ಕನ್ನಡವೆನೆ ಸುಂಕವ ಹೇರುವುದೀ ನಾಡು

ಕನ್ನಡವೆನೆ ಸುಂಕವ ಹೇರುವುದೀ ನಾಡು

ಬರಹ

(ಈ ಲೇಖನವನ್ನು ೪-೭-೨೦೦೩ರಲ್ಲಿ ಬರೆಯಲಾಗಿತ್ತು)

ರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೇ ಮುಂಚೂಣಿಯಲ್ಲಿದೆ. ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ. ಕರ್ನಾಟಕ ಸರಕಾರವೂ ವರ್ಷಕ್ಕೊಮ್ಮೆ ೫ ದಿನಗಳ ಕಾಲ ಐಟಿ.ಕಾಂ ಎಂಬ ಮೇಳ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುತ್ತಲೇ ಬಂದಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಂತೂ ಹೈಟೆಕ್ ಮುಖ್ಯಮಂತ್ರಿ ಎಂಬ ಬಿರುದು ಪಡೆದಿದ್ದಾರೆ.

ಮುಖ್ಯಮಂತ್ರಿಯವರ ಈ ಬಿರುದನ್ನೇ ಅವರ ವಿರೋಧಿಗಳು, ವಿರೋಧಿಸುವುದನ್ನೇ ಕಸುಬಾಗಿಸಿಕೊಂಡಿರುವ ವಿರೋಧ ಪಕ್ಷದವರು ಮತ್ತು ಕಾಂಗ್ರೆಸ್ಸಿನ ಒಳಗೇ ಇದ್ದುಕೊಂಡು ವಿರೋಧ ಪಕ್ಷದ ಕೆಲಸ ಮಾಡುವವರು, ಕೃಷ್ಣರ ಮೇಲೆ ಧಾಳಿ ನಡೆಸಲು ಅಸ್ತ್ರವನ್ನಾಗಿಸಿಕೊಂಡರು. ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಅಭಾವ, ಬರಗಾಲ, ಇತ್ಯಾದಿ ಸಮಸ್ಯೆಗಳೇ ಬೇಕಷ್ಟಿರುವಾಗ ಮುಖ್ಯಮಂತ್ರಿಯವರು ಮಾಹಿತಿ ತಂತ್ರಜ್ಷಾನಕ್ಕೆ ಅತೀ ಒತ್ತು ಕೊಡುತ್ತಿದ್ದಾರೆ. ನಮಗೆ ಬೇಕಾಗಿರುವುದು ಈ ಸಮಸ್ಯೆಗಳಿಗೆ ಪರಿಹಾರವೇ ಹೊರತು ಮಾಹಿತಿ ತಂತ್ರಜ್ಞಾನವಲ್ಲ ಎಂದು ಅವರ ಟೀಕೆ.

