ಬಾದಲವ ಬರಸಾನ ಲಾಗೆ

ಬಾದಲವ ಬರಸಾನ ಲಾಗೆ

ಬರಹ

ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್‌ ಮೆಲೋಡೀಸ್‌' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ ಕುಳಿತು ಬರೆದ ಕತೆ ಇದು. ಈ ಕತೆ ಬರೆಯುವಾಗ ನನ್ನೊಳಗೆ ಧಾರಾಕಾರವಾಗಿ ಸುರಿದ ಭಾವನೆಗಳ ಮಳೆಗೆ ಒದ್ದೆಯಾದ ಮನಸ್ಸು ಇನ್ನೂ ಒಣಗಿಲ್ಲ. ಓದಿ ನೋಡಿ. ಅನಿಸಿದ್ದನ್ನು ಹೇಳಿ

ಇನ್ನೇನು ಬೆಳಕು ಹರಿದು ನಿಚ್ಛಳವಾಗುವುದರಲ್ಲಿದ್ದ ಮೆಜೆಸ್ಟಿಕ್ಕು ಯಾವ್ಯಾವುದೋ ಊರುಗಳಿಂದ ಹರಿದು ಬರುವ ಬಸ್ಸುಗಳಿಂದ ಜನ ಸಮುದ್ರವಾಗತೊಡಗಿತು. ಕೆಂಪಿ ಬಸ್ಸು, ಹಸಿರು ಬಸ್ಸು, ಡಿಲಕ್ಸ್‌ ಬಸ್ಸು , ವಾಂತಿಯಿಂದ ನಾರುತ್ತಿರುವ ಬಸ್ಸು. ಬಸ್ಸು, ಬಸ್ಸು...ಬಸ್ಸು!
ಮೆಜೆಸ್ಟಿಕ್ಕಿನಲ್ಲಿ ಈಗ ಪಾದಗಳು ಸರಿದಾಡತೊಡಗಿದವು. ಪಾದ ಕಾಣದ ಬೂಟುಗಳು, ಬೂಟೇ ಕಾಣದ ಪಾದಗಳು, ಬೆಳ್ಳಕ್ಕಿಯಷ್ಟು ಮೃದು ಪಾದಗಳು, ಗುಬ್ಬಚ್ಚಿಯಷ್ಟು ಪುಟ್ಟ ಪಾದಗಳು, ಕಪ್ಪು ಪಾದಗಳು, ಕಲೆಯಾದ, ಸುಕ್ಕುಗಟ್ಟಿದ ಪಾದಗಳು, ಸಾದಾ ಪಾದಗಳು, ಎಡವಿಕೊಂಡು ಹೈ ಹೀಲ್ಡ್‌ಗಳಾದವು ಮತ್ತು ಹೈ ಹೀಲ್ಡ್‌ ಹಾಕಿ ಎಡವುವ ಪಾದಗಳು!

ಇದ್ಯಾವುದರ ಪರಿವೆಯೇ ಇಲ್ಲದ ಆತ, ಪೇಪರುಗಳನ್ನು ಲೆಕ್ಕ ಮಾಡುತ್ತಿದ್ದ ಏಜಂಟ್‌ನನ್ನೇ ನೋಡುತ್ತ ಧ್ಯಾನ ಮಗ್ನನಾದವನಂತೆ ನಿಂತುಬಿಟ್ಟಿದ್ದ. ಅವನ ಹಾಗೆಯೇ ಬೆಳಿಗ್ಗೆ ಪೇಪರ್‌ ಮಾರುವ ಇನ್ನೂ ಎರಡು-ಮೂರು ಜನ ಅಲ್ಲಿದ್ದರು. ಹೆಚ್ಚೆಂದರೆ ಆಗ ಬೆಳಿಗ್ಗೆ ಐದೂವರೆ ಗಂಟೆಯಾಗಿರಬಹುದು. ಆ ಹೊತ್ತಿನಲ್ಲಿ ಸಣ್ಣಗೆ ನಡುಗುತ್ತಿದ್ದ ಆತ ಮಾತಾಡದೇ ಪೇಪರುಗಳನ್ನು ಇಸಿದುಕೊಂಡು ನಡೆಯತೊಡಗಿದ. ಬೆಳಕು ಹರಿಯುತ್ತಿದ್ದುದರಿಂದ ಒಂದೊಂದೇ ಹ್ಯಾಲೋಜಿನ್‌ ಬಲ್ಬ್‌ಗಳು ಆರತೊಡಗಿದ್ದವು.

ಇಳಿಯುತ್ತಿರುವ ಪಾದಗಳನ್ನು ದಾಟಿಕೊಂಡು ಪೇಪರುಗಳನ್ನು ಎದೆಗವಚಿಕೊಂಡ ಆತ -ಸಿಟಿ ಬಸ್‌ಸ್ಟ್ಯಾಂಡ್‌ ಕಡೆ ಹೋಗುವ- ಫುಟ್‌ ಪಾತ್‌ಗೆ ಬಂದ. ಒಂದು ಬದಿಯಲ್ಲಿ ಪೇಪರುಗಳನ್ನೆಲ್ಲ ಹರಡಿ ಕುಳಿತುಕೊಂಡ. ಈ ಕೆಲಸ ಮಾಡತೊಡಗಿ ಎಷ್ಟೋ ದಿನಗಳಾಗಿವೆ. ತಿಂಗಳು, ವರ್ಷವೇ ಕಳೆದಿರಬಹುದು. ಪೇಪರುಗಳನ್ನೇ ಮಾರುತ್ತಾನಾದರೂ ಆತ ದಿನಾಂಕ ನೋಡುವುದಿಲ್ಲ. ಕೊನೆಗೆ ಹೆಡ್‌ಲೈನ್‌ಗಳನ್ನು ಸಹ. ಸುಮ್ಮನೇ ಪೇಪರ್‌ ರಾಶಿ ಹಾಕಿಕೊಂಡು ಕುಳಿತುಕೊಳ್ಳುತ್ತಾನೆ.

`ದಿ ಹಿಂದೂ' ಎಂದಿತು ಒಂದು ವೃದ್ಧ ಪಾದ.
ಎತ್ತಿ ಕೊಟ್ಟ.

ಅದು ಎರಡು ರೂಪಾಯಿ ಕೊಟ್ಟಿತು. ಇಟ್ಟುಕೊಂಡ.

`ಏಷಿಯನ್‌ ಏಜ್‌' ಎಂದಿತು ಒಂದು ಹೈ ಹೀಲ್ಡ್‌ ಪಾದ. ಅದು ಬೆಳ್ಳಕ್ಕಿಯಷ್ಟು ಬೆಳ್ಳಗಿತ್ತು. ಅದರ ಮುಖವನ್ನೂ ನೋಡದೇ ದುಡ್ಡಿಸಿದುಕೊಂಡು ಪೇಪರ್‌ ಕೊಟ್ಟ. ಇನ್ನೊಂದು ಜೀನ್ಸ್‌ ಹಾಕಿದ ಪಾದ ಟೈಮ್ಸ್‌ ಎಂದಿತು. ಬೆಳ್ಳಗಿನ ಮುಂಡುಟ್ಟ ಪಾದವೊಂದು ಜನ ವಾಣಿ ಎಂದರೆ ಇನ್ನೊಂದು ಇನ್ನೆಂಥದ್ದೋ ವಾಣಿ...ಆತ ಸುಮ್ಮನೇ ಕೊಡುತ್ತ ಹೋದ. ದುಡ್ಡಿಸಿದುಕೊಳ್ಳುತ್ತ ಕಣ್ಣುಜ್ಜಿಕೊಂಡ.

