ಮೇರು ವಿಜ್ಞಾನಿಯ ಕಥೆ
ಹುಡುಕುವಿಕೆ, ಏನಾದರೂ ಹೊಸತನ್ನು ಹುಡುಕುತ್ತಲೇ ಇರುವಿಕೆ. ಇದೇ ಗುರಿಯಾಗಿ ವಿಜ್ಞಾನ ಗಗನದಲ್ಲಿ ಮಿಂಚಿ ಮಿನುಗುವ ನಕ್ಷತ್ರದಂತೆ ಮಾನವ ಚಿಂತನೆಯೆ ಎಲ್ಲೆಯ ದಾಟಿ ಮೇಲೇರಿ ಮೇಲೇರಿ ಅದ್ಭುತಗಳ ಸಾಧಿಸಿದರೂ ಎಲೆ ಮರೆಯ ಕಾಯಿಯೆಂದೇ ಭೌತವಿಜ್ಞಾನದ ಜಗತ್ತು ಗುರುತಿಸಿರುವ ಮಹಾನ್ ಮೇಧಾವಿ ಶ್ರೀಯುತ K.S.ಕೃಷ್ಣನ್ ಅಂದರೆ ಕರಿಯಮಾಣಿಕ್ಯಂ ಶ್ರೀನಿವಾಸ ಕೃಷ್ಣನ್ 1898ರ ಡಿಸೆಂಬರ್ 4ರಂದು ತಮಿಳುನಾಡಿನಲ್ಲಿ ಜನಿಸಿದವರು.
“ವಾಸ್ತವಗಳನ್ನು ಕಾಣುವುದೇ ಭೌತ ಶಾಸ್ತ್ರದ ಅರ್ಥ” ಎಂದು ಕೃಷ್ಣನ್ ಪದೇಪದೇ ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ನಾನಾ ಕ್ಷೇತ್ರಗಳ ಮೂಲಕ ಅವರು ಭೌತಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೃಷ್ಣನ್ ರವರು C.V.ರಾಮನ್ ರವರ ಮಾರ್ಗದರ್ಶನದಲ್ಲಿ ಬೆಳೆದವರು. C.V.ರಾಮನ್ರವರ ಬೆಳಕು ಕ್ಷೇತ್ರದಲ್ಲಿ ರಾಮನ್ ಪರಿಣಾಮದ ಶೋಧನೆಯಲ್ಲಿ ಹೆಚ್ಚು ದುಡಿದವರು. 1928ರಲ್ಲಿ ರಾಮನ್ರವರು ದ್ರವಗಳ ಮೂಲಕ ಬೆಳಕು ಚದುರುವುದನ್ನು ಗಮನಿಸಿದರು. ಬೆಳಕಿನ ಒಂದು ಕಿರಣವನ್ನು benzene ಮುಂತಾದ ದ್ರವಗಳ ಮೂಲಕ ಹಾಯಿಸಿದಾಗ ಅದು ಹಲವಾರು ಕಿರಣಗಳಾಗಿ ಚದುರಿದವು. ಆ ಕಿರಣಗಳು ಬೇರೆ ಬೇರೆ frequency ಅಂದರೆ ವೇಗ ಹೊಂದಿರುವುದರಿಂದ ವಿವಿಧ ಬಣ್ಣಗಳಲ್ಲಿ ಕಾಣುತ್ತವೆ. ಕೆಲವು ಬಣ್ಣಗಳು ಕೆಲವು ಸಂದರ್ಭಗಳಲ್ಲಿ ತೀವ್ರತೆಯನ್ನು ಹೊಂದುತ್ತವೆ. ನೋಡಿ! ಸಾಧಾರಣವಾಗಿ ಆಕಾಶ ನೀಲಿಯಾಗಿ ಕಾಣುತ್ತದೆ. ವಾತಾವರಣದಲ್ಲಿರುವ ಸಣ್ಣ ಕಣಗಳಿಂದ ಸೂರ್ಯನ ಕಿರಣಗಳು ಚದುರಿಸಲ್ಪಟ್ಟಾಗ ನೀಲಿ ಬಣ್ಣದ ಕಿರಣಗಳ ತೀವ್ರತೆ ಹೆಚ್ಚಾಗಿರುತ್ತದೆ. ಅದೇರೀತಿ ಸೂರ್ಯ ಹುಟ್ಟುವಾಗ ಅಥವಾ ಮುಳುಗುವಾಗ ವಾತಾವರಣದ ಅತಿ ಹೆಚ್ಚಿನ ಭಾಗದ ಮೂಲಕ ಸೂರ್ಯನ ಕಿರಣಗಳು ಹಾದು ಬರುವಾಗ ನೀಲಿ ಬಣ್ಣ ತನ್ನ ತೀವ್ರತೆ ಕಳೆದುಕೊಂಡು ಆ ಸ್ಥಾನವನ್ನು ಕೆಂಪು ಬಣ್ಣ ಪಡೆದು ಆಕಾಶ ಕೆಂಪು ಬಣ್ಣವನ್ನು ಹೊಂದುವಂತೆ ಮಾಡುತ್ತದೆ. ಈ ಸಂಶೋಧನೆ C.V.ರಾಮನ್ರವರಿಗೆ 1930ರಲ್ಲಿ ನೋಬಲ್ ಪಾರಿತೋಷಕವನ್ನು ತಂದುಕೊಟ್ಟರೂ ಇದರಲ್ಲಿ ಅವರ ಸಮಕ್ಕೂ ಕೈ ಜೋಡಿಸಿದವರು ಎಂದರೆ K.S.ಕೃಷ್ಣನ್ ಅವರು. ಆ ನೊಬೆಲ್ ಪ್ರಶಸ್ತಿ C.V.ರಾಮನ್ ಅವರಿಗೇ ಸಲ್ಲಬೇಕು ಎಂಬುದು ನಿರ್ವಿವಾದ. ಆದರೂ ಕೃಷ್ಣನ್ ಅವರ ಸಹಾಯವನ್ನು C.V.ರಾಮನ್ ಅವರು ಹೀಗೆ ಸ್ಮರಿಸುತ್ತಾರೆ, “1930ರಲ್ಲಿ ನನಗೆ ನೀಡಿದ ನೋಬೆಲ್ ಪ್ರಶಸ್ತಿ 1921ರಿಂದ ಮಾಡಿದ ಸಂಪೂರ್ಣ ಕೆಲಸವನ್ನು ಗಣನೆಗೆ ತೆಗೆದುಕೊಳ್ಳದೇ 1928ರಲ್ಲಿ ಆದ ಮುಖ್ಯ ಕೆಲಸಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ನನ್ನ ಈ ಪ್ರಶಸ್ತಿಗೆ ಕೃಷ್ಣನೂ ಸಹಾ ಪಾಲುದಾರನಾಗುತ್ತಿದ್ದ.”
ಇಂದಿನ ಕಂಪ್ಯೂಟರ್ ಯುಗದಲ್ಲಿ Documentation ಎಂಬ ಪದ ನೀವು ಕೇಳಿರಬಹುದು. ಈ ಸಂಶೋಧನೆ ನಡೆಸಿದ ಆಕಾಲದಲ್ಲೇ ಪ್ರತಿದಿನ ತಾವು ಮಾಡಿದ ಕೆಲಸದ Documents ತಯಾರಿಸಿಟ್ಟಿರುತ್ತಿದ್ದರು K.S.ಕೃಷ್ಣನ್ ಅವರು. ಹೀಗೆ ಮಾಡಿ ರಾಮನ್ರವರ ಮೆಚ್ಚುಗೆಗೆ ಪಾತ್ರರಾದುದಲ್ಲದೇ ಇದನ್ನು save ಮಾಡಿಟ್ಟು ಮುಂದಿನ ವಿಜ್ಞಾನಿಗಳು ಕೂಡಾ ಅದರ ಉಪಯೋಗ ಪಡೆಯುವಂತೆ ಮಾಡಿದರು.
