ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ

Submitted by anilkumar on Fri, 08/19/2005 - 21:48
ಬರಹ

www.anilkumarha.com

ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ

(ಅ) "ವಿ ಅಂಡ್ ಎ" ಎಂಬ ವರ್ಣಬೇಧ ಸಂಗ್ರಹಾಲಯ

ಅದೊಂದು ಮರೆಯಬಾರದ ದೃಶ್ಯ. ನಾಲ್ವರು ಕಪ್ಪುವರ್ಣೀಯ ಹುಡುಗ ಹುಡುಗಿಯರು ಪಾನಮತ್ತರಾಗಿ ಹೊಯ್ಸಳ ಶಿಲ್ಪವೊಂದರ ಸುತ್ತ ನೆರೆದಿದ್ದರು. ಯಾರಿಗೂ ಆ ಶಿಲ್ಪವನ್ನು ಗಮನಿಸುವ ವ್ಯವಧಾನವಿರಲಿಲ್ಲ. ಆದರೆ ಅವರಲ್ಲೊಬ್ಬ ಸಹಜವಾಗಿ ಎಂಬಂತೆ ಬಿಯರ್ ಬಾಟಲಿಯನ್ನು ಶಿಲ್ಪದ ಪೆಡಸ್ಟಲ್ಲಿನ ಮೇಲಿರಿಸಿದ. ಬಳಪದ ಕಲ್ಲಿನ ಎದೆಯ ಭಾಗದ ಮೇಲೆ ಕೈಯಾಡಿಸುತ್ತ ಆಫ್ರಿಕನ್ ಭಾಷೆಯಲ್ಲಿ ಏನೋ ಕೆಟ್ಟ ಜೋಕ್ ಮಾಡಿದ. ಉಳಿದವರೆಲ್ಲ ನಗಲಾರಂಭಿಸಿದರು, ಆಫ್ರಿಕನ್ ಶೈಲಿಯ ಅಟ್ಟಹಾಸದಲಿ!

ಅಲ್ಲಿ ಮ್ಯೂಸಿಯಂನ ಸಿಬ್ಬಂದಿ ಯಾರೂ ಇರಲಿಲ್ಲ. ಕಲಾಕೃತಿಯನ್ನು ಆಕಸ್ಮಾತ್ ಮುಟ್ಟಿದರೂ ಬಡಿದುಕೊಳ್ಳಲೇಬೇಕಾಗಿದ್ದ ಅಲಾರಾಂ ಗಂಟೆ ಮೊಳಗಲಿಲ್ಲ. ಒಂದರ್ಧ ತಾಸು ಇಂತದ್ದೇ ಚೇಷ್ಟೆಗಳ ನಂತರ ಆ ನಾಲ್ವರೂ ಹೆಚ್ಚು ಪಾನೀಯಕ್ಕಾಗೆ ಮ್ಯೂಸಿಯಂನ ರಿಸೆಪ್ಷನ್ ಜಾಗಕ್ಕೆ ಬಂದರು. ಪಾನೀಯವನ್ನು ಚೀನದ ಮರದ ಅವಲೋಕಿತೇಶ್ವರ ಬುದ್ಧನ ವಿಗ್ರಹದ ಬಳಿ ಮ್ಯೂಸಿಯಂನವರೇ ವ್ಯವಸ್ಥೆ ಮಾಡಿದ್ದರು! ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಹೊಯ್ಸಳ ವಿಗ್ರಹವನ್ನು ತಟ್ಟಿದ್ದರೆ ಮೆದು ಬಳಪದ ಕಲ್ಲಿನ ಅಂಚು ಸುಲಭವಾಗಿ ಮುರಿದು ಬೀಳುತ್ತಿತ್ತು. ವಿಶೇಷವಿರುವುದು ಈ ಕ್ರಿಯೆಯಲ್ಲಲ್ಲ. ಇನ್ನು ಎರಡೂವರೆ ದಿನಗಳವರೆಗೂ, ಅಂದರೆ ಸೋಮವಾರ ಬೆಳಿಗ್ಗೆ ಮ್ಯೂಸಿಯಂನ ಆ ವಿಭಾಗವನ್ನು ತೆರೆಯುವವರೆಗೂ ಈ ಮಹಾನ್ ಕೃತ್ಯ ಬೆಳಕಿಗೆ ಬರುತ್ತಿರಲಿಲ್ಲ!

ಈ ಘಟನೆಯ ಸ್ಥಳ: ಲಂಡನ್ನಿನ ಜಗತ್ರ್ಪಸಿದ್ಧ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ! ಸಂದರ್ಭ: ಕಪ್ಪು ಮಾಸದ ('ಬ್ಲಾಕ್ ಮಂತ್') ಅಂಗವಾಗಿ ಆಫ್ರಿಕನ್ ದೃಶ್ಯಕಲೆಗಳ ಪ್ರದರ್ಶನದ ಮುಕ್ತಾಯ ಸಮಾವೇಶ! (೨೦೦೪ ಅಕ್ಟೋಬರ್)

* * *

ಈ ಘಟನೆಯ ನಂತರ 'ವಿ ಅಂಡ್ ಎ' (ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ) ಕೋಣೆಗಳ ವಿಂಗಡನೆಯ ವಿನ್ಯಾಸವನ್ನು ಗಮನಿಸುತ್ತಿದ್ದೆ. ಅಲ್ಲಿ ಬರುವವರೆಲ್ಲರೂ, ಮ್ಯೂಸಿಯಂನ ಒಳಗಡೆ ಎಲ್ಲೆಡೆ ಹೋಗಬೇಕೆಂದರೂ, ಮೂರು ದಿಕ್ಕಿಗೂ ಇರುವ ಕಾರಿಡಾರಿನ ಮೂಲಕವೇ ಹಾಯ್ದು ಹೋಗಬೇಕು. ಅಂತಹ ಕಾರಿಡಾರ್‌ಗಳೆಲ್ಲ ಏಷ್ಯ, ಜಪಾನ್, ಚೈನ ದೇಶಗಳ ಕಲಾಕೃತಿಗಳ ಪ್ರದರ್ಶನಕ್ಕೇ ಮೀಸಲು. ಅಂದರೆ ಶುದ್ಧ ಬ್ರಿಟಿಷ್ ಕೃತಿಗಳು ಅಲ್ಲಿ ಕಂಡುಬರದು. ಇವೆಲ್ಲ "ಊರಾಚೆಗಿರುವ ಹೊಲಗೇರಿಗಳಂತೆ" ಎನಿಸಿಬಿಟ್ಟಿತು. "ಯುರೋಪಿನ ಕಲೆಯನ್ನು ಶೇಖರಿಸಿರುವ ಕೋಣೆಗಳಿಗೆ ಈ ಕಾರಿಡಾರ್‌ಗಳ ಮೂಲಕವೇ ಹಾದುಹೋಗಬೇಕು" ಎಂದು ಬ್ರಿಟಿಷ್/ಯುರೋಪಿನವರಲ್ಲದವರು ಖುಷಿಪಡಬಹುದು. ಆದರೆ ಅಂತಹವರು ಇಂತಹ 'ಕಪ್ಪುಮಾಸ'ದಂತಹ ಪ್ರದರ್ಶನಗಳಿಗೆ ಬರುವವರೇ ಅಲ್ಲ. ನನ್ನ ಏಳುತಿಂಗಳ ಲಂಡನ್ ವಾಸದಲ್ಲಿ ಮ್ಯೂಸಿಯಂ, ಗ್ಯಾಲರಿ ಭೇಟಿಗಳಲ್ಲಿ ಏಳೆಂಟು ಭಾರತೀಯರನ್ನಲ್ಲಿ ನೋಡಿರಬಹುದು (ನನ್ನನು ಹೊರತುಪಡಿಸಿ). ಮ್ಯೂಸಿಯಂ ಹಾಗೂ ಗ್ಯಾಲರಿಗಳನ್ನು ಭಾರತೀಯರು -- ಅವರು ಎಲ್ಲಿಯೇ ಇರಲಿ -- ನೋಡುವ ಒಂದು ಸ್ಪೆಷಲ್ ಶೈಲಿಯಿದೆ. ಐದತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಒಂದು ಕೋಣೆಯಲ್ಲಿ ನಿಲ್ಲಲ್ಲಾಗದವರು ನಾವು (ಕಲಾವಿದರನ್ನೂ ಒಳಗೊಂಡಂತೆ). ಮುಂಚಿನ ವಾಕ್ಯದ ಮೊದಲ ಪದವನ್ನು "ಐವತ್ತು" ಎಂದು ಅಪ್ಪಿತಪ್ಪಿ ಭಾವಿಸಿಬಿಟ್ಟೀರ, ಜೋಕೆ!!

ಶುದ್ಧ ಬಿಳಿವರ್ಣದ ಬ್ರಿಟಿಷರನ್ನು ಲಂಡನ್ನಿನಲ್ಲಿ ಹುಡುಕಬೇಕಾದರೆ ವಲಸಿಗರ ಮಧ್ಯೆಯೇ ಹುಡುಕಬೇಕು -- ಶುದ್ಧ ಬ್ರಿಟಿಷ್ ಕಲೆ ಪ್ರದರ್ಶಿತವಾಗಿರುವ ಕೋಣೆಗಳಿಗೆ ಕಾರಿಡಾರ್ ಮೂಲಕವೇ ಹೋಗಬೇಕಾದಂತೆ ಇದು! ಬಹುಪಾಲು ಬ್ರಿಟಿಷರು ಲಂಡನ್ ತೊರೆದು ಹೊರಗಿನ ಊರುಗಳಲ್ಲಿ ನೆಲೆಸುತ್ತಿದ್ದಾರೆ. ಇತ್ತೀಚೆಗೆ ಪ್ರಮುಖ ರಾಜಕೀಯ ಪಕ್ಷಗಳಾದ ಟೋರಿ ಹಾಗೂ ಲೇಬರ್ ಪಾರ್ಟಿಗಳೆರೆಡೂ ಹೊಸ ವಲಸಿಗರಿಗೆ ಕಡಿವಾಣ ಹಾಕಬಯಸುತ್ತಿವೆ. "ವಲಸಿಗರಿಗೆ ಕಡಿವಾಣ ಹಾಕುವುದೆಂದರೆ ನಾವು ವರ್ಣದ್ವೇಷಿಗಳು ಎಂದೇನಲ್ಲ" ಎಂಬ ಫಲಕ ಎಲ್ಲೆಡೆ, ಅತಿಮಾನವಾಕಾರದ, ಅವಮಾನಕರವಾದ ಅಳತೆಯಲ್ಲಿ ತೂಗಾಡುತ್ತಿವೆ.

ಅಂದರೆ ಬ್ರಿಟಿಷರಲ್ಲಿ ವರ್ಣದ್ವೇಷವೇ ಇಲ್ಲವೆ? ಹೌದು ಮತ್ತು ಇಲ್ಲ! "ಬ್ರಿಟಿಷರು ಮಾಡಲು ಹೇಸುವ ಕೆಲಸವನ್ನು ವಲಸಿಗರೇ ಮಾಡಬೇಕು. ನಾವುಗಳಿಲ್ಲದಿದ್ದರೆ ಲಂಡನ್ನಿನ ಇಕ್ಕಟ್ಟು ಬೀದಿಗಳೆಲ್ಲ ನಾರತೊಡಗುತ್ತವೆ. ಲಂಡನ್ ಸೇತುವೆಯ ಸುತ್ತಮುತ್ತಲಿನ ಆರ್ಥಿಕ ವ್ಯಾಪಾರ ಕುಸಿಯುತ್ತದೆ" ಎಂದಳು ಸೋಫಿಯ. ಜಮೈಕದಿಂದ ಬಂದು ನೆಂಟರ ಮನೆಯಲ್ಲಿ ಏಳುವರ್ಷ ಕಾಲ ಮನೆಗೆಲಸ ಮಾಡುತ್ತ ಹೊರಗೆಲ್ಲೂ ಓಡಾಡದಿದ್ದವಳು ಸೋಫಿಯ. ನಂತರ ಒಂಟಿಯಾಗಿ ಬದುಕುತ್ತ, ವಾರಕ್ಕೆ ೧೦೦ ಪೌಂಡ್ (ಸುಮಾರು ೮,೦೦೦ ರೂಗಳು) ಬಾಡಿಗೆಯ ಹತ್ತಡಿ ಎಂಟಡಿ ಕೋಣೆಯಲ್ಲಿ ಬದುಕುತ್ತ, ವಾರಕೆ ಇಪ್ಪತ್ತು ಪೌಂಡ್ ಉಳಿಸುತ್ತಿದ್ದಾಳೆ!

(ಆ) 'ಎಲ್ಗಿನ್ ಮಾರ್ಬಲ್' ಉಸಾಬರಿ ನಮಗೇಕೆ!

ವಿ ಅಂಡ್ ಏ ಮ್ಯೂಸಿಯಂ ಬೆಂಗಳೂರಿನ ಅಕಡೆಮಿಕ್ ಕನ್ನಡಕದಿಂದ ಕಾಣುವಷ್ಟು ಸೊಗಸಿನದಲ್ಲ. ಲಂಡನ್ನಿನ ಬಹುಪಾಲು ಮ್ಯೂಸಿಯಂಗಳಂತೆ ಅಲ್ಲಿ ಪ್ರವೇಶ ಉಚಿತ. ಜೊತೆಗೆ ಪ್ರವೇಶದ್ವಾರದಲ್ಲೊಂದು ಪೆಟ್ಟಿಗೆ, ಫಲಕ: "ದಯವಿಟ್ಟು ಎರಡು ಪೌಂಡ್ ಕೊಡುಗೆ ನೀಡಿ, ಮ್ಯೂಸಿಯಂನ ಅಭಿವೃದ್ಧಿಗಾಗಿ", ಎಂದು. ದಾನ ನೀಡುವುದಾದರೆ ಎರಡು ಪೌಂಡ್ ಮಾತ್ರ ಏಕೆ, ಹೆಚ್ಚು ನೀಡಿದರೆ ನಿರಾಕರಿಸುವವರ್ಯಾರು? ಇಲ್ಲಿನ ಪ್ರತಿ ಪ್ರದರ್ಶನ ಮೂರ್ನಾಲ್ಕು ತಿಂಗಲ ಕಾಲ ನಡೆಯುವುದರಿಂದ, ಆ ಪ್ರದರ್ಶನದ ಕೃತಿಗಳ ಚಿತ್ರಗಳಿರುವ ಟೀ ಶರ್ಟ್‌ಗಳು, ಕಪ್ಪು ಸಾಸರಿನಿಂದ ಹಿಡಿದು ವಾಚು, ಉಂಗುರ, ಸಾಕ್ಸ್‌ನವರೆಗೂ ಮಾರಟಮಾಡಲಾಗುತ್ತದೆ. ನಗ್ನ ಚಿತ್ರ ಪ್ರದರ್ಶನದ ಪ್ರತಿಕೃತಿಗಳನ್ನೂ ಒಳ‌ಉಡುಪುಗಳ ಮೇಲೂ ಮುದ್ರಿಸಿ ಮಾರಾಟ ಮಾಡುವಂತಹ ಪ್ರಸಂಗಗಳೂ ಇಲ್ಲದಿಲ್ಲ!

ಎಲ್ಲ ಜಗತ್ರ್ಪಸಿದ್ದ ಮ್ಯೂಸಿಯಂಗಳೆದುರು ಭಾರತೀಯನಿಗಾಗುವ ಅನ್ಯ, ಅನನ್ಯ ಅನುಭವವೊಂದಿದೆ. ಇದಕ್ಕೆ ಕಾರಣ ಭಾರತದೊಳಗೇ ಜಗತ್ರ್ಪಸಿದ್ದ ಸಂಗ್ರಹಾಲಯಗಳಿಲ್ಲದಿರುವುದು! ಆದ್ದರಿಂದ ಪರದೇಶೀಯ ಕೃತಿಗಳೆಲ್ಲವೂ "ಮಹಾನ್ ಕೃತಿಗಳೇ" ಎಂದುಕೊಂಡುಬಿಟ್ಟಿರುತ್ತೇವೆ. ಭಾರತೀಯವೇ ಆದ ಕಲ್ಲು ಬಸವ, ಹೊಯ್ಸಳ ಶಿಲ್ಪ, ಮಿನಿಯೇಚರ್ ಚಿತ್ರ, ಪೌರಾಣಿಕ ಉಡುಗೆ ತೊಡುಗೆ ನೋಡಿದಾಗ, "ಇವೇಕೆ ಹಾಗೂ ಹೇಗೆ ಇಲ್ಲಿವೆ?" ಎಂಬ ಭಾವನೆ. "ಕಲಾಕೃತಿಗಳಾಗಿಯಲ್ಲದಿದ್ದರೂ, ಕರಕುಶಲ ಕಲೆಯಾಗಿಯಾದರೂ ಇರಲಿ ಇವೂ ಜೊತೆಗೆ, ಅಯ್ಯೋ ಪಾಪ", ಎಂದು ಅವುಗಳನ್ನಲ್ಲಿ ಇರಿಸಲಾಗಿದೆ. ವಯಸ್ಸಾದ ಬಡವರ ಬಗ್ಗೆ ಶ್ರೀಮಂತ ಯುವಪೀಳಿಗೆ ಸಹಾನುಭೂತಿ ವ್ಯಕ್ತಪಡಿಸಿದಂತೆ ಇದು. ಅದಕ್ಕೇ ಸಮಕಾಲೀನ ಭಾರತೀಯ ಕಲೆಗೆ ಅಲ್ಲಿನ ಸಮಕಾಲೀನ ಮ್ಯೂಸಿಯಂ ಗ್ಯಾಲರಿಗಳಲ್ಲಿ ಸ್ಥಾನವಿಲ್ಲ!

