ರುದ್ರಾಧ್ಯಾಯ - ಶಿವರಾತ್ರಿ
ಸವೆದ ಪಾದರಕ್ಷೆ ಶಿವನಿಗೆ ಮಯ್ಯುಜ್ಜುವ ಸಾಧನವಾದೀತು.
ಮುಕ್ಕಳಿಸಿದ ನೀರೂ ಅವನಿಗೆ ಅಭಿಷೇಕದ ಜಲವಾದೀತು.
ತಿಂದುಳಿದ ಮಾಂಸದ ಚೂರೂ ಕೂಡಾ ಆತನಿಗೆ ಉಪಹಾರವಾದೀತು.
ಕಾಡು ಮನುಷ್ಯನೂ ಕೂಡಾ ಭಕ್ತಾಗ್ರೇಸರನಾಗುತ್ತಾನೆ. ಭಕ್ತಿಗೆ ಅಸಾಧ್ಯವಾದುದೇ ಇಲ್ಲ.
ಇದು ಶಂಕರಾಚಾರ್ಯರು ತಮ್ಮ ಶಿವಾನಂದಲಹರಿಯಲ್ಲಿ ಶಿವನನ್ನು ಸ್ತುತಿಸಿದ ಪರಿ.
(ಮಾರ್ಗಾವರ್ತಿಕಪಾದುಕಾ ಪಶುಪತೇರಂಗಸ್ಯ ಕೂರ್ಚಾಯತೇ
ಗಂಡೂಷಾಂಬು ನಿಷೇಚನಂ ಪುರರಿಪೋರ್ದಿವ್ಯಾಭಿಷೇಕಾಯತೇ|
ಕಿಂಚಿದ್ಭಕ್ಷಿತ ಮಾಂಸಶೇಷಕಬಲಂ ದಿವ್ಯೋಪಹಾರಾಯತೇ
ಭಕ್ತಿಃ ಕಿಂ ನಕರೋತ್ಯಹೋ ವನಚರೋ ಭಕ್ತಾವತಂಸಾಯತೇ||)
ಸಾಮಾನ್ಯರ ದೇವತೆ ಶಿವ, ಉದಾಹರಣೆ ಬೇಡರ ಕಣ್ಣಪ್ಪ.
ಭಕ್ತಿಗೆ ಸುಲಭ ಸಾಧ್ಯನಾದ ಶಿವನಿಗೆ ನಮಸ್ಕಾರ.
ವಿದ್ಯಾಸು ಶ್ರುತಿರುತ್ಕೃಷ್ಟಾ ರುದ್ರೈಕಾದಶಿನೀ ಶ್ರುತೌ| ಎಂಬ ಸೂಕ್ತಿಯಂತೆ ವೇದಗಳಲ್ಲಿ ರುದ್ರಾಧ್ಯಾಯವು ಅತ್ಯುತ್ಕೃಷ್ಟವಾದುದಾಗಿದೆ.
ಇದು ಭಗವಂತನ ರುದ್ರಲೀಲೆಗಳನ್ನು ನಮ್ಮ ಸ್ಮರಣೆಗೆ ತಂದುಕೊಡುವಂತಹ ವೇದಭಾಗ.
ರುದ್ರಾಧ್ಯಾಯವು ಯಜುರ್ವೇದ ಸಂಹಿತೆಯ ನಾಲ್ಕನೆಯ ಕಾಂಡದ ಐದನೆಯ ಮತ್ತು ಏಳನೆಯ ಪ್ರಪಾಠಕಗಳ ಸಂಕಲನ.
ರುದ್ರನ ಶತ ಅವತಾರಗಳ -ಎಂದರೆ ಲೆಕ್ಕವಿಲ್ಲದಷ್ಟು ನಾನಾ ರೂಪಗಳ ಸ್ಮರಣೆ ಈ ಭಾಗದಲ್ಲಿರುವುದರಿಂದ ಇದಕ್ಕೆ ಶತರುದ್ರೀಯವೆಂಬ ಹೆಸರುಂಟು.
ಈ ಅಧ್ಯಾಯದ ಮೊದಲಭಾಗದಲ್ಲಿ ನಮಃ ಶಬ್ದ ಪದೇಪದೇ ಬರುತ್ತದೆಂಬ ಕಾರಣದಿಂದ ಅದನ್ನು ನಮಕವೆಂದೂ
ಎರಡನೇ ಭಾಗದಲ್ಲಿ ಚಮೇ ಎಂದು ಪುನರುಕ್ತಿ ಇರುವುದರಿಂದ ಅದನ್ನು ಚಮಕವೆಂದು ಕರೆಯುವುದು ವಾಡಿಕೆ.
ರುದ್ರ ಎಂದರೆ ಭಯಪಡಿಸುವವನು, ಅಳಿಸುವವನು (ರೋದಯತೀತಿ ರುದ್ರಃ) ಎಂದರ್ಥ.
ಅಥವಾ ರೋಗವನ್ನೂ ಸಂಸಾರ ದುಃಖವನ್ನೂ ನಾಶ ಮಾಡುವವನು ರುದ್ರ. (ರುಜಂ ಸಂಸಾರ ದುಃಖಂ ದ್ರಾವಯತೀತಿ ರುದ್ರಃ)
ಪರಮಾತ್ಮನ ಸಾಕಾರ ವಿಭೂತಿಗಳನ್ನು ನಮಗೆ ರುದ್ರಾಧ್ಯಾಯ ಪರಿಚಯಿಸುತ್ತದೆ.
