ಹಳೆಯ ಗೆಳೆಯ :
ಬರಹ
ಹಳೆಯ ಗೆಳೆಯ :
ಗೆಳೆತನ ಅಪೂರ್ವ. ಎಳೆಯಂದಿನಿಂದಿಂದಿಗೂ
ಒಂದೆ ಥರ. ಹಲವಾರು ವರ್ಷ ಉರುಳಿದಮೇಲೆ
ಮುಂಬಯಿಯಲೊಮ್ಮೆಗೇ ಸಿಕ್ಕ ಆ ಹಳೆ ಗೆಳೆಯ
ಕೇಳಿದನು: 'ನಾನು ಯಾರೆಂದು ತಿಳಿಯಿತೆ ನಿನಗೆ ?'
ಕಣ್ಣಲ್ಲಿ ಕಣ್ಣು. ಹುಡುಕಿಡೆ ಬೆನ್ನ ಹಿಂದುಗಡೆ.
ಮರಳ ಹುದುಲಲ್ಲಿ ಬಚ್ಚಿಟ್ಟ ಹೆಜ್ಜೆಗಳನ್ನು
ಬಗೆದೆ ಒಂದೊಂದಾಗಿ ಪುಟ ತೆಗೆದು. ಕತೆಗೆ ಕೊನೆ-
ಯಿರುವಂತೆಯೇ ಉಂಟು ಒಂದೆ ಗ್ರಂಥದಲ್ಲದರ
ಆರಂಭ, ಬೆಳವಣಿಗೆ. ಅಲ್ಲಲ್ಲಿ ನೆನಪಿಗೆಂ-
ದಿರಿಸಿ ಮರೆತಿರುವಂಥ ನವಿಲುಗರಿ.ಬಿಡಿಸಿ ನೋ-
ಡಿದರೆ ಈವತ್ತಿಗೂ ಜೀವಂತ ಚಿತ್ರಗಳು.
ಬೊಕ್ಕತಲೆ, ಕನ್ನಡಕ, ಸುಕ್ಕು, ನೆರೆಗೂದಲಿನ
ಈ ಹೊಸಾಮುಖವಾಡ ಕಿತ್ತು ನಕ್ಕೆನು: 'ಎಲಾ !
ಹುಡುಗು ಬುದ್ದಿಯ ನೀನು ಈಗಲೂ ಬಿಟ್ಟಿಲ್ಲ'
ಗೆಳೆಯ ಶ್ರೀ. ಎಚ್.ಎಸ್.ವೆಂಕಟೇಶಮೂರ್ತಿಯವರು ನಾನೂ ಬಹಳ ವರ್ಷದ ಮೇಲೆ ಮುಂಬೈ ನಲ್ಲಿ ಭೇಟಿಯಾದಾಗ. ಆಗ ರಚಿಸಿದ ಈ ಕವಿತೆ 'ಎಷ್ಟೊಂದು ಮುಗಿಲು,' ಎಂಬ 'ಕವನ ಸಂಗ್ರಹ'ದಲ್ಲಿ ಪ್ರಕಟವಾಗಿದೆ.(ಪುಟ 61),ಅಕ್ಷರ ಪ್ರಕಾಶನ, ಹೆಗ್ಗೋಡು. ದಿಸೆಂಬರ್, 1991.