ಟರ್ನರ್, ಕಾನ್‌ಸ್ಟೇಬಲ್, ಡೇವಿಡ್ ಹಾಕ್ನಿ, ರೆನಾಲ್ಡ್ಸ್, ಗೇನ್ಸ್‌ಬರೋ, ಪೌಲ ರಿಗೊ, ಸ್ಟಬ್ಸ್, ಡೇಮಿಯನ್ ಹರ್ಸ್ಟ್, ಮೈಕೆಲ್ ಲ್ಯಾಂಡಿ, ಜೆರಿಮಿ ಡಿಲ್ಲರ್, ಅನಿಷ್ ಕಪೂರ್, ಗ್ಲೆನ್ ಬ್ರೌನ್ ಇತ್ಯಾದಿಗಳೆಲ್ಲರ ಕೃತಿಗಳೂ ಇರುವ ಟೇಟ್ ಮಾಡರ್ನ್ ಎಂಬ ಜಗತ್ಪ್ರಸಿದ್ದ ಗ್ಯಾಲರಿ-ಮ್ಯೂಸಿಯಂಗಳಲ್ಲಿ ಒಬ್ಬನೇ ಒಬ್ಬ 'ನಿವಾಸಿ' ಭಾರತೀಯ ಕಲಾವಿದನಿಗೆ ಸ್ಥಾನವಿಲ್ಲವೆ? ಅನಿವಾಸಿ ಭಾರತೀಯ ಅನಿಷ್ ಕಪೂರ್ ಲಂಡನ್ನಿಗೆ ಜಗತ್ರ್ಪಸಿದ್ಧನಾದ ಕಲಾವಿದ. "ನಾನು ಭಾರತೀಯ" ಅಥವ "ನಾನೂ ಭಾರತೀಯ" ಎಂದು ಹೇಳುವಷ್ಟು ಭಾವತೀವ್ರತೆಯ ಅವಶ್ಯಕತೆ ಆತನಿಗಿಲ್ಲವಷ್ಟೇ, ವಿ.ಎಸ್. ನೈಪಾಲರಂತೆ.

ಭಾರತೀಯರಿಗೆ ಆಸ್ಕರ್ ಪ್ರಶಸ್ತಿಗಳು ದೊರಕಿಲ್ಲವೆಂದು ಕೊರಗುವಂತೆ ಇದು. ಅದಕ್ಕೆ ಪರ್ಯಾಯ ಪ್ರಶಸ್ತಿಗಳನ್ನು ಹುಟ್ಟಿಹಾಕಲಿಲ್ಲ ನಾವು. ಈ ಮಹಾನ್ ಕಲಾವಿದರ ಕೃತಿಗಳನ್ನೆಲ್ಲ ನೋಡಲು ನಾವಲ್ಲಿ ಹೋಗುವಂತೆ ಹೊರಗಿನವರ್ಯಾರೂ ನಮ್ಮ ಯಾವ ಆಧುನಿಕ, ಸಮಕಾಲೀನ ಕೃತಿಗಳನ್ನು ನೋಡಲು ಬರುತ್ತಾರೆ ಹೇಳಿ? ಅಥವ 'ಎಲ್ಗಿನ್ ಮಾರ್ಬಲ್' ಅಂತಹುದನ್ನೇನಾದರೂ ನಾವು ಹಿಂದಕ್ಕೆ ಬೇಡುತ್ತಿದ್ದೇವೆಯೇ? ಗ್ರೀಕ್ ಶಿಲ್ಪಗಳನ್ನು ಲಾರ್ಡ್ ಎಲ್ಗಿನ್ ಎಂಬಾತ ವಿ ಅಂಡ್ ಎ ಹಾಗೂ ಬ್ರಿಟಿಷ್ ಮ್ಯೂಸಿಯಂಗೆ ಸಾಗಿಸಿ ತಂದುದು ಹಳೆಯ ಕಥೆ. ಈಗ ಅದು ಮರಳಿ ಗ್ರೀಕರಿಗೆ ಸೇರಬೇಕೆ? ಎಂಬುದು ಈಗ ಚಾಲ್ತಿಯಲ್ಲಿರುವ ತಾತ್ವಿಕ ಪ್ರಶ್ನೆ. ಭಾರತದ ಮಿನಿಯೇಚರ್ ಚಿತ್ರಗಳು, ಟಿಪ್ಪೂನ ಫೇವರಿಟ್ ಆಗಿದ್ದಂತಹ ಬ್ರಿಟಿಷ್ ಯೋಧ-ಹುಲಿ, ಇತ್ಯಾದಿ ನೂರಾರು ಶಿಲ್ಪಗಳು, ಸಾವಿರಾರು ಚಿತ್ರಗಳು, ಲಕ್ಷಗಟ್ಟಲೆ ದಾಖಲುಪತ್ರಗಳು ಕೋಟಿಗಟ್ಟಲೆ ಪೌಂಡ್‌ಗಳ ಬೆಲೆ ಬಾಳುವಂತಹವು. "ಅವುಗಳನ್ನೆಲ್ಲ ಭಾರತಕ್ಕೆ ಹಿಂದೆ ತಂದು ಸಂರಕ್ಷಿಸುವ ತಲೆನೋವು ನಮಗೇಕೆ?" ಎಂಬ ಸೋಮಾರಿತನ ತುಂಬಿದ ಸಿನಿಕತನ ನಮಗೆ ಅತ್ಯಂತ ಸಹಜ. ತರುವುದು ಆಮೇಲಿನ ವಿಚಾರ, ಅವುಗಳನ್ನು ಹಿಂದಕ್ಕೆ ನೀಡಲು 'ಅವರು' ಒಪ್ಪುತ್ತಾರೋ ಇಲ್ಲವೋ ಎಂದು ಒಂದು ಮಾತನ್ನಾದರೂ ವಿಚಾರಿಸುವುದು ಬೇಡವೆ ನಾವು ಭಾರತೀಯರು?

ವಿ ಅಂಡ್ ಎ ಸಂಗ್ರಹಾಲಯದವರಿಗೂ ಅದನ್ನು ಕಾಪಾಡಲು ಸಾಕಷ್ಟು ಆರ್ಥಿಕ ತೊಂದರೆ ಇದೆ. ಇಲ್ಲದಿದ್ದರೆ ನಮ್ಮ ಹೊಯ್ಸಳ ಸುಂದರಿಯನ್ನು ಆಫ್ರಿಕನ್ ಹುಡುಗರು ಲೇವಡಿ ಮಾಡಲು ಸಾಧ್ಯವಾದದ್ದಾದರೂ ಹೇಗೆ? ಅಲ್ಲಿನ ಸಿಬ್ಬಂದಿಯೂ ತಾತ್ವಿಕವಾಗಿ ಇನ್ಯಾರದ್ದೋ ಮನೆಯವರ ಆಸ್ಥಿಯನ್ನು ನೋಡಿಕೊಳ್ಳುವಲ್ಲಿ ಸಾಕಷ್ಟು ಓವರ್ ಟೈಂ ಕೆಲಸ ಮಾಡಬೇಕಾಗಿರುವುದರಿಂದ ಅತಿ ಕಷ್ಟದ ಸ್ಟ್ರೈಕ್ ಮಾಡುತ್ತಿದ್ದಾರೆ ಸಧ್ಯಕ್ಕೆ (ಪಾಪ, ಅದೂ ಒಂದು ಎಕ್ಸ್‌ಟ್ರಾ ಕೆಲಸವೆಂಬುದನ್ನು ಸ್ಟ್ರೈಕ್ ಮಾಡುವ ಉತ್ಸಾಹದಲ್ಲಿ ಅವರುಗಳು ಮರೆತಂತಿದೆ).

(ಇ) ತತ್ವ, ಕಥನವೆರಡರಿಂದಲೂ ನುಣಿಚಿಕೊಳ್ವ ಪ್ರಯಾಸ ಕಥನ

ಇಂದು ಪ್ರವಾಸ ಕಥನ ಬರೆಯುವುದು ಒಂದು ದು:ಸ್ಸಾಹಸ. ಅದಕ್ಕೊಂದು ಅಸಾಧ್ಯ ಮುಗ್ಧತೆ ಬೇಕಾಗುತ್ತದೆ. ಶಾಂತಿನಿಕೇತನಕ್ಕೆ ಒಂದೆರೆಡು ದಿನ ಹೋಗಿ ಬಂದು ಜನಗಣಮನ ಬರೆದರೆ ಅಲ್ಲಿಗೆ ಎಂದೂ ಹೋಗಿರದ ಕನ್ನಡಿಗರಿಗದು ಅಪ್ಯಾಯಮಾನವಾಗಬಹುದು. ಆದರೆ ಅಲ್ಲಿಯೇ ವರ್ಷಾನುಗಟ್ಟಲೆ ವಿದ್ಯಾಭ್ಯಾಸ ಮಾಡಿದ ಕನ್ನಡಿಗರದು ತೊದಲು ಅನುಭವವೆನ್ನಿಸಿಬಿಡಬಹುದು. ೨೦ನೇ ಶತಮಾನದಲ್ಲಿ ಒಂದು ಸಂಪ್ರದಾಯವೇ ಆಗಿಹೋದ ವಲಸಿಗ ಸಂಸ್ಕೃತಿಯ ಪರಿಣಾಮವಿದು. ಅಲೆಮಾರಿಗಳ ಯಾತ್ರೆ ಅಂಡಮಾನಿನ ರೀತಿನೀತಿಗಿಂತಲೂ ಅಲೆಮಾರಿತನದ ಬಗ್ಗೆ ಕುತೂಹಲ ಕೆರಳಿಸುತ್ತದೆ. ಅಪರವಯಸ್ಕರು ಅಮೇರಿಕದಲ್ಲಿ ಪಾಲ್ಗೊಂಡ ಚರ್ಚೆಯು ಅಂತಹವರ ಅನುಭವದಿಂದಾಗಿ ಆಳವಾಗಿರುತ್ತದೆ. ನಾವು ಕಾಣಬಹುದಾದ ಅಂಡಮಾನ್ ಮತ್ತು ಅಮೇರಿಕ ಮಾತ್ರ ಬೇರೆಯೇ ಆಗಿರುತ್ತವೆ. ಏಕೆಂದರೆ ನಮ್ಮಲ್ಲನೇಕರು ಅವುಗಳನ್ನು ಇನ್ನೂ ಭೌತಿಕವಾಗಿ ಸ್ಪರ್ಶಿಸಿಯೆ ಇರುವುದಿಲ್ಲವಲ್ಲ.

"ಎಂದಿಗೂ ನಾವಲ್ಲಿಗೆ ಹೋಗಲಾರೆವು" ಎನ್ನಿಸಿಕೊಂಡ ಜಾಗಗಳ ಬಗ್ಗೆ ಬೇರೆಯವರ ಅನುಭವದ ವಿವರ್ "ಮೋಸ್ಟ್ ಎಕ್ಸೈಟಿಂಗ್" ಆಗಿರುತ್ತದೆ. ಲಂಡನ್ನಿನ ಟೇಟ್ ಮಾಡರ್ನ್ ಗ್ಯಾಲರಿ ಹಾಗೂ ಥೇಮ್ಸ್ ನದಿಯ 'ಥ್ರಿಲ್' ನಮ್ಮಲ್ಲುಳಿಯಬೇಕಾದರೆ, ಅವುಗಳು ನಿರಂತರವಾಗಿ ನಮಗೆ 'ಬೆಳದಿಂಗಳ ಬಾಲೆ'ಗಳಾಗಿಯೇ ಉಳಿದುಕೊಳ್ಳಬೇಕು. "ಮೊದಲೆಲ್ಲ ಪ್ರವಾಸ ಮಾಡುವ" ಹೊಸ ಜಾಗಗಳ ಬಗ್ಗೆ ಅನನ್ಯ ನಿರೀಕ್ಷೆಗಳು ಇರುತ್ತಿದ್ದವು. ಈಗೆಲ್ಲ, ಅಂದರೆ ವಲಸೆ (ಬಾಂಗ್ಲಾದೇಶೀಯರು), ನಿಷೇಧ (ಸಲ್ಮಾನ್ ರಶ್ದಿ), ಗಡೀಪಾರು, ಗುಳೆ ಹೋಗುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾದಂತೆ ಬಿಟ್ಟು ಬಂದ ಊರಿನ ಸದ್ದು, ಸ್ಮೃತಿ, ನೆನಪುಗಳೇ ಹೆಚ್ಚು ಕಾಡಿ ಮುದ ನೀಡುತ್ತವೆ. ನಾಲ್ಕಾರು ತಿಂಗಳ ಕಾಲ ಲಂಡನ್ನಿನಲ್ಲಿದ್ದ ಮೇಲೆ, ಅಲ್ಲಿ ಸ್ನೇಹಿತಳಾದ ಕಪ್ಪು ಆಫ್ರಿಕನ್ ಮುಸ್ಲಿಂ ಡಾಕ್ಟರ್ ಫಾತಿಮ, "ಕಭೀ, ಕಭೀ, ಸಮ್‌ತಿಂಗ್, ಸಮ್‌ತಿಂಗ್" ಎಂದು ಹಾಡಿದಾಗ ನನಗೆ ದೇಶಕ್ಕಿಂತಲೂ ಊರಿನ ಸೆಳೆತ ಹೆಚ್ಚಾಗಿ, "ಕನ್ನಡ ಹಾಡು ಬರೋಲ್ವೆ ನಿಂಗೆ?" ಎಂದು ಕನ್ನಡದಲ್ಲೇ ಕೇಳಿ ನಿಟ್ಟುಸಿರಿಟ್ಟಿದ್ದೆ!

ಪ್ರವಾಸವೆಂಬ ಭೂತಕಾಲಕ್ಕೆ ಸೇರಿಬಿಡುವಂತಹ ದು:ಖಕರ ವಿಷಯ ಇನ್ಯಾವ ಜೀವಂತ ಘಟನೆಗಳಲ್ಲೂ ಇರುವುದಿಲ್ಲ. ಅಪೂರ್ವವೆನಿಸಿ ಬರೆದ ಪಶ್ಚಿಮದ ಪ್ರವಾಸದ ಅನುಭವವು ಐವತ್ತು ವರ್ಷಗಳ ನಂತರ ಮಕ್ಕಳು ಮನೆಯಲ್ಲಿ ಕುಳಿತು ನೋಡುವ ಕಂಪ್ಯೂಟರ್ ದೃಶ್ಯ ವಿವರಣೆಯ ಮುಂದೆ ಆತ್ಮಚರಿತ್ರೆಯ ಭಾಗದಂತಾಗಿ ಹೋಗಿದೆ. ಆ ಪುಸ್ತಕವು ಆ ಪ್ರವಾಸಿಯ ಅಖಂಡ ವ್ಯಕ್ತಿತ್ವವನ್ನು ಪರಿಚಯಿಸುತ್ತದೆಯೇ ಹೊರತು ಪಶ್ಚಿಮದ ಸಂಸ್ಕೃತಿಯನ್ನಲ್ಲ. ಪರದೇಶದಲ್ಲಿ ಪ್ರವಾಸವೇ ಬೇರೆ, ಪ್ರವಾಸ ಕಥನವೇ ಬೇರೆ. ಈ ಪ್ರಕಾರವು ಕಥೆ, ಕಾದಂಬರಿಗಳಂತೆ ಒಂದು 'ನಿರ್ಮಿತಿಯಾಗಿ' ಪ್ರತಿಷ್ಠಾಪಿತವಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಯು.ಆರ್. ಅನಂತಮೂರ್ತಿಯವರ ಚೈನ ಯಾತ್ರೆ ಹಾಗೂ ಡಿ.ಆರ್.ನಾಗರಾಜರ ಥಾಯ್ಲೆಂಡ್ ಯಾತ್ರೆಯ ಲೇಖನಗಳು ಪ್ರವಾಸದ ಪ್ರಯಾಸವನ್ನು ಹಾಗೂ ಅರ್ಥಹೀನತೆಯನ್ನು ತೊರೆದು ಸ್ವತಂತ್ರ ನಿರ್ಮಿತಿಗಳಾಗಿಬಿಡುವ ಛಾತಿ ಹೊಂದಿವೆ ಎಂದರೆ ಶುದ್ಧ ಅಕಡೆಮಿಕ್ ಜನ ಸಿಟ್ಟಿಗೇಳುವುದರಲ್ಲಿ ಅನುಮಾನವೇ ಬೇಡ!

ಚಳಿಗಾಲದಲ್ಲಿ ವಿ ಅಂಡ್ ಏ ಒಳಕ್ಕೆ ಜನ ಹೋಗಲು ಎರಡು ಕಾರಣ: ಒಳಗಿನ ಕಲಾಕೃತಿಗಳ ಆಕರ್ಷಣೆ ಹಾಗೂ ಹೊರಗಿನ ಐದಾರು ಪದರ ಬಟ್ಟೆಯನ್ನು ಒತ್ತಾಯಿಸುವ ಚಳಿ. ಮತ್ತು ಹತ್ತುಗಂಟೆಕಾಲ ಮ್ಯೂಸಿಯಂ ಅನ್ನು ನೋಡಲು ಬೇಕಾದಷ್ಟು ಸಂಖ್ಯೆಯ ಚಹ, ತಿಂಡಿ, ಪಾನೀಯ, ನೀರಿಗೆ ಬೇಕಾದಷ್ಟು ಪೌಂಡ್‌ಗಳು ಇದ್ದಲ್ಲಿ ಮಾತ್ರ ಅನುಭವ ಅಹ್ಲಾದಕರವಾಗಬಲ್ಲದು.

