ತುಳಸಿ ಲಿಡಿಯಾ ಆದ ಕತೆ

ತುಳಸಿ ಲಿಡಿಯಾ ಆದ ಕತೆ

ಬರಹ

ತುಳಸಿಯನ್ನು ನಾನು ಬಹಳ ವರ್ಷದಿಂದ ಬಲ್ಲೆ . ಸುಮಾರು ೮ ವರ್ಷಗಳಿಂದ ಆಕೆ ಆಗಾಗ ಕೆಲಸಕ್ಕಾಗೋ ಅಥವ ಓದಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕೋ ನನ್ನನ್ನು ಭೇಟಿ ಮಾಡುತ್ತಿದ್ದಳು.
ಮನೆಯಲ್ಲಿ ಬಹಳ ಬಡತನ, ಜೊತೆಗೆ ಅವಳ ಅತೀ ಸಾಧಾರಣಾ ರೂಪದಿಂದಾಗಿ ಅವಳಿಗೆ ಮದುವೆಯೂ ಆಗಿಲ್ಲ, ಅವಳಿಗೆ ಈಗ ಸುಮಾರು ೩೫ ವರ್ಷಗಳಿರಬಹುದು, ಆಕೆಯೂ ವಿದ್ಯಾವಂತೆ , ಬಿಕಾಂ ಮಾಡಿದ್ದಳು
.
ಈಗ ಸುಮಾರು ಎರೆಡು ವರ್ಷದಿಂದ ನನಗೆ ಅವಳು ಕಂಡಿರಲಿಲ್ಲ , ನನಗೂ ಅವಳು ನೆನಪಾಗಿರಲಿಲ್ಲ.

ಹೋದತಿಂಗಳು ಅವಳು ನಮ್ಮ ಮನೆಗೆ ಬಂದಳು ಗುರುತೇ ಸಿಗಲಿಲ್ಲ
ಹಣೆಯಲ್ಲಿ ಬಿಂದಿ ಇಲ್ಲ ಬೋಳು ಕಿವಿ, ಕೈನಲ್ಲಿ ಬಳೆ ಇಲ್ಲ
ಅವಳೇ ನೆನೆಪು ಮಾಡಿದಳು
ಇದೇನು ತುಳಸಿ ಹೀಗಾಗಿ ಬಿಟ್ಟೀದೀಯಾ? ಏನಾಯ್ತು ? ಅಂದೆ
"ಮೇಡಮ್ ನನ್ನ ಹೆಸರು ಲಿಡಿಯಾ ಅಂತ ಚೇಂಜಾಗಿದೆ ಈಗ" ಅವಳು ನುಡಿಯುತಿದ್ದಂತೆ ಅರ್ಥವಾಗಿ ಹೋಯ್ತು
"ಯಾವಾಗ ಕನ್ವರ್ಟ್ ಆದೆ?"
" ತುಂಬಾ ತಿಂಗಳಾಯ್ತು ಮೇಡಮ್"
"ಯಾಕೆ ತುಳಸಿ ಅಲ್ಲ ಲಿಡಿಯಾ ಹೀಗ್ಯಾಕೆ ಮಾಡಿಕೊಂಡೆ " ಬೇಸರದಿಂದಾನೆ ಕೇಳಿದೆ
"ಮೇಡಮ್ ನಿಮ್ಮಲ್ಲಿ ಯಾರೂ ಸಹಾಯ ಮಾಡೋದಿಲ್ಲ . ಕಷ್ಟ ಅಂದರೆ ಹೀಯಾಳಿಸ್ತಾರೆ. ಜೊತೆಗೆ ನಿಮ್ಮ ಯಾವ ದೇವರು ನಾವು ಎಷ್ಟು ದೀಪ ಹಚ್ಚಿದರೂ ನಮ್ಮ ಕಷ್ಟ ನಿವಾರಿಸಲಿಲ್ಲ"
ಕೊನೆಗೆ ಆಕ್ಟ್ ಸ್ಕೂಲಲ್ಲಿ ಒಬ್ಬ ಸಿಸ್ಟರ್ ಪರಿಚಯ ಆಯ್ತು ಅವರು ನನಗೆ ತುಂಬಾ ಸಹಾಯ ಮಾಡಿದರು . ಜೊತೆಗೆ ಕೆಲಸಾನೂ ಕೊಟ್ಟರು ಹೀಗೆ ಜೀಸಸ್ ನಮಗೆ ನಮ್ಮ ಕಷ್ಟ ದೂರ ಮಾಡಿದರು"
"ಹೋಗಲಿ ಬಿಡು ಈಗ ಖುಷಿಯಾಗಿದ್ದೀಯಲ್ಲ" ಅಂದೆ
" ನಮಗೆಲ್ಲ ಖುಶಿ ಇಲ್ಲ ಮೇಡಮ್ ಆದ್ರೆ ಏನು ಮಾಡೋದು ಹೊಟ್ಟೆ ಪಾಡಿಗಾಗಿ ಹೀಗೆ ಮಾಡಬೇಕಲ್ಲ"

