ಬೆಳಗಿನ ಜಾವದ ಕನಸು
ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು.
ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ.
ಜಾವವನ್ನು ನಂಬಿ ಅಮೇರಿಕಾಕ್ಕೆ ಹಾರಿದ್ದ ಅನೇಕರು ಕೆಲಸ ಕಳೆದುಕೊಂದು ಕಷ್ಟ ಪಡುತ್ತಿದ್ದ ಕಾಲವದು.
ಈಗ ಓದಿ.
ಕೆಳಗಡೆ, ಕೆಲವು ಪ್ರಯೋಗಗಳ ಅರ್ಥ ಕೊಟ್ಠಿದ್ದೇನೆ.
ಬೆಳಗಿನ ಜಾವದ ಕನಸು
==============
ಬೆಳಗಿನ ಜಾವದ ಕನಸು
ನನಸಾಗುವುದಂತೆ
ಆದರೆ,
ಜಾವ ಬೆಳಗುವ ಕನಸು ?
"ಬೆಳ್ಳಗಿರುವುದೆಲ್ಲ ಹಾಲಲ್ಲ"
"ಇ ಇರುವುದೆಲ್ಲ ಕಾಮ್ಯವಲ್ಲ"
ಚುಕ್ಕೆಯ ಕಾಮಕ್ಕೆ ಮರುಳಾಗಿ
ಹಾರಿದರು ಎಲ್ಲೆ ಮೀರಿ
"ಕಾಮಾತುರಾಣಾಂ ನ ಭಯಂ ನ ಲಜ್ಜಾ"
ಆದರೀಗ
"ಜಾವಾತುರಾಣಾಂ ನ ಧನಂ ನ ನಿದ್ರಾ ?"
ಜಾವದ ಜವಕ್ಕೀಗ ಜವನ ಜಾವವೇ ?
ಚುಕ್ಕೆಯ ಬಲೆಯಲ್ಲಿ ಸಿಕ್ಕಿಸಿ ಕೊಲ್ಲುವ ಹುನ್ನಾರವೇ ?
ಸಮುದ್ರದ ಅಲೆಗಳು ಅಷ್ಟೊಂದು ಹರಿತವೆ?
ಅಥವಾ ಜಾವಕ್ಕಿದಿನ್ನೂ ಜಾವಳದ ಕರ್ಮವೇ ?
ಕಾದು ನೋಡೋಣ,
ಜಾವಕ್ಕೂ ಹಕ್ಕಿದೆ ಜೀವಿಸುವುದಕ್ಕೆ
- ಸುಚರಾ
೧೪.೦೩.೨೦೦೧
ಜಾವ - ಕಾಲ; ಚುಕ್ಕೆಯ ಕಾಮ - ಡಾಟ್ ಕಾಮ್; ಜವ - ವೇಗ; ಜವ - ಯಮ; ಚುಕ್ಕೆಯ ಬಲೆ - ಡಾಟ್ ನೆಟ್; ಸಮುದ್ರ..ಹರಿತ - ಸಿ ಶಾರ್ಪ್; ಜಾವಳ - ಚೌಲ.