ವೈಜ್ಞಾನಿಕ ಕತೆಗಾರ ಅರ್ಥರ್ ಸಿ ಕ್ಲರ್ಕ್ ಇನ್ನಿಲ್ಲ
(ಇ-ಲೋಕ-67)(26/3/2008)
ಅರ್ಥರ್ ಸಿ ಕ್ಲರ್ಕ್ ವೈಜ್ಞಾನಿಕ ಕತೆಗಳನ್ನು ಬರೆದು ಜನಪ್ರಿಯರಾದವರು.ಅವರ ಕತೆಗಳಲ್ಲಿ ಕಂಡು ಬಂದ ಕಲ್ಪನಾ ವಿಲಾಸಗಳಲ್ಲಿ ಹಲವು ಕಲ್ಪನೆಗಳು ನಿಜವಾಗಿದ್ದರೆ,ಇನ್ನು ಹಲವು ನಿಜವಾಗಲು ಇನ್ನೂ ಸಮಯ ತೆಗೆದು ಕೊಳ್ಳಬಹುದು. ಸಂಪರ್ಕ ಉಪಗ್ರಹಗಳ ಬಗ್ಗೆ ಕ್ಲರ್ಕ್ ಅವರು ಐವತ್ತರ ದಶಕದ ತಮ್ಮ ವೈಜ್ಞಾನಿಕ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದರು. ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹವು ಭೂಮಿಯ ಮೇಲೆ ಸ್ಥಿರವಾಗಿರುವಂತೆ ಕಾಣಿಸುವುದರಿಂದ ಅದನ್ನು ಸಂಪರ್ಕ ಕ್ಷೇತ್ರದಲ್ಲಿ ಬಳಸಬಹುದೆಂದು ಸೂಚಿಸಿದವರಲ್ಲಿ ಕ್ಲರ್ಕ್ ಕೂಡಾ ಓರ್ವರು. ಟಿವಿ, ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲು ಇಂತಹ ಉಪಗ್ರಹಗಳು ನೆರವಾದದ್ದು ಈಗ ಇತಿಹಾಸ.ಎರಡು ಸಾವಿರನೆಯ ಇಸವಿಯಲ್ಲಿ ಕಂಪ್ಯೂಟರ್ ತಂತ್ರಾಂಶಗಳು ಕೈಕೊಡಬಹುದೆಂದು ಸರಿಯಾಗಿ ಊಹಿಸಿ, ಆಗ ಸಂಭವಿಸಬಹುದಾದ ಸಮಸ್ಯೆಗಳ ಸುತ್ತ ಹೆಣೆದ ಕತೆ "ದ ಘೋಸ್ಟ್ ಫ್ರಮ್ ದ ಗ್ರಾಂಡ್ ಬ್ಯಾಂಕ್ಸ್" ಎನ್ನುವ ಕಾದಂಬರಿಯಲ್ಲಿ ಮೂಡಿಬಂದಿತ್ತು.ಅಣುಶಕ್ತಿಯನ್ನು ಬಳಸಿ,ಬಾಹ್ಯಾಕಾಶ ವಾಹನಗಳನ್ನು ಉಡಾಯಿಸುವ ಕಲ್ಪನೆ ಅರ್ಥರ್ ಸಿ ಕ್ಲರ್ಕ್ ಅವರ ಮೂಸೆಯಲ್ಲಿ ಬಂದಿತ್ತು. ಮೊದಲಿಗೆ ರಷ್ಯಾ ಈ ರೀತಿಯ ರಾಕೆಟ್ಗಳನ್ನು ತಯಾರಿಸಿತು.ನಂತರದ ದಿನಗಳಲ್ಲಿ ಅಮೆರಿಕಾವೂ ಅಣುಶಕ್ತಿ ಚಾಲಿತ ರಾಕೆಟ್ ಮತ್ತು ಬಾಹ್ಯಾಕಾಶ ವಾಹನಗಳನ್ನು ಬಳಸಿತು. ಈ ಸರಣಿಗೆ ಕ್ಲರ್ಕ್ ತಮ್ಮ ಕಾದಂಬರಿಯಲ್ಲಿ ಹೆಸರಿಸಿದ ಪ್ರಾಮಿತಿಯಸ್ ಎಂಬ ಹೆಸರನ್ನೇ ಇಡಲಾಯಿತು."3001:ದ ಫೈನಲ್ ಒಡಿಸ್ಸಿ"ಯಲ್ಲಿ ಕ್ಲರ್ಕ್ ವ್ಯಕ್ತಿಯೋರ್ವ ತನ್ನ ಮಿದುಳಿನಲ್ಲಿರುವ ಯೋಚನೆ ಮತ್ತು ಮಾಹಿತಿಗಳನ್ನು ಕಂಪ್ಯೂಟರಿಗೆ ವರ್ಗಾಯಿಸುವ ಫ್ಯಾಂಟಸಿಯನ್ನು ಪ್ರಸ್ತಾವಿಸಿದ್ದರು.ಇಂತಹದ್ದು ಈಗಿನ್ನೂ ಅಸಾಧ್ಯ. ಆದರು ವ್ಯಕ್ತಿಯೋರ್ವನ ಚಿತ್ರ,ಮಾತುಕತೆ,ದೂರವಾಣಿ ಕರೆ,ಮಿಂಚಂಚೆ,ಭಾಷಣಗಳಿತ್ಯಾದಿಗಳನ್ನು ಗಣಕೀಕರಿಸುವಂತಹ ಯೋಜನೆಗಳು ಈಗಾಗಲೇ ನಡೆಯುತ್ತಿವೆ. ಭೂಕಂಪದ ಬಗೆಗೆ ಮುನ್ಸೂಚನೆ ಪಡೆಯುವ ವ್ಯವಸ್ಥೆಗಳ ಬಗ್ಗೆಯೂ ಕ್ಲರ್ಕ್ ಪ್ರಸ್ತಾಪಿಸಿದ್ದರು.