"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
ತುಂಬಾ ಸಿಂಪಲ್ ಆದ ಪ್ರಶ್ನೆಯೊಂದು ಹೇಗೆ ನಿಮ್ಮ ತನು-ಮನಗಳನ್ನು ಮತ್ತು ದಿನ-ಮನಗಳನ್ನು ಕಾಡಬಹುದು ಎಂಬುದನ್ನು ನೋಡಿಯಾದಮೇಲೆ, ನಾನು ಯೋಚನೆ ಮಾಡದೆ ಆಶ್ವಾಸನೆ ಕೊಡುವುದನ್ನು ಬಿಟ್ಟು ಬಿಟ್ಟೆ, ಬಿಟ್ಟು ಬಿಟ್ಟೆ ಅನ್ನುವದಕ್ಕಿಂತ ಬಿಡಿಸಲಟ್ಟೆ ಎನ್ನುವುದು ಸೂಕ್ತವಾದೀತೇನೋ. ಅಲ್ಲಿಗೆ ನನ್ನ ಈ ಲೇಖನದ ಸಮಸ್ಯೆ ಆರಂಭವಾಯಿತು..ಅದುವೇ ನನ್ನ ರೆಸ್ಪಾನ್ಸ್ ಟೈಮ್.
ಮೊದಲ ಯುಧ್ಧದಿಂದ ವಿಚಲಿತನಾಗಿದ್ದ ನನಗೆ ದಾಂಪತ್ಯ ಜೀವನದ ಆರಂಭದಲ್ಲೇ ಮತ್ತೆ ಮತ್ತೆ ಎಡವುವುದು ಬೇಡವಾಗಿತ್ತು ಹಾಗಾಗಿ ಯೊಚಿಸಿ ಉತ್ತರಿಸಲು ಆರಂಭಿಸಿದ್ದೆ, "ರ್ರೀ.." ಅಂದ್ರೆ "ರ್ರೀ.."ನಲ್ಲಿರುವ ಭಾವವನ್ನು ಗ್ರಹಿಸಿ "ಏನು ಚಿನ್ನ?" ಅಂಥಾನೋ "ಹೇಳೋ ಪುಟ್ಟಾ" ಅಂಥಾನೋ ಮಾತನಾಡಿಸಿ ಮಡದಿಯ ಮನಗೆಲ್ಲಲು ಆರಂಭಿಸಿದ್ದೆ ಅದರ ಪರಿಣಾಮವೋ ಎನೋ ಮುದ್ದೆ, ಬೆಂಡೆಕಾಯಿ ಹುಳಿ, ರೊಟ್ಟಿ, ಎಣ್ಣೆಗಾಯಿಗಳ ಜೊತೆಗೆ ಉತ್ತರ ಭಾರತದ ತಿನಿಸುಗಳೂ ಕೂಡ ನಮ್ಮ ಊಟದ ಟೇಬಲ್ ಮೇಲೆ ರಾರಾಜಿಸತೊಡಗಿದವು, ಛೇ? ಇಷ್ಟು ಸಣ್ಣ ವಿಚಾರ ನನಗೆ ಮೊದಲೇ ಹೊಳೆಯಲಿಲ್ಲವಲ್ಲ ಅಂಥ ನಾನು ಕೊರಗಿದ್ದೂ ಆಯಿತು.
