ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ? - ಭಾಗ ೪
ನಮಸ್ಕಾರ,
ಮುದ್ದಣ್ಣ ಮನೋರಮೆಯರ ಮಟ್ಟಿಗಿನ ಸರಸ ಶೃಂಗಾರ ಇಲ್ಲದಿದ್ದರೂ ನಾವು ನಮ್ಮದೇ ರೀತಿಯಲ್ಲಿ ನಮ್ಮ ನಮ್ಮ ಸ್ವಾತಂತ್ರ್ಯಗಳಿಗೆ ಹೊಡೆದಾಡುತ್ತಿರುವುದು ಸತ್ಯ. ನಮ್ಮ(ನ್ನ) ಭಾವನೆಗಳಿಗೆ ಹಾಸ್ಯದ ತಿಳಿ ಲೇಪನ ಕೊಟ್ಟು ಹೇಳಿಕೊಂಡಿದ್ದೂ ಆಯಿತು. ನಮ್ಮ ಕಲ್ಪನಾ ಥರದ ವ್ಯಕ್ತಿಗಳು ನನ್ನ ಹೆಂಡತಿಯ ಪರವಾಗಿ ವಾದ ಮಾಡಿ ಅವರು ಕೂಡ ನನ್ನ ರೀತಿಯಲ್ಲೇ ಲೇಖನ ಸರಣಿಯನ್ನು ಆರಂಭಿಸಬೇಕು ಎಂದಿದ್ದೂ ಆಯಿತು.
ಇವೆಲ್ಲದ ನಂತರ ಮರಳಿ ದೊರೆತ ಸ್ವಾತಂತ್ರ್ಯದ ಪ್ರಯೋಗಾರ್ಥವಾಗಿ ನಾನು ನನ್ನ ಈ ಲೇಖನವನ್ನು ಆರಂಭಿಸಿದ್ದೇನೆ.
ಸೂಚನೆ: ಇದು ಪ್ರಯೋಗಾರ್ಥ ಹಾರಾಟ ಇದ್ದಂತೆ ಇಲ್ಲಿನ ಫಲಿತಾಂಶಗಳು ಮುಂದಿನ ಹಾರಾಟಕ್ಕೆ ಮುನ್ನುಡಿಯಾಗಬಲ್ಲವೇನೋ ಅದಕ್ಕೆ ಕಾಲವೇ ಉತ್ತರಿಸಬೇಕು.
ಸೂಚನೆಗೆ ಸೂಚನೆ: ಕಾಲ ಎಂಬ ಪದವು ಕನ್ನಡ ನಿಘಂಟುಗಳಲ್ಲಿ ಸಮಯ ಅಥವಾ ಯಮಧರ್ಮನನ್ನು ಸೂಚಿಸುತ್ತದೆಯೇ ಹೊರತು ಎಲ್ಲಿಯೂ ಅದು ಸ್ತ್ರೀ ಲಿಂಗ ಸೂಚಕವಾಗಿ ಉಪಯೋಗಿಸಲ್ಪಟ್ಟಿಲ್ಲ ಎಂಬುದನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇನೆ.
ಇಂದಿನ ವಿಷಯ ನನ್ನ "ಮರೆವು" .
