ಪತಂಜಲಿಯ ಯೋಗ ಭಾಗ ೩

ಪತಂಜಲಿಯ ಯೋಗ ಭಾಗ ೩

ಬರಹ

ಪತಂಜಲಿಯ ಯೋಗ

ಮೂರನೆಯ ಲೇಖನ
ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩
ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಲ್ಲಿ ಕ್ರಮೇಣ ವೃತ್ತಿಗಳು ಮನಸ್ಸಿನಲ್ಲಿ ಏಳುವುದು ಕಡಿಮೆಯಾಗುತ್ತದೆ.

ಯೋಗ ಸೂತ್ರ.ಪಾದ೧. ಸೂತ್ರ.೧೪
ನಮಗಿರುವ ಅನುಭವಗಳೆಲ್ಲಾ ಪಂಚೇಂದ್ರಿಯಗಳ ಮೊಲಕ ಸಿಗುತ್ತದೆ. ಆದನ್ನು ಸ್ಮೃತಿ ನೆನಪಿನಲ್ಲಿಟ್ಟುಕೊಂಡಾಗ 'ನನ್ನತನ' ‍ಉಂಟಾಗುತ್ತದೆ. ನಾವು

ನೋಡಿದ, ಕೇಳಿದ ಮತ್ತು ಅನುಭವಿಸಿದ ವಿಷಯಗಳ ಬಗ್ಗೆ ದಾಹಪಡುವುದನ್ನು ಬಿಟ್ಟಾಗ ಮನಸ್ಸಿನಲ್ಲಿ ವೈರಾಗ್ಯ ಉಂಟಾಗುತ್ತದೆ. ವಿರಾಗದಿಂದ ವೈರಾಗ್ಯ.
ವಿರಾಗ ಎಂದರೆ ರಾಗವಿಲ್ಲದಿರುವಿಕೆ. ಸುಖಬೇಕೆನ್ನುವ ಆಶಯವೇ ರಾಗ ಎಂದು ಪತಾಂಜಲಿಯ ಯೋಗ ಸೂತ್ರ.ಪಾದ೨. ಸೂತ್ರ.೭ ಹೇಳುತ್ತದೆ. ಇಲ್ಲಿ

ನಾನು ಹೇಳಿರುವುದು ಭಾವಾ‍ರ್ಥ(ಸುಖವನ್ನು ಬೆಂಬಿಡದೆ ಬರುವುದು ರಾಗ:ವಾಕ್ಯಾ‍ರ್ಥ).
ಅಭ್ಯಾಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು ಮತ್ತು ವೈರಾಗ್ಯವನ್ನು ಸಹ ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕು. ಆಗ ನಮ್ಮ ಮನಸ್ಸಿನ ಸ್ಥಿತಿಯನ್ನು

ಅವಲಂಬಿಸಿ ಕೆಲವರಿಗೆ ಬೇಗ, ಕೆಲವರಿಗೆ ಮಧ್ಯಮ, ಕೆಲವರಿಗೆ ನಿಧಾನವಾಗಿ ಸಂಪ್ರಜ್ಞಾತ ಎಂಬ ಮನಸ್ಸಿನ ಸ್ಥಿತಿ ಉಂಟಾಗುತ್ತದೆ.
ಆದರೆ ಇದೇ ಸ್ಥಿತಿ ಈಶ್ವರನ ಕರುಣೆಯಿಂದ ತಾನೇತಾನಾಗಿ ಸಿಗಬಹುದು. ಎಂದರೆ ಪೂ‍ರ್ವ ಜನ್ಮದ ಪುಣ್ಯವಿರಬಹುದು;ಇನ್ನೇನಾದರೂ ಇರಬಹುದು. ಇದು

ಏಕೆ ಹೀಗೆ ಎಂದು ಹೇಳಲಾಗದು. ಹೀಗೆ ಹೇಳಿದ ಪತಾಂಜಲಿಯ ಸೂತ್ರಗಳಲ್ಲಿ ಈಶ್ವರ ಯಾರು ಎಂಬ ಪ್ರಶ್ನೆಗೂ ಉತ್ತರ ಸೂತ್ರ.ಪಾದ೧. ಸೂತ್ರ.೨೪ರಲ್ಲಿ

ಸಿಗುತ್ತದೆ. ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾಗಿರುವ ವಿಷೇಷ-ಪುರುಷನೇ ಈಶ್ವರ.
ಈ ಒಂದು ಸೂತ್ರದಿಂದ ಅದೆಷ್ಟು ವಿಷಯಗಳನ್ನು ಹಿರಿಯಬಹುದು ನೋಡೋಣ!
೧.ಕ್ಲೇಷ(ಐದು ಕ್ಲೇಷಗಳು ಯಾವುವೆಂದರೆ ಅವಿದ್ಯಾ, ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶ. ಇವುಗಳ ಬಗ್ಗೆ ಮುಂದೆ ಚ‍ರ್ಚಿಸಬಹುದು), ಕರ್ಮ

(ಮಾಡಿದ ಕೆಲಸದ ಫಲವೇ ಕರ್ಮ; ಮಾಡುವ ಕೆಲಸವೇ ಕರ್ಮ ಎಂದೂ ಸಂಧ‍ರ್ಭಾನುಸಾರ ಆಗಬಹುದು), ವಿಪಾಕ(ಕರ್ಮ ಮತ್ತು ಆಶಯಗಳು ಈ

