ಉತ್ತರ ಕನ್ನಡದ ಮುಂಗಾರಿನಲ್ಲಿ ೪ ದಿನ
೨೫ ಜುಲೈ ೨೦೦೮, ಬೆಂಗಳೂರಿನ ಪಾಲಿಗೆ ಕರಾಳ ದಿನ, ಒಂದೇ ದಿನದಲ್ಲಿ ೭ ಕಡೆ ಲಘು ಬಾಂಬ್ ಸ್ಪೋಟ, ಒಂದು ಸಾವು. ತಾವೂ ಬದುಕದೆ ಇತರರಿಗೂ ಬದುಕಲು ಬಿಡದೆ ಮನುಷ್ಯ ಯಾವ ಉದ್ಧೇಶ ಸಾಧಿಸಲು ಹೊರಟಿದ್ದಾನೆಯೋ ತಿಳಿಯುತ್ತಿಲ್ಲ. ಸುಮಾರು ಒಂದು ತಿಂಗಳ ಹಿಂದೆ ಹಮ್ಮಿಕೊಂಡಿದ್ದ ನಮ್ಮ ಉತ್ತರ ಕನ್ನಡದ ಪ್ರವಾಸಕ್ಕೆ, ಹೊರಡುವ ದಿನದಂದೇ ನಡೆದ ಈ ಕಹಿ ಘಟನೆ ಮನಸ್ಸಿಗೆ ಆತಂಕ ತಂದಿತ್ತು. ಹದವಾಗಿ ಮಳೆ ಬೀಳುತ್ತಿದ್ದುದರಿಂದ ಬೇಗನೆ ಮೆಜೆಸ್ಟಿಕ್ ಸೇರುವ ಹಂಬಲದಿಂದ ೮ ಗಂಟೆಗೆ ಮನೆಯನ್ನು ಬಿಟ್ಟಿದ್ದೆ. ಆದರೆ ಬೆಂಗಳೂರಿನಲ್ಲಿ ಎಂದಿನಂತೆ ವಾಹನದ ದಟ್ಟಣಿ ಇರದೇ ಅರ್ಧ ಗಂಟೆಯಲ್ಲೆಲ್ಲ ಮೆಜೆಸ್ಟಿಕ್ ತಲುಪಿದ್ದೆ.
ನಾನು, ನಾಗೇಶ್, ರಾಘವೇಂದ್ರ ಮತ್ತೆ ರವೀಂದ್ರ ಈ ಪ್ರಯಾಣದ ಜೊತೆಗಾರರು. ನಾಗೇಶ್ ಮುಂದಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳುವವನಾದ್ದರಿಂದ ಇದು ಅವನೊಂದಿಗಿನ ಕೊನೆಯ ಪ್ರಯಾಣ ಎಂಬ ಭಾವನೆಯಿತ್ತು. ರವೀಂದ್ರ ೧ ವಾರದ ಹಿಂದಷ್ಟೇ ಫಿನ್ಲ್ಯಾಂಡ್ನಿಂದ ಮರಳಿ ಕೋಟದಲ್ಲಿ ರಜೆಯ ಮಜವನ್ನು ಸವಿಯುತ್ತಿದ್ದುದರಿಂದ, ಬೆಂಗಳೂರಿನಿಂದ ನಾವು ಮೂವರು ಹೊರಟು ಶಿರಸಿಯಲ್ಲಿ ಅವನನ್ನು ಸೇರುವುದಾಗಿತ್ತು. ರಾತ್ರಿ ೯:೩೦ ಕ್ಕೆ ಬಂದ ರಾಜಹಂಸ, ಬೆಳಿಗ್ಗೆ ೭ ಗಂಟೆಗೆಲ್ಲ, ಸುಮಾರು ೩೫೦ ಕಿ.ಮೀ. ಗಳಷ್ಟು ದೂರದ ಶಿರಸಿಗೆ ನಮ್ಮನ್ನು ಕೊಂಡೊಯ್ಯಿತು. ಶಿರಸಿಯ ಹಳೆ ಬಸ್ ಸ್ಟ್ಯಾಂಡ್ನಲ್ಲಿ ಮೊದಲೇ ಆಗಮಿಸಿದ್ದ ರವೀಂದ್ರನೊಂದಿಗೆ "ಪಂಚವಟಿ" ಎಂಬ ರೆಸಾರ್ಟ್ಗೆ ತೆರಳಿದೆವು.
ಪ್ರತೀ ಬಾರಿ ನಮ್ಮ ಪ್ರಯಾಣಕ್ಕೆ ಸರಿಯಾದ ಗೊತ್ತು ಗುರಿ ಇರುತ್ತಿರಲಿಲ್ಲ. ಆದರೆ ಈ ಬಾರಿ ಅಂತರ್ಜಾಲವನ್ನು ಜಾಲಾಡಿ ನೋಡಬೇಕಾದ ಸ್ಥಳಗಳ ಸ್ಥೂಲ ಪರಿಚಯ ಮಾಡಿಕೊಂಡಿದ್ದೆವು. ಅದರಂತೆ ಕೆಲವು ಜಲಪಾತ, ಬನವಾಸಿ, ಮಾರಿಕಾಂಬದೇವಸ್ಥಾನ ನಮ್ಮ ಸ್ಥಳಗಳ ಪಟ್ಟಿಯಲ್ಲಿದ್ದವು. ಒಂದು ವಾರದ ಹಿಂದಿನಿಂದಷ್ಟೇ ಶಿರಸಿಯ ಆಸುಪಾಸಿನಲ್ಲಿ ಮಳೆ ಆರಂಭವಾಗಿತ್ತು, ಮಲೆನಾಡ ಮಳೆಯ ಸವಿಯನ್ನು ಸವಿಯಲು ಒಂದು ಬಗೆಯ ಕಾತುರವಿತ್ತು!
ಮಳೆಗಾಲದಲ್ಲಿ ಜಲಪಾತ ಬೇರೆಯೇ ರೀತಿಯಲ್ಲಿ ಕಾಣಿಸುತ್ತದೆ. ಉಳಿದ ದಿನಗಳಲ್ಲಿ ಶ್ವೇತ ವರ್ಣಿ- ಲಾಲಿತ್ಯದಿಂದ ಬಳುಕುತ್ತ ಹರಿದರೆ, ಮಳೆಗಾಲದಲ್ಲಿ ಮಳೆ ನೀರು ಅಸಂಖ್ಯ ತೊರೆಗಳನ್ನು ನಿರ್ಮಿಸಿ, ಕಾನನದ ಮಣ್ಣಿನೊಡನೆ ಬೆರೆತು, ಕೆಂಪು ವರ್ಣ ತಳೆದು, ಜಲಪಾತದೊಡನೆ ಬೆರೆತು ಅದರ ಉಕ್ಕು ಸೊಕ್ಕನ್ನು ಹೆಚ್ಚಿಸಿ, ಧುಮುಕುತ್ತದೆ. ಮಳೆಗಾಲದಲ್ಲಿ ಜಲಪಾತದ ಸೊಬಗು ರುದ್ರ ರಮಣೀಯತೆಯಿಂದ ಕೂಡಿರುತ್ತದೆ. ಹೀಗಾಗಿ ನಮ್ಮ ಪ್ರಯಾಣ ಹಲವಾರು ಜಲಪಾತಗಳನ್ನು ಸಂದರ್ಶಿಸುವುದೂ ಆಗಿತ್ತು.
