ಓ ಲಂಡನ್, ವಾಹ್ ಲಂಡನ್

ಓ ಲಂಡನ್, ವಾಹ್ ಲಂಡನ್

ಬರಹ

www.anilkumarha.com

"ದಯವಿಟ್ಟು ಇಲ್ಲಿ ಸ್ವಲ್ಪ ಬಸ್ ನಿಲ್ಲಿಸಿ"

"ಇಲ್ಲ ಮೇಡಂ. ಇಲ್ಲಿ ನಿಲ್ಲಿಸುವಂತಿಲ್ಲ. ಆಗಲೇ ಅಲ್ಲೊಂದು ಸ್ಟಾಪಿನ ಬಳಿ ನಿಲ್ಲಿಸಿದ್ದೆ. ನೀವು ನಿದ್ರಿಸುತ್ತಿದ್ದಿರಿ"

"ದಯವಿಟ್ಟು ನಿಲ್ಲಿಸಿ. ಇಲ್ಲಿ ನನ್ನ ತಾಯಿ ಕಾಯುತ್ತಿದ್ದಾಳೆ. ಕೊನೆಯ ಸ್ಟಾಪ್ ವಿಕ್ಟೋರಿಯದಲ್ಲಿ ಇಳಿದರೆ ಇಲ್ಲಿಗೆ ವಾಪಸು ಬರಲು ನನ್ನಲ್ಲಿ ಹಣವೂ ಇಲ್ಲ"

"ಕ್ಷಮಿಸಿ ಮೇಡಂ. ನಾನು ನಿಲ್ಲಿಸಲಾರೆ"

"ಆಹಾ ಬಿಳಿಯಳೊಬ್ಬಳು ಹೀಗೆ ಗೋಗರೆದಿದ್ದರೆ ಕೂಡಲೇ ಮಾನವೀಯತೆಯ ಹೆಸರಿನಲ್ಲಿ ಗಾಡಿ ನಿಲ್ಲಿಸಿಬಿಟ್ಟಿರುತ್ತಿದ್ದಿರಿ. ನಾನು ಕರಿಯಳು. ಅದಕ್ಕೆ ನನ್ನ ಮೇಲೆ ಕರುಣೆಯಿಲ್ಲ. ನೀವೆಲ್ಲ ವರ್ಣದ್ವೇಷಿಗಳು, ರೇಸಿಸ್ಟ್‌ಗಳು"

 "ಹೀಗೆ ಹೇಳಿದ ತಕ್ಷಣ, ಈ ಕಾರಣದಿಂದ ನಾನು ಬಸ್ಸನ್ನು ನಿಲ್ಲಿಸಿಬಿಡುತ್ತೇನೆಂದುಕೊಂಡರೆ ಅದು ತಪ್ಪು ಕಲ್ಪನೆ ಮೇಡಂ"..

"ಹಲೋ ಪೋಲಿಸ್ ಸ್ಟೇಷನ್ನ? ಇಲ್ಲೊಬ್ಬ ಚೈನಮ್ಯಾನ್' ನನ್ನನ್ನು ಕರಿಯನೆಂದು ಕರೆದು ವರ್ಣದ್ವೇಷ ಮಾಡುತ್ತಿದ್ದಾನೆ"

"ನೀವೇ ವರ್ಣದ್ವೇಷವನ್ನು ರೆಡ್‌ಹ್ಯಾಂಡಾಗಿ ಮಾಡುತ್ತಿದ್ದೀರಲ್ಲ. ಆತನನ್ನು ಚೈನಮನ್ ಎಂದು ನೀವೇ ಕರೆದಿದ್ದೀರಲ್ಲ?"  ಲಂಡನ್ ಯಾರಿಗೂ ಸೇರದ, ಎಲ್ಲರಿಗೂ ಸೇರಿದ ವಲಸಿಗರ ನಗರ. ಇನ್ನೈದು ವರ್ಷಗಳಲ್ಲಿ ಅಲ್ಲಿ ಶುದ್ಧ ಬ್ರಿಟಿಷರನ್ನು ಹುಡುಕಬೇಕಾದರೆ ಸ್ಕಾಟ್‌ಲೆಂಡಿನ ಶರ್ಲಾಕ್ ಹೋಮ್ಸನೇ ಹಾಗೆ ಮಾಡಬೇಕಾಗುತ್ತದೆ. ಈ ನಗರದ ಬೀದಿಗಳಲ್ಲಿ ಜನ ನೂರಇಪ್ಪತ್ತು ಭಾಷೆ ಮಾತನಾಡುತ್ತಾರೆ, ಇಂಗ್ಲಿಷ್ ಹಾಗೂ ಕನ್ನಡವನ್ನು ಹೊರತುಪಡಿಸಿ.

London Bridge

"ನ್ಯೂಯಾರ್ಕ್, ಟೋಕ್ಯೋ ನಂತರ ಅತಿ ಹೆಚ್ಚು ಹಣದ
ಲೇವಾದೇವಿ ನಡೆಯುವುದೂ ಅರ್ಧ ಕಿಲೋಮೀಟರ್ ಅಗಲವಿರುವ
ಲಂಡನ್ ಸೇತುವೆಯ ಅತ್ತಿತ್ತ ಇರುವ ನೂರಾರು ಕಟ್ಟಡಗಳಲ್ಲಿಯೇ"