ಭೂಖಂಡಗಳ ಚಲನೆ ಭೂಕಂಪಕ್ಕೆ ಕಾರಣವಾದ್ದರಿಂದ ಇವನ್ನು ಭದ್ರವಾಗಿ ವೆಲ್ಡ್ ಮಾಡಿ,ಭೂಕಂಪ ನಿರೋಧಕ ವ್ಯವಸ್ಥೆಯನ್ನು ಅಳವಡಿಸಬಹುದೆಂದು ಕ್ಲರ್ಕ್ ಲೆಕ್ಕ ಹಾಕಿದ್ದರು!ಅಂದ ಹಾಗೆ ಅರ್ಥರ್ ಸಿ ಕ್ಲರ್ಕ್ ಅವರ ಕಾದಂಬರಿಯೊಂದರ ಹೆಸರು "ರೆಂಡೆಸ್ವಸ್ ವಿತ್ ರಾಮ"(Rendezvous with Rama)!
ಕೈಗೆಟಕುವ ಬೆಲೆಯಲ್ಲಿ ಲ್ಯಾಪ್ಟಾಪ್
ಅಮೆರಿಕಾವು ಆರ್ಥಿಕ ಹಿನ್ನಡೆ ಕಾಣುತ್ತಿದೆ. ಈ ಹಿನ್ನಡೆಯು ಕಂಪ್ಯೂಟರ್ ಉದ್ದಿಮೆಯ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ. ಕಂಪೆನಿಗಳ ಆದಾಯ ಇಳಿದೊಡನೆ,ಅವು ತಮ್ಮ ಖರ್ಚು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತವೆ. ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡುವುದು,ಕಂಪ್ಯೂಟರುಗಳ ಖರೀದಿ ಕಡಿತ ಇಂತಹ ಕ್ರಮಗಳು ತಕ್ಷಣ ಜಾರಿಗೆ ಬರುತ್ತವೆ. ಇದರ ಪರಿಣಾಮವನ್ನು ಕಡಿಮೆ ಮಾಡಲೋ ಎನ್ನುವಂತೆ ಕಂಪ್ಯೂಟರ್ ಸಂಸ್ಕಾರಕಗಳ ತಯಾರಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಟೆಲ್ ತನ್ನ ಮಾರುಕಟ್ತೆಯನ್ನು ವಿಸ್ತರಿಸಲು ಕಡಿಮೆ ಬೆಲೆಯ ನೋಟ್ಬುಕ್ ಕಂಪ್ಯೂಟರುಗಳನ್ನು ತಯಾರಿಸಲು ಅಣಿಯಾಗುತ್ತಿದೆ.ಕ್ಲಾಸ್ಮೇಟ್ ಪಿಸಿ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಈ ಯಂತ್ರಗಳು ಮುನ್ನೂರೈವತ್ತು ಡಾಲರುಗಳ ಬೆಲೆಯಲ್ಲಿ ಸಿಗಲಿವೆ. ಸೆಲ್ಫೋನಿನಂತಹ ಸಾಧನದಲ್ಲಿ ಅಂತರ್ಜಾಲ ಜಾಲಾಟ ಸಾಧ್ಯವಾಗಿಸುವ ಸಾಧನಗಳ ತಯಾರಿಗೂ ಕೈಹಾಕುವ ಯೋಚನೆ ಇಂಟೆಲ್ಗಿದೆ. ಸದ್ಯ ವಿಶ್ವದ ಒಂದು ಬಿಲಿಯನ್ ಜನರಿಗಷ್ಟೆ ಸೀಮಿತವಾದ ಮಾರುಕಟ್ಟೆಯನ್ನು ಸಾಧ್ಯವಾದಷ್ಟು ಹೆಚ್ಚಿಸುವುದು ಇಂಟೆಲ್ ಗುರಿ.ಸದ್ಯ ತೈವಾನ್ನ ಕಂಪೆನಿ ಈ ಪಿಸಿ ಹೆಸರಿನಲ್ಲಿ ನಾಲ್ಕುನೂರ್ ಡಾಲರು ಬೆಲೆಯಲ್ಲಿ ಲ್ಯಾಪ್ಟಾಪ್ ಮಾರುತ್ತಿದೆ. ಪ್ರತಿ ಮಗುವಿಗೂ ಲ್ಯಾಪ್ಟಾಪ್ ಯೋಜನೆಯಡಿ ಇನ್ನೂರು ಡಾಲರುಗಳ ಬೆಲೆಗೂ ಲ್ಯಾಪ್ಟಾಪ್ ಲಭ್ಯವಿದೆ.