ಸುಮಾರು ೧೧೬ ಮೀಟರ್ ಎತ್ತರದಿಂದ ಧುಮುಕುವ ಅಘನಾಶಿನಿ ನದಿ ನಿರ್ಮಿತ ಉಂಚಳ್ಳಿ ಜಲಪಾತ ನಮ್ಮ ಮೊದಲ ಭೇಟಿಯಾಗಿತ್ತು. ಶಿರಸಿ - ಸಿದ್ಧಾಪುರ ರಸ್ತೆಯಲ್ಲಿ ೩೦ ಕಿ.ಮಿ. ಕ್ರಮಿಸಿದರೆ ಉಂಚಳ್ಳಿಗೆ ಹೋಗುವ ಕಾಲು ದಾರಿ ಎದುರಾಗುತ್ತದೆ. ಜೋಗಕ್ಕೆ ಹೋಲಿಸಿದಲ್ಲಿ ಇದರ ಭೋರ್ಗರೆತ ತುಂಬ ಕಮ್ಮಿ ಆದ್ದರಿಂದ ಇದನ್ನು ಕೆಪ್ಪು ಜೋಗ ಎಂದೂ ಕರೆಯುವುದುಂಟು. ಈ ಬಾರಿ ಮುಂಗಾರು ಹಿಂದೆ ಬಿದ್ದದರಿಂದ ದಾರಿಯುದ್ದಕ್ಕೂ ಬೇಸಾಯದ ಆರಂಭದ ಸೊಬಗನ್ನು ಸವಿಯಬಹುದಾಗಿತ್ತು. ಸಾಗುವ ದಾರಿ ಸುಗಮವಾಗಿತ್ತದರೂ ಮಳೆಯೂ ಒಂದೇ ಸಮನೆ ಸುರಿಯುತ್ತಿತ್ತು. ಜಲಪಾತದ ಸಮೀಪ ಬಂದಾಗ ಮಾತ್ರ ನಿರಾಸೆ ಉಂಟಾಯಿತು. ಮೋಡ ಹಾಗು, ರಭಸವಾಗಿ ಧುಮುಕುತ್ತಿದ್ದ ಜಲಪಾತದ ನೀರ ಕಣಗಳು ಮೇಲೆದ್ದು, ಜಲಪಾತಕ್ಕೂ ನಮ್ಮ ನೋಟಕ್ಕೂ ನಡುವೆ ಒಂದು ಬಗೆಯ ತೆರೆಯನ್ನು ನಿರ್ಮಿಸಿತ್ತು. ಗಾಳಿಯ ಬಡಿತಕ್ಕೆ ಕೆಲವೊಂದು ಬಾರಿ ಮರೆ ಸರಿದು ಜಲಪಾತದ ಸೊಬಗು ಕಾಣಿಸುತ್ತಿತ್ತು, ಆದರೆ ಮತ್ತೆ ಮೋಡದ ಕೈ ಮೇಲಾಗಿ ತೆರೆ ಬೀಳುತ್ತಿತ್ತು. ಈ ಬಗೆಯ ಪ್ರಕೃತಿಯ ಕಣ್ಣಾ ಮುಚ್ಚಾಲೆಯಲ್ಲೇ ಜಲಪಾತವನ್ನು ನೋಡಿ ಮರಳಿದೆವು.
ಅಘನಾಶಿನಿ, ಉಂಚಳ್ಳಿಗೆ ಸಮೀಪದಲ್ಲೇ ಬೆಣ್ಣೆ ಹೊಳೆ ಎಂಬ ಹೆಸರಿನಿಂದ ಸುಮಾರು ೨೦೦ ಅಡಿಗಳಿಂದ ಧುಮುಕುತ್ತಾಳೆ. ಡಾಮರು ಬಳಿದ ರೋಡಿನಿಂದ ಸುಮಾರು ೬ ಕಿ.ಮಿ ಗಳಷ್ಟು ಕ್ರಮಿಸಿದರೆ ಈ ಜಲಪಾತ ಎದುರಾಗುತ್ತದೆ. ೪ ಕಿ.ಮಿ.ಗಳಷ್ಟು ಮಣ್ಣಿನ ರಸ್ತೆ ಇದ್ದರೂ ಮಳೆಗಾಲವಾದ್ದರಿಂದ ವಾಹನ ಸಂಚಾರ ಅಸಾಧ್ಯವಾಗಿತ್ತು, ಅದ್ದರಿಂದ ಕಾಲ್ನೆಡಿಗೆಯಿಂದಲೇ ಹೊರಡಲನುವಾದೆವು. ಏರು ತಗ್ಗು, ಕೊಳೆತ ಕಸ ಕಡ್ಡಿ, ಎಲ್ಲಕ್ಕಿಂತ ಮುಖ್ಯವಾಗಿ ಅಸಂಖ್ಯ ಇಂಬಳಗಳಿಂದ ಕೂಡಿದ್ದ ದಾರಿ ದುರ್ಗಮವಾಗಿತ್ತು. ಆದರೆ ೪ ಕಿ.ಮಿ.ಗಳ ಮಣ್ಣಿನ ರಸ್ತೆ ಕಳೆದ ಮೇಲೆ ಎದುರಾದ ಇಳಿಜಾರಿನ ಜಾರುವ ಕಾಡಿನ ಕಾಲು ದಾರಿ ಇದುವರೆಗೂ ಕ್ರಮಿಸಿದ ಹಾದಿಗಿಂತ ಕಷ್ಟತರವಾಗಿತ್ತು. ಆದರೆ ಕಷ್ಟ ಪಟ್ಟಿದ್ದು ಮಾತ್ರ ವ್ಯರ್ಥವಾಗಲಿಲ್ಲ. ಹಳದಿ, ಶ್ವೇತ ವರ್ಣಗಳಿಂದ ಜಲಪಾತ ಮೈದುಂಬಿ ಹರಿಯುತ್ತಿತ್ತು. ಗಾಳಿಯ ದಿಕ್ಕು ನಮಗೆ ಅಭಿಮುಖವಾಗಿತ್ತಾದ್ದರಿಂದ ಜಲಪಾತದಿಂದ ಏಳುತ್ತಿದ್ದ ನೀರ ಕಣಗಳ ತುಂತುರು ಮಳೆ ನಮ್ಮ ಮೇಲೆ ಸಿಂಚನವಾಗುತ್ತಿತ್ತು. ಎದುರಿದ್ದ ಕಡಿದಾದ ಕಣಿವೆ, ಮೋಡ ಮುಸುಕಿದ ಗುಡ್ಡ, ಕಡು ಹಸಿರು ಬಣ್ಣವನ್ನು ತಳೆದ ತರು ಲತೆಗಳಂತೂ ಕಣ್ಮನ ಸೆಳೆಯುತ್ತಿತ್ತು. ನಿಸರ್ಗದ ಸೌಂದರ್ಯವೇ ಇಂತಹುದು, ಎಷ್ಟು ಸವಿದರೂ ಖಾಲಿಯಾಗದು! ಸುಮಾರು ೧ ಗಂಟೆಗಳಷ್ಟು ಸೌಂದರ್ಯ ಸವಿದ ನಂತರ ಮರಳಲು ಅನುವಾದೆವು. ಜಲಪಾತಕ್ಕೆ ಹೋಗುವಾಗ ಕಾಣಿಸದ ಕವಲುದಾರಿ ಮರಳಿ ರಸ್ತೆ ಸೇರುವಾಗ ಕಾಣಿಸಿತು. ಒಂದು ಕಡೆಯಂತೂ ಯಾವುದೊ ನೀರು ಹರಿಯುವ ಜಾಗವನ್ನೇ ದಾರಿಯೆಂದು ಭ್ರಮಿಸಿ ದಾರಿ ತಪ್ಪಿಸಿಕೊಂಡೆವು. ಕೂಡಲೇ ತಪ್ಪಿದ ಹಾದಿಯ ಅರಿವಾಗಿ ಮರಳಿ ಸರಿಯಾದ
ದಾರಿಯನ್ನೇ ಹಿಡಿದೆವು. ಘೋರ ಅರಣ್ಯದ ಮಧ್ಯೆ, ಮಳೆಗಾಲದಲ್ಲಿ ದಾರಿ ತಪ್ಪಿದವನ ಪಾಡು ಅನುಭವಿಸಿಯೇ ತಿಳಿಯಬೇಕು. ಬೆಳಿಗ್ಗಿನ ಉಪಹಾರದ ಹೊರತಾಗಿ ಬೇರೆ ಏನೂ ಹೊಟ್ಟೆಗೆಬೀಳದಿದ್ದುದರಿಂದ ಹೊಟ್ಟೆ ತಾಳ ಹಾಕುತಿತ್ತು, ಅಲ್ಲದೆ ಕಾಲು ನಮ್ಮ ಆಜ್ಞೆಯನ್ನು ಪಾಲಿಸುವ ಬದಲು ತನಗಿಷ್ಟ ಬಂದಂತೆ ವರ್ತಿಸುತ್ತಿತ್ತು.
