ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು

ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು

ಬರಹ

ರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ. ಯಾವುದೇ ಸಮಸ್ಯೆಯ ಮೂಲ ಕಾರಣವನ್ನು ಶೋಧಿಸುವ ‘ಬುದ್ಧಿ’ ನಮ್ಮ ರಾಜಕಾರಣಿಗಳಿಗಂತೂ ಇಲ್ಲ. ಅದಕ್ಕಿಂತ ದೊಡ್ಡ ದುರಂತವೆಂದರೆ ಪ್ರಜಾಪ್ರಭುತ್ವದ ಕಾವಲುಗಾರರಂತೆ ವರ್ತಿಸಬೇಕಾದ ಪತ್ರಿಕೆಗಳು ಮತ್ತು ನಾಗರಿಕ ಸಮಾಜ (civil society)ಕೂಡಾ ‘ಸಿದ್ಧ ಮಾದರಿ’ಗಳ (stereo types) ಮೂಲಕ ಸಮಸ್ಯೆಯನ್ನು ಗ್ರಹಿಸುತ್ತಿರುವುದು. ಇದರಿಂದಾಗಿ ನಕ್ಸಲೀಯರ ಚಟುವಟಿಕೆಗಳಿರುವ ಪ್ರದೇಶದ ಸಾಮಾನ್ಯ ಜನರ ಸ್ಥಿತಿ ಎಲ್ಲಿಯೂ ಬೆಳಕು ಕಾಣುತ್ತಿಲ್ಲ. ಈ ಜನರು ಒಂದೋ ನಕ್ಸಲೀಯರ ಬೆಂಬಲಿಗರಾಗಿ ಪೊಲೀಸರ ಹಿಂಸೆಗೆ ಗುರಿಯಾಗುವುದು ಇಲ್ಲವೇ ನಕ್ಸಲೀಯರ ವಿರೋಧಿಗಳಾಗಿ ನಕ್ಸಲೀಯರಿಂದ ಹತರಾಗುವುದರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯವನ್ನು ಎದುರಿಸುತ್ತಿದ್ದಾರೆ.

ಇದು ಕೇವಲ ನಕ್ಸಲೀಯರ ವಿಷಯಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಸೆಪ್ಟೆಂಬರ್ 11ರ ದುರಂತದ ಹಿಂದೆಯೇ ಹೊರಬಿದ್ದ ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ನೋಡಿದರೂ ಇದು ಅರ್ಥವಾಗುತ್ತದೆ. ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸದೇ ಹೋದವರೆಲ್ಲರೂ ಭಯೋತ್ಪಾದಕರ ಬೆಂಬಲಿಗರು ಎಂಬುದನ್ನು ಅಮೆರಿಕ ಅಧ್ಯಕ್ಷರ ಹೇಳಿಕೆ ಧ್ವನಿಸುತ್ತಿತ್ತು. ಅಂದರೆ ಭಯೋತ್ಪಾದಕರ ಸಿದ್ಧಾಂತ ಮತ್ತು ಅಮೆರಿಕದ ಯುದ್ಧೋನ್ಮಾದದಲ್ಲಿ ಒಂದನ್ನು ಆರಿಸಿಕೊಳ್ಳಲೇ ಬೇಕು ಎಂಬ ಒತ್ತಾಯ ಈ ಮಾತುಗಳಲ್ಲಿದೆ. ಈ ಬಗೆಯ ಕಪ್ಪು-ಬಿಳುಪಿನಲ್ಲಿರುವ ಗ್ರಹಿಕೆಯ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ ಎಂಬುದನ್ನು ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಹೋರಾಟವೇ ತೋರಿಸಿಕೊಟ್ಟಿದೆ. ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಸಮರವನ್ನೇ ಬಳಸಿಕೊಂಡು ಅಲ್-ಖೈದಾ ತರಹದ ಸಂಘಟನೆಗಳು ತಮ್ಮ ಬುಡವನ್ನು ಭದ್ರ ಮಾಡಿಕೊಳ್ಳುತ್ತಿರುವುದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿವೆ. ಇದು ಕರ್ನಾಟಕದಲ್ಲಿಯೂ ಸಂಭವಿಸಬಾರದು.

