ಅಳಿಲು
ಬರಹ
ಪುಟ್ಟ ಕುಂಚ ಎತ್ತಿ ಹಿಡಿದು
ಅಲ್ಲಿ, ಇಲ್ಲಿ, ಎಲ್ಲ ಜಿಗಿದು
ಕಾಯಿಚೂರು ಹೆಕ್ಕಿ ಹಿಡಿದು
ತಿನ್ನುತಿದೆ ಅಳಿಲು ಮರಿ
ಸುತ್ತ ಮುತ್ತ ಕಳ್ಳ ನೋಟ
ನಡುವೆ ಒಮ್ಮೆ ತಿನ್ನುವಾಟ
ನೋಡಲಿಕ್ಕೆ ಬಹಳ ಚೋಟ
ಕಾಣುತಿದೆ ಅಳಿಲುಮರಿ
ಬೆನ್ನ ಮೇಲೆ ಮೂರು ನಾಮ
ಬರೆದನಂತೆ ನಮ್ಮ ರಾಮ
ಮುದ್ದಿನಲಿ ಚಂದಮಾಮ
-ನಂತೆ ಇಹುದು ಅಳಿಲುಮರಿ
ಮರದ ಮೇಲೆ ಅದರ ವಾಸ
ತಿಳಿಯದದಕೆ ಜಗಳ ಮೋಸ
ಚಂದದಿಂದ ಮಂದಹಾಸ
ಬೀರಿತಿದೆ ಅಳಿಲುಮರಿ
ನೋಡಲಿಕ್ಕೆ ಎಷ್ಟು ಚಂದ!
ಕಣ್ಣ ನೋಟ ಬಹಳ ಅಂದ
ಮುಟ್ಟಿದರೆ ಪುಟ್ಟ ಕಂದ
-ನಂತೆ ಮೃದುವು ಅಳಿಲುಮರಿ