ಮಳೆಯಲ್ಲೇ ನೆನೆಯುತ್ತ ಡಾಮರು ರಸ್ತೆಗೆ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಎಂದರೆ, ನಮ್ಮ ಪಾದರಕ್ಷೆಗಳನ್ನು ಕಳಚಿ ಇಂಬಳವನ್ನು ತೆಗೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಾಗುವ ದಾರಿಯಲ್ಲಿ ಇಂಬಳವನ್ನು ಕಿತ್ತು ಕಿತ್ತು ಬೇಸರ ಬಂದು, ಹೀರಿದಷ್ಟು ರಕ್ತ ಹೀರಲಿ ಎಂದು ಬಿಟ್ಟಿದ್ದ ನಮ್ಮ ಕಾಲು, ಮೈಗಳಲ್ಲಿ ರಕ್ತ ಸೋರುತ್ತಿತ್ತು. ಇಂಬಳಗಳಾದರೋ ತುಂಬಾ ಹೇಸಿಗೆಯ ಪ್ರಾಣಿ, ರಬ್ಬರ್ನಂತೆ ಎಳೆದಷ್ಟೂ ಉದ್ದವಾಗಿ, ದೇಹವನ್ನು ಬಿಗಿದಪ್ಪಿ ಹಿಡಿದಿರುತ್ತದೆ. ಅದನ್ನು ಕೀಳಲು ಹರಸಾಹಸ ಮಾಡಬೇಕು, ಕಾಲಿಗಂಟಿದ ಇಂಬಳವನ್ನು ಕಷ್ಟ ಪಟ್ಟು ಬಲಗೈಯಿಂದ ಕಿತ್ತು ತೆಗೆದರೆ, ಕೊಡವಿದರೂ ಬೀಳದಂತೆ ಕೈಗೆ ಅಂಟಿಕೊಂಡಿರುತ್ತದೆ. ಇಂಬಳಗಳು ಮಾಡುವ ಗಯಾ ಚಿಕ್ಕದಾದರೂ, ಒಂದು ಬಗೆಯ ರಾಸಾಯನಿಕವನ್ನು ಲೇಪಿಸುವುದರಿಂದ ನಮ್ಮ ರಕ್ತ ಹೆಪ್ಪುಗಟ್ಟುವ ಶಕ್ತಿಯನ್ನು ಕಳೆದುಕೊಂಡು, ನಿಲ್ಲದೆ ಒಂದೇ ಸಮನೆ ಹರಿಯುತ್ತದೆ. ಕೆಲವು ಬಗೆಯ ಇಂಬಳವನ್ನು ಕೆಟ್ಟ ರಕ್ತವನ್ನು ಹೊರ ತೆಗೆಯುವ ಸಾಧನವಾಗಿ ಚಿಕಿತ್ಸೆಯಲ್ಲೂ ಬಳಸುವುದುಂಟು.
ಮಳೆಯ ಚಳಿ, ಖಾಲಿ ಹೊಟ್ಟೆ, ರಸಿಕ ಮನದಲ್ಲಿ ಬಿಸಿ ಬಿಸಿಯ, ಖಾರವಾದ ತಿಂಡಿಯನ್ನು ಮೆಲುಕು ಹಾಕುತ್ತಿರುತ್ತದೆ. ಬೇಗನೆ ಶಿರಸಿಯನ್ನು ಸೇರಿ ಹೊಟ್ಟೆ ತುಂಬಾ ತಿನ್ನಬೇಕೆಂದು ನಾವು ಬಗೆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು. ನಾವು ಬಾಡಿಗೆಗೆ ಗೊತ್ತುಮಾಡಿದ್ದ ಇಂಡಿಕ ಕೆಟ್ಟು, ಮುಂದೆ ಹೋಗಲೊಲ್ಲೆ ಎಂದು ಹಠ ಹಿಡಿದು ನಿಂತಿತು. ದೂರವಾಣಿಯ ಸಂಕೇತ ಸಿಗದಷ್ಟು ದೂರ ಇದ್ದುದರಿಂದ ನಮ್ಮ ಚಾಲಕ ಪಕ್ಕದ ಹಳ್ಳಿಗೆ ತೆರಳಿ ಬೇರೆ ಗಾಡಿಯನ್ನು ಗೊತ್ತು ಮಾಡಿ ಬರುವಷ್ಟರವರೆಗೆ ೧.೫ ಗಂಟೆ ಮೀರಿತ್ತು. ಅಂತೂ ಬಂದ ಇನ್ನೊಂದು ಗಾಡಿಯಲ್ಲಿ ಶಿರಸಿ ತಲುಪಿದಾಗ ಗಂಟೆ ೮ ಆಗಿತ್ತು. ಹಿಂದಿನ ಕತೆಗಳಲ್ಲಿ ಓದುತ್ತಿದ್ದ ಬಯಸಿದ ತಿಂಡಿಯನ್ನು ಕ್ಷಣಾರ್ಧದಲ್ಲಿ ಕಣ್ಣ ಮುಂದಿರಿಸುವ ಮಾಯಾ ತಟ್ಟೆ ದೊರಕಿದ್ದರೆ ನಮ್ಮ ಬಯಕೆಯ ಪತ್ರೊಡೆ, ಹೀರೆ ಕಾಯಿ ಚಟ್ಟಿ, ಕಡಲೆ ಹಾಕಿ ಮಾಡಿದ ಕೆಸುವಿನ ದಂಟಿನ ಹುಳಿ, ಕಳಲೆ ಪಲ್ಯ, ಹುರುಳಿ ಸಾರು, ಉದ್ದಿನ ಹಪ್ಪಳ ಮೊದಲಾದುವನ್ನು ತರಿಸಿ ತಿನ್ನಬಹುದಿತ್ತೋ ಏನೋ. ಆದರೆ ನಾವು ರಸ್ತೆ ಬದಿಯಲ್ಲಿ ಮಾಡುತ್ತಿದ್ದ ಅಮ್ಲೆಟ್, ಬೇಯಿಸಿದ ಮೊಟ್ಟೆ ತಿಂದು ತೃಪ್ತರಾದೆವು. ನಂತರ ಪಂಚವಟಿಗೆ ತೆರಳಿ ಇನ್ನೊಮ್ಮೆ ಊಟ ತರಿಸಿಕೊಂಡು ಹೊಟ್ಟೆಯಲ್ಲಿ ಇನ್ನೂ ಉಳಿದಿದ್ದಿರುವ ಜಾಗದಲ್ಲಿ ತುಂಬಿಸಿ, ಇಂಬಳದ ಸವಿಗನಸನ್ನು ಕಾಣುತ್ತ ಪವಡಿಸಿದೆವು.
೨ನೆಯ ದಿನದ ನಮ್ಮ ಪ್ರಯಾಣ ಬನವಾಸಿ ಹಾಗು ಬುರುಡೆ ಜಲಪಾತವನ್ನು ಸಂದರ್ಶಿಸುವುದಾಗಿತ್ತು. ಬೆಳಿಗ್ಗೆ ಬೇಗ ಎದ್ದು ೮ ಗಂಟೆಗೆಲ್ಲ ತಯಾರಾದ ನಾವು, ನಿನ್ನೆಯ ಇಂಡಿಕಾದ ಘಟನೆಯಿಂದ ಹಾಗೂ "ಹಳೆಯದ್ದೆಲ್ಲ ಚಿನ್ನ" ಎಂಬ ಆಂಗ್ಲ ಗಾದೆಗೆ ಮನ್ನಣೆ ಕೊಟ್ಟು ಇಂದಿನ ಪಯಣಕ್ಕೆ ೩೦ ವರ್ಷ ಹಳೆಯ ಅಂಬಾಸಿಡರ್ ಕಾರನ್ನು ಗೊತ್ತು ಮಾಡಿದೆವು. ಅದರ ಚಾಲಕನಾದರೋ ೭೦ ವರ್ಷದ ಮುದುಕ, ಎರಡಲ್ಲ ಒಂದು ಸ್ಥಳವನ್ನು ನೋಡುತ್ತೀವೋ ಇಲ್ಲವೊ ಎಂಬ ಶಂಕೆ ಉಂಟಾದರೂ ತೋರಿಸಿಕೊಳ್ಳದೆ ಗಾಡಿಯನ್ನೇರಿದೆವು.
