ನಾಯಿ ಮನುಷ್ಯನನ್ನು ಕಚ್ಚಿದರೂ ಈಗ ಸುದ್ದಿ! ಕಾರಣ ಕಾಣದಂತೆ ನಾವು ‘ಕಚ್ಚಿದ್ದನ್ನು’ ಅವು ಹಾಗೆ ಸುದ್ದಿ ಮಾಡುತ್ತಿವೆ!
ಪತ್ರಿಕೋದ್ಯಮದ ಮೇಷ್ಟ್ರು ನಾನು. ಅರ್ಥಾತ್, ‘ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ; ಮನುಷ್ಯ ನಾಯಿಯನ್ನು ಕಚ್ಚಿದರೆ ಸುದ್ದಿ!’ ಎಂಬ ಸುದ್ದಿಯ ಪರಿಭಾಷೆಯನ್ನು ಹಿಡಿದು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುತ್ತಿರುವವ. ಹಾಗಂತ ನೀವೂ ಅಂದುಕೊಳ್ಳಿ. ಕರೆಯಿರಿ. ಆದರೆ ಕೆಲ ಪ್ರಗತಿಪರ ಸಂಪಾದಕರು ಈ ಪ್ರಯತ್ನವನ್ನು ಹೀಗಳೆಯುತ್ತಾರೆ. ಅವರಿಗೆ ‘ಗಂಡ ಹೆಂಡತಿಯನ್ನು ಹೊಡೆದರೆ ಸುದ್ದಿಯಲ್ಲ; ಹೆಂಡತಿ ಗಂಡನನ್ನು ಹಿಡಿದು ಬಾರಿಸಿದರೆ ಅದು ಸುದ್ದಿ’ ಎಂದು ಪತ್ರಿಕೋದ್ಯಮದ ಶೀಲವಂತ ಪ್ರಾಧ್ಯಾಪಕರು ವರ್ಗದಲ್ಲಿ ಬೋಧಿಸಬೇಕಂತೆ! SOMETHING WHICH IS `UNUSUAL' and `RIDICULOUS'!
ಅದಿರಲಿ ಬಿಡಿ. ಈ ಪೀಠಿಕೆ ಏಕೆಂದರೆ, ನಮ್ಮ ಧಾರವಾಡದ ಪೆಂಡಾರಗಲ್ಲಿ ಹಾಗು ಮದಾರಮಡ್ಡಿಯಲ್ಲಿ ಹುಚ್ಚು ನಾಯಿಯೊಂದು ಗುರುವಾರ ಸಂಜೆ ಓಣಿಯಲ್ಲಿ ಆಡುತ್ತಿದ್ದ ನಾಲ್ಕು ಮಕ್ಕಳನ್ನು ಕಚ್ಚಿ ಮಾರಣಾಂತಿಕವಾಗಿ ಗಾಯಗೊಳಿಸಿದೆ. ಬಿಡಿಸಲು ಹೋದ ಸುಮಾರು ೨೨ ಜನರಿಗೆ ಅಟ್ಟಾಡಿಸಿ, ಕಚ್ಚಿ ಕೊನೆಗೆ ಅವರೆಲ್ಲರ ಆಕ್ರೋಷಕ್ಕೆ ಪ್ರಾಣತೆತ್ತಿದೆ.
ಗಾಯಗೊಂಡವರಲ್ಲಿ ೪ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಈ ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ಹೋದಾಗ.. ತಲೆತಲಾಂತರದಿಂದ ನಡೆದು ಬಂದ ಸಂಪ್ರದಾಯದಂತೆ ಮೊದಲು ಸರಿಯಾಗಿ ಸ್ಪಂದಿಸದೇ, ಪ್ರಥಮ ಚಿಕಿತ್ಸೆ ಎಂದು ಕಣ್ಣೊರೆಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿ, ಕವಚ ಬಿಚ್ಚಿ, ಕೈ ತೊಳೆದುಕೊಂಡಿದ್ದಾರೆ. ಯುನಿಸ್ ಎಂಬ ಹೆಣ್ಣು ಮಗುವಿನ ಕಣ್ಣಿಗೆ, ಸಬೀನಾ ಶೇಖ್ ಹಾಗು ಶಾಹೀನ್ ಶೇಖ್ ಎಂಬುವವರಿಗೆ ತಲೆ, ಭುಜ, ಕಾಲು ಹಾಗು ಬೆನ್ನಿಗೆ ಹೀಗೆ ಸಿಕ್ಕಲ್ಲೆಲ್ಲ ಕಚ್ಚಿ ಗಾಯಗೊಳಿಸಿದೆ.
