ಭಿಕ್ಷೆ.-ಮಾನವೀಯತೆ...

ಭಿಕ್ಷೆ.-ಮಾನವೀಯತೆ...

ಬರಹ

ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ್‍ನ ಸಿಗ್ನಲ್ ಬಳಿ ನನ್ನಂತೆ ನಿಮ್ಮಲ್ಲಿ ಕೆಲವರಾದರೂ ಗಮನಿಸಿರಲೇಬೇಕು. ಎರಡೂ ಕಡೆ ಭಿಕ್ಷುಕರ ಹಾವಳಿ ವಿವಿಧ ರೀತಿಯಲ್ಲಿ.ಅವರದ್ದೊಂದು ದೊಡ್ಡ ಟೀಮ್ ಇದೆ! ಸೊಂಟದಲ್ಲಿ ಮಗುವನ್ನಿಟ್ಟುಕೊಂಡೊ, ಬೆನ್ನಿಗೆ ಕಟ್ಟಿಕೊಂಡೊ ಅಳು ಮುಖ ಮಾಡಿಕೊಂದು ಹರೆಯದ ಹುಡುಗಿಯೊಬ್ಬಳು ಭಿಕ್ಷೆ ಕೇಳುತ್ತಿದ್ದರೆ ಬೆಂಗಳೂರಿಗೆ ಹೊಸಬರಾದರೆ ನಿಮಗೆ ಅಯ್ಯೋ ಪಾಪ ಎನಿಸದಿರದು. ಖಂಡಿತ ೫೦ಪೈಸೆ ಕೊಡಬೇಕೆಂದುಕೊಂಡವರು ೧-೨ ರೋಪಾಯಿ ಕೊಟ್ಟಿಬಿಡುತ್ತೀರಿ!!! ಸ್ನಾನ ಮಾಡದ,ಎಣ್ಣೆ ಕಾಣದ ತಲೆಗೂದಲಿನ,ಕೊಳಕು ಬಟ್ಟೆಯ,ಕಣ್ಣಲ್ಲಿ ಪಿಸಿರಿನೊಂದಿಗೆ ನೀರು ತುಂಬಿಕೊಂಡ ಚಿಕ್ಕ ಮಕ್ಕಳನ್ನು ಕಂಡರ ನಿಮಗೆ ಅಯ್ಯೋ ಪಾಪ ಅನಿಸದೆಯೆ ಇರುತ್ತದೆಯೆ?...ಅವರೀಗೂ ಭಿಕ್ಷೆ ಹಾಕುತ್ತೀರಿ. "ಎಲ್ಲೊ ಸ್ವಲ್ಪ ನನ್ನಿಂದ ಸಹಾಯವಾಯ್ತು" ಅನ್ನೊ ಸಮಾಧಾನ ನಿಮಗೆ. ಆದರೆ ನನ್ನಂಥವರಿಗೆ...? ನನಗಂತೂ "ಆಹಾ! ಇವರ ಹಾಗೆ ಇಷ್ಟು ನೈಜವಾಗಿ ನಾನು ಭಿಕ್ಷುಣಿಯ ಪಾತ್ರ ಮಾಡಿದರೆ ಆಸ್ಕರ್ ಅವಾರ್ಡ್ ಖಂಡಿತ ನನಗೇ ಸಿಗುತ್ತೆ!!" ಅನ್ನುವಷ್ಟು ಅಚ್ಚರಿ. ನಿಜಕ್ಕು ನಾನೆಷ್ಟು ಅವರಿಂದ ಪ್ರೇರಣೆಗೊಂಡಿದ್ದೇನೆಂದರೆ 'ನನಗೇನಾದರು ಅಂಥದ್ದೊಂದು ಪಾತ್ರ ದೊರಕಿದರೆ' ಪ್ರಶಸ್ತಿ ನನಗೇ ಕಟ್ಟಿಟ್ಟದ್ದು ತಿಳಿದುಕೊಳ್ಳಿ!