C.V.ರಾಮನ್ ಅವರ ಸಹವಿಜ್ಞಾನಿ ಎಂದು ಮಾತ್ರ ಕೃಷ್ಣನ್ ಅವರನ್ನು ಗುರುತಿಸುವ ಅಗತ್ಯವಿಲ್ಲ. ಅವರು ತನ್ನದೇ ಆದ ರೀತಿಯಲ್ಲಿ ಭೌತಶಾಸ್ತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರು C.V.ರಾಮನ್ ರವರ ಜೊತೆ ಕೆಲಸ ಮಾಡುತ್ತಿದ್ದರೂ ಸಹಾ ವಿವಿಧ ತರಂಗಗಳಿಂದ ಉಂಟಾಗುವ ಯಾಂತ್ರಿಕ ಶಕ್ತಿಯ ಆಧುನಿಕ ಬೆಳವಣಿಗೆಗಳ ಬಗ್ಗೆ ಆರ್ನೋಲ್ಡ್ ಸಮ್ಮರ್ಫೀಲ್ಡ್ ಎಂಬ ಜರ್ಮನ್ ವಿಜ್ಞಾನಿಯ ಸಹಯೋಗದೊಂದಿಗೆ ಪುಸ್ತಕ ಬರೆದರು. ಅರ್ನೋಲ್ಡ್ ಸಮ್ಮರ್ಫೀಲ್ದ್ 1928ರಲ್ಲಿ ಕಲ್ಕತ್ತಾದಲ್ಲಿ ’Modern developments in Wave Mechanics’ ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಆ ಉಪನ್ಯಾಸವನ್ನು ಕೃಷ್ಣನ್ ಪುಸ್ತಕ ರೂಪಕ್ಕೆ ಇಳಿಸಿದರು. ಅದು ಭಾಷಣದ ಒಂದು ಪ್ರತಿಧ್ವನಿ ಎನ್ನಿಸದೇ ಹೊಸ ಗಣಿತ ಸಿದ್ಧಾಂತಗಳ ಮೂಲಕ ನಿರೂಪಿಸಿ ತನ್ನದೇ ಆದ ರೀತಿಯಲ್ಲಿ ಬರೆದದ್ದಾಗಿತ್ತು. ಅದನ್ನು ನೋಡಿದ ಸಮ್ಮರ್ಫೀಲ್ಡ್ ಅವರು ಲೇಖನದ ಮೇಲೆ ತನ್ನೊಬ್ಬನದೇ ಹಕ್ಕು ಸರಿಯಲ್ಲ ಇಬ್ಬರದ್ದೂ ಇರಲಿ ಅಷ್ಟು ಸುಂದರವಾಗಿದೆ ಅವರ ನಿರೂಪಣೆ ಎಂದರಂತೆ. ಅದನ್ನು ವಿನಯದಿಂದಲೇ ಕೃಷ್ಣನ್ ನಿರಾಕರಿಸಿದರು.
ಇವರ ಮತ್ತೊಂದು ಸಂಶೋಧನೆ ಎಂದರೆ ಪಾರದರ್ಶಕವಾದ ಹರಳುಗಳ ರಚನೆ ಹಾಗೂ ಅದರ ಕಾಂತ ಶಕ್ತಿಯ ಗುಣಗಳ ನಡುವೆ ಇರುವ ಸಂಬಂಧವನ್ನು ಪ್ರಯೋಗಗಳ ಮೂಲಕ ತೋರಿಸಿಕೊಟ್ಟದ್ದು. ಡಿಸೆಂಬರ್ 1928ರಲ್ಲಿ ಡಾಕಾ ವಿಶ್ವ ವಿದ್ಯಾಲಯದಲ್ಲಿ (ಈಗ ಅದು ಬಾಂಗ್ಲಾ ದೇಶದಲ್ಲಿದೆ) ಭೌತಶಾಸ್ತ್ರ ವಿಭಾಗದ ರೀಡರ್ ಆಗಿ ಸೇವೆ ಸಲ್ಲಿಸಲು ಹೋದಾಗ ಅಲ್ಲಿ ಹರಳುಗಳ ಕಾಂತೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಿದರು. 1933ರಲ್ಲಿ ಕಲ್ಕತ್ತಾಗೆ ಹಿಂದಿರುಗಿ ’Indian association for the cultivation of science’ನಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುವಾಗಲೂ ಅದೇ ಪ್ರಯೋಗವನ್ನು ಮುಂದುವರಿಸಿದರು.