ಪ್ರಶ್ನೆ ಇದಲ್ಲ. ಅಥವಾ ಸಮಸ್ಯೆಯೂ ಇದಲ್ಲ. ಈ ಘಟನೆಯ ಹಿಂದಿರುವ ಆಘಾತಕಾರಿ ಬೆಳವಣಿಗೆಗಳು. ಯಥಾಪ್ರಕಾರ ಮತ್ತೆ ನಮ್ಮ ಮಾಧ್ಯಮಗಳು ಸತ್ಯಾಂಶ ಕೆದಕುವ, ಮೂಲ ಹುಡುಕುವ, ವಿಶ್ಲೇಷಣಾತ್ಮಕ ವರದಿ ಪ್ರಕಟಿಸುವ ಗೋಜಿಗೆ ಹೋಗಿಲ್ಲ. ‘ಬೀದಿ ನಾಯಿಗಳ ನಿಗ್ರಹಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರಂಭಿಸಿದ್ದ ಆಪರೇಷನ್ ಡಾಗ್ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಇದು ಎಂದು ಘಂಟಾಘೋಷವಾಗಿ ಸಾರಿವೆ. ಸಾಲದ್ದಕ್ಕೆ ‘ ಸುಮ್ಮನೆ ಹೋಗುತ್ತಿದ್ದರೂ ಗುರ್ರ್ ಎನ್ನುವ ಬೀದಿ ನಾಯಿಗಳು’ ಎಂಬ ಸಂಶೋಧನಾತ್ಮಕ ‘ಕಿಕ್ಕರ್’ ಹೆಡ್ ಲೈನ್’ ಬಳಸಿದ್ದಾರೆ!
ಬೀದಿ ನಾಯಿಗಳು ಈ ಪರಿಯಾಗಿ ರಕ್ತ ಪಿಪಾಸುಗಳಾಗಲು ಕಾರಣಗಳೇನು? ಅವಲೋಕಿಸೋಣ. ಘಟನೆ ನಡೆದಿರುವ ಪ್ರದೇಶದಲ್ಲಿ ಸಾಕಷ್ಟು ಮಾಂಸದ ಅಂಗಡಿಗಳಿವೆ. ಕುರಿ-ಆಡು, ದನ ಹಾಗು ಕೋಳಿಗಳನ್ನು ಇಲ್ಲಿ ಕತ್ತರಿಸಿ ಮಾರಾಟ ಮಾಡಲಾಗುತ್ತದೆ. ಪ್ರಾಣಿಗಳ ವಧೆಯಾದ ನಂತರ ಆ ತ್ಯಾಜ್ಯ (ಆಹಾರಕ್ಕಾಗಿ ಬಳಸಲಾಗದ ರಕ್ತ, ಕೆಲ ಎಲುಬು, ಮಲ, ಮೂತ್ರ ಹಾಗು ಕರುಳಿನ ಕೆಲ ಭಾಗಗಳು) ನೇರವಾಗಿ ಮಹಾನಗರ ಪಾಲಿಕೆಯ ಗಟಾರಿಗೆ ಸುರಿಯುತ್ತಿದ್ದಾರೆ. ಇದು ಯಾರಿಗೂ ಗೊತ್ತಿಲ್ಲ ಅಂತ ಇಲ್ಲ. ಸಂಬಂಧಪಟ್ಟ/ಪಡದ ಎಲ್ಲರಿಗೂ ಗೊತ್ತಿರುವ ವಿಷಯವೇ! ಜೊತೆಗೆ ಈ ಮಾಂಸ, ಮುದ್ದೆ, ಕರಳು, ಕತ್ತರಿಸುವಾಗ ಬಿಸಾಡುವ ರಕ್ತ ಸಿಕ್ತ ಭಾಗಗಳನ್ನು ಹೆಕ್ಕಲು ಅಲ್ಲಿನ ಬೀದಿನಾಯಿಗಳು ತಮ್ಮ-ತಮ್ಮಲ್ಲೇ ಕಚ್ಚಾಡುತ್ತ ಮಾಡುವ ರಂಪಾಟ ಅಷ್ಟಿಷ್ಟಲ್ಲ. ದಾರಿಹೋವುಕರು, ದ್ವಿಚಕ್ರ ವಾಹನಗಳ ಸವಾರರು, ಪಾದಚಾರಿಗಳು ತಮ್ಮ ಅಂಗೈಯಲ್ಲಿ ಜೀವ ಹಿಡಿದು ಸಾಗಬೇಕು. ನಿತ್ಯ ಆ ಅಸಾತ್ವಿಕ ಆಹಾರಕ್ಕೆ ಒಗ್ಗಿರುವ ನಾಯಿಗಳು ಮಾಂಸದಿಂದಲೇ ಉದರಂಭರಣಕ್ಕೆ ಭಯಂಕರವಾಗಿ ಪ್ರಯತ್ನಿಸುತ್ತವೆ.
