ಮಲ್ಲವ್ವ ತಾಯಿಯ ಒಲವೇ ಶ್ರೀರಕ್ಷೆ ಹುಣಸವಾಡಿಯ ಬಡ ತಾಯಂದಿರಿಗೆ..

ಮಲ್ಲವ್ವ ತಾಯಿಯ ಒಲವೇ ಶ್ರೀರಕ್ಷೆ ಹುಣಸವಾಡಿಯ ಬಡ ತಾಯಂದಿರಿಗೆ..

ಬರಹ

"ಉಶ್ಯಪ..ಅಂತೂ ಕೂಸು ಬದುಕಿಕೊಂಡ್ತ್ರಿ. ಹುಣ್ಣಿಮಿ ಚಂದ್ರನಾಂಗ ಮುಖಾಐತ್ರಿ ಮಹಾಲಕ್ಷ್ಮಿದು. ಪ್ರಯತ್ನ ನಂದ್ರಿ. ಜೀವದಾನ ಆ ಭಗವಂತಗ ಬಿಟ್ಟಿದ್ದು. ತಾಯಿ-ಮಗು ಇಬ್ಳಾರೂ ಅರಾಮ ಅದಾರ್ರಿ. ಅಯ್ಯೋ! ನಂದ..ಹೇಳಾಕತೇನಿ! ನಿಮ್ಮನ ಯಾಕ? ಏನು? ಅಂತ ಆಸರಿಕೆ, ಬ್ಯಾಸರಿಕೆ ಕೇಲ್ಲೇ ಇಲ್ಲಾ..ತಪ್ಪಾತ್ರೀಪಾ.."

ಹೀಗೆ ಪಟಪಟನೇ ಖುಷಿಯಲ್ಲಿ ಮಾತನಾಡುತ್ತ, ತನ್ನ ಮುಗ್ಧತೆ ಪ್ರದರ್ಶಿಸಿದರು ಸೂಲಗಿತ್ತಿ ಶ್ರೀಮತಿ ಮಲ್ಲವ್ವ ಪೂಜಾರಿ. ಇವರ ಮಾತಿನ ಧಾವಂತ, ಮಗು-ತಾಯಿ ಇಬ್ಬರನ್ನು ಬದುಕಿಸಿದ ಪ್ರಸನ್ನತೆ ಜೊತೆಗೆ ಆ ಬಡವಿಯ ಹೃದಯ ಶ್ರೀಮಂತಿಕೆ ನಮ್ಮ ಹೃದಯ ತಟ್ಟಿತ್ತು.

ವಿಷ್ಣು ನಾಯಕ್ ಹೇಳುವಂತೆ- "ಧೂಳ್ರೊಟ್ಟಿ ನೀ ತಿಂದು ಬಾಳ್ರೊಟ್ಟಿ ನಮಗಿತ್ತು, ಮುಕ್ಕಾಲು ಶತಮಾನ ಬಾಳ್ದ ಚುಕ್ಕಿ" ಸಾಲು ನೆನಪಾಗಿತ್ತು ಮಲ್ಲವ್ವನ ನೋಡಿ.

ಹಳಿಯಾಳ ತಾಲೂಕಿನ ಹುಣಸವಾಡಿ ಗ್ರಾಮದ ಪ್ಲಾಟ್ ನಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಲ್ಲವ್ವ ಬಾಳುತ್ತಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತಳಲ್ಲ. ಹೊಲ- ಗದ್ದೆಗಳ ಕೂಲಿಯಿಂದ ಬಂದ ಹಣದಲ್ಲಿ ಮನೆ ನಡೆಯಬೇಕು. ಮಕ್ಕಳ ಶಾಲಾ ಕಾಲೇಜು ಫೀ ಭರ್ತಿಯಾಗಬೇಕು. ಹಳಿಯಾಳ ತಾಲ್ಲೂಕು ನಾಟಿ ವೈದ್ಯ ಪರಿಷತ್ ಗೆ ಮೆಂಬರಶಿಪ್ ಪಡೆಯಬೇಕು. ಏನೆಲ್ಲ ‘ಇಲ್ಲ’, ಎಷ್ಟೆಲ್ಲ ‘ಇದೆ’. ಈ ಎಲ್ಲ ‘ಇಲ್ಲ’..‘ಇವೆ’ಗಳ ಮಧ್ಯೆ ಸೂಲಗಿತ್ತಿ ಮಲ್ಲವ್ವ ಸುತ್ತಲಿನ ಹತ್ತೆಂಟು ಹಳ್ಳಿಗಳಿಗೆ ಮಹಾತಾಯಿ.