ಆದರೆ ನಮ್ಮ ಊಹೆ ತಪ್ಪು ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ೭೦ ವರ್ಷದ ಮುದುಕನಾದರೂ ೨೦ ವರ್ಷದ ಯುವಕನನ್ನು ನಾಚಿಸುವಂತೆ ಗಾಡಿಯನ್ನು ನಡೆಸತೊಡಗಿದನು. ಹಳ್ಳ ದಿಣ್ಣೆ ಒಂದೂ ಲೆಕ್ಕಿಸದೆ, ಮುಂದೆ ಬೇರೆ ಗಾಡಿ ಬಂದರೆ ತೀರ ಸಮೀಪ ಹೋಗಿ ತಿರುವು ತೆಗೆದುಕೊಂಡು ನಮ್ಮ ಮುಖ ನೋಡಿ ನಗುವ ವೈಖರಿ ಜೇಮ್ಸ್ ಬಾಂಡ್ ನನ್ನೂ ಮೀರಿಸುವಂತಿತ್ತು. ನಂತರ ಆತ ತನಗೆ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಟಾಟಾ ಮೋಟರ್ಸ್-ನ್ನು ಒಳಗೊಂಡಂತೆ ೫೦ ವರ್ಷದ ಅನುಭವ ಇದೆ ಎಂದಾಗ ಮನಸ್ಸು ನಿರಮ್ಮಳವಾಯಿತು. ಆದರೂ ಮುಂದಿನ ಸೀಟ್-ನಲ್ಲಿ ಸರದಿಯಂತೆ ಕುಳಿತ ನಾಗೇಶ್ ಹಾಗೂ ರವೀಂದ್ರರ ಮುಖದಲ್ಲಿ ಭಯ ಗುರುತಿಸಬಹುದಾಗಿತ್ತು.
೧೦:೩೦ಕ್ಕೆಲ್ಲ ಪಂಪ ಹೇಳಿದ "ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ", ಕನ್ನಡದ ಆರಂಭದ ರಾಜಮನೆತನಗಳಲ್ಲಿ ಒಂದಾದ ಕದಂಬರ ರಾಜಧಾನಿಯಾದ ಅದೇ ಬನವಾಸಿ ದೇಶದಲ್ಲಿದ್ದೆವು. ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಮೂಲ ಮುಧುಕೇಶ್ವರ ದೇವಾಲಯ ೨ ಶತಮಾನಗಳಷ್ಟು ಹಳೆಯದಂತೆ. ನಂದಿ ಮಂಟಪ, ಸಭಾ ಮಂಟಪ, ನೃತ್ಯ ಮಂಟಪ, ಸಂಕಲ್ಪ ಮಂಟಪ ಹಾಗೂ ಗರ್ಭ ಗುಡಿಯಲ್ಲಿ ಬಳಸಿದ ಕಲ್ಲು ಹಾಗೂ ಕೆತ್ತನೆಯ ಶೈಲಿ ಭಿನ್ನವಾದದ್ದು ಎಂದು ತೋರುತ್ತದೆ. ಇಲ್ಲಿರುವ ಬೇರೆ ಬೇರೆ ಪ್ರಾಂಗಣವು ಬೇರೆ ಬೇರೆ ಕಾಲದಲ್ಲಿ ನಿರ್ಮಿಸಿದಂತೆ ತೋರುತ್ತದೆ. ಇಲ್ಲಿಯ ಲಿಂಗ ಮಧು (ಜೇನಿನ) ಬಣ್ಣದ್ದಾದುದರಿಂದ ದೇವರಿಗೆ ಮಧುಕೇಶ್ವರ ಎಂಬ ಹೆಸರು ಬಂತೆಂಬ ಪ್ರತೀತಿ ಇದೆ. ಗರ್ಭ ಗುಡಿಯಲ್ಲಿ ಶಿವಲಿಂಗವಲ್ಲದೆ ಹಾಲು ಗಲ್ಲಿನಿಂದ ಕೆತ್ತಿದ ದತ್ತಾತ್ರೇಯನ ವಿಗ್ರಹ ಹಾಗೂ ಕಪ್ಪು ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ವಿಗ್ರಹ ಇದೆ. ವಿಷ್ಣು ಹಿಡಿದಿರುವ ಚಕ್ರ ಅಡ್ಡಕ್ಕೆ ತಿರುಗುವ ಬದಲು ಬೆರಳಿನ ಮಧ್ಯದಲ್ಲಿ ಉದ್ದಕ್ಕೆ ತಿರುಗುತ್ತಿದೆ. ನಂದಿ ವಿಗ್ರಹ ಎಲ್ಲ ಶಿವಾಲಯದಲ್ಲಿರುವಂತೆ ಶಿವಲಿಂಗದ ಎದುರಿದ್ದರೂ ತನ್ನ ಮುಖವನ್ನು ತುಸು ಬಲಕ್ಕೆ ತಿರುಗಿಸಿದೆ. ಹಾಗಾಗಿ ನಂದಿಯ ಒಂದು ಕಣ್ಣು ಶಿವಲಿಂಗ ನೋಡಿದರೆ ಇನ್ನೊಂದು ಪಕ್ಕದ ಗುಡಿಯಲ್ಲಿರುವ ಪಾರ್ವತಿಯನ್ನು ನೋಡಿತ್ತಿದೆ. ಸಭಾಮಂಟಪದಲ್ಲಿನ "ತ್ರಿಲೋಕ ಮಂಟಪ" ಎಂಬ ಶಿಲ್ಪದಲ್ಲಿ ಮೂರು ಲೋಕದ ಚಿತ್ರಣ ಚಿತ್ರಿಸಿದ್ದಾರೆ. ಮಂಟಪದ ಕಲಶದಲ್ಲಿ ಶಿವ, ವಿಷ್ಣು, ಬ್ರಹ್ಮರನ್ನೊಳಗೊಂಡ ನಾಕವನ್ನು ಚಿತ್ರಿಸಿದರೆ, ಮಧ್ಯದಲ್ಲಿ ಭೂಮಿ ಹಾಗೂ ಬುಡದಲ್ಲಿ ಪಾತಾಳ ಲೋಕವನ್ನು ನಾಗ ದೇವತೆಗಳೊಂದಿಗೆ ಚಿತ್ರಿಸಿದ್ದಾರೆ. ಮಧ್ಯದ ಪೀಠದಲ್ಲಿ ೩ ಮೆಟ್ಟಿಲುಗಳಿದ್ದು, ಮೇಲಿನದ್ದು ಸಾತ್ವಿಕ, ಮಧ್ಯದ್ದು ರಾಜಸಿಕ ಹಾಗೂ ಮೂರನೆಯದು ತಾಮಸಿಕ ಪ್ರವೃತ್ತಿಯನ್ನು ಸೂಚಿಸುತ್ತದಂತೆ. ದೇವಾಲಯದ ಸುತ್ತಲೂ ಆಯಾ ದಿಕ್ಕಿನ ಪ್ರತಿನಿಧಿಯಾದ ದೇವರನ್ನು
ಪ್ರತಿಷ್ಠಾಪಿಸಿದ್ದಾರೆ. ದೇವಾಲಯದ ಎಡಗಡೆಯಲ್ಲಿ ಒಂದೇ ಕಪ್ಪು ಕಲ್ಲಿನಿಂದ ಕೆತ್ತಿದ ಮಂಚವಿದೆ. ಜನ ರಹಿತ ಹಳೆಯ ದೇವಾಲಯದಿಂದ ಮರಳುವಾಗ ಯಾವುದೊ ಒಂದು ಬಗೆಯ ಕೃತಾರ್ಥ ಭಾವನೆ ನಮ್ಮಲ್ಲಿತ್ತು.
ನಂತರ ಅಲ್ಲೇ ಪಕ್ಕದಲ್ಲಿದ್ದ ಕಲಾ ಸಂಗ್ರಹಕ್ಕೆ ಭೇಟಿ ಕೊಟ್ಟೆವು. ಹೋಗುವ ಮೊದಲು ನನ್ನ ಮನಸ್ಸಿನಲ್ಲಿ ಹಳೆಯ ಬನವಾಸಿಯ ಚಿತ್ರಣ ದೊರೆಯಬಹುದೇನೋ ಎಂಬ ಕಲ್ಪನೆಯಿತ್ತು. ಆದರೆ ಅಲ್ಲಿಗೆ ಭೇಟಿ ಕೊಟ್ಟ ಮೇಲೆ ಇಂದಿನ ಕಲಾಕಾರರು ಮಣ್ಣಿಂದ ಮಾಡಿದ ಕೆಲವು ಕೃತಿಗಳು ಕಾಣ ಸಿಕ್ಕಿದವು. ಅಲ್ಲಿನ ಎರಡು ಮನುಷ್ಯರ ಕಲಾಕೃತಿಯಂತೂ ಜೀವಂತ ಮನುಷ್ಯರೋ ಎಂಬಷ್ಟು ನೈಜವಾಗಿತ್ತು.