* * *

ಅಪರವಯಸ್ಸಿನಲ್ಲಲ್ಲದಿದ್ದರೂ ಮಧ್ಯವಯಸ್ಸಿನ ಪ್ರವಾಸ ನನ್ನದು. ಹತ್ತು ವರ್ಷ ಮುಂಚೆ ಬ್ರಿಟಿಷ್ ಕೌನ್ಸಿಲ್ ಸ್ಕಾಲರ್‌ಷಿಪ್ ದೊರಕಿದ್ದಿದ್ದರೆ ಅಲ್ಲಿಯೇ ನೆಲೆಸಿಬಿಡುತ್ತಿದ್ದೆನೇನೋ ಎಂದು ನನ್ನ ಸ್ನೇಹಿತರು ನನ್ನ ಪರವಾಗಿ ಭಾವಿಸುತ್ತಾರೆ ಎಂಬುದು ನನ್ನ ಖಂಡಿತವಾದ ಭಾವನೆ. "ಪ್ರವಾಸ ಮಾಡುತ್ತ ಪ್ರವಾಸಾನುಭವ ಬರೆಯುವುದು ಬಲು ಕೃತಕ" ಎನ್ನುತ್ತಾನೆ ಬ್ರಿಟಿಷ್ ಪ್ರವಾಸಕಥನಕಾರ ಪೀಟರ್ ಬಿಡ್ಲ್‌ಕೂಂಬ್. ಕೇವಲ ೧೭೯ ದೇಶಗಳನ್ನು ನೋಡಿ ಬಂದಿರುವ ಈತ ವ್ಯಾಪಾರಿ. ಮತ್ತು ಬ್ರಿಟಿಷರಿಗೆ ಹೆಚ್ಚು ಪರಿಚಯವಿರದ ಅವರವನೇ ಆದ ಲೇಖಕ. ಉತ್ಪ್ರೇಕ್ಷೆ ಮಾಡಿ ಬರೆಯುತ್ತಾನೆ ಈತ. "ಸೊಮಾಲಿಯದಲ್ಲಿ ಬಿಸಿಲು, ಹಸಿವು ತಡೆಯದೆ ಜನ ರಸ್ತೆಯಲ್ಲಿ ಹಳ್ಳ ತೋಡಿ ಕುತ್ತಿಗೆ ಮಟ್ಟ ತಮ್ಮನ್ನು ತಾವೇ ಹುದುಗಿಕೊಳ್ಳುತ್ತಾರೆ...ಇಪ್ಪತ್ತು ವರ್ಷ ಒಂದೇ ಆಫೀಸಿನಲ್ಲಿ ಜೊತೆಗೇ ದುಡಿದಿದ್ದರೂ ಜರ್ಮನ್ ಪ್ರಜೆ ತನ್ನ ಸಹೋದ್ಯೋಗಿಯನ್ನು ಪರಿಚಯ ಮಾಡಿಕೊಡುವ ಮೊದಲು ಆತನ ಹೆಸರನ್ನು ಕೇಳಿ ತಿಳಿದುಕೊಳ್ಳುತ್ತಾನೆ. ಅರ್ಥಾತ್ ನಮಗೆ ಸಹೋದ್ಯೋಗಿಯನ್ನು ಪರಿಚಯಿಸುವ ಮುನ್ನ ಅವರೇ ಮೊದಲು ಪರಿಚಯ ಮಾಡಿಕೊಳ್ಳುತ್ತಾರೆ, ಎರಡು ದಶಕಗಳ ಒಡನಾಟದ ನಂತರವೂ!" ಇತ್ಯಾದಿಯಾಗಿ ಬರೆಯುತ್ತಾನೆ. ಈ ನನ್ನ ಪ್ರಿಯ ಬರಹಗಾರ 'ಇಷ್ಟೊಂದು ಉತ್ಪ್ರೇಕ್ಷೆ' (ಇದೂ ಒಂದು ಉತ್ಪ್ರೇಕ್ಷೆಯೇ!) ಮಾಡಿ ಬರೆಯುವುದರಿಂದ ಆತನನ್ನು ರಿ'ಪೀಟರ್' ಬಿಡ್ಲ್‌ಕೂಂಬ್ ಎಂದು ಪುನರ್‌ನಾಮಕರಣ ಮಾಡಿದ್ದೇನೆ.

* * *

ಲಂಡನ್ನಿನ ಯಾವುದೇ ವಿವರವನ್ನು ಬರೆಯಲು ಪ್ರಯತ್ನಿಸಿದರೂ ಇಂಟರ್‌ನೆಟ್ ಅಡ್ಡ ಬರುತ್ತದೆ. "ಇವೆಲ್ಲ ನನ್ನ ಒಡಲೊಳಗೇ ಇದೆ" ಎನ್ನುತ್ತದೆ ಅದು. ಕಂಪ್ಯೂಟರ್ ಬಂದು ಹಸ್ತಪ್ರತಿಬರಹದ ಸೊಬಗನ್ನು, ಅದಕ್ಕಿಂತಲೂ ಹೆಚ್ಚಾಗಿ ಅದನ್ನು ಒಡೆದು ಹಾಕುವ ಅಹ್ಲಾದವನ್ನು ಹಾಳುಮಾಡಿಬಿಟ್ಟಿದೆ. ರವೀಂದ್ರನಾಥ್ ಟಾಗೂರ್ ಕಂಪ್ಯೂಟರ್‌ನಲ್ಲಿ ಬರೆಯುವಂತಿದ್ದಿದ್ದರೆ ಅವರು ತಮ್ಮ ಕವನಗಳನ್ನು ಕಾಟು ಹಾಕಿ ಕಲಾಕೃತಿಗಳನ್ನಗಿಸಲಾಗದೆ, ತನ್ಮೂಲಕ ಕಲಾವಿದರಾಗದೆ, ರವಿವರ್ಮನನ್ನು ವಿರೋಧಿಸದೆ, ಇಡಿಯ ಭಾರತೀಯ ಕಲಾ ಇತಿಹಾಸವೇ ಬದಲಾಗಿರುತ್ತಿತ್ತು. ತನ್ಮೂಲಕ ಚಿಂತನಾಲಹರಿಯ ಕ್ರಮವನ್ನೇ ಮರುಪರಿಶೀಲಿಸುವ ಅನಿವಾರ್ಯತೆ ಹಾಗೂ ಅವಕಾಶವನ್ನೋದಗಿಸಿಕೊಟ್ಟಂತೆ ಇದು. "ಮತ್ತೆ ಯಾರಪ್ಪ ತಿದ್ದುವುದು" ಎಂಬ ಸೋಮಾರಿತನವೇ ನಮ್ಮ ನಮ್ಮ ಲೇಖನಗಳಿಗೆ ಒಂದು ತೆರನಾದ ಓಪನ್‌ನೆಸ್ ನೀಡುತ್ತಿದ್ದ ಕಾಲ ಮುಗಿದು ಒಂದು ದಶಕವೇ ಆಗಿಹೋಗಿದೆ.

ಇಂಟರ್‌ನೆಟ್ ಪರದೇಶ ಯಾತ್ರೆಯ ಮಜ ಕೆಡಿಸಿದಂತೆ ಅನಿವಾಸಿ ಭಾರತೀಯರಿಗೆ ತವರಿನ ಕುತೂಹಲದ ಆತಂಕವನ್ನೂ ಸಾಕಷ್ಟು ಮೊಟಕುಗೊಳಿಸಿದೆ. ಅಬ್ಬರದ ಕ್ರಿಸ್‌ಮಸ್ ಮಾರನೇ ದಿನ, ಚೆಸ್ಟರ್‌ಫೀಲ್ಡಿನಲ್ಲಿ, ಸುನಾಮಿ ಅಘಾತ ಸುದ್ಧಿ ಕೇಳಿ, ಬಾಕ್ಸಿಂಗ್ ಹೊಡೆತ ತಿಂದಂತೆ (ಅಂದು 'ಬಾಕ್ಸಿಂಗ್ ಡೇ') ಇಂಟರ್‌ನೆಟ್ ನೋಡಿದರೆ ಸಂಜೆವಾಣಿಯ ಮೊದಲ ಸಾಲು, "ಸುನಾಮಿ ಕಂಪನ ಮೊದಲು ನ್ಯೂ ಬಿ.ಇ.ಎಲ್ ರಸ್ತೆಯಲ್ಲಿ" ಎಂದಿತ್ತು. ಇದರಲ್ಲಿ ವಿಶೇಷವೇನಿಲ್ಲದಿದ್ದರೂ ಬೆಂಗಳೂರಿನಲ್ಲಿ ನಮ್ಮ ಮನೆ ಆ ರಸ್ತೆಯಲ್ಲಿತ್ತು.

* *

ವೃತ್ತವೊಂದರ ಕೋನವನ್ನು ಹುಡುಕಿದಂತೆ ಪ್ರವಾಸದ ಕಥನ. ನಾನು ಲಂಡನ್ನಿನಲ್ಲಿ ಕುಳಿತು, ಕೆನಡದ ವಿಲ್ ಫರ್ಗೂಸನ್ ಎಂಬಾತ ಜಪಾನಿನ ದಕ್ಷಿಣ ತುದಿಯಿಂದ ಉತ್ತರದವರೆಗೂ ವಾಹನಗಳಿಗೆ ಕೈ ತೋರಿಸಿಯೇ, ಲಿಫ್ಟ್ ಕೇಳುತ್ತ ಪಯಣಿಸಿದ ರೋಚಕ "ಹೊಕೈಡೊ ಹೈವೇ ಬ್ಲೂಸ್" ಓದಿ ದಂಗಾದೆ. ದಕ್ಷಿಣದಿಂದ ಅರಳಲು ಶುರುಮಾಡುವ ಹೂಗಳು ಉತ್ತರದಲ್ಲಿ ಕೊನೆಗೆ ಅರಳುತ್ತವೆ. ವಿಲ್ ಅದರ ಜಾಡು ಹಿಡಿದು, ಅಂತಿಮ ಹಂತ ತಲುಪುವ ವೇಳೆಗೆ ಆತನ ಕೆಲಸದ ರಜೆ ಮುಗಿದಿರುತ್ತದೆ. ಹೆಚ್ಚುವರಿ ರಜೆ ಪಡೆದು, ಹಿಂದಿರುಗುವ ಮುನ್ನ ದಿನ, ತುಟ್ಟ ತುದಿಯ ದ್ವೀಪಕ್ಕೆ ಒಂದು ದಿನದ ಮಟ್ಟಿಗೆ ಹೋಗುವ ಈತ ಭಾರಿ ಬಿರುಗಾಳಿ ಮಳೆಗೆ ಸಿಕ್ಕಿ ದ್ವೀಪದಲ್ಲೇ ವಾರಗಟ್ಟಲೆ ಬಂದಿಯಾಗಿ ಇಬ್ಬಂದಿಯಾಗುವಲ್ಲಿ ಈ ಪ್ರವಾಸ ಕಥನ ಮುಗಿಯುತ್ತದೆ. ಅಥವ ಆರಂಭಗೊಳ್ಳುತ್ತದೆ. ಪ್ರವಾಸ ಕಥನದ ಸಮಕಾಲೀನ ಅಭಿವ್ಯಕ್ತಿ ರೂಪವೊಂದನ್ನು ಈತ ಅನಿವಾರ್ಯವಾಗಿ ಕಂಡುಕೊಳ್ಳಬೇಕಾಗಿ ಬಂದುದು ಕಾದಂಬರಿ ಪ್ರಕಾರದ ರೋಚಕತೆಯಿಂದ! ನನ್ನ ಪ್ರಕಾರ ಪ್ರವಾಸ ಕಥನದ ಮೂಲಭೂತ ಅವಶ್ಯಕತೆ ಏನೆಂದರೆ 'ಆ' ಒಂದು ಸತ್ಯಾಂಶ ಅದರಲ್ಲಿರಬೇಕು. ಅದೇನೆಂದರೆ, ಯಾವ ದೇಶ, ಗಡಿಗಳ ಬಗ್ಗೆ ಬರೆಯುತ್ತೇವೋ ಅಲ್ಲಿಗೆ ಕಥೆ ಹೇಳುವಾತ/ಕೆ ದೈಹಿಕವಾಗಿಯಾದರೂ ಹೋಗಿರಬೇಕು (ವಾಪಸ್ ಬರುವುದು ಬಿಡುವುದು ಅವರಿಗೇ ಬಿಟ್ಟದ್ದು ಅಥವಾ ಸೇರಿದ್ದು).

* * *

ವಿ ಅಂಡ್ ಎ ಸಂಗ್ರಹಾಲಯದ ಖ್ಯಾತಿ ಬಲ್ಲವರಿಗೆ (ಇಲ್ಲದಿದ್ದರೆ ಅದು ಹೇಗೆ 'ಖ್ಯಾತ'ವಾಗುತ್ತದೆ?) ಅದೊಂದು ಬೃಹತ್ ಕಟ್ಟಡ ಸಮೂಹವಾಗಿದ್ದು ದೊಡ್ಡ ತೋಟದ ಮಧ್ಯೆ ಇರಬಹುದೆಂಬ ಕಲ್ಪನೆ ಇರುತ್ತದೆ. ಇದೊಂದು ಕಟ್ಟಡ ಸಮೂಹವೆನ್ನುವುದು ನಿಜವೇ. ಆದರೆ ಕಟ್ಟಡಗಳ ಮಧ್ಯೆ ಸಾರ್ವಜನಿಕ ರಸ್ತೆಗಳು ಬಂದುಬಿಟ್ಟಿವೆಯಷ್ಟೇ. ಹಾಗೂ ಒಂದು ಕಟ್ಟಡವನ್ನುಳಿದು ಮಿಕ್ಕೆಲ್ಲವನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ (ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ, ವಿಜ್ನಾನ ಸಂಗ್ರಹಾಲಯ ಇತ್ಯಾದಿ). ಎರಡು ಕಿಲೋಮೀಟರ್ ವಿಸ್ತಾರದ ತೋಟವೂ ಇದೆ -- ಆದರೆ ಅರ್ಧ ಮೈಲು ದೂರದಲ್ಲಿ--ಹೈಡ್ ಪಾರ್ಕ್ ಎಂದು ಇದರ ಹೆಸರು. ಎಣಿಸಲಾಗದಷ್ಟು ಸಂಖ್ಯೆಯಲ್ಲಿರುವುದರಿಂದ ಇಲ್ಲಿರುವ ಕೋಣೆಗಳಲ್ಲಿ ಹಲವು ಬಾರಿ ಹೋಗಿ ಬಂದರೂ ಮತ್ತೆ ಮತ್ತೆ ದಿಕ್ಕು ತಪ್ಪುವ ಸಾಧ್ಯತೆ ಇದೆ. ಅಷ್ಟಿದೆ ಅದರ ವೈವಿಧ್ಯತೆ ಹಾಗೂ ವಿಸ್ತಾರ. ಆದ್ದರಿಂದ ಅಲ್ಲಿ ನೋಡಿದ್ದನ್ನೆಲ್ಲ ನೆನಪಿನಲ್ಲಿಟ್ಟುಕೊಳ್ಳಲಿಕ್ಕಾದರೂ ಮತ್ತೆ ಮತ್ತೆ ಅದೆ ಕೋಣೆಗಳನ್ನು ನೋಡುತ್ತಿರಬಹುದು. ಈ ನಿಟ್ಟಿನಲ್ಲಿ 'ದೃಶ್ಯಗೊಂದಲ' ಹುಟ್ಟಿಸುವ ಇದರ ನಿರ್ಮಿತಿಯ ಸಾಮರ್ಥ್ಯಕ್ಕೆ ಸಾಟಿಯಾದುದು ಪುರಾತನ ಕಾಲದವರ ಚಕ್ರವ್ಯೂಹ, ಲ್ಯಾಬಿರಿಂತ್ ಹಾಗೂ ನಮ್ಮ ಕಾಲದ ಕನ್ನಡ ಟಿವಿ ಸೀರಿಯಲ್‌ಗಳು ಮಾತ್ರ. ಈ ನಾಲ್ಕು ಐತಿಹಾಸಿಕ ಆಗುಹೋಗುಗಳು ವೀಕ್ಷಕರ ಕಣ್ಣುಗಳ ಮೇಲೆ ವಿಶೇಷ ಪರಿಣಾಮ ಬೀರುತ್ತವೆ. ವಿ ಅಂಡ್ ಎ ಸೇರಿದಂತೆ ಮೊದಲ ಮೂರು ಪ್ರಕಾರಗಳ ಪರಿಣಾಮವನ್ನು ಇಂಗ್ಲೀಷರು "ಮ್ಯೂಸಿಯಂ ಫಟೀಗ್" ಹಾಗೂ "ಸೀರಿಯಲ್ ಫಟೀಗ್" ಎಂದು ಕರೆಯುತ್ತಾರೆ. ಇದನ್ನರಿತೇ ಇರಬೇಕು ಕನ್ನಡ ಸೀರಿಯಲ್‌ಗಳು ಪ್ರಸಾರವಾಗುವ ಮನೆಗಳಂತೆ ಮ್ಯೂಸಿಯಂ ಕಲಾಕೃತಿಗಳೆದಿರೂ ಸೋಫಾಗಳನ್ನಿರಿಸಿರುತ್ತಾರೆ -- ದಣಿವಾರಿಸಿಕೊಳ್ಳಲು ಯುನೆಸ್ಕೋ ನಿಯಮಾನುಸಾರ ಇದೊಂದು ಮೂಲಭೂತ ಅವಶ್ಯಕತೆಯೂ ಹೌದು!

