ಗುಲಗಂಜಿ ನಿಮಗೆಷ್ಟು ಗೊತ್ತು... ?

ಗುಲಗಂಜಿ ನಿಮಗೆಷ್ಟು ಗೊತ್ತು... ?

ಬರಹ

ಗುಲಗಂಜಿ ಎಂದರೆ ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ನಗರವಾಸಿಗಳಿಗೆ ಇದರ ಪರಿಚಯ ಕಡಿಮೆಯೇ ಎನ್ನಬಹುದು.ಬಂಗಾರದ ಕೆಲಸ ಮಾಡುವವರಿಗೆ ಇದು ಚಿರಪರಿಚಿತ.ಹಿಂದಿನ ದಿನಗಳಲ್ಲಿ ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ.
ಗುಲಗಂಜಿ ದ್ವಿದಳ ಸಸ್ಯದಲ್ಲಿ ಬಿಡುವ ಒಂದು ಬೀಜ.ಇವುಗಳಲ್ಲಿ ಮೂರು ವಿಧಗಳಿವೆ.ಹಾಲಿನಕೆನೆ ಬಣ್ಣದ ಗುಲಗಂಜಿ, ಕೆಂಪು ಬಣ್ಣದ ಗುಲಗಂಜಿ,ಮತ್ತು ಕಪ್ಪು ಬಣ್ಣದ ಗುಲಗಂಜಿ.ಸಂಪದಿಗರಿಗಾಗಿ ಕೆಂಪು ಬಣ್ಣದ ಗುಲಗಂಜಿಯ ಚಿತ್ರ ಹಾಕಿದ್ದೇನೆ. (ಉಳಿದೆರಡು ರೀತಿಯ ಗುಲಗಂಜಿಗಳನ್ನು ಮುಂಬರುವ ದಿನಗಳಲ್ಲಿ ಅಪ್ಲೋಡ್ ಮಾಡ್ತೀನಿ).
ಗುಲಗಂಜಿ ತುಂಬಾ ಮನಮೋಹಕ ಬಣ್ನವುಳ್ಳದ್ದಾಗಿದ್ದು,ಇದರ ಗಾತ್ರ ತೊಗರಿ/ಹಲಸಂದೆ ಕಾಳಿನಷ್ಟಾಗಿರುತ್ತದೆ.ಮೈತುಂಬಾ ಕೆಂಪು ಇರುವ ಇದರ ಸೌಂದರ್ಯಕ್ಕೆ ಮನಸೋಲದ ಮಕ್ಕಳಿಲ್ಲ .ಇದನ್ನು ಬಾಯಿಯಲ್ಲಿಟ್ಟು ಕಡಿದರೆ ಕಹಿ.ಸುಮಾರು ಜನರಿಗೆ ಇದೊಂದು ಕೃತಕ ವಸ್ತುವಿನಂತೆ ಕಂಡರೂ ಇದೂ ಒಂದು ಪ್ರಕೃತಿಯ ಕೊಡುಗೆಯೆಂದು ತಿಳಿದಿಲ್ಲ.
ಗುಲಗಂಜಿಯ ಬಗ್ಗೆ ಪ್ರಚಲಿತವಾದ ಕಥೆಯೊಂದು ಹೀಗಿದೆ.ಗುಲಗಂಜಿ ಒಮ್ಮೆ ನನಗಿಂತಾ ಸುಂದರಿಯಿಲ್ಲ ಎಂದು ಬೀಗುತ್ತಿತ್ತಂತೆ.ಬೇರೆಯವರ ಬಣ್ಣ ನೋಡಿ ನಗುತ್ತಿದ್ದ ಗುಲಗಂಜಿಗೆ ತನ್ನ ಕೆಳಗಿರುವ ಕಪ್ಪು ಬಣ್ಣದ ಬಗ್ಗೆ ತಿಳಿದಿರಲಿಲ್ಲ.ಇದನ್ನು ಮಾರ್ಮಿಕವಾಗಿ ಹಳ್ಳಿಗಳಲ್ಲಿ ಬೀಗುವ ಜನರಿಗೆ ಹಿರಿಯವರು ಬುದ್ದಿ ಹೇಳುವಾಗ ಬಳಸುತ್ತಾರೆ.

"ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ" ಎಂಬ ಗಾದೆ ಕೂಡಾ ಇದೆ.ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟ್ರೆ ಏನಾಗಬಹು ಎನ್ನುವುದಕ್ಕೆ ಈ ಗಾದೆಯನ್ನು ಬಳಸುತ್ತಾರೆ. ಬಯಲು ಸೀಮೆಯ ಕುರುಚಲು ಕಾಡಿನ ಮುಳ್ಳು ಪೊದೆಗಳಲ್ಲಿ ಈ ಗಿಡ ಬೆಳೆಯುತ್ತದೆ. ಅರಿತವರಿಗೆ ಮಾತ್ರ ಗುಲಗಂಜಿಯ ಜಾಡು ತಿಳಿದು ಇದನ್ನು ಸಂಗ್ರಹಿಸುತ್ತಾರೆ.ಔಷಧೀಯ ಗುಣವಿರುವ ಗುಲಗಂಜಿಯ ವೈಜ್ನಾನಿಕ ಹೆಸರು ನನಗೆ ತಿಳಿಯದು.ಸಾಮಾನ್ಯವಾಗಿ ಬಿಳಿ ಗುಲಗಂಜಿಯನ್ನು ನಾಟಿ ವೈದ್ಯದಲ್ಲಿ ಬಳಸುತ್ತಾರೆ.(ನಾ.ಸೋಮೇಶ್ವರರವರು ಈ ವಿಷಯದಲ್ಲಿ ಸಹಕರಿಸಬಹುದು)