ಕನ್ನಡ ಮರಾಟಿ ಸಂಬಂಧ

ಕನ್ನಡ ಮರಾಟಿ ಸಂಬಂಧ

ಬರಹ

ನನ್ನ ಸಹೋದ್ಯೋಗಿ ಮಿತ್ರ ಸುನಿಲ್ ಕುಮಾರ್ ಅವರು ತಮ್ಮ ಮದುವೆಯ ಆಮಂತ್ರಣ ಪತ್ರ ನೀಡಿದಾಗ ಅದರಲ್ಲಿ 'ಮೈಲಾರಲಿಂಗ ಪ್ರಸನ್ನ' ಎಂಬ ಶಿರೋನಾಮೆ ಎದ್ದು ಕಾಣುತ್ತಿತ್ತು. ಆದರೆ ಅವರ ಹೆಸರಿನ ಜೊತೆಗೆ ಬೇದ್ರೆ ಎಂಬ ಉಪನಾಮವಿದ್ದುದನ್ನು ಗಮನಿಸಿದಾಗ ಅತ್ಯಾಶ್ಚರ್ಯವಾಯಿತು. ಏಕೆಂದರೆ ಸುನಿಲರ ಚರ್ಯೆ ಮಾತುಗಾರಿಕೆ ಒಡನಾಟಗಳಲ್ಲಿ ಎಂದೂ ಅವರ ಮನೆಮಾತು ಮರಾಟಿ ಎಂಬ ಅಂಶ ವ್ಯಕ್ತವಾಗಿರಲೇ ಇಲ್ಲ. ಅವರ ಲಗ್ನಪತ್ರಿಕೆಯಲ್ಲಿ ಮರಾಟಿ ಮನೆತನವನ್ನು ಸೂಚಿಸುವ ಬೇದ್ರೆ ಎಂಬ ಪದ ನೋಡಿದ ನಂತರವಷ್ಟೇ ಅದು ವೇದ್ಯವಾಯಿತು.

ಹೀಗೆ ನಮ್ಮ ಕನ್ನಡನಾಡಿನಲ್ಲಿ ಬಹಳ ವರ್ಷಗಳಿಂದ ನೆಲೆಗೊಂಡಿರುವ ಮರಾಟಿ ಭಾಷಿಕ ಜನರು ಕನ್ನಡ ಸಂಸ್ಕೃತಿಯಲ್ಲಿ ಒಂದಾಗಿ ಬೆರೆತು ಯಾವುದೇ ಭಿನ್ನಭಾವವಿಲ್ಲದೆ ನಮ್ಮೊಂದಿಗೆ ಮಿಳಿತವಾಗಿದ್ದಾರೆ. ಹಾಗೆಂದಾಕ್ಷಣ ಇವರು ನಮ್ಮ ನೆಲೆಗೆ ಹೊರಗಿನಿಂದ ಬಂದವರೇನಲ್ಲ. ಮರಾಟಾ ರಾಜ್ಯಸ್ಥಾಪನೆಗಾಗಿ ಅಲ್ಲಿನ ರಾಜರು ದಕ್ಷಿಣ ಇಂಡಿಯಾದ ಎಲ್ಲೆಡೆಗೂ ಎಡತಾಕುತ್ತಿದ್ದರಿಂದ ಅವರ ಸೈನ್ಯ, ಅಧಿಕಾರಿವರ್ಗ, ಪರಿವಾರಗಳು ಬೀಡುಬಿಟ್ಟಲ್ಲೆಲ್ಲ ಬೇರೂರಿದ್ದಾರೆ ಎಂದು ಸುಲಭವಾಗಿ ಹೇಳಿಬಿಡಬಹುದೇನೋ?

