ಕನ್ನಡ ವಿಕಿಪೀಡಿಯಾ

Submitted by sankul on Thu, 08/28/2008 - 14:59
ಬರಹ

ಸಂಪದ ಬಳಗದ ಸದಸ್ಯರಿಗೆ ನಮಸ್ಕಾರ...
ಕನ್ನಡ ವಿಕಿಪೀಡಿಯಾದ ಬಗ್ಗೆ ತಮಗೆಲ್ಲಾ ತಿಳಿದಿರಬಹುದು, ಇದೊಂದು ಮುಕ್ತ ವಿಶ್ವಕೋಶ ಯೋಜನೆಯಾಗಿದ್ದು, ಯಾರೂ ತಮಗೆ ತಿಳಿದಿರುವ ವಿಷಯಗಳ ಮೇಲೆ ಲೇಖನಗಳನ್ನು ಬರೆಯಬಹುದು. ಹೀಗೆ ಬರೆಯುವ ಲೇಖನಗಳು ಯಾವುದೇ ಕೃತಿಸ್ವಾಮ್ಯವನ್ನು ಹೊಂದಿರಬಾರದು ಮತ್ತು ನಿಮ್ಮ ಸಂಪಾದನೆಗಳನ್ನು ಬೇರೆಯವರು ನಿರ್ಧಾಕ್ಷಿಣ್ಯವಾಗಿ ಬದಲಾಯಿಸಿ ಬೇರೆ ಕಡೆಗಳಲ್ಲಿ ಹಂಚಬಹುದು.

ಸಧ್ಯಕ್ಕೆ ಕನ್ನಡ ವಿಕಿಯಲ್ಲಿ ೫೮೫೩ ಲೇಖನಗಳಿದ್ದು ಎಲ್ಲ ವಿಕಿಗಳ ಪಟ್ಟಿಯಲ್ಲಿ ೯೯ನೇಯ ಸ್ಥಾನದಲ್ಲಿದೆ ಮತ್ತು ಒಟ್ಟು ಸದಸ್ಯರ ಸಂಖ್ಯೆ ೧೯೫೫. ಇತ್ತೀಚಿನ ದಿನಗಳಲ್ಲಿ ಹೊಸ ಲೇಖನಗಳ ಸೇರಿಕೆಯಲ್ಲಿ ಗಮನೀಯ ಇಳಿಮುಖ ಕಂಡಿದೆ. ದಿನಕ್ಕೆ ೧ ಹೆಚ್ಚೆಂದರೆ ೨ ಲೇಖನಗಳು ಹೊಸತಾಗಿ ಸೇರ್ಪಡೆಯಾಗುತ್ತಿವೆ. ಕೆಲವೇ ಕೆಲವು ಸದಸ್ಯರು ನಿಯಮಿತವಾಗಿ ಹೊಸ ಲೇಖನಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ, ಸಂಪಾದನೆಯ ಕಾರ್ಯವಂತೂ ಸಂಪೂರ್ಣ ನಿಂತುಹೋದಂತಿದೆ. ಹಾಗೆಯೇ ಹೊಸ ತಂತ್ರಾಂಶಗಳನ್ನು ಅಳವಡಿಸುವವರು ಕೂಡ ಬೇಕಾಗಿದ್ದಾರೆ. ಇನ್ನು ಕೇವಲ ೧೦೦ ಲೇಖನಗಳು ಸೇರ್ಪಡೆಗೊಂಡರೆ ವಿಕಿಯಲ್ಲಿ ೯೮ ಸ್ಥಾನಕ್ಕೆ ಏರಬಹುದು. ಭಾರತದ ಬೇರೆ ಕೆಲವು ಭಾಷೆಗಳು ೧೦,೦೦೦ಕ್ಕೂ ಹೆಚ್ಚು ಲೇಖನಗಳನ್ನು ಹೊಂದಿವೆ.

ಸಂಪದ ಬಳಗದಲ್ಲಿ ಅನೇಕರು ಉತ್ಕೃಷ್ಟ ಲೇಖನಗಳನ್ನು ನಿಯಮಿತವಾಗಿ ಬರೆಯುತ್ತಿರುವಿರಿ, ಇದೇ ರೀತಿಯಲ್ಲಿ ಕನ್ನಡ ವಿಕಿಯಲ್ಲಿ ಕೂಡ ಲೇಖನವನ್ನು ಬರೆಯಿರಿ ಮತ್ತು ಇದರ ಬಗ್ಗೆ ಪ್ರಚುರಪಡಿಸಿರಿ. ಕರ್ನಾಟಕದ ಸ್ಥಳಗಳ ಬಗ್ಗೆ, ಐತಿಹಾಸಿಕ ಸ್ಮಾರಕಗಳ ಬಗ್ಗೆ, ಅಲ್ಲದೇ ಇನ್ನೂ ಅನೇಕ ವಿಷಯಗಳಲ್ಲಿ ಹೊಸ ಲೇಖನಗಳನ್ನು ಸೇರ್ಪಡೆಗೊಳಿಸಬೇಕಾಗಿದೆ. ಅದೇ ರೀತಿ ಅನೇಕ ಲೇಖನಗಳಿಗೆ ಕೃತಿಸ್ವಾಮ್ಯವಿಲ್ಲದ ಚಿತ್ರಗಳೂ ಕೂಡ ಬೇಕಾಗಿವೆ.

ನಾವೆಲ್ಲರೂ ಕೂಡಿ ಹೊಸ ಲೇಖನಗಳನ್ನು ಬರೆದರೆ ಈ ವರ್ಷದ ಕೊನೆಗೆ ಕನಿಷ್ಟ ೮೦೦೦ ಲೇಖನಗಳನ್ನಾದರೂ ಕನ್ನಡ ವಿಕಿ ಹೊಂದಬಹುದೆಂದು ಆಶಿಸುತ್ತೇನೆ. ಬನ್ನಿ ಕನ್ನಡ ವಿಕಿಗೆ ಹೊಸ ಲೇಖನಗಳನ್ನು ಬರೆಯೋಣ...