ಈ ಎರಡೂ ಸಿಗ್ನಲ್ಲಿನಲ್ಲಿ ಏನಿಲ್ಲವೆಂದರೂ ಕನಿಷ್ಟ ೧೦-೧೨, ೧೦-೧೨ ಜನ ಭಿಕ್ಷುಕರಿದ್ದಾರೆ! ಅವರಿಗೊಬ್ಬ ಬಾಸ್! ನೀವು ಕರುಣೆಯಿಂದ ಯಾವುದಾದರು ಭಿಕ್ಷೆ ಬೇಡುವ ಒಂದು ಪುಟ್ಟ ಮಗುವಿನೊಂದಿಗ ಒಂದ್ನಾಲ್ಕು ಮಾತಾಡಿದಿರೋ ಅಲ್ಲಿ ಆ ಬಾಸ್ ಪ್ರತ್ಯಕ್ಷನಾಗಿ ಮಗುವನ್ನು ಬಯ್ಯುತ್ತಾ ಅದನ್ನು ಅಲ್ಲಿಂದ ಓಡಿಸುತ್ತಾನೆ. ಕನ್ನಡದ ಯಾವುದೊ ಒಂದು (ಕ್ಷಮಿಸಿ ಹೆಸರು ನೆನಪಿಲ್ಲ) ಸಿನೇಮಾದಲ್ಲಿ ಈ ಭಿಕ್ಷಾ ಬ್ಯೂಸಿನೆಸ್ ಬಗ್ಗೆ ವಿವರವಾಗಿ ತೋರಿಸಿದ್ದಾರೆ. ಈಗ ಈ ಭಿಕ್ಷುಕರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ನೇರವಾಗಿ ಭಿಕ್ಷೆ ಬೇಡುವುದರ ಬದಲಾಗಿ ear buds ಮಾರುವುದು!! "ಅದರಲ್ಲೇನು ತಪ್ಪು? ಭಿಕ್ಷೆ ಬೇಡಿ ತಿನ್ನುವುದರ ಬದಲಾಗಿ ದುಡಿದು ತಿನ್ನಲು ಪ್ರಯತ್ನಿಸುತ್ತಿದ್ದಾರಲ್ಲ ಅದು ತಪ್ಪೆ?!" ಎಂದು ನೀವು ನನ್ನನ್ನೇ ಬೈಯಬಹುದು. ಸ್ವಲ್ಪ ಇರಿ, ಅವರು ನಮಗೆ ಆ ear buds ಮಾರುವುದು ದುಪ್ಪಟ್ಟು ರೇಟಿಗೆ!! ೫ ರೂಪಾಯಿಗೆ ಸಿಗುವ ಅದನ್ನು ಅವರು ನಮಗೆ ೧೦ ರೂಪಾಯಿಗೆ ಕೊಂಡುಕೊಳ್ಳಲು ಅಂಗಲಾಚುತ್ತಾರೆ. ನೀವು 'ಅಂಗಡಿಯಲ್ಲಿ ಜಾನ್ಸನ್ ಬಡ್‍ಗೆ ಹೆಚ್ಚು ದುಡ್ಡು ಕೊಡುತ್ತೇವೆ,ಅದಕ್ಕಿಂತ ಇದು ವಾಸಿಯಲ್ಲವೆ?' ಅಂದುಕೊಂಡು ಖುಷಿಯಿಂದಲೇ ಅವರ ಹತ್ತಿರ ಕೊಂಡುಕೊಳ್ಳುತ್ತೀರಿ. ಅಲ್ಲಿಗೆ ಮೊದಲು ನಿಮ್ಮ ಕರುಣೆಯ ಕೃಪೆಯಿಂದ ೧-೨ ರೂಪಾಯಿ ಗಿಟ್ಟಿಸುತ್ತಿದ್ದ ಆ ಭಿಕ್ಷುಕ ಈಗ ೫ ರೂಪಾಯಿ ಗಿಟ್ಟಿಸುತ್ತಾನೆ,ಜೊತೆಗೆ ನಿಮ್ಮ ಕರುಣೆಯ ಹಂಗಿಲ್ಲ! ... ನಿಮಗೆ ಇವರ ಈ ಮರ್ಮ ಅರ್ಥವಾದ ನಂತರ ನೀವು ಮೊದಲಿನಂತೆ ಭಿಕ್ಷುಕರನ್ನು ಕರುಣೆಯಿಂದ ನೋಡಲು ಸಾಧ್ಯವಾಗುವುದೇ? ನನಗಂತೂ ಇವರುಗಳಿಂದಾಗಿ ಇತ್ತೀಚಿಗೆ ನಿಜವಾದ ಅಸಹಾಯಕರ್ಯಾರೊ, ಢೋಂಗಿ ಯಾರೊ ತಿಳಿಯದಂತಾಗಿ ಗೊಂದಲವಾಗುತ್ತಿದೆ. ಸಹಾಯ ಮಾಡಲೊ ಬೇಡವೊ ಎಂಬ ಗೊಂದಲ. ಇದರಿಂದಾಗಿ ಮೆಲ್ಲನೆ ಮಾನವೀಯತೆ ಹಿಂದೆ ಸರಿದು ಅದರ ಜಾಗದಲ್ಲಿ ಅನುಮಾನ, ಅಸಡ್ಡೆ ಮನೆ ಮಾಡತೊಡಗಿದರೆ ನಿಜವಾದ ಅಸಹಾಯಕರ ಗತಿ ಏನು?