KudreMukha forest

ಗಾಂಧಿ ಬಹಳ ಹಿಂದೆಯೇ ಪ್ರತಿಪಾದಿಸಿದ್ದ ಸಿದ್ಧಾಂತ ಈ ವಿಷಯದಲ್ಲೂ ಪ್ರಸ್ತುತ. ಹಿಂಸೆಯನ್ನು ಹಿಂಸೆಯ ಮೂಲಕವೇ ಅರ್ಥ ಮಾಡಿಕೊಂಡರೆ ಪರಿಹಾರದ ಮಾರ್ಗಗಳೆಲ್ಲವೂ ಹಿಂಸಾತ್ಮಕವಾಗಿರುತ್ತವೆ. ಬದಲಿಗೆ ಹಿಂಸೆಯನ್ನು ಅಹಿಂಸೆಯ ದೃಷ್ಟಿಕೋನದಲ್ಲಿ ಗ್ರಹಿಸಿದರೆ ಅಹಿಂಸಾತ್ಮಕ ಪರಿಹಾರಗಳು ಕಾಣಸಿಗುತ್ತವೆ. ಬ್ರಿಟಿಶರ ಹಿಂಸೆಯ ಹಾದಿಯನ್ನು ಗಾಂಧಿ ಅಹಿಂಸೆಯ ಮೂಲಕ ಗ್ರಹಿಸಿ ಅಹಿಂಸೆಯ ಮೂಲಕವೇ ಉತ್ತರಿಸಿದರು. ಪರಿಣಾಮವಾಗಿ ಬ್ರಿಟಿಶ್ ಸಾಮ್ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಕೈಗೊಂಡ ಪ್ರತೀ ಹಿಂಸಾತ್ಮಕ ಕ್ರಮವೂ ಬ್ರಿಟಿಶರಿಗೆ ಮುಳುವಾಗುತ್ತಾ ಬಂತು. ಸ್ವಾತಂತ್ರ್ಯ ಹೋರಾಟ ಎಂಬುದು ಕೇವಲ ‘ಹೋಂ ರೂಲ್’’ ಚಳವಳಿಯ ಸ್ವರೂಪದಿಂದ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯಾಗಿ ಬೆಳೆಯಿತು. ಒಂದು ವೇಳೆ ಗಾಂಧೀಜಿ ಬಂದೂಕಿನ ಹಾದಿಯನ್ನು ಅನುಸರಿಸಿದ್ದರೆ ಬ್ರಿಟಿಶರು ಅದನ್ನು ಸುಲಭವಾಗಿ ಎದುರಿಸುತ್ತಿದ್ದರು. ತಮ್ಮ ‘ಸಾಮ್ರಾಜ್ಯ’ದ ಶಕ್ತಿಯನ್ನು ಬಳಸಿಕೊಂಡು ಹೋರಾಟವನ್ನು ಸುಲಭವಾಗಿ ಹೊಸಕಿ ಬಿಡುತ್ತಿದ್ದರು.