ಹಿಂದಿನ ದಿನದ ಹಸಿವು ನೆನಪಿದ್ದುದರಿಂದ ಬುರುಡೆ ಜಲಪಾತಕ್ಕೆ ಹೋಗುವ ಮುನ್ನ ದಾರಿಯಲ್ಲಿ ಸಿಕ್ಕಿದ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬ ತಿಂದು ಪ್ರಯಾಣ ಮುಂದುವರಿಸಿದೆವು. ಮತ್ತೆ ಮಣ್ಣಿನ ರಸ್ತೆ, ಮಳೆ, ಬನವಾಸಿಯಲ್ಲಿ ಒಂದು ಕೊಡೆ ಕೊಂಡಿದ್ದೆವಾದರೂ ಇದ್ದ ಇನ್ನೊಂದು ಕೊಡೆಯನ್ನು ಮರೆತು ಬಂದಿದ್ದರಿಂದ ನನ್ನ ಕ್ಯಾಮೆರಾವನ್ನು ವಾಹನದಲ್ಲೇ ಇಟ್ಟು ಮಳೆಯಲ್ಲಿ ನೆನೆಯುತ್ತ ಸಾಗಿದೆವು. ಸ್ವಲ್ಪ ದೂರ ಸಾಗಿದಂತೆಯೇ ಸಿಕ್ಕಿದ ಒಂದು ಮನೆಯಲ್ಲಿ ೨ ಕೊಡೆ ತೆಗೆದುಕೊಂಡು ಹಿಂದಿರುಗಿ ಬರುವಾಗ ಮರಳಿ ಕೊಡುತ್ತೇವೆ ಎಂದು ಭರವಸೆ ಹೇಳಿ ಮುಂದುವರಿದೆವು. ದಾರಿಯಲ್ಲಿ ಸಿಕ್ಕಿದ ಹಲವು ಜನರು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದರೂ ನಮಗೆ ಮರಳಿ ಹೋಗಲು ಮನಸ್ಸು ಬರಲಿಲ್ಲ. ಹೀಗೆ ದಾರಿಯಲ್ಲಿ ಸಾಗುತ್ತಿದ್ದಾಗ ಒಂದು ಸಂಕ ಎದುರಾಯಿತು. ಸುಮಾರು ೮೦ ಅಡಿಗಳಷ್ಟು ಅಗಲವಾಗಿ ಹರಿಯುವ ತೊರೆಗೆ ಅಡಿಕೆ ಮರ, ಕಾಡಿನ ಬಳ್ಳಿಯಿಂದ ಮಾಡಿದ ಸೇತುವೆ, ಕೆಳಗೆ ವೇಗವಾಗಿ ಹರಿಯುವ ಚಹಾ ವರ್ಣದ ನೀರು. ಮೊದಲ ಕೆಲವು ಹೆಜ್ಜೆಯನ್ನು ಇಡುತ್ತಲೇ ರವೀಂದ್ರ ಅದನ್ನು ದಾಟುವ ದುಸ್ಸಾಹಸ ಮಾಡದೆ ಉಳಿದುಕೊಂಡ. ಒಂದು ಬಗೆಯ ಅಳುಕು ಕಾಡುತ್ತಿದ್ದರೂ ಯಾವುದೊ ಒಂದು ಬಗೆಯ ಧೈರ್ಯದಿಂದ ಉಳಿದ ನಾವು ಮೂವರು ಸಂಕವನ್ನು ದಾಟಿದೆವು. ಸಂಕದ ಮಧ್ಯ ನಿಂತಾಗ ಮಾತ್ರ ಇಡೀ ಪ್ರಪಂಚವೇ ಸುತ್ತುತ್ತಿದೆಯೋ ಅನ್ನಿಸುತ್ತಿತ್ತು.
ಬೆಂಗಳೂರಿನಲ್ಲಿ ಕುಳಿತು ಅವ್ಯವಸ್ಥೆಯ ಕುರಿತು ಸರಕಾರವನ್ನು ದೂರುತ್ತಾ, ಪ್ರತಿಯೊಂದಕ್ಕೂ ಸರಕಾರದ ಮುಖ ನೋಡುವ ನಮಗೂ ಅವರಿಗೂ ಎಷ್ಟು ಅಂತರ. ಮಳೆಗಾಲದಲ್ಲಿ ಊರಿನ ಸುತ್ತ ನೀರು ತುಂಬಿ, ಊರು ದ್ವೀಪವಾದರೂ ಸರಕಾರ ಯಾವುದೇ ರೀತಿಯ ಸಂಪರ್ಕ ವ್ಯವಸ್ಥೆ ಮಾಡಿ ಕೊಡಲು ಮುಂದೆ ಬಂದಿಲ್ಲ. ಆದರೂ ಜನ ಇತರರನ್ನು ದೂರದೆ ತಮ್ಮದೇ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ನಾವು ಮೂವರೇ ಮುಂದಿನ ಪ್ರಯಾಣ ಬೆಳೆಸಿದೆವು. ದಾರಿ ಗದ್ದೆ, ಕಂಗಿನ ತೋಟ, ಗುಡ್ಡ, ಎಲ್ಲೋ ದೂರದಲ್ಲಿ ಕಾಣುವ ಹೆಂಚಿನ ಮನೆಯಿಂದ ಹೊಮ್ಮುತ್ತಿದ್ದ ಹೊಗೆ ನಮಗೆ ಮಯಾನಗರಿಯಂತೆ ಕಾಣಿಸುತ್ತಿತ್ತು. ಇಂಬಳಕ್ಕೆ ಸುಣ್ಣ ಒಳ್ಳೆಯ ಮದ್ದು ಎಂದು ತಿಳಿದ ನಾವು ಆ ದಿನ ಸುಣ್ಣ ಹಿಡಿದುಕೊಂಡು ಹೋಗಿದ್ದೆವು. ಸುಣ್ಣ ಹಚ್ಚಿದ ಕೂಡಲೇ ಅದು ಸಾಯುತ್ತಿತ್ತು ಕೂಡ. ಆದ್ದರಿಂದ ಮುಂದೆ ಎದುರಾದ ಅರಣ್ಯ ಮಾರ್ಗ ನಮ್ಮಲ್ಲಿ ಇಂಬಳದ ಭಯವನ್ನು ತೊಡೆದು ಹಾಕಿತ್ತು. ಅರಣ್ಯ ಘೋರವಾಗಿತ್ತು, ಸೂರ್ಯನ ಬೆಳಕು ನೆಲ ತಲುಪುವುದು ಕಷ್ಟವಾಗಿತ್ತಾದ್ದರಿಂದ ಬೆಳಕು ತುಂಬ ಮಂದವಾಗಿತ್ತು. ಮಳೆಯ ದೆಸೆಯಿಂದ ಹರಿಯುತ್ತಿದ್ದ ಚಿಕ್ಕ ಪುಟ್ಟ ತೊರೆಗಳೂ ಬಹಳ ರಭಸವಾಗಿ ಹರಿಯುತ್ತಿತ್ತು. ಸುಮಾರು ದೂರ
ಸಾಗಿದ ನಂತರ ಒಂದು ತಗ್ಗಿನ ಜಾಗದಲ್ಲಿ ವೇಗವಾಗಿ ಹರಿಯುವ ತೊರೆಯನ್ನು ದಾಟಲಾರದೆ ಹಿಂದಿರುಗುವ ಮನಸ್ಸು ಮಾಡಿದೆವು. ಅಲ್ಲದೆ ಸಂಜೆ ಸಮೀಪಿಸುತ್ತಿದ್ದುದರಿಂದ ಕತ್ತಲಲ್ಲಿ ದಾರಿ ತಪ್ಪಿ ಹೋಗುವ ಸಂದರ್ಭವೂ ಇತ್ತು.