ಕಳೆದ ೫ ವರ್ಷಗಳಲ್ಲಿ ಈ ಸಾಫ್ಟವೇರ್ ಕಂಪನಿಗಳಲ್ಲಿ ಕಡಿದು ಕಟ್ಟೆ ಹಾಕಿರುವುದು ಅಷ್ಟರಲ್ಲೇ ಇದೆಯಾದರೂ ನಾನು ಮತ್ತು ನನ್ನ ಹೆಂಡತಿ ದೊಡ್ಡ ಮೆರೆಗುಳಿಗಳಾಗಿದ್ದೇವೆ ಎಂಬುದಂತೂ ಸತ್ಯ. ಅದನ್ನು ನನ್ನ ಮನೆಯವಳು ಒಪ್ಪುವುದಿಲ್ಲ ಅದು ಬೇರೆ ಮಾತು, ಅವಳ ಪ್ರಕಾರ ನನಗೆ ಮಾತ್ರ ವಯಸ್ಸಾಗಿದೆ ನನ್ನ ತಲೆಯಲ್ಲಿ ಮೂಡಿ ಬಂದಿರುವ ಮಿಂಚಿನ ಬಳ್ಳಿಗಳನ್ನು ತೋರಿಸಿ "ಮೇ ಕ್ಯಾ ಕರು ರಾಮ್ ಮುಜ್ಹೆ ಬುಡ್ಡ ಮಿಲ್ ಗಯಾ....." ಅಂಥ ಹಾಡು ಹಾಡಿರುವವಳು ನನ್ನ ಮನದನ್ನೆ ಈ ರೀತಿಯ ಕಟ್ಟು ಕಥೆಗಳನ್ನು ನಂಬುತ್ತಾಳೆಯೇ?.
ಓಹೋ ಜ್ಞಾಪಕ ಬಂತು ನೋಡಿ....ಮನೆಯವಳು ಅವಳ ಕಂಪೆನಿ ತಲುಪಿದ ತಕ್ಷಣ ಫೋನ್ ಮಾಡಿ "ರ್ರೀ ಕಡ್ಲೆ ಕಾಳು ನೆನೆ ಹಾಕಿ ಅಂದಿದ್ದಳು" ಹಾಳಾದ್ದು ಮರೆತೇ ಹೋಗಿದೆ, "ರ್ರೀ ನೀವು ಏನಾದ್ರು ಬರೀರಿ ಏನಾದ್ರು ಮಾಡಿಕೊಳ್ಳಿ ಮನೆ ಕೆಲಸದಲ್ಲಿ ಸಹಾಯ ಮಾಡಿಲ್ಲ ಅಂದ್ರೆ "&^*^&^" ಹಿಸುಕಿ ಬಿಡುತ್ತೇನೆ" ಅಂತ ಹೇಳೋದು ಮನೆಯವಳ ಇತ್ತೀಚಿನ ಅಭ್ಯಾಸ. ಇನ್ನು ಫೋನ್ ಯಾಕೆ ಮಾಡಿದ್ರು ಬೆಳಿಗ್ಗೆ ಹೇಳಿ ಹೋಗಬಹುದಿತ್ತಲ್ಲ ಎಂದು ದಯವಿಟ್ಟು ಕೇಳಬೇಡಿ ಅದು ನನ್ನ ಮನೆಯವಳ ಅಭ್ಯಾಸ, ಇನ್ನು ಅವರೇ ಮಾಡಿಡುವ ವಿಚಾರಕ್ಕೆ ಬಂದರೆ sorry! ಅದು ಅವರ ಅಭ್ಯಾಸದಲ್ಲಿ ಇಲ್ಲ.
