ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ನೀವೂ ಮತ ಚಲಾಯಿಸಿ!
ಅಮೆರಿಕಾದಲ್ಲೀಗ ಅಧ್ಯಕ್ಷೀಯ ಚುನಾವಣೆಯ ಭರಾಟೆ.ಬುಶ್ ನಂತರ ಅಲ್ಲಿನ ಅಧ್ಯಕ್ಷರು ಯಾರಾಗುವರು ಎನ್ನುವುದು ಜಗತ್ತಿನ ಎಲ್ಲೆಡೆ ಕುತೂಹಲ ಕೆರಳಿಸಿದೆ. ಅಂದ ಹಾಗೆ ಈಗ ಚುನಾವಣಾ ಕಣದಲ್ಲಿರುವವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕ್ಕೈನ್ ಮತ್ತು ಡೆಮೋಕ್ರಾಟಿಕ್ ಪಕ್ಷದ ಬರಾಕ್ ಒಬಾಮಾ.ಅಮೆರಿಕಾದ ಅಧ್ಯಕ್ಷ ಯಾರಾಗುತ್ತಾರೆ ಎನ್ನುವುದು ಅಮೆರಿಕಾಕ್ಕೆ ಮಾತ್ರಾ ಸಂಬಂಧ ಪಡುವ ವಿಷಯವಾಗಿ ಉಳಿದಿಲ್ಲ. ಅಮೆರಿಕಾದ ದೊಡ್ಡಣ್ಣನ ರೀತಿಯ ವರ್ತನೆ,ಜಗತ್ತಿನ ಆಗುಹೋಗುಗಳಲ್ಲಿ ಆ ದೇಶದ ಹಸ್ತಕ್ಷೇಪ ಮೇರೆ ಮೀರಿರುವ ಕಾರಣ,ವಿಶ್ವವೇ ಈ ಕಡೆಗೆ ಕುತೂಹಲದಿಂದ ನೋಡುತ್ತಿರುವುದು ನಿಜ. ಆದರೆ ಚುನಾವಣೆಯಲ್ಲಿ ಸ್ವತಃ ನಾವೂ ಪಾಲ್ಗೊಳ್ಳಲು ಸಾಧ್ಯವೇ? ಗ್ಯಾಬರ್ ರೊಸ್ತಾ ಎಂಬಾತನಿಗಂತೂ ಜಗತ್ತಿನ ಪ್ರತಿಯೋರ್ವನಿಗೂ ಅಮೆರಿಕಾದ ಅಧ್ಯಕ್ಷ ಪದವಿಯ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಬೇಕು ಎನ್ನುವ ಹಂಬಲ. ಆದರೇನು ಮಾಡುವುದು,ಕಾನೂನು ರೀತ್ಯ ಇದು ಸಾಧ್ಯವಿಲ್ಲವಲ್ಲ? ಆದರಾತ ನಿರಾಶನಾಗಿ ಸುಮ್ಮನಿರಲಿಲ್ಲ. ದೇಶ,ಕಾಲಗಳನ್ನು ಮೀರಿ ಜಗತ್ತನ್ನು ಜಾಗತಿಕ ಹಳ್ಳಿಯಾಗಿಸಿರುವ ಅಂತರ್ಜಾಲ ಹೇಗೂ ಇದೆಯಲ್ಲ. ಅದನ್ನು ಬಳಸಿಯಾದರೂ,ಬಯಸಿದವರಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ತೀರ್ಮಾನಕ್ಕೆ ಬಂದ ಗ್ಯಾಬರ್ ರೋಸ್ತಾ ಅಂತರ್ಜಾಲ ತಾಣವನ್ನು ರಚಿಸಿಬಿಟ್ಟ.