ಇಲ್ಲಿಯ ತನಕ ೨೫೦ಕ್ಕೂ ಹೆಚ್ಚು ಯಶಸ್ವಿ ಹೆರಿಗೆಗಳನ್ನು ಮಾಡಿಸಿದ್ದಾರೆ. ಬಡವರ ಮನೆಯ ಹೆಣ್ಣು ಮಕ್ಕಳು ಹಾಗು ಅವರ ಸಂತಾನಗಳ ಜೀವದಾಯಿ ಎನಿಸಿದ್ದಾರೆ ಮಲ್ಲವ್ವ. ನೈಸರ್ಗಿಕವಾಗಿ ಸಹಜ ಹೆರಿಗೆ ಮಾಡಿಸಿ, ೯ ರಿಂದ ೧೨ ದಿನಗಳ ವರೆಗೆ ಕೂಸಿಗೂ ಬಾಣಂತಿಗೂ ನೀರು ಹಾಕಿ ಎರಡು ಹೊತ್ತು ಎರೆದು ಬಂದರೆ ೧೦೦ ರುಪಾಯಿ ಫೀಜು! ತಾಯಿ ಮಲ್ಲವ್ವ ಇದನ್ನೂ ಬಾಯಿ ಬಿಟ್ಟು ಕೇಳುವುದಿಲ್ಲ. ತನಗೆ ಬಡತನ ಇದ್ದಂತೆ ಅವರಿಗೂ ಇದೆ ಎಂಬ ಪರೋಪಕಾರಿ ಬುದ್ಧಿ ಅವರದು. ತಿಳಿದು ಕೊಡುವವರಿದ್ದಾರೆ. ನಮ್ಮಲ್ಲಿ ಸದ್ಯ ಕೊಡಲು ಏನೂ ಇಲ್ಲ ಎಂದು ಹೇಳುವವರೂ ಇದ್ದಾರೆ. ಕೂಲಿ ಹಾಗು ಸೂಲಗಿತ್ತಿ ಕೆಲಸದಿಂದ ಬಂದ ಅಲ್ಪ ಆದಾಯದಲ್ಲಿಯೇ ಬದುಕಿತೋರಿಸಿದ್ದೇನೆ ಎನ್ನುತ್ತಾರೆ ಮಲ್ಲವ್ವ.

ನೀವು ಅಧೇಗೆ ಸೂಲಗಿತ್ತಿಯಾದಿರಿ? ಎಂದು ಪ್ರಶ್ನಿಸಿದರೆ.."ನಮ್ಮ ಹುಣಸವಾಡ್ಯಾಗ ಲಕ್ಷ್ಮೀ ಅಗಸರ ಅಂತ ಒಬ್ಬಾಕಿ ಅಮ್ಮ ಇದ್ಲು. ಆಕೆ ಸೂಲಗಿತ್ತಿ ಅಂತ ಕೆಲಸ ಮಾಡ್ತಿದ್ಲು. ಬರಬರ್ತ ವಯಸ್ಸಾತು. ಕಣ್ಣು ಮಬ್ಬು ಆದ್ವು. ಕೈ-ಕಾಲು ಶಕ್ತಿ ಉಡುಗ್ತು. ನನ್ನ ಕರಕೊಂಡ ಹೋಗಿ ತೋರಿಸಿ ಹೆರಿಗೆ ಹೆಂಗ ಮಾಡಬೇಕು ಅಂತ ಕಲಿಸಲಿಕ್ಕೆ ಶುರು ಮಾಡಿದ್ಲು. ನನಗ ಅಮ್ಮ ಒಂದು ಮಾತು ಹೇಳಿದ್ಲು. ನೋಡವ್ವಾ..ನನ ಮಗಳ ನೀನು ಈ ವಿದ್ಯಾ ಕಲತರ ಊರಾಗ ನಾಲ್ಕು ಬಡವರ ಮಕ್ಳು ಬದಕತಾವ. ರೊಕ್ಕಾ ಇದ್ದಾವ್ರುದ್ದು ಹೆಂಗರ ನಡೀತೈತಿ. ಬಡವರಿಗೆ ಬಡವರ ಆಸರಿ ಆಗಬೇಕು. ಕಲಕೋ ಈ ವಿದ್ಯಾ ನನ ಮಗಳ ಅಂತ ಪ್ರೀತಿ, ವಿಶ್ವಾಸದಿಂದ ಕಲಿಸಿದ್ಲರಿ. ನನ್ನ ಬಾಳೇನೂ ಸರಿ ಇರ್ಲಾರದಕ್ಕ ಇಲ್ಲೇ ತವರ ಮನಿಗೆ ಬಂದು ಅದೇನಿ. ಈಗ ನನ್ನ ಉಪಜೀವನಕ ಆ ಅಮ್ಮನ ವಿದ್ಯಾನ ಆಸರ ಆಗೇತಿ" ಅಂತ ವಿವರಿಸಿದರು.

