"ತುಳುನಾಡ ವೈಭವ-ಭೂತದ ಕೋಲ"

Submitted by nekkar_guru on Thu, 09/25/2008 - 07:24
ಬರಹ

ಕರ್ನಾಟಕ ರಾಜ್ಯದ ಮುಂಚೂಣಿ ಜಿಲ್ಲೆಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಒಂದು. ಕಲೆ, ಸಂಸ್ರ್ಕಿತಿ, ಸಾಹಿತ್ಯ, ವಿದ್ಯಾಭ್ಯಾಸ, ಪಾಕಶಾಸ್ತ್ರ ಮುಂತಾದ ಕ್ಷೇತ್ರದಲ್ಲಿ ರಾಜ್ಯಕ್ಕೆ ಜಿಲ್ಲೆಯ ಕೊಡುಗೆ ಮಹತ್ವದ್ದು. ತುಳು ಇಲ್ಲಿನ ಬಹು ಜನರ ಆಡು ಭಾಷೆ. ಆನೇಕ ಜಾನಪದ ಕಲೆ, ವಿಶಿಷ್ಟ ರೀತಿಯ ಪೂಜೆ ಪುನಸ್ಕ್ರಾರಗಳನ್ನು ಇಲ್ಲಿಯ ಜನ ತಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಇದರಲ್ಲಿ ಭೂತಾರಾಧನೆಯು ಒಂದು. ತುಳುನಾಡ ವೈಭವಗಳಲೊಂದಾದ ಭೂತದ ಕೋಲದ ಬಗ್ಗೆ ಕನ್ನಡಿಗರಿಗೊಂದು ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಹಿಂದೂ ಸಂಸ್ಕ್ರಿತಿಯಲ್ಲಿ ಪ್ರತಿಯೊಂದು ಕುಟುಂಬ/ಮನೆತನಕ್ಕೊಂದು ಕುಲದೇವರು ಇರುವಂತೆ ಇಲ್ಲಿ ಪ್ರತಿಯೊಂದು ಕುಟುಂಬಗಳಿಗೆ ಅವರೇ ನಂಬಿಕೊಂಡು ಬಂದಿರುವ ಭೂತ ದೈವಗಳಿರುತ್ತವೆ. ಕುಟುಂಬದಲ್ಲದೆ ಜಾಗದ ಅಂದರೆ ಇರುವ ಸ್ಥಳದ ಭೂತ, ಊರಿನ ಭೂತ ಕೂಡ ಇರುತ್ತದೆ. ಕೊಡಮಣಿತಾಯ, ಪಂಜುರ್ಲಿ, ಕಲ್ಕುಡ, ಗುಳಿಗ, ಜುಮಾದಿ, ವರ್ತೆ (ಹೆಣ್ಣು ಭೂತ), ನೀಚ ಇವು ಕೆಲವು ಪ್ರಸಿದ್ದ ಹಾಗು ಪ್ರಭಾವಶಾಲಿ ಭೂತಗಳು. ಈ ಭೂತಗಳಿಗೆ ವರುಷಕ್ಕೆರಡುಬಾರಿ ಹಣ್ಣು ಕಾಯಿ, ಪಂಚಕಜ್ಜಾಯ, ದೂಪ ದೀಪದ ಪನಿವಾರ ಪೂಜೆ ತಪ್ಪದೆ ನಡೆಯುತ್ತದೆ. ಈ ನಂಬಿದ ಭೂತಗಳಿಗೆ ವರುಷಕ್ಕೊಂದು ಬಾರಿ ಅಥವಾ ಮನೆಯಲ್ಲಿ ಶುಭ ಕಾರ್ಯ ನಡೆದಾಗ ಯಜಮಾನನ ಶಕ್ತಿಗನುಸಾರವಗಿ ಕೊಡುವ ಅತ್ಯುನ್ನತ ಸೇವೆಯೆ ಈ ಕೋಲ.