ಕೃಷ್ಣ ಅವರಿಗೆ ತನ್ನ ಹೆಸರಿಗೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಬೇಕಿತ್ತು. ಜೊತೆಗೇ ವಿರೋಧಿಗಳ ಬಾಯಿಯನ್ನೂ ಮುಚ್ಚಿಸಬೇಕಿತ್ತು. ಇದಕ್ಕೆ ಪರಿಹಾರವೆಂದರೆ ಮಾಹಿತಿ ತಂತ್ರಜ್ಞಾನಕ್ಕೆ ತಾನು ಅತೀ ಒತ್ತು ಕೊಡುತ್ತಿಲ್ಲ ಎಂದು ತೋರಿಸಿಕೊಳ್ಳುವುದು. ಅದು ಹೇಗೆ? ಸುಲಭದ ದಾರಿ ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಂದರೆ ತಂತ್ರಾಂಶಗಳಿಗೆ ತೆರಿಗೆ ಹೇರುವುದು. ಹಾಗೆ ಮಾಡಿದರೆ ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳನ್ನು ಎದುರು ಹಾಕಿಕೊಳ್ಳಬೇಕಾಗುವುದಲ್ಲ? ಆ ಕಂಪೆನಿಗಳು ಬೆಂಗಳೂರಿನಿಂದ ಹೈದರಾಬಾದಿಗೆ ವಲಸೆ ಹೋದರೆ? ಇದಕ್ಕೂ ಕೃಷ್ಣರ ಬಳಿ ಚಾಣಕ್ಯ ತಂತ್ರವಿದೆ. ತಂತ್ರಾಂಶ ತಯಾರಿ, ಮಾರಾಟ ಮತ್ತು ಸೇವೆಗಳಿಗೆ ಶೇಕಡ ೪ ರಷ್ಟು ಮಾರಾಟ ತೆರಿಗೆ ವಿಧಿಸಲಾಯಿತು. ಇಲ್ಲಿ ಚಾಣಾಕ್ಯತನವೆಂದರೆ ಈ ತೆರಿಗೆ ಕರ್ನಾಟಕದಲ್ಲಿ ಮಾರಾಟ ಮಾಡುವ ತಂತ್ರಾಂಶ ಉತ್ಪನ್ನ ಮತ್ತು ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಬೆಂಗಳೂರಿನಲ್ಲಿ ಮನೆ ಮಾಡಿರುವ ವಿಶ್ವಾದ್ಯಂತ ಗಮನ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ಖ್ಯಾತ ಕಂಪೆನಿಗಳಿಗೆ ಈ ಹೊಸ ತೆರಿಗೆಯಿಂದ ಯಾವುದೇ ಹಾನಿ ಇಲ್ಲ. ಯಾಕೆಂದರೆ ಅವರೆಲ್ಲ ಮಾಹಿತಿ ತಂತ್ರಜ್ಞಾನ ಸೇವೆಯ ರಫ್ತು ಮಾತ್ರ ಮಾಡುತ್ತಿರುವವರು. ಸಹಜವಾಗಿಯೇ ಅವರಿಂದ ಈ ತೆರಿಗೆಯ ವಿರುದ್ಧ ಯಾವ ಪ್ರತಿಭಟನೆಯೂ ಬಂದಿಲ್ಲ. ಕನ್ನಡದವರ ಹೆಮ್ಮೆಯ ಇನ್ಫೋಸಿಸ್ ಕೂಡ ಈ ತೆರಿಗೆಯ ವಿರುದ್ಧ ಸೊಲ್ಲೆತ್ತಿಲ್ಲ. ಯಾಕೆಂದರೆ ಅವರಿಗೆ ಈ ತೆರಿಗೆ ಅನ್ವಯಿಸುವುದಿಲ್ಲ.

ತನ್ನ ಹೆಸರಿಗೆ ತಟ್ಟಿದ ಕಳಂಕ ತೊಡೆದ ಹಾಗೂ ಆಯಿತು, ದೊಡ್ಡ ಕಂಪೆನಿಗಳ ವಿರೋಧ ಕಟ್ಟಕೊಳ್ಳದಿದ್ದ ಹಾಗೂ ಆಯಿತು ಎಂಬ `ಒಂದು ಕಲ್ಲಿಗೆ ಎರಡು ಹಣ್ಣು ಉದುರಿಸುವ' ಲೆಕ್ಕಾಚಾರ ಕೃಷ್ಣ ಅವರದು. ಆದರೆ ಇದು ಅವರ ಲೆಕ್ಕಾಚಾರದಂತೆಯೇ ಇದೆಯೇ ಎಂಬುದನ್ನು ಸ್ವಲ್ಪ ಪರಿಶೀಲಿಸೋಣ.

