹಾಕಿದವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ. ಡ್ರೈ ಕ್ಲೀನರ್ ಒಬ್ಬನ ಮಾತಿಗೆ ಮಡದಿಗೇ ಡೈವೋರ್ಸ್ ನೀಡುವ ಅತಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯದ ಮಾತೇ? ಈ ನಿರ್ಧಾರಕ್ಕೆ ಯಾವ ವಿಧದಲ್ಲೂ ಕನಿಷ್ಠವಲ್ಲದ ನಿರ್ಧಾರವನ್ನು ಕರ್ನಾಟಕವೆಂದ ರಾಜ್ಯದ ದೊರೆಯು ತೆಗೆದುಕೊಂಡಿದ್ದಾನೆ. ಜನತೆಯ ಆಶೋತ್ತರಗಳಿಗಾಗಿ ಹಿಂದೆ ಯಾರೂ ಮಾಡದ ತ್ಯಾಗವನ್ನು ನಾಡಿನ ಅಧಿಪತಿ ಮಾಡಲು ಮುಂದಾಗಿದ್ದಾನೆ.

ತಾನು ಇನ್ನು ಮುಂದೆ ಸಿಡುಕು ಮೋರೆಯನ್ನು ಹೊತ್ತು ತಿರುಗುವುದಿಲ್ಲ. ಯಾರ ಮೇಲೆಯೂ ರೇಗುವುದಿಲ್ಲ. ನಗುಮುಖದಿಂದಲೇ ಇರುವೆ. ಸದಾನಂದ ಗೌಡರಿಗೆ ಪೈಪೋಟಿ ನೀಡುವ ಮಟ್ಟಿಗೆ ಹಲ್ಕಿರಿಯುವೆ. ನಗು ನಗುತ್ತಲೇ ಎಲ್ಲರನ್ನೂ ಮಾತಾಡಿಸುವೆ. ಇದು ಈ ನಾಡಿನಲ್ಲಿ ಹರಿಯುವ ನದಿಗಳಾಣೆಗೂ, ಕಬ್ಬನ್ ಪಾರ್ಕಿನಲ್ಲಿ ಬೆಳೆಯುವ ಹುಲ್ಲಿನ ಕಡ್ಡಿಯ ಆಣೆಗೂ, ದೇವೇಗೌಡರ ತಲೆಯ ಮೇಲಿನ ಕೂದಲ ಆಣೆಗೂ ಸತ್ಯ, ಸತ್ಯ, ಸತ್ಯ” ಎಂದು ಕಲಿಯುಗದ ಭೀಷ್ಮ ಪ್ರತಿಜ್ಞೆಯನ್ನು ಮಾಡುತ್ತಿರುವಾಗ ಆಕಾಶದಲ್ಲಿ ದೇವಾಧಿದೇವತೆಗಳು ಕಲೆತು ಹರ್ಷಿಸಿದರು. ಗಗನಕ್ಕೆ ಏರಿದ್ದು ಹೂವಾಗದೆ, ಅದರ ಬೆಲೆ ಮಾತ್ರವಾಗಿದ್ದರಿಂದ ಪುಷ್ಪ ವೃಷ್ಟಿಯ ಕಾರ್ಯಕ್ರಮವನ್ನು ರದ್ದು ಪಡಿಸಲಾಯಿತು.

ಭೀಷಣವಾದ ಪ್ರತಿಜ್ಞೆಯನ್ನು ಗೈದದ್ದು ಆಯಿತು ಆದರೆ ನುಡಿದಂತೆ ನಡೆಯುವುದು ಸುಲಭ ಸಾಧ್ಯವೇ? ಏಕೆಂದರೆ ನುಡಿಯುವುದು ಬಾಯಲ್ಲಿ ನಡೆಯಬೇಕಿರುವುದು ಕಾಲ ಮೇಲೆ! ಮೂಳೆಯಿಲ್ಲದ ಅಂಗ ಮಾಡಿದ ನಿರ್ಧಾರಕ್ಕೆ ಮೂಳೆಗಳಿರುವ ಅಂಗಗಳು ಶ್ರಮ ಪಡಬೇಕು.