ಜಗತ್ತಿನ ಎಲ್ಲ ದೇಶ ಖಂಡಗಳ, ಎಲ್ಲ ಬಣ್ಣಗಳ ಜನರನ್ನೂ ಒಂದೇ ಬಸ್, ಒಂದೇ ಹೋಟೆಲ್, ಒಂದೇ ರಸ್ತೆ ಅಥವ ಒಂದೇ ಥಿಯೇಟರಿನ ಒಳಗೆ ನೋಡಬಹುದಾದರೆ ಅದು--"ಒನ್ಲಿ ಹಿಯರ್". ನ್ಯೂಯಾರ್ಕ್ ನಗರಕ್ಕೂ ಆ ಭಾಗ್ಯವಿಲ್ಲ. ಜಗತ್ತಿನ ಅತಿ ಹೆಚ್ಚಿನ ಆರ್ಥಿಕ ಮೌಲ್ಯವಿರುವುದರಿಂದಲೇ ಇಲ್ಲಿ ಹಣ ಮಾಡಲು ಜನ ಬರುತ್ತಾರೆ, ಬದುಕಲಿಕ್ಕಲ್ಲ. ಇಲ್ಲಿನ ಪೌಂಡ್ ಎಷ್ಟು ಆಕರ್ಷಕವೋ ಇಲ್ಲಿನ ವರ್ಷಾದ್ಯಂತ ಮೋಡಕವಿದ, ಬಿಸಿಲುರಹಿತ ಹವಾಮಾನವು ಅಷ್ಟೇ ಅನಿಷ್ಠಕರವಾದುದು. ದಿನದ ಅತಿ ಹೆಚ್ಚು ಸಮಯ (ಹದಿನೆಂಟರಿಂದ ಇಪ್ಪತ್ತು ಗಂಟೆ ಕಾಲ) ಜನ ಕೆಲಸ ಮಾಡಲೂಬೇಕಾಗುತ್ತದೆ. ಟೋಕ್ಯೋ ನಂತರ ಅತಿ ಹೆಚ್ಚು ದುಬಾರಿ ನಗರವಿದು. ನ್ಯೂಯಾರ್ಕ್, ಟೋಕ್ಯೋ ನಂತರ ಅತಿ ಹೆಚ್ಚು ಹಣದ ಲೇವಾದೇವಿ ನಡೆಯುವುದೂ ಅರ್ಧ ಕಿಲೋಮೀಟರ್ ಅಗಲವಿರುವ ಲಂಡನ್ ಸೇತುವೆಯ ಅತ್ತಿತ್ತ ಇರುವ ನೂರಾರು ಕಟ್ಟಡಗಳಲ್ಲಿಯೇ. ಏಳುನೂರು ವರ್ಷಗಳಿಂದಲೂ ಜ್ಯೂ ಜನಾಂಗದವರು ಇಲ್ಲಿ ಎಲ್ಲ ರೀತಿಯ ವಿರೋಧಗಳ ನಡುವೆಯೂ ಇಲ್ಲಿ ಬಂದು ನೆಲೆಸಿದ್ದರೆ ವಿಯೆಟ್ನಾಮಿ ಜನರು ಕೇವಲ ಮೂರು ವರ್ಷಗಳ ಅಂತರದಲ್ಲಿ (೧೯೭೮ರಿಂದ ೮೧ರವರೆಗೆ) ಇಲ್ಲಿ ನೆಲೆಸಲು ಸ್ವಾಗತ ದೊರಕಿತ್ತು. ಲಂಡನ್ ಒಳಗಿನ ಚೈನ ಟೌನಿನಲ್ಲಿ ಇಂಗ್ಲೀಷ್ ಎರಡನೆ ಭಾಷೆ! ಭಾರತೀಯರು ಅತಿ ಸ್ವಚ್ಛತೆಗೆ ಹಾಗೂ ಸಮಯ ಪಾಲನೆ `ಮಾಡದಿರುವುದಕ್ಕೆ' ಹೆಸರುವಾಸಿಯಾದಂತೆ ಸುಂದರ, ಸ್ಪಷ್ಟ ಇಂಗ್ಲೀಷ್ ಉಚ್ಛಾರಣೆಗೂ ಪ್ರಸಿದ್ದರಿಲ್ಲಿ. ಕ್ಲಿಷ್ಟ ಇಂಗ್ಲೀಷ್ ಪದಗಳ ಉಚ್ಚಾರಣೆಯ ಟೆಲಿವಿಷನ್ ಸ್ಪ್ರರ್ಧೆಯೊಂದರಲ್ಲಿ (೨೦೦೪ ಅಕ್ಟೋಬರ್) ಭಾಗವಹಿಸಿದ್ದವರು ಒಂದು ಲಕ್ಷ ವಿದ್ಯಾರ್ಥಿಗಳು. ಈ ಕಠಿಣ ಸ್ಪರ್ಧೆಯ ಅಂತಿಮ ಸುತ್ತನ್ನು ತಲುಪಿದವರು ಇಬ್ಬರೇ. ಇಬ್ಬರೂ ಭಾರತೀಯ ಮೂಲದ ಬಾಲಕಿಯರು!

ಭಾರತದಿಂದ ಇಂಗ್ಲೆಂಡಿಗೆ ಹಿಂದಿರುಗುತ್ತಿದ್ದ ಬ್ರಿಟಿಷ್ ಸಂಸಾರಗಳಲ್ಲಿ ಕೆಲಸ ಮಾಡಲು, ಇನ್ನೂರು ವರ್ಷಗಳ ಹಿಂದೆ ಅವರೊಂದಿಗೆ ಹೋದವರು ಭಾರತೀಯರು. ಲಂಡನ್ ತಲುಪಿದ ನಂತರ ಅವರುಗಳು ಅಲ್ಲಿ ನೆಲೆಸಲಾಗದೆ ಹಿಂದಿರುಗಬೇಕಾಗಿ ಬಂದಿತು. ಅಲ್ಲಿಂದ ಹಿಂದಿರುಗುತ್ತಿದ್ದ ಭಾರತೀಯ ಸಂಸಾರಗಳು ಅಂತಹವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಶಕ್ತರಾಗದೇ ಇದ್ದ ಕಾರಣದಿಂದಾಗಿ `ಆಯಾ'ಗಳು ಅಲ್ಲಿಯೇ ಉಳಿದುಕೊಂಡರು. ಹಡಗುಗಳಲ್ಲಿ ಭಾರತೀಯ ಗಂಡು ಕೂಲಿಗಳನ್ನು ಬ್ರಿಟಿಷರು ಆಯ್ದುಕೊಳ್ಳಲು ಕಾರಣ ತಿಂಗಳುಗಟ್ಟಲೆ ಬಿಸಿಲನ್ನು ತಡೆಯಬಲ್ಲರೆಂಬ ಕಾರಣಕ್ಕೆ ಅವರೂ ಅಲ್ಲಿಯೇ ಉಳಿದುಕೊಂಡು ಈಸ್ಟ್ ಇಂಡಿಯ, ಸೌತಾಲ್, ಈಸ್ಟ್ ಹ್ಯಾಮ್ ಮತ್ತು ಟೂಟಿಂಗ್ ಎಂಬ ಗ್ರಾಮಗಳನ್ನು ಸೃಷ್ಟಿಸಿಕೊಂಡರು. ಆದ್ದರಿಂದ ಲಂಡನ್ ಒಂದು ನಗರವಲ್ಲ, ಅನೇಕ ಗ್ರಾಮಗಳ ಸಂಗ್ರಹ. ಗುಜರಾತಿಗಳು, ಬಾಂಗ್ಲಾದೇಶಿಗಳು ಹಾಗೂ ತಮಿಳರು ಅಲ್ಲಿ ಹೆಚ್ಚಾಗಿ ನೆಲೆಸಿರುವ ಭಾರತೀಯರು. ಸೌತಾಲಿನಲ್ಲಂತೂ ಮೈನಸ್ ಹನ್ನೆರೆಡು ಡಿಗ್ರಿ ಚಳಿಯಲ್ಲೂ ಭಾರತೀಯ ಹೆಂಗಸರು ಸೀರೆಯುಟ್ಟುಕೊಂಡು ಓಡಾಡುತ್ತಾರೆ, ಅಲ್ಲಿನ ಥಿಯೇಟರಿನಲ್ಲಿ ಭಾರತೀಯ ಸಿನೆಮವನ್ನು ನೋಡಲು!

Trafalgar Square
"ಟ್ರಾಫಲ್ಗರ್ ಸ್ಕ್ವೇರ್"