ಸತ್ಯ ಸಂಧನಾಗಿ ಕೆಲವು ವಿಚಾರಗಳನ್ನು ನಿಮಗೆ ತಿಳಿಸಲೇಬೇಕಾಗುತ್ತದೆ, ಅದು ಏನಾಗುತ್ತೆ
ಅಂದರೆ ನನ್ನ ಮನೆಯವಳು ಸಂಜೆ ೬ ಗಂಟೆಗೆ ಮನೆ ತಲುಪುವ ವಿಚಾರ ಹೇಳಿದ್ದೇನೆ, ಹಾಗೆಯೇ ಸಂಜೆ ನನಗೆ ಫೋನ್ ಮಾಡುವ ಜೊತೆಗೆ, ನನ್ನ ಜೀವನದ ಪ್ರಶ್ನೆ ಕೇಳುವ ಜೊತೆಗೆ, ಅಡುಗೆ ಮತ್ತು ಮನೆ ಕೆಲಸಗಳನ್ನು ನಿಭಾಯಿಸುತ್ತಾಳೆ, ನಾನು ಬೆಳಿಗ್ಗೆ ಬೇಗ ಹೊರಡುವುದಿಲ್ಲವಾದುದರಿಂದ ಬೆಳಗಿನ ಎಲ್ಲಾ ಕೆಲಸಗಳಿಗೂ ನಾನೇ ಜವಾಬ್ದಾರ! ಮತ್ತು ನಾನು ಆರ್ಡರ್ ಗಳನ್ನು ರಾತ್ರಿಯೇ ತೆಗೆದುಕೊಂಡಿರುತ್ತೆನಾದ್ರು ಥೇಟ್ ಮ್ಯಾನೇಜರ್ ಶೈಲಿಯಲ್ಲಿ ನನಗೆ ಒಂದು ಫೋನ್ ಬರುತ್ತೆ...ಆ ಕೆಲಸ ಆಗಿದೆಯ? ಇಲ್ಲ ಎಷ್ಟು ಆಗಿದೆ ಅಥವಾ ಆಗಿಲ್ಲವಾದರೆ ಅದಕ್ಕೆ ಕಾರಣಗಳೇನು?
ನಾನು ಮರೆಯುವುದಿಲ್ಲ ಅಂತ ಹೇಳೋಲ್ಲ ಆದರೆ ಮರೆಯೋದು ಸಣ್ಣ ಸಣ್ಣ ವಿಚಾರಗಳನ್ನು, ಉದಾಹರಣೆಗೆ ನಾನು ಮನೆಗೆ ಹೊರಟಿದೀನಿ, ತಲುಪಿದೀನಿ, ಬರ್ತಾ ಇದ್ದೀನಿ, ಊಟ ಆಯಿತು, ಊಟ ಆಯ್ತಾ? ತಿಂಡಿ ಆಯ್ತಾ? ರಾತ್ರಿ ನಿದ್ದೆ ಬಂತಾ?!?!?!?! ಈ ತರಹ ಪ್ರಶ್ನೆ ಕೇಳೋದನ್ನ, ಈ ತರಹದ ವಿಚಾರಗಳನ್ನು. ಅದಕ್ಕೆ ನಾನು ಕೇಳುವ ಮಾತುಗಳು ಈ ರೀತಿ ಇರುತ್ತವೆ :"ಶಿವ! ಶಿವ! [ಅವಳ ದ್ವನಿಯಲ್ಲಿ ಶಿವ ಶಿವ ಕೇಳಬೇಕು ನೀವು..]ನಿಮಗೆ ನಾನು ನೆನಪೇ ಇರೋದಿಲ್ಲ ...ಫೋನ್ ಕೂಡ ಮಾಡೊಲ್ಲ, ದಿನವಿಡೀ ಕಾದರೂ ಒಂದು ಫೋನ್ ಮಾಡಿಲ್ಲ,ಮನೆ ಬಿಟ್ಟು ಹೊರಗೆ ಹೊರಟರೆ ಮುಗಿಯಿತು ಮನೆ ಇದೆ ಅನ್ನೋದೇ ಮರೆತು ಬಿಡ್ತೀರಿ, ನಾನು ಇದೀನಿ ಅನ್ನೋದನ್ನೇ ಮರೆತು ಬಿಡ್ತೀರಿ, ಮದುವೆ ಆಗಿ ಮೂರು ತಿಂಗಳಿಗೆ ಈ ಕಥೆ ಇನ್ನು ಮುಂದೆ ಎನು ಕಥೆನೋ ಎನೋ......."