ಜೀವನದ ಪ್ರಯಾಣದಲ್ಲಿ ಸಾಗುವ ದಾರಿಯೂ ತಲುಪುವ ಗುರಿಯಂತೆ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಬುರುಡೆ ತಲುಪಲು ನಾವು ಸಾಗಿ ಬಂದ ಹಾದಿ ಮನೋಹರವಾಗಿತ್ತಾದ್ದರಿಂದ, ಅದನ್ನು ನೋಡದೆ ಹಿಂದಿರುಗಿದ ಕಹಿ ನಮ್ಮನ್ನು ಬಹಳವಾಗಿ ಕಾಡಲಿಲ್ಲ. ಮತ್ತೆ ಅದೇ ಸಂಕದ ಮಧ್ಯ ಧೈರ್ಯವಾಗಿ ನಿಂತು ವಿಚಿತ್ರ ಸುಖವನ್ನು ಅನುಭವಿಸಿದೆವು. ಸುಣ್ಣವನ್ನು ಮೈಗೆ ಬಳಿದುಕೊಂಡ ನಾವು ನಾಗ ಸಾಧುಗಳ ವೇಷ ಧರಿಸಿದಂತಿತ್ತು. ಸುಣ್ಣದಿಂದಾಗಿ, ಇಂಬಳದಿಂದಾದ ಗಾಯ ಸುಟ್ಟು ಹುಣ್ಣಿನ ರೂಪ ಪಡೆದಿತ್ತು. ಹಾಕಿದ ಚಪ್ಪಲಿ ಅದನ್ನು ಅರಚಿ ಗಾಯವನ್ನು ಇನ್ನೂ ಭಯಂಕರವಾಗಿ ಮಾಡಿತ್ತು. ಮರಳುವಾಗ ಕೊಡೆಯನ್ನು ವಾಪಾಸು ಕೊಟ್ಟು, ಮತ್ತೆ ಶಿರಸಿಯ ಹಾದಿಯನ್ನು ಹಿಡಿದೆವು.
ಮೂರು ಮತ್ತೆ ನಾಲ್ಕನೇ ದಿನ ನಮ್ಮ ಗುರಿ ಯಲ್ಲಾಪುರದ ಆಸು ಪಾಸಿನಲ್ಲಿ ಸುತ್ತುವುದಾಗಿತ್ತು. ಬೆಳಿಗ್ಗೆ ೭:೩೦ಕ್ಕೆ ಪಂಚವಟಿಯನ್ನು ತೊರೆದು ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ಪಯಣಿಸಿ ಯಲ್ಲಾಪುರ ಸೇರಿದೆವು. ಹೋಟೆಲೊಂದರಲ್ಲಿ ಉಪಹಾರ ಮುಗಿಸಿ, ಅಂದಿನ ಪ್ರಯಾಣಕ್ಕೆ ಒಮ್ನಿಯೊಂದನ್ನು ಪತ್ತೆ ಮಾಡಿದೆವು. ಗಂಗಾವಳ್ಳಿ (ಬೇಡ್ತಿ) ನದಿ ೧೯೮ ಮೀಟರ್ ಎತ್ತರದಿಂದ ಮೂರು ಹಂತದಲ್ಲಿ ಕಣಿವೆಗೆ ದುಮುಖಿ ಹರಿಯುವ ಮನೋಹರ ದೃಶ್ಯ ಮಾಗೊಡ್ ಜಲಪಾತ. .
ಬೆಟ್ಟದ ಮೇಲೆ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹವಿದ್ದು, ಅನುಮತಿ ಇದ್ದರೆ ಉಳಿಯುವ ವ್ಯವಸ್ಥೆಯೂ ಇದೆ. ವಿಶ್ರಾಂತಿ ಗೃಹದವರೆಗೂ ಡಾಮರು ಬಳಿದ ರಸ್ತೆ ಇರುವುದರಿಂದ ನಡೆಯುವ ಸುಖದಿಂದ ವಂಚಿತರಾದೆವು. ಜಲಪಾತ ಮೋಡದಿಂದ ತೆರವುಗೊಂಡು ಮೈ ತುಂಬಿ ಧುಮುಕುತ್ತಿತ್ತು, ಆದರೆ ಕಣಿವೆ ಮಂಜಿನಿಂದ ಮುಸುಕಿದ್ದರಿಂದ ಬಿದ್ದ ನೀರು ಸ್ವಲ್ಪ ಸಮಯ ಹರಿದು ನಂತರ ಅದೃಶ್ಯವಾಗುತ್ತಿತ್ತು. ಹಾಗೆಯೇ 0.೫ಕಿ.ಮಿ. ಗುಡ್ಡವನ್ನು ಇಳಿದು ಹೋದರೆ ಕಣಿವೆ ಸಿಗುತ್ತದೆ, ಜಲಪಾತವನ್ನು ಕೆಳಗಿನಿಂದ ನೋಡುವ ಹಂಬಲದಿಂದ ಕೆಳಗಿಳಿಯತೊಡಗಿದೆವು.
ಎತ್ತರೆತ್ತರದ ಮರಗಳು ಮೋಡವನ್ನು ಬಿಗಿದಪ್ಪಿ ಚುಂಬಿಸುತ್ತಿತ್ತು. ಮರಗಳ ಬಿಗಿದಪ್ಪುಗೆಗೆ ಕರಗಿದ ಮೋಡಗಳು ಮಂದ ಗಾಳಿಯೊಡನೆ ಬೆರೆತು ನಮ್ಮ ಸುತ್ತ ಸುಳಿದಾಡುತ್ತಿತ್ತು. ಗುಡ್ಡವನ್ನು ಇಳಿಯುವ ನಮ್ಮ ಕೆಲಸ ಸುಲಭದ್ದಾಗಿರಲಿಲ್ಲ. ಪಾಮಾಜಿ, ಬಂಡೆಗಳಿಂದ ಕೂಡಿದ ಇಳುಕಲು ದಾರಿ ತುಂಬಾ ಕಡಿದಾಗಿತ್ತು. ಸುಮಾರು ೩೦೦ಮಿ ಗಳಷ್ಟು ಕೆಳಗಿಳಿದ ನಮಗೆ ಮುಂದೆ ಸಾಗುವುದು ಕಷ್ಟವಾಗತೊಡಗಿತು. ಬಂದ ದಾರಿಗೆ ಸುಂಕ ಇಲ್ಲವೆಂದು ಏದುಸಿರು ಬಿಡುತ್ತಾ ಮತ್ತೆ ಮರಳಿ ಬಂದೆವು. ವಿಶ್ರಾಂತಿ ಗೃಹದ ಬಳಿಯಲ್ಲಿರುವ ಹೋಟೆಲ್ನಲ್ಲಿ ಚಹಾ ಕುಡಿದು, ಕಾವಡೆ ಕೆರೆಯತ್ತ ಪ್ರಯಾಣ ಬೆಳೆಸಿದೆವು.
ಕೆರೆ ಎಂದ ಕ್ಷಣ ಕರಾವಳಿಯ ನನಗೆ ನೆನಪಿಗೆ ಬರುವುದು ಚೌಕಾಕಾರದಲ್ಲಿ ಕಟ್ಟೆ ಕಟ್ಟಿದ ಸುಮಾರು ಒಂದು ಎಕರೆಗಳಷ್ಟು ವಿಸ್ತಾರವಾದ ನಿಂತ ನೀರು. ಕಾವಡೆ ಕೆರೆಯಾದರೋ ೬೦ ಎಕರೆಗಳಷ್ಟುವಿಶಾಲವಾಗಿ ಹರಡಿಕೊಂಡಿದೆ. ದಂಡೆಯ ಮೇಲೆ ಇದ್ದ ಶಿವನ ಹಾಗೂ ಇನ್ನೊಂದು ದೇವಾಲಯ ಅಂತಹ ಚೆಲುವಿನದ್ದಾಗಿರಲಿಲ್ಲ. ಶಿವಾಲಯದಲ್ಲಿ ೩ ಹಗಲು, ೩ ರಾತ್ರಿ ಮಳೆಯಾಗಲೆಂದು ಶಿವನಿಗೆ ಅಭಿಷೇಕ ಮಾಡುತ್ತಿದ್ದರು. ಅಲ್ಲಿ ಕೇಳಿ ಬರುತ್ತಿದ್ದ ರುದ್ರ, ಚಮಕ ಮಧುರ ಸಂಗೀತದಂತಿತ್ತು. ಮುಂದೆ ಜೇನುಕಲ್ಲು ಗುಡ್ಡ ಎಂಬ ಸೂರ್ಯಾಸ್ತಮಾನದ ಸ್ಥಳಕ್ಕೆ
ಭೇಟಿಕೊಟ್ಟೆವು. ಗಿರಿ ಶಿಖರಗಳ ನಡುವೆ ಬಳಸಿಕೊಂಡು ಹರಿಯುವ ನದಿಯ ದೃಶ್ಯ ಸುಂದರವಾಗಿತ್ತು. ಮಳೆಗಾಲವಾದ್ದರಿಂದ ಸೂರ್ಯಾಸ್ತಮಾನದ ಸೊಬಗು ನೋಡಲು ಕಾಯದೆ ಯಲ್ಲಾಪುರಕ್ಕೆ ಮರಳಿದೆವು. ಮಧ್ಯಾನ್ಹ ಭೋಜನವಾಗಿಲ್ಲವಾದ್ದರಿಂದ ಹೋಟೆಲೊಂದನ್ನು ಸೇರಿ ಹೊಟ್ಟೆ ತುಂಬಿಸಿಕೊಂಡು ಬನಾನಾ ಕೌಂಟಿಯ ಕಡೆ ತೆರಳಿದೆವು.
