ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ

ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ

ಬರಹ

"ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟು, ಅವರನ್ನು ತನ್ನ ಅಕ್ಷರಗಳ ಮೋಹಕ ಬಲೆಯಲ್ಲಿ ಸಿಲುಕಿಸಿದ, ನನ್ನ ಮೆಚ್ಚಿನ ಬರಹಗಾರ, ಜಯಂತಣ್ಣನ ಬಗ್ಗೆ ಒಂದು ಪರಿಚಯ ಲೇಖನ ಬರೆಯಬೇಕೆಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಬೆಂಗಳೂರಿನ ಜಯನಗರದ ರೋಟರ್‍ಯಾಕ್ಟ್ ಸಂಸ್ಥೆಯವರು ೨೦೦೮ರ ನವೆಂಬರ್ ತಿಂಗಳಲ್ಲಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಸಲುವಾಗಿ ಪ್ರಕಟಿಸುವ ನೆನಪಿನ ಹೊತ್ತಗೆಗಾಗಿ, ಲೇಖನ ಬರೆದು ಕೊಡಲು, ನನ್ನ ಸ್ನೇಹಿತ ಸೋಮ ತಿಳಿಸಿದ. ಯಾವ ವಿಷಯದ ಬಗ್ಗೆ ಬರೆಯೋಣವೆಂದು ಚರ್ಚಿಸಿದಾಗ, ಅವನು ಕನ್ನಡ ಸಾಹಿತ್ಯದಲ್ಲಿ ಜನಸಾಮಾನ್ಯರು ಅಭಿಮಾನದಿಂದ ಯಾವಾಗಲೂ ನೆನಪಿಸಿಕೊಳ್ಳುವ ಮೂರು ಕನ್ನಡ ಸಾಹಿತಿಗಳ ಬಗ್ಗೆ ಬರೆದು ಕೊಡಿ, ಎನ್ನುವಷ್ಟರಲ್ಲಿ, ಅವನ ಬಾಯಿಂದ ಮೊದಲು ಬಂದ ಹೆಸರೇ ಜಯಂತ ಕಾಯ್ಕಿಣಿಯವರದ್ದು. ಅದೇನೋ ಅಂತರಲ್ಲ "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ", ಹಾಗೆಯೇ ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಜಯಂತಣ್ಣನವರ ಬಗ್ಗೆ ಲೇಖನರೂಪ ತಳೆಯುತ್ತಿದ್ದ ಅಕ್ಷರಗಳಿಗೆ ಹೊರ ಹೊಮ್ಮಲು ಒಂದು ಕಾರಣ ಈಗ ಸಿಕ್ಕಿತು.
           ನನಗೆ ಪುಸ್ತಕಗಳನ್ನು ಓದುವ, ಅದರಲ್ಲೂ ಕನ್ನಡ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಓದುವ ಗೀಳು ಬಹಳ ಹಳೆಯದ್ದು. ನಾನು ಚಿಕ್ಕವಳಿರುವಾಗ ದೀಪಾವಳಿ ಮತ್ತು ಯುಗಾದಿ ಹಬ್ಬದ ಸಲುವಾಗಿ ಹೊರಬರುವ ವಿಶೇಷ ಸಂಚಿಕೆಗಳಲ್ಲಿ, ತುಷಾರದಲ್ಲಿ ಪ್ರಕಟವಾಗುತ್ತಿದ್ದ ಜಯಂತಣ್ಣನ ಬರಹಗಳೆಂದರೆ ನನಗೆ ಅಚ್ಚುಮೆಚ್ಚು, ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಸಾಹಿತ್ಯ ಅಲ್ಪ-ಸ್ವಲ್ಪ ಕೃಷಿಗೆ ಆದರ್ಶ, ಗುರು ಅವರೇ. ಮುಂಗಾರುಮಳೆಯ ಯೋಗರಾಜ್ ಭಟ್ಟರು ಕನ್ನಡ ಸಿನೆಮಾರಂಗದಲ್ಲಿರುವ ನನ್ನ ಪತಿ ಸುಬ್ರಹ್ಮಣ್ಯ.ಎಂ.ಕೆ.ಯವರಿಗೆ ಸ್ನೇಹಿತ. ಹಾಗಾಗಿ ಅವರ ಮೂಲಕ ಜಯಂತಣ್ಣ ನನ್ನ ಪತಿಗೆ ಪರಿಚಯ. ನನಗೆ ಅವರ ಮುಖಾಮುಖಿ ಪರಿಚಯವಾಗಿದ್ದು ನನ್ನ ಪತಿಯಿಂದ. ದ್ರೋಣಾಚಾರ್ಯ ಏಕಲವ್ಯನೆದುರು ಪ್ರತ್ಯಕ್ಷವಾದಂತೆ,  ಬಾಲ್ಯದ ಆರೇಳು ತರಗತಿಯಿಂದಲೂ ಆದರ್ಶವಾಗಿ ನಾನು ಆರಾಧಿಸುತ್ತಿದ್ದ, ನನ್ನ ಸಾಹಿತ್ಯ ಗುರು, ಕಾಯ್ಕಿಣಿಯವರು, ನಮ್ಮ ಮನೆಗೆ ಬಂದಾಗ ನಾನು ನಿಜವಾಗಿಯೂ, "ಕನಸೋ ಇದು, ನನಸೋ ಇದು" ಎಂದು ಸಾವಿರಾರು ಸಲ ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ. ಜಯಂತ ಕಾಯ್ಕಿಣಿರವರು ನಮ್ಮ ಮನೆಗೆ ಬಂದ ಮೊದಲ ದಿನವೇ, ನನಗಿರುವ ಸಾಹಿತ್ಯಾಸಕ್ತಿಯನ್ನು ಕೇಳಿ ತುಂಬಾ ಪ್ರಶಂಸಿದರು, ಮುಂದೆಯೂ ಬರೆಯುತ್ತಿರಬೇಕೆಂದು ಪ್ರೋತ್ಸಾಹಿಸಿದರು. ಅಷ್ಟು ಸರಳ ಸಜ್ಜನಿಕೆ ಅವರದು. ಹಾಗಾಗಿಯೇ ನಮ್ಮ ಟೋಳಿಯವರಿಗೆಲ್ಲಾ ಅವರು ಮೆಚ್ಚಿನ ಜಯಂತಣ್ಣ. ಇವಿಷ್ಟು ಕಾರಣಗಳು ಈ ಲೇಖನ ಬರೆಯಲು.