ಆದರೆ ವಾಸ್ತವ ಬೇರೆಯೇ ಇದೆ. ಕನ್ನಡ ಹಾಗೂ ಮರಾಟಿ ಜನಪದ ಒಂದೇ ಎಂದೂ, ಮರಾಟಿ ಎಂಬ ಪದವೇ ಕನ್ನಡದ ಮರಹಟ್ಟಿಯಿಂದ ಬಂದಿದೆ ಎಂಬ ಹೇಳಿಕೆಯಿದೆ. ಕನ್ನಡದ ಹಟ್ಟಿ ಹಾಡಿಗಳು ನಮ್ಮ ದೇಶದ ಇತರೆಡೆಗಳಲ್ಲೂ ಪಟ್ಟಿ, ಹಾಟಿ, ವಾಡೆ ಇತ್ಯಾದಿಗಳ ರೂಪದಲ್ಲಿ ಬಳಕೆಯಲ್ಲಿವೆ. ಆದರೆ ಮಹಾರಾಷ್ಟ್ರ ಎಂಬ ಹೆಸರು ಅತಿ ಪ್ರಾಚೀನವೇನಲ್ಲ. ಮಹಾಭಾರತದ ಮೂಲಮಾತೃಕೆಗಳಲ್ಲಾಗಲೀ, ಅಶೋಕ ಚಕ್ರವರ್ತಿಯ ಶಿಲಾಲೇಖಗಳಲ್ಲಾಗಲೀ, ಗುಪ್ತ ಚಕ್ರವರ್ತಿಗಳ ಇತಿಹಾಸ ಲೇಖಗಳಲ್ಲಾಗಲೀ ಅದು ಉಲ್ಲೇಖವಾಗಿಲ್ಲ ಎಂದು ಶಂ ಬಾ ಜೋಷಿಯವರು ಅಭಿಪ್ರಾಯಪಡುತ್ತಾರೆ.

ನರ್ಮದೆಯವರೆಗೆ ರಾಜ್ಯವಿಸ್ತಾರ ಹೊಂದಿದ್ದ ರಟ್ಟರು ನಮ್ಮ ಕನ್ನಡದ ದೊರೆಗಳೇ ಆಗಿದ್ದರಲ್ಲದೆ ಅವರ ರಾಜ್ಯಾಡಳಿತದ ಭಾಷೆ ಕನ್ನಡವೇ ಆಗಿತ್ತು. ರಟ್ಟರು ಎಂಬುದರ ಅರ್ಥ ದೇಶೀಯರು, ನಾಡಿಗರು, Iಟಿಜigeಟಿous ಎಂಬ ಅರ್ಥ ಸ್ಫುರಣೆಯಾಗುತ್ತದೆ. ಬ್ರಾಹ್ಮಣ್ಯದ ಭಾಷೆಯಲ್ಲಿ ಅದು ರಾಷ್ಟ್ರ ಆಗುತ್ತದೆ. ರಾಷ್ಟ್ರಕೂಟರ ಅನಂತರ ಅದೇ ನರ್ಮದೆಯ ಬಳಿ ಉತ್ತರದ ದೊರೆ ಹರ್ಷನನ್ನು ಹಿಂದಟ್ಟಿದ ಕನ್ನಡದ ಚಾಲುಕ್ಯ ದೊರೆ ಎರಡನೇ ಪುಲಕೇಶಿಯ ಸೈನ್ಯಕ್ಕೆ ಕರ್ನಾಟಕಬಲಂ ಎಂಬ ಹೆಸರಿತ್ತು.