* * *

ಜಗತ್ಪ್ರಸಿದ್ಧ ಬಿಲ್ ಬ್ರೈಸನ್ ಎಂಬ ಪ್ರವಾಸ ಕಥನಕಾರ ಉಕ್ಕಿ ಚೆಲ್ಲಾಡುವಷ್ಟು ವಿಷಯ ನೀಡುತ್ತಾನೆ ತನ್ನ ಪ್ರವಾಸ ಪುಸ್ತಕದಲ್ಲಿ (ಓದಿ "ಶಾರ್ಟ್ ಹಿಸ್ಟರಿ ಆಫ್ ನಿಯರ್ಲಿ ಎವ್ರಿತಿಂಗ್"). ವಿಜ್ನಾನದ ವಿಷಯಕ್ಕೆ ಇದು ಪೂರಕ. ಆದರೆ ಅಂತಹವನಿಗೂ ಅಂತರ್ಜಾಲದ ಜಾಲದ ಮರ್ಮ ತಿಳಿದಿದೆ. ಪ್ರವಾಸ ಕಥನದಲ್ಲಿ ಹಾಸ್ಯವನ್ನು ಅಳವಡಿಸುತ್ತಾನೆ, ತನ್ನ ವಿಜ್ನಾನ ಪುಸ್ತಕದಲ್ಲಲ್ಲ. "ನಾನು ಹುಟ್ಟಿದ್ದು ಅಯೊವಾದಲ್ಲಿ. ಯಾಕೆಂದರೆ ಯಾರೋ ಒಬ್ಬರು ಅಲ್ಲಿ ಹುಟ್ಟಬೇಕಾಗಿತ್ತಲ್ಲ", ಎಂಬುದು ಆತನ ಅಮೇರಿಕ ಪ್ರವಾಸದ ಪುಸ್ತಕದ ಮೊದಲ ವಾಕ್ಯ (ಪುಸ್ತಕ "ನೋಟ್ಸ್ ಫ್ರಮ್ ಅ ಬಿಗ್ ಕಂಟ್ರಿ"). ಎರಡು ಮೂರನೇ ಬಾರಿ "ಶಾರ್ಟ್ ಹಿಸ್ಟರಿ.."ಯ ಲಂಡನ್ನಿನ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ಸಾಹಸಗಳನ್ನು ಓದಲು ಪ್ರಯತ್ನಿಸಿದಾಗ ತೂಕಡಿಸಿದ್ದೆ. ಎಂಥಹ ಮನೋರಂಜಕ ಕಥನವಾದರೂ ಅದಕ್ಕೊಂದು ತಾತ್ವಿಕ ಉದ್ಧೇಶವಿಲ್ಲದಿದ್ದರೆ ಕಾಲಾಂತರದಲ್ಲಿ ಅದರ ಸಹವಾಸದಲ್ಲಿ ತೂಕಡಿಕೆ ಕಟ್ಟಿಟ್ಟ ಬುತ್ತಿ!

(ಈ) ಲಂಡೇನಿಯಮ್ ಎಂಬ ವಿಶ್ವಾಮಿತ್ರ 'ದೃಷ್ಟಿ':

ಲಂಡನ್ನಿನಲ್ಲಿ ಏಳು ತಿಂಗಳ ಕಾಲ ರಾಯಲ್ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ ನಾನು ಸ್ನಾತಕೋತ್ತರ ತರಗತಿಗಳಿಗೆ ಸೇರ್ಪಡೆಯಾಗಿದ್ದುದ್ದು ನನ್ನ ಪ್ರವಾಸ ಕಥನವಾಗಲಾರದು. ಲಂಡನ್ನಿನ ತನಕ ಪ್ರವಾಸ ಮಾಡಿದೆ. ಆದರೆ ಅಲ್ಲಿ ತಲುಪಿದ ನಂತರ "ಅಲ್ಲಿಯೇ ನೆಲೆಸಿದ್ದೆ". ಕೇವಲ ಅಲ್ಲಿದ್ದ ಅನುಭವವನ್ನು ಹೇಳಿದರೆ ಅಲ್ಲಿಯೇ ಹೋಗಿ ನೆಲೆಸಿರುವ ಭಾರತೀಯರು ನಕ್ಕಾರು--ಕನ್ನಡ ಬರುವಂತಿದ್ದು, ಈ ಅನುಭವವನ್ನು ಓದುವಂತಿದ್ದರೆ.

ಇತ್ತ ವಿದ್ಯಾರ್ಥಿಯೂ ಅಲ್ಲದೆ ಅತ್ತ ಉಪಾಧ್ಯಾಯನಾಗಿಯೂ ಇರದ "ಮಿಡ್-ಕೆರಿಯರ್" ಎಂಬ ನಾಮಾಂಕಿತದ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನ ಪಡೆದು "ಅಬ್ಸರ್ವರ್" ಎಂಬ ಪದವಿಯೊಂದಿಗೆ ವಿದ್ಯಾರ್ಥಿ, ಉಪಾಧ್ಯಾಯರ ಮಧ್ಯೆ ಕುಳಿತುಕೊಂಡೆ, ಏಳು ತಿಂಗಳ ಕಾಲ. ಅಲ್ಲಿ "ಏನು" ಪಾಠ ಹೇಳಿಕೊಡುತ್ತಾರೆನ್ನುವುದಕ್ಕಿಂತಲೂ "ಹೇಗೆ" ಹೇಳಿಕೊಡುತ್ತಾರೆ ಎಂಬುದನ್ನು ನಾನು ಗಮನಿಸಬೇಕಾಗಿತ್ತು. ವಿಶ್ವಾಮಿತ್ರ ಸೃಷ್ಟಿ ಈ ಪದವಿ. ದೃಶ್ಯಕಲೆಯ ಸೃಷ್ಟಿಯೂ ಅಲ್ಲದ ಅದರ ವಿಮರ್ಶೆಯೂ ಅಲ್ಲದ 'ಸಮಕಾಲೀನ ಕಲೆಯ ಕ್ಯುರೇಷನ್' ಎಂಬ ವಿಶ್ವಾಮಿತ್ರ ಸೃಷ್ಟಿ ಈ ಕೋರ್ಸ್. ಕೋಣೆಯೊಂದರಲ್ಲಿ ಅಕ್ಕಪಕ್ಕ ಪ್ರದರ್ಶಿತವಾಗಿರುವ ಕೃತಿಗಳು ಇಲ್ಲಿಯವರೆಗೂ (ಸುಮಾರು ಐದು ಶತಮಾನಗಳ ಕಾಲ) ಪರಸ್ಪರ ಅಪರಿಚಿತವಾಗಿಯೇ ಉಳಿದುಕೊಂಡು ಬಿಟ್ಟಿದ್ದವು. ೧೯೬೦ರ ದಶಕದಿಂದ ಅವುಗಳ ನಡುವೆ ಸ್ನೇಹ, ನಂತರ ಪ್ರೀತಿ ಉಂಟಾಗಿ ಈಗಂತೂ 'ಚೌಕಟ್ಟಿಲ್ಲದ' ಕಲಾ ಅಂಗಗಳ ಸಮೂಹವಾಗಿ ಬಿಟ್ಟಿವೆ. ಕಾದಂಬರಿ (ಮಿಲನ್ ಕುಂದೆರಾ), ಕಥೆ (ಇಟಾಲೊ ಕ್ಯಾಲ್ವಿನೊ), ವಿಮರ್ಶೆ (ಸಾಂಸ್ಕೃತಿಕ ಅಧ್ಯಯನ)ಗಳೆಂಬ 'ನಿರ್ಮಿತಿ', 'ಚೌಕಟ್ಟು'ಗಳನ್ನು ಇಂದು ಈ ವಾಕ್ಯದ ಬ್ರಾಕೆಟ್ಟಿನಲ್ಲಿರುವವರು/ವುದು 'ಮುರಿದು' ಹಾಕಿದಂತೆ, ಚಿತ್ರಕಲೆ ಎಂಬ ಚೌಕಟ್ಟನ್ನು ಮುರಿದದ್ದು ಈ ಸಮಕಾಲೀನ ಕ್ಯುರೇಷನ್ ಎಂಬ ಸಂಪ್ರದಾಯ. ಆಧುನಿಕೋತ್ತರವೆಂಬುದೇ (ಪೋಸ್ಟ್ ಮಾಡರ್ನ್) ಒಂದು ವಿಶ್ವಾಮಿತ್ರ ಸೃಷ್ಟಿಯಲ್ಲವೆ?

* *

ವಿ ಅಂಡ್ ಎ ಮ್ಯೂಸಿಯಂ-ಕಾರಿಡಾರ್-ಕೋಣೆಗಳು ಲಂಡನ್ ವಲಸಿಗ ಸಂಸ್ಕೃತಿಗೊಂದು ಸಂಕೇತವೆಂದೆ. ಸ್ವತ: ಲಂಡನ್ ನಗರವೇ ಒಂದು ಮ್ಯೂಸಿಯಂ ಎಂದರೆ ನಂಬುತ್ತೀರ? ಹೌದು, ಸಾಧ್ಯ. ಆದರೆ ಲಂಡನ್ ಸೃಷ್ಟಿಯಲ್ಲಿಲ್ಲದ ಪುಸ್ತಕವೊಂದರ ಸಿನಾಪ್ಸಿಸ್ ಇದ್ದ ಹಾಗೆ, ಪ್ರಕಟವಾಗಿರದ ದಿನಪತ್ರಿಕೆಯೊಂದರ ಹೆಡ್‌ಲೈನ್ಸ್ ಇದ್ದ ಹಾಗೆ. ಜಗತ್ತಿನ ಪ್ರತಿಯೊಂದು ಜನಾಂಗದ ಒಬ್ಬೊಬ್ಬ 'ಪ್ರತಿನಿಧಿ' ಖಂಡಿತ ಲಂಡನ್ನಿನಲ್ಲಿ ನೆಲೆಸಿ ಬ್ರಿಟಿಷ್ 'ಪ್ರಜೆ' ಆಗಿರುತ್ತಾನೆ! ಅಂದರೆ ಒಂದು ಜನಾಂಗದ ಪ್ರತಿನಿಧಿಯೊಬ್ಬ ಮತ್ತೊಂದರ ಪ್ರಜೆಯಾಗಿಬಿಡುವ ಆಶ್ಚರ್ಯವನ್ನು ಅರಗಿಸಿಕೊಳ್ಳುವುದಕ್ಕೆ ಉಪಮೆಯೊಂದಿದೆ. ಅಂಗಡಿಯೊಂದರ ಎಲ್ಲ ತಿಂಡಿಗಳನ್ನೂ ಕಾಲು ಕಾಲು ಕೆಜಿ ಬೆರೆಸಿ ಒಟ್ಟು ಮೊತ್ತದ ಕೇವಲ ನೂರು ಗ್ರಾಂ ಸಿಹಿಯನ್ನು ಮಾತ್ರ ಕೊಂಡುಕೊಳ್ಳುವ ಪೋಲಿಷ್ ಜೋಕ್‌ಅನ್ನು ಈಗಿನ ಲಂಡನ್ನಿಗರ ಹಣೆಯ ಬರಹವನ್ನು ಬರೆದ ದೈವವೇ ಸೃಷ್ಟಿಸಿರಬೇಕು.

ಕರ್ನಾಟಕವನ್ನು ಹೊರತುಪಡಿಸಿ ಜಗತ್ತಿನೆಲ್ಲೆಡೆಯಾಗುವಂತೆ ಇಲ್ಲಿ ಕನ್ನಡಿಗರು ಅಪರೂಪ. ಟೂಂಟಿಗ್ ಬ್ರಾಡ್‌ವೆ ಎಂಬೆಡೆ (ಕೇಂದ್ರ ಲಂಡನ್ ಬ್ರಿಜ್‌ನಿಂದ ೧೦ ಕಿ.ಮೀ ದೂರ) ಒಂದು ತಮಿಳು ಚಿಲ್ಲರೆ ಅಂಗಡಿಗೆ ಹೋಗಿದ್ದೆ. ಅಲ್ಲಿ ಕೇವಲ ಮತ್ತು ಶುದ್ದ ತಮಿಳಿನಲ್ಲಿ ಮಾತ್ರ ಇರುಕ್ಕುದು ಸೈನ್‌ಬೋರ್ಡ್! ತಮ್ಮ ಸಂಸ್ಕೃತಿಯನ್ನು ಬಿಡದೆ ತಮ್ಮೊಂದಿಗೆ ಹೋದಲ್ಲೆಲ್ಲ ತೆಗೆದೊಯ್ಯುವುದೆಂದರೆ ಇದೇ ಇರಬೇಕು ಎಂದು ಕನ್ನಡದಲ್ಲೇ ಯೋಚಿಸಿದೆ. ಭಾರತವನ್ನೇ ನೋಡದ ತಮಿಳನೊಬ್ಬನ ಅಸ್ತಿತ್ವ ಸಾಧ್ಯ. ಆದರೆ ಭಾರತವನ್ನೇ ಎಂದೂ ನೋಡಿರದ ಕನ್ನಡಿಗ? ಕನ್ನಡವನ್ನು ಓದಿ ಬರೆಯಬಲ್ಲವರನ್ನು ಕನ್ನಡಿಗರು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವಲ್ಲ. ಹಾಗಲ್ಲದೆ ಓದಿ ಬರೆಯಲಾಗದ ಒಂದಿಡೀ ಯುವ ತಲೆಮಾರಿನ ಕನ್ನಡಿಗರೇ ಕರ್ನಾಟಕದಲ್ಲೆ ಕಂಡುಬರುವುದು "ಒಂದು ವಂಡರ್". ಅನಂತ ಎಂಬುದನ್ನು ಕಲ್ಪಿಸುಕೊಳ್ಳುವುದು ಹೇಗೆಂದು ಬಹಳ ತಲೆ ಕೆಡಿಸಿಕೊಂಡಿದ್ದೆ. ಈಗ ತಿಳಿಯಿತು--ಹಾಗೆಂದರೆ ಭಾರತವನ್ನು ನೋಡಿರದ ಕನ್ನಡಿಗರು ಎಂದು!

ವಿ ಅಂಡ್ ಎ ಮ್ಯೂಸಿಯಂ ಒಳಗಿನ ವಸ್ತುಗಳು ಎರಡನೇ ಹಂತದಲ್ಲಿ 'ಕಲಾತ್ಮಕ' ವಸ್ತುಗಳೆನಿಸುತ್ತವೆ. ಮೊದಲ ಹಂತದಲ್ಲಿ ಅವೆಲ್ಲ ವಸಾಹತೀಕರಣದ ಗೆಲುವಿನ ಸಂಕೇತ. ಬ್ರಿಟಿಷರು ಯಾವ್ಯಾವ ದೇಶಗಳನ್ನೆಲ್ಲ ಆಕ್ರಮಿಸಿಕೊಂಡಿದ್ದರೋ ಅಲ್ಲೆಲ್ಲ ಎರಡು ಬದಲಾವಣೆಗಳನ್ನು ಮಾಡಿಬಂದರು: (ಅ) ಅಲ್ಲಿದ್ದ ಕಲಾತ್ಮಕ ವಸ್ತುಗಳನ್ನೆಲ್ಲ ಇಂಗ್ಲೆಂಡಿಗೆ ತೆಗೆದೊಯ್ದು ಜೋಪಾನ ಮಾಡಿ, "ಅದು ನಮಗೇ ಸೇರಿದ್ದು", ಎಂದುಬಿಟ್ಟರು. (ಆ) ಆಯಾ ದೇಶಗಳಲ್ಲಿ, ರಸ್ತೆಯ ಎಡಭಾಗದಲ್ಲಿ ವಾಹನವನ್ನು ಡ್ರೈವ್ ಮಾಡುವುದನ್ನು ಕಲಿಸಿಬಂದಿದ್ದಾರೆ. ಆದ್ದರಿಂದ ಯುರೋಪ್ ಹಾಗೂ ಅಮೇರಿಕದವರು ಇಂಗ್ಲೆಂಡಿನಲ್ಲಿ ಡ್ರೈವ್ ಮಾಡುವ ಸಾಹಸಕ್ಕೆ ಎಳೆಸಲಾರರು. ಆದ್ದರಿಂದಲೇ ಅಂಡರ್‌ಗ್ರೌಂಡ್ ಟ್ಯೂಬ್‌ಗಳ ಎಲಿವೇಟರ್‌ಗಳಲ್ಲಿ ಯಾವಾಗಲೂ ಗೊಂದಲ. ನಿಂತು ಚಲಿಸುವವರು ಬಲಕ್ಕೆ ಸರಿದು, ಎಲಿವೇಟರ್‌ನಲ್ಲಿಯೂ ಸರಸರನೆ ಇಳಿದು, ಹತ್ತಿ--ಒಟ್ಟಾರೆ ನಡೆದು ಹೋಗುವವರಿಗೆ ಎಡಕ್ಕೆ ಜಾಗಬಿಡಬೇಕು. ವಸಾಹತೀಕರಣಗೊಂಡವರಿಗೆ ಅದು ಗೊತ್ತು. ವರ್ಷಕ್ಕೆ ಐವತ್ತು ಲಕ್ಷ ಪ್ರವಾಸಿಗಳು ಓಡಾಡುವ ಈ ನಗರದಲ್ಲಿ ಬಹುಪಾಲು ಜನ ಈ ಗುಂಪಿಗೆ ಸೇರಿಲ್ಲವೆಂಬ ವಿಷಯವು ಎಲಿವೇಟರ್‌ಗಳಲ್ಲಿ ನಡೆವ ತಮಾಷೆಯನ್ನು ನೆನೆಸಿಕೊಳ್ಳಲು ನಿಮಗೆ ಸಹಾಯಕವಾಗಲಿ.

