ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

To prevent automated spam submissions leave this field empty.
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ. ಇದು ವೀರರ ಲಕ್ಷಣವೂ ಅಲ್ಲ, ಧೀರರ ಲಕ್ಷಣವೂ ಅಲ್ಲ. ತೆಂಗಿನ ಮರ ತಾನು ಹುಣಿಸೆ ಮರವಾಗಬೇಕಿತ್ತು, ಮಲ್ಲಿಗೆ ಗಿಡವಾಗಬೇಕಿತ್ತು ಎಂದು ಬಯಸುತ್ತದೆಯೇ? ನಾವೆಲ್ಲರೂ ಈಗ ಇರುವುದಕ್ಕಿಂತ ಬೇರೆ ಏನೋ ಆಗಬೇಕೆಂದು ಹಂಬಲಿಸುತ್ತ ಅಂಥ ಹಂಬಲದಲ್ಲೇ ಬದುಕನ್ನು ಕಳೆದುಬಿಡುತ್ತೇವಲ್ಲ! ಇಂಥ ಹಂಬಲವೇ ಎಸ್ಕೇಪಿಸಂ ಅಲ್ಲವೆ? ಇರುವ ಸತ್ಯವನ್ನು ಒಪ್ಪಿಕೊಳ್ಳದೆ ಇಷ್ಟವಾಗುವ ಸತ್ಯವನ್ನು, ಪ್ರಿಯವಾಗುವ ಸತ್ಯವನ್ನು ಬರಿದೇ ಹುಡುಕುತ್ತ ಬಳಲುತ್ತೇವೆ. ಹಾಗೆ ಬಳಲುವುದೇ ನಮ್ಮ ದೊಡ್ಡಸ್ತಿಕೆ ಎಂದು ಭ್ರಮಿಸುತ್ತೇವೆ. ವೀರರು, ಧೀರರು ಆದವರು ತಮ್ಮ ಸತ್ಯವನ್ನು ಒಪ್ಪಿಕೊಂಡು ತಮ್ಮ ಪಾಲಿಗೆ ಬಂದ ಕುದುರೆಯನ್ನು ಪಳಗಿಸಿಕೊಳ್ಳಬೇಕು ಅಲ್ಲವೆ?
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಾರ್, ನಮಸ್ಕಾರ, ಕೆಲವೊಮ್ಮೆ ಕತ್ತೆ ಮೇಲೆ ಹೋಗಿ ಕುದರೆ ಮೇಲೆ ಹೋಗ್ತಾ ಇದ್ದೇನೆ ಅನ್ನೋವ್ರು ಇದ್ದಾರೆ. ಆಮೇಲೆ , ಕತ್ತೆ ಮೇಲೆ ಹೊಗುವವರಿಗೆ ಇದು ಅನ್ವಯಿಸೊದಿಲ್ಲಾ. ಆಲ್ಲಮ್ಮಾ ಪ್ರಭುಗಳು ಕಳ್ಳ ಪ್ರಭುಗಳಿ೦ದ ನಮ್ಮ ನಾಡನ್ನು ಕಾಪಡಲಿ. - ಮುರಳಿ,

ಕೂತಿರುವುದು ಕತ್ತೆಯ ಮೇಲೆ ಎಂದು ಗೊತ್ತಿದ್ದರೆ ಬೇಕಾದಷ್ಟಾಯಿತು. ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ. ಸಿಕ್ಕಿದ್ದು ಕತ್ತೆಯೇ ಅಗಿದ್ದರೆ ಅದನ್ನೇ ಸವಾರಿ ಮಾಡಬೇಕು, ಇಲ್ಲದ ಕುದುರೆಯನ್ನು ಬಯಸಬಾರದು ಎಂಬ ಭಯಂಕರ ಸತ್ಯವನ್ನು ಅಲ್ಲಮ ಹೇಳುತ್ತಿದ್ದಾನೆ, ಅಲ್ಲವೇ! ನಾಗಭೂಷಣ

"ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ" ಎಂತಹ ಸತ್ಯವಾದ ಮಾತನ್ನು ಹೇಳಿದಿರಿ! ಡಿ ವಿ ಜಿ ಯವರ ಕಗ್ಗದಲ್ಲಿ ಇದೇ ರೀತಿಯ ಸಂದೇಶ ನೀಡುವಂತಹದ್ದೊಂದು ಇಲ್ಲಿದೆ: ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? । ತಿರುಕಹಾರುವನಾಗಿ ಮೀಸೆ ತಿರುಚುವೆಯ? ।। ಇರುವುದವನವನಿಗವನವನ ತಾಣದ ಧರ್ಮ । ಅರಿವೆ ಋತುಗತಿಯಂತೆ -- ಮಂಕುತಿಮ್ಮ ।। :)

ಈ ಅಲ್ಲಮ್ಮಾ ಪ್ರಭು ಯಾರು ಸಾರ್ ತಾಯಿ ಎಲ್ಲಮ್ಮನ ತಮ್ಮನಾ? (ಸುಮ್ನೆ ತಮಾಷೆಗೆ ಛೇಡಿಸಲು ಹಾಗೆ ಹೇಳಿದೆ) ಎಲ್ಲರಿಗೂ ಇಂತಹ ತಪ್ಪುಗಳು ಆಗೇ ಆಗುತ್ತದೆ. ಕನ್ನಡದಲ್ಲಿ ಟೈಪಿಸುವ ಬಗೆಗೆ ಕನ್ನಡ ಕಲಿಕೆ ವಿಭಾಗದಲ್ಲಿ ತಿಳಿಸುವೆ. ತವಿಶ್ರೀನಿವಾಸ

ಕೊಟ್ಟ ಕುದುರೆಯನೇಱಲಱಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ
ನೆಱೆ ಮೂಱು ಲೋಕವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ

ಇದು ಮೂಲರೂಪ.