ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ಪರಸ್ಪರರಿಗೆ ಬಣ್ಣದೋಕುಳಿಯನ್ನೆರಚಿ ಸಂತೋಷವನ್ನು ಹಂಚಿಕೊಳ್ಳುವುದೇನೋ ದ್ವಾಪರದಿಂದ ಬಂದ ಭಾರತೀಯ ಹಬ್ಬ ಪರಂಪರೆ ಎಂದು ಹೇಳಬಹುದು. ಆದರೆ, ಈ ಪರಸ್ಪರರನ್ನು ಸುಳ್ಳಿನ ಕಂತೆ ಹೊಸೆದು ನಮ್ಮ ಅಚ್ಚುಮೆಚ್ಚಿನ ಗೆಳೆಯರು, ಸಂಬಂಧಿಕರನ್ನೇ ಕ್ಷಣ ಮಾತ್ರ ಮೂರ್ಖರನ್ನಾಗಿಸಿ ಆನಂದಿಸುವುದು ಎಷ್ಟು ಸರಿ? ನಮ್ಮಂತಹ ಹಬ್ಬ ಹರಿದಿನಗಳಿಲ್ಲದ, ವಿಶ್ವ ಬಂಧುತ್ವದ ವಿವೇಚನೆ ಇಲ್ಲದ ಪಾಶ್ಚಾತ್ಯರ ಈ ಮೂರ್ಖರಾಟವನ್ನು ನಾವೂ ಅನುಸರಿಸಿ ಆನಂದಿಸುವುದು ಎಷ್ಟು ಹಿತ ಮತ್ತು ಸರಿ? ಮೂರ್ಖರಾಗಲು ಏಪ್ರಿಲ್ ಒಂದನೇ ದಿನವೇ ಬೇಕೆ? ಬೇರೆ ದಿನಗಳಲ್ಲಿ ಯಾರೂ ಮೂರ್ಖರಾಗುವುದಿಲ್ಲವೆ? ಮೂರ್ಖರಾದವರ ಮನಸ್ಥಿತಿ ಕ್ಷಣದ ಮಟ್ಟಿಗಾದರೂ ಎಷ್ಟು ಪರಿತಪಿಸಿರಬಹುದೆಂಬ ವಿವೇಚನೆ ಮೂರ್ಖರನ್ನಾಗಿಸಿದವರಿಗಿರುತ್ತದೆಯೇ? ಇದು ನಂಬಿಕೆ ದ್ರೋಹವೂ ಆಗುವುದಿಲ್ಲವೆ? ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ನಾವು ಸಂತೋಷ ಪಡುವುದು ಬಾಲಿಶವೆನಿಸುವುದಿಲ್ಲವೆ? ಸಂಪದದ ಓದುಗರು ಉತ್ತರವಿತ್ತಾರೇ?
ಇಂದಿನ ಯುವಜನಾಂಗ ನಮ್ಮ ಹಬ್ಬ ಹರಿದಿನಗಳನ್ನು ಬದಿಗೊತ್ತಿ, ಪ್ರೇಮದ ದಿನ, ಮೂರ್ಖರ ದಿನ, ಅಪ್ಪನ ದಿನ, ಅಮ್ಮನ ದಿನ ಹೀಗೆ ವಿವಿಧ ಬಗೆಯ ದಿನ (ಎಂದರೆ ತಿಥಿ - ಶ್ರಾದ್ಧ) ಆಚರಿಸುವುದನ್ನು ನೋಡಿದಾಗ ಮನಸ್ಸು ಕಸಿವಿಸಿಯಾಗುವುದಿಲ್ಲವೇ?
ಎ.ವಿ. ನಾಗರಾಜು.