ಒಂಭತ್ತು ಗಂಟೆಯಾಗಿರಬಹುದು. ಬಿಸಿಲು ಏರತೊಡಗಿತ್ತು. ಪೇಪರ್‌ಗಳೆಲ್ಲ ಖರ್ಚಾದವು. ಗಿಜಿಗುಡುತ್ತಿದ್ದ ಮೆಜೆಸ್ಟಿಕ್ಕಿನ ಗೌಜಿಯಲ್ಲಿ ಆತ ಪೇಪರ್‌ ಏಜೆಂಟ್‌ನ ಅಂಗಡಿಯತ್ತ ಹೆಜ್ಜೆ ಹಾಕತೊಡಗಿದ.

ಏಜೆಂಟ್‌ ದುಡ್ಡು ಎಣಿಸಿಕೊಂಡು ಕೊಡಬೇಕಾದ ಕಮಿಷನ್‌ ಹಣವನ್ನು ಕೊಟ್ಟ. ಅದನ್ನು ತೆಗೆದುಕೊಂಡು ಎಣಿಸಿಯೂ ನೋಡದೇ ಈತ ಫುಟ್‌ಪಾತ್‌ಗುಂಟ ನಡೆದ. ನಿದ್ರೆಯಲ್ಲಿಯೇ ನಡೆಯುತ್ತಿರುವಂತಿದ್ದರೂ `ಬಾದಲವಾ ಬರಸಾನ ಲಾ....ಗೆ' ಎಂದು ಆತ ಹಾಡಿಕೊಳ್ಳತೊಡಗಿದ್ದು ಪೇಪರ್‌ ಅಂಗಡಿಯ ತನಕವೂ ಕೇಳುತ್ತಿತ್ತು.

ಬಣ್ಣ ಮಾಸಿದ್ದ ಟೀ ಶರ್ಟ್‌, ಯಾವಾಗಲೋ ತೊಳೆದಿದ್ದ ಜೀನ್ಸ್‌ ಪ್ಯಾಂಟು. ಸವೆದುಹೋದ ಚಪ್ಪಲಿಗಳು. ಕಣ್ಣು ಕೆಂಪಾಗಿರಲಿಲ್ಲ. ಬಾಯಿಯ ಬಳಿ ವಾಸನೆ ಬರುತ್ತಿರಲಿಲ್ಲ. ಆತ ನಡೆಯುವಾಗ ತೂರಾಡುತ್ತಿರಲಿಲ್ಲ. ಆದರೂ ಏಜೆಂಟ್‌ನ ಸ್ನೇಹಿತ ಹೇಳಿದ.
`ಪಾರ್ಟಿ ಬೆಳಿಗ್ಗೆಯೇ ಕುಡಿದಂಗೈತೆ'

ಅದೇ ಸಮಯಕ್ಕೆ ಈತ ಫುಟ್‌ಪಾತ್‌ಮೇಲೆ ನಡೆಯುತ್ತ ಸುಲಭ್‌ ಶೌಚಾಲಯ ತಲುಪಿದ. ದುಡ್ಡು ಕೊಟ್ಟು ಟಾಯ್ಲೆಟ್‌ಗೆ ಹೋಗಿ ಬಂದ. ಸ್ನಾನ ಮಾಡಬೇಕು ಅನಿಸಿರಬೇಕು. ದುಡ್ಡು ಕೊಟ್ಟು ಮಿಂದವನು ಹೊರಟ.

ನೇರವಾಗಿ ಶಾಂತಿ ರೆಸ್ಟೋರೆಂಟ್‌ಗೆ ಬಂದು ಇಡ್ಲಿ ಸಾಂಬಾರ್‌ ತಿಂದು ಟೀ ಹೀರಿದ. ಅಲ್ಲಿಂದ ಹೊರಬೀಳುತ್ತ ಉತ್ಸಾಹದಿಂದ `ಬಾದಲವಾ ಬರಸಾನಾ ಲಾ...ಗೆ' ಎಂದು ಹಾಡಿಕೊಳ್ಳತೊಡಗಿದ. ತಾನು ತುಂಬಾ ಹಗುರವಾದಂತೆನಿಸಿತವನಿಗೆ.
ಎಲ್ಲೋ ಯಾವಾಗಲೋ ಕೇಳಿದ್ದು ಅದು. ಅದನ್ನು ಹಾಡಿದಾಗಲೆಲ್ಲ ಅವನಿಗೆ ಖುಷಿಯಾಗುತ್ತಿತ್ತು ಅಥವಾ ಖುಷಿಯಾದಾಗಲೆಲ್ಲ ಅದನ್ನು ಹಾಡಿಕೊಳ್ಳುತ್ತಿದ್ದ.

ಸಿಟಿ ಬಸ್‌ಸ್ಟ್ಯಾಂಡ್‌ ಕಡೆ ಅನಾಲೋಚಿತ ಹೆಜ್ಜೆ ಹಾಕಿದ.
ಬಾದಲವಾ ಬರಸಾನ ಲಾ...ಗೆ
ನನಿ ನನಿ ದೂಂಡನ ಬರಸ ಬರಸ
ಬಾದಲವಾ ಬರಸಾನ ಲಾ...ಗೆ

ಆತ ಗಾಳಿಯಲ್ಲಿ ತೇಲುತ್ತಿದ್ದ ಅಥವಾ ಕನಿಷ್ಠ ಹಾಗಂತ ಅಂದುಕೊಂಡ. ಅದನ್ನು ಹಾಡುವಾಗಲೆಲ್ಲ ಅವನಿಗೆ ಸಂಭ್ರಮದ ರೆಕ್ಕೆಗಳು ಬಂದುಬಿಡುತ್ತಿದ್ದವು. ಸಿಟಿ ಬಸ್‌ಸ್ಟ್ಯಾಂಡ್‌ `ಬಾದಲವಾ ಬರಸಾನ ಲಾ....ಗೆ' ಹೊಕ್ಕಿದವನು ಒಂದು ಪ್ಲಾಟ್‌ಫಾರ್ಮ್‌ಲ್ಲಿ ನಿಂತ. ಅಲ್ಲಿ ಯಾವುದೋ ಬಸ್ಸು ಬಂತು. ಅದನ್ನು ಹತ್ತಿ `ಬಾದಲವಾ ಬರಸಾನ ಲಾ....ಗೆ' ಕುಳಿತ.