* * *

ಈ ವಲಸಿಗರ ನಗರ ಸ್ವತ: ಒಂದು ತಾತ್ಕಾಲಿಕ ನಗರ. ಎರಡು ಸಾವಿರ ವರ್ಷದಿಂದಲೂ ಇದೇ ಸ್ಥಿತಿ. ಬೆಂಗಳೂರಿನಲ್ಲಿಂದು ಜನ ಸುಮಾರು ನಲ್ವತ್ತು ಭಾಷೆಗಳನ್ನು ಮಾತನಾಡುತ್ತಾರೆ. ಎರಡು ಸಾವಿರ ವರ್ಷಗಳ ಹಿಂದೆಯೇ, ಅಂದರೆ ೫೦ನೇ ಕ್ರಿ.ಶ.ದಲ್ಲೇ ಲಂಡನ್ನಿನಲ್ಲಿ ಜನ ಅಷ್ಟು ಭಾಷೆಗಳನ್ನು ಮಾತನಾಡುತ್ತಿದ್ದರಲ್ಲಿ, ಅದೂ ಇಂಗ್ಲಿಷನ್ನು ಹೊರತುಪಡಿಸಿ! ಆಗ ರೋಮನ್ನರ ಆಕ್ರಮಣದಲ್ಲಿದ್ದ ಲಂಡೇನಿಯಮ್ ಎಂಬ ಈ ನಗರದಲ್ಲಿ ಇಂಗ್ಲಿಷ್ ಎಂಬ ಭಾಷೆ ಹುಟ್ಟಿಯೇ ಇರಲಿಲ್ಲ (ಇಂಗ್ಲಿಷ್‌ನ ಹುಟ್ಟು, ಬಾಲ್ಯ, ಯೌವನ ಇತ್ಯಾದಿಗಳಿಗಾಗಿ ಮೆಲ್ವಿನ್ ಬ್ರಾಗ್‌ನ ಪುಸ್ತಕ ನೋಡಿ). ಜರ್ಮನ್, ಫ್ರೆಂಚ್, ಸ್ಪಾನಿಷ್, ಪೋರ್ಚುಗಲ್, ಇಟಾಲಿಯನ್, ಗ್ರೀಕ್ ಹಾಗೂ ಸಂಸ್ಕೃತ ಸೇರಿ ಇಂಗ್ಲಿಷ್ ಸೃಷ್ಟಿಯಾಯಿತೆಂದು ಬ್ರಾಗ್ ಇಂಗ್ಲಿಷಿನಲ್ಲೇ ಸ್ಪಷ್ಟಪಡಿಸುತ್ತಾನೆ. ಒಂದೊಮ್ಮೆ ಲಂಡನ್ನಿನ ಮುಖ್ಯ ಸ್ಮಾರಕಗಳಲ್ಲೊಂದಾದ ಸೇಂಟ್ ಪಾಲ್ ಕ್ಯಾಥೆಡ್ರಲ್ಲಿನ ಮುಂದೆ ಬೈಬಲ್ ಪುಸ್ತಕಗಳ ರಾಶಿಯನ್ನು ಸುಟ್ಟು ಬೂದಿ ಮಾಡಲಾಗಿತ್ತು. ಕಾರಣ, ಅವೆಲ್ಲ ಇಂಗ್ಲಿಷಿನಲ್ಲಿ ಬರೆಯಲ್ಪಟ್ಟಿತ್ತು ಎಂಬುದು! ಇಂದು ಇಂಗ್ಲಿಷರ ಹೃದಯ ಭಾಗದಲ್ಲಿದ್ದುಕೊಂದು ಹೃದಯವೇ ಆಗಿಬಿಟ್ಟಿದೆ ಈ ಕ್ಯಾಥೆಡ್ರಲ್!

ಒಂದರ್ಥದಲ್ಲಿ ಲಂಡನ್ 'ನೋಡಲರ್ಹವಾಗುವಂತೆ' ನಿರ್ಮಿತವಾಗಿದೆ. ಯಾವುದೇ ಅಂಗಡಿಯ ಒಳಹೊಕ್ಕರೂ "ಸಿ.ಸಿ.ಟಿ.ವಿ" ಕ್ಯಾಮೆರಗಳು. ಇದರಿಂದ ಅಪರಾಧಗಳೇನೂ ಕಮ್ಮಿಯಾಗಿಲ್ಲ. ಆದರೆ ಕ್ಯಾಮೆರಗಳ ಟೇಪ್‌ಗಳನ್ನು ಆಧರಿಸಿ, ಕಳ್ಳನನ್ನು ಬಿಟ್ಟು ಆತನ ಅಕ್ಕಪಕ್ಕದವರ ಫೊಟೋಗಳನ್ನು 'ಮೆಟ್ರೊ'ದಂತ ಬಿಟ್ಟಿ ಪತ್ರಿಕೆಗಳಲ್ಲಿ ಮುದ್ರಿಸಿ, "ದಯವಿಟ್ಟು ನೀವು ಪೋಲಿಸರನ್ನು ಸಂಪರ್ಕಿಸಿ", ಎಂದು ಬೇಡುತ್ತದೆ ಪತ್ರಿಕೆ, ಪೋಲಿಸ್ ಇಲಾಖೆಯ ಪರವಾಗಿ. "ಇನ್ನೊಂದೆರೆಡು ದಿನಗಳ ನಂತರ ಕಳ್ಳನ ಪೋಟೋವನ್ನೇ (ಸಿಸಿಟಿವಿ ಆಧಾರದಿಂದ) ಪ್ರಕಟಿಸಿ, ದಯವಿಟ್ಟು ಸರಂಡರ್ ಆಗಿ", ಎಂದು ಬೇಡುತ್ತಿರುತ್ತಾರೆ ಪೋಲಿಸರು, ನೋಡಿ ಬೇಕಾದರೆ," ಎಂದು ಹೇಳಿದ್ದ ಮಿ. ಹೋಮ್ಸ್.

(ಉ) ನಮ್ಮ ಹೋಮ್ಸ್ ಮತ್ತವರ ಪಾಪರಾಝಿಸ್

ಹೋಮ್ಸ್‌ನ ಪೂರ್ತಿ ಹೆಸರು ಶರ್ಲಾಕ್ ಹೋಮ್ಸ್. "ನಾನು ಬಾಂಡ್, ಜೇಮ್ಸ್ ಬಾಂಡ್," ಎಂಬಂತೆ ಈತ ತನ್ನ ಪರಿಚಯ ಮಾಡಿಕೊಂಡಿದ್ದ. "ಐ ಆಮ್ ಹೋಮ್ಸ್, ಶರ್ಲಾಕ್ ಹೋಮ್ಸ್, ಫ್ರೆಂಡ್ ಟು ಡಾ.ವಾಟ್ಸ್‌ನ್" ಎಂದು ಹಸ್ತ ಮುಂದೆ ಚಾಚಿದ್ದ. "ಯು ಆರ್ ಅನ್ ಆಂಟಿಥೀಸಿಸ್ (ತದ್ವಿರುದ್ಧ) ಟು ಹೋಮ್ಸ್", ಎಂದು ನಕ್ಕಿದ್ದೆ, ಆ ಧಡಿಯನನ್ನು ಕಂಡು. ಶರ್ಲಾಕ್ ಹೋಮ್ಸ್ ಮ್ಯೂಸಿಯಂನಲ್ಲಿ ಕೆಫೆಟೇರಿಯದಲ್ಲಿ ಕುಳಿತಿದ್ದಾಗ ಸಿಕ್ಕಿದ್ದ ಹೋಮ್ಸ್. "ಡಾ. ವಾಟ್ಸನ್ ಎಲ್ಲಿ?" ಎಂದದ್ದಕ್ಕೆ "ಅವ ತೀರಿಕೊಂಡ" ಎಂದಾಗ ಗಾಬರಿಯಾದೆ. ಕಲ್ಪಿತ ವ್ಯಕ್ತಿಯೊಂದು ತೀರಿಕೊಂಡಿದ್ದಕ್ಕಲ್ಲ, ವಿಷಯ ಅದಕ್ಕಿಂತ ಗಂಭೀರವಾಗಿತ್ತು. ಹೋಮ್ಸ್‌ನ ಬಾಯಿಯ ಪೈಪಿನಿಂದ ಉತ್ತರ ಕನ್ನಡ ಭಾಷೆ ಸುರುಳುಸುರುಳಿಯಾಗಿ ಹೊರ ಬಂದಿತ್ತು!

ಬಸ್ ಡ್ರೈವರನಾಗಿ ನಿವೃತ್ತಿ ಹೊಂದಿರುವ ಅರವತ್ತರ ಹೋಮ್ಸ್‌ನ ನಿಜ ಹೆಸರು ಆತನಿಗೆ ಪತ್ತೆಹಚ್ಚಲಾರದಷ್ಟು ಮರೆವಿನ ಆಳಕ್ಕೆ ಹೋಗಿಬಿಟ್ಟಿದೆ. ಹೋಮ್ಸ್ ಮ್ಯೂಸಿಯಂನ ಕೆಫೆಟೇರಿಯದ ತಾತ್ಕಾಲಿಕ ಒಡೆಯ ಈತ, ಈಗ. ತಾರ್ಕಿಕ ಪ್ರಯೋಗ ಈತನ ಮುಖ್ಯ ಚಟ, ನಿಜವಾದ ಕಲ್ಪಿತ ಹೋಮ್ಸ್‌ನಂತೆ.

"ನೀನು ದಕ್ಷಿಣ ಭಾರತದ ಗೌಡ ಎಂದ. "ಎಕ್ಸ್‌ಪ್ಲನೇಷನ್ ಪ್ಲೀಸ್" ಎಂದೆ. 'ನೀನು ಪಾಕಿಸ್ತಾನಿಯಲ್ಲ, ಭಾರತೀಯ ಎಂಬುದಕ್ಕೆ ನಿನ್ನ ಬಾಡಿ ಲಾಂಗ್ವೇಜ್ ಸಾಕ್ಷಿ. ಅನಿಲ್ ಕುಂಬ್ಳೆಯ ಪೀಚು ನಿಲುವು ನಿನ್ನದು, ಎದೆಯುಬ್ಬಿಸಿ ಪಾಕ್ ಪ್ರಿಕೆಟಿಗನಂತೆ ನಡೆಯಲಾರೆ. ಸ್ವಲ್ಪ ಕಪ್ಪು ಮೈಬಣ್ಣ, ದಪ್ಪ ಮೀಸೆ ಹಾಗೂ ಸ್ಪಷ್ಟ ಇಂಗ್ಲಿಷ್ ಮಾತನಾಡುವುದರಿಂದ ನೀನು ದಕ್ಷಿಣ ಭಾರತೀಯ."

"ಕನ್ನಡದವ್ನು ಅಂತ ಹೇಗೆ ಗೊತ್ತಾಯ್ತು?" "ಟೇಬಲ್ ಮೇಲಿರೋ ನಿನ್ನ ಡೈರಿಯಲ್ಲಿ ಒಂದೆರೆಡು ಕನ್ನಡ ಪದಗಳಿವೆ" "ಗೌಡ!?" ""ಸ್ವಲ್ಪ ಪ್ಯಾದೆ ಲುಕ್ ಇದೆ. ಅಷ್ಟೇ. ಆದ್ರೆ ನಾನು ಗೌಡ ಅಂದದ್ದು ಹಳ್ಳಿ ಹುಡುಗನ ತರಹ ಇದ್ದೀಯ ಅಂತಷ್ಟೇ" ಎಂದು ತನ್ನ ಅಂಕೆ ಮೀರಿದ ಶೋಧನಾ ಫಲದಿಂದ ಸ್ವತ: ಥ್ರಿಲ್ ಆದ.

* * *

ಹೋಮ್ಸ್‌ನಂತಹ ತರ್ಕಬದ್ದ ವೈಚಾರಿಕತೆ, ಸ್ಕಾಟ್‌ಲೆಂಡ್‌ನಂತಹ ಪ್ರಯೋಗಶೀಲ ಕಲ್ಪಿತ ಪೋಲಿಸ್ ಸಾಹಿತ್ಯ ಬಳಿಯಲ್ಲಿದ್ದಾಗ್ಯೂ ಲಂಡನ್ ಇಂದು, ಸೆಪ್ಟೆಂಬರ್ ೧೧ರ ಎರಡನೇ ಅಧ್ಯಾಯವಾಗಲು ಒಂದು ಫೇವರಿಟ್ ತಾಣ ಎಂಬುದು ೭/೭ರ ನಂತರ ಅನುಮಾನವೇ ಉಳಿದಿಲ್ಲ. ಲಂಡನ್ ತನ್ನನ್ನು ತಾನೆ ನೋಡಿಕೊಳ್ಳುವಂತೆ ಇತರರನ್ನು ನೋಡುವುದಿಲ್ಲ. ಆದ್ದರಿಂದಲೇ ವಲಸಿಗರು ಇಂಗ್ಲೆಂಡ್‌ನ ಹೊರಗಿನಿಂದ ಒಳನುಸುಳುತ್ತಿರುವುದವರಿಗೆ ಕಾಣಲಿಲ್ಲ. ಅವರು ಒಳಬಂದ ಮೇಲೆ ಇವರು ಎಚ್ಚೆತ್ತುಕೊಂಡರು. ೨೦೦೪ರ ಡೆಸೆಂಬರ್ ಸುಮಾರಿಗೆ ಆಲ್‌ಖಾಯ್ದಾ ವಿಧ್ವಂಸಕ ಗುಂಪಿನ ಒಬ್ಬ ಮಹಿಳೆ ಏರೋಪ್ಲೇನ್ ಇಳಿದು ದೇಶದೊಳಕ್ಕೆ ನುಸುಳಿದಳು, ಅದ್ಯಾವ ಮಾಯದಿಂದಲೋ. ಆಕೆ ಹೇಗೆ ಕಾಣುತ್ತಾಳೆಂಬ ವಿಷಯ ಒತ್ತಟ್ಟಿಗಿರಲಿ, ಆಕೆಯನ್ನು ಒಳಗೆ ಬರಲು ಬಿಟ್ಟ ಇಮ್ಮಿಗ್ರೇಷನ್ ಆಫೀಸರ್ ಯಾರು ಎಂಬುದೂ ಸಿಸಿಟಿವಿ ಕ್ಯಾಮೆರದ ದೃಶ್ಯಗಳಲ್ಲಿ ಸ್ಪಷ್ಟವಿರಲಿಲ್ಲ! ಇದನ್ನು "ಡಿ.ಪಿ.ಪಿ" (ಡಿಜಿಟಲ್ ಪಿಕ್ಸ್‌ಲ್ ಪ್ರಾಬ್ಲಂ) ಎಂದು ಲೇವಡಿ ಮಾಡುತ್ತಾರೆ ಗಂಭೀರ ಮುಖದ ಬೆಂಗಳೂರಿನ ಐ.ಟಿ. ಹುಡುಗರು.

ಕೇವಲ ೬೦ ಪೌಂಡಿಗೂ ಒಂದೊಂದು ಮನೆ-ವಿಡಿಯೊ ಕ್ಯಾಮೆರ ದೊರಕುತ್ತದೆ. ಅದನ್ನಿರಿಸಿ ಬೀಗ ಮಾಡಲು ಹೆಚ್ಚು ರೊಕ್ಕ ತೆಗೆದುಕೊಂಡವರ, ಮನೆಗೆಲಸ ಮಾಡುತ್ತ ಒಂಟಿ ಮುದುಕಿಯ ಪರ್ಸಿನಿಂದ ಪ್ರತಿದಿನ ಹಣ ಹೊಡೆವ ಮನೆಗೆಲಸದವರ ಬಂಡವಾಳ ಬಯಲು ಮಾಡುತ್ತಿದ್ದರು 'ನೇಂ ಅಂಡ್ ಶೇಂ' ("ಹೆಸರು ಮತ್ತು ಅದನ್ನು ಕೆಡಿಸಿಕೊಂಡವರು") ಟಿ.ವಿ. ಕಾರ್ಯಕ್ರಮದವರು. ಆದರೆ ಅಪರಾಧಿಗಳು ಯಾವಾಗಲೂ ಸೆರೆಮನೆಯಿಂದ ಹೊರಗೇ!

ಲಂಡನ್ನಿನ ಪಾಪರಾಝಿ ಫೊಟೊಗ್ರಾಫರ್‌ಗಳ ಚಟುವಟಿಕೆಗಳು ಅತ್ಯಾಕರ್ಷಕ. ಜನಪ್ರಿಯ ವ್ಯಕ್ತಿಗಳ ಸುತ್ತೆಲ್ಲ ಇವರೇ. ಇವರ ಸುತ್ತಲೂ ಸುದ್ಧಿ ಮಾಧ್ಯಮಗಳು. ರಾಜಕುಮಾರ ಹ್ಯಾರಿ 'ಮಧ್ಯ'ರಾತ್ರಿಯ ನಂತರ ಪಾಪರಾಝಿ ಫೊಟೊಗ್ರಾಫರನ ಮೂತಿಗೆ ಒಮ್ಮೆ ಗುದ್ದಿದ್ದ--ತಾಯಿಗೆ ತಕ್ಕ ಮಗ. ನಂತರ ತಮಾಷೆ ಪಾರ್ಟಿಯೊಂದರಲ್ಲಿ ಹ್ಯಾರಿ ನಾಜಿಗಳ ಸ್ವಸ್ಥಿಕ ಚಿಹ್ಹ್ನೆ ಹಾಕಿಕೊಂಡಿದ್ದನ್ನು ಇದೇ ಪಾರಾಝಿಗಳು ಕ್ಲಿಕ್ಕಿಸಿ ಪತ್ರಿಕೆಗಳಲ್ಲಿ ಆತನನ್ನು ದೊಡ್ಡ ಅಪರಾಧಿಯನ್ನಾಗಿ ಚಿತ್ರಿಸಿದ್ದರು, ಆತ ಕ್ಷಮೆ ಬೇಡಿದ ನಂತರವೂ ಕೂಡ! ಆದ್ದರಿಂದಲೇ ಲಂಡನ್ನಿನ ಮಹಾ ಮೇಯರ್ ಜ್ಯೂ ಜನಾಂಗದ ಪತ್ರಕರ್ತನನ್ನು ಆತನ ಕುಲದ ಹೆಸರಿನಿಂದ ಹೀಯಾಳಿಸಿದ ನಂತರ ಸುತಾರಾಂ ಕ್ಷಮೆ ಬೇಡಲಿಲ್ಲ -- ಪ್ರಧಾನ ಮಂತ್ರಿ ಕೇಳಿಕೊಂಡರೂ ಸಹ! ಕ್ಷಮೆ ಬೇಡಿದ ನಂತರವೂ ಸುದ್ಧಿ ಮಾಧ್ಯಮಗಳು ಹೀಯಾಳಿಸಿದರೆ, ಅವುಗಳನ್ನು ಹೀಯಾಳಿಸಿ ಕ್ಷಮೆ ಬೇಡದೆ ಇದ್ದುಬಿಡುತ್ತಾರೆ ಈ ಸಾಮ್ರಾಜ್ಯದ ರಾಜಧಾನಿಯ ಪ್ರಥಮ ಪ್ರಜೆ!