ವಿಶೇಷವೆಂದರೆ ಈ ಪುಲಕೇಶಿಯ ಕಾಲದ ಅಂದರೆ ಕ್ರಿಸ್ತಶಕ ಏಳನೇ ಶತಮಾನದ ಐಹೊಳೆ ಶಾಸನದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ಎಂಬ ಹೆಸರು ಕಾಣುತ್ತದೆ. ಕ್ರಿಸ್ತಶಕ ಒಂಬತ್ತನೇ ಶತಮಾನದ 'ಕವಿರಾಜಮಾರ್ಗ' ಗ್ರಂಥದಲ್ಲಿ 'ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ . . .' ಎಂದು ಹೇಳಿರುವುದರಿಂದ ಆ ಸಮಯದಲ್ಲಿ ಗೋದಾವರಿಯಿಂದ ನರ್ಮದೆಯವರೆಗೆ ಪಸರಿಸಿದ್ದ ನಾಡು ಮರಾಟಿಯದ್ದೇ? ಉತ್ತರ ಇಂಡಿಯಾದ ಪ್ರಾಕೃತ ಭಾಷೆಗೂ ದಕ್ಷಿಣ ಇಂಡಿಯಾದ ಕನ್ನಡ ಭಾಷೆಗೂ ಸಹಜ ಸಂಪರ್ಕ ಭಾಷೆಯಾಗಿ ಮರಾಟಿ ಮಾತುಗಾರಿಕೆ ಕಾರ್ಯನಿರ್ವಹಿಸುತ್ತಿತ್ತು ಹಾಗೂ ಮರಾಟಿ ಮತ್ತು ತೆಲುಗುಗಳಿಗೆ ಇನ್ನೂ ಗ್ರಾಂಥಿಕ ರೂಪ ಬಂದಿರಲಿಲ್ಲವೆಂದು ಭಾಷಾವಿಜ್ಞಾನಿಗಳು ಭಾವಿಸುತ್ತಾರೆ.
ಕ್ರಿಸ್ತಶಕ ಹನ್ನೆರಡನೇ ಶತಮಾನದ ವೇಳೆಗೆ ಬಾದಾಮಿಯ ಚಾಲುಕ್ಯ ವಂಶವು ಒಡೆದು ವೆಂಗಿಯ ಕಡೆ ತೆಲುಗೂ, ದೇವಗಿರಿಯಲ್ಲಿ ಮರಾಟಿಯೂ, ಕಲ್ಯಾಣದಲ್ಲಿ ಕನ್ನಡವೂ ರಾಜಭಾಷೆಗಳಾದವು. ಕಲ್ಯಾಣದ ಚಾಲುಕ್ಯರ ಬಲ ಕುಂದಿದ ಮೇಲೆ ಕರ್ನಾಟಕದ ರಾಜಧಾನಿಯು ಹಳೇಬೀಡಿಗೆ ವರ್ಗಾವಣೆಯಾಗಿ ಉತ್ತರದ ಕಡೆ ಮರಾಟಿಯು ಪಲ್ಲವಿಸತೊಡಗಿತು. ಅನಂತರ ಮರಾಟಿಗೆ ದೇವನಾಗರೀ ಲಿಪಿಯು ಅಳವಟ್ಟು ಸ್ವಲ್ಪಮಟ್ಟಿಗಿನ ಗ್ರಾಂಥಿಕ ಕೆಲಸಗಳೂ ನಡೆದ ಕುರುಹು ಕಾಣಬರುತ್ತದೆ. ಹೀಗೆ ಮರಾಟಿಯ ಲಿಪಿವಿಕಾಸಕ್ಕೆ ಮುನ್ನ ಮರಾಟಿಗರು ಪ್ರಾಕೃತದ ಜೊತೆಜೊತೆಗೇ ಕನ್ನಡ ಕಾವ್ಯಗಳನ್ನು ಅಭ್ಯಸಿಸುತ್ತಿದ್ದರೆಂಬ ಅಂಶ ವೇದ್ಯವಾಗುತ್ತದೆ. ಕ್ರಿಸ್ತಶಕ ಹದಿನಾಲ್ಕನೇ ಶತಮಾನದವರೆಗೂ ಅಲ್ಲಿನ ಧಾರ್ಮಿಕ ಮತ್ತು ಸಾಹಿತ್ಯಿಕ ನೆಲೆಗಳಲ್ಲಿ ಮಾತ್ರ ಮರಾಟಿ ಕೃಷಿಯಾಯಿತೇ ವಿನಃ ರಾಜಶಾಸನಗಳಲ್ಲಿ ಕನ್ನಡ ಮಾತ್ರವೇ ಕಂಡುಬರುತ್ತವೆಂಬುದು ಗಮನಿಸತಕ್ಕ ವಿಷಯ.