ಅದೀಗ http://www.iwanttovotetoo.com/index.php?f=regist ಎನ್ನುವ ತಾಣದಲ್ಲಿ ಲಭ್ಯ.ಈ ತಾಣದಲ್ಲಿ ನೋಂದಾಯಿಸಿಕೊಂಡು ನವೆಂಬರ್ ನಾಲ್ಕು ಮತ್ತು ಐದರ ನಡುವೆ ಮತದಾನ ಮಾಡಬಹುದು. ಇದುವರೆಗೆ ಕೇವಲ ಮೂರು ಸಾವಿರದ ಏಳುನೂರು ಜನ ನೋಂದಾಯಿಸಿಕೊಂಡಿದ್ದಾರೆ.ಭಾರತದಿಂದ ಎಂಟು ಜನ ಇದುವರೆಗೆ ನೋಂದಾಯಿಸಿದ್ದಾರೆ. ಚುನಾವಣೆ ಸಮೀಪಿಸಿದಂತೆ ಈ ಸಂಖ್ಯೆ ಹೆಚ್ಚುವುದು ಖಂಡಿತ. ಪ್ರಾನ್ಸ್ ದೇಶದಿಂದ ಅತ್ಯಧಿಕ ಜನರು ನೋಂದಾಯಿಸಿಕೊಂಡಿದ್ದಾರೆ. ಯುರೋಪಿಯನ್ ದೇಶಗಳಿಂದಲೇ ಸದ್ಯ ಹೆಚ್ಚಿನವರು ನೋಂದಾಯಿಸಿಕೊಂಡಿರುವುದರಿಂದ ಯಾರು ಗೆಲ್ಲುವರು ಎನ್ನುವುದರಲಿ ಹೆಚ್ಚಿನ ಕುತೂಹಲವಿಲ್ಲ. ಬರಾಕ್ ಒಬಾಮಾ ಸದ್ಯಕ್ಕಂತೂ ಮುನ್ನಡೆಯಲ್ಲಿದ್ದಾರೆ ಎನ್ನುವುದನ್ನು ಕಣ್ಣುಮುಚ್ಚಿ ಹೇಳಬಹುದು.ಆದರೆ ಈ ಅಂತರ್ಜಾಲ ತಾಣದ ಬಹುಮತ ನೈಜ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರದು ಎನ್ನುವುದು ಶತಸಿದ್ಧ.ತಾಣ ಇಂಗ್ಲೀಷ್ ಸೇರಿದಂತೆ ಫ್ರೆಂಚ್,ಜರ್ಮನ್,ರಶ್ಯನ್,ಸ್ಪಾನಿಶ್,ಹಂಗೇರಿಯನ್,ಅರೇಬಿಕ್,ಚೈನೀಸ್ ಭಾಷೆಗಳಲ್ಲೂ ಇದೆ.ನ್ಯೂಜಿಲ್ಯಾಂಡ್,ಹಂಗೇರಿಯನ್,ರೊಮಾನಿಯನ್ ಸಂಸತ್ ಚುನಾವಣೆಗಳಲ್ಲೂ ಬಯಸಿದವರಿಗೆ ಪಾಲ್ಗೊಳ್ಳುವ ಅವಕಾಶ ಈ ತಾಣದ ಮೂಲಕ ಸಿಗಲಿದೆ.
--------------------------------------------------------------------
ನಿಸ್ತಂತು ಅಂತರ್ಜಾಲ ಬಳಸುತ್ತೀರಾ?:ನೀವೇ ಭಯೋತ್ಪಾದಕ ಎನಿಸಿಕೊಳ್ಳಬಹುದು!
ಬ್ಯಾಡ್(BAD) ಎನ್ನುವ ಗುಪ್ತನಾಮ ಹೊಂದಿರಬಹುದು ಎನ್ನುವ ಗುಮಾನಿಯ ಸರಣಿ ಬಾಂಬು ಸ್ಫೋಟ ಪ್ರಕರಣಗಳು ಬೆಂಗಳೂರು(B),ಅಹಮ್ಮದಾಬಾದ್(A) ಮತ್ತೀಗ ದೆಹಲಿ(D)ಯಲ್ಲಿ ಸಂಭವಿಸಿವೆ.ಇಂಡಿಯನ್ ಮುಜಾಹಿದ್ದೀನ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಮಿಂಚಂಚೆ ಮೂಲಕ ಸ್ಫೋಟದ ಹೊಣೆಯನ್ನೂ ಹೊತ್ತುಕೊಂಡಿದೆ. ಈ ಮಿಂಚಂಚೆ ಮುಂಬೈಯಿಂದ ಬಂದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸುತ್ತವೆ.ಹಿಂದಿನ ಸ್ಫೋಟದ ವೇಳೆಯೂ ಮಿಂಚಂಚೆಯ ಮುಖಾಂತರವೇ ಭಯೋತ್ಪಾದಕರು ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ.ಆದರೆ ಮಿಂಚಂಚೆ ಸಂದೇಶಗಳು ಬಂದಿರುವ ತಾಣಗಳು ನಿಜವಾಗಿ ಭಯೋತ್ಪಾದಕರದ್ದಾಗಿರದೆ, ನಿರ್ದೋಷಿಗಳದ್ದಾಗಿರುವುದು ಕಂಡು ಬಂದಿದೆ. ಮುಂಬೈಯಲ್ಲಿ ಅಮೆರಿಕನ್ ಪ್ರಜೆಯೋರ್ವನ ಮಿಂಚಂಚೆಯನ್ನು ಹ್ಯಾಕ್ ಮಾಡಿ,ಸಂದೇಶ ಕಳುಹಿಸಿ,ಅವನನ್ನು ಪ್ರಕರಣದಲ್ಲಿ ಸಂಶಯಿತನಾಗಿಸುವ ಪ್ರಯತ್ನ ನಡೆದಿದೆ.ಅಹಮ್ಮದಾಬಾದ್ ಪ್ರಕರಣದ ನಂತರ ಮಿಂಚಂಚೆಯೊಂದು ಬಂದದ್ದು ಕಾಲೇಜಿನ ಪ್ರಾಂಶುಪಾಲರ ಮಿಂಚಂಚೆ ಖಾತೆಯಿಂದ!ಈಗಿನ ದಿನಗಳಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕ ಮನೆಮನೆಗಳಲ್ಲೂ ಇರುತ್ತದೆ.ಸದ್ಯ ಬಿಎಸೆನೆಲ್ನಂತಹ ಬ್ರಾಡ್ಬ್ಯಾಂಡ್ ಸೇವೆ ನೀಡುವವರು ನಿಸ್ತಂತು ಅಂತರ್ಜಾಲ ಸಂಪರ್ಕಕ್ಕೆ ನೆರವಾಗುವ ಮಾಡೆಮ್ಗಳನ್ನೂ ಪೂರೈಸುವುದಿದೆ. ಈ ಮಾಡೆಮ್ಗಳು ಕಾರ್ಯನಿರತವಾಗಿದ್ದಾಗ, ಹಲವಾರು ಕಂಪ್ಯೂಟರು ಅಥವ ಲ್ಯಾಪ್ಟಾಪುಗಳನ್ನು ಜತೆಗೆ ಬಳಸಲು ಸಾಧ್ಯ ಎನ್ನುವ ಅನುಕೂಲತೆಯಿದೆ. ನಿಸ್ತಂತು ಸಂಪರ್ಕವನ್ನು ಮನೆಯ ಯಾವ ಮೂಲೆಯಿಂದಲೂ ಪಡೆಯಲು ಸಾಧ್ಯವಿರುವುದರಿಂದ,ಜನರು ಇಂತಹ ಸಂಪರ್ಕವನ್ನು ಇಷ್ಟ ಪಡುವುದು ಸರ್ವೇ ಸಾಮಾನ್ಯ. ಆದರೆ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವಾಗ,ಇಂತಹ ನಿಸ್ತಂತು ಸಂಪರ್ಕದ ಅನುಕೂಲತೆ ತೊಂದರೆಯನ್ನೂ ಉಂಟು ಮಾಡಬಹುದು ಎನ್ನುವುದನ್ನು ಗಮನಿಸಬೇಕು.ಸಣ್ಣ ಅಪಾರ್ಟ್ಮೆಂಟ್ಗಳಾದರೆ,ನಿಸ್ತಂತು ಸಂಪರ್ಕ ಪಕ್ಕದ ಅಪಾರ್ಟ್ಮೆಂಟಿನಲ್ಲೂ ಲಭ್ಯವಾಗಬಹುದು. ಇದರಿಂದ ಒಂದು ತೊಂದರೆಯಿದೆ.ನಿಮ್ಮ ನಿಸ್ತಂತು ಸಂಪರ್ಕದ ಮೂಲಕ ಇತರರೂ ಅಂತರ್ಜಾಲ ಜಾಲಾಡಿ,ನೀವು ಅವರ ಜಾಲಾಟಕ್ಕೂ ಬಿಲ್ ತೆರಬೇಕಾಗಿ ಬರಬಹುದು.ಯಾರಾದರೂ ಭಯೋತ್ಪಾದನೆಯಂತಹ ಚಟುವಟಿಕೆಯಲ್ಲಿ ತೊಡಗಿದವರು, ನಿಮ್ಮ ಮಾಡೆಮ್ ಸಂಕೇತದ ಮೂಲಕ ತಮ್ಮದೇ ಲ್ಯಾಪ್ಟಾಪಿನಿಂದ ಸಂದೇಶ ಕಳುಹಿಸಿದರೂ,ಅದನ್ನು ನಿಮ್ಮ ಸಂಪರ್ಕದಿಂದ ಕಳುಹಿಸಿದಂತೆ ದಾಖಲಾಗುವುದರಿಂದ ನಿಮಗೆ ಸಮಸ್ಯೆಯೊಡ್ಡಬಹುದು.
----------------------------------------------------------------------------
ಇ-ಪತ್ರಿಕೆ ರೀಡರ್ ಸಿದ್ಧವಾಗಿದೆ!
ಅತ್ತಿಂದಿತ್ತ ಸುಲಭವಾಗಿ ಒಯ್ಯಬಹುದಾದ ಇ-ಪತ್ರಿಕೆ ಇದೀಗ ಲಭ್ಯವಾಗಿದೆ. ಇ-ಬುಕ್ ತಂತ್ರಜ್ಞಾನವನ್ನು ಹೋಲುವ ಈ ತಂತ್ರಜ್ಞಾನವನ್ನು ಪ್ಲಾಸ್ಟಿಕ್ ಲಾಜಿಕ್ ಎಂಬ ಕಂಪೆನಿ ಬಳಸಿ, ಇ-ಪೇಪರನ್ನು ತಯಾರಿಸಲಿದೆ. ಇದರಲ್ಲಿ ಸಾವಿರಾರು ಪತ್ರಿಕೆ ಮತ್ತು ಪುಸ್ತಕಗಳನ್ನು ಸಂಗ್ರಹಿಸಲು ಬೇಕಾಗುವಷ್ಟು ಸ್ಮರಣಕೋಶವಿದೆ. ಮಾತ್ರವಲ್ಲ,ನಿಸ್ತಂತು ಸಂಪರ್ಕವಿದ್ದರೆ,ಸತತವಾಗಿ ಪುಟಗಳನ್ನು ಇಳಿಸಿಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ.ವಾಣಿಜ್ಯ ಬಳಕೆಗಿದು ಸಿಗಲು ಇನ್ನೂ ಒಂದೆರಡು ವರ್ಷ ಬೇಕಾಗಬಹುದು ಎಂದು ಕಂಪೆನಿ ಹೇಳಿದೆಯಾದರೂ,ಪ್ರಯೋಗಾರ್ಥವಿದು ಇಂದೇ ಲಭ್ಯವಾಗಲಿದೆ.ಪತ್ರಿಕೆಯ ಮುದ್ರಣ ವೆಚ್ಚವಿಲ್ಲದೆ ಲಭ್ಯವಾಗುವುದು, ಒಂದೇ ಹಾಳೆಯಲ್ಲಿ ದಿನಾಲೂ ಪತ್ರಿಕೆಯನ್ನು ಪಡೆಯುವ ಅನುಕೂಲತೆ ಈ ಇ-ಹಾಳೆಯ ತಂತ್ರಜ್ಞಾನದ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಮಾತ್ರವಲ್ಲ ಖರೀದಿಸಿದವರು ಪತ್ರಿಕೆಯನ್ನು ಓದುತ್ತಿದ್ದಾರೋ,ಅವರು ಯಾವ ಹಿನ್ನೆಲೆಯವರು ಮುಂತಾದ ವಿವರಗಳನ್ನು ಕಲೆ ಹಾಕಲೂ ಸಾಧ್ಯವಾಗುವುದರಿಂದ,ಜಾಹೀರಾತುದಾರರಿಗೆ ಈ ತಂತ್ರಜ್ಞಾನ ಬಹಳ ಅನುಕೂಲಕರವಾಗುವುದರಲ್ಲಿ ಸಂಶಯವೇ ಇಲ್ಲ.
-----------------------------------------------------------
ಭಾರತದಲ್ಲಿರುವ ಬ್ರಾಡ್ಬ್ಯಾಂಡ್ ಬಳಕೆದಾರರ ಸಂಖ್ಯೆಯೆಷ್ಟು?
ಭಾರತದಲ್ಲೀಗ ಐದು ದಶಲಕ್ಷ ಬ್ರಾಡ್ಬ್ಯಾಂಡ್ ಸಂಪರ್ಕಗಳು ಇವೆ.ದೇಶದಲ್ಲಿ ಅಂತರ್ಜಾಲವನ್ನು ಹೆಚ್ಚು ಬಳಕೆದಾರರಿಗೆ ಮುಟ್ಟಿಸಬೇಕು-ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಅಂತರ್ಜಾಲದಂತಹ ಪ್ರಭಾವೀ ಮಾಧ್ಯಮ ಲಭ್ಯವಾಗಿಸಿ,ಅವರ ಏಳಿಗೆಗೆ ಕಾರಣವಾಗಬೇಕು ಎನ್ನುವುದು ಸರಕಾರದ ಗುರಿ. ಅದಕ್ಕಾಗಿ 3G ತಂತ್ರಜ್ಞಾನದ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವಾಗ ಸರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಅಂತಹ ಸೇವೆ ಒದಗಿಸುವ ಶರತ್ತು ಹಾಕಿದೆ. ಹಾಗೆಯೇ ವೈಮಾಕ್ಸ್ ಎನ್ನುವ ನಿಸ್ತಂತು ಅಂತರ್ಜಾಲ ಸೇವೆಯ ಸ್ಪೆಕ್ಟ್ರಮ್ ವಿತರಿಸುವಾಗಲೂ ಸರಕಾರ ಮುಂದಿನೆರಡು ವರ್ಷಗಳಲ್ಲಿ ಸೇವಾದಾತೃಗಳು ಶೇಕಡಾ ಇಪ್ಪತ್ತೈದು ಗ್ರಾಮೀಣ ಪ್ರದೇಶಗಳನ್ನು ತಮ್ಮ ಸೇವಾ ವ್ಯಾಪ್ತಿಯೊಳಗೆ ಸೇರಿಸಬೇಕು ಎನ್ನುವ ನಿಯಮವನ್ನು ರೂಪಿಸಿತ್ತು. ಅದರೆ ಈ ಶರತ್ತನ್ನು ಪೂರೈಸಲು ವಿಫಲವಾಗುವ ಲಕ್ಷಣಗಳೇ ಹೆಚ್ಚಾಗಿರುವುದರಿಂದ ಸರಕಾರ ಶರತ್ತನ್ನು ಬದಲಾಯಿಸಿ,ಮುಂದಿನ ಐದು ವರ್ಷಗಳಲ್ಲಿ ಶೇಕಡಾ ಐವತ್ತು ಗ್ರಾಮೀಣ ಭಾಗಗಳನ್ನು ತಲುಪುವ ಶರತ್ತನ್ನು ವಿಧಿಸಿದೆ.
*ಅಶೋಕ್ಕುಮಾರ್ ಎ