"ಸರಿ ಯಾವ ಕೆಲಸ ಕೊಟ್ಟಿದ್ದಾರೆ" ಅಂದೆ
ಅವಳು ಮಾತಾಡಲಿಲ್ಲ
ಮತ್ತೊಮ್ಮೆ ಕೇಳಿದೆ
ತಲೆ ತಗ್ಗಿಸಿಕೊಂಡು
"ನಮ್ಮ ಬೈಬಲ್‍ನ ಎಲ್ಲರಿಗೂ ಅರ್ಥ ಆಗೋ ಹಾಗೆ ತಿಳಿಸ್ಬೇಕು. ಜೊತೆಗೆ ಸಾಧ್ಯವಾದರೆ ಜನರನ್ನು ಕಷ್ಟದಿಂದ ದೂರ ಮಾಡೋದಿಕ್ಕೋಸ್ಕರ ಕನ್ವರ್ಟ್ ಮಾಡಬೇಕು"

ನಾನೇನೂ ಹೇಳಲಿಲ್ಲ. ಹೇಳಿ ಯಾಕೆ ಕೆಟ್ಟೋಳಾಗೋದು

"ಸರಿ ಹೋಗಲಿ ಬಿಡು . ಬಂದ ವಿಷಯ ಏನು ಹೇಳು " ಅಂದೆ
"ಮೇಡಮ್ ನೀವು ಒಂದು ರಜಾ ದಿನದಲ್ಲಿ ನಿಮ್ಮ ಸ್ಟೂಡೆಂಟ್ಸ್‌ನೆಲ್ಲಾ ಒಟ್ಟಿಗೆ ಮಾಡಿ . ನಾನು ನಮ್ಮ ಬ್ರದರ್‍ನ ಕರೆಸಿ ಮಾತಾಡ್ಸ್ತೀನಿ"
"ಸಾರಿ ಆಗಲ್ಲ . ನಂಗೆ ಕೋಪ ಬರೋಕೆ ಮುಂಚೆ ಹೊರಟುಬಿಡು" ನಿಷ್ಟುರಳಾಗಿ ನುಡಿದು ಬಾಗಿಲು ಹಾಕಿದೆ. ಆಕೆ ಸುಮ್ಮನೆ ಹೊರಟು ಹೋದಳು
************************-----------------------------------*****************************

ಯಾರನ್ನು ದೂರುವುದು ಮತಾಂತರ ಹೊಂದಿದ ಇವಳನ್ನೇ
ಮತಾಂತರಕ್ಕೆ ಪ್ರಚೋದನೆ ಮಾಡಿದ ಆ ಸ್ಕೂಲ್‍ನವರನ್ನೇ
ಅಥವ ಅವಳಿಗೆ ಬೇಕಾದ ಸಹಾಯ ನೀಡದ ನಮ್ಮ ಸಮಾಜವನ್ನೇ?

ಹೊಟ್ಟೆ ತುಂಬಿದ ನಾವು ಮತಾಂತರವನ್ನು ವಿರೋಧಿಸಿದರೆ ಸಾಲದು.
ಅದಕ್ಕೆ ಕಾರಣವನ್ನು ಹುಡುಕಿದರೆ ಹುಳುಕು ನಮ್ಮಲ್ಲೇ ಇರುವುದು ಕಾಣುತ್ತದೆ.
ಮೊದಲು ಆ ಹುಳುಕನ್ನು ಸರಿ ಮಾಡಿದರೆ ಬಹುಶ ಪ್ರಚೋದಿತರಾಗಿ ಮತಾಂತರ ಹೊಂದುವುದು ತಪ್ಪುತ್ತ್ತದೇನೋ.

ಕಷ್ಟದಿಂಡ ಜರ್ಜರಿತರಾದಾಗ ಮನಸ್ಸು ಒಂದು ಆಸರೆಗಾಗಿ ಹಾತೊರೆಯುತ್ತಿರುತ್ತದೆ ಆ ಆಸರೆ ಅವರು ನಂಬಿದ ದೈವವೋ ಸಮಾಜದಿಂದಲೋ ಸಿಗದಿದ್ದಾಗ , ಮೂರನೆಯವರ ಮಾತು ಅಮೃತವಾಗಿ ಕಂಡರೆ ಆಶ್ಚರ್ಯವಿಲ್ಲ.
ಅಂತಹ ಆಸರೆ ನಮ್ಮ ನಮ್ಮ ಸಮಾಜದಲ್ಲಿ ನಾವೆ ನೀಡಿದಾಗ ಮಾತ್ರ ಮತಾಂತರವೆಂಬ ತಂತ್ರ ಸಿದ್ದಿಸುವುದಿಲ್ಲ
ನೀವೇನಂತೀರಾ?