ಕರ್ನಾಟಕದಲ್ಲಿ ಮಾರಾಟವಾಗುವ ಗಣಕ ತಂತ್ರಾಂಶ ಸೇವೆ ಮತ್ತು ಉತ್ಪನ್ನಗಳ ಒಟ್ಟು ಮೌಲ್ಯ ಸುಮಾರು ೧೫ ಕೋಟಿ ರೂಪಾಯಿಗಳಿಗಿಂತ ಹೆಚ್ಚಿರಲಾರದು. ಇದರಿಂದ ಸಂಗ್ರಹವಾಗುವ ಮಾರಾಟ ತೆರಿಗೆ ೬೦ ಲಕ್ಷ ರೂ. ಮಾತ್ರ. ಕರ್ನಾಟಕ ರಾಜ್ಯದ ಒಟ್ಟು ಅಂದಾಜು ಮಾರಾಟ ತೆರಿಗೆ ಸಂಗ್ರಹ ೧೨೦೦೦ ಕೋಟಿ ರೂ. ಅಂದರೆ ಗಣಕ ತಂತ್ರಾಂಶಗಳಿಗೆ ವಿಧಿಸುವ ಶೇಕಡಾ ೪ರ ಮಾರಾಟ ತೆರಿಗೆಯಿಂದ ಬೊಕ್ಕಸಕ್ಕೆ ಬರುವ ಆದಾಯ ನಗಣ್ಯ.

ರಾಜ್ಯದಲ್ಲಿ ಮಾರಾಟವಾಗುವ ಗಣಕ ತಂತ್ರಾಂಶ ಸೇವೆ ಮತ್ತು ಉತ್ಪನ್ನಗಳನ್ನು ಯಾರು ಖರೀದಿಸುತ್ತಾರೆ ಎಂಬುದನ್ನು ಪರಿಶೀಲಿಸೋಣ. ಭಾರತೀಯ ತಂತ್ರಾಂಶ ತಯಾರಕ ಒಕ್ಕೂಟದ (ನಾಸ್ಕಾಮ್, www.nasscom.org) ವರದಿಯಂತೆ ಸ್ಥಳೀಯ ತಂತ್ರಾಂಶ ಮಾರುಕಟ್ಟೆಯಲ್ಲಿ ಶೇಕಡಾ ೬೫ ಸರಕಾರಿ ಮತ್ತು ಅರೆ ಸರಕಾರಿ ಕ್ಷೇತ್ರಕ್ಕೆ ಸೇರಿವೆ. ಅಂದರೆ ಸರಕಾರಕ್ಕೆ ಬರುವ ತಂತ್ರಾಂಶ ಮಾರಾಟದ ತೆರಿಗೆಯ ರೂಪದ ಆದಾಯದಲ್ಲಿ ಶೇಕಡ ೬೫ ಸರಕಾರದಿಂದಲೇ ಬರುತ್ತದೆ! ಇದು ಎಡದ ಕೈಯಿಂದ ತೆಗೆದುಕೊಂಡು ಬಲದ ಕೈಯಿಂದ ಕೊಟ್ಟಂತಾಯಿತು.