ಕೋಲ ಸಾಮಾನ್ಯವಾಗಿ ರಾತ್ರಿ ನಡೆಯುತ್ತದೆ. ಕೋಲ ನಿಗದಿಯಾದ ದಿನ ಮಧ್ಯಾಹ್ನ ಭೂತದ ಗುಡಿಯಲ್ಲಿ ವಿಶೇಷ ಪನಿವಾರ ಪೂಜೆ ಇರುತ್ತದೆ. ನಂತರ ಮನೆಯಲ್ಲಿ ಅನ್ನಸಂತರ್ಪಣೆ ಕೂಡ ನಡೆಯುತ್ತದೆ. ಸೂರ್ಯಸ್ತವಾಗುತ್ತಿದಂತೆ ಸಂಬಧಿಕರು, ಊರಿನ ಹಿರಿಯರು, ಮಕ್ಕಳು ಮನೆಯಂಗಳದಲ್ಲಿ ಜಮಾಯಿಸಿರುತ್ತಾರೆ. ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸಿರುತ್ತಾರೆ. ಕೋಲ ಕಟ್ಟುವವರು, ವಾದ್ಯ-ಡೋಲು ವ್ರಂದ ಹಾಗು ಕೋಲದ ಸೂತ್ರಧಾರಿ ಮುಕ್ಕಾಲ್ದಿ ಸಮಯಕ್ಕೆ ಸರಿಯಾಗಿ ಮನೆಯಂಗಳದಲ್ಲಿ ಹಾಜರಿರುತ್ತಾರೆ. ಎಲ್ಲರ ಆಗಮನದ ನಂತರ ಮನೆಯ ಯಜಮಾನ ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರು ಹಾಗು ವಾದ್ಯ ವ್ರಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಮುಕ್ಕಾಲ್ದಿ ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ. ನಂತರ ಇತ್ತ ನೆರೆದವರೆಲ್ಲ ಭೋಜನಕ್ಕೆ ಹೊರಟರೆ ಅತ್ತ ಕೋಲ ಕಟ್ಟುವವರು ವೇಷ ಹಾಕುದರಲ್ಲಿ ನಿರತರಾಗುತ್ತಾರೆ. ಭೋಜನ ನಂತರ ಎಲ್ಲರೂ ಕೋಲ ನಡೆಯುವ ಜಾಗದ ಸುತ್ತಮುತ್ತ ಕುರ್ಚಿಯಲ್ಲಿ ಅಥವಾ ಚಾಫೆಯಲ್ಲಿ ಆಸೀನರಾಗುತ್ತಾರೆ. ತದನಂತರ ಕೋಲ ಕಟ್ಟುವವರು ವೇಷ ಭೂಷಣ ಮುಗಿಸಿ ಮುಕ್ಕಾಲ್ದಿ ಆದೇಶದಂತೆ ಗಗ್ಗರ(ಕಾಲಿಗೆ ಕಟ್ಟುವ ಗೆಜ್ಜೆ) ಹಾಗು ಸಿರಿ ( ಎಳೆ ತೆಂಗಿನ ಗರಿ) ಸಮೇತವಾಗಿ ಪ್ರಧಾನ ವೇದಿಕೆ ಮೇಲೆ ಕೋಲ ಕಟ್ಟಲು ಅಣಿಯಾಗಿ ಬರುತ್ತಾರೆ. ಯಜಮಾನನ ಹಾಗು ನೆರೆದವರ ಅಪ್ಪಣೆ ಪಡೆದು, ವಾದ್ಯ-ಡೋಲು ಸಿಡಿಮದ್ದುಗಳ ಘರ್ಜನೆಯೊಂದಿಗೆ ಕಾಲಿಗೆ ಗಗ್ಗರ ಮತ್ತು ಸೊಂಟಕ್ಕೆ ಸಿರಿ ಕಟ್ಟಿಕೊಳ್ಳುತ್ತಾರೆ. ಕೋಲ ವಿದ್ಯುಕ್ತವಾಗಿ ಆರಂಭವಾಗುತ್ತದೆ. ನೆರೆದವರೆಲ್ಲರೂ ಕೋಲ ಕಟ್ಟುವವರ ಮೇಲೆ ಭಕ್ತಿಯಿಂದ ಮಂತ್ರಾಕ್ಷತೆ ಹಾಕುತ್ತಿದ್ದಂತೆ ಆತನಿಗೆ ಭೂತದ ಆಕರ್ಷಣೆಯಾಗುತ್ತದೆ. ವಾದ್ಯ ಮೇಳದ ಹಾಡಿಗೆ ಭೂತಗಳು ಹೆಜ್ಜೆ ಹಾಕಲು ಶುರುಮಾಡುತ್ತವೆ. ಇದು ಕೋಲದ ಪ್ರಧಾನ ಆಕರ್ಷಣೆ. ಕೆಲವೊಮ್ಮೆ ಭೂತಗಳ ಜೊತೆಗೆ ಕೋಲ ಕಟ್ಟುವವರ ಸಂಬಧಿಕರು ಕುಣಿಯುದುಂಟು. ಬೆಂಕಿಯ ದೀವಟಿಗೆ ಹಿಡಿದು ಕುಣಿಯುವ ದ್ರಶ್ಯವಂತು ನಯನ ಮನೋಹರ. ಸುಮಾರು ಎರಡು ಮೂರು ಸುತ್ತಿನ ಕುಣಿತದ ನಂತರ ಕೋಲ ಮಹತ್ವದ ಘಟ್ಟಕ್ಕೆ ತಲುಪುತ್ತದೆ. ಯಜಮಾನ ಭೂತಗಳಿಗೆ ಹಣ್ಣು ಹಂಪಲು ಹಾಗು