ಮತ್ತೊಂದು ಕಾರಣ, ನಾಯಿ ಯಾವತ್ತೂ ಪ್ರಾಮಾಣಿಕತನಕ್ಕೆ, ಮಾನವನೊಂದಿಗೆ ಸಹಜೀವನಕ್ಕೆ ಹೆಸರುವಾಸಿಯಾದ ಪ್ರಾಣಿ. ಅವುಗಳಿಗೂ ಮನಸ್ಸಿದೆ, ವಿಷಯ ತಿಳಿಯುತ್ತದೆ. ಹಾಗೆಯೇ ಈ ಜಗತ್ತಿನ ಜೀವಿ ವೈವಿಧ್ಯತೆಯಲ್ಲಿ ಯಾವುದೋ ಒಂದು ಸೂಕ್ಶ್ಮವಾದ ಕೊಂಡಿ ನಮ್ಮ ಹಾಗು ಈ ಸಾಕು ಪ್ರಾಣಿಗಳ ಬದುಕಿನೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಆದರೆ ನಮ್ಮ ಪರಿಸರ ವಿಜ್ನಾನಿಗಳು, ಜೀವ ಶಾಸ್ತ್ರಜ್ನರು, ಪಶು ತಜ್ನರು ಈ ‘ಮಿಸ್ಸಿಂಗ್ ಲಿಂಕ್’ ಕಂಡು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂಬುದು ನನ್ನ ಅನಿಸಿಕೆ. ಈ ಮಾತಿಗೆ ಪೂರಕವಾಗಿ ಈ ಈ ಕೆಳಗಿನ ಉದಾಹರಣೆ.
ನಾಗರಿಕರ ಸತತ ಒತ್ತಾಯ ಹಾಗು ಮಾಧ್ಯಮಗಳ ಮಾರ್ಗದರ್ಶನದ ಮೇರೆಗೆ! ಮಹಾನಗರ ಪಾಲಿಕೆ ‘ಆಪರೇಷನ್ ಪಿಗ್’, ‘ಆಪರೇಷನ್ ಕೌ’, ‘ಆಪರೇಷನ್ ಡಾಗ್’, ಮೊದಲಾದ ಕಾರ್ಯಾಚರಣೆ ನಡೆಸಿ ಬಿಡಾಡಿ ಹಂದಿ, ದನ, ನಾಯಿಗಳನ್ನು ಹತೋಟಿಗೆ ತರುವ ಪ್ರಯತ್ನ ಆರಂಭಿಸಿತು. ಪ್ರಯೋಗ ಹೇಗಿತ್ತು. ಅತ್ಯಂತ ಅಮಾನವೀಯ ರೀತಿಯಲ್ಲಿ ಬಂಧಿಸುವುದು, ಕೈಕಾಲು ಕಟ್ಟಿ ಬೀಸಿ ವಾಹನಗಳಲ್ಲಿ ಒಗೆಯುವುದು, ವಿಷ ಉಣಿಸುವುದು ಹಾಗೆಯೇ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳುವುದು ಹೀಗೆ ಪ್ರಯೋಗ ಪಶುಗಳನ್ನು ಗುರಿ ಮಾಡಿಕೊಂಡು ಕಾರ್ಯಾಚರಣೆಗೆ ಇಳಿಯಲಾಯಿತು.