ಬನಾನಾ ಕೌಂಟಿ ಉತ್ತರ ಕನ್ನಡದಲ್ಲಿ ಚೆಲುವಾದ ರೆಸಾರ್ಟ್, ಆದರೆ ಅಲ್ಲಿ ಪ್ರವೇಶ ಸಮಯ ೧೨ ಗಂಟೆಗೆ ನಿಗದಿಯಾಗಿದ್ದುದರಿಂದ ಸಂಜೆ ೫ ಗಂಟೆಗೆ ತೆರಳಿದ ನಮಗೆ, ಕೇವಲ ಒಂದು ರಾತ್ರಿಗಾಗಿ ೪.೫ ಸಾವಿರದಷ್ಟು ಖರ್ಚು ಮಾಡುವುದು ಸರಿ ಬೀಳಲಿಲ್ಲ. ಹೀಗಾಗ ಯಲ್ಲಾಪುರದಲ್ಲೇ ಬೇರೆ ಲಾಡ್ಜ್ಗಾಗಿ ಹುಡುಕಾಡ ತೊಡಗಿದೆವು. ಆದರೆ ಕಡಿಮೆ ಬೆಲೆಯ ಲಾಡ್ಜ್ಗಳು ತೀರ ಕಳಪೆಯಾಗಿದ್ದುದರಿಂದ, ಮತ್ತೆ ಶಿರಸಿಗೆ ಪ್ರಯಾಣ ಬೆಳೆಸಿ "ಮಧುವನ" ಎಂಬ ಲಾಡ್ಜ್ನಲ್ಲಿ ಉಳಿದುಕೊಂಡೆವು.
ಕೊನೆಯ ದಿನ ನಮ್ಮ ಪ್ರಯಾಣ ಮತ್ತೆ ಯಲ್ಲಾಪುರದ ಬಳಿಯಿರುವ ಸಾತೊಡ್ಡಿ ಜಲಪಾತ ಹಾಗೂ ಲಾಲ್ಗುಳಿ ಜಲಪಾತವನ್ನು ನೋಡುವುದಾಗಿತ್ತು. ಸಾತೊಡ್ಡಿಗೆ ಕೊನೆಯವರೆಗೂ ವಾಹನ ಸಂಚಾರದ ವ್ಯವಸ್ಥೆ ಇದ್ದುದರಿಂದ ಕೊನೆಯ ದಿನ ಹೆಚ್ಚು ನಡೆದು ದಣಿಯುವ ಪ್ರಮೇಯ ಇಲ್ಲ ಎಂದು ನಮ್ಮ ಲೆಕ್ಕಾಚಾರವಾಗಿತ್ತು.
ಮಣ್ಣಿನ ರಸ್ತೆ ಒಂದು ಕಡೆ ತೀರ ಗೊಚ್ಚೆಗಳಿಂದ ಕೂಡಿದ್ದು, ನಮ್ಮ ಚಾಲಕ ಇಲ್ಲಿಂದ ಸಾತೊಡ್ಡಿ ಕೇವಲ ಎರಡೇ ತಿರುವು ಆದರೆ ಗಾಡಿ ಮಾತ್ರ ಮುಂದಕ್ಕೆ ಹೋಗಲಾರದು ಎಂದದ್ದರಿಂದ ಗಾಡಿಯಿಂದಿಳಿದು ಚಾರಣವನ್ನು ಆರಂಭಿಸಿದೆವು. ದಾರಿಯುದ್ದಕ್ಕೂ ಎತ್ತರೆತ್ತರದ ಬೀಟೆ ಮರಗಳು, ಬಿದುರಿನ ಹಿಂಡಿಲು, ರೆಂಬೆಗಳಲ್ಲಿ ಜೋತಾಡುವ ಕಪ್ಪು ಮುಸುಡಿನ ಮುಸುವಗಳು. ಆಗಿಂದಾಗ್ಗೆ ಕಣ್ಮುಂದೆ ಯಾವುದೋ ಸಮುದ್ರವನ್ನು ನೋಡಿದಂತೆ ಭಾಸವಾಗುತ್ತಿದ್ದರೂ ಅದು ನನ್ನ ಭ್ರಮೆ ಎಂದು ಸುಮ್ಮನಾದೆ. ಆದರೆ ಹೀಗೆಯೇ ಮುಂದುವರಿದಂತೆ ನನ್ನ ಸಂದೇಹ ದೂರವಾಯಿತು. ಅದು ಸಮುದ್ರವಲ್ಲ ಬದಲಿಗೆ ಕಾಳಿ ನದಿಗೆ ಅಡ್ಡ ಕಟ್ಟಿದ "ಕೊಡಸಳ್ಳಿ" ಅಣೆಕಟ್ಟು. ವಿಶಾಲವಾದ ಕಣಿವೆಯಲ್ಲಿ ಅಣೆಕಟ್ಟಿನ ಹಿನ್ನೀರು ನಿಂತು ಕಾಡು, ಹಳ್ಳಿಯನ್ನು ಮುಳುಗಿಸಿತ್ತು. ತಮ್ಮ ಕೂಗು ಯಾರನ್ನೂ ತಲುಪುವುದಿಲ್ಲವೆಂಬಂತೆ ನೀರಿನ ನಡುವೆ ಒಣ ಮರಗಳು ತಪಸ್ಸನ್ನಾಚರಿಸುತ್ತಿದ್ದವು. ವೈಭವಯುತವಾಗಿ ಹಿಂದೆ ಆಳಿದ ಯಾವುದೊ ಸಾಮ್ರಾಜ್ಯ ಶಾಪಗ್ರಸ್ಥವಾದ ರುದ್ರ ಭೂಮಿಯಂತಿತ್ತು.
