ಮುಂಬೈನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !

ಮುಂಬೈನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !

ಬರಹ

" ಕರ್ಣಾಟಕ ಭಾಗವತ " , ಇಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹಾಗೂ ವಿದೇಶಗಳಲ್ಲಿ ಎಲ್ಲರಬಾಯಿಯಲ್ಲೂ ಬಹುಚರ್ಚಿತ ವಿಷಯಗಳಲ್ಲಿ ಒಂದು. ಈ ಬೃಹತ್ ಪುಸ್ತಕದ, ಎರಡು ಸಂಪುಟಗಳ, ಸಂಪಾದಕರು, ಅಮೆರಿಕದ 'ಮಿಸ್ಸೂರಿವಿಶ್ವವಿದ್ಯಾಲಯ,' ದಲ್ಲಿ ಭೌತಶಾಸ್ತ್ರದ ಮುಖ್ಯಸ್ಥರೂ ಹಾಗೂ ಪ್ರೊಫೆಸರ್ ಆಗಿರುವ, ಡಾ. ಹೊಳಲ್ಕೆರೆ ಚಂದ್ರಶೇಖರ್ (ಚಂದ್ರಾ) ರವರು.

ಮುಂಬೈ ನ, ದ. ಕ. ಬ್ರಾ. ಸಂ. ಗೋಕುಲ್, ನ ಹಿರಿಯ ಪದಾಧಿಕಾರಿಗಳಾದ, ಶ್ರೀ. ಬಿ. ವೈ. ಎಲ್. ರಾವ್ ಈಗಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ಹೆಸರಾಂತ ವ್ಯಕ್ತಿ. ಅವರು, ಈಗ ಹೊಸದಾಗಿ ರಚಿತವಾಗಿರುವ, ಕರ್ಣಾಟಕ ಭಾಗವತದ ಪದ್ಯಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ಪ್ರಯೋಗಮಾಡುವ ಆಸೆಯಿಂದ ಕರ್ಣಾಟಕ ಭಾಗವತ ಪ್ರತಿಷ್ಠಾನದ ಅಧ್ಯಕ್ಷರಾಗಿರುವ, ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರನ್ನು, ಮತ್ತು ಡಾ. ಹರಿಶಂಕರ್ ರವರನ್ನೂ ಸಂಪರ್ಕಿಸಿ, ಮುಂಬೈ ಗೆ ಆಹ್ವಾನಿಸಿದ್ದರು. ಮುಂಬೈ ನಗರದಲ್ಲಿ ಅಕ್ಟೋಬರ್ ಎರಡನೆಯ ತಾರೀಖಿನ 'ಗಾಂಧಿಜಯಂತಿ' ಯ ಶುಭದಿನದಂದು, ಸಯಾನ್ ನ 'ಗೀತಗೋವಿಂದ ಹಾಲ್,' ನಲ್ಲಿ ಕರ್ಣಾಟಕ ಭಾಗವತದ 'ಕೃಷ್ಣಾರ್ಪಣಾ ಸಮಾರಂಭ' ದಲ್ಲಿ ಪಾಲ್ಗೊಳ್ಳಲು ಬಹಳ ಜನ ಬಂದಿದ್ದರು. ಬೆಳಿಗ್ಯೆ ಹಾಲ್ ನ ಬದಿಯಲ್ಲಿರುವ ’ ಶ್ರೀಕೃಷ್ಣ ಮಂದಿರ,’ ದಲ್ಲಿ ವಿಧಿಪೂರ್ವಕವಾಗಿ ಪೂಜೆ ಸಲ್ಲಿಸಿದನಂತರ, ’ಕರ್ಣಾಟಕ ಭಾಗವತ ಬೃಹತ್ ಗ್ರಂಥ ’ ದ ಎರಡು ಸಂಪುಟಗಳನ್ನು ’ ಉಡುಪಿ ಕೃಷ್ಣ ’ ನಿಗೆ ಸಮರ್ಪಣೆ ಮಾಡಲಾಯಿತು.