ಅಹಿಂಸಾತ್ಮಕ ಹೋರಾಟದ ಇತಿಹಾಸವನ್ನು ಹೊಂದಿರುವ ಭಾರತೀಯ ಸಮಾಜದಲ್ಲಿ ನಕ್ಸಲೀಯರು ನಡೆಸುತ್ತಿರುವ ಹಿಂಸಾತ್ಮಕ ಮತ್ತು ಸಂಕುಚಿತ ದೃಷ್ಟಿ ಕೋನದ ಹೋರಾಟಗಳಿಗೆ ಸ್ಥಾನ ದೊರೆತದ್ದಾದರೂ ಹೇಗೆ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಬಹಳ ಸುಲಭ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸವನ್ನು ನೋಡಿದರೆ ಇದು ತಿಳಿಯುತ್ತದೆ. ಗಾಂಧೀಜಿ ಪ್ರತಿಪಾದಿಸಿದ ರಾಜಕಾರಣದಲ್ಲಿದ್ದ ‘ಪ್ರಾಮಾಣಿಕತೆ’ ಅಂಶವನ್ನು ನಮ್ಮ ರಾಜಕಾರಣಿಗಳು ಮರೆತು ಬಿಟ್ಟರು. ಈ ರಾಜಕಾರಣಿಗಳ ಅಪ್ರಾಮಾಣಿಕತೆಯ ವಿರುದ್ಧ ಹೋರಾಟ ನಡೆಸಬೇಕಿದ್ದ ತಲೆಮಾರು ಈ ಪ್ರಾಮಾಣಿಕತೆ ಎಂಬ ಮೌಲ್ಯದ ಬಗ್ಗೆ ಭೀಕರವಾದ ಭ್ರಮನಿರಸನವನ್ನು ಅನುಭವಿಸಿತು. ಲೋಹಿಯಾ, ಜೆ.ಪಿ. ಮುಂತಾದವರಿಂದ ಇದನ್ನು ಜಾಗೃತಗೊಳಿಸುವ ಪ್ರಯತ್ನ ನಡೆಯಿತು. ಆದರೆ ಇದು ಅವರ ಕಾಲಾನಂತರ ಉಳಿಯಲಿಲ್ಲ. ಲೋಹಿಯಾ ಮತ್ತು ಜೆ.ಪಿ.ಯವರ ಶಿಷ್ಯರು ಎಂದು ಹೇಳಿಕೊಳ್ಳುವವರು ಭ್ರಷ್ಟಾತಿಭ್ರಷ್ಟ ರಾಜಕಾರಣಿಗಳಾಗಿಬಿಟ್ಟರು. ಸಾಮಾಜಿಕ ನ್ಯಾಯವನ್ನು ಕೇವಲ ಜಾತಿ ರಾಜಕಾರಣಕ್ಕೂ, ಪ್ರಜಾಪ್ರಭುತ್ವವನ್ನು ಕೇವಲ ಹೆಂಡ, ಸಾರಾಯಿಯ ಹಂಚುವಿಕೆಗೂ ಸೀಮಿತಗೊಳಿಸಿದರು. ಈಗ ಪ್ರಾಮಾಣಿಕತೆಯ ಕುರಿತ ಭ್ರಮನಿರಸನ ಅದರ ತುರೀಯಾವಸ್ಥೆಗೆ ತಲುಪಿದೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಬೆಳಕಿನಲ್ಲಿ ನಕ್ಸಲೀಯರು ಸೃಷ್ಟಿಸುತ್ತಿರುವ ಸಮಸ್ಯೆಯನ್ನು ನೋಡಬೇಕಿದೆ.