         ನಮ್ಮ ನಿಮ್ಮೆಲ್ಲರ ಮೆಚ್ಚಿನ ಬರಹಗಾರ ಶ್ರೀ ಜಯಂತ ಕಾಯ್ಕಿಣಿಯವರು ಹುಟ್ಟಿದ್ದು ೨೪ ಜನವರಿ ೧೯೫೫ರಂದು ಗೋಕರ್ಣದಲ್ಲಿ. ಅವರ ತಂದೆ ಹೆಸರಾಂತ ಸಾಹಿತಿ ಶ್ರೀ ಗೌರೀಶ ಕಾಯ್ಕಿಣಿಯವರು. ಅವರು ವೃತ್ತಿಯಲ್ಲಿ ಅಧ್ಯಾಪಕರು ಕೂಡ. ಅವರ ತಾಯಿ ಶ್ರೀಮತಿ ಶಾಂತಾ ಕಾಯ್ಕಿಣಿರವರು ಸಮಾಜಸೇವಕಿ. ಅವರು ಸಹ ವೃತ್ತಿಯಲ್ಲಿ ಅಧ್ಯಾಪಕಿ. ಶ್ರೀ ಜಯಂತರವರು ತಮ್ಮ ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಶಿಕ್ಷಣವನ್ನು ಗೋಕರ್ಣದ "ಭದ್ರಕಾಳಿ ವಿದ್ಯಾಸಂಸ್ಥೆ"ಯಲ್ಲಿ ಪೂರೈಸಿದರು. ತಮ್ಮ ಕಾಲೇಜಿನ ಬಿ.ಎಸ್ಸಿ. ತನಕದ ಪದವಿ ಶಿಕ್ಷಣವನ್ನು ಕುಮಟಾದ "ಬಾಳಿಗ ವಿದ್ಯಾಸಂಸ್ಥೆ"ಯಲ್ಲಿ ಪಡೆದುಕೊಂಡರು. ಅನಂತರದ ಉನ್ನತ ಶಿಕ್ಷಣವನ್ನು ಎಂ.ಎಸ್ಸಿ ಬಯೋಕೆಮಿಸ್ಟ್ರಿಯಲ್ಲಿ, ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಚಿನ್ನದ ಪದಕ ಗಳಿಸುವುದರೊಂದಿಗೆ , ೧೯೭೬ರಲ್ಲಿ ಪೂರೈಸಿದರು.
           ಶ್ರೀ ಕಾಯ್ಕಿಣಿಯವರ ಬರಹದ ಆಸಕ್ತಿ ಶುರುವಾಗಿದ್ದು ೧೯೭೦ರಿಂದಲೇ, ಆಗಲೇ ಅವರು ಕವಿ, ಸಣ್ಣ ಕಥೆಗಳ ಬರಹಗಾರ, ನಾಟಕಕಾರ ಮತ್ತು ಅಂಕಣಕಾರ ಹೀಗೆ ನಾನಾ ರೂಪಧಾರಿ. ಕನ್ನಡ ಸಾಹಿತ್ಯದಲ್ಲಿ ಮೇರು ಪ್ರಶಸ್ತಿಯೆಂದು ಹೆಸರಾದ "ರಾಜ್ಯ ಸಾಹಿತ್ಯ ಅಕಾಡೆಮಿ"ಯ ಪುರಸ್ಕಾರವು, ಶ್ರೀ ಜಯಂತರವರಿಗೆ, ತಮ್ಮ ೧೯ನೇಯ ವಯಸ್ಸಿನಲ್ಲಿಯೇ, "ರಂಗದಿಂದೊಂದಿಷ್ಟು ದೂರ" ಎಂಬ ಕವನಸಂಕಲನಕ್ಕೆ ೧೯೭೪ರಲ್ಲಿ ಪ್ರಥಮ ಬಾರಿಗೆ ದೊರಕಿತು. ಅಂಥ ಅಸಾಧಾರ್‍ಅಣ, ಅಭಿಜಾತ ಪ್ರತಿಭೆ ಅವರದು. ತಂದೆಯೇ ಅವರಿಗೆ ಆದರ್ಶಪ್ರಾಯ, ಅವರೊಂದಿಗೆ ಯಶವಂತ ಚಿತ್ತಾಲರವರೂ ಸಹ ಜಯಂತರ ಮೇಲೆ ಬಹಳ ಪ್ರಭಾವ ಬೀರಿರುವರು. ನಾನು ಜಯಂತಣ್ಣನೆಂದರೆ "ಶಬ್ದಗಳ ಮೋಡಿಗಾರ"ನೆಂದು ಅವರ ಬಗ್ಗೆ ಬರೆಯುತ್ತಿರುವ ಈ ಲೇಖನಕ್ಕೆ ತಲೆಬರಹ ಇಟ್ಟ ಕಾರಣ, ಅವರ ಸಾಹಿತ್ಯ ಪ್ರೇಮಿಗಳಿಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಜನಸಾಮಾನ್ಯರ ಆಡುಭಾಷೆಗಳಲ್ಲಿ ಬರುವ ಪದಗಳನ್ನು ಮುತ್ತಿನ ಮಣಿಗಳಂತೆ ಜೋಡಿಸಿ, ಜನರ ಮನಸ್ಸಿನ ಆಳಕ್ಕೆ ಇಳಿಯುವಂತೆ ಸುಂದರ ಪದಮಾಲೆಗಳನ್ನು ಕಟ್ಟುವುದರಲ್ಲಿ ಕಾಯ್ಕಿಣಿಯವರು ನಿಷ್ಣಾತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ, ಸಾಹಿತ್ಯಗಳಲ್ಲಿ ಇವರು ಬರೆಯದ ಪ್ರಕಾರಗಳಿಲ್ಲ. ತಮ್ಮ ಅತ್ಯುನ್ನತ ಸಾಹಿತ್ಯ ರಚನೆಗಳಿಗಾಗಿ, ಇನ್ನೂ ಮೂರು ಸಲ, "ರಾಜ್ಯ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿ" ಗಳನ್ನು, ೧೯೮೨ರಲ್ಲಿ "ತೆರೆದಷ್ಟೆ ಬಾಗಿಲು" ಎಂಬ ಸಣ್ಣ ಕಥೆಗಳ ಸಂಗ್ರಹ, ೧೯೮೯ರಲ್ಲಿ "ದಗ್ಡೂ ಪರಬನ ಅಶ್ವಮೇಧ" ಎಂಬ ಸಣ್ಣ ಕಥೆಗಳ ಸಂಗ್ರಹ ಮತ್ತು ೧೯೯೬ರಲ್ಲಿ "ಅಮೃತ ಬಳ್ಳಿ ಕಷಾಯ" ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪಡೆದರು. ಪುನಃ "ಅಮೃತಬಳ್ಳಿ ಕಷಾಯ" ಕ್ಕೆ ೧೯೯೬ರಲ್ಲಿಯೇ ಉತ್ತಮ ಸೃಜನಾತ್ಮಕ ಕಥೆಗಳಿಗಾಗಿ ಮೀಸಲಾಗಿರುವ ರಾಷ್ಟ್ರೀಯ ಕಥಾ ಪ್ರಶಸ್ತಿ ಮತ್ತು ೧೯೯೭ರಲ್ಲಿ ಬಿ.ಎಚ್.ಶ್ರೀಧರ್ ಕಥಾ ಪ್ರಶಸ್ತಿ ಗಳು ದೊರಕಿದವು. ೧೯೯೮ರಲ್ಲಿ "ನೀಲಿಮಳೆ" ಕವನಸಂಕಲನಕ್ಕೆ ದಿನಕರ ದೇಸಾಯಿ ಕವನ ಪ್ರಶಸ್ತಿಯೂ ದೊರಕಿತು.    