`ನನಿ ನನಿ ದೂಂಡನ ಬರಸ...' ಕೊನೆಯ ಸ್ಟಾಪ್‌ಗೆ ಟಿಕೆಟ್‌ ತೆಗೆದ. ಸುಮ್ಮನೇ ಗೋಡೆಗೆ ಹಾಕಿದ್ದ ಸಿನೆಮಾ ಪೋಸ್ಟರ್‌ಗಳನ್ನೆಲ್ಲ ನೋಡುತ್ತಿದ್ದವನಿಗೆ ಯಾಕೋ`ಬಾದಲವಾ...' ಬಸ್ಸು ಇಳಿದುಬಿಡಬೇಕೆನಿಸಿತು. ಯಾವುದೋ ಸಿಗ್ನಲ್‌ನಲ್ಲಿ ಇಳಿದು `ಬಾದಲವಾ ಬರಸಾನ ಲಾ...ಗೆ' ನಡೆಯತೊಡಗಿದ.
ಯಾವುದೋ ಥೀಯೇಟರ್‌ ಹೊಕ್ಕಿ ಕೌಂಟರ್‌ನಲ್ಲಿ ನಿಂತು ಟಿಕೆಟ್‌ ಪಡೆದುಕೊಂಡ. `ಇದು ಆರ್ಟ್‌ ಮೂವಿ ಇದ್ದಂಗಿದೆಯಂತೆ ಗುರೂ...'ಎಂದ ಪಕ್ಕದಲ್ಲಿದ್ದವನು. ಈತ ಏನೂ ಹೇಳಲಿಲ್ಲ. ಸುಮ್ಮನೇ ಹೋಗಿ ಸಿನೆಮಾ ನೋಡತೊಡಗಿದ. ಬೆಳಗಿನ ಶೋ ಆಗಿದ್ದರಿಂದ ಜನ ಕಮ್ಮಿಯಿದ್ದರು.
ಸಿನೆಮಾ ಮುಗಿದ ಮೇಲೆ ಹೊರಬಿದ್ದು ಏನೋ ತಿಂದು ಮತ್ತೆ ಮೆಜೆಸ್ಟಿಕ್ಕಿಗೆ ಬಂದು ಯಾವುದೋ ಫ್ಲಾಟ್‌ ಫಾರ್ಮ್‌ನಲ್ಲಿ ನಿಂತ.
`ಬಾದಲವಾ ಬರಸಾನ ಲಾ...ಗೆ' ಬಸ್ಸು ಹತ್ತಿದ.
ಕೊನೆಯ ಸ್ಟಾಪ್‌ಗೆ ಟಿಕೆಟ್‌ ತೆಗೆದುಕೊಂಡು ಕಿಟಕಿ ಪಕ್ಕದ ಸೀಟ್‌ನಲ್ಲಿ ಕುಳಿತು ಜಾಹೀರಾತು ಫಲಕಗಳ ಮೇಲೆ ಕಣ್ಣಾಡಿಸುತ್ತ ಹೋಗತೊಡಗಿದ. ಬಸ್ಸು ಕಾರ್ಪೋರೇಷನ್‌ ಸ್ಟಾಪ್‌ಗೆ ಬರುತ್ತಲೇ ಜ್ಞಾನೋದಯವಾದಂತೆ ದಡಬಡನೇ ಎದ್ದು ಹೋಗಿ ಬಸ್ಸು ಇಳಿದ.
`ಬರಸಾನಕೋ ಲಾ..ಗೆ
ಬಾದಲವಾ ಬರಸಾನ ಲಾ...ಗೆ'

***

ಕುದುರೆಯ ಮೇಲೆ ಗಸ್ತು ತಿರುಗುತ್ತಿದ್ದ ಪೊಲೀಸರು ಬಂದು ತಿವಿಯುವ ತನಕ ಈ ಜಗತ್ತಿನ ಖಬರೇ ಇಲ್ಲದವನಂತೆ ಸೆಂಟ್ರಲ್‌ ಲೈಬ್ರರಿ ಎದುರುಗಡೆಯಿರುವ ಪಾರ್ಕಿನ ಕಲ್ಲುಬೆಂಚಿನ ಮೇಲೆ ಈತ ಬಿದ್ದುಕೊಂಡಿದ್ದ.

ಸಾಮಾನ್ಯವಾಗಿ ಪೊಲೀಸರು ಅಲ್ಲಿ ತಿರುಗುವುದು ಪ್ರೇಮಿಗಳ ಚಟುವಟಿಕೆ ನಿಯಂತ್ರಿಸಲು. ಆದರೆ ಇಂದು ಯಾರೂ ಸಿಕ್ಕದಿರುವುದರಿಂದಲೋ ಏನೋ. ಈತ ಬೆಂಚಿನ ಮೇಲೆ ಮಲಗಿದ್ದೇ ಅವರಿಗೆ ಅಪರಾಧವಾಗಿ ಕಂಡಿರಬೇಕು.

`ಬೋ...ಮಗನೆ..ಇಲ್ಲಿ ಬೆಂಚಿರೋದು ಕುತ್ಕೊಳ್ಳೊದಕ್ಕೆ. ಮಲಗುವುದಕ್ಕಲ್ಲ' ಎಂದ ಅವರಲ್ಲೊಬ್ಬ.
ಬೆಂಗಳೂರಿಗೆ ಬಂದ ಹೊಸತರಲ್ಲಿ ಇಲ್ಲೇ ಮಲಗಿದ್ದಾಗ ಒಮ್ಮೆ ಪೊಲೀಸರು ಆತನನ್ನು ತದಕಿ ಹೀಗೇ ಕೇಳಿದ್ದರು. `ನಾನು ಒಬ್ಬನೇ ಮಲಕ್ಕೊಂಡಿದೀನಿ' ಅಂತ ಆಗ ಹೇಳಿ ಮತ್ತೊಂದು ಹೊಡೆತ ತಿಂದಿದ್ದ.

ಆದರೆ ಈ ಸಲ ಅಂಥದ್ದೇನನ್ನೂ ಹೇಳಲಿಲ್ಲ. ಸುಮ್ಮನೇ ಅಲ್ಲಿಂದ ಎದ್ದು ಹೊರಟುಬಿಟ್ಟವನನ್ನು ಪೊಲೀಸರೂ ಮತ್ತೆ ಕೇಳಲಿಲ್ಲ.
ಸಂಜೆಯಾಗುತ್ತ ಬಂದಿತ್ತು. ಮರಗಳ ಮಧ್ಯದಿಂದ ವಕ್ರವಾಗಿ ತೂರಿಕೊಂಡು ಬರುತ್ತಿದ್ದ ಇಳಿಬಿಸಿಲಿಗೆ ಹುಲ್ಲು ಹಾಸು ಮೌನವಾಗಿ ತೋಯುತ್ತಿತ್ತು. ಅದನ್ನು ಖುಷಿಯಿಂದ ನೋಡುತ್ತ ಹಾಗೇ ವಿಧಾನಸೌಧ ವೃತ್ತದತ್ತ ಬರುತ್ತಿದ್ದವನು ತಳ್ಳುಗಾಡಿಯವನ ಹತ್ತಿರ ಜೋಳದ ಕುಂಡಿಗೆ ಬೇಯಿಸಿಕೊಂಡು ತಿನ್ನತೊಡಗಿದ. ಹಾಗೆ ತಿನ್ನುತ್ತ ತಿನ್ನುತ್ತ `ಬಾದಲವಾ ಬರಸಾನ ಲಾ...ಗೆ' ಎಂದು ಬೇರೆ ಬೇರೆ ಸ್ವರ ವಿನ್ಯಾಸಗಳೊಂದಿಗೆ ಹೇಳಿಕೊಳ್ಳುತ್ತ ಯಾವುದೋ ಬಸ್‌ ಸ್ಟಾಪ್‌ಗೆ ಬಂದ. ಅಲ್ಲಿಂದ ಯಾವುದೋ ಬಸ್ಸು ಸಿಕ್ಕಿತು ಅಥವಾ ಸಿಕ್ಕಿದ ಬಸ್ಸನ್ನು `ಬಾದಲವಾ ಬರಸಾನ ಲಾ...ಗೆ' ಹತ್ತಿದ.

***

ಬಸ್ಸು ಎಲ್ಲೆಲ್ಲಿಗೋ ಹೋಗುತ್ತಿತ್ತು. ಆತ ಸೀಟಿನ ಒಂದು ಮೂಲೆಗೆ ಕುಳಿತು ತೂಕಡಿಸತೊಡಗಿದ. ಕೊನೆಯ ಸ್ಟಾಪ್‌ಗೆ ಟಿಕೆಟ್‌ ತೆಗೆದಿದ್ದರಿಂದ ತಲೆಬಿಸಿ ಇರಲಿಲ್ಲ.

ಎಲ್ಲೋ ಹೋಗಿ ಬಸ್ಸು ನಿಂತುಕೊಂಡಿತು.

ಇಳಿದ.

ಅದು ನಗರದ ಹೊರಭಾಗದ ಕೊನೆಯ ಸ್ಟಾಪ್‌ಗೆ ಹೋಗಿ ನಿಂತಿತ್ತು. ಹೊರಭಾಗವಾದರೂ ಅಲ್ಲಿನ ಮಾರುಕಟ್ಟೆ ಗಿಜಿಬಿಜಿಗುಡುತ್ತಿತ್ತು. ಅಲ್ಲಿಳಿದವನೇ ಮೇಲಿಂದ ಕೆಳಕ್ಕೆ ಓಡಾಡತೊಡಗಿದ.