ರಾಜ್ಯದಲ್ಲಿ ಮಾರಾಟವಾಗುವ ತಂತ್ರಾಂಶಸೇವೆ ಮತ್ತು ಉತ್ಪನ್ನಗಳು ಯಾವ ವಿಷಯಗಳಿಗೆ ಸಂಬಂಧಿಸಿವೆ ಎಂಬುದನ್ನು ಪರಿಶೀಲಿಸಿದಾಗ ಒಂದು ಅಂಶ ಗಮನ ಸೆಳೆಯುತ್ತದೆ. ಅದು ಕನ್ನಡ ತಂತ್ರಾಂಶಗಳಿಗೆ ಸಂಬಂಧಿಸಿದ್ದು. ಸರಕಾರ ಕೊಳ್ಳುವ ತಂತ್ರಾಂಶಗಳಲ್ಲಿ ಕನ್ನಡ ತಂತ್ರಾಂಶದ್ದು ಸಿಂಹ ಪಾಲಿದೆ. ಅದು ವಿದ್ಯಾಭ್ಯಾಸ ಕ್ಷೇತ್ರಕ್ಕಿರಬಹುದು, ಬ್ಯಾಂಕಿಂಗ್ ಆಗಿರಬಹುದು, ಸಾರಿಗೆ ಸಂಸ್ಥೆಗೆ ಸಂಬಂಧಿಸಿರಬಹುದು (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಗಣಕದಲ್ಲಿ ಕನ್ನಡವನ್ನು ಬಳಸುತ್ತಿಲ್ಲ, ಅದು ಬೇರೆ ವಿಷಯ) -ಎಲ್ಲ ತಂತ್ರಾಂಶಗಳಲ್ಲಿ ಕನ್ನಡ ಅವಿಭಾಜ್ಯ ಅಂಗ. ಕನ್ನಡ ತಂತ್ರಾಂಶ ತಯಾರಕರಿಗೆ ಸರಕಾರ ಮತ್ತು ಅರೆ ಸರಕಾರಿ ಸಂಸ್ಥೆಗಳು ದೊಡ್ಡ ಗಿರಾಕಿ -ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ. ಉದಾಹರಣೆಗೆ ಸಹಕಾರಿ ಬ್ಯಾಂಕ್‌ಗಳಿಗೆ ತಯಾರಾಗುವ ತಂತ್ರಾಂಶಗಳಿಗೆ ಕನ್ನಡ ತಂತ್ರಾಂಶ ತಯಾರಕರು ತಮ್ಮ ಸೇವೆ ಸಲ್ಲಿಸಿರುತ್ತಾರೆ. ಕನ್ನಡ ತಂತ್ರಾಂಶ ತಯಾರಕರು ಬೆರಳೆಣಿಕೆಯಲ್ಲಿದ್ದಾರಷ್ಟೆ. ಈ ಹೊಸ ಮಾರಾಟ ತೆರಿಗೆ ಅವರಿಗೆ ಮರಣಾಂತಿಕ ಪೆಟ್ಟು ನೀಡಬಹುದು.

ಈ ತೆರಿಗೆಯನ್ನು ಪ್ರಥಮ ಬಾರಿಗೆ ೨೦೦೦-೦೧ ರ ರಾಜ್ಯ ಮುಂಗಡ ಪತ್ರದಲ್ಲಿ ಹೇರಲಾಗಿತ್ತು. ಆ ಸಮಯದಲ್ಲಿ ಈ ತೆರಿಗೆಯಿಂದ ಕನ್ನಡಕ್ಕಾಗುವ ತೊಂದರೆಯನ್ನು ವಿವರಿಸಿ ಮುಖ್ಯಮಂತ್ರಿ ಕೃಷ್ಣರಿಗೆ ಒಂದು ಇಮೈಲ್ ಮಾಡಲಾಗಿತ್ತು. ಇದೇ ತರ್ಕವನ್ನು ಮಂಡಿಸಿ [:http://www.vishvakannada.com/archives/html/vol5no4/nimmodane.htm|ಅಂತರಜಾಲ ತಾಣ] ಮತ್ತು ದಿನಪತ್ರಿಕೆಯೊಂದರ ವಾಚಕರವಾಣಿ ಕಾಲಂಗಳಲ್ಲೂ ಬರೆಯಲಾಗಿತ್ತು. ಈ ಎಲ್ಲ ವಿಷಯಗಳನ್ನು ಮನಗಂಡ ಕೃಷ್ಣ ಅವರು ಈ ತೆರಿಗೆಯನ್ನು ಆಗ ರದ್ದು ಪಡಿಸಿದ್ದರು. ಆದರೆ ನಂತರದ ಮುಂಗಡ ಪತ್ರದಲ್ಲಿ ಅದನ್ನು ಪುನ ಹೇರಲಾಗಿದೆ. ಕೃಷ್ಣರಿಗೆ ವಿದೇಶದಿಂದ ಡಾಲರ್‌ನಲ್ಲಿ ಹಣ ತರುವ ಕಂಪೆನಿಗಳು ಬೇಕು. ರೂಪಾಯಿಯಲ್ಲಿ ದುಡಿಯುವ ಬಡ ಕನ್ನಡ ಕಂಪೆನಿಗಳು ಬೇಡ. ಗಣಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯೂ ಬೇಡ. ಮನೆಗೆ ಮಾರಿ ಪರರಿಗೆ ಉಪಕಾರಿ.