ಹೀಗೆಯೇ ಘನವಸ್ತುಗಳಲ್ಲಿ ಕಂಡುಬರುವಂತಹ ಓರಣವಾದ ರಚನೆಗಳು ಮತ್ತು ಈ ರಚನೆಗಳು ಅದೇ ರೀತಿ ಉಳಿಯಲು ಅಣುಗಳು ಮತ್ತು ಪರಮಾಣುಗಳ ನಡುವಿನ ಶಕ್ತಿಗಳ ಕುರಿತು ಆಳವಾಗಿ ಅಧ್ಯಯನ ನಡೆಸಿದರು. 1942ರಲ್ಲಿ ಅಲಹಾಬಾದ್ ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ತರು ಹಾಗೂ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುವಾಗ ಘನವಸ್ತುಗಳ ಬಗ್ಗೆ ಅದರಲ್ಲೂ ಲೋಹಗಳ ಬಗ್ಗೆ ಸಂಶೋಧನೆ ನಡೆಸಿದರು.
ಕೃಷ್ಣನ್ರವರು ಮಹತ್ವದ ಕೊಡುಗೆ ನೀಡಿದ ಮತ್ತೊಂದು ಕ್ಷೇತ್ರವೆಂದರೆ ಥರ್ಮಿಯಾನಿಕ್ಸ್. 1948ರ ಸ್ವತಂತ್ರ ಭಾರತದಲ್ಲಿ National physical Laboratory (NFL) ಡೈರೆಕ್ಟರ್ ಆದರು. ಆಗ ಆಡಳಿತದ ಕೆಲಸಗಳೊಂದಿಗೆ ಥರ್ಮಿಯಾನಿಕ್ಸ್ ನಲ್ಲಿರುವ ಸಮಸ್ಯೆಗಳ ಕಡೆ ಗಮನ ಹರಿಸಿದರು. ಇದರಲ್ಲಿ ಬಿಸಿಯಾದ ವಸ್ತುವೊಂದು ಹೊರ ಸೂಸುವ ಎಲೆಕ್ಟ್ರಾನುಗಳು ಮತ್ತು ಅವುಗಳ ವರ್ತನೆ, ನಾನಾ ಆಕಾರಗಳಿಂದ ಕೂಡಿರುವ ಘನವಸ್ತುಗಳನ್ನು ಕಾಯಿಸಿದಾಗ ಅದರ ಶಾಖ ಯಾವ ರೀತಿಯಲ್ಲಿ ಪಸರಿಸುತ್ತದೆ, ಅದರ ಶಕ್ತಿ ಯಾವ ರೂಪದಲ್ಲಿ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ತಿಳಿಸಿದ್ದಾರೆ. ಉದಾಹರಣೆಗೆ ಕಬ್ಬಿಣದ ಕಂಬಿಗಳು, ಕಾಯಿಲ್ಗಳನ್ನು ಕಾಯಿಸಿದಾಗ ಆಗುವ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಅವರು ಕಂಡುಹಿಡಿದ ಈ ತತ್ವ ಅನೇಕ ಕೈಗಾರಿಕೋದ್ಯಮಗಳಲ್ಲಿ ಬಳಕೆಯಾಗುತ್ತಿದೆ. ಇದರಿಂದ ಅನೇಕ electronic devices ಸುಧಾರಿಸಿದ ರೂಪದಲ್ಲಿ ಹೊರಬರುತ್ತಿವೆ. ಹಾಗೆಯೇ graphite ಹರಳುಗಳಲ್ಲಿ ಎಲೆಕ್ಟ್ರಾನಿನ ಶಕ್ತಿಯ ಹಂಚಿಕೆ ಹೇಗಿರುತ್ತದೆ ಎಂಬುದನ್ನು ಮ್ಯಾಪ್ ಮೂಲಕ ತಿಳಿಸಿಕೊಟ್ಟಿದ್ದಾರೆ. ‘X-rays’ಗಳ ಬಗ್ಗೆ ಅಧ್ಯಯನ ನಡೆಸಿದಾಗ ಕಬ್ಬಿಣವಲ್ಲದೇ ಬೇರೆ ವಸ್ತುಗಳಿಂದಲೂ ಉಂಟಾಗುವ ಕಾಂತ ಶಕ್ತಿಯ ಪ್ರಭಾವದ ಬಗ್ಗೆ ತಿಳಿಸಿ ಹೊಸ ಹೊಸ ಪ್ರಾಯೋಗಿಕ ತಂತ್ರಗಳನ್ನು ಅಳವಡಿಸಿಕೊಂಡರು.