       ಅವರು ತಮ್ಮ ಎಂ.ಎಸ್ಸಿ ಪದವಿಯ ನಂತರ ಮುಂಬೈಯಲ್ಲಿ ಫಾರ್ಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ, ಪ್ರಾಕ್ಟರ್-ಗ್ಯಾಂಬಲ್ ಮತ್ತು ಹೂಸ್ಟ್(  Hoechst) ಎಂಬ ಕಂಪನಿಗಳಲ್ಲಿ ೧೯೭೭ ರಿಂದ ೧೯೯೭ರ ವರೆಗೆ ವೃತ್ತಿಕೆಲಸ ಮಾಡಿದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ, ಕನ್ನಡ ಸಾಹಿತ್ಯಸೇವೆಯನ್ನಂತೂ ಅವರು ಬಿಡಲಿಲ್ಲ. ೧೯೮೨ರಲ್ಲಿ "ಕೋಟಿತೀರ್ಥ" ಎಂಬ ಕವನ ಸಂಕಲನ ಮತ್ತು "ತೆರೆದಷ್ಟೆ ಬಾಗಿಲು" ಹಾಗೂ "ಗಾಳ" ಎಂಬ ಸಣ್ಣ ಕಥೆಗಳ ಎರಡು ಸಂಕಲನಗಳನ್ನೂ ಪ್ರಕಟಿಸಲಾಯಿತು. ೧೯೮೭ರಲ್ಲಿ "ಶ್ರಾವಣ ಮಧ್ಯಾಹ್ನ" ಎಂಬ ಕವನ ಸಂಕಲನ ಮತ್ತು ೧೯೮೯ರಲ್ಲಿ "ದಗ್ಡೂ ಪರಬನ ಅಶ್ವಮೇಧ" ಎಂಬ ಸಣ್ಣ ಕಥಾಸಂಕಲನವನ್ನು ಪ್ರಕಟಿಸಲಾಯಿತು. ೧೯೯೫ರಲ್ಲಿ "ಸೇವಂತಿ ಪ್ರಸಂಗ" ಎಂಬ ನಾಟಕವನ್ನು, ೧೯೯೬ರಲ್ಲಿ "ಅಮೃತಬಳ್ಳಿ ಕಷಾಯ" ಎಂಬ ಸಣ್ಣ ಕಥಾಸಂಕಲನವನ್ನು, ೧೯೯೭ರಲ್ಲಿ "ನೀಲಿಮಳೆ" ಎಂಬ ಕವನ ಸಂಕಲನವನ್ನು ಪ್ರಕಟಿಸಲಾಯಿತು. ೧೯೯೭ ರಿಂದ ೧೯೯೮ರ ವರೆಗೆ ಮುಂಬೈಯಲ್ಲಿಯೇ ಸ್ವತಂತ್ರ ಬರಹಗಾರನಾಗಿ (freelance copy writer)  ಲಿಂಟಾಸ್, ಮುದ್ರಾ ಮತ್ತು ತ್ರಿಕಾಯ ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ೧೯೯೭ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಗಳನ್ನು ಚೀನಾ ದೇಶಕ್ಕೆ ಕಳುಹಿಸಿದಾಗ, ಅವರಲ್ಲೊಬ್ಬ ಪ್ರತಿನಿಧಿಯಾಗಿ, ಶ್ರೀ ಜಯಂತರವರನ್ನೂ ಆಯ್ಕೆ ಮಾಡಿ ಕಳುಹಿಸಿದ್ದರು. ಹೊರದೇಶಕ್ಕೂ ಆಗಿನ ಕಾಲದಲ್ಲಿಯೂ ಹೊಮ್ಮಿತ್ತು ನಮ್ಮ ಜಯಂತಣ್ಣನವರ ಪ್ರತಿಭೆಯ ಪ್ರಕಾಶ. ಅವರು ೧೯೯೭ ರಿಂದ ೧೯೯೯ ರವರೆಗೆ ಈಟಿವಿ ಕನ್ನಡವಾಹಿನಿಯ ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ "ಬಣ್ಣದ ಕಾಲು" ಎಂಬ ಸಣ್ಣ ಕಥೆಗಳ ಸಂಕಲನವಿರುವ ಪುಸ್ತಕವನ್ನು ಪ್ರಕಟಿಸಲಾಯಿತು.