ಜನ್ಮದಲ್ಲಿ ಫಲ ಕೊಡದಿದ್ದಲ್ಲಿ ವಿಪಾಕವಾಗಿ ಜನ್ಮಜನ್ಮಾಂತರಕ್ಕೆ ಮುಂದುವರೆಯುತ್ತದೆ), ಆಶಯ(ಪೂ‍ರ್ಣವಾಗದ ಆಸೆಗಳೇ ಆಶಯಗಳು;ಕರ್ಮ ಮತ್ತು

ಆಶಯಗಳು ಕ್ಲೇಷಕ್ಕೆ ಕಾರಣವಾಗುತ್ತದೆ) ಇವುಗಳಿಂದ ಹೊರತಾಗಿರುವ ದೃಷ್ಟನೇ ಪುರುಷ.
೨.ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾಗದ ಸ್ಥಿತಿಯೇ ದೃಷ್ಟನ ವೃತ್ತಿ ಸಾರೂಪ್ಯ(ಎಂದರೆ ಸಾಮಾನ್ಯ ಸ್ಥಿತಿ-ಸಂಯೋಗ).
೩.ಯೋಗದಿಂದ ಎರಡನೆಯ ಸ್ಥಿತಿಯಿಂದ ಮೊದಲನೆಯ ಸ್ಥಿತಿಗೆ ಹೋಗಬಹುದು.
೪.ಪುರುಷ ಸ್ಥಿತಿಗೆ ಹೋದಮೇಲೆ ಮತ್ತೆ ಹುಟ್ಟುವ ಅಥವ ಸಾವಿನ ಪ್ರಶ್ನೆ ಬರುವುದಿಲ್ಲ. ಇದೇ ಕೈವಲ್ಯ. ಸತ್+ಚಿತ್+ಆನಂದದ ಸ್ಥಿತಿ.
೫.ಪುರುಷ ಸ್ಥಿತಿಯಲ್ಲಿ ಅನೇಕ ದೃಷ್ಟರು ಇರಬಹುದು. ಆದರೆ ವಿಷೇಷ-ಪುರುಷ ಒಬ್ಬನೇ.
ಈ ವಿಷೇಷ-ಪುರುಷನು ಅನಂತ(ಮೊದಲು-ಕೊನೆಯಿಲ್ಲದವನು), ಸ‍ರ್ವಜ್ಞ(ಎಲ್ಲಾ ಜ್ಞಾನವನ್ನೂ ಹೊಂದಿರುವವನು).ಯೋ.ಸೂ.ಪಾದ೧. ಸೂತ್ರ.೨೫
ಮೊದಲಿನಿಂದಲೂ ಈಶ್ವರನೇ ಗುರು-ಅವನು ಕಾಲದಿಂದ ಹೊರತಾಗಿದ್ದಾನೆ.ಯೋ.ಸೂ.ಪಾದ೧. ಸೂತ್ರ.೨೬
ಅವನನ್ನು ಪ್ರತಿನಿಧಿಸುವ ಶಬ್ದ ಓಂ.ಯೋ.ಸೂ.ಪಾದ೧. ಸೂತ್ರ.೨೭
ಅದನ್ನು ಜಪಿಸಿ ಅದರ ಅರ್ಥವನ್ನು ಮನನಮಾಡಬೇಕು.ಯೋ.ಸೂ.ಪಾದ೧. ಸೂತ್ರ.೨೮
ಅದರಿಂದ ಮನಸ್ಸು ವಿಕಾಸಹೊಂದುವುದಲ್ಲದೆ ಯೋಗಕ್ಕೆ ಬರುವ ತಡೆಗಳ ನಿವಾರಣೆಯಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೨೯
ಯೋಗಕ್ಕೆ ಬರುವ ತಡೆಗಳು ಯಾವುವೆಂದರೆ -ವ್ಯಾಧಿ, ಸ್ತ್ಯಾನ, ಸಂಶಯ, ಪ್ರಮಾದ, ಆಲಸ್ಯ, ಅವಿರತಿ, ಭ್ರಾಂತಿದ‍ರ್ಶನ, ಅಲಭ್ದಭೂಮಿಕತ್ವ ಮತ್ತು

ಅನವಸ್ಥಿತತ್ವ.ಯೋ.ಸೂ.ಪಾದ೧. ಸೂತ್ರ.೩೦
ದುಃಖ,ದೌ‍ರ್ಮನಸ್ಯ,ಅಂಗಮೇಜಯತ್ವ,ಶ್ವಾಸ,ಪ್ರಶ್ವಾಸಗಳು ತಡೆಗಳ ಜೊತೆಗೇ ಇರುವ ಅಡ್ಡಿ-ಅಡಚಣೆಗಳು.ಯೋ.ಸೂ.ಪಾದ೧. ಸೂತ್ರ.೩೧
ಇವುಗಳ ಬಗ್ಗೆ ಹೆಚ್ಚಿನ ವಿವರಣೆ ಮುಂದಿನ ಲೇಖನದಲ್ಲಿ ನೋಡಬಹುದು.

೧೯/೮/೦೫
ಮುಂದುವರೆಯುವುದು...