(ಆ) ಲಂಡನ್ನಿನಲ್ಲಿ ಪ್ರತಿ ಪ್ರಜೆಯೂ ಇತರೆ ನೂರಾರು ದೇಶಗಳ ಜನರ ವಿಚಿತ್ರ ಭಾಷೆ, ದೇಹ ಭಾಷೆ ಹಾಗೂ ನಡವಳಿಕೆಗಳನ್ನು ಎದುರಿಸಬೇಕಾಗುತ್ತದೆ. ನಿರಂತರವಾಗಿ ಅನ್ಯಜೀವಿಗಳೊಂದಿಗೆ ಬದುಕುವ ಶಾಪವಿದು. ಲಂಡನ್ನಿನಲ್ಲಿ ಅಲ್ಪಸಂಖ್ಯಾತರಾದ ಅಪ್ಪಟ ಬ್ರಿಟಿಷರಿಗೆ ಇದನ್ನು ಸಹಿಸಲಸಾಧ್ಯವೆನಿಸಿಬಿಟ್ಟಿದೆ. ಆದ್ದರಿಂದ ಅವರೆಲ್ಲ ಈ ರಾಜಧಾನಿ ತೊರೆದು ಹೊರಗಿನ ನಗರಗಳಲ್ಲಿ ನೆಲೆನಿಲ್ಲುತ್ತಿದ್ದಾರೆ. ಬರ್ಮುಂಡ್ಸೆ ಎಂಬ ಒಂದೆರೆಡು ಚದರ ಕಿಲೊಮೀಟರ್ ಜಾಗದಲ್ಲಿ ಮಾತ್ರ ಶುದ್ಧ ಬಿಳಿಯ ಬ್ರಿಟಿಷರಿದ್ದಾರೆ. ಅದರ ಪಕ್ಕದಲ್ಲೇ ಕಪ್ಪು ಆಫ್ರಿಕನ್ ಆಧಿಪತ್ಯದ ಎಲಿಫ್ಯಾಂಟ್ ಅಂಡ್ ಕ್ಯಾಸಲ್ ನಿಲ್ದಾಣ. ಚಾರ್ಲಿ ಚಾಪ್ಲಿನ್, ಮೈಕ್ ಟೈಸನ್ ಮುಂತಾದವರು ಹುಟ್ಟಿ ಬೆಳೆದ ಜಾಗವಿದು. ಬ್ರಿಟಿಷರು ತುಂಬ ಹೆದರುವುದು, ಎಚ್ಚರದಿಂದಿರುವುದು, ಮೆಚ್ಚುವುದು ಅಖಂಡ ಭಾರತೀಯರೆಂಬ `ಏಷ್ಯನ್ನರನ್ನೇ'! ಭಾರತ ವಿಭಜನೆಯ ಮುನ್ನವೇ ವಲಸೆ ಬಂದಿದ್ದರಿಂದ ಏಷ್ಯನ್ನರೆಂದರೆ ಅಂದಿನ ಅಖಂಡ ಭಾರತೀಯರೆಂದೇ ಅರ್ಥ. ಪಾಕಿಸ್ತಾನೀಯರು ಹಾಗೂ ರುಮೇನಿಯದ ಜಿಪ್ಸಿಗಳನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಅನುಮಾನ. ಹಾಗೂ ರುಮೇನಿಯದ ಜಿಪ್ಸಿಗಳೆಲ್ಲ ನಂಬುವುದೇನೆಂದರೆ ತಾವೂ ಭಾರತೀಯ ಮೂಲದವರೆಂದು! ಬೆಂಗಳೂರಿಗಿಂತಲೂ ಮೂರು ಪಟ್ಟು ದೊಡ್ಡದಿರುವ ಲಂಡನ್ನಿನಲ್ಲಿ (ಅತಿ ಅಗಲವಿರುವೆಡೆ ಇದರ ಅಳತೆ ಮುವತ್ತು ಕಿಲೊಮೀಟರ್) ಬೆಂಗಳೂರಿನಷ್ಟೇ ಜನ (೮೦ ಲಕ್ಷ). ವಲಸೆ ಇಲ್ಲಿಗೆ ಎರಡು ಸಾವಿರ ವರ್ಷದಷ್ಟು ಹಿಂದಿನದು. ೫೦ನೇ ಕ್ರಿ.ಶದಲ್ಲಿ, ಇಂಗ್ಲಿಷ್ ಎಂಬ ಭಾಷೆ ಇಂಗ್ಲೆಂಡಿನಲ್ಲಿ ಹುಟ್ಟುವ ಮೊದಲು, ಲಂಡೇನಿಯಮ್ ರೋಮ್ ರಾಜ್ಯವಾಗಿತ್ತು. ಆಗಲೇ ಇಲ್ಲಿನ ಜನ ಸುಮಾರು ನಲ್ವತ್ತು ಭಾಷೆ ಮಾತನಾಡುತ್ತಿದ್ದರು. ಈ ಸಂಖ್ಯೆ ಬೆಂಗಳೂರಿನ ಬೀದಿಗಳಲ್ಲಿ ಇಂದು ಮಾತನಾಡುವ ಸಂಖ್ಯೆಗೆ ಸಮನಾಗಿತ್ತು! ಆದರೂ, ಎರಡು ಸಾವಿರ ವರ್ಷಗಳ ನಂತರವೂ, ಲಂಡನ್ನಿನ ಉತ್ತರಕ್ಕೆ ಲೀಡ್ಸ್‌ನಲ್ಲಿ, ವರ್ಣದ್ವೆಷ ಎದ್ದು ಕಾಣುವ ಹಾಗೆ ಉಳಿದುಕೊಂಡುಬಿಟ್ಟಿದೆ. "ಅಲ್ಲಿಗೆ ಹೋಗಬೇಡಿ", ಎಂದು ಬ್ರಿಟಿಷ್ ಗೆಳೆಯರೇ ಪ್ರವಾಸದ ಟಿಪ್ಸ್ ನೀಡುತ್ತಾರೆ. ಉಳಿದೆಡೆ ವರ್ಣದ್ವೇಷ ಸುಲಭವಾಗಿ ಗೊತ್ತಾಗುವುದಿಲ್ಲವಷ್ಟೇ.

ವಲಸೆಯ ಸಮಸ್ಯೆ ಇಂಗ್ಲೀಷ್ ಭಾಷೆಯ, ಸಂಸ್ಕೃತಿಯ ಜೀವನಾಡಿ. ಲಂಡನ್ ಸೇತುವೆಯ ಸಮೀಪ ಹಳೆಯ ಮುಖ್ಯ ಸ್ಮಾರಕ ಸೇಂಟ್ ಪಾಲ್ಸ್ ಕ್ಯಾಥಡ್ರಲ್, ಈಗ ಈ ರಾಜಧಾನಿಯ ಹೃದಯ ಭಾಗದಲ್ಲಿರುವುದಲ್ಲದೆ ಅದರ ಹೃದಯವೇ ಆಗಿಬಿಟ್ಟಿದೆ. ೧೬೬೬ರಲ್ಲಿ ಹತ್ತು ದಿನ ಈ ನಗರ ಅಕ್ಷರಶ: ಹೊತ್ತಿ ಉರಿದಾಗ ಒಂದು ಚೂರೂ ಊನಗೊಳ್ಳದೆ ಉಳಿದುಕೊಂಡ ಪ್ರತೀತಿ ಇದರದ್ದು. ಇದರ ಎದಿರು ಸಾವಿರಗಟ್ಟಲೆ ಬೈಬಲ್ ಕಾಪಿಗಳನ್ನೊಮ್ಮೆ ಸುಟ್ಟುಹಾಕಲಾಗಿತ್ತು. ಕಾರಣ ಅವೆಲ್ಲ ಇಂಗ್ಲಿಷಿನಲ್ಲಿದ್ದವೆಂದು! ಫ್ರೆಂಚ್, ಸ್ಪಾನಿಷ್, ಜರ್ಮನ್, ಇಟಾಲಿಯನ್, ಸಂಸ್ಕೃತ ಇತ್ಯಾದಿ ಭಾಷೆಗಳು ಸೇರಿ ರೂಪುಗೊಂಡದ್ದು ಇಂಗ್ಲೀಷ್ ಭಾಷೆ! ಇಂದು ಬ್ರಿಟಿಷರಿಗೆ ಅಪ್ಯಾಯಮಾನವಾದ, ರಾಷ್ಟ್ರೀಯ ಊಟವೇ ಆಗಿಹೋಗಿರುವ ಒಂದು ಪದವೆಂದರೆ ಅದು ತಮಿಳರ `ಕರಿ'! ಸ್ವತ: ಇಂಗ್ಲೀಷ್ ಒಂದಾನೊಂದು ಕಾಲದಲ್ಲಿ ಇಂಗ್ಲೆಂಡಿಗೆ ವಲಸೆ ಬಂದಿದ್ದು ಒಂದು `ಇಂಟರೆಸ್ಟಿಂಗ್' ವಿಷಯ. "ಇಟ್ ಇದು ಬಟ್ ಆದ್ರೆ ವಾಟ್ ಏನು?" ಎಂದು ಇಂಗ್ಲೀಷ್-ಕನ್ನಡ ವಾಕ್ಯದ ಇಂಗ್ಲೀಷ್ ಪದಗಳಂತೆ ಇಂದಿನ ಇಂಗ್ಲೀಷ್‌ನ ಶೇಕಡ ೭೫ ಭಾಗವು ಫ್ರೆಂಚ್ ಭಾಷೆಗೆ ಸೇರಿದ್ದು!