ಅಮೆರಿಕಾದಂಥ ರಾಷ್ಟ್ರದ ನೆಮ್ಮದಿ ಕೂಡ ಹಾಳಾಗಬಹುದಾದರೆ ನಮ್ಮ ನೆಮ್ಮದಿ ಹೇಗೆ ಸ್ವಾಮಿ ಹಾಳಗದೇ ಇರುತ್ತೆ? ನನ್ನ ತಂತ್ರ ನನಗೇ ಮುಳುವಾಗತೊಡಗಿತು ಎಷ್ಟು ದಿನ ಅಂಥ "ಏನು ಚಿನ್ನ? ಏನು ಪುಟ್ಟಾ?" ಎಲ್ಲ ಓಡುತ್ತೆ ಹೇಳಿ? ಅದು ಹೇಳಿ ಕೇಳಿ ನನ್ನ ಮನದನ್ನೆ ಕಾಯಾ ವಾಚಾ ಮನಸಾ ಪಕ್ಕಾ ಟೆಸ್ಟರ್
ಒಂದು ಸಾರಿ "ಬೆಳದಿಂಗಳಾಗಿ ಬಾ" ಅಂಥ ಹಾಡು ಹೇಳಿದ್ದಕ್ಕೆ "ಅಂದರೆ ನಾನು ಈಗ ನಿಮ್ಮ ಪಾಲಿನ ಗ್ರಹಣ ನಾ?" ಅಂಥ ಕೇಳಿದವಳು, ಯಜಮಾನರು ಮದುವೆಯಲ್ಲಿ ತೋರಿಸಿದ ಅರುಂಧತಿ ನಕ್ಷತ್ರ ಮತ್ತೆ ತೋರಿಸ್ತಾ ಇದಾರೆ ಅಂಥ ಅವಳಿಗೂ ಗೊತ್ತಾಯಿತೋ ಎನೋ, ಗಹನವಾದ ಪ್ರಶ್ನೆಗಳನ್ನು ಇಡಲಾರಂಭಿಸಿದಳು,"ರ್ರೀ ಮುಂದಿನ ವಾರ ನನ್ನ ತವರು ಮನೆಗೆ ಹೋಗೋಣವಾ?" ನನ್ನ ವ್ರತ ಭಂಗ ಮಾಡದಂತೆ ನಿಧಾನವಾಗಿ ಯೋಚಿಸಿ ಉತ್ತರ ಕೊಡಲು ತಯಾರಾಗುತ್ತಿರುವಾಗಲೇ..ಅಡುಗೆ ಮನೆಯ ಕಡೆಯಿಂದ ಶಬ್ದ ತರಂಗಗಳು ಹೊತ್ತು ತಂದದ್ದು "ಢಣ್!" ಎಂಬ ಶಬ್ದ.ಇದು ಎಚ್ಚರಿಕೆ ಇರಬಹುದು ಈ ಸಾರಿ ಹೌದು ಎಂದು ಬಿಡೋಣ ಮುಂದಿನ ವಾರ ಆ ಗೌಡನ ಮದುವೆ ಗೆ ಒಪ್ಪಿಸಬಹುದು ಅದರ ಮುಂದಿನ ವಾರ ಕೋಳಿ ಮಂಜನ ಮದುವೆ ಆಮೇಲೆ ಗಿರಿ ಮದುವೆ ಹೀಗೇ ಯೋಚಿಸುತ್ತ ಲೆಕ್ಕ ಹಾಕುತ್ತಾ[...ಹೌದು ಸ್ವಾಮಿ ನನ್ನ ಎಲ್ಲ ಸ್ನೇಹಿತರೂ ಈಗಲೆ ಮದುವೆಗೆ ಎದ್ದು ನಿಂತಿದ್ದಾರೆ ಬರೊಲ್ಲ ಅಂದ್ರೆ "ಮಗನೆ ರೋಡ್ ಸೈಡ್ ನಲ್ಲಿ ಒಂದು ಪ್ಲೇಟ್ ಇಡ್ಲಿನ ಹಂಚಿ ತಿಂದು, ಬೈ ಟು ಕಾಫಿ ಕುಡಿದಿದ್ದು ಮರೀಬೇಡ" ಅಂತಾರೆ "ಮದುವೆಯಾಗಿ ಮೂರು ತಿಂಗಳು ಆಗಿಲ್ಲ ಈಗಲೇ ಹೀಗೆ ಆಮೇಲೆ ನಿನ್ನ ಗತಿ ಎನ್ಲ?" ಹೀಗೆಲ್ಲ ಕೇಳಬೇಕು..ಅದಕ್ಕೆ ಎಲ್ಲ ಮದುವೆಗೂ ಹೋಗಲೇಬೇಕು ಅಂಥ ಆಗಾಗ ನಿರ್ಧಾರ ಮಾಡ್ತಿರ್ತೀನಿ] ಇನ್ನೇನು "ಸರಿ ಹೋಗೋಣ" ಅನ್ನುವಲ್ಲಿಗೆ ಕದನ ಶುರುವಾಗಿ ಹೋಯಿತು."ಇತ್ತೀಚಿಗೆ ಗಮನಿಸ್ತಾ ಇದೀನಿ ನೀವು ಮಾತೇ ಕಡಿಮೆ ಮಾಡಿದೀರಾ ನೀವು ಮಾತೇ ಅಡ್ತಾ ಇಲ್ಲ ಅದು ಅಲ್ಲದೆ ನನ್ನ ಮಾತಿಗೆ ನೀವು ಗಮನಾನೇ ಕೊಡೊಲ್ಲಾ ಮದುವೆ ಆಗಿ ಮೂರು ತಿಂಗಳಿಗೆ ಈ ಕಥೆ ಇನ್ನು ಮುಂದೆ ಎನು ಕಥೆನೋ ಎನೋ ಜೀವನ ಪೂರ್ತಿ ನಿಮ್ಮನ್ನ ಕಟ್ಟಿಕೊಂಡು ಹೆಣಗೋದು ಹೀಗೋ ಎನೋ" [ಗಮನಿಸಿ: ಮೇಲಿನ ಮಾತುಗಳಲ್ಲಿ ಅಲ್ಪವಿರಾಮವಾಗಲಿ ವಿರಾಮವಾಗಲಿ ಇಲ್ಲ].