ದೊರೆಯು ಇಪ್ಪತ್ನಾಲ್ಕು ಗಂಟೆಗಳಲ್ಲದಿದ್ದರೂ ಜನರ ಕಣ್ಣಲ್ಲಿರುವಾಗಲೆಲ್ಲಾ ನಗುಮುಖದಿಂದಲೇ ಕಾಣಬೇಕೆಂದು ಆತನ ಆಪ್ತ ಕಾರ್ಯದರ್ಶಿಗಳೆಲ್ಲ ಭೀಕರವಾದ ಉಪಾಯಗಳನ್ನು ಹೂಡಿದರು. ಕಾಲನ ಹಸ್ತಾಕ್ಷರವನ್ನೇ ಅಳಿಸಿ ಹಾಕಿ ಎಂಭತ್ತರ ಮುದುಕಿಯನ್ನು ಇಪ್ಪತ್ತರ ತರುಣಿಯಾಗಿಸುವ, ಅಡುಗೆ ಒಲೆಯ ಮಸಿಯ ಬಣ್ಣದ ಮುಖವನ್ನು ಚಂದ್ರನ ಬೆಳ್ದಿಂಗಳಲ್ಲಿ ತೊಳೆದು ಹೊಳೆಯಿಸುವ, ಹೆಣ್ಣನ್ನು ಗಂಡಾಗಿಸುವ ಗಂಡನ್ನು ಹೆಣ್ಣಾಗಿಸುವ ಮೇಕಪ್ ಮ್ಯಾಜಿಶಿಯನ್‌ಗಳು ದೊರೆಯ ಮುಖದ ಮೇಲಿನ ಸಿಡುಕನ್ನು ಒರೆಸಿ ತೆಗೆದು ನಗುವನ್ನು ಬಳಿಯಲಾರರೇ? ಮೇಕಪ್ ಮಾಂತ್ರಿಕರು ತಮ್ಮ ಕಾರ್ಯ ಶುರು ಮಾಡಿದರು. ದೊರೆಯ ಮುಖದ ಮೇಲೆ ನಾಲ್ಕಿಂಚು ದಪ್ಪನಾದ ನಗುವಿನ ಪದರವನ್ನು ಹಾಸುವಲ್ಲಿ ಯಶಸ್ವಿಯೂ ಆದರು. ತಮ್ಮ ಮುಖವನ್ನು ಕಂಡು ತಮ್ಮ ಕಣ್ಣುಗಳನ್ನು ತಾವೇ ನಂಬದಾದ ದೊರೆಯು ಪಕ್ಕದಲ್ಲಿದ್ದ ಇಸ್ತ್ರೀ ಸಚಿವೆಯ ಕೈ ಚಿವುಟಿ ನೋಡಿದರು.

ಮುಖದ ಮೇಲಿನ ನಗುವಿನ ಪದರವು ಎದೆಯಲ್ಲೂ ಆತ್ಮವಿಶ್ವಾಸದ ಪದರಗಳನ್ನು ಹಾಸಿದ್ದು ದೊರೆಯ ವರ್ತನೆಯಲ್ಲೇ ಕಾಣುತ್ತಿತ್ತು. ದೊರೆಯುವ ತನ್ನ ನಾಲ್ಕಿಂಚು ನಗುವಿನ ಪದರದಿಂದ ಪ್ರಜೆಗಳ ಹೃದಯಗಳನ್ನು ಸೂರೆ ಮಾಡುತ್ತ ನಡೆಯುತ್ತಿರುವಾಗ ಆ ಅವಘಡ ಸಂಭವಿಸಿಯೇ ಬಿಟ್ಟಿತು. ಬಳ್ಳಾರಿಯ ಮೂಲೆಯೊಂದರಲ್ಲಿ ಮೂಡಣದ ತಂಗಾಳಿ ಹಾಗೂ ಪಡುವಣದ ಬಿರುಗಾಳಿಯ ಸಂಯೋಗದಿಂದ ಹುಟ್ಟು ಪಡೆದ ಸುಂಟರಗಾಳಿಯು ಗಣಿಯ ಕೆಂಧೂಳಿನ ತಂಡವನ್ನು ಕಟ್ಟಿಕೊಂಡು ದೊರೆಯ ಮೇಲೆರಗಿತು. ಯುದ್ಧ ತರಬೇತಿಯಿಲ್ಲದ ದೊರೆಯ ನಗುವಿನಲೆಯ ನಾವಿಕರು ದೋಣಿಗಳೊಂದಿಗೆ ಮುಳುಗಿದರು. ಮೋಡಗಳು ಚದುರಿ ಸೂರ್ಯ ಕಂಡಂತೆ ದೊರೆಯ ಮುಖದ ಮೇಲಿನ ಸಿಡುಕು ಪ್ರಜ್ವಲವಾಗಿ ಹೊಳೆಯಲಾರಂಭಿಸಿತು.