Hampstead

"ಹ್ಯಾಂಪ್‌ಸ್ಟೆಡ್"

(ಇ) ಪ್ಯಾರಿಸ್ ನಗರ ಮಧ್ಯವಯಸ್ಕ ವಿವಾಹಿತ ಸುಂದರಿಯಂತಾದರೆ ಲಂಡನ್ ತನಗಿಂತ ದೊಡ್ಡವಯಸ್ಸಿನ ಹೆಂಗಸಿನ ಪ್ರೀತಿಯ ಬಲೆಗೆ ಸಿಕ್ಕಿಬಿದ್ದ ಪಡ್ಡೆ ಹುಡುಗನಂತೆ" ಎಂದಿದ್ದಾನೆ ಖ್ಯಾತ ಲೇಖಕ ಜಾನ್ ಬರ್ಜರ್. ಆದರೆ ಈ ನಗರದ ಬಗ್ಗೆ ೨೭ ಸಾವಿರ ಪುಸ್ತಕಗಳು ಪ್ರಕಟವಾಗಿದ್ದರೂ ಇದನ್ನು ವರ್ಣಿಸುವ ಅತ್ಯುತ್ತಮ ವಾಕ್ಯ ಸಾಮ್ಯುಯಲ್ ಜಾಕ್‌ಸನ್ನನದ್ದು. "ಲಂಡನ್ ನಗರದ ಸಹವಾಸದಿಂದ ಯಾರಿಗಾದರೂ ಸಾಕಾದರೆ ಅವರಿಗೆ ಜೀವನವೇ ಸಾಕಾದಂತೆ" ಎಂಬುದೇ ಆ ವಾಕ್ಯ. ಆದರೆ ಬದುಕೇ ಸಾಕಾಗಿ ಈ ನಗರಕ್ಕೆ ಬರುವವರ ಕಥೆ ಏನು? ೬೦ ವರ್ಷ ದಾಟಿದ ಬಾಂಗ್ಲಾದೇಶೀಯರು ಪ್ರತಿ ವರ್ಷ ಇಲ್ಲಿಗೆ ಹೊಟ್ಟೆಪಾಡಿಗಾಗಿ ಬರುತ್ತಿರುವುದು ಒಂದು ಸಂಪ್ರದಾಯವೇ ಆಗಿಬಿಟ್ಟಿದೆ. "ಸಂಜೆ ನಾವು ಕೆಲಸದ ನಂತರ ಪಾರ್ಟಿಯಿಂದ ಮನೆಗೆ ವಿಶ್ರಮಿಸಲು ಮರಳುವಾಗ ಬಾಂಗ್ಲಾದೇಶೀಯನೊಬ್ಬ ಅಂದಿನ ನಾಲ್ಕನೇ ಪಾಳಿಗೋಸ್ಕರ ಹೊರಟಿರುತ್ತಾನೆ," ಎನ್ನುತ್ತಾನೆ ಪ್ರವಾಸ ಕಥನಕಾರ ಪೀಟರ್ ಬಿಡ್ಲ್‌ಕೂಂಬ್. ಈತನ ಉತ್ಪ್ರೇಕ್ಷೆ ನಿಜಕ್ಕೆ ಅದೆಷ್ಟು ಹತ್ತಿರ! ಲಂಡನ್ ವಲಸೆಯನ್ನು ಸಂಗ್ರಹ ರೂಪದಲ್ಲಿ ಹಿಡಿದಿರಿಸುವ ಒಂದು ಸಂಸ್ಥೆಯೆಂದರೆ ಅಲ್ಲಿನ ಸಾರ್ವಜನಿಕ ಗ್ರಂಥಾಲಯಗಳು. ಅಲ್ಲಿನ ಪ್ರತಿಯೊಂದು ಲೈಬ್ರರಿಯೂ ಒಂದರ್ಥದಲ್ಲಿ ನಿರಾಶ್ರಿತ ತಾಣವೇ. ಕೆಲಸ ಇಲ್ಲದೆ, ಕಳೆದುಕೊಂಡು, ಮುಗಿಸಿ, ಹುಡುಕುತ್ತಿರುವವರೆಲ್ಲ ಇಲ್ಲಿರುತ್ತಾರೆ. ಹೊರಗೆ ಒಂದು ಪೌಂಡ್ ಕೊಟ್ಟು ಇಂಟರ್‌ನೆಟ್ ಬಳಸಲಾರದವರು ಇಲ್ಲಿ ಬಿಟ್ಟಿಯಾಗಿ ಹಾಗೆ ಮಾಡಬಹುದು. ಆದ್ದರಿಂದ ಪುಸ್ತಕ ಓದುವವರು ಕಡಿಮೆ ಇದ್ದರೂ ಲೈಬ್ರರಿಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ! ಹೊರಗಿನ ಚಳಿ, ಮಂಜು, ಮಳೆ ಅತಿಯಾದಾಗಲೂ ಇಂತಹವರು ಒಳಗೇ! ಮತ್ತು ನೈಸರ್ಗಿಕ ವಿಕೋಪವೆನ್ನುವುದು ಇಲ್ಲೊಂದು ನಿತ್ಯಕರ್ಮ. ಪ್ರತಿ ರಸ್ತೆಯ ಇತಿಹಾಸ, ಅಲ್ಲಿ ನೆಲೆಸಿರುವ ಯಾವನೇ ಪರದೇಶೀಯನ ಇಂಗ್ಲೆಂಡಿನ ವಂಶವೃಕ್ಷ ಇತ್ಯಾದಿ ಸ್ಥಳೀಯ ಇತಿಹಾಸವನ್ನೆಲ್ಲ ಇಲ್ಲಿ ಅತ್ಯುತ್ತಮವಾಗಿ ದಾಖಲಿಸಲಾಗಿದೆ. ದಿನಕ್ಕೆ ಐದು ಹಸ್ತಪ್ರತಿಯಂತೆ ಅಧ್ಯಯನ ಮಾಡಿದರೂ ಇಡೀ ಬ್ರಿಟಿಷ್ ಗ್ರಂಥಾಲಯವನ್ನು ಅಧ್ಯಯನ ಮಾಡಲು ವ್ಯಕ್ತಿಯೊಬ್ಬನಿಗೆ ಏನಿಲ್ಲವೆಂದರೂ ೮೦ ಸಾವಿರ ವರ್ಷಗಳು ಬೇಕಾಗುತ್ತದೆ. ಲಂಡನ್ ಕುರಿತು ಸಾಹಿತ್ಯ ಒಬ್ಬನೇ ಜೀವಮಾನವಿಡೀ ಓದಲಸಾಧ್ಯ. "ಏಕೆಂದರೆ ಈ ನಗರವನ್ನು ಕುರಿತಂತೆ ಇಪ್ಪತ್ತೇಳು ಸಾವಿರ ಪುಸ್ತಕಗಳು ಹೊರಬಂದಿವೆ," ಎಂದು ತನ್ನ ಪುಸ್ತಕ `ಲಂಡನ್ ಬಯಾಗ್ರಫಿ' ಯಲ್ಲಿ ಪೀಟರ್ ಆಕ್ರಾಯ್ಡ್ ತಿಳಿಸುತ್ತಾನೆ. ನನಗೆ ಆಶ್ಚರ್ಯವೆನಿಸಿದ್ದು ಇಪ್ಪತ್ತೇಳು ಸಾವಿರದ ಒಂದನೇ ಪುಸ್ತಕವನ್ನು ಬರೆಯಲು ಆಕ್ರಾಯ್ಡ್‌ನಿಗೆ ಹೇಗೆ ಧೈರ್ಯ ಬಂದಿತೆಂದು. ಲಂಡನ್ ಬಗ್ಗೆ ಇಂದು ಅತ್ಯಂತ ಜನಪ್ರಿಯವಾಗಿರುವ ಪುಸ್ತಕಗಳಲ್ಲಿ ಇದೂ ಒಂದು! ಇತ್ತೀಚೆಗೆ ವಾಸ್ತುಕಲೆಯ ವಿದ್ಯಾರ್ಥಿಗಳು ವಾಸ್ತು ನಿರ್ಮಾಣದ ದೃಷ್ಟಿಯಿಂದ ಬೆಂಗಳೂರನ್ನು ಅಧ್ಯಯನ ಮಾಡಬೇಕಾಗಿ ಬಂದಾಗ ಒಂದೇ ಒಂದು ಅಧ್ಯಯನಪೂರ್ಣ ಕೃತಿ ನಮ್ಮ ಐ.ಟಿ ನಗರದ ಬಗ್ಗೆ ಇಲ್ಲ ಎಂದು ಅಧ್ಯಯನದಿಂದ ತಿಳಿದುಬಂತು! ಲಂಡನ್ ಲೈಬ್ರರಿಗಳಲ್ಲಿ ಇಂಗ್ಲೀಷ್ ನಂತರ ಅತಿಹೆಚ್ಚಿನ ಪುಸ್ತಕಗಳಿರುವುದು ಬೆಂಗಾಲಿ ಹಾಗೂ ಚೀನಿ ಭಾಷೆಯದೇ. ಇಂಗ್ಲೆಂಡಿನದೇ ಆದ ಬೆಂಗಾಲಿ ಭಾಷೆಯ ದೈನಿಕ `ಏಷ್ಯನ್ ಪತ್ರಿಕೆಗೆ' ಎರಡು ಪೌಂಡ್ (೧೬೦ ರೂಪಾಯಿಗಳು). ಸಂಖ್ಯಾದೃಷ್ಟಿಯಿಂದ ಗುಜರಾತಿಗಳೇ ಹೆಚ್ಚಿದ್ದರೂ ಸಾಂಸ್ಕೃತಿಕ ನಿಟ್ಟಿನಿಂದ ಬೆಂಗಾಲಿಯದ್ದೇ ಹೆಚ್ಚುಗಾರಿಕೆ ಇಲ್ಲಿ!