`ಬಾದಲವಾ ಬರಸಾನ ಲಾ...ಗೆ
ನನಿ ನನಿ ದೂಂಡನ ಬರಸ ಬರಸ...

...................

ಬಾದಲವಾ ಬರಸಾನ ಲಾ...ಗೆ'

ತಾನು ಎಷ್ಟು ಹಗುರವಾಗಿದ್ದನೆಂದರೆ ಗಾಳಿಯಲ್ಲಿ ತೇಲುತ್ತಿದ್ದೇನೆ ಅಥವಾ ಆಕಾಶದಲ್ಲಿ ಗಂಧರ್ವರಂತೆ ಹಾರುತ್ತಿದ್ದೇನೆ ಎಂದು ಅವನಿಗೆ ಅನಿಸತೊಡಗಿತ್ತು. ಆ ಮಾರುಕಟ್ಟೆಯ ಗಿಜಿಬಿಜಿಯಲ್ಲಿ ಆತನನ್ನು ಯಾರೂ ನೋಡಲೂ ಇಲ್ಲ, ಕಳ್ಳೆಕಾಯಿ ಮಾರುವ ತಳ್ಳು ಗಾಡಿಯವನೊಬ್ಬನನನ್ನು ಬಿಟ್ಟು. ಏಕೆಂದರೆ ಆತನ ಬಳಿ ಇವನು ಒಂದು ಪಾವು ಕಳ್ಳೆಕಾಯಿ ಹಾಕಿಸಿಕೊಂಡಿದ್ದ.

***

ಮೆಜೆಸ್ಟಿಕ್ಕಿಗೆ ಬರುವ ಹೊತ್ತಿಗೆ ಎಷ್ಟೋ ಹೊತ್ತಾಗಿತ್ತು.
ರಾತ್ರಿಯಾಗಿ ಕನಿಷ್ಠ ಎರಡು ತಾಸಾದರೂ ಕಳೆದಿರಬೇಕು. ಪಾದಗಳು ಮತ್ತೆ ಚುರುಕುಗೊಂಡಿದ್ದವು. ಈಗ ಒಂದೊಂದಾಗಿ ಬಸ್ಸು ಯಾವ್ಯಾವುದೋ ಅಪರಿಚಿತ ಊರುಗಳಿಗೆ ಹೋಗತೊಡಗಿ ಜನಸಮುದ್ರ ಕರಗತೊಡಗಿತ್ತು. ಹ್ಯಾಲೋಜಿನ್‌ ಬಲ್ಬ್‌ಗಳು ಮತ್ತು ಝಗಮಗಿಸುವ ಬೆಳಕಿನಲ್ಲಿ ಮೆಜೆಸ್ಟಿಕ್ಕು ಮತ್ತೆ ಹಳಹಳದಿಯಾಗಿ, ನೀಲಿ-ಕಪ್ಪಾಗಿ ಕಾಣಿಸುತ್ತಿತ್ತು. ಆತ ಶಾಂತಿ ರೆಸ್ಟೋರೆಂಟ್‌ನಲ್ಲಿ ಮೊಸರನ್ನ ತಿಂದು ಸೀದಾ ಮುಖ್ಯ ಬಸ್‌ಸ್ಟ್ಯಾಂಡ್‌ನತ್ತ ನಡೆಯತೊಡಗಿದ.

`ಬಾದಲವಾ ಬರಸಾನ ಲಾ...ಗೆ'

***

ಬಸ್ಸುಗಳು ಸಾಲಾಗಿ ನಿಂತಿದ್ದವು.

ಮಡಿಕೇರಿ, ಧರ್ಮಸ್ಥಳ, ಪುತ್ತೂರು, ಶಿರಸಿ, ಶಿವಮೊಗ್ಗ,ಹುಬ್ಬಳ್ಳಿ, ಬೆಳಗಾವಿ.......ಸಣ್ಣ ಸಣ್ಣ ಊರುಗಳಿಗೂ ಬೆಂಗಳೂರು ಹತ್ತಿರ. ಆದರೆ ಬೆಂಗಳೂರಿನಿಂದ ಆ ಸಣ್ಣ ಸಣ್ಣ ಊರುಗಳು ಎಷ್ಟೆಲ್ಲ ದೂರ. ಬಸ್‌ಸ್ಟ್ಯಾಂಡು ರಶ್‌ ಆಗಿತ್ತು. ಕಾರಿಡಾರ್‌ನಲ್ಲಿ ಪಾದಗಳು ಚುರುಕಾಗಿ ಚಲಿಸುತ್ತಿದ್ದವು. ಮಗು ಹೊತ್ತ ಪಾದಗಳು, ಸೂಟ್‌ ಕೇಸ್‌ ಹಿಡಿದು ನಡೆವ ಪಾದಗಳು, ಲಯ ತಪ್ಪಿದ ಪಾದಗಳು, ಸೋತು ಬಸವಳಿದ ಪಾದಗಳು. ಪಾದಗಳ ಪಕ್ಕದಲ್ಲಿ ಪುಟ್ಟ ಪುಟ್ಟ ಪಾದಗಳು!

ಬಸ್ಸಿನ ಹಾರ್ನ್‌ ಸದ್ದು, ಕಂಡಕ್ಟರ್‌ಗಳ ಕಿರುಚಾಟ, ಡ್ರೈವರ್‌ಗಳ ಜಗಳ, ಧ್ವನಿವರ್ಧಕ ಕೂಗುವ ಅನೌನ್ಸ್‌ಮೆಂಟ್‌ಗಳು ಎಲ್ಲದರ ಮಧ್ಯೆ ಟೀವಿಯಲ್ಲಿ ಸಿನೆಮಾ ಹಾಡು-ಅಡ್ವರ್‌ಟೈಸ್‌ಮೆಂಟು. ಒಟ್ಟಾಗಿ ಅಲ್ಲಿ ಗದ್ದಲದ ಒಂದು ಕೋಲಾಜ್‌ ಸೃಷ್ಟಿಯಾಗಿತ್ತು.
ಸುಮಾರು ಹೊತ್ತು ಕಾದ. ರಶ್‌ ಇದ್ದಾಗ ಕಾಯಬೇಕಾಗುತ್ತದೆ. ಇದು ಅಭ್ಯಾಸವಿದ್ದದ್ದೇ. ಕೊನೆಗೂ ಬಸ್ಸೊಂದು ಬರುತ್ತಲೇ ಮೂಲೆಯ ಸೀಟಿನಿಂದ ಆ ಜೋಡಿ ಎದ್ದು ಹೋಯಿತು. ಅಲ್ಲಿ ಹೋಗಿ ಕುಳಿತುಕೊಂಡ.

ಸುಮಾರು ಹೊತ್ತು ಮನಸ್ಸಿನಲ್ಲೇ `ಬಾದಲವಾ ಬರಸಾನ ಲಾ...ಗೆ' ಎಂದು ಗುನುಗಿಕೊಳ್ಳುತ್ತಿದ್ದ. ಒಂದಿಷ್ಟು ಹೊತ್ತು ಟಿವಿ ನೋಡುತ್ತ ಧ್ಯಾನ ಮಾಡುವವನಂತೆ ಕುಳಿತಿದ್ದ. ಇನ್ನೂ ಸುಮಾರು ಸಮಯ ಯಾವುದೋ ಬಸ್ಸಿಗಾಗಿ ಕಾಯುತ್ತಿರುವ ದಾರಿಹೋಕನಂತೆ ಬಸ್ಸುಗಳನ್ನೆಲ್ಲ ನೋಡುತ್ತ ಕುಳಿತ.

ಜನ ಕರಗತೊಡಗಿದರು.

