ವಚನ ಚಿಂತನ: ಬಸವಣ್ಣ: ಬಿದಿರು ಆಗಬೇಕು

ವಚನ ಚಿಂತನ: ಬಸವಣ್ಣ: ಬಿದಿರು ಆಗಬೇಕು

ಬರಹ
ಬಿದಿರಲಂದಣವಕ್ಕು ಬಿದಿರಲಿ ಸತ್ತಿಗೆಯಕ್ಕು ಬಿದಿರಲ್ಲಿ ಗುಡಿಯು ಗುಡಾರವಕ್ಕು ಬಿದಿರಲ್ಲಿ ಸಕಲ ಸಂಪದವೆಲ್ಲವು ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ ಈ ವಚನವು ಬಿದಿರನ್ನು ಒಂದು ರೂಪಕವಾಗಿ ಬಳಸಿಕೊಂಡು ನಮ್ಮ ಬದುಕು ಹೇಗೆ ಇರಬೇಕು ಎಂಬ ಆಶಯವನ್ನು ಹೇಳುತ್ತಿದೆ. ಬಿದಿರು ಏನೇನೆಲ್ಲ ಆಗಬಹುದು- ದೊಡ್ಡವರನ್ನೋ ದೇವರನ್ನೋ ಮೆರೆಸುವ ಪಲ್ಲಕ್ಕಿಯಾಗುತ್ತದೆ, ಬಿಸಿಲು ಮಳೆಯಿಂದ ಕಾಪಾಡುವ ಛತ್ರಿಯಾಗುತ್ತದೆ, ಬಡವರ ಮನೆಯ ಚಾವಣಿಯೂಗುತ್ತದೆ, ಬಾವುಟದ ಕೋಲು ಕೂಡ ಆಗುತ್ತದೆ. ಸೆಟೆದು ನಿಲ್ಲುವ ಮತ್ತು ಮುರಿಯದೆ ಬಾಗಿ ಬಳುಕುವ ಎರಡೂ ಗುಣ ಬಿದಿರಿಗೆ ಇದೆ. ಹಾಗೆ ಫ್ಲೆಕ್ಸಿಬಲ್ ಆಗದವರನ್ನು ಕೂಡಲಸಂಗಮದೇವ ಒಪ್ಪುವುದಿಲ್ಲ ಅನ್ನುವುದು ಬಸವಣ್ಣನ ಮಾತು. ನಾವು ಮನಸ್ಸಿನೊಳಗೆ ಬೆಳಸಿಕೊಂಡ ಪೂರ್ವಾಗ್ರಹ, ನಮ್ಮದೇ ಸರಿ ಎಂಬ ಹಠ, ಲೋಕ ಹೀಗೇ ಇರಬೇಕು ಎಂಬ ಹುಂಬ ಮೊಂಡು ವಾದ ಇತ್ಯಾದಿಗಳಿಂದ ಸೆಟೆದುನಿಲ್ಲುವುದನ್ನು ಮಾತ್ರ ಕಲಿತಿದ್ದೇವೆ. ಅಥವ ನಮ್ಮ ಕೈಯಲ್ಲಿ ಏನೂ ಆಗುವುದಿಲ್ಲ, ನಾನು ಅಸಮರ್ಥ, ನಾನು ನಿರುಪಯುಕ್ತ ಎಂದು ನಮ್ಮನ್ನೇ ಕೀಳುಮಾಡಿಕೊಂಡು ಅನಗತ್ಯ ಮತ್ತು ದುರ್ಬಲ ವಿನಯವಂತರಾಗಿರುತ್ತೇವೆ. ಮುರಿದೇನು ಬಾಗುವುದಿಲ್ಲ ಎಂಬ ಸೆಟೆವ ಗುಣ ಮತ್ತು ನಾನು ಕ್ಷುದ್ರ ಎಂಬ ಸುಳ್ಳು ವಿನಯ ಎರಡೂ ತಪ್ಪು. ಬಿದಿರಿನ ಹಾಗೆ ಈ ಎರಡೂ ಗುಣ ಮೈಗೂಡಿಸಿಕೊಳ್ಳುವುದು ಒಳ್ಳೆಯದೇನೋ! ಹಟ ಮತ್ತು ವಿನಯಗಳ ಹದವಾದ ಮಿಶ್ರಣದಿಂದ ಬಿದಿರಿನ ಹಾಗೆ ನಮ್ಮ ಬದುಕು ಕೂಡ ಅನೇಕ ಬಗೆಗಳಲ್ಲಿ ಲೋಕಕ್ಕೆ ಉಪಕಾರವಾದೀತು.