(ಈ) National Gallery

"ನ್ಯಾಶನಲ್ ಗ್ಯಾಲರಿ, ಲಂಡನ್ "

ಲಂಡನ್ ಎಲ್ಲರಿಗೂ ಸೇರಿದ ವಲಸಿಗ ನಗರ, ಕೊಲ್ಲುವ ಚಳಿ ಹಾಗೂ ಉಗುರು ಬೆಚ್ಚಗಾದರೂ ಮಾಡದ ಸೂರ್ಯನ ಅನುಪಸ್ಥಿತಿ--ಇವೆರಡೂ ಇಲ್ಲಿ ನಿತ್ಯ ನಿರಂತರವಾಗಿದ್ದು ಕರಿ, ಬಿಳಿಯೆನ್ನದೆ ಎಲ್ಲರನ್ನೂ ಕಾಡುತ್ತದೆ. ಐದಾರು ಪದರ ಬಟ್ಟೆ ಹಾಕಿಕೊಳ್ಳಬೇಕಾದ ಚಳಿಯಲ್ಲಿ ಕಡಿಮೆ ಬಟ್ಟೆ ತೊಟ್ಟವರೆಂದರೆ ಮೂರ್ನಾಲ್ಕು ಪದರ ತೊಟ್ಟ ಸ್ಥಳೀಯರೇ. ಏಷ್ಯನ್ನರು, ಕರಿಯರು ತಲೆಮಾರುಗಳಿಂದ ಇಲ್ಲಿದ್ದರೂ ಚಳಿ ತಡೆಯಲಾರರು. ಅಂತಹವರಿಗೆ ಐವತ್ತು ವರ್ಷದ ನಂತರ ಆರ್ಥ್ರಿಟೀಸ್ ಪ್ರಕೃತಿದೇವನ ಗ್ಯಾರಂಟಿ ಕೊಡುಗೆ. ಹೆಚ್ಚು ಪದರ ಬಟ್ಟೆಗಳನ್ನು ಹೊದ್ದು ಅವರೆಲ್ಲ ಬೆದರುಬೊಂಬೆಗಳಂತೆ ಕಾಣುತ್ತಿರುತ್ತಾರೆ. ಬ್ರಿಟಿಷರು ಹಾಗೂ ಬ್ರಿಟಿಷರಲ್ಲದವರನ್ನು ಗುರ್ತು ಹಿಡಿವ ಸುಲಭ ಮಾರ್ಗವೂ ಒಂದಿದೆ. ಯಾರು ಕಡಿಮೆ ಬಟ್ಟೆ ತೊಟ್ಟಿರುತ್ತಾರೋ ಅವರೇ ನಿಜವಾದ ಬಿಳಿಯ ಬ್ರಿಟಿಷ್ `ಜಂಟಲ್‌ಮನ್' ಮತ್ತು `ಲೇಡೀಸ್'ಗಳು. ಭಾರತದಿಂದ ಇಂಗ್ಲೆಂಡಿಗೆ ಹೋದ ಭಾರತೀಯರಿಗೂ ಆಫ್ರಿಕಕ್ಕೆ ಒಂದೆರೆಡು ಶತಮಾನಗಳ ಹಿಂದೆ ಹೋಗಿ ಅಲ್ಲಿಂದ ಇಲ್ಲಿ ಬಂದು ನೆಲೆಸಿದವರಿಗೆ ಪರಸ್ಪರ ಪರಿಚಯವೇ ಇರುವುದಿಲ್ಲ. ರಾಜಾರಾಮ್ ಮೋಹನ್ ರಾಯ್ ೧೮೩೨ರಲ್ಲಿ ಬ್ರಿಸ್ಟೆಲ್ಲಿಗೆ ಹೋಗಿ, ನುಮೋನಿಯದಿಂದ ಅಲ್ಲಿಯೇ ಕೊನೆಯುಸಿರಿಳೆದರು. `ಅರ್ನೋಸ್ ವಿಲ್ಲಿ' ಎಂಬಲ್ಲಿ ಅವರ ಸಮಾಧಿಯೂ, ಊರು ಮಧ್ಯದ ಚೌಕದಲ್ಲಿ ಅವರದ್ದೊಂದು ಶಿಲ್ಪ ಹಾಗೂ ಅಲ್ಲಿನ ಮ್ಯೂಸಿಯಂನಲ್ಲಿ ಎರಡು ಪೈಂಟಿಂಗ್‌ಗಳಲ್ಲಿ ಅವರ ಭಾವಚಿತ್ರಗಳಿವೆ. ಪ್ರಸಿದ್ಧ ಭಾರತೀಯನೊಬ್ಬನ ಶಿಲ್ಪವನ್ನು ಅಲ್ಲಿ ಪ್ರತಿಷ್ಟಾಪಿಸಬೇಕೆಂದು ಅಲ್ಲಿನ ಸರ್ಕಾರ ನಿರ್ಧರಿಸಿದಾಗ ರಾಜರಾಮ್ ಹಾಗೂ ಗಾಂಧಿಯ ಅಭಿಮಾನಿಗಳ ನಡುವೆ (ಬೆಂಗಾಲಿಗಳು ಹಾಗೂ ಗುಜರಾತಿಗಳ ಮಧ್ಯೆ) ಭಾರಿ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಮರಣೋತ್ತರವಾಗಿ ಗಾಂಧಿ ಈ ವಿಷಯದಲ್ಲಿ ಸೋಲೊಪ್ಪಬೇಕಾಗಿ ಬಂತು. ಕರಿಯರು ಹಾಗೂ ಆಫ್ರಿಕನ್ ಭಾರತೀಯರು ತಮ್ಮ ವ್ಯಾವಹಾರಿಕ ಜಗಳವನ್ನು ಇಲ್ಲಿಯೂ ತಂದು ಇಡೀ ಇಂಗ್ಲೆಂಡಿನಾದ್ಯಂತ ಎಲ್ಲರಿಗೂ ಬಿಟ್ಟಿ ಮನರಂಜನೆಯಾಗಿ ಚೆಲ್ಲಾಡಿದ್ದಾರೆ. ಗುಜರಾತಿ ಹುಡುಗಿಯೊಬ್ಬಳು ಇಂಗ್ಲೀಷ್ ಹುಡುಗನೊಬ್ಬನೊಂದಿಗೆ ವಿವಾಹವಾಗದೆ ಬದುಕುತ್ತಿದ್ದಳು. ಇದೊಂದು ಡಬಲ್ ಅವಮಾನವೆಂದು ಭಾವಿಸಿದ ಆಕೆಯ ತಂದೆ ಅವರಿಬ್ಬರನ್ನೂ ಕೊಲ್ಲಿಸುವ ಸುಪಾರಿಗಾರರಿಗಾಗಿ ಹುಡುಕತೊಡಗಿದ. ಸ್ವದೇಶಿ ಸ್ನೇಹಿತನೊಬ್ಬ ಸುಪಾರಿ ಕೊಲೆಗಾರರನ್ನು ಸಂಪರ್ಕಿಸಿದ. ದುರದೃಷ್ಟವಶಾತ್ ಅವರು ಮಫ್ತಿಯಲ್ಲಿದ್ದ ಪೋಲೀಸಿನವರಾಗಿದ್ದರು! ಅಪ್ಪನಿಗೆ ಹನ್ನೆರೆಡು ವರ್ಷ ಹಾಗೂ ಸ್ನೇಹಿತನಿಗೆ ಹತ್ತು ವರ್ಷ, "ಅಟೆಂಪ್ಟ್ ಟು ಮರ್ಡರ್" ಜೈಲಾಯಿತು. ಕುಟುಂಬ ಪ್ರತಿಷ್ಠೆ ಎಂಬುದು ಹಳೆ ತಲೆ ಭಾರತೀಯರಲ್ಲಿ ಇನ್ನೂ ಏಳೇಳು ತಲೆಮಾರುಗಳ ಕಾಲ ಉಳಿದುಕೊಳ್ಳಲಿದೆ.