ಮುಸಲ್ಮಾನ ದೊರೆಗಳು ಕನ್ನಡ ದೊರೆಗಳನ್ನು ಸದೆಬಡಿಯಲು ಬಹುಸುಲಭವಾಗಿ ಮರಾಟಿಗರನ್ನು ತಮ್ಮತ್ತ ಸೆಳೆದುಕೊಂಡರು ಎಂಬುದೇ ಕನ್ನಡ - ಮರಾಟಿಯ ನಡುವಿನ ಸಂಬಂಧ ಹಳಸಲು ಕಾರಣವಾಯಿತು. ಹಿಂದೂ ಆಳ್ವಿಕೆಯ ಮರುಸ್ಥಾಪನೆ ಉದಯವಾದ ಮಹೋನ್ನತ ವಿಜಯನಗರ ಸಾಮ್ರಾಜ್ಯಕ್ಕೆ ಮರಾಟಿಗರಿಂದಲೇ ತೊಂದರೆ ಇತ್ತು ಎಂಬುದನ್ನು ಅತ್ಯಂತ ವಿಷಾದದಿಂದ ದಾಖಲಿಸಬೇಕಿದೆ. ಆದರೆ ಸಂಕಷ್ಟಕ್ಕೆ ಸಿಲುಕಿದ ಮರಾಟಿ ಅರಸರಿಗೆ ನಮ್ಮ ಕನ್ನಡದ ದೊರೆಗಳು ನೆರವಾದರೆನ್ನುವ ಸಂಗತಿ ಇತಿಹಾಸದ ಭಾಗವಾಗಿದೆ. ಕರ್ನಾಟಕಾಂಧ್ರಗಳಲ್ಲಿ ಪಸರಿಸಿದ ಲಿಂಗಾಯತ ಧರ್ಮವು ಮಹಾರಾಷ್ಟ್ರಕ್ಕೆ ಏಕೆ ಬೇಡವಾಯಿತು ಹಾಗೂ ಅಲ್ಲಿನ ಪುರಂದರದಾಸರು ವಿಜಯನಗರಕ್ಕೆ ಏಕೆ ಓಡಿಬಂದರು ಎಂಬ ಸಂಗತಿ ಚಿಂತನಾರ್ಹವಾಗಿದೆ. ಇಂಗ್ಲಿಷರ ವಿರುದ್ಧ ಸತತವಾಗಿ ಹೋರಾಡಿದ ಟಿಪ್ಪುವಿನೊಂದಿಗೆ ಅಂದಿನ ಮರಾಟಿ ರಾಜರು ಕೈಗೂಡಿಸಿದ್ದರೆ ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯ ಕಥೆ ಬೇರೆಯೇ ತೆರನಾಗುತ್ತಿತ್ತು.

ಆದರೆ ಕನ್ನಡ ಮರಾಟಿ ಜನಸಾಮಾನ್ಯರು ತಮ್ಮ ದೈನಂದಿನ ಜೀವನ ಹಾಗೂ ಸಂಸ್ಕೃತಿ ಆಚರಣೆಗೆ ಧಕ್ಕೆಯಿಲ್ಲದಂತೆ ಕೂಡಿ ಬಾಳಿದರು. ಕನ್ನಡದ ರಾಯ ಮರಾಟಿಯಲ್ಲಿ ರಾವ್ ಆದಂತೆ ಸಂತ ಜ್ಞಾನೇಶ್ವರನ ಅಭಂಗಗಳಲ್ಲಿ ಅರ್ಧಕ್ಕೂ ಹೆಚ್ಚು ಕನ್ನಡವೇ ಇದೆ ಎನ್ನಲಾಗುತ್ತದೆ. ಮರಾಟಿಯ ಮಹಾಕವಿ ಮುಕ್ತೇಶ್ವರ (ಕಾಲ ಕ್ರಿಸ್ತಶಕ ೧೬೫೦) ತನ್ನ ಭಾರತಕಾವ್ಯದಲ್ಲಿ ಕುಮಾರವ್ಯಾಸನನ್ನು ಅನುಕರಿಸಿದ್ದಾನೆಂದು ಶಂ ಬಾ ಜೋಷಿ ಅಭಿಪ್ರಾಯಪಡುತ್ತಾರೆ. ಅದಕ್ಕೆ ಪುರಾವೆಯಾಗಿ ಅವರು ನೀಡುವ ಈ ಕಾವ್ಯಸಾಲುಗಳನ್ನು ಗಮನಿಸಿ;
ಮುಕ್ತೇಶ್ವರ ಕವೀ ಭಾರತ . . ಜೋ ರಾಜಯಾತೇ ವೀರರಸು ವಿಪ್ರವರ್ಯಾಂತೇ ವೇದ ಸಾರಾಂಶಂ ತತ್ವಾರ್ಥ ಬೋಧ ಪರಮಹಂಸು ಯೋಗೇಶ್ವರು ಭಾವಿತೀ ಬುದ್ಧಿಯುಕ್ತೀಚಾ ಸಾಗರು ಐಸೇ ಮಾನತೀ ಮಂತ್ರಿ ಚತುರು ವಿಲಾಸಿಯಾಂ ತೇ ಶೃಂಗಾರು ಸುರತಾನಂದ ವರ್ಧತಾ . . ಮಹಾರಾಷ್ಟ್ರಾಂಸಿ ಕಾವ್ಯಗುರೂ ಹಾ ಗೌರವೂ ಯೇ ಗ್ರಂಥೀ.