ಬಸ್ಸುಗಳು ಒಂದೊಂದಾಗಿ ಖಾಲಿಯಾದವು. ಜೋಂಪು ನಿದ್ದೆ. ಎಷ್ಟೊತ್ತಾಗಿತ್ತೊ. ಪೊಲೀಸ ಬಂದು ಲಾಠಿಯಲ್ಲಿ ತಿವಿದ. ಅವನಿಗೆ ಇದೂ ಮಾಮೂಲೇ . ಕಣ್ತೆರೆದ. ಪೊಲೀಸ ಏನೋ ಹೇಳಿದ. ಒಮ್ಮೆ ಎದ್ದವನು ಅವನಿಗೆ ಏನೋ ಕೊಟ್ಟು ಅಲ್ಲಿಯೇ ಕೂತು ತೂಕಡಿಸತೊಡಗಿದ.

ಕೆಲ ಬಸ್ಸುಗಳು ಬಂದರೆ ಮತ್ತೆ ಕೆಲವು ಹೊರಟವು.

ಕೆಲವು ಪಾದಗಳು ಇಳಿದರೆ ಮತ್ತೆ ಕೆಲವು ಹತ್ತಿಕೊಂಡವು.

ಕೂತಲ್ಲಿಯೇ ಈತ ನಿದ್ದೆಹೋಗಿದ್ದ.

***

ಇನ್ನೂ ಬೆಳಗಾಗಿಲ್ಲ. ಏಜೆಂಟ್‌ ಪೇಪರ್‌ ಎಣಿಸುತ್ತಿರುವುದನ್ನು ಧ್ಯಾನ ಮಗ್ನನಾಗಿ ನೋಡತೊಡಗಿದ. ಚಳಿಯಿದ್ದುದರಿಂದ ಸಣ್ಣಗೆ ನಡುಗುತ್ತಿದ್ದ. ಹ್ಯಾಲೋಜಿನ್‌ ಬಲ್ಬ್‌ಗಳು ಉರಿಯುತ್ತಲೇ ಇದ್ದವು.

ಬೇರೆ ಬೇರೆ ಊರುಗಳಿಂದ ಬಸ್ಸುಗಳು ನುಗ್ಗತೊಡಗಿ ಪಾದಗಳು ಇಳಿಯತೊಡಗಿದವು. ಪೇಪರ್‌ ಎಣಿಸಿಕೊಂಡು ಮತ್ತೆ ಅದೇ ಜಾಗಕ್ಕೆ ಹೋಗಿ ಕುಳಿತ.
`ಟೈಮ್ಸ್‌' ಎಂದಿತು ಒಂದು ಹೈ ಹಿಲ್ಡ್‌ ಪಾದ. ಈತ ಕೊಟ್ಟ. ಚಿಲ್ಲರೆಯಿಲ್ಲದ್ದಕ್ಕೆ ಅವಳು ಐದೂ ರೂಪಾಯಿಗಳನ್ನು ಅವನಿಗೇ ಕೊಟ್ಟು ನಡೆದಳು. ಮತ್ತೆ ಕೆಲವು ಪಾದಗಳು ಹಿಂದುವನ್ನು, ಯಾವುದೋ ವಾಣಿಯನ್ನು ಕೊಂಡುಕೊಂಡವು. ಈತ ತಂದಿದ್ದ ಎಲ್ಲ ಪತ್ರಿಕೆಗಳೂ ಖಾಲಿಯಾಗುವ ಹೊತ್ತಿಗೆ ಮತ್ತೆ ಬಿಸಿಲೇರತೊಡಗಿತ್ತು.

ಈತ ನಡೆದುಕೊಂಡು ಏಜೆಂಟ್‌ ಬಳಿ ಬಂದು ಮೌನವಾಗಿ ಕಮಿಷನ್‌ ಇಸಿದುಕೊಂಡು ನಡೆದುಕೊಂಡು ಹೋಗತೊಡಗಿದ. ಆತ ನಡೆಯುತ್ತಿಲ್ಲ, ಹಗುರವಾಗಿ ಹಾರುತ್ತಿದ್ದಾನೆ ಎಂದು ಈಗ ಆ ಏಜೆಂಟ್‌ಗೂ ಅನಿಸಿತು.

`ಬಾದಲವಾ ಬರಸಾನ ಲಾ...ಗೆ'
ಸುಲಭ್‌ ಶೌಚಾಲಯ ತಲುಪಿದ್ದ.

***

`ಬಾದಲವಾ ಬರಸಾನ ಲಾ...ಗೆ' ಮಾಗಿ ಕಳೆಯಿತು.

ಬೇಸಿಗೆ ಕಾಲ`ಬಾದಲವಾ...' ಆರಂಭವಾಯಿತು. ಸ್ವಲ್ಪ ಸೆಖೆ ಎನಿಸವಂಥ ವಾತಾವರಣ. ಹವಾ ಬದಲಾವಣೆಯಿಂದ ಆತನಿಗೆ ಆಗೀಗ ಸಣ್ಣ ಪುಟ್ಟ ಕಾಯಿಲೆಗಳೂ ಬಂದವು. ಬಂದಂತೆ ಕಮ್ಮಿಯೂ ಆದವು. ಆದರೆ ಆತ`ಬಾದಲವಾ ಬರಸಾನ ಲಾ...ಗೆ' ಎಂದು ಹಾಡಿಕೊಂಡು ತಿರುಗಾಡುತ್ತ ಉಳಿದುಬಿಟ್ಟ. ಆ ಪೇಪರ್‌ ಏಜೆಂಟ ಈತನನ್ನು ಈಗ ಬಾದಲವಾ ಎಂದೇ ಕರೆಯತೊಡಗಿದ್ದ.

***

ಬೇಸಿಗೆ ಕಾಲವೂ ಕಳೆಯುತ್ತ ಬಂದಿತ್ತು.

ಮಳೆಗಾಲ ಆರಂಭದ ಲಕ್ಷಣವಾಗಿ ಒಂದೆರಡು ಮಳೆಯೂ ಬಂತು. ಬಾದಲವಾಗೆ ಹೆಚ್ಚೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ. ಬೆಳಿಗ್ಗೆ ಪಾದಗಳೊಂದಿಗೆ ವ್ಯಾಪಾರ ಮಾಡುತ್ತಿದ್ದ. ಅಲ್ಲಿಂದ ಮುಂದಿನದೆಲ್ಲ ಹೇಗೆ ಹೇಗೋ ಕಳೆದುಹೋಗುತ್ತಿದ್ದವು.

ಅವನಿಗೆ ಅಷ್ಟಷ್ಟಾಗಿ ಎಲ್ಲವೂ ಮರೆತುಹೋಗತೊಡಗಿತು.

ಪೂರ್ತಿ ಮರೆತೇ ಹೋಗುವುದರಲ್ಲಿತ್ತು,

ಹೀಗಿರುವಾಗಲೇ ಆತ ಬಂದಿದ್ದು.

ಒಂದು ಬೆಳಿಗ್ಗೆ ಬಸ್ಸಿಳಿದು ಬಂದ ಪಾದವೊಂದು `......ಪೇಪರ್‌' ಎಂದಿತು.

ಈತ ಕೊಟ್ಟ. ಆದರೆ ಆ ಪಾದ ನೂರು ರೂಪಾಯಿ ನೋಟು ಕೊಟ್ಟಿತು. ಈತನಲ್ಲಿ ಚಿಲ್ಲರೆ ಇರಲಿಲ್ಲ.
ಚಿಲ್ಲರೆ ಎನ್ನುವಂತೆ ಆ ಪಾದದ ಮುಖ ನೋಡಿದ.

