ದೇಣಿಗೆ

ದೇಣಿಗೆ

ಬರಹ

ಭಾಷೆಯ ಉಳಿವು ಬೆಳೆವಿಗೆ ಅದೇ ಭಾಷೆಯನ್ನು ಉಪಯೋಗಿಸುವವರ ಸಹಾಯ ಹೆಚ್ಚಿಗೆ ಬೇಕಿರುವುದು. ಆ ಭಾಷೆಯವರಲ್ಲದೇ ಬೇರೆ ಭಾಷೆಯವರು ಅದರ ಉಳಿವಿಗೆ ಅಥವಾ ಉನ್ನತಿಗೆ ಹೆಚ್ಚಿನ ಶ್ರಮವಹಿಸಲಾರರು. ಆದ್ದರಿಂದ ಆ ಭಾಷೆಯ ಉನ್ನತಿಗೆ ಅದರದ್ದೇ ಜನಗಳು ತನು, ಮನ, ಧನಗಳನ್ನು ಅರ್ಪಿಸಬೇಕಾಗಿರುವುದು ಅವಶ್ಯ. ಕನ್ನಡ ಭಾಷೆ ಇದಕ್ಕೆ ಹೊರತಲ್ಲ.

ಕನ್ನಡದ ಉಳಿವಿಗೆ ಧಕ್ಕೆ ಬರುತ್ತಿದೆ ಎಂದು ಎಲ್ಲ ಕಡೆಯೂ ಕೂಗು ಕೇಳಿಬರುತ್ತಿದ್ದು, ಇದಕ್ಕಾಗಿ ಬಹಳಷ್ಟು ಸಂಘ, ಸಂಸ್ಥೆಗಳು, ವೇದಿಕೆಗಳು, ಗುಂಪುಗಳು ಇತ್ಯಾದಿ ನಿರ್ಮಿತವಾಗುತ್ತಿವೆ. ಕನ್ನಡಿಗರು ಒಂದೆಡೆ ಸೇರಿ ಚರ್ಚಿಸುತ್ತಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸಲು ಮುಂಚೂಣಿಯಲ್ಲಿರುವ ರೂವಾರಿಗಳು ಇತರ ಸದಸ್ಯರುಗಳಿಂದ ತನು, ಮನ, ಧನಗಳ ಸಹಾಯ ಕೇಳುವುದೂ ಸಾಮಾನ್ಯದ ಸಂಗತಿ.

ಅಂತರ್ಜಾಲದಲ್ಲಿ ಮೊದ ಮೊದಲು ಕನ್ನಡಿಗರು ಆಂಗ್ಲ ಭಾಷೆಯಲ್ಲಿ ಚರ್ಚಿಸುತ್ತಿದ್ದರು. ನಂತರ ಕನ್ನಡವನ್ನು ಆಂಗ್ಲ ಲಿಪಿಯಲ್ಲಿ ಬರೆದು ಚರ್ಚಿಸಹತ್ತಿದರು. ಇದನ್ನು ಕಂಗ್ಲೀಷ್ ಎಂದು ಕರೆದರು. ಮುಂದೆ ಕೆಲ ಉತ್ಸಾಹೀ ತರುಣರ ಕಷ್ಟದ ಫಲವಾಗಿ ಯೂನಿಕೋಡ್ ಸಹಾಯದಿಂದ ಕನ್ನಡದಲ್ಲೇ ಬರೆಯುವುದು, ವ್ಯವಹರಿಸುವುದು, ಚರ್ಚಿಸುವುದು ನಡೆಯುತ್ತಿದೆ. ಈ ಕೆಲ ಉತ್ಸಾಹೀ ತರುಣರನ್ನು ಹೆಸರಿಸಬೇಕೆಂದರೆ ಮೊದಲು ನೆನಪಾಗುವುದು ಬರಹದ ಕರ್ತೃ ಶೇಷಾದ್ರಿ ವಾಸು. ನಂತರ ಕನ್ನಡದಲ್ಲಿಯೇ ಪೂರ್ಣ ಪ್ರಮಾಣದ ಅಂತರ್ಜಾಲ ನಿರ್ಮಿಸಿ ಮನೆ ಮನೆ ಮಾತಾಗುತ್ತಿರುವ ಹರಿಪ್ರಸಾದ ನಾಡಿಗರು. ಇವರೆಲ್ಲರ ಹಿಂದೆ ಇರುವ ಹಿರಿಯರುಗಳ ಕಾಣಿಕೆಯೇನೂ ಕಡಿಮೆಯೇನಲ್ಲ. ಶ್ರೀ ಪವನಜ ಅವರ ಕಾಣಿಕೆ ಯಾರಿಗೆ ತಿಳಿಯದು. ಮೈಕ್ರೋಸಾಫ್ಟಿನ ಮೂಲಕ ಕಂಪ್ಯೂಟರ್‍‍ಗಳಲ್ಲಿ ಕನ್ನಡದ ಬಳಕೆಗೆ ಅನುವು ಮಾಡಿಕೊಟ್ಟ ಮಹನೀಯರು. ಇಂತಹ ಇನ್ನೂ ನೂರಾರು ಜನಗಳು ಇದ್ದಾರೆ. ಇವರೆಲ್ಲರಲ್ಲಿ ಕಂಡು ಬರುವ ಒಂದು ಅಂಶವೆಂದರೆ, ಇವರು ಎಂದಿಗೂ ತಮಗೆ ಹಣ ಮಾಡಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಹೊಟ್ಟೆ ಬಟ್ಟೆಯ ಮರೆತು ಕಂಪ್ಯೂಟರ್‍‍ಗಳಲ್ಲಿ ಕನ್ನಡದ ಉಪಯೋಗಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ಮಹನೀಯರು ಕೊಟ್ಟಿದ್ದೇ ಹೆಚ್ಚು, ತೆಗೆದುಕೊಂಡಿರುವುದು ಬಹಳ ಬಹಳ ಅಲ್ಪ.

ಇಂತಹ ಮಹನೀಯರ ಕೈ ಭದ್ರ ಪಡಿಸುವುದು ಇನ್ನಿತರ ಕರ್ತವ್ಯವಲ್ಲವೇ?
ಕೈಲಾದದ್ದನ್ನಾದರೂ ಕೊಡಬೇಕಲ್ಲವೇ? ಸಂಪದದಲ್ಲಿ ಇದೀಗ ಸದಸ್ಯರ ಸಂಖ್ಯೆ ೧೦೦೦ ದಾಟಿದೆ. ಸರ್ವರ್ ಕಂಪನಿಯವರು ತಗಾದೆ ತೆಗೆಯುತ್ತಿದ್ದಾರೆ. ಇದಕ್ಕಾಗಿ ಸಂಪದಕ್ಕೆ ಒಂದು ಸರ್ವರ್ ಅನ್ನು ಬಾಡಿಗೆಗೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವರ್ಷಕ್ಕೆ ಒಂದು ಸರ್ವರ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ೨೦೦೦ ಡಾಲರುಗಳ ಅವಶ್ಯಕತೆ ಇದೆ. ೧೦೦೦ ಸದಸ್ಯರು ಒಂದು ವರ್ಷಕ್ಕೆ ತಲಾ ೨ ಡಾಲರುಗಳನ್ನು ಕೊಟ್ಟರೂ ಸಾಕು - ಒಂದು ಸರ್ವರ್ ಅನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಅಂದರೆ ಒಂದು ವರ್ಷಕ್ಕೆ ಒಬ್ಬ ಸದಸ್ಯರು ಕೇವಲ ೧೦೦ ರೂಪಾಯಿಗಳನ್ನು ನೀಡಿದರೆ ಸಾಕಷ್ಟೆ.

ಇಂತಹ ಸಂದರ್ಭದಲ್ಲಿ ನನ್ನದೊಂದು ಕಳಕಳಿಯ ಮನವಿ. ಇಂತಹ ಸುಂದರ ಹೂದೋಟವನ್ನು ನಿರ್ಮಿಸಿದವರೇ ಇದರ ಹೊರೆ ಹೊರಬೇಕೆನ್ನುವುದು ಸರಿಯಲ್ಲ. ಹೂದೋಟದಿಂದ ಆನಂದ ಪಡೆಯುವವರೂ ಸ್ವಲ್ಪ ಕಾಣಿಕೆಯನ್ನು ಕೊಡುವುದು ಸೂಕ್ತ. ಕನ್ನಡಾಭಿಮಾನಿ ಸಹೃದಯರು ಒಂದು ಸುಂದರ ಸಂಸ್ಥೆಯನ್ನು ಉಳಿಸಿ, ಬೆಳೆಸಿ, ಇತರರನ್ನೂ ಬೆಳೆಯುವಂತೆ ಮಾಡಿರೆಂದು ಕೇಳಿಕೊಳ್ಳುವೆ.

ಶ್ರೀಕಾಂತರು ತಿಳಿಸಿದ ಮಯೂರ ಮಾಸಪತ್ರಿಕೆಯಲ್ಲಿ ಬಂದಿರುವ ಸೇಡಿಯಾಪು ಕೃಷ್ಣ ಭಟ್ಟರ ಒಂದು ಕವನ ಸಮಯೋಚಿತವಾಗಿದೆ.

ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ಬತ್ತಿಯೊಣಗುತಿದೆ, ಬೆಳಕು ಬಾಡುತ್ತಿದೆ
ಕತ್ತಲೆ ಮುಂದೆ ಮೊಂದೊತ್ತುತಿದೆ
ಅತ್ತಲಿಂದತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳಿ ಬೀಸುತ್ತಿದೆ

- ಎಣ್ಣೆ ಹೊಯ್ಯಮ್ಮ ದೀಪಕ್ಕೆ

ಎಲ್ಲರಿಗೂ ಒಳ್ಳೆಯದಾಗಲಿ.