ನೀವು ಹೆರಿಗೆ ಹೆಂಗ ಮಾಡಿಸಬೇಕು ಅಂತ ತರಬೇತಿ ಏನರೆ ಪಡದೀರೇನು? ಅಂತ ಕೇಳಿದ್ರ.."ಹೂನ್ರಿ..! ಮತ್ತ ಕೇಸ್ ಭಾಳ ತ್ರಾಸ್ ಇದ್ರ ಸರಳ ಡಿಲೇವರಿ ಆಗೋದಿಲ್ರಿ. ಅದಕ ೮ ವರ್ಷದ ಹಿಂದ ಹಳಿಯಾಳ ಸರಕಾರಿ ಆಸ್ಪತ್ರೆಯೊಳಗ ೧ ತಿಂಗಳ ಟ್ರೇನಿಂಗ್ ತೊಗೊಂಡೆ. ಹೆಡ್ ನರ್ಸ್ ಬಾಯಾರು ಎಲ್ಲ ಕಲಿಸಿ ಕೊಟ್ರಿ. ಆ ತರಬೇತಿ ನನಗ ಭಾಳ ಹೆಸರು ತಂದು ಕೊಟ್ತ್ರಿ." ಅಂದ್ರು.

ಹೆರಿಗೆ ಮಾಡಿಸುವಾಗ ನಾಟಿ ವೈದ್ಯಕೀಯ ಪದ್ಧತಿ ಬಳಸ್ತೀರಾ? ಅಂತ ಕೇಳಿದೆ. ಮಲ್ಲವ್ವ.."ಹೂನ್ರಿ..ಇಂಗ್ಲೀಷ್ ಔಷಧಿ ತುಟ್ಟಿ ಅಗ್ತಾವ್ರಿ. ಬಡವರು ಎಲ್ಲಿಂದ ಈ ಹಣ ಜೋಡಸಬೇಕು? ದಿನಾ ತುಂಬಿದಾಗ ಬ್ಯಾನಿ ಕೊಡಲಿಕ್ಕೆ ಹೇಳ್ತೇವಿ. ಈಗ ಅಶಕ್ತ ಹೆಣ್ಣ ಮಕ್ಳು ಭಾಳ. ಎಣ್ಣಿ ಹಚ್ಚಿ ತಿಕ್ಕಿ ಸರಳ ಹೆರಿಗಿ ಆಗೋವ್ಹಂಗ ಮಾಡತೇನಿ. ಬ್ಯಾನಿ ಕೊಡಲಿಕ್ಕೆ ಆ ಹೆಣ್ಣು ಮಗಳಿಗೆ ಶಕ್ತೀನ ಇಲ್ಲಾ ಅಂದ್ರ ಮಂಗಳವಾಡದಿಂದ ಆಯುರ್ವೇದಿ ಡಾಕ್ಟರ್ ಯಲ್ಲಪ್ಪ ಜೋಗೋಜಿ ಅಂತ ಅದಾರ್ರಿ, ಅವರನ್ನ ಕರಸಗೋತೇನ್ರಿ. ಆದರೂ ಕಷ್ಟ ಆತು, ಎಷ್ಟು ಪ್ರಯತ್ನ ಪಟ್ಟರೂ ಹೆರಿಗಿ ಆಗಲಿಲ್ಲ ಅಂದ್ರ ನಾನು ಹಳಿಯಾಳ ಸರಕಾರಿ ಆಸ್ಪತ್ರೆಗೆ ತುರ್ತಾಗಿ ಕರಕೊಂಡು ಹೋಗಿ ಡೆಲಿವರಿ ಮಾಡಿಸಿಕೊಂಡು ಬರ್ತೇನಿ" ಅಂತ ಪಟ ಪಟ ಅರಳು ಹುರಿಧಾಂಗ ಮಾತು.