ಮುಖ ನೋಡಿದ ಅಷ್ಟೆ. ಆ ಮುಖದಲ್ಲಿ ಏನೋ ಬದಲಾವಣೆ ಕಂಡುಬಂತು. ಅದನ್ನು ಈತ ಗಮನಿಸಲಿಲ್ಲ. ಆದರೆ ಬಾದಲವಾನನ್ನು ಆತ ಗುರುತಿಸಿದ್ದ. ಗುರುತಿಸಿದೊಡನೆಯೇ ಎಕ್ಸೆಟ್‌ ಆಗಿ `ಅರೇ...ನೀನು' ಎಂದ. ಈತ ಪ್ರತಿಕ್ರಿಯಿಸಲಿಲ್ಲ. ಆದರೆ ಅವನು ಸುಲಭಕ್ಕೆ ಬಿಡುವ ಗಿರಾಕಿಯಲ್ಲ. ಸಖತ್‌ ಚಾಲಾಕಿ ಆಸಾಮಿ. ಇವನನ್ನು ಹಿಡಿದುಕೊಂಡು ಪ್ರಶ್ನೆ ಮಾಡತೊಡಗಿದ.

ಪೇಪರ್‌ ಮಾರಿ ಮುಗಿಯುವ ತನಕ ಜೊತೆಯೇ ಉಳಿದುಬಿಟ್ಟ. ಎಲ್ಲ ಮುಗಿದ ಮೇಲೆ ಜೊತೆಯೇ ಪೇಪರ್‌ ಏಜೆಂಟ್‌ ತನಕವೂ ಬಂದ. ಈತ ಹೆಚ್ಚು ಮಾತಾಡದಿದ್ದರೂ ಆತನೇ ಕೆದಕುತ್ತಿದ್ದ.

ಸಂಜೆಯ ತನಕ ಈತನೊಂದಿಗೆ ಕಳೆದ ಮೇಲೆ ಬಹುಶಃ ಅರ್ಥವಾಗಿರಬೇಕು. ಏನೇ ಮಾಡಿದರೂ ಕೇಳದೇ ಆತನನ್ನು ಎಳೆದುಕೊಂಡು ಒಂದು ಹೊಟೇಲ್‌ ರೂಮಿಗೆ ತಂದು ಕೂಡಿಸಿ ತನ್ನದೇ ಒಂದು ಜೊತೆ ಬಟ್ಟೆ ತೊಡಿಸಿದ. ಈತನನ್ನು ಮಾತಿಗೆಳೆದು ತೀರ ಮಲಗುವ ಮುನ್ನ ಗಟ್ಟಿಯಾಗಿ ಒಂದು ಪ್ರಶ್ನೆ ಕೇಳಿದ.

`ಯಾಕೆ ಹೀಗೆ?'

`ಬಾದಲವಾ ಬರಸಾನ ಲಾ...ಗೆ' ಹೇಳಿದ.

`ಯಾಕೆ ಹೀಗೆ?' ಗಟ್ಟಿಯಾಗಿ ಕೇಳಿದ. ಎಷ್ಟೋ ಹೊತ್ತಿನಿಂದ ಎಚ್ಚರವಿಲ್ಲದೇ ನಡೆಯುತ್ತಿದ್ದವನನ್ನು ಹಠಾತ್ತನೇ ಎಚ್ಚರಿಸಿದಂತಾಯಿತು ಅಥವಾ ಎಚ್ಚರವಾಗಿ ನಡೆಯುತ್ತಿದ್ದವನನ್ನು ಹಠಾತ್‌ ಎಚ್ಚರತಪ್ಪಿಸಿದಂತಾಯಿತು!

***

ಎಷ್ಟೋ ಕಾಲದ ಬಳಿಕ ಆತ ಯೋಚಿಸಿದ: ಯಾಕೆ ಹೀಗೆ?

ಯೋಚನೆ ಮರಿಹಾಕತೊಡಗಿತು.

ಮರಿಯೋಚನೆಗಳೂ ಮರಿ ಹಾಕತೊಡಗಿದವು.

ಯೋಚನೆಗಳ ಸಂಖ್ಯಾಸ್ಫೋಟವಾಗಿ ಆತ ಮಾತಾಡತೊಡಗಿದ.

ಮರುದಿನ ಬೆಳಿಗ್ಗೆ ಎದ್ದವನೇ ಚಳಿಯಲ್ಲಿ ಹೋಗಿ ನಿಂತುಕೊಂಡು ಏಜೆಂಟ್‌ ಪೇಪರ್‌ ಎಣಿಸುವುದನ್ನು ತಾನೂ ಎಣಿಸಲಾರಂಭಿಸಿದ.

.............

ಅದರ ಮರುದಿನ ಪೇಪರ್‌ ಏಜೆಂಟ್‌ನನ್ನು`ಬೇಗ ಬೇಗ ಕೊಡು' ಎಂದು ಒತ್ತಾಯಿಸಿದ.
ಆತ ಬಾದಲವಾ ಎಂದು ಕರೆದಾಗ ಈತ ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಏಜೆಂಟ್‌ಗೆ ಮಾತ್ರ ಈತನ ಹೊಸ ವರಸೆ ಕಂಡು ಆಶ್ಚರ್ಯವಾಗಿತ್ತಷ್ಟೆ.
ಪೇಪರ್‌ ತೆಗೆದುಕೊಂಡವನೇ ದಿನವೂ ಹೋಗಿ ಕೂರುತ್ತಿದ್ದ ಜಾಗವನ್ನು ಬದಲಾಯಿಸಿ ಹೆಚ್ಚು ಜನರು ಹಾದು ಹೋಗುವ ಫುಟ್‌ ಪಾತ್‌ ಆಯ್ಕೆ ಮಾಡಿಕೊಂಡ. ಪೇಪರ್‌ ಹಾಕಿಕೊಂಡು ಕೂತವನು ಕೂಗತೊಡಗಿದ.

`ಪೇಪರ್‌ ಪೇಪರ್‌'

ಪೇಪರ್‌ ಬೇಗ ಬೇಗ ಖಾಲಿಯಾಗತೊಡಗಿತು. ಆದರೆ ಕೆಲವೊಂದು ಪೇಪರ್‌ ಖರ್ಚಾಗುತ್ತಲೇ ಇಲ್ಲ ಎನಿಸಲಾರಂಭಿಸಿತು. ಜನ ಕೆಲ ಪತ್ರಿಕೆಗಳನ್ನೇ ಕೇಳಿ ತೆಗೆದುಕೊಂಡು ಹೋಗುವುದನ್ನು ಗಮನಿಸಿದ. ಆದರೆ ಆ ಪತ್ರಿಕೆಗಳ ಪ್ರತಿಗಳು ಕಡಿಮೆಯಿದ್ದವು.

ಜನರು ಆ ಪತ್ರಿಕೆ ಇಲ್ಲವಾ ಎಂದು ಈತನನ್ನು ವಿಚಾರಿಸತೊಡಗಿದರು. ಅದಕ್ಕೆ `ಖರ್ಚಾಯ್ತು...ಇದು ಕೊಡಲಾ' ಎಂದು ಕೇಳಿದ. ಕೆಲವರು ಹೂಂ ಎಂದರು ಮತ್ತೆ ಕೆಲವರು ಉಹೂಂ ಎಂದರು.

***

ಹಾಗೆ ಒಂದು ವಾರ ಕಳೆಯಿತು.

ಆ ಇಡೀ ವಾರ ಬಾದಲವಾ ಆತನೊಂದಿಗೆ ಹೋಟೆಲ್‌ ರೂಮಿನಲ್ಲಿದ್ದ. ಬೆಳಿಗ್ಗೆಯೆದ್ದು ಹೋಗುತ್ತಿದ್ದ. ಈ ದಿನವೂ ಬೆಳಿಗ್ಗೆ ಎದ್ದು ಬಂದವನು ಪೇಪರ್‌ ಏಜೆಂಟ್‌ ಹತ್ತಿರ ಬಂದು` ಆ ಪತ್ರಿಕೆ ಬೇಡ...ಈ ಪತ್ರಿಕೆ ಕಾಪಿಗಳು ಹತ್ತು ಕಡಿಮೆಯಿರಲಿ. ಇನ್ನೊಂದು ಇಂಗ್ಲೀಷ್‌ ಪತ್ರಿಕೆಯ ಕಾಪಿಗಳು ಇನ್ನೂ ಐವತ್ತಿರಲಿ...ಬೇಗ ಬೇಗ' ಎಂದ.

