ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?

Submitted by omshivaprakash on Fri, 07/04/2008 - 22:29
ಬರಹ

Openoffice.orgತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ. 

ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ  ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು.

ಇದಕ್ಕೆಲ್ಲ ಉತ್ತರ ಕೂಡ ಈಗಾಗಲೇ ಎಲ್ಲರ ಮುಂದಿದೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನ ಉಪಯೋಗಿಸೋದು. ಓಪನ್ ಆಫೀಸ್  ಉಪಯೋಗಿಸ್ಲಿಕ್ಕೆ ಶುರು ಮಾಡಿದ್ರೆ ಕಾಸ್ ಕೊಟ್ಟು ಮೈಕ್ರೋಸಾಫ್ಟ್ ಆಫೀಸ್ ಕೊಂಡುಕೊಳ್ಬೇಕಿಲ್ಲ. ಆಗಲೇ ಅನೇಕ ರಾಜ್ಯಗಳಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನಉಪಯೋಗಿಸಿ ಕೊಳ್ಳಲಿಕ್ಕೆ ಶುರು ಮಾಡಿದ್ದಾರೆ.

ದೆಹಲಿಯಲ್ಲಿನ ಮಾಹಿತಿ ತಂತ್ರಜ್ಞಾನ ಇಲಾಖೆ, ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಕಛೇರಿಗಳಿಗೆ ಕಳಿಸಿದ ಒಂದು ಪತ್ರವನ್ನ ನಿಮ್ಮ ಮುಂದಿಡುತ್ತಿದ್ದೇನೆ.

ಅದರ pdf ಪ್ರತಿ ಇಲ್ಲಿದೆ

ಇದರಲ್ಲೇನಿದೆ ಅಂತ ಒಮ್ಮೆ ಓದಿ ನೋಡಿ ಸಾರ್! ದೆಹಲಿಯಲ್ಲಿ ಇನ್ಮುಂದೆ ಆಫೀಸ್ ತಂತ್ರಾಂಶವನ್ನ ಕೊಂಡು ಕೊಳ್ಳೋ ಹಾಗಿಲ್ಲ, ಓಪನ್ ಆಫಿಸ್ ಉಪಯೋಗಿಸ ಬೇಕು. 

ಕರ್ನಾಟಕ ಸರ್ಕಾರ ಇವುಗಳ ಬಗ್ಗೆ ತನ್ನ ಅರಿವನ್ನ ಹೆಚ್ಚಿಸಿ ಕೊಳ್ಳೋ ಕಾಲ ಬಂದಾಗಿದೆ. ಸರ್ಕಾರಿ ಕೆಲಸಗಳಿಗೆ ಬೇಕಿರೋ ತಂತ್ರಾಂಶಗಳನ್ನ ನಾವೇ ಅಭಿವೃದ್ದಿ ಪಡಿಸಿ ಸ್ವಾವಲಂಭನೆಯ ಹಾದಿ ತುಳಿಯುವುದಕ್ಕೆ ನಮ್ಮಲ್ಲಿರುವ ಪ್ರತಿಭೆಗಳನ್ನ ನಮ್ಮ ಸರ್ಕಾರ ಕಣ್ಬಿಟ್ಟು ನೋಡುತ್ತಾ? ಅಥವಾ ಲಭ್ಯವಿರುವ ಮುಕ್ತ ತಂತ್ರಾಂಶಗಳ ಕಡೆಗೆ ಗಮನ ಹರಿಸಿ  ಸಾರ್ವಜನಿಕರ ಹಣ ಪೋಲಾಗೋದನ್ನ ತಪ್ಪಿಸಲಿಕ್ಕೆ ಚಿಂತಿಸುತ್ತಾ ಅನ್ನೋದೇ ದೊಡ್ದ ಪ್ರಶ್ನೆ. 

ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು, ಅದರ ಜೊತೆಗೇ ಮೈಸೂರು ಮತ್ತಿರೆಡೆಗಳಲ್ಲಿ ಪ್ರಪಂಚದ ಅನೇಕ ದೇಶಗಳಿಗೆ ಬೇಕಿರುವ ತಂತ್ರಜ್ಞಾನಗಳನ್ನ ನಾವು ಮಾಡಿ ಕೊಡೋದೇ ಆಗಿದೆ. ಕನ್ನಡಿಗರಿಗೆ ಕೆಲಸ ನೀಡಿ ಅಂತ ಕೂಡ ಹೇಳ್ತೀವಿ. ಇಲ್ಲಿ ಸರ್ಕಾರ ಕೊಡೋ ಟ್ರೈನಿಂಗ್ ಮಾತ್ರ ನಮ್ಮನ್ನ ಮತ್ತೆ ಇನ್ಯಾವುದೋ ದೇಶದ ತಂತ್ರಾಂಶದ ಗುಲಾಮರನ್ನಾಗಿ ಮಾಡ್ತದೆ. ಹೌದು ನಾನು ಇತ್ತೀಚೆಗೆ ಕೇಳ್ಪಟ್ಟ ಸುದ್ದಿಯ ಪ್ರಕಾರ ಐ.ಟಿ ಡಿಪಾರ್ಟ್ಮೆಂಟ್ ನೆಡೆಸ್ತಿರೋ ಒಂದು ಟ್ರೈನಿಂಗ್ ಪ್ರೋಗ್ರಾಮ್ ನಲ್ಲಿ ಕಲಿಸ್ತಿರೋದು ಮೈಕ್ರೋಸಾಪ್ಟ್ ಆಫೀಸ್. ಅದರ ಪರೀಕ್ಷೆ ಪಾಸಾದ್ರೆ ಸರ್ಕಾರಿ ಕೆಲಸ ಅಂತೆ. ನಿಮಗೆಲ್ಲಾ ಗೊತ್ತಿರೋ ಹಾಗೆ, ಕೇರಳ ತನ್ನ ರಾಜ್ಯದಲ್ಲಿರುವ ಸ್ಕೂಲ್, ಕಾಲೇಜ್ ಗಳಲ್ಲಿ ಲಿನಕ್ಸ್ ಬಳಸಿ ವಿಧ್ಯಾಭ್ಯಾಸದ ಜೊತೆಗೆಮುಕ್ತ ಹಾಗು ಸ್ವತಂತ್ರ ತಂತ್ರಾಂಶಗಳನ್ನ ಹೇಗೆ ಬಳಸೋದು ಅಂತ ಕೂಡ ಹೇಳಿ ಕೊಡ್ತಿದೆ. ಚಿಂತಕ ಛಾವಡಿಯಲ್ಲಿ ಈ ವಿಷಯಗಳು ಚರ್ಚೆಯಾಗಿ, ನಾವೂ ಏನಾದ್ರೂ ಮಾಡಕ್ಕಾಗತ್ತ ಅಂತ ನೋಡಬೇಕಿದೆ.

ನನ್ನ ಚಿಂತೆ ಏನಂದ್ರೆ ನಾವ್ಯಾಕೆ ಇಂತಹ ವಿಷಯಗಳಲ್ಲಿ ತುಂಬಾ ಹಿಂದೆ ಅನ್ನೋದು. ನೀವೇನಂತೀರಾ?

ಲೇಖನ ವರ್ಗ (Category)