A Goudlu family

ಕರ್ನಾಟಕದಲ್ಲಿ ಮೊದಲಿಗೆ ನಕ್ಸಲೀಯರ ಚಟುವಟಿಕೆಗಳು ಕಾಣಿಸಿಕೊಂಡದ್ದು ಹೈದರಾಬಾದ್ ಕರ್ನಾಟಕದ ರಾಯಚೂರು ಜಿಲ್ಲೆ ಮತ್ತು ಆಂಧ್ರಪ್ರದೇಶಕ್ಕೆ ತಾಗಿಕೊಂಡಿರುವ ತುಮಕೂರು ಜಿಲ್ಲೆಯ ಪಾವಗಡಗಳಲ್ಲಿ. ರಾಯಚೂರು ಜಿಲ್ಲೆಯಲ್ಲಿ ಈಗ ನಕ್ಸಲೀಯರ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವಂತೆ ಕಾಣಿಸುತ್ತದೆ. ಪಾವಗಡದಲ್ಲಿ ಈ ಚಟುವಟಿಕೆಗಳು ಇನ್ನೂ ಉಳಿದುಕೊಂಡಿವೆ. ಇಲ್ಲಿರುವ ‘ನಕ್ಸಲೀಯ ದಳ’ಗಳಲ್ಲಿ ಕರ್ನಾಟಕದವರಿಲ್ಲ. ಇಲ್ಲಿನ ಚಟುವಟಿಕೆಗಳ ಹಿಂದಿರುವವರೆಲ್ಲಾ ಆಂಧ್ರಪ್ರದೇಶ ಮೂಲದವರು ಎಂಬುದನ್ನು ಇತ್ತೀಚಿನ ಪತ್ರಿಕಾ ವರದಿಗಳು ಸಮರ್ಥಿಸುತ್ತಿವೆ. ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ನಕ್ಸಲೀಯ ಚಟುವಟಿಕೆಗಳ ಕೇಂದ್ರ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ವ್ಯಾಪಿಸಿರುವ ಅರಣ್ಯ ಪ್ರದೇಶ. ಸರಳವಾಗಿ ಹೇಳಬೇಕೆಂದರೆ ಮಲೆನಾಡು ಪ್ರದೇಶ.

ಈ ಪ್ರದೇಶದಲ್ಲಿರುವ ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಮೊದಲ ಆರು ಸ್ಥಾನಗಳಲ್ಲಿವೆ. ಈಗಿನ ಉಡುಪಿ ಜಿಲ್ಲೆಯೂ ಸೇರಿರುವ ದಕ್ಷಿಣ ಕನ್ನಡ ಜಿಲ್ಲೆ ಮಾನವ ಅಭಿವೃದ್ಧಿ ಸೂಚಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳು ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿವೆ. ಶಿಕ್ಷಣ, ಆರೋಗ್ಯ,ದಂಥ ಕ್ಷೇತ್ರಗಳಲ್ಲಿ ಕರ್ನಾಟಕದ ಇತರ ಎಲ್ಲ ಜಿಲ್ಲಗಳಿಗಿಂತ ಉತ್ತಮ ನಿರ್ವಹಣೆ ತೋರಿರುವ ಈ ಜಿಲ್ಲೆಗಳಲ್ಲಿ ಸಾಮಾನ್ಯ ಸ್ಥಿತಿಯಲ್ಲಿ ನಕ್ಸಲ್ ವಾದಕ್ಕೆ ಬೆಂಬಲ ದೊರೆಯುವ ಯಾವ ಸಾಧ್ಯತೆಗಳೂ ಇಲ್ಲ. ಆದರೆ ಇಂದು ನಕ್ಸಲೀಯರು ಇಲ್ಲಿ ಯಶಸ್ವಿಯಾಗಿ ನೆಲೆಯೂರಿದ್ದಾರೆ. ಅಂದರೆ ಅಭಿವೃದ್ಧಿಯ ಸೂಚ್ಯಂಕವೇ ಸರಿಯಿಲ್ಲವೇ ಅಥವಾ ನಕ್ಸಲೀಯ ಹೋರಾಟಗಳು ಹುಟ್ಟಿಕೊಳ್ಳುವುದರ ಕುರಿತು ಇರುವ ನಮ್ಮ ಸಮಾಜ ಶಾಸ್ತ್ರಜ್ಞರ ಪ್ರಮೇಯಗಳಲ್ಲಿಯೇ ತಪ್ಪುಗಳಿವೆಯೇ?
ಇಂಥದ್ದೇನೂ ಸಂಭವಿಸಿಲ್ಲ ಎಂಬುದು ಸಮಸ್ಯೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಅರ್ಥವಾಗುತ್ತದೆ. ಸರಕಾರ ಶಾಂತಿಯುತ ಪ್ರತಿಭಟನೆಗಳನ್ನು ಕಡೆಗಣಿಸುತ್ತಾ ಹೋದುದರ ಲಾಭವನ್ನು ನಕ್ಸಲೀಯರು ಪಡೆದುಕೊಂಡರು. ಇದರಿಂದ ಬೆಂಗಳೂರಿನ ವಿಧಾನಸೌಧದಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವವರಿಗೆ ಏನೂ ಆಗಲಿಲ್ಲ. ಆದರೆ ಮಲೆನಾಡಿನ ಶಾಂತಿ ಮಾತ್ರ ಕದಡಿಹೋಯಿತು.