          ೨೦೦೦ ಇಸವಿಗೆ, ಬೆಂಗಳೂರಿಗೆ ತಮ್ಮ ಕುಟುಂಬದೊಂದಿಗೆ ಮರಳಿ ಬಂದ ಅವರು, ವಿಜಯಕರ್ನಾಟಕ ಪಬ್ಲಿಕೇಷನ್ಸ್‍ರವರು  ನಡೆಸುತ್ತಿದ್ದ "ಭಾವನಾ" ಎಂಬ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅವರ ಕುಟುಂಬ ಎಂದಾಗ, ಅವರ ಪತ್ನಿ "ಶ್ರೀಮತಿ ಸ್ಮಿತ", ಮತ್ತು ಮಕ್ಕಳ ಬಗ್ಗೆ ನಾನು ಹೇಳಲೇ ಬೇಕು. ಅವರ ಪತ್ನಿ ಶ್ರೀಮತಿ ಸ್ಮಿತರವರು,  ಕಾಯ್ಕಿಣಿಯವರಿಗೆ ಅನುರೂಪಳಾದ ಸಹಧರ್ಮಿಣಿ. ಮೂಲತಃ ಮುಂಬೈಯವರಾದರೂ, ಕನ್ನಡ ಸಾಹಿತ್ಯದ ಬಗ್ಗೆ, ಶ್ರೀ ಜಯಂತರವರ ಬರಹಗಳ ಬಗ್ಗೆ ಬಹಳ ಆಸಕ್ತಿ ಹೊಂದಿರುವರು. ೧೯೮೪ರ ನವೆಂಬರ್ ೧೭ರಂದು ಅವರ ವಿವಾಹವಾಯಿತು. ಅವರೂ ಸಹ ವಿಶ್ಲೇಷಕ ರಸಾಯನ ಶಾಸ್ತ್ರದಲ್ಲಿ(analytical chemistry)ಚಿನ್ನದ ಪದಕ ಗಳಿಸಿದ ಬುದ್ಧಿವಂತೆ. ಆಕೆ ಮಿತಭಾಷಿ, ಸೌಮ್ಯ ಸ್ವಭಾವದವರು. ಒಟ್ಟಿನಲ್ಲಿ ಹೇಳುವುದಾದರೆ, ಸಹೃದಯಿ ಶ್ರೀಜಯಂತರವರಿಗೆ ಅನುರೂಪಳಾದ ಪತ್ನಿ. ಅವರಿಗೆ "ಸೃಜನ" ಎಂಬ ಮಗಳು ಮತ್ತು "ಋತ್ವಿಕ್" ಎಂಬ ಮಗ, ಹೀಗೆ ಇಬ್ಬರು ಮಕ್ಕಳು. ಮಗಳು ಈ ವರ್ಷದಲ್ಲಿ, ಅಂತಿಮ ಹಂತದ ವಾಸ್ತುಶಿಲ್ಪಶಾಸ್ತ್ರ ಇಂಜಿನಿಯರಿಂಗ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಅವರ ಮಗ ಪ್ರಥಮ ವರುಷದ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ "ಮರಳಿ ಬಂದ" ಎಂಬ ಪದಪ್ರಯೋಗ ಮಾಡಿರುವ ಕಾರಣವನ್ನು ನಿಮಗೆ ಮತ್ತೆ ಇನ್ನೊಂದು ಸ್ವಾರಸ್ಯಕರ ವಿಷಯದ ಜೊತೆಗೆ ತಿಳಿಸುತ್ತೇನೆ. ಶ್ರೀ ಜಯಂತರವರು "ಭಾವನಾ" ಪತ್ರಿಕೆಗಾಗಿ ೨೦೦೧ರ ತನಕ ದುಡಿದರು. ಅಷ್ಟರಲ್ಲಿ ೨೦೦೧ರಲ್ಲಿ ಅವರಿಗೆ, ತಮ್ಮ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಬರಹಗಳಿಂದ, "ಋಜುವಾತು ಫೆಲೋಶಿಪ್" ದೊರಕಿತು. ೨೦೦೧ರಲ್ಲಿ ಅವರ "ಜತೆಗಿರುವನು ಚಂದಿರ" ಎಂಬ ನಾಟಕ ಮತ್ತು "ಬೊಗಸೆಯಲ್ಲಿ ಮಳೆ" ಎಂಬ ಆಂಕಣಗಳ ಸಂಗ್ರಹ(ಅವರೇ ಬರೆದಿರುವಂಥ ಹಲವು ಅಂಕಣಗಳನ್ನು ಒಟ್ಟು ಮಾಡಿ ಅಚ್ಚು ಹಾಕಿದ ಪುಸ್ತಕ)ಗಳನ್ನು ಪ್ರಕಟಿಸಲಾಯಿತು.

ಮೊದಲೇ ಹೇಳಿದಂತೆ, ಶ್ರೀ ಕಾಯ್ಕಿಣಿಯವರ ಪ್ರತಿಭೆ ನಿಂತ ನೀರಲ್ಲ, ಅದು ಭೋರ್ಗರೆದು ಹರಿಯುವ ನದಿಯ ಜಲಪಾತದ ತರಹ. ಅವರ ಪುಸ್ತಕಗಳ ಅಚ್ಚಾದ ವರುಷಗಳನ್ನು ಗಣನೆ ಮಾಡುತ್ತಾ ಬಂದರೆ, ೧೯೭೪ರಿಂದ, ಅವರ ಬದುಕಿನ ಮಜಲುಗಳನ್ನು ನೀವು ಈಗ ತಾನೇ ಓದಿದ ೨೦೦೧ ರ ವರೆಗೂ ಬಿಡುವಿಲ್ಲದೇ, ಅಥವಾ ದಣಿವಿಲ್ಲದೆ, ಕಿಂಚಿತ್ತೂ ಬೇಸರವೂ ಇಲ್ಲದೆ, ಹಂತ ಹಂತಗಳಲ್ಲಿ, ಅವರು ಬರಹಗಳನ್ನು ಬರೆಯುತ್ತಲೇ ಬಂದಿದ್ದಾರೆ. ಬಹುಶಃ ಕನ್ನಡ ಸಾಹಿತ್ಯದ ಇತಿಹಾಸವನು ತೆಗೆದು ನೋಡಿದರೆ, ಅತೀ ಕಿರಿಯ ವಯಸ್ಸಿನಲ್ಲಿ ಇಷ್ಟೆಲ್ಲಾ ಬರಹಗಳನ್ನು ಬರೆಯುತ್ತಾ, ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿ, ಎಲ್ಲ ಜನಸಾಮಾನ್ಯರ ಹೃದಯರಾಜನಾಗಿ ವಿಜ್ರಂಭಿಸಿರುವ ಅಪರೂಪದ ವ್ಯಕ್ತಿಯೆಂದರೆ ನಮ್ಮ-ನಿಮ್ಮ ಪ್ರೀತಿಯ ಸರಳ ಮತ್ತು ನಿಗರ್ವಿ ಜಯಂತಣ್ಣ ಮಾತ್ರ. ಅವರು ಯಾವುದೇ ವಾದ-ವಿತಂಡವಾದಗಳ, ವಿವಾದಗಳ ಸುಳಿಯೊಳಗೆ ಸಿಲುಕಿದವರೂ ಅಲ್ಲ ಮತ್ತು ಅನಾವಶ್ಯಕವಾಗಿ ಮಾತಾಡಿ ಒಬ್ಬರ ಮನನೋಯಿಸಿದವರೂ ಅಲ್ಲ. ಅವರ ಮುಗ್ಧ ಮುಖದಷ್ಟೇ ನಿಷ್ಕಪಟ ಮನಸ್ಸು ಅವರದು. ನನ್ನ ಈ ಮಾತಿನ ಅರ್ಥ, ೨೦೦೨ ರಿಂದ ೨೦೦೩ರ ತನಕ ಈಟಿವಿ ಕನ್ನಡವಾಹಿನಿಯಲ್ಲಿ ದಿನನಿತ್ಯ ಬೆಳಗ್ಗಿನ ಹೊತ್ತು ಪ್ರಸಾರವಾಗುತ್ತಿದ್ದ "ನಮಸ್ಕಾರ" ಎಂಬ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದ ಅವರ ಅಭಿಮಾನಿಗಳಿಗೆ ನೂರಕ್ಕೆ ನೂರು ಪ್ರತಿಶತ ಖಂಡಿತವಾಗಿಯೂ ಆರ್ಥವಾದೀತು. ಬಹಳಷ್ಟು ಪ್ರಸಿದ್ಧಿಯನ್ನು, ಅಪಾರ ಅಭಿಮಾನಿ ಬಳಗವನ್ನೂ, ಶ್ರೀ ಕಾಯ್ಕಿಣಿಯವರು , ಈ ಕಾರ್ಯಕ್ರಮದಿಂದ ಗಳಿಸಿದರು. ಅವರು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪ್ರತಿ ೩೦ ಕಂತುಗಳಲ್ಲಿ, ಶ್ರೀ ಕುವೆಂಪು, ಶ್ರೀ ಶಿವರಾಮಕಾರಂತ, ಶ್ರೀ ದ.ರಾ.ಬೇಂದ್ರೆ ಮತ್ತು ಶ್ರೀ ರಾಜ್‍ಕುಮಾರ್(ಇವರೆಲ್ಲರೂ ತಮ್ಮ ಅನುಪಮ ಪ್ರತಿಭೆಯಿಂದ ನಮ್ಮ ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಎಲ್ಲೆಡೆಗೂ ಪಸರಿಸಲು ಕಾರಣೀಭೂತರಾದ ಮಹನೀಯರು) ಮುಂತಾದವರ ಬಗ್ಗೆ ಸಂದರ್ಶನ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಈ ಸಂದರ್ಶನಗಳು "ರಸಋಷಿಗೆ ನಮಸ್ಕಾರ", "ಕಡಲಭಾರ್ಗವನಿಗೆ ನಮಸ್ಕಾರ", "ಬೇಂದ್ರೆ ಮಾಸ್ಟರ್ ‍ಗೆ ನಮಸ್ಕಾರ" ಮತ್ತು "ನಟಸಾರ್ವಭೌಮನಿಗೆ ನಮಸ್ಕಾರ" ಎಂದು ಪ್ರಸಾರವಾದವು. ಈ ಸಂದರ್ಶನಗಳು ಮೇಲೆ ಹೆಸರಿಸಿದ ವಿಖ್ಯಾತರ ಜೀವನ, ಅವರ ದೃಷ್ಟಿಕೋನ, ಕನ್ನಡದ ಬಗ್ಗೆ ಅವರಿಗಿದ್ದ ಭಾಷಾಭಿಮಾನ, ಕನ್ನಡವನ್ನು ಬೆಳೆಸುವಲ್ಲಿ ಅವರೆಲ್ಲರಿಗಿದ್ದ ಉತ್ಸಾಹ, ಕನ್ನಡವನ್ನು ಜನರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸುವಂತೆ ಮಾಡುವಲ್ಲಿ ಅವರೆಲ್ಲರಿಗಿದ್ದ ಕಾಳಜಿ, ಅವರ ಅನ್ವೇಷಣೆಗಳು, ಹವ್ಯಾಸಗಳು ಮುಂತಾದ ಹಲವಾರು ವಿಷಯಗಳನ್ನು ಅವರೆಲ್ಲರ ಒಡನಾಡಿಗಳ ಮೂಲಕ ಜನರಿಗೆ ತಿಳಿಯುವಂತೆ ಮಾಡಿದವು. ೨೦೦೩ರಲ್ಲಿ ಶ್ರೀ ಜಯಂತರವರ "ಜಯಂತ ಕಾಯ್ಕಿಣಿ ಕಥೆಗಳು" ಎಂಬ ಲಘು ಕಥೆಗಳ ಸಂಕಲನ ಪುಸ್ತಕ ಮತ್ತು "ಇತಿ ನಿನ್ನ ಅಮೃತ" ಎಂಬ ನಾಟಕವನ್ನೂ ಪ್ರಕಟಿಸಲಾಯಿತು. ೨೦೦೫ರಲ್ಲಿ ಅವರ "ತೂಫಾನ್ ಮೈಲ್" ಎಂಬ ಸಣ್ಣ ಕಥೆಗಳ ಸಂಗ್ರಹ ಪ್ರಕಟವಾಯಿತು. ಅವರು ೨೦೦೫ - ೨೦೦೬ ರವರೆಗೆ ಜ಼ೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿ (Programming Head) ತಮ್ಮ ವೃತ್ತಿಯನ್ನು ಮುಂದುವರಿಸಿದರು. ಹಾಗಾದರೆ ೨೦೦೩ ರಿಂದ ೨೦೦೪ರ ವರೆಗೆ ಶ್ರೀ ಕಾಯ್ಕಿಣಿಯವರು ಏನು ಮಾಡುತ್ತಿದ್ದರೆಂದು ನೀವು ಊಹಿಸಬಲ್ಲಿರಾ?