ವಿಶ್ವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಒಂದೆರೆಡು ವರ್ಷಗಳಿಂದ ಹಿನ್ನಡೆ ಕಂಡುಬಂದಿದೆ. ಅಮೇರಿಕಾದ ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞರಲ್ಲಿ ಸಹಸ್ರಾರು ಮಂದಿ ಸ್ವದೇಶಕ್ಕೆ ವಾಪಸಾಗಿದ್ದಾರೆ ಮತ್ತು ಇನ್ನೂ ಕೆಲವರು ಹಿಂತಿರುಗಿ ಬರುತ್ತಿದ್ದಾರೆ. ಇವರಲ್ಲಿ ಕರ್ನಾಟಕದವರು ಗಣನೀಯವಾಗಿದ್ದಾರೆ. ಹೀಗೆ ವಾಪಸು ಬಂದವರನ್ನು ನಮ್ಮ ರಾಜ್ಯಕ್ಕೆ ಅತಿ ಅಗತ್ಯವಾಗಿರುವ ತಂತ್ರಾಂಶ ತಯಾರಿಯಲ್ಲಿ ತೊಡಗಿಸುವುದು ಸೂಕ್ತವಾದುದು ಮಾತ್ರವಲ್ಲ ಅತೀ ಅವಶ್ಯವೂ ಹೌದು.

ಪರಿಸ್ಥಿತಿ ಹೀಗಿರುವಾಗ ಕೃಷ್ಣ ಅವರು ತಮ್ಮ ನಿರ್ಧಾರವನ್ನು ಪುನಃ ಪರಿಶೀಲಿಸಿ ತಂತ್ರಾಂಶ ಮಾರಾಟಕ್ಕೆ ಪುನ ವಿಧಿಸಿದ ತೆರಿಗೆಯನ್ನು ಮತ್ತೊಮ್ಮೆ ರದ್ದು ಪಡಿಸುತ್ತಾರೆಂದು ಆಶಿಸೋಣ.

-------------
೨೬-೮-೨೦೦೫

ಈಗಿನ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ನಾನು ಒಮ್ಮೆ ಆಗಿನ ಹಣಕಾಸು ಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೆ. ಆಗ ಅವರಿಗೆ ಈ ತೆರಿಗೆಯ ಬಗ್ಗೆ ವಿವರವಾಗಿ ಬರೆದ ಲೇಖನ, ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಪತ್ರ, ಮತ್ತು ಈ ತೆರಿಗೆ ರದ್ದು ಮಾಡಬೇಕೆಂದು ಅವರಿಗೊಂದು ಮನವಿ ನೀಡಿದ್ದೆ. ಆದರ ಪರಿಣಾಮ ಏನು ಗೊತ್ತೆ? ೪% ಇದ್ದ ತೆರಿಗೆ ೧೨% ಆಯಿತು! ಈಗ VAT ಬಂದಿದೆ. ಇದರ ಪ್ರಕಾರ ತಂತ್ರಾಂಶಗಳಿಗೆ ತೆರಿಗೆ ೧೨.೫% ಈಗ ಹೇಳಿ. ಕನ್ನಡ ಮತ್ತು ಕರ್ನಾಟಕಕ್ಕಾಗಿ ತಂತ್ರಾಂಶ ತಯಾರಿ ಮಾಡಬೇಕೆ?

- ಡಾ. ಯು. ಬಿ. ಪವನಜ