ಐಟಿ ಮತ್ತು ಪರಿಸರ
ಹಳೆಯ ಕಂಪ್ಯೂಟರುಗಳನ್ನು ಎಸೆದಾಗ ಉಂಟಾಗುವ ಕಸ ಅತ್ಯಂತ ವಿಷಕಾರಕ ವಸ್ತುಗಳನ್ನು ಹೊಂದಿ ಪರಿಸರಕ್ಕೆ ಹಾನಿ ತರುತ್ತದೆ.ಕಂಪ್ಯೂಟರುಗಳಲ್ಲಿ ಪಿವಿಸಿ ಪ್ಲಾಸ್ಟಿಕ್ ವಸ್ತುವೂ ಹೇರಳವಾಗಿರುತ್ತದೆ. ಇದರಲ್ಲಿರುವ ಕ್ಲೋರಿನ್ ಮತ್ತು ಡಯಾಕ್ಸಿನ್ ಪರಿಸರ ಸ್ನೇಹಿಯಲ್ಲ. ಆದರೂ ಮಾಹಿತಿ ತಂತ್ರಜ್ಞಾನ ಇನ್ನೊಂದು ವಿಧದಲ್ಲಿ ಪರಿಸರಪ್ರಿಯವಾಗಿರುವುದನ್ನು ಗಮನಿಸಿದ್ದೀರಾ?ಕಚೇರಿಗಳಲ್ಲೀಗ ಪ್ರಿಂಟರ್,ಫೋಟೋ ಕಾಪಿ,ಫ್ಯಾಕ್ಸ್ ಮತ್ತು ಸ್ಕ್ಯಾನಿಂಗ್ ಈ ಎಲ್ಲಾ ಕೆಲಸಗಳನ್ನೂ ಒಂದೇ ಯಂತ್ರ ಮಾಡುತ್ತದೆ.ಮೊದಲಾದರೆ ನಾಲ್ಕು ಪ್ರತ್ಯೇಕ ಯಂತ್ರಗಳು ಬೇಕಿದ್ದುವು.ಇವುಗಳ ತಯಾರಿಗೆ ಬೇಕಿದ್ದ ಯಂತ್ರಾಂಶ, ವಿದ್ಯುತ್ ಬಳಕೆ ಇವು ಈಗಿನ ಸರ್ವಶಕ್ತ ಯಂತ್ರದ ಬಳಕೆಯಿಂದಾಗಿ ತಗ್ಗಿದೆ.ಕಚೇರಿಯಲ್ಲಿ ಈ ಸಾಧನಗಳನ್ನಿಡಲು ಬೇಕಾದ ಸ್ಥಳವಕಾಶವೂ ಕಡಿಮೆಯಾಗಿದೆ.ಈಗಿನ ಗಣಕಯಂತ್ರಗಳು ಬಳಕೆಯಾಗದಾಗ "ನಿದ್ರೆ"ಗೆ ಜಾರಿ ಶೂನ್ಯ ವಿದ್ಯುಚ್ಛಕ್ತಿ ಬಳಸುವಷ್ಟು ಜಾಣತನ ಹೊಂದಿವೆ.ಇನ್ನು ಕಚೇರಿಗಳ ದತ್ತಾಂಶ ಸಂಗ್ರಹಿಸಲು ಡೇಟಾ ಸೆಂಟರುಗಳೆಂಬ ಸ್ಮರಣಕೇಂದ್ರಗಳನ್ನು ಬಳಸುವ ತಂತ್ರಜ್ಞಾನ ಲಭ್ಯವಿರುವುದರಿಂದ,ಅವನ್ನು ವಿದ್ಯುಚ್ಛಕ್ತಿ ಉತ್ಪಾದನೆಯಾಗುವ ಸ್ಥಳಗಳಲೇ ಸ್ಥಾಪಿಸಬಹುದು.ವಿದ್ಯುಚ್ಛಕ್ತಿ ರವಾನೆಯಲ್ಲಿ ಉಂಟಾಗುವ ನಷ್ಟ ತಪ್ಪಿಸಬಹುದು.