ಆತ ಇವನನ್ನೊಮ್ಮೆ ವಿಸ್ಮಯದಿಂದ ನೋಡಿ ಅಷ್ಟನ್ನೇ ಎಣಿಸಿಕೊಟ್ಟ.

ಈತ ಲಗುಬಗೆಯಿಂದ ಪೇಪರ್‌ ಮಾರುವ ಜಾಗಕ್ಕೆ ಬಂದು `ಪೇಪರ್‌ ಪೇಪರ್‌' ಎಂದ.

ದಿನ ನಿತ್ಯದಂತೆ ಜನ ಅವನಲ್ಲಿ ಪೇಪರ್‌ ಕೊಳ್ಳತೊಡಗಿದರು. ಆದರೆ ಅವನಿಗೆ ಇದಕ್ಕಿಂತ ಭಿನ್ನವಾದುದೇನಾದರೂ ತಾನು ಮಾಡಬೇಕು ಎಂಬ ಚಡಪಡಿಕೆ ಶುರುವಾಗಿತ್ತು.

ಹಾಗೇ ಯೋಚಿಸುತ್ತಿದ್ದವನಿಗೆ ಐಡಿಯಾ ಥಟ್ಟನೇ ಹೊಳೆಯಿತು.

`ಪೇಪರ್‌...ಪೇಪರ್‌

ಅಪ್ಘಾನಿಸ್ಥಾನದ ಮೇಲೆ ಬಾಂಬ್‌ ಸುರಿಮಳೆ

ಕಾರ್ಗತ್ತಲ ಕಂದಹಾರ್‌ನಲ್ಲಿ ಕ್ಷಿಪಣಿ ಬೆಳಕು

ಪೇಪರ್‌ ಪೇಪರ್‌' ಎಂದ. ಜನ ಜಮಾಯಿಸತೊಡಗಿದರು.

`ಸಚಿನ್‌ ತೆಂಡೂಲ್ಕರ್‌ ಶತಕ

ಹರಭಜನ್‌ ಮಾಂತ್ರಿಕ ಬೌಲಿಂಗ್‌...ಪೇಪರ್‌ ಪೇಪರ್‌'

ಪೇಪರ್‌ಗಳು ಖರ್ಚಾದವು.

ಆತ ಇನ್ನೊಂದು ಸುತ್ತು ಪೇಪರ್‌ ತಂದ.

ಅದೂ ಖರ್ಚಾಯಿತು. ಆ ದಿನ ಏಜೆಂಟ್‌ ಹತ್ತಿರ ಆತ ಕಮಿಷನ್‌ ಹೆಚ್ಚು ಕೊಡಿ ಎಂದು ಒತ್ತಾಯ ಮುಂದಿಟ್ಟಿದ್ದ ಮತ್ತು ತನ್ನ ಹಾಗೇ ಫುಟ್‌ ಪಾತ್‌ನ ಮತ್ತೊಂದು ತುದಿಯಲ್ಲಿ ಕೂತು ಪೇಪರ್‌ ಮಾರುವವನ್ನು ಎಬ್ಬಿಸುವುದರ ಬಗ್ಗೆ ನೀಲಿ ನಕ್ಷೆ ತಯಾರು ಮಾಡುತ್ತಿದ್ದ.

***

ತಾನು ಮಧ್ಯಾಹ್ನವೆಲ್ಲ ವ್ಯರ್ಥವಾಗಿ ಕಳೆಯುತ್ತಿದ್ದೇನೆ ಎಂದು ಬಾದಲವಾಗೆ ಅನಿಸಲಾರಂಭಿಸಿತ್ತು. ಆತ ಸಿನೆಮಾ ನೋಡುವುದನ್ನು ಈಗ ಬಿಟ್ಟುಬಿಟ್ಟಿದ್ದ. ಸೆಂಟ್ರಲ್‌ ಲೈಬ್ರರಿಯ ಎದುರುಗಡೆಯ ಪಾರ್ಕಿಗೆ ಹೋಗುವುದೂ ನಿಂತೇ ಹೋಯಿತು. ಹಾಗಾಗಿ ಪೇಪರ್‌ ಮಾರಿಯಾದ ಮೇಲೆ ಏನು ಮಾಡಬೇಕೆಂದು ಆತನಿಗೆ ಯೋಚನೆಯಾಗತೊಡಗಿತು.

ಅದಕ್ಕೆ ಒಂದು ಪರಿಹಾರವನ್ನೂ ಕಂಡುಕೊಂಡ.

ಬೆಳಿಗ್ಗೆ ಪೇಪರ್‌ ಕೊಂಡ ರೀತಿಯಲ್ಲಿ ಜನ ಅನಂತರ ಪೇಪರ್‌ ಕೊಳ್ಳುವುದಿಲ್ಲ. ಹಾಗಾಗಿ ಹತ್ತು ಗಂಟೆಯ ಅನಂತರ ಸಿಟಿ ಬಸ್ಸುಗಳನ್ನು ಹತ್ತಿ ನಕಾಶೆಗಳನ್ನು ಮಾರಲಾರಂಭಿಸಿದ. ಕರ್ನಾಟಕದ ನಕಾಶೆ, ಬೆಂಗಳೂರಿನ ರೋಡ್‌ ಮ್ಯಾಪ್‌ಗಳ ಬಗ್ಗೆ ಆತನ ಮಾತು ಕೇಳಿದವರೆಲ್ಲರಿಗೂ ಅದನ್ನು ಕೊಂಡುಕೊಳ್ಳುವ ಮನಸ್ಸಾಗುತ್ತಿತ್ತು.

ಸಂಜೆ ಹೊತ್ತಿಗೆ ಸಂಜೆ ಪತ್ರಿಕೆಗಳನ್ನು ಮಾರಾಟ ಮಾಡತೊಡಗಿದ. ಅವನ ದುಡಿಮೆಗೆ ಸರಿಯಾದ ಪ್ರತಿಫಲವೂ ಸಿಕ್ಕತೊಡಗಿತು ಮತ್ತು ಆತ ಯೋಚಿಸಿದಂತೆಲ್ಲ ಆತನಿಗೆ ಹೊಸ ಹೊಸ ಉದ್ಯೋಗಗಳು ಹೊಳೆಯುತ್ತಿದ್ದವು.

ಬೆಳಿಗ್ಗೆ ಪತ್ರಿಕೆಗಳ ಮಾರಾಟ.

ಅನಂತರ ನಕಾಶೆಗಳ ಮಾರಾಟ.

ಸಂಜೆ ಪುನಃ ಪತ್ರಿಕೆಗಳ ಮಾರಾಟ. ಅದಾದ ಮೇಲೆ ಅವನಿಗೆ ಸಾಕಷ್ಟು ಸಮಯ ಉಳಿದುಕೊಳ್ಳುತ್ತಿತ್ತು. ಆಗ ಏನು ಮಾಡಬಹುದು ಎಂದು ಆತ ಯೋಚಿಸತೊಡಗಿದ.

ಯೋಚನೆಯಲ್ಲಿ ಯೋಜನೆ ಹುಟ್ಟಿಕೊಂಡಿತು.

ಮರುದಿನ ಸಂಜೆ ಆತ ನಿರ್ಮಲಾ ಟ್ರಾವೆಲ್ಸ್‌ನಲ್ಲಿದ್ದ. ಟಿಕೆಟ್‌ ಬುಕ್‌ ಮಾಡಿಸುವವನಾಗಿ!