ಮಧ್ಯಾನ್ಹದ ಊಟದ ನಂತರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, " ಕರ್ಣಾಟಕ ಭಾಗವತ ಪ್ರತಿಷ್ಠಾನ ", ಬೆಂಗಳೂರಿನ ಅಧ್ಯಕ್ಷರಾಗಿರುವ, ಹಿರಿಯ ಪ್ರಾಧ್ಯಾಪಕ, ಪ್ರೊ. ಎಚ್. ಆರ್. ರಾಮಕೃಷ್ಣ ರಾವ್, ಹಾಗೂ ಮೈಸೂರಿನಿಂದ ಆಗಮಿಸಿದ್ದ, ಕರ್ಣಾಟಕ ಭಾಗವತದ ಸಂಪಾದಕ ಮಂಡಳಿಯ ಪ್ರಮುಖ ಸದಸ್ಯರಾಗಿರುವ, ಡಾ. ಹರಿಶಂಕರ್, ಭಾಗವತದ ಬಗ್ಗೆ ತಮ್ಮ ವಿಚಾರಸರಣಿಗಳನ್ನು ಮಂಡಿಸಿದರು. ಪ್ರೊ. ಎಚ್. ಆರ್. ರಾಮಕೃಷ್ಣ ರಾವ್, ತಮ್ಮ ಅತ್ಯಾಕರ್ಷಕವಾದ ಹಾಗೂ ಅತ್ಯುತ್ತಮ ಕನ್ನಡ-ಭಾಷಾಸಂಪತ್ತು ಮತ್ತು ವಾಗ್ಲಹರಿಗಳಿಂದ ಸಭಿಕರನ್ನು ರಂಜಿಸಿದರು. ಪುಸ್ತಕ ಬರೆಯಲು ಬಂದ ಪ್ರೇರಣೆಯಿಂದ ಶುರುವಾದ ಅವರ ಚಿಕ್ಕ-ಚೊಕ್ಕ ಭಾಷಣ, ಮುಂದೆ ಪುಸ್ತಕ ಸಂಪಾದನೆಗಳ ವಿವಿಧ ಘಟ್ಟಗಳಲ್ಲಿ ಎದುರಿಸಬೇಕಾಗಿಬಂದ ಸವಾಲುಗಳು, ಹಾಗೂ ಈ ಉದ್ಗ್ರಂಥದ ರಚನೆಯ ಸಮಯದಲ್ಲಿ ಅಳವಡಿಸಿಕೊಳ್ಳಲಾದ ಅಂತಾರಾಷ್ಟ್ರೀಯ ತಂತ್ರಜ್ಞಾನ ಹಾಗೂ ಕಾರ್ಯವೈಖರಿಗಳ ಹಲವು ಮಜಲುಗಳನ್ನು, ಎಲ್ಲರಿಗೂ ಮನದಟ್ಟಾಗುವಂತೆ ವಿವರಿಸಿದರು. ಏಕಮನಸ್ಸಿನಿಂದ ತಮ್ಮನ್ನು ತೊಡಗಿಸಿಕೊಂಡು’ ಚಂದ್ರ” ರವರ 'ಜೀವನಾದರ್ಶ ಪ್ರಾಜೆಕ್ಟ್' ಗಳಲ್ಲಿ ಒಂದಾಗಿದ್ದ ’ಕರ್ಣಾಟಕ ಭಾಗವತ ಗ್ರಂಥ ಸಂಪಾದನೆಯ ಕಾರ್ಯವನ್ನು ಪರಿಪೂರ್ಣಗೊಳಿಸುವಲ್ಲಿ ಎಡಿಟೋರಿಯಲ್ ವೃಂದದ ಪಾತ್ರ ಶ್ಲಾಘನೀಯವಾಗಿದೆ.

ಈ ಕಾರ್ಯಕ್ರಮದ ತರುವಾಯ, ಕರ್ಣಾಟಕ ಭಾಗವತದ ಆಯ್ದ ಶ್ಲೋಕಗಳನ್ನು ಚಿ. ಸಹನಾ ಭಾರದ್ವಾಜ್ ವಾಚನಮಾಡಿದರು. ಅದರ ಅರ್ಥವಿವರಣೆಯನ್ನು ಶ್ರೀ. ಬಿ. ವೈ. ಎಲ್. ರಾವ್ ರವರು ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖ ವ್ಯಕ್ತಿಗಳಲ್ಲಿ, ಪ್ರೊ. ಸುನಿತಶೆಟ್ಟಿ, ಹಾಗೂ ಪ್ರೊ. ಜಿ.ಡಿ.ಜೋಷಿಯವರು. ಕಾರ್ಯಕ್ರಮಕ್ಕೆ ಆಗಮಿಸಿದ ಡಾ. ಉಪಾಧ್ಯೆಯವರು, ಹೆಚ್ಚುಸಮಯ ಕೂಡಲಾಗಲಿಲ್ಲ.

’ಕರ್ಣಾಟಕ ಭಾಗವತ” ಗ್ರಂಥದ ವಿಶ್ವಾರ್ಪಣಾ ಸಮಾರಂಭಗಳು, ಕರ್ನಾಟಕದ, ಮೈಸೂರು, ಬೆಂಗಳೂರು, ಧಾರವಾಡ, ಶಿವಮೊಗ್ಗ ಹಾಗೂ * ಅಮೆರಿಕದ ಹೂಸ್ಟನ್ ಕನ್ನಡ ವೃಂದದವರ ಸದಸ್ಯರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು. ಈ ನಿಟ್ಟಿನಲ್ಲಿ ಮುಂಬೈ ನಲ್ಲಾದ ಕಾರ್ಯಕ್ರಮ ಕೊನೆಯದು.

* ಡಾ. ಚಂದ್ರರವರ "ಕರ್ಣಾಟಕ ಭಾಗವತ" ಬೃಹತ್ ಗ್ರಂಥ ಸಂಪಾದನೆಯ ಮಹತ್ಕಾರ್ಯಕ್ಕೆ, ಅಮೆರಿಕದ " ಹೂಸ್ಟನ್ ಕನ್ನಡವೃಂದ," ತಮ್ಮ ಪ್ರೋತ್ಸಾಹವನ್ನು ತೋರಿಸುವ ಜೊತೆಗೆ, ೧೦,೦೦೦ ಡಾಲರ್ ಗಳ ಹಣಸಹಾಯವನ್ನೂ ಮಾಡಿ ಅಮೆರಿಕದ ಕನ್ನಡಪರ ಚಟುವಟಿಕೆಗಳ ಕ್ಷೇತ್ರದಲ್ಲಿ ವಿಕ್ರಮವನ್ನು ಸ್ಥಾಪಿಸಿ ಮಂಚೂಣಿಯಲ್ಲಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಇಷ್ಟು ಉದಾರಸಹಾಯವನ್ನು ಇದುವರೆವಿಗೂ ಯಾವ ಕನ್ನಡ ಸಂಘವೂ ಮಾಡಿಲ್ಲವೆನ್ನುವುದು ಇಲ್ಲಿ ಗಮನಿಸಬಹುದಾದ ವಿಷಯಗಳಲ್ಲೊಂದು.