ಎರಡಲ್ಲ ಸುಮಾರು ೬ ಕಿ.ಮಿ.ಗಳಲ್ಲಿ ೨೦ ತಿರುವುಗಳನ್ನು ದಾಟಿದ ನಂತರ ಸಾತೊಡ್ಡಿ ಜಲಪಾತ ಕಾಣಿಸಿತು. ದಾರಿಯಲ್ಲಿ ಸಿಕ್ಕಿದ ಮನೆಯೆಂಬ ಹೋಟೆಲ್ನಲ್ಲಿ ಮುಂಗಡ ಕೊಟ್ಟು ಊಟಕ್ಕೆ ಹೇಳಿ ಬಂದೆವು. ತುಂಬಾ ಹತ್ತಿರದಿಂದಲೇ ಕಾಣಿಸುವ ಜಲಪಾತ ಸುಂದರವಾಗಿತ್ತು. ಮಳೆಯಿಂದ ಒದ್ದೆಯಾಗಿದ್ದ ಹಸಿರು, ಹಗುರವಾಗಿ ತೇಲುತ್ತಿದ್ದ ಮೋಡ, ಈಗ ತಾನೆ ಸ್ನಾನ ಮಾಡಿ ತಲೆಗೆ ಧೂಪದ ಹೊಗೆ ಹಾಕಿಸಿಕೊಳ್ಳುತ್ತಿದ್ದ ಚೆಲುವೆಯಂತಿತ್ತು. ನಾಗೇಶ ಮತ್ತೆ ರವೀಂದ್ರ ಎದುರಿನ ತೊರೆಗೆ ಅಡ್ಡವಾಗಿ ಹಾಕಿದ್ದ ಮರದ ಕೊರಡನ್ನು ದಾಟಿ ಜಲಪಾತಕ್ಕೆ ಇನ್ನೂ ಸಮೀಪ ತೆರಳಿ ನೀರಿನ ಸಿಂಚನವನ್ನು ಆಹ್ಲಾದಿಸುತ್ತಿದ್ದರು. ಫೋಟೋ ತೆಗೆದ ನಂತರ ನನಗೂ ಹೋಗುವ ಆಸೆಯಾಗಿ ಒಂದು ಕಾಲನ್ನು ಮರದ ತುಂಡಿನ ಮೇಲೆ ಇನ್ನೊಂದನ್ನು ತೊರೆಯ ನೀರಿಗೆ ಇಳಿಸಿದೆ. ಆದರೆ ಕಮ್ಮಿ ನೀರು ಇರಬಹುದೆಂಬ ನನ್ನ ಊಹೆ ತಲೆಕೆಳಗಾಗಿ, ನನ್ನ ಮೊಣಕಾಲಿನವರೆಗೆ ನೀರು ತುಂಬಿಕೊಂಡರೂ ತಳ ಸಿಗಲಿಲ್ಲ. ತೋಲನ ತಪ್ಪಿ ಬಿದ್ದು, ಎಡ ಕಾಲು ಮರದ ತುಂಡಿನ ಮೇಲೆ ಉಳಿದು ಮೊಣ ಕೀಲು ಬಾತುಕೊಂಡಿತು. ಏನೋ ಒಂದು ಬಗೆಯ ಸಂಕಟ ಕಾಣಿಸಿಕೊಂಡರೂ ೫ ನಿಮಿಷ ಸುಧಾರಿಸಿಕೊಂಡು ಅದನ್ನು ದಾಟಿ ನನ್ನ ಆಸೆ ತೀರಿಸಿಕೊಂಡೆ.
ಹಿಂದೆ ಬೆಣ್ಣೆ ಹೊಳೆ ಮತ್ತು ಬುರುಡೆ ಜಲಪಾತ ನೋಡುವ ಸಮಯದಲ್ಲಿ ಸರಕಾರ ಪ್ರವಾಸೋದ್ಯಮ ಸುಧಾರಣೆಯ ಕಾರ್ಯವಾಗಿ ಇಲ್ಲಿಗೆ ಸುಗಮ ದಾರಿ ಯಾಕೆ ನಿರ್ಮಿಸಿಲ್ಲ ಎಂಬ ಯೋಚನೆಯಾಯಿತು. ಆದರೆ ನಾಗರಿಕ ಪ್ರಪಂಚ ಇಂತಹ ಚೆಲುವಾದ ಸ್ಥಳಗಳಲ್ಲಿ ಮಾಡುವ ಅನಾಗರಿಕ ವರ್ತನೆಯನ್ನು ಸಾತೊಡ್ಡಿಯಲ್ಲಿ ಪ್ರತ್ಯಕ್ಷವಾಗಿ ನೋಡಿ ನನ್ನ ಅಭಿಪ್ರಾಯ ಬದಲಾಯಿತು. ಊಟ ಮಾಡಿ ಎಸೆದ ಪ್ಲಾಸ್ಟಿಕ್ ತಟ್ಟೆಗಳು, ಮಧ್ಯಪಾನ ಮಾಡಿ ಎಸೆದ ಬಾಟಲಿಗಳು ನಿಸರ್ಗದ ಆರೋಗ್ಯ ಕೆಡಿಸಿದ್ದವು. "ಯಥಾ ರಾಜ ತಥಾ ಪ್ರಜಾ", ಸರಕಾರದಂತೆಯೇ ನಮ್ಮವರಿಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಸುಂದರ ಜೀವನ ನಿರ್ಮಿಸುವ ಯೋಚನೆಯಿದ್ದಂತೆ ಕಾಣಿಸಲಿಲ್ಲ.
ಅದೇ ಹೋಟೆಲ್ಗೆ ಮರಳಿ ಊಟ ಮಾಡುವಾಗ ಮಾಲಿಕರೊಡನೆ ಯೋಗ ಕ್ಷೇಮ ವಿನಿಮಯವಾಯಿತು. ಆಕೆ ಒಂದು ವಾರದ ಹಿಂದಷ್ಟೇ ಕುರ್ಕ ಹಿಡಿದುಕೊಂಡು ಹೋದ ತಮ್ಮ ದನದ ಬಗ್ಗೆ ಭಾವುಕರಾಗಿ ಮಾತನಾಡುತ್ತಿದ್ದರು. ದಷ್ಟ ಪುಷ್ಟವಾಗಿ ಬೆಳೆದಿದ್ದ ಗುಂಡ ಎಂಬ ಅವರ ಸಾಕು ನಾಯಿ ಹಿಂದಿನ ದಿನ ನೋಡಿದ ಕುರ್ಕದ ನೆನಪಿನಿಂದ ಭಯದಿಂದ ಮನೆಯ ಒಳಗೂ ಹೊರಗೂ ಗಸ್ತು ತಿರುಗುತ್ತಿತ್ತು. ಅಂತೂ ಊಟ ಮುಗಿಸಿ ನನ್ನ ಕುಂಟು ಕಾಲಿನಿಂದ ೬ಕಿ.ಮಿ. ತೆವಳಿ ನಮ್ಮ ಗಾಡಿಯನ್ನು ಸೇರಿದೆವು.
೧೦ ಕಿ.ಮಿ. ಪ್ರಯಾಣ ಬೆಳೆಸಿ ಲಲ್ಗುಳಿಗೆ ಹೋದರೆ ಅಲ್ಲಿನ ಜಲಪಾತ ಅಣೆಕಟ್ಟು ಕಟ್ಟಿದ ಸಮಯದಿಂದ ಕಣ್ಮರೆಯಾಯಿತೆಂಬ ವಿಷಯ ತಿಳಿದು ಮನಸ್ಸಿಗೆ ಖೇದವಾಯಿತು. ಅಲ್ಲಿಯೇ ಬಳಿಯಲ್ಲಿರುವ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹ ನೋಡಿ ವಾಪಾಸು ಹೊರಡುವ ನಿರ್ಧಾರ ಮಾಡಿದೆವು. ಸಾತೊಡ್ಡಿಯಲ್ಲಿ ಒಂದೂ ಇಂಬಳವಿಲ್ಲದೆ ನಮ್ಮ ಹೊಸ ಅಸ್ತ್ರ ಪ್ರಯೋಗಿಸುವ ಅವಕಾಶ ದೊರಕಿಲ್ಲವಾಗಿತ್ತು. ವಿಶ್ರಾಂತಿ ಗೃಹದ ಸುತ್ತ ಮುತ್ತ ಹಲವು ಇಂಬಳ ಇದ್ದುವಾದ್ದರಿಂದ ಹೊಗೆಸೊಪ್ಪನ್ನು ಒಂದರ ಹತ್ತಿರ ಹಿಡಿದರೆ ಅದು ಸಾಯುವ ಬದಲು ಅದರ ಮೇಲೆ ಹತ್ತಿಕೊಂಡು ಆಟವಾಡ ತೊಡಗಿತು!
ಯಲ್ಲಾಪುರದಲ್ಲಿ ಶಿರಸಿಯ ಬಸ್ಸು ಹಿಡಿದು ಮಧುವನಕ್ಕೆ ಬಂದೆವು. ವಿಶ್ರಾಂತಿ ತೆಗೆದುಕೊಂಡು, ಊಟ ಮುಗಿಸಿ ಶಿರಸಿಯ ಬಸ್ ನಿಲ್ದಾಣಕ್ಕೆ ಬಂದಾಗಲಷ್ಟೆ ತಿಳಿದಿದ್ದು ಉತ್ತರ ಕನ್ನಡಕ್ಕೂ ನಮಗೂ ಒಂದು ಬಗೆಯ ಬಾಂಧವ್ಯ ಬೆಸೆದದ್ದು. ಬೆಂಗಳೂರಿನ ಬಸ್ ಏರಿದಾಗ ಏನೋ ಒಂದು ಕಳೆದುಕೊಂಡ ಅನುಭವ...