ಪಂಚಕಜ್ಜಾಯ ನೀಡುತ್ತಾನೆ. ಭೂತಗಳು ತಾವು ನಡೆದು ಬಂದ ದಾರಿಯನ್ನು ಪಾರ್ದನದ ( ಹಾಡು) ಹೇಳಲು ಶುರುಮಾಡುತ್ತವೆ. ಇದು ಸುಮಾರು ಒಂದು ಗಂಟೆ ಕಾಲ ನಡೆಯುತ್ತದೆ. ಮುಂದೆ ಮುಕ್ಕಾಲ್ದಿಯ ಆದೇಶದಂತೆ ಆತ ನೀಡುವ ಭೊಂಡ ( ಎಳೆ ನೀರು) ಮತ್ತು ಕುಂಕುಮ ಪ್ರಸಾಧವನ್ನು ಅಷ್ಟ ದಿಕ್ಪಾಲಕರಿಗೆ ಸಮರ್ಪಿಸಿ, ಕುಲದೇವರಿಗೆ ವಂದಿಸಿ, ಕೈಯಲ್ಲಿ ಖಡ್ಗ, ಗಂಟೆ ಹಿಡಿದು, ಯಜಮಾನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗುತ್ತರೆ. ಯಜಮಾನ ತನ್ನ ತೊಂದರೆಗಳನ್ನು, ಬಗೆಹರಿಯದ ಸಮಸ್ಯೆಗಳನ್ನು ಭೂತದ ಮುಂದೆ ನೀವೇದಿಸಿಕೊಳ್ಳುತ್ತಾನೆ. ಭೂತ ಮುಂದಿನ ದಿನಗಳಲ್ಲಿ ಅದನ್ನು ಬಗೆಹರಿಸುವ ಭರವಸೆ ನೀಡುತ್ತದೆ. ಯಜಮಾನನ ನಂತರ ಆತನ ಸಂಬಧಿಕರು ಹಾಗು ಊರಿನವರಿಗೆ ಸಮಸ್ಯೆ ಬಗೆಹರಿಕೊಳ್ಳುವ ಅವಕಾಶವಿರುತ್ತದೆ. ಭೂತ ಸಮಸ್ಯೆಗಳಿಗೆ ಕೊಡುವ ಪರಿಹಾರ ಅಥವಾ ಅಶ್ವಾಸನೆ ಕೋಲಕಟ್ಟುವವನ ಯೋಗ್ಯತೆ, ನೇರೆದವರ ಭಕ್ತಿ, ಯಜಮಾನನ ನಂಬಿಕೆ ಮೇಲೆ ಅಧರಿತವಾಗುತ್ತದೆ. ಇದು ಸುಮಾರು ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಎಲ್ಲರಿಗೆ ಭೂತದಿಂದ ಸಮಂಜಸ ಉತ್ತರ ದೊರಕಿದ ನಂತರ ಕೋಲ ಮುಕ್ತಾಯದ ಹಂತಕ್ಕೆ ಬರುತ್ತದೆ. ಮತ್ತೊಮ್ಮೆ ಸಿಡಿಮದ್ದು ವಾದ್ಯಗಳ ಘರ್ಜನೆಯೊಂದಿಗೆ ಎಲ್ಲರ ಅಪ್ಪಣೆ ಪಡೆದು ಕಟ್ಟಿದ ಗಗ್ಗರ ಬಿಚ್ಚುದರೊಂದಿಗೆ ಕೋಲ ಮುಕ್ತಾಯವಾಗುತ್ತದೆ. ಭೂತದ ಭಂಡಾರವನ್ನು ಅದೆ ಸ್ಥಾನದಲ್ಲಿ ಯಜಮಾನ ಇಟ್ಟು ಬಂದು ಕೋಲಕ್ಕೆ ಮಂಗಳ ಹಾಡುತ್ತಾನೆ.
ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಜನರಿಗೆ ಭೂತದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಕೋಲ ಕಟ್ಟುವವರ ಹಾಗು ವಾದ್ಯ ಊದುವವರ ಸಂಖ್ಯೆಯು ವಿರಳವಾಗುತ್ತಿದೆ. ಹಿಂದೆಲ್ಲ ಊರಲ್ಲಿ ವರ್ಷಕ್ಕೆ ಹತ್ತರಿಂದ ಹನ್ನೆರಡು ಕೋಲ ನಡೆಯುತ್ತಿದಲ್ಲಿ ಈಗ ಒಂದೆರಡು ನಡೆಯುದು ಅಪರೂಪವಾಗಿಬಿಟ್ಟಿದೆ. ಒಟ್ಟಿನಲ್ಲಿ ಈ ತುಳುನಾಡ ವೈಭವ ಅವಸಾನದಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ಜನರಿಗೆ ಭೂತದ ಕೋಲದಲ್ಲಿ ಮತ್ತಸ್ಟು ನಂಬಿಕೆ ಬರಲಿ, ಈ ವೈಭವ ದೇಶದಲ್ಲೆಡೆ ಪಸರಿಸಲಿ ಎಂದು ಹಾರೈಸೋಣ.
-ಗುರುರಾಜ ಯೆನ್ ನೆಕ್ಕಾರ್
ಚಿತ್ರ: ನಾರಾಯಣ ನೆಕ್ಕಾರ್ ಮನೆಯಲ್ಲಿ ನಡೆದ ಜುಮಾದಿ ಭೂತದ ಕೋಲದ ದ್ರಶ್ಯ