ಹಾಗಾಗಿ ಇವರು pure scienceಗಿಂತ applied scienceಗೆ ಹೆಚ್ಚು ಒತ್ತು ಕೊಡುತ್ತಿದ್ದರು. ವಿಜ್ಞಾನ ಎಂದರೆ ತಂತ್ರಿಕ ವಿಜ್ಞಾನದ ಅವಶ್ಯಕತೆ ಹೆಚ್ಚೆನಿಸಿ ಇವರು ಪ್ರಾಯೋಗಿಕವಾಗಿಯೇ ಭೌತಶಾಸ್ತ್ರದ ಅನೇಕ ವಿಭಾಗಗಳ ಅಧ್ಯಯನ ಮಾಡಿದರು. ಈ ರೀತಿಯ ಅಧ್ಯಯನಕ್ಕೆ ಅತ್ಯಂತ ಸಹಕಾರಿ ಎಂದರೆ ಗಣಿತ ಶಾಸ್ತ್ರ. ಹೀಗಾಗಿ ಅವರಿಗೆ ಗಣಿತ ಶಾಸ್ತ್ರವೂ ಸಹಾ ಅತಿ ಅಚ್ಚುಮೆಚ್ಚಿನದಾಗಿತ್ತು. ಅವರನ್ನು ಗಣಿತ ಶಾಸ್ತ್ರ ಸೆಳೆದ ಕಾರಣ ಅದರ ಸರಳತೆ ಹಾಗೂ ಅವಶ್ಯಕತೆಗಳು. ಹಾಗಾಗಿ ಅವರು ಗಣಿತ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದರು. ಗಣಿತ ಮತ್ತು ಭೌತಶಾಸ್ತ್ರ ಎರಡರ ಅರಿವು ಹೆಚ್ಚು ಇದ್ದ ಕಾರಣ ತಾಂತ್ರಿಕ ಶಿಕ್ಷಣದತ್ತ ಇವರ ಒಲವು ಹೆಚ್ಚಾಗಿತ್ತು. ಅಮೆರಿಕಾದ National Science Academyಯಲ್ಲಿ 1955ರಲ್ಲಿ ಕೃಷ್ಣನ್ ಅವರನ್ನು ವಾರ್ಷಿಕ ಸಭೆಗೆ ಉಪನ್ಯಾಸ ನೀಡಲೆಂದು ಕರೆದಿದ್ದರು. ಅಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಿಂದ ಭಾರತ ತನ್ನ ಸಂಸ್ಕೃತಿಯನ್ನು ಹೇಗೆ ಉಳಿಸಿ ಬೆಳೆಸಿಕೊಳ್ಳುತ್ತದೆ ಎಂಬುದನ್ನು ಅವರು ಅತ್ಯುತ್ತಮವಾಗಿ ವರ್ಣಿಸಿದರು. ಇವರ ಉಪನ್ಯಾಸದಲ್ಲಿ ಇಂಗ್ಲಾಂಡಿನ ಮಹಾನ್ ಗಣಿತ ಶಾಸ್ತ್ರಜ್ಞ A.N.ವೈಟ್ಹೆಡ್ ಅವರ ಅಭಿಪ್ರಾಯಗಳನ್ನು ವ್ಯಾಪಕವಾಗಿ ಉಲ್ಲೇಖಿಸಿದರು. ಕೃಷ್ಣನ್ ಅವರ ಈ ಉಪನ್ಯಾಸ ಕೇಳಿ ವೈಟ್ ಹೆಡ್ರವರ ಕೃತಿಗಳನ್ನು ಓದುವ ಉತ್ಕಟಾಪೇಕ್ಷೆ ತೋರಿದವರು ಹಲವು ಭೌತಶಾಸ್ತ್ರ ವಿಜ್ಞಾನಿಗಳು.