ಈ ಪ್ರಪಂಚದಲ್ಲಿ ನಮಗೆ ಬೇಕೆನ್ನಿಸಿದ್ದರ ಜೊತೆಗೆ ಬೇಡವೆನ್ನಿಸಿದ್ದೂ ಇರುತ್ತದೆ
ಐಶ್ವರ್ಯದ ಪಕ್ಕದಲ್ಲಿ ದಾರಿದ್ರ್ಯವಿರುತ್ತದೆ,ಸೌಖ್ಯದ ಜೊತೆಗೆ ಸಂಕಟವೂ ಇರುತ್ತದೆ.
ಸೂರ್ಯ ಚಂದ್ರರಲ್ಲಿ ಭಗವದಂಶವಿರುವಂತೆ ಕಲ್ಲು ಕತ್ತಲೆಗಳಲ್ಲೂ ಇರುತ್ತದೆ.
ಜೀವನದಲ್ಲಿ ಇಷ್ಟಕ್ಕಾಗಿ ನಾವು ಕೈಚಾಚುವಂತೆ ಕಷ್ಟಕ್ಕೆ ತಲೆಬಾಗಲೂ ಸಿದ್ದರಿರಬೇಕಾಗುತ್ತದೆ.
ಈ ತತ್ತ್ವವನ್ನು ನಮಗೆ ಮನಮುಟ್ಟುವಂತೆ ಬೋಧಿಸುವುದಕ್ಕಾಗಿ ಹೊರಟಿರುವುದೇ ರುದ್ರಾಧ್ಯಾಯ.
ರುದ್ರಲೀಲಾಸ್ಮರಣೆಯಮೂಲಕ ಇದು ಮನಸ್ಸಿಗೆ ಸುಖಾಸುಖ ಸಮತೆಯನ್ನು ಅಭ್ಯಾಸಮಾಡಿಸಿ ಶಾಂತಿಗೆ ದಾರಿಮಾಡಿ
ಪರಬ್ರಹ್ಮಾನುಭವಕ್ಕೆ ಅವಕಾಶಮಾಡಿಕೊಡತಕ್ಕದ್ದಾಗಿದೆ.
ರುದ್ರಾಧ್ಯಾಯದ ಶೈಲಿ ಮನೋಹಾರಿಯಾದದ್ದು. ಓಜೋವಂತಗಳೂ ವೀರ್ಯದ್ಯೋತಕಗಳೂ ಆದಶಬ್ದಗಳು ಅದ್ಭುತ ಚಿತ್ರೋದ್ದೀಪಕಗಳಾಗುವಂತೆ ಸಮುದ್ರ ತರಂಗಧಾಟಿಯಲ್ಲಿ ಸಂಬದ್ಧವಾಗಿದೆ.
ತಾರಸ್ಥಾಯಿಯ ಕಂಠಶುದ್ಧಿಯುಳ್ಳವರು ಈ ವೇದಭಾಗವನ್ನು ವಿಹಿತ ಕ್ರಮದಲ್ಲಿ ಘೋಷಿಸಿದಾಗ ಕೇಳಿದವರ
ಅಂತರಂಗಕ್ಕೆ ಒಂದು ನಿರ್ಮಲ ವಾತಾವರಣ ಸಂಸ್ಪರ್ಶವೂ ಒಂದು ಭಾವೋನ್ನತಿಯೂ ಲಭ್ಯವಾಗುತ್ತದೆ
ಎಂಬುದು ನೂರಾರು ವರ್ಷಗಳ ನೂರಾರು ಮಂದಿಯ ಅನುಭವದ ಮಾತು.
ಆದ್ದರಿಂದ ಶಿವಾಭಿಷೇಕ ಕಾಲದಲ್ಲಿ ರುದ್ರಪಠನೆ ರೂಢಿಯಾಗಿ ಬಂದಿದೆ.
ಈ ರುದ್ರಾಧ್ಯಾಯದ ಮುಖ್ಯ ತಾತ್ಪರ್ಯವಾದ ಸ್ಥಿತಪ್ರಜ್ಞತೆಯನ್ನು ಇಲ್ಲಿ ಕಾಣಬಹುದು.http://sampada.net/article/17145
ಪ್ರಸಿದ್ದವಾದ ಪಂಚಾಕ್ಷರಿ ಮಂತ್ರವೂ ಇದರಲ್ಲೇ ಅಡಕವಾಗಿದೆ.
ಕೊನೆಯದಾಗಿ ಒಂದು ಮಂತ್ರದ ತಾತ್ಪರ್ಯ- ( ಶಿವೇನ ವಚಸಾತ್ವಾ)
ಹೇ ಗಿರಿಶನೇ ಮಂಗಳಕರವಾದ ಮಾತುಗಳಿಂದ ನಿನ್ನನ್ನು ಸ್ತುತಿಸುತ್ತೇನೆ, ನೀನು ನಮ್ಮ ಸುತ್ತಲಿನ ಪರಿಸರವನ್ನು ಆರೋಗ್ಯಕರವನ್ನಾಗಿಯೂ ಸೌಮನಸ್ಯ ಉಳ್ಳದ್ದನ್ನಾಗಿಯೂ ಮಾಡು.
ಬಹಳ ಹಿಂದೆಯೇ ಸಂಪದಿಗರೊಬ್ಬರು ರುದ್ರಾಧ್ಯಾಯದ ಬಗ್ಗೆ ಬರೆಯಲು ಕೇಳಿಕೊಂಡಿದ್ದರು.
ಇಂದಿನ ಶಿವರಾತ್ರಿಯ ಪರ್ವದಿನದಂದು ಸಂಕ್ಷಿಪ್ತವಾಗಿ ಬರೆದಿರುವೆ.
ಎಲ್ಲರಿಗೂ ಶಿವರಾತ್ರಿಯು ಶುಭದಾಯಕವಾಗಲಿ.
ಆಕರ- ವಿವಿಧ ಮೂಲಗಳಿಂದ ಸಂಗ್ರಹ.