Tribal family

ಇದೆಲ್ಲಾ ಹೇಗೆ ಆರಂಭವಾಯಿತು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸ್ವಲ್ಪ ಇತಿಹಾಸವನ್ನೂ ನೋಡಬೇಕು. ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗಿ ದಶಕಗಳು ಉರುಳಿದವು. ಈ ಅದಿರು ಗಣಿಗಾರಿಕೆಯ ಅವಧಿ ಮುಗಿದ ನಂತರವೂ ಅದನ್ನು ಮುಂದುವರಿಸಲು ಸರಕಾರ ತೀರ್ಮಾನಿಸಿತು. ಕುದುರೆಮುಖದ ಗಣಿಗಾರಿಕೆಯಿಂದಾಗಿ ಭದ್ರಾ ನದಿ ಪ್ರಾಣ ಕಳೆದುಕೊಂಡದ್ದನ್ನು ಅರಿತಿದ್ದ ಮಲೆನಾಡಿನ ಜನರು ಈ ಅತ್ಯಾಚಾರ ಮುಂದುವರಿಯುವುದನ್ನು ಒಪ್ಪಲು ಸಾಧ್ಯವೇ ಇರಲಿಲ್ಲ. ಅದಿರು ಕಂಪೆನಿ ತನ್ನ ಲೈಸೆನ್ಸ್ ಅವಧಿ ವಿಸ್ತರಿಸುವ ಭಾಗವಾಗಿ ತುಂಗಾನದಿಯ ಮೂಲವೂ ಇರುವ ಗಂಗಡಿಕಲ್ಲಿಗೆ ಗಣಿಗಾರಿಕೆಯನ್ನು ವಿಸ್ತರಿಸಹೊರಟಾಗ ಮಲೆನಾಡಿನ ಜನರು ಕ್ರುದ್ಧರಾದರು. ತುಂಗಾಮೂಲ ಉಳಿಸಿ ಹೋರಾಟ ಆರಂಭವಾಯಿತು. ಈ ಹೋರಾಟಕ್ಕೆ ಮ್ಯಾಗ್ಸಸೇ ಪುರಸ್ಕೃತ ದಿವಂಗತ ಕೆ.ವಿ. ಸುಬ್ಬಣ್ಣ, ಜ್ಞಾನಪೀಠ ಪುರಸ್ಕೃತ ಯು. ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿಯಂಥವರ ಬೆಂಬಲವೂ ದೊರೆಯಿತು. ಸುಬ್ಬಣ್ಣ ಮತ್ತು ಅನಂತಮೂರ್ತಿಯವರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಗಂಗಡಿಕಲ್ಲನ್ನು ಗಣಿಗಾರಿಕೆಗೆ ಬಳಸುವ ಪ್ರಸ್ತಾಪವನ್ನು ಕೈಬಿಡಲಾಯಿತು.