ಹಾಗಾಗಿ ನನ್ನ ಹೆಂಡತಿ ನನ್ನನ್ನು officeಗೆ ಬಿಟ್ಟು ಬೇರೆಲ್ಲೂ ಹೋಗಲು ಬಿಡುವುದಿಲ್ಲ, ಎಲ್ಲೆಡೆಯೂ ನನ್ನ ಜೊತೆಯಲಿದ್ದು ನನ್ನನ್ನು ಮನೆಗೆ ಕರೆದೊಯ್ಯುತ್ತಾಳೆ, ನನ್ನೆಲ್ಲ ಸ್ನೇಹಿತರ ಮನೆಗೂ ಬರುತ್ತಾಳೆ ಹಾಗು ನನ್ನನ್ನು ಮನೆಗೆ ಕರೆದೊಯ್ಯುತ್ತಾಳೆ, ನನ್ನ ಜೊತೆ ಪಾರ್ಟಿಗಳನ್ನು ಅಟೆಂಡ್ ಮಾಡುತ್ತಾಳೆ ಹಾಗು ನನ್ನನ್ನು ಮನೆಗೆ ಕರೆದೊಯ್ಯುತ್ತಾಳೆ, ನನ್ನ ಸ್ನೇಹಿತರ ಬರ್ಥ್ ಡೇ ಅಟೆಂಡ್ ಮಾಡುತ್ತಾಳೆ ಹಾಗು ನನ್ನನ್ನು ಮನೆಗೆ ಕರೆದೊಯ್ಯುತ್ತಾಳೆ, ಹೀಗೆಯೇ ಸಾಗಿದೆ ನನ್ನ ಜೀವನ.
ಒಂದು ಫೋನ್ ಕಾಲ್ ನನ್ನ ಮರೆವನ್ನು ಬಳಸಿಕೊಂಡು ನನ್ನ ಜೀವನವನ್ನು ಈ ಪರಿ ಕಾಡಿಬಿಟ್ಟಿತಲ್ಲ ಎಂದು ಪರಿತಪಿಸುತ್ತಾ ಕೂತಿದ್ದೇನೆ.
ಮನೆಯವಳ ಫೋನ್ ಬರ್ತಾ ಇದೆ ಪ್ರಶ್ನೆ ಗೊತ್ತಲ್ಲ?
"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?", "ರ್ರೀ ಏನು ಬರೀತಾ ಕೂತಿದೀರಿ?"
ಮಹಾ ಸೂಚನೆ: ಕೆಲವು ಮದುವೆಯಾಗಲು ಹೊರಟಿರುವ ಸ್ನೇಹಿತರು ಫೋನ್ ಮಡಿ...ಏನೋ ಇದು ಅಷ್ಟೊಂದು ಕಷ್ಟ ಪಡ್ತಾ ಇದ್ದೀಯ ಅಂತ ಕೇಳ್ತಾ ಇದಾರೆ....ಖಂಡಿತವಾಗಿಯೂ ಇಲ್ಲ...ನಿಮ್ಮೆಲ್ಲರ ಭಂಢ ಸ್ನೇಹಿತ ತನ್ನ ಮನದನ್ನೆಯೊಂದಿಗೆ, ಬೆಂಗಳೂರಿನ ಈ ಚಳಿಯಲ್ಲಿ ತುಂಬಾ ಆರಾಮವಾಗಿದ್ದಾನೆ, ಮತ್ತು ಖುಷಿಯಾಗಿ ಇದ್ದಾನೆಂದು ಈ ಮೂಲಕ ತಿಳಿಸಬಯಸುತ್ತೇನೆ.[ಚಳಿಯಲ್ಲಿಯೇ ಯಾಕೆ ಖುಷಿಯಾಗಿದ್ದಾನೆ ಎನ್ನುವುದು ನಿಮಗೆ ಸ್ವಂತ ಅನುಭವಕ್ಕೆ ಬರಬೇಕಾಗಿರುವ ವಿಚಾರವಾದುದರಿಂದ ಇಲ್ಲಿ ಆ ಮಾತು ಅಪ್ರಸ್ತುತ.]