ಆ ಗಲ್ಲಿ...
ಅದೊಂದು ಗಲ್ಲಿ. ಓಣಿಯೊಂದರಲ್ಲಿ ಹಾದಂತೆ. ಮುಖ್ಯದ್ವಾರಕ್ಕೆ ಗೇಟಿಲ್ಲ. ಹೆಚ್ಚಿನ ಸಮಯ ಗೇಟಿರಬೇಕಾದ ಜಾಗದಲ್ಲಿ ಎಮ್ಮೆಯೋ ಹಸುವೋ ಕುಳಿತು ದಾರಿ ಅಡ್ಡಗಟ್ಟಿರುವುದು ಕಾಣಬಹುದು.
ಕೆಲಸಮಯ ಆ ಗಲ್ಲಿಯ ರೌಡಿಗಿಂತ ಜೋರಿರುವ ಬೀದಿ ನಾಯಿ ಆ ಜಾಗವನ್ನಾಕ್ರಮಿಸಿರುತ್ತದೆ. ಆಕ್ರಮಿಸಿರುವ ಸಮಯ ಕಿವಿ ಚುಚ್ಚುವಂತೆ ಅದು ಬೊಗಳುತ್ತಿರುತ್ತದೆ. ಬೊಗಳದಿರುವಾಗ ಅಲ್ಲೇ ಗೇಟಿರಬೇಕಾದ ಜಾಗದಲ್ಲೋ ಇನ್ನೆಲ್ಲೋ ಹಾಯಾಗಿ ಮಲಗಿರುತ್ತದೆ. ಇಷ್ಟು ದಿನ ಓಣಿಗೆ ಬಂದ ಹೊಸಬರಲ್ಲಿ ತನಗೆ ಬೇಡದವರನ್ನು ಓಡಿಸಿ ಅಲ್ಲಿ ಕಾವಲು ಕಾದ ಅದಕ್ಕೆ ಇಲ್ಲಿ ಗೇಟು ಹಾಕೋರು ಯಾರಿಲ್ಲ ಎಂಬುದು ಮನದಟ್ಟಾದಂತಿದೆ.
ಗೇಟಿರಬೇಕಾದಲ್ಲಿ ನಿಂತು ನೋಡಿದರೆ ಓಣಿ ಅಷ್ಟು ದೂರ ಇರುವಂತೆ ಕಾಣದು. ಅತ್ತಿತ್ತ ಮನೆಗಳು, ಒಂದೊಂದು ಮನೆಗೂ ಒಂದೊಂದು ಹೆಸರು. ಅಲ್ಲಿಲ್ಲಿ ಚೆಂದದ ಬಣ್ಣ, ಹೆಸರು, ಹಸಿರು. ಹೆಸರು, ನೋಟದಲ್ಲಿ ಯಾವ ಮನೆ ಯಾವುದೆಂದು ಹೇಳಲು ಹೊರಟರೆ ಅಸಾಧ್ಯವಾಗಿಸುವ ಓಣಿ ಅದು. ಬಾಗಿಲು ತಟ್ಟಿ ನೋಡಿದರೇ ತಿಳಿದೀತು!
ಸುತ್ತಲೂ ಅಲ್ಲಲ್ಲಿ ಗಲೀಜು. ಅಲ್ಲಲ್ಲಿ ಅವರವರು ಮನೆಯೊಳಗಿಂದ ಹೊರಹಾಕಿದ ಗಲೀಜು. ಆ ಗಲೀಜಿನ ಸುತ್ತ ಹೆಕ್ಕುತ್ತ ಜಗಳವಾಡುವ ಕೋಳಿಗಳು. ಅಲ್ಲಲ್ಲಿ ಊದಿನಕಡ್ಡಿ, ಹೂವುಗಳ ಸುಗಂಧ, ಕೆಲವೆಡೆ ದುರ್ಗಂಧ. ಇವೆಲ್ಲದರ ನಡುವೆ ಆ ಓಣಿ ಒಳಹೊಕ್ಕು ಉದ್ದಗಲ ಸುತ್ತಿ ನೋಡಿದವರಿಗೇ ಗೊತ್ತು ಅದರ ಚೆಲುವು.