ಈ ಹೋರಾಟದ ಅವಧಿಯಲ್ಲಿಯೇ ಕುದುರೆಮುಖ ಅರಣ್ಯವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಗಿತ್ತು. ಇದರಿಂದಾಗಿ ಕಾಡಿನೊಳಗೇ ಬದುಕು ಕಂಡುಕೊಂಡಿರುವ ಗಿರಿಜನರು ಮತ್ತು ಗಿರಿಜನೇತರರ ಬದುಕು ಡೋಲಾಯಮಾನ ಸ್ಥಿತಿ ತಲುಪಿತು. ರಾಷ್ಟ್ರೀಯ ಉದ್ಯಾನವನ ಅಧಿಸೂಚನೆ ಹೇಳುವಂತೆ ರಾಷ್ಟ್ರೀಯ ಉದ್ಯಾನವನದೊಳಗೆ ಜನವಸತಿ ಇರುವಂತಿಲ್ಲ. ಹಾಗಾಗಿ ಕಾಡಿನೊಳಗೆ ಇದ್ದ ಆದಿವಾಸಿಗಳು ಮತ್ತಿತರರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನ ಆರಂಭಿಸಿತು. ತಲೆಮಾರುಗಳಿಂದ ಕಾಡಿನೊಳಗೇ ಬದುಕು ಕಂಡುಕೊಂಡಿದ್ದ ಈ ಜನರು ಪ್ರತಿಭಟನೆ ಆರಂಭಿಸಿದರು. ಈ ಪ್ರತಿಭಟನೆಯಲ್ಲಿ ಖ್ಯಾತ ಪರಿಸರವಾದಿ ಮೇಧಾ ಪಾಟ್ಕರ್ ಕೂಡಾ ಭಾಗವಹಿಸಿದ್ದರು. ಈ ಹೋರಾಟ ಈಗಲೂ ನಡೆಯುತ್ತಿದೆ. ಸರಕಾರವಾಗಲೀ, ಜನಪ್ರತಿನಿಧಿಗಳಾಗಲೀ ಗಿರಿಜನರ ಈ ಶಾಂತಿಯುತ ಹೋರಾಟಕ್ಕೆ ಕವಡೆಯ ಕಿಮ್ಮತ್ತನ್ನೂ ಕೊಡಲಿಲ್ಲ.

ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಚಟುವಟಿಕೆಯನ್ನು ತೀವ್ರಗೊಳಿಸುವ ಪ್ರಯತ್ನ ಆರಂಭಿಸಿತು. ಈ ಹೊತ್ತಿಗಾಗಲೇ ಪೀಪಲ್ಸ್ ವಾರ್ ಪಾರ್ಟಿ ಎಂದು ಗುರುತಿಸಿಕೊಳ್ಳುವ ನಕ್ಸಲೀಯ ಸಂಘಟನೆ ನಿಧಾನವಾಗಿ ಇಲ್ಲಿ ಬೇರುಬಿಡತೊಡಗಿತ್ತು. ಗಿರಿಜನರ ಶಾಂತಿಯುತ ಹೋರಾಟಗಳಿಗೆ ಸರಕಾರ ಯಾವ ಬೆಲೆಯನ್ನೂ ಕೊಡದೇ ಇರುವ ಸ್ಥಿತಿಯನ್ನು ತನಗಾಗಿ ಬಳಸಿಕೊಳ್ಳ ತೊಡಗಿದ ಈ ಸಂಘಟನೆ ಸಶಸ್ತ್ರ ಹೋರಾಟದ ‘ಸಿದ್ಧಾಂತ’ದ ಪ್ರಚಾರದಲ್ಲಿ ತೊಡಗಿತು. ಶಾಂತಿಯುತ ಹೋರಾಟದಲ್ಲಿ ಯಾವುದೇ ಫಲ ಕಾಣದೆ ನಿರಾಶರಾಗಿದ್ದ ಹೋರಾಟಗಾರರನ್ನು ಆಯ್ದುಕೊಂಡು ತನ್ನ ನೆಲೆಯನ್ನು ಭದ್ರಗೊಳಿಸಲು ಆರಂಭಿಸಿತು. ಪೊಲೀಸರಿಂದ ಮೊದಲಿಗೇ ಹತಳಾದ ನಕ್ಸಲೀಯ ಸಂಘಟನೆಯ ಸದಸ್ಯೆ ಪಾರ್ವತಿಯ ಹಿನ್ನೆಲೆಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಈಕೆ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಯುವತಿ. ಈಕೆ ಗಿರಿಜನ ಕುಟುಂಬಕ್ಕೆ ಸೇರಿದವಳೂ ಹೌದು.