ಪರಿಣಾಮ ಕಣ್ಣಮುಂದಿದೆ. ತಮ್ಮ ಸಂಗಾತಿಗಳ ತರಹೇವಾರಿ ಸಾವು, ವಿಲವಿಲ ಒದ್ದಾಡುವಿಕೆ ಬದುಕಿ ಉಳಿದ ನಾಯಿಗಳು ಮನುಷ್ಯರನ್ನು ದ್ವೇಷಿಸುವಂತೆ ಮಾಡಿತು. ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಫಲವಾಗಿ ಸಂತಾನ ಭಾಗ್ಯವಿಲ್ಲದೇ ಅವು ಪರಿತಪಿಸಿದವು. ಸಾಕಷ್ಟು ನಾಯಿಗಳಿಗೆ ವಯಸ್ಸಾಗಿದ್ದರಿಂದ ಹೋರಾಡಿ ಅನ್ನಗಳಿಸುವ ಸಾಮರ್ಥ್ಯ ಉಳಿಯಲಿಲ್ಲ, ಹಾಗೆಯೇ ಹರೆಯದಲ್ಲಿರುವ ನಾಯಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ನಿಂತವು. ತುಟ್ಟಿಯ ಕಾಲವಾದ್ದರಿಂದ ಮನೆಯ ಮುಂದೆ ಮಲಗಿರುವ ನಾಯಿಗೆ ಒಂದು ತುತ್ತು ಅನ್ನ ಸಹ ಹಾಕಲು ಮೀನಮೇಷ ಎಣಿಸಿಬೇಕಾದ ಪರಿಸ್ಥಿತಿ ಬಹುತೇಕ ಮನೆಗಳಲ್ಲಿ ನಿರ್ಮಾಣವಾಯಿತು. ಒಂದು ತುತ್ತು ಕಡಿಮೆ ತಿಂದರೂ ಪರವಾಗಿಲ್ಲ, ತುಟ್ಟಿಯ ಈ ಕಾಲದಲ್ಲಿ ಮಿಕ್ಕಿ ಅಡುಗೆ ಉಳಿಯದಂತೆ, ಕೆಡದಂತೆ ಅಲಿಖಿತ ಕಾನೂನು ಎಲ್ಲ ಮನೆಗಳಲ್ಲಿ ಜಾರಿಯಾಗಿದೆ. ಈ ಘಟನೆ ನಡೆದ ಪ್ರದೇಶದಲ್ಲಿ ಬಹುತೇಕ ಮನೆಗಳಿಗೆ ಆದಾಯ ಬೀಡಿ ಕಟ್ಟುವ ಗೃಹ ಉದ್ದಿಮೆಯಿಂದ ಹಾಗು ಕೂಲಿಯಿಂದ.