ಆಗ ನಾನು ಮೇಲಿನ ಬರಹದ ಉದ್ಧೃತಭಾಗದಲ್ಲಿ ಹೇಳಿದ ಸ್ವಾರಸ್ಯವನ್ನು ನಿಮಗೆ ತಿಳಿಸುವ ಸಂದರ್ಭ ಬಂದಿದೆ. ೨೦೦೪ರಲ್ಲಿ "ಎಡಕಲ್ಲು ಗುಡ್ದದ ಮೇಲೆ" ಎಂಬ ಪುಟ್ಟಣ್ಣನವರ ಪ್ರಖ್ಯಾತ ಕನ್ನಡ ಚಲನಚಿತ್ರದ ನಟ "ಚಂದ್ರಶೇಖರ"ರವರು ನಿರ್ದೇಶಿಸಿದ "ಪೂರ್ವಾಪರ" ಎಂಬ ಕನ್ನಡ ಭಾಷೆಯ ಚಲನಚಿತ್ರವೊಂದು ಬಿಡುಗಡೆಯಾಗಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸಿತ್ತು. ಆ ಚಿತ್ರವೇ ನಮ್ಮ ಜಯಂತಣ್ಣನವರು ಪ್ರಥಮ ಬಾರಿಗೆ ಚಲನಚಿತ್ರವೊಂದಕ್ಕೆ ಹಾಡಿನ ಸಾಹಿತ್ಯ ಮತ್ತು ಸಂಭಾಷಣೆ ಬರೆದ ಚಿತ್ರ. ಇದರ ನಡುವೆಯೂ ಅವರು ತಮ್ಮ ಸಾಹಿತ್ಯಕೃಷಿಯನ್ನಂತೂ ಕೈ ಬಿಡಲಿಲ್ಲ. ೨೦೦೪ರಲ್ಲಿ "ಆಕಾಶ ಬುಟ್ಟಿ" ಎಂಬ ನಾಟಕಕೃತಿಯು ಪ್ರಕಟವಾಯಿತು. (ಇದಕ್ಕಿಂತಲೂ ಮೊದಲು ಶ್ರೀ ಜಯಂತರವರು ಹೆಸರಾಂತ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿ ೧೯೭೯ರಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, " ಮೂರು ದಾರಿಗಳು" ಎಂಬ ಸಿನೆಮಾದಲ್ಲಿ ಕೆಲಸ ಮಾಡಿದ್ದರು. "ಬೆಟ್ಟದ ಜೀವ" ಎಂಬ ಶಿವರಾಂ ಕಾರಂತರ ಕಾದಂಬರಿ ಆಧಾರಿತ ಸಿನೆಮಾ ತಯಾರಿಯಲ್ಲಿ ೧೯೯೦ರಲ್ಲಿ ಭಾಗಿಯಾಗಿದ್ದರು. ಆದರೆ ಆ ಸಿನೆಮಾ ತಯಾರಿಯ ಅರ್ಧದಲ್ಲಿ ನಿಂತು ಹೋಯಿತು.) ನಿಮಗೆಲ್ಲರಿಗೂ ಬಹು ಪರಿಚಿತವಾದ "ಚಿಗುರಿದ ಕನಸು" ಸಿನೆಮಾ ೨೦೦೪ರಲ್ಲಿ ಪ್ರದರ್ಶಿತವಾಯಿತು. ಅ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳ ಸಾಹಿತ್ಯ ಬರೆದದ್ದು ನಮ್ಮ ಕಾಯ್ಕಿಣಿಯವರೇ. ಈ ಚಲನಚಿತ್ರದ ಉತ್ತಮ ಸಂಭಾಷಣೆಗಾಗಿ ೨೦೦೪ರಲ್ಲಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು. ೨೦೦೬ರಲ್ಲಿ ಇವರು ಅದಾದ ಮೇಲೆ "ಮುಂಗಾರು ಮಳೆ" ಚಲನಚಿತ್ರಕ್ಕಾಗಿ ಕೆಲವು ಹಾಡುಗಳ ಸಾಹಿತ್ಯ ಬರೆದರು. ಹೀಗೆ ಈಗ ಜಯಂತ ಕಾಯ್ಕಿಣಿಯವರ ಹೆಸರು ಹೇಳಿದರೆ ಅಬಾಲವೃದ್ಧರೆಲ್ಲರೂ ಮೊದಲು ನೆನಪಿಸಿಕೊಳ್ಳುವುದು, ೨೦೦೬ರಲ್ಲಿ ಜನಮನಗಳ ಮನದಲ್ಲಿ ಅಭಿಮಾನದ ಹೊಳೆಯನ್ನು ಹರಿಸಿದ ನಿರ್ದೇಶಕ "ಯೋಗರಾಜ್ ಭಟ್" ರವರ ಸಿನೆಮಾ "ಮುಂಗಾರು ಮಳೆ"ಯ ಹಾಡುಗಳ ಸಾಹಿತ್ಯವನ್ನು. ಆ ಹಾಡುಗಳು ಇಂದಿಗೂ ಜನಪ್ರಿಯ. "ಅನಿಸುತಿದೆ ಯಾಕೋ ಇಂದು" ಎಂಬ ಹಾಡಂತೂ ಚಿತ್ರ ರಸಿಕರ ಮನಕ್ಕೆ ಈಗಲೂ ಲಗ್ಗೆ ಹಾಕಿದೆ. ಆ ಹಾಡಿನ ಸ್ಥಾನವನ್ನು ಇನ್ನೊಂದು ಹತ್ತು ದಶಕಗಳ ತನಕ ಬೇರೆ ಯಾವ ಹಾಡೂ ಪಡೆಯಲಾರದು ಎಂದರೆ ಅತಿಯಶೋಕ್ತಿಯಾಗಲಾರದು ಎಂದುಕೊಳ್ಳುತ್ತೇನೆ. ಅಂದರೆ ನಮ್ಮ ಕಾಯ್ಕಿಣಿಯವರು ಸರಳ ಕನ್ನಡ ಪದಗಳನ್ನು ಕಲೆ ಹಾಕಿ ಸುಂದರವಾದ ಜನರ ನಾಲಿಗೆಯಲ್ಲಿ ಸದಾ ನೆಲೆಸುವಂತ ಹಾಡುಗಳನ್ನು ಬರೆಯುವರಲ್ಲಿ ಬಹಳ ನಿಪುಣರು. ಈ ಕಲೆ ಎಲ್ಲ ಬರಹಗಾರರಿಗೂ ಸಿದ್ಧಿಸುವುದಿಲ್ಲ. ಮುಂಗಾರು ಮಳೆ ಚಿತ್ರದ ಹಾಡುಗಳು ಕಾಯ್ಕಿಣಿಯವರಿಗೆ ಇನ್ನೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುವ ಸಂದರ್ಭಗಳನ್ನು ಒದಗಿಸಿದವು. ಇವರ ಪ್ರಖ್ಯಾತಿಯ ಕಿರೀಟಕ್ಕೆ ಇನ್ನೂ ಹಲವಾರು ಪ್ರಶಸ್ತಿಯ ಗರಿಗಳು ಲಭಿಸಿದವು. ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು" ಹಾಡಿನ ಉತ್ತಮ ಸಾಹಿತ್ಯಕ್ಕಾಗಿ ೨೦೦೬ರಲ್ಲಿ ಮತ್ತೊಮ್ಮೆ ನಮ್ಮ ಜಯಂತಣ್ಣನವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯು ದೊರಕಿತು. ಹಾಗೂ ಅದೇ ಹಾಡಿಗೆ, ಅದೇ ವರ್ಷ ಪುನಃ ಈಟಿವಿ ಕನ್ನಡ ವಾಹಿನಿಯ "ಉತ್ತಮ ಸಿನೆಮಾ ಸಾಹಿತಿ (ಬೆಸ್ಟ್ ಲಿರಿಸಿಸ್ಟ್)" ಪ್ರಶಸ್ತಿಯೂ ದೊರಕಿತು.