ಮರಾಟಿಯ ಈ ಸಾಲುಗಳು ನಮ್ಮ ಕುಮಾರವ್ಯಾಸನ (ಕಾಲ ಕ್ರಿಸ್ತಶಕ ೧೩೫೦) 'ಕರ್ಣಾಟಕ ಭಾರತ ಕಥಾಮಂಜರಿ'ಯಲ್ಲಿನ ಸಾಲುಗಳೊಂದಿಗೆ ಹೋಲುತ್ತದಲ್ಲವೇ?
ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ ಯೋಗೀಶ್ವರರ ತತ್ವ ವಿಚಾರ ಮಂತ್ರೀಜನಕೆ ಬುದ್ಧಿಗುಣ ವಿರಹಿಗಳ ಶೃಂಗಾರ ವಿದ್ಯಾಪರಿಣತರಲಂಕಾರ ಕಾವ್ಯಕೆ ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ

ಇದನ್ನು ನೋಡಿದರೆ ಮರಾಟಿಯ ಕಾವ್ಯಕ್ಕೆ ಕನ್ನಡವೇ ಸ್ಫೂರ್ತಿಯೆಂದಾಯಿತು. ಕನ್ನಡಿಗರಾದ ನಾವು ಮರಾಟಿಯಿಂದ ಕೊಳ್ಳಲಿಲ್ಲವೆಂದಲ್ಲ. ನಮ್ಮ ಸಾಹಿತ್ಯಗಳಲ್ಲಿ ಉಕ್ತವಾಗಿರುವ ಭಳಿರೇ, ಭಾಪ್ಪರೇ, ಛಪ್ಪನ್ನೈವತ್ತಾರು, ಬಾಹತ್ತರ ಇವುಗಳೆಲ್ಲ ಕನ್ನಡ ಮರಾಟಿ ನಡುವಿನ ಕೊಡುಕೊಳುಗೆಯ ಫಲವೇ. ಕನ್ನಡದ ಮೇರುಕವಿ ಪಂಪ (ಕಾಲ ಕ್ರಿಸ್ತಶಕ ೯೪೫) ಬೆಳೆದಿದ್ದು ಬನವಾಸಿಯಲ್ಲಿ (ಇಂದಿನ ಉತ್ತರಕನ್ನಡ ಬೆಳಗಾವಿ ಗೋವಾ ಧಾರವಾಡ ಪ್ರದೇಶ) ಸಮಾಧಿಯಾದದ್ದು ಗೋದಾವರೀ ತಟದಲ್ಲಿ (ಇಂದಿನ ಆಂಧ್ರದ ರತ್ನಗರ್ಭ). ಆತ ತನ್ನ ಕಾವ್ಯದಲ್ಲಿ 'ಟಾಠ್ಠಡಾಢಣನಲ್ತೆ ಭೀಮಸೇನನ್' ಎನ್ನುವಲ್ಲಿ ಮರಾಟಿಗರನ್ನು ಕುರಿತೇ ಹೇಳಿದ್ದಾನೆನ್ನಿಸುತ್ತದೆ. ಏಕೆಂದರೆ ಟಠಡಢಣಗಳನ್ನು ಹೆಚ್ಚಾಗಿ ಬಳಸುವವರು ಮರಾಟಿಗರು ಎಂಬುದರಲ್ಲಿ ಸಂಶಯವಿಲ್ಲ.

ಇದನ್ನೆಲ್ಲಾ ಗಮನಿಸಿ ಒಂದು ಮರಾಟಿ ಮನೆತನಕ್ಕೂ ಕನ್ನಡದ ಮೈಲಾರಲಿಂಗನಿಗೂ ಎತ್ತಣಿಂದೆತ್ತ ಸಂಬಂಧ ಎಂಬ ಪ್ರಶ್ನೆಗೆ ಉತ್ತರವಾಗಿ ಅದು ಸಾಂಸ್ಕೃತಿಕ ಸಂಬಂಧ ಎಂದು ಹೇಳಬಹುದಾಗಿದೆ.