ಮಾಂತ್ರಿಕರ ಕೈಬಿಟ್ಟ ದೊರೆಯ ಬಳಗ ವಿದೂಷಕರ ಕೈ ಹಿಡಿಯಿತು. ದೊರೆಯ ಮುಖದ ಮೇಲೆ ನಗುವರಳಿಸುವಲ್ಲಿ ಯಶಸ್ವಿಯಾಗುವ ವಿದೂಷಕನಿಗೆ ದೊರೆಯ ಅನಧಿಕೃತ ಪತ್ನಿಯ ಸಮಸ್ತ ಸಂಪತ್ತಿನಲ್ಲಿ ಅರ್ಧ ಭಾಗವನ್ನು ಕೊಡಲಾಗುವುದೆಂದು ಘೋಷಿಸಲಾಯ್ತು. ಆದರೆ ವಿದೂಷಕರ ಸಮಸ್ತ ಪ್ರತಿಭೆಯೂ ಗತಕಾಲದ ರಾಜಕುಮಾರಿಯನ್ನು ನಗಿಸುವಲ್ಲೇ ಖರ್ಚಾಗಿ ಹೋಗಿತ್ತು. ಅಲ್ಲದೆ ರಾಜಕುಮಾರಿಯನ್ನು ನಗಿಸುವಲ್ಲಿ ಸಫಲನಾದ ಒಬ್ಬ ವಿದೂಷಕನು ರಾಜಕುಮಾರಿಯನ್ನೇ ಮದುವೆಯಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಇಲ್ಲೂ ಯಾವ ಯಶಸ್ಸೂ ಸಿಕ್ಕಲಿಲ್ಲ.

ಕಡೆಗೆ ಮೈಕೆಲ್ ಜಾಕ್ಸನನ ಮೂಗು, ಪೂಜಾ ಗಾಂಧಿಯ ಮಚ್ಚೆ, ರಾಖಿ ಸಾವಂತಳ ‘ಎದೆಗಾರಿಕೆ’ಯನ್ನು ತಿದ್ದಿ ತೀಡಿ ಆಧುನಿಕ ಶಿಲ್ಪಿಗಳಾದ ಪ್ಲಾಸ್ಟಿಕ್, ಪೇಪರ್ ಸರ್ಜನರ ಕಾಲಿಗೆರಗಲಾಯ್ತು. ದೊರೆಯ ಮುಖದಲ್ಲಿರುವ ಸಿಡುಕಿಗೆ ನೆರವಾಗುವ ಭಿನ್ನಮತೀಯ, ಬಂಡಾಯ ಮಾಂಸ ಖಂಡಗಳನ್ನು ರೆಸಾರ್ಟಿನಲ್ಲಿ ಬಂಧಿಸಿ ನಗುವಿನ ಪಕ್ಷಕ್ಕೆ ಎಳೆದುಕೊಳ್ಳುವುದಕ್ಕೆ ಯೋಜನೆ ಹಾಕಿಕೊಳ್ಳಲಾಯ್ತು. ಸತತ ಮೂರು ಸೆಕೆಂಡುಗಳ ಮ್ಯಾರಥಾನ್ ಸರ್ಜರಿ ನಡೆಸಲಾಯ್ತು. ಈ ಆಪರೇಷನ್ ದೊರೆಮುಖ ದೊರೆಯ ಪಕ್ಷದ  ಹಿಂದಿನ ಸಾಧನೆಯಾದ ಆಪರೇಷನ್ ಕಮಲವನ್ನೂ ಬಾಡಿಸಿತು. ಸರ್ಜರಿ ಮುಗಿಸಿ ಕೈತೊಳೆದು ಸರ್ಜನರು ಹೊರಬಂದರು. ಆಪರೇಶನ್ ಥಿಯೇಟರಿನ ಪರದೆಯನ್ನು ಸರಿಸಿದೊಡನೆಯೇ ವಿರೋಧ ಪಕ್ಷದ ಎಪ್ಪತ್ತು ಮೀರಿದ ನಾಯಕರುಗಳು ದಿಡೀರ್ ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಟ್ಟರು ಎಂಬುದಷ್ಟೇ ವರದಿಯಾಗಿದೆ.

bsyed 2007101454050401

 

arrow