ಪಾಪರಾಝಿಗಳದ್ದೇ ಒಂದು ಸಾಮ್ರಾಜ್ಯ. ರಾಜಕುಮಾರಿ ಡಯಾನಾಳಂತಹವರನ್ನೂ ಬಲಿತೆಗೆದುಕೊಳ್ಳಬಲ್ಲ ತಾಕತ್ತು ಇವರದ್ದು. ಜನಪ್ರಿಯ ವ್ಯಕ್ತಿಗಳ ಜನಪ್ರಿಯವಲ್ಲದ ಫೋಟೋ ಕ್ಲಿಕ್ಕಿಸಿ, ಕೂಡಲೇ ಕಂಪ್ಯೂಟರಿಗೆ 'ಕೆಳಗೆ ಇಳಿಸಿ' (ಡೌನ್‌ಲೋಡ್ ಮಾಡಿ) ಪತ್ರಿಕೆಗಳಿಗೆ ರವಾನಿಸುವುದು ಇವರ ಕಾರ್ಯತಂತ್ರ. ಅತಂತ್ರ ಸ್ಥಿತಿಯಲ್ಲಿರುವ ಜನಪ್ರಿಯ ವ್ಯಕ್ತಿಯ ಛಾಯಾಚಿತ್ರವನ್ನು ಇಬ್ಬರು ಪಾಪರಾಝಿಗಳು 'ಕೆಳಗಿಳಿಸಿ' ಕಳುಹಿಸಿದ್ದಾರೆಂದಿಟ್ಟುಕೊಳ್ಳಿ. ಮೊದಲು ಬಂದದ್ದು ಮಾತ್ರ ಸ್ವೀಕೃತವಾಗುತ್ತದೆ. ಒಂದು ನಿಮಿಷ ತಡವಾಗಿ ಬಂದದ್ದು ಕಸದ ಬುಟ್ಟಿಗೆ! ಮೊದಲನೆಯದಕ್ಕೆ ಏನಿಲ್ಲವೆಂದರೂ ೫೦೦ ರಿಂದ ೫೦೦೦ ಪೌಂಡ್ ಬೆಲೆ (೪೦,೦೦೦ ದಿಂದ ಎರಡು ಲಕ್ಷ ರೂಗಲವರೆಗೆ). ಐ.ಟಿ ತಂತ್ರಜ್ನರು, ಪ್ರೊಫೆಸರ್‌ಗಳು, ಬಯೋಟೆಕ್ ಇಂಜಿನಿಯರ್‌ಗಳೆಲ್ಲಾ ಜನಪ್ರಿಯ ವ್ಯಕ್ತಿಗಳನ್ನು 'ನಿಯರ್' ಆಗಿ ನೋಡಬಹುದೆಂಬ ಕಾರಣದಿಂದಲೂ ಪಾಪರ್‌ರಾಝಿಗಳಾಗುತ್ತಿದ್ದಾರೆ. ದ್ವೀಪವೊಂದರ ಮಧ್ಯಭಾಗದಲ್ಲಿ ಹೋಟೆಲಿನಲ್ಲಿ ಕುಳಿತ ಹಾಲಿವುಡ್ ನಟನೊಬ್ಬನ ಗಮನ ಸೆಳೆದು ಆತನ ಚಹರೆ ಕ್ಲಿಕ್ಕಿಸಬೇಕಾದ ಒಂದು ಸಂದರ್ಭ. ಬೋಟಿನಲ್ಲಿ ಪಾಪರಾಝಿಗಳು ಎಷ್ಟು ಕರೆದರೂ ಆತ ಹಿಂದಿರುಗಿ ನೋಡಲಿಲ್ಲ. ಝೂಮ್ ಲೆನ್ಸ್ ಎಂಬುದು ಸದ್ದನ್ನು ಝೂಮ್ ಮಾಡುವುದಿಲ್ಲವಲ್ಲ. ಛಾಯಾಗ್ರಾಹಕರ ಜೊತೆಯಿದ್ದವಳು ಒಬ್ಬ ಆಕರ್ಷಕ ಹೆಂಗಸು. ಆಕೆ ಸ್ವತ: ಛಾಯಾಗ್ರಾಹಕಿಯಲ್ಲ. ಬದಲಿಗೆ ಪಾಪರಾಝಿಗಳ ಮುಂದಾಲೋಚನೆಯ ಮೊತ್ತವಾಗಿದ್ದಳಾಕೆ. ತನ್ನ ಮೈಮೇಲೆ ಅಳಿದುಳಿದಿದ್ದ ಎರಡಿಂಚು ಬ್ರಾವನ್ನೂ ತೆಗೆದು ಹಾಲಿವುಡ್ ನಟನ ಕಡೆ ಅದನ್ನು ಸಿಗ್ನಲ್‌ನಂತೆ ಬೀಸಿದಳು. ಗೊಂದಲಗೊಂಡ ನಟ ಇತ್ತ ತಿರುಗಿದ. ಕ್ಯಾಮರ ಚಕಚಕನೆ ಕ್ಲಿಕ್ ಕ್ಲಿಕ್ ಎಂದು ಸದ್ದು ಮಾಡಿಯೇ ಬಿಟ್ಟಿತು!

"ಇಲ್ಲಿ ಪೋಲಿಸರ ಕೆಲಸ ನಿರ್ವಹಿಸುತ್ತದೆ ಕ್ಯಾಮೆರ, ಆದರೆ ನ್ಯಾಯಾಧೀಶನ ಕೆಲಸವನ್ನಲ್ಲ!" ಎಂದಿದ್ದ ಹೋಮ್ಸ್ ಒಮ್ಮೆ. "ನೀವೆಲ್ಲ ಯಾವ್ಯಾವ ದೇಶಗಳನ್ನು ಆಗೆಲ್ಲ ಆಕ್ರಮಿಸುಕೊಂಡಿದ್ದಿರೋ ಅವರೆಲ್ಲ ಈಗ ನಿಮ್ಮ ದೇಶದ ಹೃದಯ ಭಾಗವನ್ನು ಆಕ್ರಮಿಸಿಕೊಂಡಿದ್ದಾರೆ. ನಿಮಗೆ ತಟ್ಟಿದ ಶಾಪವಿದು ಹೋಮ್ಸ್", ಎಂದುತ್ತರಿಸಿದ್ದೆ. "ಆದರೆ ನನ್ನ ಸೃಷ್ಟಿಕರ್ತ ಆರ್ಥರ್ ಕೊನಾನ್ ಡಾಯ್ಲ್ ಮೂಲತ: ಸ್ಕಾಟ್ಲೆಂಡಿನವನೆಂಬುದು ಗೊತ್ತೆ ನಿನಗೆ? ಪಾಕ್-ಇಂಡಿಯ ಇದ್ದಂತೆ ಸ್ಕಾಟ್‌ಲೆಂಡ್-ಇಂಗ್ಲೆಂಡ್. ಲಂಡನ್ನಿಗೂ ನನಗೂ ಆತ್ಮೀಯ ಸಂಬಂಧವೇ ಇಲ್ಲ. ಈ ಅರ್ಥದಲ್ಲಿ ಲಂಡನ್ನಿನವನೇ ನಾನು, ಏಕೆಂದರೆ ಇಲ್ಲಿರುವವರೆಲ್ಲರೂ ತಾವು ಬೇರೆಲ್ಲಿಯೋ ಸೇರಿದವರೆಂಬ ನಂಬಿಕೆಯವರು, " ಎಂದು ನಗಾಡಿದ್ದನಾತ.

(ಊ) "ಆ" ಮತ್ತು "ಈ" ಸ್ಮಾರಕಗಳ ನಡುವೆ ಕಿಷ್ಕಿಂದಾಪುರಿ

'ಸೈಕಿಕ್ ಜಿಯಾಗ್ರಫಿ' ಎಂಬುದು ಒಂದು ವಿಚಿತ್ರ ಆಟ. ಅದನ್ನು ಆಡುವವರು ಬಹುಪಾಲು ಜನಗಳ ಕಣ್ಣಲ್ಲಿ ವಿಕ್ಷಿಪ್ತರು. ದಾಯ ಎಸೆದು ಲೆಕ್ಕಾಚಾರ ಮಾಡಿ ಅದರಂತೆ, "ಎಡ, ಬಲ, ಮುಂದೆ, ಹಿಂದೆ" ಎಂದೆಲ್ಲ ಲಂಡನ್ ರಸ್ತೆಗಳಲ್ಲಿ ಓಡಾಡುವಂತೆ ಮಾಡುತ್ತದೆ ಈ ಆಟದ ನಿಯಮ. ಈ ಆಟವಾಡಿ, "ಡು ನಾಟ್ ಪಾಸ್ ಗೋ" ಎಂಬ ಪುಸ್ತಕ ಬರೆದಿದ್ದಾನೆ ಟಿಮ್ ಮೂರ್ ಎಂಬಾತ. 'ಲಂಡನ್ ವಾಕ್' ಕಾರ್ಯಕ್ರಮದ ಪ್ರಕಾರ ಎಲ್ಲರೂ ಒಂದೆಡೆ ಸೇರಿ ೧೦ರಿಂದ ೧೨ ಪೌಂಡ್ (ಸುಮಾರು ಸಾವಿರ ರೂಗಳು) ಕೊಟ್ಟು ಗುಂಪಾಗಿ ರಸ್ತೆ ರಸ್ತೆಗಳ ಇತಿಹಾಸ ಬಿಚ್ಚಿಡುತ್ತ ಒಂದು ಗುರಿ ತಲುಪುತ್ತಾರೆ ಆಸಕ್ತರು. ಸೈಕಿಕ್ ಜಿಯಾಗ್ರಫಿಗಿಂತಲೂ ಕಡಿಮೆ ಹುಚ್ಚಿನ, ಹೆಚ್ಚು ವೆಚ್ಚದ ಓಡ್_ಆಟವಿದು. ಲಂಡನ್ ನೋಡಬೇಕಾದರೆ ಕಾಲ್ನಡಿಗೆಯಲ್ಲೇ ಹಾಗೆ ಮಾಡಬೇಕು. ಇಲ್ಲಿ ಕಾಲೇ ದೇವರು.

* *

ಕಣ್ಣು ಮತ್ತು ಕಾಲಿನ ಚಾಲನೆ ಲಂಡನ್ನನ್ನು ಅರ್ಥಮಾಡಿಕೊಳ್ಳಲಿರುವ ಎರಡು ಮೂಲಭೂತ ಅವಶ್ಯಕತೆ. ಇಲ್ಲದಿದ್ದರೆ ಸಿರಿವಂತರು, ಎಲೈಟ್ ಜನರಾದರೆ ಲಂಡನ್ ಬ್ರಿಜ್ ಸಮೀಪ ಒಂದರ್ಧ ಕಿಲೊಮೀಟರು ನಡೆದರೆ ಸಾಕು -- ಪುಸ್ತಕದಲ್ಲಿರುವ ಎಲ್ಲ ಸ್ಮಾರಕಗಳು ಒಂದೇ ಸಾಲಿನಲ್ಲಿ ಜೋಡಿಸಿಟ್ಟಿರುವುದನ್ನು ನೋಡಬಹುದು. ಥೇಮ್ಸ್ ನಡುಗುಂಟ, ಅದರ ಎಡಕ್ಕೆ, ಪಶ್ಚಿಮ ದಿಕ್ಕಿಗೆ ಟವರ್ ಬ್ರಿಜ್‌ನಿಂದ ನಡೆದು ಹೋದರಾಯಿತು. ಲಂಡನ್ ಬ್ರಿಜ್, ೧೩ನೇ ಶತಮಾನದಿಂದಲೂ ಚಾಲನೆಯಲ್ಲಿರುವ ಬರೋ ಮಾರುಕಟ್ಟೆ (ಆಗಿನಿಂದಲೂ ಅಲ್ಲಿ ತಿಂಡಿ ಮಾರುತ್ತಿದ್ದಾರಂತೆ. ಆಗಿನ ತಿಂಡಿಯನ್ನೇನಾದರೂ ಈಗಲೂ ಕೊಟ್ಟಾರು ಎಂಬ ಭಯದಿಂದಲೇ ಒಂದಷ್ಟು ಅಲ್ಲಿನ ರೈತರ ರೊಟ್ಟಿ ಮುದ್ದೆಯ ರುಚಿ ನೋಡಿದೆ). ಅನಸ್ಥೇಷಿಯದ ಸಂಶೋಧನೆಯ ಮುನ್ನ ರೋಗಿಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಆಸ್ಪತ್ರೆ ಬರೋ ಮಾರುಕಟ್ಟೆಯ ಮೇಲೆ, ಹಾಗೇ ಇದೆ. ಈಗಲೂ ರಾತ್ರಿ ಹೊತ್ತಿನಲ್ಲಿ ಆಗಿನ ರೋಗಿಗಳ ಕೂಗಾಟ ಕೇಳುತ್ತದೆಂಬ ಸುದ್ಧಿಯನ್ನು ನಂಚಿಕೊಂಡು ಕೆಳಗಿನ ಮಾರುಕಟ್ಟೆಯಲ್ಲಿ ಭಾನುವಾರದಂದು ಈಗಿನ ಕಾಲದ ಕಿಲಾಡಿ ಮುದುಕರು ತಮ್ಮ ನಾಸ್ತಾದ ರುಚಿ ಹೆಚ್ಚಿಸಿಕೊಳ್ಳುತ್ತಾರೆ. ಲಂಡನ್ನಿನ ಅಫೀಶಿಯಲ್ ರಫ್ ಗೈಡ್ ಪುಸ್ತಕದಲ್ಲೂ ಈ ಕೂಗು ಕೇಳಿಸುತ್ತದೆ. ಮೂರ್‌ಗೇಟ್ ಟ್ಯೂಬ್ ಸ್ಟೇಷನ್ನಿನ್ನಲ್ಲಿ ರಾತ್ರಿ ಪಾಳಯದ ಕೆಲಸದವರು ಚಕ್ಕರ್ ಹೊಡೆದರೆ ಅವರಿಗೆ ಶಿಕ್ಷೆಯೇ ಇಲ್ಲ. ಏಕೆಂದರೆ ಅವರನ್ನು ಶಿಕ್ಷಿಸಬೇಕಾದ ಬಾಸ್ ಸಹ ಮಧ್ಯರಾತ್ರಿಗಳಲ್ಲಿ, ಇನ್ನೂರು ವರ್ಷದ ಹಿಂದಿನ ನಾಟಕದ ವಸ್ತ್ರ ಧರಿಸಿದ ವ್ಯಕ್ತಿಗಳನ್ನು ಆಗಾಗ ನೋಡಿಯೇ ಇರುತ್ತಾನೆ. ಇವರೆಲ್ಲರನ್ನೂ ಗಾಭರಿಗೊಳಿಸುವ ಒಂದೇ ಒಂದು ಅಂಶ ಪ್ರಶ್ನೆಯ ರೂಪದಲ್ಲಿದೆ. ವಿದ್ಯುತ್ ಅನ್ವೇಷಣೆಯ ಮುಂಚೆ ಬದುಕಿದ್ದಂತಹ ಆ ವ್ಯಕ್ತಿಗಳು ವೈರಸ್ ಪೀಡಿತವಾದ ಫೋಟೋಶಾಪ್‌ನ ಚಿತ್ರಗಳಂತೆ ಮಾಯವಾಗಿ ಮತ್ತೆ ಪ್ರತ್ಯಕ್ಷವಾಗಲು ಹೇಗೆ ಸಾಧ್ಯ? ಎಂಬುದು. ಅತ್ಯಂತ ಜನಪ್ರಿಯ ಪ್ರವಾಸಿ ಗೈಡ್ "ರಫ್ ಗೈಡ್" ಮತ್ತು ಬ್ರಿಟಿಷ್ ಸರ್ಕಾರವೆರಡೂ ಇದನ್ನು ಸಮಸ್ಯೆಯೆಂದು ಒಪ್ಪಿಕೊಂಡಿರುವುದಕ್ಕೆ ಕಾರಣ ಅವರೊಳಗೆ ನೆಲೆನಿಂತಿರುವ ಡಡ್ಲಿ ವೈರಸ್ಸೇ ಇರಬೇಕು!