ಶಾಂತಿಯುತ ಹೋರಾಟಗಳಿಗೆ ತಕ್ಷಣದ ಫಲಿತಾಂಶಗಳಿರುವುದಿಲ್ಲ. ಅದೂ ಭ್ರಷ್ಟ ವ್ಯವಸ್ಥೆಯೊಂದು ಇಂಥದ್ದೊಂದು ಹೋರಾಟಕ್ಕೆ ಪ್ರತಿಕ್ರಿಯಿಸುವಾಗ ಬಹಳ ತಡವಾಗುತ್ತದೆ. ಹೋರಾಟಗಾರರು ಇಂಥ ಸ್ಥಿತಿಯಲ್ಲಿಯೂ ಸ್ತಿಮಿತ ಕಾಪಾಡಿಕೊಳ್ಳಬೇಕು. ಹತಾಶೆ ಇಂಥ ಸ್ತಿಮಿತ ಕಾಪಾಡಿಕೊಳ್ಳಲು ಬಿಡುವುದಿಲ್ಲ. ಕುದುರೆಮುಖ ಪ್ರದೇಶದ ಗಿರಿಜನರು ಹತಾಶರಾಗಿರುವ ಸ್ಥಿತಿಯನ್ನು ನಕ್ಸಲೀಯ ಸಂಘಟನೆ ಬಳಸಿಕೊಂಡಿತು. ಗಿರಿಜನರ ಹತಾಶೆಯನ್ನು ನಿವಾರಿಸುವ ಕೆಲಸವನ್ನು ಸರಕಾರ ಮಾಡಿದ್ದರೆ ಇಲ್ಲಿ ನಕ್ಸಲೀಯರು ನೆಲೆ ಕಂಡುಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಕುದುರೆಮುಖ ಪ್ರದೇಶದಲ್ಲಿ ನಕ್ಸಲೀಯರಿದ್ದಾರೆ ಎಂಬುದು ಬಹಿರಂಗಗೊಳ್ಳುವ ಮೊದಲು ಅರಣ್ಯ ಇಲಾಖೆಯ “ಒಕ್ಕಲೆಬ್ಬಿಸುವಿಕೆ” ಗತಿ ಬಹಳ ತೀವ್ರವಾಗಿತ್ತು. ನಕ್ಸಲೀಯರಿದ್ದಾರೆ ಎಂಬುದು ಬಹಿರಂಗವಾದೊಡನೆಯೇ ‘ಬಲವಂತದ ಒಕ್ಕಲೆಬ್ಬಿಸುವಿಕೆ ಇಲ್ಲ’ ಎಂಬ ಫಲಕಗಳನ್ನು ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಸ್ಥಾಪಿಸಿತು. ಗಿರಿಜನರ ಅಭಿವೃದ್ಧಿಗೆ ಪ್ಯಾಕೇಜ್ ಗಳ ಘೋಷಣೆಯಾಯಿತು. ಇಂಥ ಬೆಳವಣಿಗೆಗಳೆಲ್ಲವೂ ‘ಬಂದೂಕು ಒಳ್ಳೆಯದು’ ಎಂಬ ಭಾವನೆಯನ್ನು ಬಲಗೊಳಿಸುತ್ತಾ ಹೋಯಿತು. ಪ್ರಜಾಸತ್ತಾತ್ಮಕವಾದ ಶಾಂತಿಯುತ ಹೋರಾಟಗಳು ಫಲ ಕೊಡುವುದಿಲ್ಲ ಎಂಬ ಭಾವನೆ ಗಿರಿಜನರಲ್ಲಿ ಮೂಡಿತು.