ಪೂಜಾಸ್ಥಳವೊಂದರಲ್ಲಿ ವ್ಯಭಿಚಾರವೊಂದು ನಡೆವ ದೃಶ್ಯವನ್ನು ತನ್ನ ನಾಟಕಕ್ಕೆ ಸೇರಿಸಿದ್ದರಿಂದ ಹರಯದ ಪಂಜಾಬಿ ನಾಟಕಕಾರ್ತಿ, ನಟಿ ತನ್ನ ಕುಲಭಾಂದವರಿಂದ ಜೀವರಕ್ಷಣೆಗಾಗಿ ಭೂಗತಳಾಗಬೇಕಾಯಿತು. ಜನವರಿ ೨೦೦೫ ಸುಮಾರಿಗೆ ಈ ಘಟನೆಯ ನಂತರ ಇನ್ನೂ ಆಕೆ ಜನರ ಮಧ್ಯೆ ಕಂಡುಬಂದಿಲ್ಲ. ಲಂಡನ್ ಮ್ಯೂಸಿಯಂ ಇಂತಹ ಇತಿಹಾಸಗಳನ್ನು ಆಮೂಲಾಗ್ರವಾಗಿ ಸಂಗ್ರಹಿಸಿದೆ. ಆದರೆ ಅದೆಷ್ಟು ಕರಾರುವಾಕ್ಕಾಗಿ ಅದರ ದಾಖಲು ಮಾಡುತ್ತಾರೆ ಎಂಬುದಕ್ಕೊಂದು ಉದಾಹರಣೆ. "೧೯೪೨ರ ಕಲ್ಕತ್ತದಲ್ಲೆ ಹಿಂದು ಮುಸ್ಲಿಂ ಗಲಭೆಯನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ಬಹಳಷ್ಟು ಪರದಾಡಬೇಕಾಯಿತು" ಎಂಬ ಹಿಂದುಮುಂದಿಲ್ಲದ ಸುದ್ದಿಯ ತುಣುಕನ್ನು ಗಲಭೆಯ ಫೋಟೋಗಳ ಸಮೇತ ಪ್ರದರ್ಶಿಸಿದ್ದಾರೆ. "ಅದನ್ನು ಸೃಷ್ಟಿಸಿದವರಾರು" ಎಂಬ ವಿವರಣೆಗೆ ಜಾಗ ಸಾಕಾಗುವುದಿಲ್ಲ ಪಾಪ, ಬ್ರಿಟಿಷರು! ಹಾಗಿದ್ದರೂ ಇಂಪೀರಿಯಲ್ ವಾರ್ ಮ್ಯೂಸಿಯಂ ಪ್ರಪಂಚದ ಎಲ್ಲೆಡೆಯ ಯುದ್ಧಗಳು ಹಾಗೂ ಎರಡು ಪ್ರಪಂಚ-ಯುದ್ಧಗಳ ದಾಖಲೆಗಳನ್ನು ಸಾಧ್ಯಂತವಾಗಿಯೇ ಸಂಗ್ರಹಿಸಿದೆ. ಕಣ್ಣೊರೆಸಿಕೊಳ್ಳದೆ ಜನ ಇದರಿಂದ ಈಚೆ ಬರುವುದನ್ನು ನೋಡುವುದೇ ಒಂದು ದು:ಖಕರ ಸನ್ನಿವೇಶ. ಬೊಸ್ನಿಯ, ನಾಜಿ, ರುವಾಂಡ, ಇರಾನ್-ಇರಾಕ್ ಇತ್ಯಾದಿ ಇಲ್ಲ ದೇಶಗಳ ಯುದ್ಧ ದಾಖಲೆಗಳು, ನೇರ ಫೋಟೋ-ವಿಡಿಯೋಗಳು ಇಲ್ಲಿವೆ. ಇತ್ತೀಚಿನ ಟೋನಿ ಬ್ಲೇರನ ಮೂರನೇ ಗೆಲುವಿನ ಸಮಯಕ್ಕೆ ಒಟ್ಟು ಐವರು ಭಾರತೀಯರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಮತ್ತು ಇತ್ತೀಚಿನ ಶುದ್ಧ ಹಾಗೂ ಬೆರಕೆಯ ಬ್ರಿಟಿಷರ ಕೂಗು ವಲಸಿಗರ ವಿರುದ್ಧ. ಆಶ್ಚರ್ಯವೆಂದರೆ ಈ ಪ್ರತಿಭಟನೆಯಲ್ಲಿ ಮುಖ್ಯ ಧ್ವನಿ ವಲಸಿಗರಾಗಿ ಹೋಗಿ ಈಗ ಬ್ರಿಟಿಷರಾಗಿಹೋದವರದ್ದು! ಮುಸ್ಲಿಂ ಬಾಲಕಿಯೊಬ್ಬಳು ಬುರ್ಕ ಧರಿಸಬಾರದೆಂದು ಆಕೆಯ ಶಾಲೆಯ ಮುಖ್ಯಸ್ಥರು ನಿಯಮ ಮಾಡಿದರು. ನ್ಯಾಯಾಲಯವು ಬಾಲಕಿಯ ಪರವಾಗಿ ತೀರ್ಪನ್ನು ನೀಡಿತು. ಹುಡುಗಿ ಶಾಲೆಯನ್ನು ಬದಲಿಸಿದಳು. ಇದನ್ನು ಕುರಿತ ಟೆಲಿವಿಷನ್ ಲೈವ್ ಶೋನಲ್ಲಿ ಪ್ರೇಕ್ಷಕರ ಮಧ್ಯೆ ಬಿಳಿಯ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆ ಇದು, "ನನ್ನ ತಮ್ಮ ಜಾಗಿಂಗ್ ಸೂಟಿನಲ್ಲಿ ಶಾಲೆಗೆ ಹೋಗಬೇಕೆಂದು ಹಠ ಹಿಡಿದಿದ್ದಾನೆ. ಇದಕ್ಕೆ ಆತನ ಶಾಲೆ ಮತ್ತು ನ್ಯಾಯಾಲಯ ಒಪ್ಪುತ್ತದೆಯೆ?" "ಈಕೆ ತಮಾಷೆ ಮಾಡುತ್ತಿದ್ದಾಳಷ್ಟೇ", ಎಂದು ಸಮಜಾಯಿಷಿ ನೀಡಿದ ತಬ್ಬಿಬ್ಬಾಗಿದ್ದ ಕಾರ್ಯಕ್ರಮದ ಆಯೋಜಕ. ಆದರೆ ಕಪ್ಪು-ಬಿಳುಪಿನ ಮಧ್ಯದ ಬೂದುವರ್ಣದಲ್ಲಿನ ಸತ್ಯವು ಅನೇಕ ಪದರಗಳಾಗಿ ಹಂಚಿ ಹರಡಿ ಹೋಗಿರುವುದು ಲಂಡನ್ನಿನಲ್ಲಿ ಸ್ಪಷ್ಟ.

Albert Hall

"ಯುರೋಪ್-ಬ್ರಿಟಿಷ್ ಕಲಾಕೃತಿಗಳೆಲ್ಲ ಭದ್ರ ಕೋಣೆಗಳಲ್ಲಿ ಪ್ರದರ್ಶಿತವಾಗಿವೆ"