ಪಾಯ ಮಾತ್ರವೇ ಉಳಿದಿರುವ ವಿನ್‌ಚೆಸ್ಟರ್ ಅರಮನೆ, ಶೇಕ್ಸ್‌ಪಿಯರ್ ಸ್ವತ: ತನ್ನ ನಾಟಕಗಳಲ್ಲಿ ನಟಿಸಿದ್ದ ತಾಣವಾದ ಗ್ಲೋಬ್ ಥಿಯೇಟರ್, ಹನ್ನೊಂದು ನಿಮಿಷ ಈ ಒಂದೆರೆಡು ಕಿಲೋಮೀಟರ್ ದರ್ಶನ ಮಾಡಿಸುತ್ತದೆ ಡೇಮಿಯನ್ ಹರ್ಸ್ಟ್ ಬೋಟು. ಫ್ಯಾಕ್ಟರಿಯೊಂದರ ಅಸ್ತಿಪಂಜರವನ್ನು ಹಾಗೇ ಉಳಿಸಿಕೊಂಡು ಅದನ್ನು ಟೇಟ್ ಮಾಡರ್ನ್ ಗ್ಯಾಲರಿಯನ್ನಗಿಸಲಾಗಿದೆ (೨೦೦೦ ಕ್ರಿ.ಶ). ಅದರ ನೇರಕ್ಕೆ ನದಿಯ ಆ ಭಾಗಕ್ಕಿದೆ ಪುರಾತನ ಸೇಂಟ್ ಪಾಲ್ಸ್ ಕ್ಯಾಥಡ್ರಲ್. ೧೬೬೬ರಲ್ಲಿ ಬೇಕರಿಯೊಂದರಿಂದ ಹೊರಟ ಬೆಂಕಿಯಿಂದಾಗಿ, ಹತ್ತು ದಿನ ಇಡೀ ಲಂಡನ್ ಹತ್ತಿ ಉರಿದಾಗಲೂ ಏನೂ ಊನವಾಗದೇ ಉಳಿದ ಪೂಜಾಸ್ಥಳವಿದು! ಟೇಟ್ ಹಾಗೂ ಸೇಂಟ್ ಪಾಲ್ಸ್ ಎರಡನ್ನೂ ಬೆಸೆಯುತ್ತದೆ ಮಿಲೆನಿಯಂ ಬ್ರಿಜ್. ಸರಿಯಾಗಿ ೨೦೦೦ದ ಜನವರ್ ೧ರಂದು ಪ್ರಾರಂಭವಾಗಿ, ಜನ ಓಡಾಡಲು ಪ್ರಾರಂಭಿಸಿದಾಗ ಅದು ಅಲ್ಲಡಿ ನಡುಗಲಾರಂಭಿಸಿತ್ತು. ಇಂಗ್ಲೆಂಡಿನ ಮಣ್ಣಿನ ಮಗ ನಾರ್ಮನ್ ಫೋಸ್ಟರನ ಸೃಷ್ಟಿಯಿದು. ಈ ಸಹಸ್ರಮಾನದ ನಡುಕವನ್ನು ನಿಲ್ಲಿಸಲು ಕೇವಲ ಐನೂರು ಕೋಟಿ ರೂಪಾಯಿ ಹೆಚ್ಚು ಖರ್ಚು ಮಾಡಬೇಕಾಗಿ ಬಂದಿತಷ್ಟೇ.

ಅದರ ಪಕ್ಕ ಇರುವುದು 'ಲಂಡನ್ ಐ'. ಲಂಡನ್ ಕಣ್ಣು: ಹತ್ತು ಚದುರ ಅಡಿಯ ಮೊಟ್ಟೆಯಾಕಾರದ ಹತ್ತಾರು ಗಾಜಿನ ಗೂಡುಗಳನ್ನೊಳಗೊಂಡ ಈ ದುಂಡನೆ ನಿರ್ಮಾಣದ ಪ್ರತಿ ಮೊಟ್ಟೆಯಲ್ಲೂ ೨೦ ಮಂದಿಯನ್ನು, ಅರ್ಧಗಂಟೆಗೊಂದು ಸುತ್ತಿನಂತೆ, ಇನ್ನೂರು ಮೀಟರ್ ಮೇಲೇರಿಸಿ ಸಮಗ್ರ ನಗರವನ್ನು ದರ್ಶಿಸಿ ಕೆಳಕ್ಕಿಳಿಸಲಾಗುತ್ತದೆ. ಸಲ್ವಡಾರ್ ಡಾಲಿ ಹಾಗೂ ಸಮಕಾಲೀನ ಕಲೆಯ ಸಾಚಿ ಗ್ಯಾಲರಿ, ಅಕ್ವೇರಿಯಂ ಮ್ಯೂಸಿಯಂ ನೋಡಿದ ನಂತರ ಸಿಗುವ ವೆಸ್ಟ್ ಮಿನಿಸ್ಟರ್ ಸೇತುವೆ ಹತ್ತಿ ಬಲಕ್ಕೆ ತಿರುಗಿದರೆ ಬಿಗ್ ಬೆನ್ ಗಡಿಯಾರ ಸಿಗುತ್ತದೆ. ತಿರುಗದಿದ್ದರೂ ಎರಡು ಕಿಲೊಮೀಟರ್ ದೂರದಿಂದಲೂ ಅದು ಕಾಣುತ್ತದೆ.ಈ ಇಡೀ ಸ್ಮಾರಕಗಳ ಸಾಲನ್ನು ಎಣಿಸುತ್ತ ಸುಮ್ಮನೆ ನಡೆದು ಹೋಗುವಾಗಲೂ, ಕಾಲುಗಂಟೆಗೊಮ್ಮೆ ಬಡಿದುಕೊಳ್ಳುವ ಗಡಿಯಾರ ನಾಲ್ಕಾರು ಬಾರಿ ಸದ್ದು ಮಾಡಿರುತ್ತದೆ. ಆದರೆ ನಾವದನ್ನು ಗಮನಿಸಲಾರದಷ್ಟು ಮಗ್ನರಾಗಿರುತ್ತೇವೆ. ಬ್ರಿಟಿಷರ ವಿಧಾನಸೌಧಕ್ಕೆ ತಗುಲಿ ನಿಂತಿರುವುದೇ ಈ ಎತ್ತರದ ಗಡಿಯಾರ.

ಆದರೆ ಊರೆಲ್ಲ, ಯಾವ ಅಂತಸ್ತಿನಿಂದ ನೋಡಿದರೂ, ಬಸ್ಸುಗಳಿಂದಲೂ, ಬೇಡವಾದ ಸ್ಥಳಗಳಿಂದಲೂ ಧುತ್ತನೆ ಕಂಡುಬಿಡುವ ಸ್ಮಾರಕವೊಂದಿದೆ. ಸಮಗ್ರ ಲಂಡನ್ 'ದರ್ಶನ' ಮಾಡಿಸಲೆಂದೇ ಇರುವ 'ಲಂಡನ್ ಐ' ಇಂತಹ ವೈಪರೀತ್ಯ ಗುಣವುಳ್ಳದ್ದು. ಪ್ಯಾರಿಸಿನ (ಇದು ಫ್ರಾನ್ಸಿನಲ್ಲಿದೆ, ರವಿವರ್ಮ ಕನ್ನಡಿಗ ಎಂದು ತಪ್ಪರ್ಥ ಮಾಡಿಕೊಳ್ಳುವಂತೆ ಇದು ಲಂಡನ್‌ನಲ್ಲಿದೆ ಎಂದು ತಪ್ಪಾಗಿ ಭಾವಿಸುವವರಿಗೇನೂ ಕಡಿಮೆ ಇಲ್ಲ) ಐಫಲ್ ಟವರ್ ಇರುವುದು ತನ್ನನ್ನೇ ತೋರಿಸಿಕೊಳ್ಳುವುದಕ್ಕೆ. ಲಂಡನ್ ಐ ಇರುವುದು ತನ್ಮೂಲಕ ಲಂಡನ್‌ಅನ್ನು ತೋರಿಸುವುದಕ್ಕೆ. ತಮಾಷೆಯೆಂದರೆ, ಆತನೊಬ್ಬ ಪ್ಯಾರಿಸ್ಸಿನವನಾದ ಕಾರಣ ಐಫಲ್ ಟವರ್ 'ನೋಡಿ ನೋಡಿ' ಬೇಸತ್ತು ಅದರಿಂದ ತಪ್ಪಿಸಿಕೊಳ್ಳಲು ಒಂದು ಉಪಾಯ ಹುಡುಕಿದನಂತೆ. ಅದೇನೆಂದರೆ ಐಫಲ್ ಟವರ್ ಕಾಣದಂತೆ ಪ್ಯಾರಿಸ್ಸಿನಲ್ಲಿರಬೇಕಾದರೆ ಆ ಟವರ್‌ನ ಒಳಗೇ ಹೋಗಿ ಕುಳಿತುಬಿಡುತ್ತಿದ್ದನಂತೆ. ಹೀಗೆ ಕುಳಿತುಕೊಳ್ಳುತ್ತಿದ್ದವನು ಗೈ ಮೊಪಾಸ ಎಂಬ ಕಥೆಗಾರ. ಹೀಗೆಂದು ತಿಳಿಸಿದವನು ರೊಲಾಂಡ್ ಬಾತ್ ಎಂಬ ತಾತ್ವಿಕ ಬರಹಗಾರ. ಐಫಲ್ ಟವರಿನೊಳಗೆ ಕುಳಿತು, ಅದರ ಬಗ್ಗೆ ಬರೆಯುತ್ತಿದ್ದಾಗ ಈ ಘಟನೆ ನೆನಪಾಯಿತಂತೆ! ಈ ನಿಟ್ಟಿನಿಂದ 'ಲಂಡನ್ ಐ' ಝೆನ್‌ಗೆ ತೋರುಬೆರಳಿದ್ದಂತೆ. ಸಾವಿರ ರೂಪಾಯಿ ದಂಡ ಮಾಡಿ (೧೩ ಪೌಂಡ್) ಅದರೊಳಗೆ ಹೋಗಿ, ಅದು ತೋರಿಸುವ ಅದರ 'ಹೊರಗಿನ' ಸಮಗ್ರ ಲಂಡನ್ ನೋಡಲು ಹೋಗಲಿಚ್ಛಿಸದವರು ಅದನ್ನೇ ನೋಡುತ್ತ ತೃಪ್ತಿಪಟ್ಟುಕೊಳ್ಳುತ್ತಾರೆ. ಚಂದ್ರನನ್ನು ತೋರುವ ಬೆರಳನ್ನೇ ಚಂದ್ರನೆಂದುಕೊಳ್ಳುವ ಬಡವರ ಉಪಾಯವಿದು.

ಚಕಚಕನೆ ಒಂದು ದಿನದಲ್ಲಿ ಲಂಡನ್ ನೋಡಬೇಕಾದವರಿಗೆ ಇದು ಸಮಗ್ರ ಪಟ್ಟಿ. ಆದರೆ ವೆಸ್ಟ್‌ಮಿನಿಸ್ಟರ್ ಮಂತ್ರಾಲಯದ ಹಿಂದಿನ ಪಾರ್ಕಿನಲ್ಲಿರುವ ಫ್ರೆಂಚ್ ಕಲಾವಿದ ಪ್ರಸಿದ್ದ ಅಗಸ್ಟ್ ರೊಧಾನ ಬರ್ಗರ್ಸ್ ಆಫ್ ಕಲಾಯ್ಸ್ ಅನ್ನು ಮರೆತುಬಿಡಬೇಕಾಗುತ್ತದೆ. ಪೀಟರ್ ಬಿಡ್ಲ್‌ಕೂಂಬನ ಶೈಲಿಯಲ್ಲಿ ಉತ್ಪ್ರೇಕ್ಷಿಸಿ ಹೇಳಬೇಕೆಂದರೆ, "ಲಂಡನ್ನಿನಲ್ಲಿ ನಡೆದಾಡದೆ ಹೋದರೆ ನಾವು 'ನೋಡದೆ' ಹೋಗುವ ಒಂದು ಸಾವಿರ ಸ್ಮಾರಕಗಳಲ್ಲಿ ಇದು ಮೊದಲನೆಯದು!"

* * *

"ಬ್ರಿಟಿಷರ ಆತ್ಮ-ರತಿ ಗುಣದಿಂದಾಗಿ ಅರವನ್ನು ಅವರೇ ನೋಡಿಕೊಂಡಂತೆ ಅವರ ಹೊರಗಿನದನ್ನು ನೋಡಲಾರರು, " ಎಂದಿದ್ದ ಹೋಮ್ಸ್ ಮತ್ತೊಮ್ಮೆ. ಅವರು ನೋಡದೇ ಹೋದಾಗ ಹೊರಗಿನವರೆಲ್ಲ ಅಲ್ಲಿ ಬಂದು ನೆಲೆನಿಂತಿದ್ದು, ಆ ಮಹಿಳಾ ಭಯೋತ್ಪಾದಕಿ ಸಿಸಿಟಿವಿಯ ಕಣ್ತಪ್ಪಿಸಿ ಒಳಬಂದಂತೆ. ಅವರಿನ್ನೂ ಅನ್ಯವನ್ನು ನೋಡಲು ಕಲಿಯದೇ ಇರುವುದರಿಂದಲೇ ಲಂಡನ್ ಕೇಂದ್ರ ಭಾಗಕ್ಕೆ ಹತ್ತು ಕಿಲೊಮೀಟರ್ ಹತ್ತಿರದಲ್ಲಿರುವ ಟೂಟಿಂಗ್ ಬ್ರಾಡ್‌ವೇಯ ಮೂರ್ನಾಲ್ಕು ದಿನಸಿ ಅಂಗಡಿಗಲಲ್ಲಿ ಒಂದೂ ಇಂಗ್ಲೀಷ್ ಅಕ್ಷರವನ್ನೋಳಗೊಳ್ಳದ ಶುದ್ಧ ತಮಿಳು ಬೋರ್ಡ್‌ಗಳು ರಾರಾಜಿಸುತ್ತಿರುವುದು!

* * *

ಇಂಟರ್‌ನೆಟ್ಟಿನಲ್ಲಿ ಮೆಗಾಂಯಾಪಿನಲ್ಲಿ ಲಂಡನ್ ಭೂಪಟವನ್ನು ನೋಡುವ ಸೌಲಭ್ಯವಿದೆ. ಅದರೊಂದಿಗೆ ಒಂದು ವಿಶೇಷ ಸವಲತ್ತೂ ಇದೆ. 'ಫೊಟೋ-ವ್ಯೂ'ವನ್ನು ಕ್ಲಿಕ್ಕಿಸಿದರೆ ಲಂಡನ್‌ನನ್ನು ಸ್ಯಾಟಿಲೈಟಿನಿಂದ ತೆಗೆದ ಫೊಟೋಗಲ ಮೂಲಕ ನೋಡಬಹುದು. ಬಹಳ ಶ್ರಮವಹಿಸಿ ತೆಗೆದ ಫೊಟೋಗಳಿರಬೇಕು, ಏಕೆಂದರೆ ಹೇಗೇ ತೆಗೆದರೂ ಲಂಡನ್ ಮೋಡಗಳ ಸಮೂಹವಾಗೇ ಕಾಣುತ್ತದೆ. ಬಿಡ್ಲ್‌ಕೂಂಬೆ ಹೇಳುವಂತೆ," ಕಳೆದ ಬಾರಿ ಲಂಡನ್ ಮೇಲೆ ಸೂರ್ಯನ ಬೆಳಕು ಬಿದ್ದದ್ದು ಶೆಕ್ಸ್‌ಪಿಯರ್ ಸತ್ತ ದಿನ." ಇಂಗ್ಲೆಂಡ್ ಕತ್ತಲ ದೇಶ. ಲಂಡನ್ ಅದರ ಸುಷುಪ್ತಾವಸ್ತ ಸ್ಥಿತಿ.

(ಋ) ನಗರವೆಂಬ ಮ್ಯೂಸಿಯಂ, ಮ್ಯೂಸಿಯಂ ಎಂಬ ಅಗರ:

ಲಂಡನ್ನಿನಲ್ಲಿ ಅಕ್ಷರಶ: ಇಲ್ಲಕ್ಕೂ ಒಂದೊಂದು ಮ್ಯೂಸಿಯಂಗಳಿವೆ. ಬೊಂಬೆಗಳು, ಮಕ್ಕಳಿಂದ ಹಿಡಿದು ಲಂಡನ್ ಬಗ್ಗೆಯೇ ಒಂದು ಮ್ಯೂಸಿಯಂ ಇದೆ! ಲಂಡನ್ ಎಂಬ ಭೌಗೋಳಿಕ ಪ್ರದೇಶದ ಬಗ್ಗೆ ಒಂದು ಹಾಗೂ ಲಂಡನ್ನಿನವರು ತಮ್ಮ ದೇಶವನ್ನು ಬಿಟ್ಟು ಇತರೆ ಭೌಗೋಳಿಕ ದೇಶ-ಖಂಡಗಳನ್ನು ಎಲ್ಲೆಲ್ಲಿ ಆಳಿದ್ದರೋ ಅವುಗಳ ಬಗ್ಗೆ ಎಲ್ಲ ಒಂದೊಂದು ಮ್ಯೂಸಿಯಂ ಇದೆ. ಆದರೆ ಇವೆಲ್ಲಕ್ಕಿಂತ ರಂಜನೀಯವಾದ ಮ್ಯೂಸಿಯಂ ಎಂದರೆ ವಲಸಿಗರದು. ಯಾವ್ಯಾವ ದೇಶದಿಂದ, ಯಾರ್ಯಾರು, ಯಾವಾಗ್ಯಾವಾಗ, 'ಏಕೆ' ಇಂಗ್ಲೆಂಡಿಗೆ ಬಂದು ನೆಲೆಸಿದರೆಂಬುದರ ಬಗ್ಗೆ ಇರುವುದೇ ಲಂಡನ್ ಮ್ಯೂಸಿಯಂ.

* * *
ಇಡೀ ನಗರವೇ ಒಂದು ಮ್ಯೂಸಿಯಂ ಆಗಿರುವಾಗ ಅದರೊಳಗಿನ ಮ್ಯೂಸಿಯಂಗಳನ್ನು ನೋಡುವುದು ಒಂದು ಭ್ರಮಾತ್ಮಕ ಕೆಲಸ. ಹೈಡ್ ಪಾರ್ಕಿನ ಮಧ್ಯದಲ್ಲಿ, ರಾಯಲ್ ಆಲ್ಬರ್ಟ್ ಹಾಲಿನ ಎದುರಿಗಿರುವ ರಾಯಲ್ ಆಲ್ಬರ್ಟ್ ಚೌಕವನ್ನೇ ಬೇಕಾದರೆ ಅರ್ಥಮಾಡಿಕೊಳ್ಳಬಹುದು. 'ಮಧ್ಯೆ', 'ಮೇಲುಭಾಗದಲ್ಲಿ' ಚಿನ್ನದ ಲೇಪವಿರುವ ಲಾರ್ಡ್ ಆಲ್ಬರ್ಟ್. ಇದರ ಸುತ್ತಲೂ ಸುಮಾರು ಇನ್ನೂರು ಅಡಿ ಚೌಕದ ಕಾಂಪೌಂಡು -- ಅವುಗಳೂ ಚಿನ್ನ, ಬೆಳ್ಳಿ ಮುಂತಾದ ಬೆಲೆ ಬಾಳುವ "ಎಲಿಮೆಂಟ್ಸ್"ಗಳ ಮಿಶ್ರಣ ಲೇಪ. ಕಾಂಪೌಂಡಿನ ನಾಲ್ಕೂ ಮೂಲೆಗಳಲ್ಲಿ ಒಂದೊಂದು ಖಂಡಗಳನ್ನು -- ಇಂಗ್ಲೆಂಡಿನ ಪಂಜಿನ ಹಿಡಿತಕ್ಕೆ ಸಿಕ್ಕಿದ್ದ ಖಂಡಗಲ 'ಮೂರ್ತಿರೂಪ' ಚಿತ್ರಣ. ಏಷ್ಯ, ಆಫ್ರಿಕ, ಅಮೇರಿಕ, ಯುರೋಪಿಯನ್ನರನ್ನು ಇಂಗ್ಲೀಷರು ಹೇಗೆ ನೋಡಿದರೋ ಅಂತಹ ಚಿತ್ರಣವಿಲ್ಲಿದೆ. ಏಷ್ಯವೆಂದರೆ ಒಬ್ಬ ಚೀನಿ ಕುಂಗ್-ಫು ಮಾಸ್ತರ, ಒಂದು ಆನೆ, ದಾಡಿ ಮೀಸೆ ಬಿಟ್ಟ ಒಬ್ಬ ಪಾಳೇಗಾರ ಇವೇ ಮುಂತಾದ, ಪ್ಲಾಸ್ಟರ್ ಆಫ್ ಪ್ಯಾರಿಸಿನಲ್ಲಿ ಮಾಡಿರುವಂತೆ ಕಂಡುಬರುತ್ತವೆ (ಆ ಮಾಧ್ಯಮದಲ್ಲಿಯಾದರೂ ಮಾಡಿ ಆ ಮಳೆನಾಡಿನಲ್ಲಿ ಹಾಗೇ ಹೊರಗಿಟ್ಟಿದ್ದರೆ, ಇಷ್ಟೊತ್ತಿಗಾಗಲೆ ನಾಲ್ಕೂ ಖಂಡಗಳು ಕರಗಿ ನೀರಾಗಿರುತ್ತಿದ್ದವು--ಇಂಗ್ಲಿಷ್ ಕಣ್ಣಲ್ಲಿ ವಸಾಹತೀಕೃತ ಜಗತ್ತು ಕರಗಿಹೋದಂತೆ). ರಾತ್ರಿಯಾದಂತೆ ಆಲ್ಬರ್ಟ್ ಶಿಲ್ಪ ಮಾತ್ರ ಹೈಲೈಟಾಗುತ್ತದೆ. ಹಿಂದೊಮ್ಮೆ 'ಸೂರ್ಯ ಮುಳುಗದ' ಈ ಸಾಮ್ರಾಜ್ಯದಲ್ಲಿ ಮಧ್ಯಾಹ್ಹ್ನವೇ ರಾತ್ರಿಯಾಗಿಬಿಡಲು ಕಾಲನ ನಿರಂತರ ಮೋಡ ಕವಿದ ಚಳಿ ವಾತಾವರಣ ಮತ್ತು ಅವೆರಡನ್ನೂ ಆಗಾಗ ಕರಗಿಸುವ ಜಿಟಿ ಜಿಟಿ ಮಳೆ.

ರಾತ್ರಿಯಲ್ಲಿ ನಾಲ್ಕು ಖಂಡಗಳ ಶಿಲ್ಪಸಮೂಹ ಕತ್ತಲೆಯಲ್ಲಿ ಮುಳುಗಿ ಹೋಗುತ್ತವೆ. ಇನ್ನೂರು ಅಡಿ ದೂರ ದುಂಡಗಿರುವ ಆಲ್ಬರ್ಟ್ ಹಾಲಿನ ಪ್ರೊಜೆಕ್ಟರ್ ರೂಮಿನಿಂದ ಒಂದು ಫೋಕಸ್ ಲೈಟ್ ಆಲ್ಬರ್ಟ್‌ನ ಶಿಲ್ಪದ ಮೇಲೆ ಮಾತ್ರ ಬೀಳುತ್ತದೆ. ಈ ಇನ್ನೂರು ಅಡಿ ಅಂತರದಲ್ಲಿ ವಿಶಾಲವಾದ ಎರಡು ರಸ್ತೆಗಳಲ್ಲಿ ವಾಹನ ಸಂಚಾರವೆಲ್ಲ ಈ ಆಲ್ಬರ್ಟ್, ಆತನ 'ಹಾಲ್' ಮತ್ತು ಅವೆರಡನ್ನೂ ಬೆಸೆವ ದಿವ್ಯವಲ್ಲದ ಭೌತಿಕ ಬೆಳಕುಗಳ ಮಧ್ಯೆಯೇ ಹಾಯ್ದುಹೋಗಬೇಕು! ಸಾಮಂತರಿಲ್ಲದಿದ್ದರೂ, ಇಂದಿಗೂ ಸಾಮ್ರಾಜ್ಯಶಾಹಿಯಾಗಿ ಮೆರೆವ ಇಂಗ್ಲಿಷರ ಆಸೆಯನ್ನು ಕತ್ತಲೂ ಸಹ ಮರೆಮಾಡಲಾರದು, ಬಾಪುರೇ!!

ದುಂಡಾಕಾರದ ಆಲ್ಬರ್ಟ್ ಹಾಲ್‌ನದ್ದು ಬೇರೊಂದು ಮುಖ. ಅದರ ಪಕ್ಕದಲ್ಲಿರುವ ಅಷ್ಟೇ ಜಗತ್ಪ್ರಸಿದ್ಧವಾದ ರಾಯಲ್ ಕಾಲೇಜ್ ಆಫ್ ಆರ್ಟ್ಸ್‌ಗೆ ನಮ್ಮ ಎಂ. ಜಿ.ರೋಡಿನ ಬರ್ಟನ್ ಟವರ್‌ಗಿರುವಷ್ಟಾದರು ಮುಂಭಾಗದಲ್ಲಿ ನಾಲ್ಕು ಗಿಡ ನೆಡಲು ಜಾಗವಿಲ್ಲ. ಪಾಶ್ಚಾತ್ಯರ ಬಗ್ಗೆ ಏಷ್ಯನ್ನರಿಗೆ ಏನೆಲ್ಲ ಆದರ್ಶೀಕೃತ ಕಲ್ಪನೆಗಳಿರುತ್ತವೆ, ಅಂತಹ ಕಲ್ಪನೆಗಳಿಗೆ ಒಂದು 'ಮಾನಸಿಕ ಚಿತ್ರವೂ' ಸೇರಿಕೊಂಡಿರುತ್ತದೆ. ಇಂಗ್ಲೆಂಡಿನ ಬಗ್ಗೆ ಅದನ್ನು ಕಂಡಿರದ ಭಾರತೀಯರಿಗೆ ಇರುವ ಇಂತಹ 'ಮಾನಸಿಕ ಚಿತ್ರಗಳಲ್ಲಿ' ಶೇಕಡ ೯೦ ಭಾಗ ಟುಸ್ಸಾಗುವ ಸಾಧ್ಯತೆಗಳೇ ಹೆಚ್ಚು. ಎಡ್ವರ್ಡಿಯನ್, ವಿಕ್ಟೋರಿಯನ್ ಯುಗದ ಜನ ಪ್ರತಿ ಆಲ್ಬರ್ಟ್ ಹಾಲ್‌ನ ಶೋ ಇರುವಾಗಲೂ ನೂರಾರು ಸಂಖ್ಯೆಯಲ್ಲಿ, ಅಂದಿನ ಉಡುಪು ವಯ್ಯಾರಗಳೊಂದಿಗೇ ಪ್ರತ್ಯಕ್ಷರಾಗುತ್ತಾರೆ. ಇಲ್ಲಿಯವರೆಗೂ ಇಂಗ್ಲೆಂಡ್ ನೋಡದವರ ಕಲ್ಪನೆ ನಿಜ ಮಾಡುವಂತಿರುತ್ತದೆ ಅವರುಗಳ ಉಡುಪು, ವಯ್ಯಾರ ಎಟ್‌ಸೆಟ್ರ.

ಸಾರೋಟು, ಕ್ಯಾರೇಜು ಮಾತ್ರ ಕಾಣುವುದಿಲ್ಲವೇಕೆಂದರೆ ಟ್ರಾಫಿಕ್ ಪ್ರಾಬ್ಲಂ. ಬೆಂಗಳೂರಿನಷ್ಟೇ ಜನರಿದ್ದಾರಿಲ್ಲಿ, ಆದರೆ ಲಂಡನ್ ನಮ್ಮೂರಿಗಿಂತ ಮೂರು ಪಟ್ಟು ದೊಡ್ಡದಾಗಿದೆ. "ಆದ್ದರಿಂದ ಟ್ರಾಫಿಕ್ ಪ್ರಾಬ್ಲಂ ಎಲ್ಲಿಯದು ಮಾರಾಯ?" ಎಂದು ನೀವು ನನ್ನನ್ನು ಕೇಳಲೇಬೇಕು. "ಸಾಹೇಬ್ರ, ಲಂಡನ್ನಿನ ಹೃದಯ ಭಾಗದಲ್ಲಿ, ಜಗತ್ರ್ಪಸಿದ್ಧ ಸ್ಮಾರಕಗಳ ಸುತ್ತುಮುತ್ತಲೇ ಇರುವ ರಸ್ತೆಗಳಿಗಿಂತ ನಮ್ಮ ಶ್ರೀರಾಂಪುರ, ಓಕಳೀಪುರಗಳ ರಸ್ತೆಗಳೇ ವಿಶಾಲವಾಗಿದೆ ಕಣ್ರೀ ನಮ್ಮೌನಾಣೆಗೂ", ಎಂದು ನಾನು ಉತ್ತರಿಸಲೇಬೇಕು. ನಮ್ಮೂರಲ್ಲಿ ದಿನಕ್ಕೆ ನಾಲ್ಕ್ ಜನ ರಸ್ತೇಲಿ ಸಾಯ್ತಾರೆ ಅಲ್ಲಿ ಇಬ್ಬರು ಮಾತ್ರ ಎಂಬುದೇ ಸಮಾಧಾನದ ವಿಷಯ--ಅವರಿಗೆ.

ಆಲ್ಬರ್ಟ್ ಹಾಲ್ ಸಮೀಪ, ನಮ್ಮ ತ್ರಿಭುವನ್ ಥಿಯೇಟರಿನ ಬಳಿಯ ಬ್ಲಾಕ್‌ನಲ್ಲಿ ಟಿಕೆಟ್ ಮಾರುವವನ ಧ್ವನಿಯಲ್ಲೇ ಇಲ್ಲಿ ಕೆಲವು ಸೂಟುಧಾರಿಗಳು ಇಂಗ್ಲಿಷಿನಲ್ಲೇ ಬ್ಲಾಕ್ ಟಿಕೆಟ್ ಮಾರುತ್ತಿರುತ್ತಾರಷ್ಟೇ! ಬ್ಲಾಕ್ ಟಿಕೆಟ್ ಮಾರೋವ್ರೂ ಇಂಗ್ಲೀಷ್ ಮಾತಾಡಂಗಾಯ್ತಲ್ಲ, ಕಾಲ ಕೆಟ್ಟೋಯ್ತು ಅಂದುಕೊಳ್ಳಬಹುದು ನಮ್ಮ ಕಡೆ ಹಿರಿಯೋರು.

* *

ಪ್ರವಾಸ ಕಥಾನಕಾರರು ಮೊದಲಿಗೆ ವಿವರಿಸುವುದು ಹೊಸ ಊರಿನ ಪ್ರಸಿದ್ದ ಕಟ್ಟಡಗಳನ್ನ. ನನಗೆ ಎಷ್ಟೋ ಕಟ್ಟಡಗಳು ಪ್ರಸಿದ್ಧವೆಂದು ತಿಳಿದದ್ದೇ ಇಂತಹ ಓದಿನಿಂದ!

ಲಂಡನ್ನಿನಲ್ಲೂ ಹಾಗೆ ಆಗಿತ್ತು. ಸೇತುವೆಯೊಂದರ ಮೇಲೆ ನಿಂತು ರಾತ್ರಿ ಹೊತ್ತು ಅದ್ಭುತ ಪ್ರಭೆ ಬೀರುತ್ತಿದ್ದ (ಆಧ್ಯಾತ್ಮಿಕವಾದುದೆಂದು ಕಣ್ ಫ್ಯೂಸ್ ಮಾಡಿಕೊಳ್ಳದಿರಿ) ಪಕ್ಕದ ಬ್ರಿಜ್ ನೋಡುತ್ತಿದ್ದೆ. ಜೊತೆಗೆ ಇನ್ನೂ ಪ್ರಸಿದ್ಧವಾದ ಲಂಡನ್ ಬ್ರಿಜನ್ನು ಹುಡುಕುತ್ತಿದ್ದೆ. ಯಾರನ್ನೋ ಕೇಳಿಯೂಬಿಟ್ಟೆ, ಇಂಗ್ಲೀಷಿನಲ್ಲಿ, "ಅದ್ಯಾವ ಬ್ರಿಜ್ ಅದು?" "ಅದೇ ಟವರ್ ಬ್ರಿಜ್!" ಉತ್ತರ ಕನ್ನಡದಲ್ಲೇ ಬಂದು ಡಬಲ್ ಶಾಕ್ ನೀಡಿತ್ತು. ಪಕ್ಕದಲ್ಲಿ ಶ್ರೀಮಾನ್ ಹೋಮ್ಸ್ ನಿಂತಿದ್ದ.
"ಹಾಗಾದರೆ ಲಂಡನ್ ಬ್ರಿಜ್ ಇರುವುದೆಲ್ಲಿ?" ಸುಧಾರಿಸಿಕೊಂದು ಕೇಳಿದ್ದೆ.
"ನೀವೇನು ಥೇಮ್ಸ್ ನದಿಯ ನೀರಿನ ಮೇಲೆಯೇ--ಯೇಸುವಿನಂತೆ--ನಿಂತು ಓಡಾಡುತ್ತಿದ್ದೇನೆ ಅಂದುಕೊಂಡಿದ್ದಿರೋ ಹೇಗೆ?" ಎಂದನಾತ.
ಒಂದರ ನಂತರ ಒಂದರಂತೆ ನನ್ನ ಪಾದಗಳನ್ನು ಮೇಲೆತ್ತಿ ಅವುಗಳ ಕೆಳಗಿನ ಲಂಡನ್ ಬ್ರಿಜ್ ನೋಡಿ "ಇಷ್ಟೇನಾ" ಎನಿಸಿಬಿಟ್ಟಿತ್ತು. ಜಗತ್ತಿನ ಮೂರನೇ ಅತಿ ಹೆಚ್ಚು ಶೇರು ಮಾರುಕಟ್ಟೆ ವಹಿವಾಟು ನಡೆವುದೇ ಈ ಮುನ್ನೂರು-ನಾನೂರು ಅಡಿ ಅಗಲದ ಬ್ರಿಜ್‌ನ ಅತ್ತಿತ್ತ ಇರುವ ಇನ್ನೂರು ಮುನ್ನೂರು ಕಟ್ಟಡಗಳಲ್ಲಿ! ಅಲೆಕ್ಸ್ ಫರ್ಗೂಸನ್ ಎಂಬ ಸೈನಿಕ ಲಂಡನ್ ಬ್ರಿಜ್ ಅನ್ನು ಮಾರಿದ್ದ ಅಥವ ಕೊಂಡುಕೊಂಡಿದ್ದನಂತೆ. ಕೊನೆಗೆ ಕೊಂಡಾತ ಬಂದು ಗಲಾಟೆ ಮಾಡಿದನಂತೆ, "ನಾನು ಟವರ್ ಬ್ರಿಜ್ ಅನ್ನು ಕೊಳ್ಳುತ್ತಿದ್ದೇನೆ ಎಂದು ಭಾವಿಸಿದ್ದೆ. ಲಂಡನ್ ಬ್ರಿಜ್ ನನಗೆ ಬೇಡ", ಎಂದು! ಬೇಸ್ತು ಬಿದ್ದಿದ್ದವ ನಾನೊಬ್ಬನೇ ಅಲ್ಲ, ನಾನು ಬೆಸ್ತು ಬಿದ್ದ ಪ್ರಮಾಣವೂ ದೊಡ್ಡದೇನಲ್ಲ ಎಂದು ಖುಷಿಯಾಯಿತು. ಅದಕ್ಕೇ ಹೇಳುವುದು, (ವಿ)ದೇಶ ಸುತ್ತಿ ಕಲಿ, ಅಲ್ಲಿ ಹೋದಾಗ ಅದರ ಬಗ್ಗೆ "ನೋಡಿ" ಕಲಿ, ಎಂದು.

---ಎಚ್. ಎ. ಅನಿಲ್ ಕುಮಾರ್

ಲೇಖನ ವರ್ಗ (Category)