'ಶಿವನುಟ್ಟ ಸೀರೆ'

'ಶಿವನುಟ್ಟ ಸೀರೆ'

ಬರಹ
ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ. ಅವನಿಯನಾಕ್ರಮಿಪುದು ದಾ ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿ ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ. ಇದರಲ್ಲಿಯ "ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿದವಗಡಿಪಳ್" ವಾಕ್ಯಖಂಡದ ಅರ್ಥವನ್ನು ಬಿಡಿಸಲು ಕೊಂಚ ಅವಕಾಶವಿದೆ. ಸೀರೆ ಎಂದರೆ ಬಟ್ಟೆ. ಗಂಡಸರ ಉಡುಗೆಗೂ ಸೀರೆಯೆಂಬ ವ್ಯವಹಾರವಿದೆ [ವಡ್ಡಾರಾಧನೆಯ ಭದ್ರಬಾಹುಭಟಾರರ ಕಥೆಯಲ್ಲಿನ "... ನಂದಿಮಿತ್ರನೆಂದನಯ್ಯ ಎನಗುಡಲಿಲ್ಲೇನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೊಂಡೀಯಿಂ..." ವಾಕ್ಯವನ್ನು ನೋಡಬಹುದು]. ನಮ್ಮ ಮಿಥಿಕಗಳಲ್ಲಿ ಶಿವನು ಆನೆಯ ತೊಗಲನ್ನು ಉಟ್ಟಿರುತ್ತಾನೆ ಇಲ್ಲ ಬತ್ತಲೆಯಿರುತ್ತಾನೆ. ಈ ಪದ್ಯದ ಸಂದರ್ಭಕ್ಕೆ ಶಿವನ ಬತ್ತಲೆವೇಷವು ಒಪ್ಪುತ್ತದೆ. ದಿಗಂಬರನಾದ ಶಿವನಿಗೆ ದಿಕ್ಕುಗಳೆ ಬಟ್ಟೆ. ಅವೆ ಶಿವನುಟ್ಟ ಸೀರೆ. ಕೀರ್ತಿಲಕ್ಷ್ಮಿಯು ದಿಕ್ಕುಗಳನ್ನು ಹಿಡಿದು ಅವಗಡಿಸಿದಳು, ಹರಡಿದಳು. ನಮ್ಮಲ್ಲಿ "ಸೆರಗು ಹಿಡಿ" ಮಾತಿಗೆ "ಹಿಂಬಾಲಿಸು" ಎಂಬ ಧ್ವನಿಯಿದೆ. ಇದು ಹೊಗಳಿಕೆಯ ಮಾತಲ್ಲ. ಲಕ್ಷ್ಮೀಧರಾಮಾತ್ಯನ ಕೀರ್ತಿಲಕ್ಷ್ಮಿಯು ಪರಪುರುಷನಾದ ಶಿವನ ಬಟ್ಟೆಯನ್ನು ಹಿಡಿಯುವುದು ಆಕೆಯ ಪಾವಿತ್ರ್ಯಕ್ಕೆ ಕುಂದು ತರುವಂತಹ ಸಂಗತಿ. ಹಾಗಿರುವಲ್ಲಿ ಆಕೆ ಶಿವನ ಸೀರೆಯನ್ನು ಹಿಡಿದರೂ ಲೋಕಕ್ಕೆ ಶುಭ್ರಳಾಗಿಯೇ ಕಂಡಳು. ಅದರಿಂದ ಲಕ್ಷ್ಮೀಧರನ ಕೀರ್ತಿಗೆ ಯಾವ ಕಡಮೆಯೂ ಉಂಟಾಗಲಿಲ್ಲ. ಲಕ್ಷ್ಮೀಧರನ ದಾನಗಳ ವಿಷಯ ಭೂಮಿಯಲ್ಲೆಲ್ಲಡೆ ಹರಡಿತ್ತು. ಅವನ ಧವಳಕೀರ್ತಿಯು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತ್ತು ಎಂಬುದೆ ಈ ಪದ್ಯದ ಆಶಯ.