ಇಂಗ್ಲೆಂಡ್ ಎಂದೂ ಒಂದು ಸ್ವಯಂ-ಪೂರ್ಣ ದೇಶವಾಗಿರಲಿಲ್ಲ. ಐನೂರು ವರ್ಷ ಇತರ ದೇಶಗಳನ್ನು ಆಕ್ರಮಿಸಿತ್ತು ಈ "ಸೂರ್ಯ ಮುಳುಗದ" ಸಾಮ್ರಾಜ್ಯ. ಜಗತ್ತಿನ ಕಾಲಮಾನವನ್ನು ಒಂದೇ ಯೋಜನೆಯಲ್ಲಿ ಹಿಡಿದಿರಿಸಿ `ಕಾಲ'ವೆಂಬ ಕಲ್ಪನೆಯ ಮೂಲವು ಪೂರ್ವ ಲಂಡನ್ನಿನಲ್ಲಿರುವ ಗ್ರೀನಿಚ್ ಕಾಲಮಾನ ಮ್ಯೂಸಿಯಂ. ಆದರೆ ಇಂದು ಈ ದೇಶ ಶಾಪಗ್ರಸ್ತವಾಗಿದೆ. ಯಾವ್ಯಾವ ದೇಶಗಳಲ್ಲಿ ಇವರುಗಳು ಭೂಸ್ವಾಧೀನ ಮಾಡಿಕೊಂಡಿದ್ದರೋ ಆ ದೇಶೀಯರೆಲ್ಲ ಈಗ ಇಲ್ಲಿಯೇ ಬಂದು ನೆಲೆಸುತ್ತಿದ್ದಾರೆ. ಈ ಸಮಾಜದ ಮನೋಭಾವವು ಇದರ ಸಾಂಸ್ಕೃತಿಕ ಕೇಂದ್ರಗಳಲ್ಲೂ ವೇಧ್ಯ. ಉದಾಹರಣೆಗೆ ಇಲ್ಲಿನ ಜಗತ್ಪ್ರಸಿದ್ದ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ ಅನ್ನು ತೆಗೆದುಕೊಳ್ಳಿ. ಯುರೋಪ್-ಬ್ರಿಟಿಷ್ ಕಲಾಕೃತಿಗಳೆಲ್ಲ ಭದ್ರ ಕೋಣೆಗಳಲ್ಲಿ ಪ್ರದರ್ಶಿತವಾಗಿವೆ. ಇತರೆ ಚೀನಿ, ಜಪಾನ್, ಭಾರತೀಯ ಇತ್ಯಾದಿ ತೃತೀಯ ದೇಶಗಳೆಂದು ಕರೆಸಿಕೊಳ್ಳೂವ ದೇಶಗಳ ಕಲಾಕೃತಿಗಳೆಲ್ಲ ಕಾರಿಡಾರ್‌ಗಳಲ್ಲಿ ಪ್ರದರ್ಶಿತ. ವಿಶೇಷ ಪಾರ್ಟಿಗಳು, ಸಂಗೀತ, ಕಛೇರಿಗಳೆಲ್ಲ ಕಾರಿಡಾರ್‌ಗಳಲ್ಲೇ ನಡೆಯುತ್ತವೆ -- ಯುರೋಪಿಯನ್ ಅಲ್ಲದೆ ಕಲಾಕೃತಿಗಳ ಸುತ್ತ, ಅವುಗಳ ಭದ್ರತೆಯ ಆತಂಕದಲ್ಲೇ! ಬಲ್ಗೇರಿಯ, ರುಮೇನಿಯದ ಕರಕುಶಲ ಕಲೆಗಳಿರುವ ಕೋಣೆಗಳ ದೀಪಗಳನ್ನೇ ಆರಿಸಲಾಗಿತ್ತು. "ಯಾರು ನೋಡ್ತಾರೆ ಇವನ್ನೆಲ್ಲ", ಎಂದಿದ್ದ ಒಬ್ಬ ಕಾವಲುಗಾರ, ತಾನೇ ಅದರ ಕ್ಯುರೇಟರ್ ಹಾಗೂ ತನ್ನದೇ ನಿರ್ಧಾರ ಎಂಬಂತೆ. ದೀಪಾವಳಿ, ದಸರ ಇತ್ಯಾದಿ ಹಬ್ಬಗಳನ್ನು ಟ್ರಫಾಲ್‌ಗರ್ ಚೌಕದಲ್ಲಿ ಧಾಮ್‌ಧೂಮ್ ಎಂದು ಆಚರಿಸುವ ಏಷ್ಯನ್ನರು ಇಂತಹ ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ಕಾಣುವುದೇ ಅಪರೂಪ. ಮೊದಲ ಮಹಡಿಯಲ್ಲಿ ಕಲಾಗ್ಯಾಲರಿಗಳನ್ನು ನೋಡಿಕೊಳ್ಳುವವರೆಲ್ಲ ಬಿಳಿಯರು. ಕೆಳಗಿನ ಕೆಫೆಯಲ್ಲಿ ಲೋಟ ತೊಳೆಯುವವರೆಲ್ಲ ಕರಿಯರು! ಇದೊಂದು ರೀತಿಯ "ಸಾಂಸ್ಕೃತಿಕ ವೈಟ್‌ವಾಷ್" ಎಂದು ಖಡಾಖಂಡಿತವಾಗಿ ಖಂಡಿಸುತ್ತಾನೆ `ಕರಿಯ-ಬ್ರಿಟಿಷ್ ಪರ' (ಅಲ್ಲಿನ ದಲಿತ) ಸಾಂಸ್ಕೃತಿಕ ಚಳುವಳಿಕಾರ ಎಡ್ಡಿ ಚೇಂಬರ್ಸ್ ("ಅನೊಟೇಷನ್ಸ್" ಎಂಬ ತನ್ನ ಪುಸ್ತಕದಲ್ಲಿ). ಬ್ರಿಸ್ಟಲ್ ನಗರದಲ್ಲಿ ನೆಲೆಸಿರುವ ಎಡ್ಡಿ ಎಂಬತ್ತರ ದಶಕದಲ್ಲಿ ಲಂಡನ್ನಿನ ಕಪ್ಪು ಜನಾಂಗದ ಸಾಂಸ್ಕೃತಿಕ 'ಅವಕಾಶಕ್ಕಾಗಿ' ಬೀದಿಗಿಳಿದು ಹೋರಾಟ ಮಾಡಿದ್ದ. ಒಂದು ರಾಜಧಾನಿಯಲ್ಲಿ ಅಲ್ಲಿನ ಭಾಷೆಯನ್ನೇ ವ್ಯವಹಾರಕ್ಕಾಗಿ ಅಲ್ಲಿನ ಮೈನಾರಿಟಿಯಾದ ವಲಸಿಗರು ಬಳಸಬೇಕಾಗಿ ಬಂದಾಗ ಅದಕ್ಕೆ ನೂರೆಂಟು ಭಾಷಾ ಸ್ಪರ್ಧೆ. "ಎಂಟು ಸಾವಿರ ಕಿಲೊಮೀಟರ್ ದೂರವಿರುವ ನೀವು ಇಂಗ್ಲೀಷನ್ನು ಇಷ್ಟು ಚೆನ್ನಾಗಿ ಹೇಗೆ ಮಾತನಾಡುತ್ತೀರ?" ಎಂದು ಇಂಗ್ಲೀಷ್ ಭಾಷೆಯ ಇತಿಹಾಸವನ್ನು ಬರೆದ ಮೆಲ್ವಿನ್ ಬ್ರಾಗ್ ಎಂಬಾತ ಒಬ್ಬ ಭಾರತೀಯನನ್ನು, ಇತಿಹಾಸವನ್ನು ಮರೆತು, ಕೇಳಿದ್ದನಂತೆ. ಭಾರತದ ವಸಾಹತೀಕರಣದ ಇತಿಹಾಸ ತಿಳಿಯದವರೆಲ್ಲರ ಪ್ರಶ್ನೆ ಇದು. ಬ್ರಿಟಿಷ್‌ರ ಹಿಡಿತಕ್ಕೆ ಸಿಗದಿದ್ದ ಇತರ ಯುರೋಪಿಯನ್ನರಿಗೆ ಇಂಗ್ಲೀಷ್ ಎಂದೂ ಗ್ರೀಕ್-ಲ್ಯಾಟಿನ್ (ಕಬ್ಬಿಣದ ಕಡಲೆ) ಇದ್ದ ಹಾಗೆ.

(ಉ) London Eye

"ಲಂಡನ್ ಐ"

"ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರ" ಎಂದು ಇಲ್ಲಿ ಬಂದುಹೋದ ಕೆಲವು ಬ್ರಿಟಿಷ್ ಪ್ರಜೆಗಳು ಆಗಾಗ ಆರೋಪಿಸುವುದುಂಟು. ಒಬ್ಬ ಗಂಡಸಿಗೆ ಹಲವು ಹೆಂಡತಿಯರು, ಹೆಂಗಸರಿಗೆ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದು -- ಇವೇ ಮುಂತಾದ ಕಾರಣಗಳನ್ನು ಅವರು ನೀಡುತ್ತಿದ್ದರು. ಇಂತಹವರು ಬಿಬಿಸಿ ಚಾನೆಲ್ ಆಗಾಗ ಪ್ರಸಾರ ಮಾಡುವ, ಇಂಗ್ಲೆಂಡಿನಲ್ಲಿ ರಾಜಕೀಯ ನಿರಾಶ್ರಿತರನ್ನು ಕುರಿತ ಡಾಕ್ಯುಮೆಂಟರಿಯನ್ನು ನೋಡಿರಲಿಕ್ಕಿಲ್ಲ. ವಲಸೆ ಬಂದವರನ್ನು (ಇಮ್ಮಿಗ್ರೆಂಟ್ಸ್) ಅವರಿಗೆ `ರಾಜಕೀಯ ನಿರಾಶ್ರಿತರು' ಎಂಬ ಪಟ್ಟ ತೆರವಾಗುವವರೆಗೂ ಅಕ್ಷರಶ: ಮುಳ್ಳೀನ ಬೇಲಿಯ ಸರ್ಪಗಾವಲು. "ಏಳೇಳು ದಿನ ತಮ್ಮ ರೋಗಪೀಡಿತ ಮಗುವನ್ನು ವಿಚಾರಿಸಿಕೊಳ್ಳಲು ಒಬ್ಬ ವೈದ್ಯನನ್ನು ಇವರು ದೊರಕಿಸಿ ಕೊಡಲಿಲ್ಲ", ಎಂದು ಒಂದು ಭಾರತೀಯ ಸಂಸಾರದ ಅಳಲು. ಹೆಚ್ಚು ಬಾಹ್ಯ ತೋರಿಕೆಯ ಒರಟರೆಂದರೆ ಆಫ್ರಿಕನ್ ಹಾಗೂ ಕೆರಿಬಿಯನ್ ