ಹೇಳಲಾರೆ ಕಾರಣ!!

ಹೇಳಲಾರೆ ಕಾರಣ!!

ಬರಹ

ಇಷ್ಟು ಬೇಗ ಮುಗಿಯುತ್ತೆ ಅಂದುಕೊಂಡಿರಲಿಲ್ಲ! ಅಷ್ಟೊಂದು ಪ್ರೀತಿಸಿದ್ವಿ, ನೀನಿಲ್ದೆ ಸತ್ತೋಗ್ತಿನೇ ಅಂದಿದ್ದ. ನೀನಿಲ್ದೆ ನಾನು ಬದುಕ್ತಿನೇನೋ ಅಂದಿದ್ದೆ! ಅದೆಷ್ಟು ಊರು ಸುತ್ಟಿದ್ವಿ? ಅದೆಷ್ಟು ಮಾತು? ಅದೆಷ್ಟು ಮೌನ? ಅದೆಷ್ಟು ಮುತ್ತು? ಎಲ್ಲ ಮುಗಿದೋಯ್ತ? ನಿಂತಲ್ಲೇ ಕಾಲು ಕಂಪಿಸಿದ್ದವು. ಈಗ್ಲೂ ಯೋಚನೆ ಮಾಡಿದ್ರೆ ಹೊಳಿಯೋದೆ ಇಲ್ಲ ಏನು ಕಾರಣ ಅಂತ. ಎಲ್ಲ ಸರಿಯಿತ್ತು. ಸರಿಯಿತ್ತು ಅನ್ಕೊನ್ಡಿದ್ವಿ. ಮದುವೆ ಮಕ್ಕಳು ಏನೆಲ್ಲಾ ಕನಸು ಕಂಡಿದ್ವಿ. ಏನಾಯಿತು ಇದ್ದಕ್ಕಿದ್ದ ಹಾಗೆ? ಅವನ ಅವಮಾನ ನನ್ನ ಬಿಗುಮಾನ ಎರಡು ಕಡಿಮೆ ಆಗ್ಲೇ ಇಲ್ಲ. ಅದ್ಯಾವ ಪರಿ ಕಾಡೀದ್ದ ಪ್ರೀತಿಸಬೇಕಾದ್ರೆ! ಅರ್ಧರಾತ್ರಿ ಎದ್ದು ನೀನು ಜ್ಞಾಪಕ ಬರ್ತಿದಿಯೋ ಅಂತ ಅತ್ತು ಬಿಡ್ತಿದ್ದೆ. ಅದೇ ತಾನೇ ಅರ್ಧಗಂಟೆ ಮಾತಾಡಿ ಫೋನ್ ಇಟ್ಟವನು ಮರು ನಿಮಿಷಕ್ಕೆ ಮತ್ತೆ ಫೋನ್ ಮಾಡಿ ಎನ್ ಸಮಚಾರ? ಅಂತಿದ್ದ. ಆಗೆಲ್ಲ ಅವನ ಮೇಲೆ ಎಷ್ಟು ಮುದ್ದು ಬರೋದು ಅಂದ್ರೆ ಎಲ್ಲ ಬಿಟ್ಟು ಓಡಿ ಹೋಗಿ ಅವನ ಮಡಿಲು ಸೇರಿ ಬಿಡೋಣ ಎನಿಸುತಿತ್ಟು. ಅವ್ನ ಬಿಟ್ರೆ ಪ್ರಪಂಚದಲ್ಲಿ ಬೇರೇನು ಮುಖ್ಯವಲ್ಲ, ಅಸಲೂ ಪ್ರಪಂಚ ಎಂಬುದೇ ಇಲ್ಲ ಎಂಬುವಷ್ಟು ಕಳೆದುಹೊಗಿದ್ದೆ. ನನ್ನ ಜೀವನದಲ್ಲಿ ನನ್ನನ್ನೇ ಹುಡುಕುವಂತಾಗಿತ್ತು. ಒಳ್ಳೇದೋ ಕೆಟ್ಟದ್ದೋ ಗೊತ್ತಿರ್ಲಿಲ್ಲ ಆದರೆ ಹೀಗಿರೋದು ಅಷ್ಟು ಸರಿಯಲ್ಲ ಎಂದು ಸುಪ್ತ ಪ್ರಜ್ಞೆಯೊಂದು ಎಚ್ಚರಿಸುತಿತ್ಟು. ಅದನ್ನು ಗಮನಿಸಿಯೂ ಗಮನಿಸದಂತೆ ಪ್ರೀತಿ ವಿಮಾನದಲ್ಲಿ ಹಾರ್‍ತಿದ್ದೆ. ಆಗೆಲ್ಲ ಲವ್ ಫೇಲ್ಯೂರ್ , ಬ್ರೇಕ್ ಅಪ್ಸ್ ಬಗ್ಗೆ ಯಾರಾದ್ರೂ ಮಾತಾಡ್ತಿದ್ರೆ ಅಷ್ಟು ವರ್ಷ ಜೊತೆಲಿದ್ದು ಅದು ಹೇಗೆ ಒಬ್ಬರನ್ನೊಬ್ಬರು ಬಿಟ್ ಬಿಡ್ತಾರೆ ಅಂತ ಆಶ್ಚರ್ಯ ಆಗೋದು.

ನಿನ್ನ ಜೊತೆ ಕಳೆಯುತ್ತಿದ್ದ ದಿನಗಳಲ್ಲಿ, ನನಗೆ ಇದು ಬೇಸರವನ್ನು ತರಿಸಬಹುದು ಎಂದು ಎಣಿಸಿರಲಿಲ್ಲ. ನೀ ಪರಿಚಯವಾಗೋಕೂ ಮೊದಲು ಅದೆಷ್ಟು ಜನ ಗೆಳೆಯರಿದ್ದರು ನನಗೆ? ಒಂದೆರೆಡು ದಿನ ಕಳೆಯುತ್ತಿದ್ದ ಹಾಗೆ ಅವರೆಲ್ಲ ಬೋರ್ ಅನಿಸಿಬಿಡೊರು. ನಿನ್ನಲ್ಲಿ ಅದೇನಿತ್ಥು ಅಂತ ನಿಂತೇನೋ ಗೊತ್ತಿಲ್ಲ ಮೊದಲಿದ್ದ ಗೆಳೆಯರಿಗೆಲ್ಲ ಅಪರಿಚಿತಳಾಗಿ ಹೋದೆ. ನನ್ನ ಸಂಜೆಗಳೆಲ್ಲ ನಿನ್ನೊಂದಿಗೆ ಕಳೆದು ಹೋಗ್ತಿತ್ತು. ನನಗೆ ನಿಧಾನವಾಗಿ ಗೊತ್ತಾಗಿದ್ದು, ನೀನು ನನ್ನ ಮೇಲಿಟ್ಟಿರೋದು ಬರೀ ಪ್ರೀತಿಯಷ್ಟೇ ಅಲ್ಲ ಅದ್ರಲ್ಲಿ ಪೊಸೆಸಿವ್ನೆಸ್ ಕೂಡ ಇದೆ ಅಂತ. ಅದೊಂದು ಸಲ ನೀನು ನನಗಾಗಿ ಕಾಯುತ್ತಿರುವಾಗ ನಾನು ಬೇರೊಬ್ಬ ಗೆಳೆಯನ ಜೊತೆ ಮಾತಾಡ್ತಿದ್ದೆ ಅಂದಾಗ ಅದೆಷ್ಟು ಕೋಪ ಬಂದಿತ್ತು ನಿನಗೆ! ಇಷ್ಟು ಬೇಗ ನಾನು ಬೇಜಾರಾಗಿ ಹೊದ್ನ ಅಂತ ಕೇಳಿದ್ದೆ , ಹಾಗೆ ಕೇಳಿದ್ರೆ ನನಗೆ ಬೇಜಾರಾಗಬಹುದು ಅಂತ ಗೊತ್ತಿದ್ದೂ. ಮೊದಲನೆ ಸಲ ನಿನ್ನ ಮೇಲೆ ಅಸಮಾಧಾನ ಮೂಡಿತ್ತು. ಅವತ್ತು ಹಾಗೆ ಕೇಳಿದೆ ಅದು ಅವತ್ತಿನ ಪರಿಸ್ಥಿತಿಗೆ ನಿನ್ನ ಪ್ರತಿಕ್ರಿಯೆ ಅಂದುಕೊಂಡಿದ್ದೆ, ಆದರೆ ಮತ್ತೆ ಮತ್ತೆ ನೀ ಕೋಪಗೊಂಡಾಗ ವರ್ತಿಸುತ್ತಿದ್ದ ರೀತಿ ನನಗೆ ನಿನ್ನ ಇನ್ನೊಂದು ಮುಖದ ಪರಿಚಯ ಮಾಡಿಸುತಿತ್ತು. "ಏಕತಾನತೆ" ಪ್ರೀತಿ ಪ್ರೇಮ ಇದರ ಮಧ್ಯೆ ಈ ಪದ ಅಪ್ರಸ್ತುತ ಅನಿಸಿದರು ನನಗಾಗಿದ್ದು ಅದೇ. ಎಲ್ಲ ವಿಷಯಗಳಿಗೂ ನಿನಗೆ ಸಮಜಾಯಿಷಿ ನೀಡಬೇಕಿತ್ತು, ನೀಡದಿದ್ದರೆ ಜಗಳ. ಆದರೆ ಎಷ್ಟು ದಿನ ಅದನ್ನೇ ಮಾಡ್ಲಿಕ್ಕೆ ಸಾಧ್ಯ ಹೇಳು? ಮೊದಲಿದ್ದ ಪ್ರೀತಿ ಉಳಿದಿರಲಿಲ್ಲ. ಇನ್ನೂ ಸಾಕು ನಿಲ್ಲಿಸೋಣ ಅಂದೇ. ಈಗ ನೀನು ಕೇಳ್ತಿದಿಯ ಅದ್ಯಾವ ಕಾರಣಕ್ಕೆ ಹೀಗೆ ಸಂಬಂಧವನ್ನೇ ಮುಗಿಸುತ್ತಿದ್ದೀಯ ಅಂತ, ನಿಜವಾಗ್ಲೂ ನನಗೂ ಗೊತ್ತಿಲ್ಲ!