ನಮ್ಮ ಮೊದಲ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರುರವರು ಕೃಷ್ಣನ್ ಅವರ 60ನೆಯ ಹುಟ್ಟುಹಬ್ಬದ ದಿನ ಒಂದು ಮಾತು ಹೇಳಿದರು, “What is remarkable about Krishnan is not that he is a great scientist, but something much more. He is a perfect citizen. A whole man with an integrated personality.” ಅಂದರೆ, “ಕೃಷ್ಣನ್ ವಿಜ್ಞಾನಿ ಮಾತ್ರವೆಂಬುದು ಸೂಕ್ತವಲ್ಲ. ಅವರು ಅದಕ್ಕಿಂತಲೂ ಹೆಚ್ಚು. ಅವರು ಕುಂದು ಕೊರತೆಗಳೇ ಇಲ್ಲದ ಸಂಪೂರ್ಣ ನಾಗರಿಕ. ಎಲ್ಲಾ ಒಳ್ಳೆಯ ಗುಣಗಳನ್ನೂ ಒಟ್ಟುಗೂಡಿದ ವ್ಯಕ್ತಿತ್ವ ಹೊಂದಿದ ಪರಿಪೂರ್ಣ ವ್ಯಕ್ತಿ.” ಇದು ನೂರಕ್ಕೆ ನೂರು ಸತ್ಯ. ಏಕೆಂದರೆ ವಿಜ್ಞಾನದೊಂದಿಗೆ ಹಾಸುಹೊಕ್ಕಂತ ಸಂಬಂಧವನ್ನಿರಿಸಿಕೊಂಡಿರುವ ಅವರು ತಮ್ಮ ಸಂಶೋಧನೆಗಳ ನಡುವೆ ಸಾಹಿತ್ಯದ ಒಲವನ್ನೂ ಹೊಂದಿದವರು.ಅವರಿಗೆ ಓದುವ ಹವ್ಯಾಸ ಹೆಚ್ಚಿತ್ತು ಎಂಬುದನ್ನು ಒಮ್ಮೆ ಅವರು ರೇಡಿಯೋದಲ್ಲಿ ತನಗೆ ಪ್ರಿಯರಾದ ಸಾಹಿತಿಗಳ ಬಗ್ಗೆ ತಿಳಿಸಿದ ರೀತಿ ಸಾರುತ್ತದೆ. ಥ್ಯಾಕರೆ, ಸ್ಟೀವನ್ಸನ್, ಡ್ಯುಮಾಸ್, ವಿಕ್ಟರ್ ಹ್ಯೂಗೊ ಮುಂತಾದವರ ಬಗ್ಗೆ ತನ್ನ ಮೆಚ್ಚುಗೆ ತಿಳಿಸಿ ಭಾಷಣ ಮಾಡಿದ್ದರಂತೆ. ಅವರು ಸ್ವತಹಾ ಲೇಖಕರು. ಹಾಗೆಯೇ ಮಾತೃ ಭಾಷೆಯ ಬಗ್ಗೆ ಅಭಿಮಾನ ಇರುವವರು. ಹೀಗಾಗಿ ಅವರು ತಮಿಳಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಅಭಿಪ್ರಾಯದಲ್ಲಿ ಅಭಿವೃದ್ಧಿಗೆ ಅವಶ್ಯಕವಾದ ಒಂದು ವಿಚಾರ ಎಂದರೆ ಯಾವುದೇ ವಿಷಯವನ್ನೂ ಸರಳವಾಗಿ ನಿರೂಪಿಸುವಿಕೆ. ಈ ನಿರೂಪಣೆ ಮಾತೃಭಾಷೆಯಲ್ಲಿದ್ದರೆ ಮತ್ತಷ್ಟು ಚೆನ್ನ. ಆಗ ಆ ವಿಚಾರಗಳು ಅಧಿಕ ಜನರನ್ನು ಮುಟ್ಟುವುದು ಎಂಬ ನಂಬಿಕೆ ಅವರಿಗೆ. ಅವರ ಲೇಖನಗಳು ಒಂದು ತಾಂತ್ರಿಕ ಪದಗಳ ನಿಘಂಟುವಾಗದೇ ಸಾಮಾನ್ಯ ಜನರ ಬಳಕೆಯಲ್ಲಿರುವ ಪದಗಳಿಂದ ಕೂಡಿದ ಲೇಖನಗಳಾಗಿದ್ದವು. ಹೀಗಾಗಿ ಅವರ ಮತ್ತು ಜನರ ನಡುವೆ ಒಂದು ಉತ್ತಮ ಸಂಪರ್ಕವಿತ್ತು. ಅವರ ವೈಜ್ಞಾನಿಕ ಲೇಖನಗಳೂ ಸಹಾ ಒಬ್ಬ lay manನನ್ನು ತಲುಪುವಷ್ಟು ಸರಳವಾಗಿರುತ್ತಿದ್ದವು.