ಹೊಸ ಜಾಡು ಹಿಡಿದಿರುವ ತಂತ್ರಾಂಶ ಅಭಿವೃದ್ಧಿ
ಇಂಟೆಲ್ ಕಂಪೆನಿಯ ಸಂಸ್ಕಾರಕಗಳೀಗ ನಾಲ್ಕು ಕೇಂದ್ರಗಳನ್ನು ಹೊಂದಿರುತ್ತದೆ.ಅಂದರೆ ಒಂದರಲ್ಲಿ ನಾಲ್ಕು ಸಂಸ್ಕಾರಕಗಳು ಲಭ್ಯ.ಆದರೆ ಅವುಗಳನ್ನು ದುಡಿಸಿಕೊಳ್ಳಲು ಕಂಪ್ಯೂಟರಿನಲ್ಲಿ ಬಳಕೆಯಾಗುವ ತಂತ್ರಾಂಶವನ್ನು ಲಭ್ಯ ಸೌಕರ್ಯವನ್ನು ಬಳಸಿಕೊಳ್ಳುವಂತೆ ಅಭಿವೃದ್ಧಿ ಪಡಿಸಿರಬೇಕು. ನಾಲ್ಕು ಬರ್ನರ್ ಉಳ್ಳ ಒಲೆ ಖರೀದಿಸಿದರೆ ಏನು ಬಂತು? ನಾಲ್ಕು ಪಾತ್ರೆಗಳನ್ನು ಬಳಸಿ,ಪ್ರತಿ ಬರ್ನರ್ ಬಳಸಿ ಅಡುಗೆ ಮಾಡಬೇಕು ತಾನೇ?ತಂತ್ರಾಂಶ ಅಭಿವೃದ್ಧಿ ಪಡಿಸುವಾಗ ಮಾಡಬೇಕಾದ ಕಾರ್ಯವನ್ನು ಗಣಕಯಂತ್ರಗಳಿಗೆ ಹಂಚಿಕೊಟ್ಟು ಬೇಗನೆ ಕೆಲಸ ತೆಗೆಯುವ ಜಾಣ್ಮೆ ಅಭಿವೃದ್ಧಿ ಪಡಿಸುವವರಲ್ಲಿ ಇರಬೇಕು.ಮುಂದೆ ಅರುವತ್ತನಾಲ್ಕು ಸಂಸ್ಕಾರಕಗಳನ್ನು ಹೊತ್ತ ಕಂಪ್ಯೂಟರುಗಳು ಜನಸಾಮಾನ್ಯರಿಗೂ ಲಭ್ಯವಾಗಲಿದೆ.ಅದಕ್ಕೆ ಇನ್ನೂ ನಾಲ್ಕು ವರ್ಷಗಳು ಬೇಕಾಗಬಹುದು.ಚಿಪ್ ತಯಾರಕ ಕಂಪೆನಿ ಏಎಂಡಿ ಈಗಾಗಲೇ ಫ್ರೇಮ್ವೇರ್ ಎಂಬ ತಂತ್ರಾಂಶ ಲೈಬ್ರೇರಿಯನ್ನು ಮುಕ್ತ ತಂತ್ರಾಂಶವಾಗಿ ಒದಗಿಸಿದೆ.ಇದು ಬಹುಕೇಂದ್ರಿತ ಗಣಕದ ಪ್ರಯೋಜನ ಪಡೆಯಲು ನೆರವು ನೀಡುವ ಕ್ರಮವಿಧಿಗಳನ್ನು ಹೊಂದಿದೆ.ರೇಪಿಡ್ಮೈಂಡ್ ಎನ್ನುವ ಉತ್ಪನ್ನ ಸಾಮಾನ್ಯ ಗಣಕ ಕ್ರಮವಿಧಿಗಳನ್ನು ಬಹುಕೇಂದ್ರಿತ ಗಣಕಕ್ಕೆ ಸೂಕ್ತವಾಗಿ ಮಾರ್ಪಾಡು ಮಾಡಬಲ್ಲುದು.
*ಅಶೋಕ್ಕುಮಾರ್ ಎ