ಈ ಮಧ್ಯೆ ೨೦೦೬ರಲ್ಲಿ ಅವರ "ಶಬ್ದ ತೀರ್ಥ" ಎಂಬ ಅಂಕಣಗಳ ಸಂಗ್ರಹ ಪುಸ್ತಕವೂ(ಕಲೆಕ್ಷನ್ ಆಫ್ ಮ್ಯುಸಿಂಗ್ಸ್) ಪ್ರಕಟಗೊಂಡಿತು. ಅಲ್ಲಿಂದ ಕನ್ನಡ ಚಲನಚಿತ್ರಗಳ ಜೊತೆ ಅವರ ನಂಟು ಹೆಮ್ಮರವಾಗಿ ಬೆಳೆಯುತ್ತಾ ಹೋಯಿತು. "ದ್ವೀಪ" ಮತ್ತು "ರಮ್ಯಚೈತ್ರಕಾಲ" ಕನ್ನಡ ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ, "ಮಿಲನ", "ಗೆಳೆಯ", "ಈ ಬಂಧನ", "ಗಾಳಿಪಟ", "ಹುಡುಗಾಟ", ನಾವು ಸ್ನೇಹಿತರೆಲ್ಲಾ ಜೊತೆ ಸೇರಿ ನಿರ್ಮಿಸಿದ "ಇಂತಿ ನಿನ್ನ ಪ್ರೀತಿಯ", "ಕಾಮಣ್ಣನ ಮಕ್ಕಳು", "ಮೊಗ್ಗಿನ ಮನಸ್ಸು", "ಅರಮನೆ", "ಮೆರವಣಿಗೆ", "ಆತ್ಮೀಯ", "ಸೈಕೊ", ಇತ್ತೀಚೆಗೆ ಬಿಡುಗಡೆಯಾದ "ಬೊಂಬಾಟ್" ಹೀಗೆ ಹಲವಾರು ಕನ್ನಡ ಚಿತ್ರಗಳಿಗೆ ಹಾಡಿನ ಸಾಹಿತ್ಯ ರಚಿಸಿ ನಮ್ಮ ನಿಮ್ಮೆಲ್ಲರ ಮನದಲ್ಲಿ ಹಸಿರಾಗಿ ನಿಂತಿರುವರು. ಇನ್ನೂ ಮುಂದೆಯೂ ಪ್ರದರ್ಶಿತವಾಗಲಿರುವ ಹಲವಾರು ಚಿತ್ರಗಳಿಗೆ ಶ್ರೀ ಜಯಂತ ಕಾಯ್ಕಿಣಿಯವರು ಹಾಡುಗಳನ್ನು ಬರೆದು ನಮ್ಮೆಲ್ಲರ ಮನಸ್ಸನ್ನು ತಣಿಸಲಿದ್ದಾರೆ. ಮತ್ತೊಂದು ವಿಷಯ ಹೇಳೋದು ಮರೆತೆ. ಈಟಿವಿ ಕನ್ನಡ ವಾಹಿನಿಯಲ್ಲಿ ೨೦೦೭ರಿಂದ ೨೦೦೮ರ ವರೆಗೆ ಪ್ರಸಾರವಾದ ನಮ್ಮ ಸ್ವಂತ ತಯಾರಿಕೆಯ "ಭೃಂಗದ ಬೆನ್ನೇರಿ" ಎಂಬ ಧಾರಾವಾಹಿಯ ಮುಖ್ಯ ಹಾಡಿನ ಸಾಹಿತ್ಯ ಬರೆದಿದ್ದು ನಮ್ಮ ಜಯಂತಣ್ಣನೇ. ಆ ಹಾಡಿನ ಸಾಲುಗಳು ನನಗೆ ತುಂಬಾ ಇಷ್ಟ. ಆ ಹಾಡಿನಲ್ಲಿ ಒಂದು ಚರಣ ಬರುತ್ತದೆ, ಅದರ ಸಾಲುಗಳು ಹೀಗಿವೆ, " ಬಾಗಿಲಲಿ ಹಾಗೆ ಇದೆ ಅರ್ಧ ರಂಗವಲ್ಲಿ; ಯಾರು ಬರುವರು, ಅದ ಪೂರ್ತಿ ಬರೆವರು; ಕಣ್ಣಿನಲಿ ಜೀವಜಲ ಹಸಿರು ಚಿಗುರು ಬಳ್ಳಿ; ಹೊಸಿಲಿನಾಚೆಗೆ, ನನ್ನ ಯಾರು ಕರೆವರು; ಕಣ್ಣಾ ಹನಿಯ ದೀಪವೇ; ನನ್ನಾ ದನಿಯ ರೂಪವೇ; ಈ ಆಟದಲ್ಲಿ ಎಲ್ಲೆಲ್ಲೋ ನಾವು; ಬಚ್ಚಿಟ್ಟು ಕಾದು ಕಾದು ಕಳೆದು ಹೋದೆವೋ................ ಭೃಂಗದ ಬೆನ್ನೇರಿ, ಸದ್ದಿರದೆ ಮನೆಯಲ್ಲಿ ಬಿಸಿಲು ಚೆಲ್ಲಿತ್ತೋ ; ಇಷ್ಟು ದಿನ ಎದೆಯಲ್ಲಿ ಹಾಡು ಎಲ್ಲಿತ್ತೋ". ಈಗ ನೀವು ಈ ಸಾಲುಗಳನ್ನು ಓದಿದ್ದೀರಲ್ಲ, ಒಂದು ಕ್ಷಣ ನೀವಿರುವ ಜಾಗದಿಂದ ಒಬ್ಬಂಟಿಗರಾಗಿ ದೂರ ನಿಂತು ಕಣ್ಣುಗಳನ್ನು ಮುಚ್ಚಿಕೊಂಡು, ಮೇಲಿನ ಸಾಲುಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಮನಸ್ಸು ಭಾರವಾಗಿ, ಕಣ್ಣಾಲಿಗಳು ತುಂಬಿ ಕಣ್ಣೀರು ಹರಿದಿಲ್ಲವೆಂದರೆ ನಿಜವಾಗಿಯೂ ನಾನೇ ಅತ್ತುಬಿಡುತ್ತೇನೆ ಎಂದು ನನಗನಿಸುತ್ತಿದೆ. ಜಯಂತಣ್ಣ ಬರೆದ ಯಾವುದೇ ಹಾಡಿನ ಸಾಲುಗಳು ಆಷ್ಟು ಪವರ್-ಫುಲ್, ಎಂಥವರ ಮನದ ಮುಚ್ಚಿದ ಕದವನ್ನು ಜೋರಾಗಿ ಹೊಡೆದು ಎಬ್ಬಿಸಿಯೇ ಬಿಡುತ್ತವೆ, ಮತ್ತೆ ಮುದುರಲು ಅವಕಾಶವೇ ಕೊಡುವುದಿಲ್ಲ. ಅಂದರೆ ಇಲ್ಲಿ ನಾನು ಏನು ಹೇಳಬಯಸುತ್ತಿದ್ದೇನೆಂದರೆ ಶ್ರೀ ಕಾಯ್ಕಿಣಿಯವರ ಯಾವುದೇ ಪ್ರಕಾರದ ಸಾಹಿತ್ಯವಿರಲಿ, ಅದು ಓದುಗರ, ಕೇಳುಗರ ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿರುತ್ತದೆ. ಅವುಗಳಲ್ಲಿ ಕೊಂಚ ಲೋಪವೂ, ಅತಿಶಯವೂ ಇರುವುದಿಲ್ಲ, ಶ್ರೀ ಸಾಮಾನ್ಯನಿಗೆ ಅರ್ಥವಾಗದ ಕಬ್ಬಿಣದ ಕಡಲೆಯ ಪದಗಳೂ ಇರುವುದಿಲ್ಲ. ಅವು ಬಹಳ ಸಹಜ, ಸ್ನಿಗ್ಧ, ಸರಳ, ಮುಗ್ಧ ಮತ್ತು ಮಧುರವಾಗಿರುತ್ತವೆ.
ಕನ್ನಡ ಚಲನಚಿತ್ರಗಳಲ್ಲಿ ಅವರ ಸಾಧನೆಗಾಗಿ, ಇನ್ನೂ ಅನೇಕ ಪ್ರಶಸ್ತಿಗಳು ಅವರಿಗೆ ದೊರಕಿವೆ. ೨೦೦೭ರಲ್ಲಿ "ಮಿಲನ" ಚಿತ್ರದ "ನಿನ್ನಿಂದಲೇ" ಹಾಡಿನ ಉತ್ತಮ ಸಾಹಿತ್ಯಕ್ಕಾಗಿ "ಕಸ್ತೂರಿ ಸಿರಿಗಂಧ" ಪ್ರಶಸ್ತಿ ದೊರಕಿದೆ. ಮತ್ತದೇ ವರುಷದಲ್ಲಿ "ಗೆಳೆಯ" ಚಿತ್ರದ "ಈ ಸಂಜೆ ಯಾಕಾಗಿದೆ" ಹಾಡಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ದೊರಕಿತು. ಅದೇ ವರುಷದಲ್ಲಿ "ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ" ಎಂಬ ಸಂಸ್ಥೆ ಸಿನೆಮಾ ಮಾಧ್ಯಮದ "ಹಾಡಿನ ಸಾಹಿತ್ಯ" ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವವರಿಗೆ ಕೊಡುವ "ಚಾಣಕ್ಯ ಪ್ರಶಸ್ತಿ"ಯೂ ಶ್ರೀ ಕಾಯ್ಕಿಣಿಯವರಿಗೆ ದೊರಕಿತು. ಅವರ ಬಹು ಪ್ರಸಿದ್ಧ "ಅಮೃತ ಬಳ್ಳಿ ಕಷಾಯ" ಕಥಾ ಸಂಗ್ರಹವೂ ಆಂಗ್ಲ ಭಾಷೆಗೆ ಅನುವಾದಗೊಂಡು " dots and lines" ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಸಧ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ಅವರು ಬರೆದ ಲಾವಣಿ ಧಾಟಿಯ ಹಾಡುಗಳ ಸಂಗೀತ ಸಂಗ್ರಹಗಳ ಶ್ರವಣಸಂಚಿಕೆ( ಮ್ಯೂಸಿಕ್ ಆಲ್ಬ್ಂ) ಬಿಡುಗಡೆಯಾಗಲಿದೆ. ಹೀಗೆ ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ ಮತ್ತು ಸಂಭಾಷಣೆಗಾರನಾಗಿ, ಅಂಕಣಕಾರನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಕನ್ನಡಿಗರ(ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ)ಅಚ್ಚುಮೆಚ್ಚಿನ ಲೇಖಕನಾಗಿ ಎಲ್ಲೆಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿರುವರು ಶ್ರೀ ಜಯಂತ ಕಾಯ್ಕಿಣಿಯವರು.