1937ರಲ್ಲಿ Cambridge Cavendish Laboratory ಮತ್ತು ಲಂಡನ್ನಲ್ಲಿರುವ Royal Institutionನಲ್ಲಿ ಉಪನ್ಯಾಸ ನೀಡಿದ್ದಾರೆ.
1940ರಲ್ಲಿ Fellow of Royal Society of London ಆಗಿ ಆಯ್ಕೆಯಾದರು.
1946ರಲ್ಲಿ Knighthood ಪದವಿ.
1954ರಲ್ಲಿ ಪದ್ಮಭೂಷಣ ಪ್ರಶಸ್ತಿ.
1956ರಲ್ಲಿ Foreign associate of the US National Academy of sciences.
1961ರಲ್ಲಿ bhatnagar Memorial Award.
ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು.
ಇವೆಲ್ಲದರೊಂದಿಗೆ ಕಿರೀಟವಿಟ್ಟಂತೆ ಅವರಲ್ಲಿ ಮೆರೆಯುತ್ತಿದ್ದ ಮಾನವೀಯತೆಯ ಗುಣಗಳು ಅವರನ್ನು ಮೇರು ಸಮಾರನ್ನಿಸಿತು. ಪ್ರಕೃತಿಯ ಬಗ್ಗೆ ಅವರಿಗಿದ್ದ ಪ್ರೀತಿಯನ್ನು ಒಂದು ಉದಾಹರಣೆಯೊಂದಿಗೆ ಇಲ್ಲಿ ಹೇಳಲು ಬಯಸುತ್ತೇನೆ. NPL ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ ಕಟ್ಟಡದ ಮುಂಭಾಗದಲ್ಲಿ ಎರಡು ಮರಗಳು ಇದ್ದವು. ಅವು ಕಟ್ಟಡದ symmetryಗೆ ಹೊಂದದೇ ಕಟ್ಟಡದ ಸೌಂದರ್ಯ ಹಾಳು ಮಾಡುತ್ತಿವೆ ಎಂದು ಅಲ್ಲಿಯವರ ಅನಿಸಿಕೆ. ಅದಕ್ಕೆ ಅವುಗಳನ್ನು ಕಡಿದು ಹಾಕಬೇಕೆಂದು ಅಲ್ಲಿನ ಮುಖ್ಯಸ್ಥರು ಯೋಚಿಸಿ ಕೊಡಲಿ ಮರಕ್ಕೆ ಹಾಕುವ ಹೊತ್ತಿಗೆ ಅಲ್ಲಿಗೆ ಬಂದ ಕೃಷ್ಣನ್, “ನಿಲ್ಲಿಸಿ ಏಕೆ ಮರ ಕಡಿಯುತ್ತಿರುವಿರಿ?” ಎಂದು ಕೇಳಿದರು.
ಅದಕ್ಕೆ ಬಂದ ಉತ್ತರ, “ ಇವು ಕಟ್ಟಡದ ಸಿಮಿಟ್ರಿಯನ್ನು ಹಾಳು ಮಾಡುತ್ತಿವೆ ಸರ್” ಎಂಬುದು.
ತಕ್ಷಣ ಕೃಷ್ಣನ್, “ ಮರಗಳನ್ನು ಕಡಿಯದೆ ಸಿಮಿಟ್ರಿ ತರಬಹುದು ಇನ್ನೊಂದು ಮರ ಬೆಳೆಸುವುದರ ಮೂಲಕ” ಎಂದು ಹೇಳಿ ಆ ಮರಗಳನ್ನು ಉಳಿಸಿದರು.
ಇಂತಹ ಅಪಾರ ಶಕ್ತಿ ಹೊಂದಿದ್ದು ಎಲೆ ಮರೆಯ ಕಾಯಿಯಂತೆ ತನ್ನ ಜೀವನ ನಡೆಸಿದ ಮೇರು ವಿಜ್ಞಾನಿ ಕೃಷ್ಣನ್ ಒಬ್ಬ ಪರಿಪೂರ್ಣ ವ್ಯಕ್ತಿ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಅವರ ನೆನಪು ನಮ್ಮಲ್ಲಿ ಸದಾ ಇರಲಿ ಎಂಬುದೇ ನನ್ನ ಆಸೆ.