***

ಕೆಲವು ದಿನ ಹೋಟೆಲ್‌ ರೂಮಿನಲ್ಲೇ ಇದ್ದ . ಒಂದಿನ ವಿಲ್ಸನ್‌ ಗಾರ್ಡನ್‌ನಲ್ಲಿ ಒಂದು ಪುಟ್ಟ ಕೋಣೆ ಮಾಡಿಕೊಂಡ. ಈಗ ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತು ನಿದ್ದೆ ಮಾಡುವುದು, ಸುಲಭ್‌ ಶೌಚಾಲಯಕ್ಕೆ ಭೇಟಿಕೊಡುವುದು ನಿಂತುಹೋಯಿತು.

ಎಷ್ಟೋ ದಿನ, ತಿಂಗಳುಗಳು ಕಳೆದವು.

ಒಂದಾದ ಮೇಲೆ ಒಂದು ಉದ್ಯೋಗ ಕಂಡುಕೊಳ್ಳುತ್ತ ತನ್ನ ತಿಂಗಳ ದುಡಿಮೆಯನ್ನು ಏರಿಸಿಕೊಳ್ಳುತ್ತಲೇ ನಡೆದ. ಈಗ ಆತನ ಚಟುವಟಿಕೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದವು.

ಪೇಪರ್‌ ಮಾರುವುದಕ್ಕೆ ಅವನೇ ಒಬ್ಬ ಹುಡುಗನನ್ನು ನೇಮಿಸಿದ. ಒಂದೆರಡು ಪತ್ರಿಕೆಗಳಿಗೆ ಆತ ಏಜೆಂಟನೂ ಆದ. ಗಳಿಕೆ ಏರುತ್ತಿತ್ತು. ಈಗ ಪಾದಗಳನ್ನು ನೋಡುವುದು ಬಿಟ್ಟು ಮುಖ ನೋಡಿ ಪೇಪರ್‌ ಕೊಡುತ್ತಿದ್ದ. ಗ್ರಾಹಕರನ್ನು ಒಂದೇ ನೋಟಕ್ಕೆ ಅಳೆದುಬಿಡುವ ಕಲೆ ಅವನಿಗೆ ಯಾವಾಗಲೋ ಸಿದ್ಧಿಸಿಬಿಟ್ಟಿತ್ತು.

ತಾನು ಯಾವುದಾದರೂ ಪತ್ರಿಕೆಗೆ ಇಡೀ ಬೆಂಗಳೂರಿಗೆ ಏಜೆಂಟ್‌ ಆಗಬೇಕು, ಅದಕ್ಕಾಗಿ ಏನೆಲ್ಲ ಮಾಡಬೇಕು ಎಂದು ಯೋಜನೆ ಹಾಕುತ್ತಿದ್ದ. ಯಾರಿಂದಲೋ ಪಡೆದ ನಕಾಶೆ ಮಾರುವುದಕ್ಕಿಂತ ತಾನೇ ಯಾಕೆ ನಕಾಶೆ ಪ್ರಿಂಟ್‌ ಮಾಡಿಸಬಾರದು ಎಂದು ಯೋಚಿಸತೊಡಗಿದ. ಅವನದೇ ಒಂದು ಟ್ರಾವೆಲ್‌ ಏಜೆನ್ಸಿ ಆರಂಭಿಸುವ ಯೋಚನೆಯೂ ಇತ್ತು.

***

ಆತ ಯಾವ ಪರಿ ಬೆಳೆದನೆಂದರೆ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದು ಮನೆ ಮಾಡಿದ. ಓಡಿಸುವುದಕ್ಕೊಂದು ಮೊಬೈಕ್‌-ಕಣ್ಣಿಗೊಂದು ತಂಪು ಕನ್ನಡಕ. ಮತ್ತೊಂದು ದಿನ ಕಾರೇ ಕೊಂಡುಕೊಂಡ.

ನಿಂತಲ್ಲಿ ನಿಲ್ಲದ ಆತ ನಡೆಯುವುದು ಕಡಿಮೆಯಿತ್ತು. ಯಾವಾಗಲೋ ಒಮ್ಮೆ ನಡೆಯುವಾಗ ಅಂದುಕೊಂಡ:

ಯಾಕೋ ಹೆಜ್ಜೆಗಳು ಭಾರವಾಗಿವೆ.

..................

.................

ಆ ದಿನ ಬೆಳಿಗ್ಗೆ ಎದ್ದವನು ಕೆಲಸದ ಮೇಲೆ ನೇರವಾಗಿ ಮೆಜೆಸ್ಟಿಕ್ಕಿಗೆ ಬಂದಿದ್ದ.

ಈಗ ಅವನ ಕೈ ಕೆಳಗೆ ಎಷ್ಟೋ ಹುಡುಗರಿದ್ದರು.

ಅವರಲ್ಲೊಬ್ಬ ಈತನ ಸ್ಟಾಲ್‌ನಲ್ಲಿ ಪೇಪರ್‌ ಎಣಿಸಿಕೊಡುವವನ ಮುಂದೆ ನಿಂತ ಪರಿ ನೋಡಿ ಬಾದಲವಾಗೆ ಅಚ್ಚರಿಯಾಯಿತು. ಅವನ ಮುಖದಲ್ಲಿ ತನ್ನ ಮುಖ ಕಂಡಂತಾಯಿತು.

ಆತ ತನ್ನಷ್ಟಕ್ಕೇ ಏನೋ ಹಾಡಿಕೊಳ್ಳುತ್ತಿದ್ದ.

`ಬಾದಲವಾ ಬರಸಾನ ಲಾ...ಗೆ' .

ವಿಪರೀತ ಖುಷಿಯಾಗಿ ಅವನ ಕಣ್ಣುಗಳಲ್ಲಿ ಕಣ್ಣಿಟ್ಟ.

ಏನಾಯಿತೋ?

ಇಬ್ಬರೂ ಮೆಜೆಸ್ಟಿಕ್ಕಿನ ರಸ್ತೆಯಲ್ಲಿ ಅಂದರೆ ಹಿಂದೆ ನಡೆದುಕೊಂಡು ಹೋಗುತ್ತಿದ್ದ ಸುಲಭ್‌ ಶೌಚಾಲಯ ರಸ್ತೆಯಲ್ಲಿ ನಡೆಯತೊಡಗಿದರು. ಹಾಗೆ ನಡೆಯತೊಡಗಿದವನನ್ನು ತಿರುವಿನಲ್ಲಿ ಯಾರದೋ ಕಾರೊಂದು ಎರ್ರಾಬಿರ್ರಿಯಾಗಿ ಬಂದು ಗುದ್ದಿಬಿಟ್ಟಿತು.
ಕಾರು ಗುದ್ದಿದ್ದರಿಂದ ಬಾದಲವಾ ಸಿಡಿದು ಬಿದ್ದ.

ಪೇಪರ್‌ ಮಾರುವ ಹುಡುಗನ ಮೇಲೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ.

ಕಾರಿನವನು ನಿಲ್ಲಿಸುವ ತೊಂದರೆ ತೆಗೆದುಕೊಳ್ಳಲಿಲ್ಲ.

......................

......................

......................

`ನನಿ ಡೂಂಡನ ಬರಸ ಬರಸ

ಬಾದಲವಾ ಬರಸಾನ ಲಾ...ಗೆ'

ಇತರ ಹುಡುಗರೊಂದಿಗೆ ಮರುದಿನ ಬೆಳಿಗ್ಗೆ ಬಾದಲವಾ ಕೂಡ ಮೆಜೆಸ್ಟಿಕ್ಕಿನಲ್ಲಿ ಪೇಪರ್‌ ಮಾರತೊಡಗಿದ್ದ.

`ಬರಸಾನಕೋ ಲಾ...ಗೆ
ಬಾದಲವಾ ಬರಸಾನ ಲಾ...ಗೆ'

ಪರಮೇಶ್ವರ ಗುಂಡ್ಕಲ್
gundkal@rediffmail.com