"ನೋಡ್ರಿ..ನಾ ಎಲ್ಲೆ ಹೆರಿಗೆ ಮಾಡಿಸ್ಲಿ, ಬಿಸಿ ನೀರಾಗ ಕುದಿಸಿ ಇಟ್ಟ ಕೈ-ಚೀಲ, ತಾಯಿ ಹೊಕ್ಕಳ ಬಳ್ಳಿ ಕತ್ತರಿಸಲಿಕ್ಕೆ ಹೊಸ ಬ್ಲೇಡು, ಹೊಸಾ ದಾರ ಮತ್ತ ಹತ್ತಿ ಬಳಸ್ತೇನ್ರಿ" ಎನ್ನುತ್ತಾರೆ ಮಲ್ಲವ್ವ.

ಅವರ ವಿಶೇಷ ಅನುಭವ ಇಲ್ಲಿ ಉಲ್ಲೇಖಿಸುವುದಾದರೆ..ಡೆಲಿವರಿ ಆಗೋದು ಹೆಚ್ಚಾನೆಚ್ಚು ರಾತ್ರಿ ವೇಳೆಯೊಳಗ. ಹಗಲು ಹೊತ್ತು ಕಡಿಮೆ. ರಾತ್ರಿ ಹೊತ್ತಿಲ್ಲ..ಗೊತ್ತಿಲ್ಲ ಜನ ಹೆರಿಗೆ ಮಾಡಿಸಲಿಕ್ಕೆ ಕರೆಯಲು ಬರುತ್ತಾರೆ. ನಡು ರಾತ್ರಿಯಲ್ಲಿ ಒಬ್ಬಳೇ ಹೆಣ್ಣುಮಗಳು ಕರೆಯಲು ಬಂದವರ ಕೂಡ ಹೊರಟು ನಿಂತ್ರ ನೋಡಿದವರು ನಾಲ್ಕು ಕೆಟ್ಟ ಮಾತು ಮಾತಾಡತಾರ. ಅದು ಹೆಚ್ಚು ಮನಸ್ಸಿಗೆ ನೋವು. ಈನ್ನು ಕರೀಲಿಕ್ಕೆ ಬರೋ ಗಂಡು ಮಕ್ಕಳು ಎಲ್ಲಾರೂ ಒಂದ ಥರಾ ಇರೋದಿಲ್ರಿ. ತಾಯಿ ಕರುಳು ಇತ್ಲಾಗ ಬಿಡುವಹಾಗಿಲ್ಲ. ಇತ್ಲಾಗ ಹೋಗುವ ಹಾಗಿಲ್ಲ. ಜೀವ ತಡೀಲಾರ್ದ ದೇವರ ಮ್ಯಾಲೆ ಭಾರ ಹಾಕಿ ೨೦-೨೫ ಕಿಲೋ ಮೀಟರ್ ತನಕ ಕಾಡಿನ ಹಳ್ಳಿಯೊಳಗ ಹೋಗಿ ಡೆಲಿವರಿ ಮಾಡಿಸಿ ಬೆಳಿಗ್ಗೆ ಬರಬೇಕಾದ ಅನಿವಾರ್ಯತೆ.

ಮಲ್ಲವ್ವ ಹೇಳುತ್ತಾರೆ.."ಸರ್..ನನಗಿರೋವು ಎರಡೂ ಹೆಣ್ಣು ಮಕ್ಕಳು. ರಾತ್ರಿ ವೇಳ್ಯಾದಾಗ ಬಿಟ್ಟು ಹೋಗುದು ಕಷ್ಟ. ಆಜು-ಬಾಜು ಮನ್ಯಾಗಿನ ಹೆಣ್ಣ ಮಕ್ಕಳಿಗೆ ನಮ್ಮ ಮನೀಗೆ ಮಲಗಲಿಕ್ಕೆ ಅಥವಾ ಇವರನ್ನ ಅವರ ಮನಿಗೆ ಕಳಸಿ ಬಂದೋಬಸ್ತಿ ಮಾಡಿ ಹೋಗ್ತೇನ್ರಿ" ಆ ಕಷ್ಟ ನಮಗೆ ಅರ್ಥವಾಗಿತ್ತು.

ಮೇಷ್ಟ್ರು ಪಿ.ಲಂಕೇಶರು ಬರೆದ ಈ ಸಾಲುಗಳು ನೆನಪಾದವು..
"ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ; ಕೆಸರು ಗದ್ದೆಯ ನೋಡಿಕೊಂಡು
ಯೌವ್ವನವ ಕಳೆದವಳು, ಚಿಂದಿ ಸೀರೆಯ ಉಟ್ಟುಕೊಂಡು ತಾಯಿ"

ಮನದಲ್ಲಿಯೇ ಮಲ್ಲವ್ವನಿಗೆ ಶರಣೆಂದೆವು.