ಆದರೆ ಈ ಬಂದೂಕಿನ ಹಾದಿಯ ಅಪಾಯಗಳೂ ಸ್ವಲ್ಪವೇ ದಿನಗಳಲ್ಲಿ ತಿಳಿಯಿತು. ಮೂರು ಎನ್ ಕೌಂಟರ್ ಗಳಲ್ಲಿ ಆರು ಮಂದಿ ನಕ್ಸಲೀಯರನ್ನು ಪೊಲೀಸರು ಕೊಂದರು. ತಮ್ಮ ಕುರಿತು ಮಾಹಿತಿಯನ್ನು ಪೊಲೀಸರಿಗೆ ಒದಗಿಸುತ್ತಿದ್ದಾರೆಂದು ಆರೋಪಿಸಿ ನಕ್ಸಲೀಯರು ಶೇಷಪ್ಪ ಎಂಬವರನ್ನು ಕೊಂದರು. ಇತ್ತೀಚೆಗೆ ನೆಲಬಾಂಬ್ ಸ್ಫೋಟಿಸಿ ಪೊಲೀಸ್ ಜೀಪನ್ನು ಉಡಾಯಿಸುವ ಪ್ರಯತ್ನವನ್ನೂ ನಡೆಸಿದರು.

ಮಲೆನಾಡಿನ ಜನರೀಗ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗುತ್ತಿದ್ದಾರೆ. ಶಾಂತಿಯುತವಾಗಿದ್ದ ಪ್ರದೇಶವೊಂದು ಉದ್ವಿಗ್ನತೆಗೆ ಮತ್ತೊಂದು ಹೆಸರಾಗಿ ಬಿಟ್ಟಿದೆ. ಮಾಧ್ಯಮಗಳಲ್ಲಿ ಎಂದೂ ಕಾಣಿಸಿಕೊಳ್ಳದ ಬರ್ಕಣ, ಮೆಣಸಿನ ಹಾಡ್ಯ, ಈದುವಿನಂಥ ಊರುಗಳು ಈಗ ಬೆಂಗಳೂರಿನಷ್ಟೇ ಖ್ಯಾತ ಪ್ರದೇಶಗಳು. ಹುಲಿಯಂಥ ಕಾಡು ಪ್ರಾಣಿಗಳಿಗಷ್ಟೇ ಹೆದರುತ್ತಿದ್ದ ಜನರು ಈಗ ನಕ್ಸಲೀಯರಿಗೂ ಪೊಲೀಸರಿಗೂ ಹೆದರಬೇಕಾಗಿದೆ.

ಬುದ್ಧಿಜೀವಿಗಳೆಲ್ಲರೂ ನಕ್ಸಲೀಯ ಮಾದರಿ ಹೋರಾಟ ಎಷ್ಟು ಜನಪರ ಅಥವಾ ಜನಪರವಲ್ಲ ಎಂಬ ಕೂದಲು ಸೀಳುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆಯೇ ಹೊರತು ಸರಕಾರ ಮತ್ತು ನಕ್ಸಲೀಯರು ಮಲೆನಾಡನ್ನು ಶೋಷಿಸುತ್ತಿರುವುದರ ಬಗ್ಗೆ ಮಾತನಾಡುತ್ತಿಲ್ಲ. ಪರಿಸರ ಸಂರಕ್ಷಣೆ ಎಂಬುದು ಕೇವಲ ಗಿಡ, ಮರ, ಪ್ರಾಣಿಗಳ ಸಂರಕ್ಷಣೆಯಷ್ಟೇ ಅಲ್ಲ ಆ ಪರಿಸರದಲ್ಲಿರುವ ಮನುಷ್ಯರ ಬದುಕಿನ ಸಂರಕ್ಷಣೆಯೂ ಆಗಿರಬೇಕು ಎಂಬುದನ್ನು elitist ಪರಿಸರವಾದಿಗಳೂ ಅರಿತುಕೊಳ್ಳುತ್ತಿಲ್ಲ. ತಮಾಷೆಯೆಂದರೆ ಸಮಾಜದ ಅಭಿಪ್ರಾಯವನ್ನು ರೂಪಿಸುವ ಈ ಎಲ್ಲರ ತಪ್ಪನ್ನೂ ಮಲೆನಾಡಿನ ಜನತೆ ಹೊರಬೇಕಾಗಿರುವುದು!

namismail @ rediffmail. com