ನನ್ನ ಹೆಂಡತಿಯ ಈ ಅಖಂಡ ಪ್ರಹಾರದಿಂದ ಜಜ೯ರಿತನಾದ ನಾನು ಮಾತನಾಡುವಷ್ಟರಲ್ಲಿ [ನಾನು ಖಂಡಿತಾ ಬೇಕಂತ ನಿಧಾನ ಮಾಡಲಿಲ್ಲ ಚಿಂತನೆ ಮಾಡ್ತಾ ಇದ್ದೆ], ಮತ್ತೆ ಅಡುಗೆ ಮನೆಯಿಂದ "ನಾನು ಆಗಲೇನೇ ಹೇಳಲಿಲ್ವಾ..... ಇತ್ತೀಚಿಗೆ ಗಮನಿಸ್ತಾ ಇದೀನಿ ನೀವು ಮಾತೇ ಕಡಿಮೆ ಮಾಡಿದೀರಾ ನೀವು ಮಾತೇ ಅಡ್ತಾ ಇಲ್ಲ ಅದು ಅಲ್ಲದೆ ನನ್ನ ಮಾತಿಗೆ ನೀವು ಗಮನಾನೇ ಕೊಡೊಲ್ಲಾ ಮದುವೆ ಆಗಿ ಮೂರು ತಿಂಗಳಿಗೆ ಈ ಕಥೆ ಇನ್ನು ಮುಂದೆ ಎನು ಕಥೆನೋ ಎನೋ ಜೀವನ ಪೂರ್ತಿ ನಿಮ್ಮನ್ನ ಕಟ್ಟಿಕೊಂಡು ಹೆಣಗೋದು ಹೀಗೋ ಎನೋ".
ಎಲ್ಲ ಘಟನೆಗಳನ್ನು ವಿವರಿಸುವುದು ಆಗದ ಮಾತು ಹಾಗಾಗಿ ಒಂದೇ ಸಂದಭ೯ಕ್ಕೆ ನಿಲ್ಲಿಸುತ್ತಿದ್ದೇನೆ. ನಾನು ಚಿಂತನೆ ಮಾಡ್ತಿರ್ತೀನಿ ಕಣೆ, ಮನಸಿನಲ್ಲಿ ಮಂಥನ ಮಾಡ್ತಿರ್ತೀನಿ ಅಂದ್ರೆ, ನನ್ನ ಮನೆಯವಳು "ಹೌದು! ದೇವೇಗೌಡರ ಥರಹ!" ಅಂದಿದ್ದಾಳೆ.
ನನ್ ಮನೆಯವಳು ಗೂಗಲ್ ಗೆ ಫ಼್ಯಾನು, ಎ ಸಿ ಎಲ್ಲಾ ನಾನು ನೋಡಿದರೆ ಮೈಕ್ರೋಸಾಫ್ಟ್ ಡಾಟ್ ನೆಟ್ ಡೆವಲಪರ್,
ಅವಳಿಗೆ ರೆಸ್ಪಾಂನ್ಸ್ ಬೇಕು ಅದೂ ಹೇಗೆ? ಥೇಟ್ ಗೂಗಲ್ ಥರಹ ೦.೦೧೨ ಸೆಕೆಂಡ್ಸ್ ನಲ್ಲಿ, ನನ್ನದೋ ಮಾತಿಗೆ ಮುಂಚೆ ಸಿಸ್ಟಮ್ ರಿಸ್ಟಾರ್ಟ್ ಮಾಡಿ ಅದು ಬೂಟ್ ಆಗಿ ಅಪ್ಪಣೆ ಮಹಾರಾಜ ಅನ್ನುವವರೆಗೆ ಸುಮ್ಮನೆ ಕೂರುವ ಸ್ವಭಾವ ಅದರ ಮೇಲೆ ಯೊಚಿಸದೆ ಆಡಿದ ಮಾತಿಗೆ ಯುಧ್ಧ ಎದುರಿಸಿದ ಅನುಭವ ಎಲ್ಲವೂ ಸೇರಿ ಈ ಸಂಸಾರ ಸಾಗರವನ್ನು ದಾಟುವುದು ಹೇಗೆ ಅಂಥ ಯೋಚಿಸುತ್ತ ಇದ್ದೇನೆ.....
ಮನೆಯವಳ ಫೊನ್ ಬರ್ತಾ ಇದೆ...ಪ್ರಶ್ನೆ ಗೊತ್ತಲ್ಲಾ?
"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"