ಇವತ್ತು ಸುಮಾರು ಒಂದು ವಾರದ ನಂತರ ಈ ಹಾದಿ ಹಿಡಿದಿದ್ದ ನನಗೆ ಏನೋ ಗಮನ ಸೆಳೆದು ಓಣಿಯೊಳಕ್ಕೆ ಹೊತ್ತೊಯ್ಯಿತು. ಇವತ್ತು ಯಾಕೋ ಮುಂಚೆಗಿಂತ ಹೆಚ್ಚು ಗಲೀಜು. "ಓ, ಹೊರಗಡೆ ಬಣ್ಣ ಕೊನೆಗೂ ಬಳಿದಿದ್ದಾರೆ" "ಅಹಾ, ಇಲ್ಲೊಂದು ಬೋರ್ಡು ತಗಲು ಹಾಕಿದ್ದಾರೆ", "ಇಲ್ಯಾವುದು ಗೋಡೆಯ ಮೇಲೊಂದು ಪೋಸ್ಟರ್?" ಎಂದು ನೋಡುತ್ತ ಹೊರಟಾಗ ನನಗ್ಯಾಕೋ ಕಂಡದ್ದು ಬರೇ ಗಲೀಜು. ನಾ ಹೆಚ್ಚು ದೂರ ಹೋಗರಿಲಿಲ್ಲ, ಇನ್ನೂ. ಅಲ್ಲೆಲ್ಲ ಬರೀ ಕಸ, ಗಲೀಜು. ಅತ್ತ ದೂರದಲ್ಲಿ ಗಲೀಜಿನ ನಡುವೆಯೇ ಕುಳಿತು ಚಿತ್ರ ಬಿಡಿಸುತ್ತಿದ್ದ ಒಂದು ಮಗು. ಅದು ತಾ ಬಿಡಿಸುತ್ತಿದ್ದ ಚಿತ್ರದಲ್ಲೇ ಮುಳುಗಿಹೋಗಿತ್ತು. ಅಲ್ಲೇ ಎಲ್ಲೋ ಮಾತುಕತೆಯ ಸದ್ದು.
ಗಲೀಜು ನೋಡಲಾಗದೆ ನಾನು ಕಸ ಅಲ್ಲಿ ಹಾಕಿದವರಿಗೆ ಶಪಿಸಿದೆ. ಒಂದು ಘಳಿಗೆ ಈ ಓಣಿಯನ್ನೇ ಕಿತ್ತುಹಾಕಿಬಿಡಿ ಎನ್ನಬೇಕು, ಉಪಯೋಗವಿಲ್ಲ ಇದು ಎಂದನಿಸಿತು.
ಹೊರಹೋಗಲು ಒಂದೆರಡು ಹೆಜ್ಜೆ ಹಾಕಿದೆ. ಥಟ್ಟನೆ ಏನೋ ಮನಸ್ಸಿಗೆ ಬಡಿದ ಹಾಗಾಯ್ತು. ತಿರುಗಿ ಮತ್ತೊಮ್ಮೆ ಕಣ್ಣು ಹಾಯಿಸಿದೆ. ಚಿತ್ರ ಬಿಡಿಸುತ್ತ ಕುಳಿತಿದ್ದ ಮಗುವಿನ ಕೈಯಲ್ಲಿದ್ದ ಚಿತ್ರ ಕಣ್ಣಿಗೆ ಬಿತ್ತು. ಚಿತ್ರದ ಚೆಲುವು, ಚಿತ್ರದಲ್ಲಿದ್ದ ಹೊಸತನ ಮನ ಸೆಳೆಯಿತು. ಸುತ್ತಲಿನ ಗಲೀಜು ಅದ್ಯಾಕೋ ಈಗ 'ಥೂ' ಅನ್ನಿಸಲಿಲ್ಲ. ಅದೇನನ್ನಿಸಿತೋ ತಿರುಗಿ ಒಂದಷ್ಟು ಹೆಜ್ಜೆ ಇಟ್ಟು ಓಣಿಯೊಳಗೆ ನಡೆದು ಅತ್ತಿತ್ತ ನೋಡುತ್ತ ಕೆಲ ಕಾಲ ಕಳೆದು ಹೊರನಡೆದೆ.
ಆ ಗಲ್ಲಿ ನನಗಿಷ್ಟವೋ ಇಲ್ಲವೋ ನನಗಿಂದಿಗೂ ತಿಳಿದಿಲ್ಲ. ನಾನದನ್ನು ನೋಡುವ ರೀತಿ ಮಾತ್ರ ಬದಲಾಗಿದೆ ಎಂದು ಹೇಳಬಲ್ಲೆ.