ಹಾಗೆಯೇ ನಾವು ಆಹಾರವಾಗಿ ಬಳಸುವ ಕೆಲ ವಸ್ತುಗಳಲ್ಲಿ ರಾಸಾಯನಿಕಗಳಿದ್ದು ಬಹುಶ: ಅದು ಕೂಡ ತಕ್ಕಮಟ್ಟಿಗೆ ಈ ಪ್ರಾಣಿಗಳಿಗೆ ನರಕಯಾತನೆ ಅನುಭವಿಸುವಂತೆ ಮಾಡಿದೆ ಎನ್ನಲು ಅಡ್ಡಿಇಲ್ಲ. ಉದಾಹರಣೆಗೆ, ಇತ್ತೀಚೆಗೆ ಬೀದಿ ಆಕಳೊಂದರ ಹೊಟ್ಟೆ ಕೊಯ್ದು ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಹೊಟ್ಟೆಯಲ್ಲಿ ೨೮ ಕಿಲೋ ಪ್ಲಾಸ್ಟಿಕ್ ಪತ್ತೆಯಾಗಿ ನಮ್ಮ ಹೃದಯ ಹಿಂಡಿತ್ತು. ಹಾಗೆಯೇ ನಾಯಿಗಳು ಸದಾ ಜೋರಾಗಿ ಚಲಿಸುವ ವಾಹನಗಳನ್ನು ಅವುಗಳ ಶಬ್ದಕ್ಕೆ ಕೆರಳಿ ಕಚ್ಚಲು ಬೆನ್ನಟ್ಟುವುದನ್ನು ನೀವು ಗಮನಿಸರಬಹುದು. ಕಾರಣ ಅದು ಪುಟ್ಟ ಮರಿಯಾಗಿದ್ದಾಗ ಯಾವುದೋ ವಾಹನ ಹಾಯ್ದು ಗಾಯಗೊಳಿಸಿರಬಹುದು. ಮಾರಣಾಂತಿಕವಾಗಿ ಹೆದರಿಸಿರಬಹುದು.
ಮನುಷ್ಯನನ್ನು ಬಿಟ್ಟರೆ ಭೂಮಿಯ ಮೇಲ ವಿಚಾರ ಮಾಡಬಲ್ಲ ಪ್ರಾಣಿ ಇನ್ನೊಂದಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ನಮ್ಮ ಪ್ರೀತಿಯ ಮೈದಡವುವಿಕೆಯನ್ನು, ನಮ್ಮ ಆಜ್ನೆ, ಸಿಟ್ಟು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಲ್ಲ ಈ ಪ್ರಾಣಿಗಳು ನಮ್ಮ ಸ್ವಾರ್ಥಕ್ಕಾಗಿ ಅವುಗಳನ್ನು ಕೊಲ್ಲುತ್ತಿರುವ ಪರಿಯನ್ನು ಅರ್ಥೈಸಿಕೊಂಡಿರಲೇಬೇಕು. ನಾವು ಅವುಗಳ ಜೀವಕ್ಕೆ ಕುತ್ತು ತರುತ್ತಿದ್ದೇವೆ ಎಂಬ ಮನಸ್ಥಿತಿ ಹಾಗು ಮನೋಕ್ಷೋಭೆಗೆ ಅವು ಒಳಗಾಗಿ ಹೀಗೆ ಮಾಡುತ್ತಿರಬೇಕು. ಈ ಕುರಿತಂತೆ ವೈಜ್ನಾನಿಕ ಸಂಶೋಧನೆಗಳು ನಡೆಯಬೇಕಿದೆ. ವಿಶ್ವಾಸಗೆದ್ದಿದ್ದ ನಾಯಿಗಳು ವಿಶ್ವಾಸಕಳೆದುಕೊಳ್ಳುವಂತೆ ನಡೆದುಕೊಳ್ಳಲು ಆರಂಭಿಸಿದ್ದು ಚಿಂತೆಗೀಡು ಮಾಡುವಂತಹದು. ಮಕ್ಕಳಿಗೆ ಎಂದೂ ಕಚ್ಚದ, ಸಹಾನುಭೂತಿಯಿಂದ ಕಾಣುತ್ತಿದ್ದ ವಿಶ್ವಾಸ ಪಾತ್ರ ನಾಯಿ ಸುದ್ದಿಯಾಗುತ್ತಿರುವುದು ಶೋಚನೀಯ. ಹಾಗೆಯೇ ಎಲ್ಲ ಪ್ರಾಣಿಗಳ ತಾಳ್ಮೆಗೆ ಒಂದು ಮಿತಿ ಇದೆ ಎಂಬುವುದು ನಾವು ಅರ್ಥ ಮಾಡಿಕೊಳ್ಳುವುದು ಯಾವಾಗ?
ಹಾಗಾಗಿ ಈಗ ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ! ಕಾರಣ.. ಮನುಷ್ಯ ನಾಯಿಯನ್ನು ಈಗಾಗಲೇ ಸಾಕಷ್ಟು ರೀತಿಯಲ್ಲಿ ‘ಕಚ್ಚಿರುವುದರಿಂದ’!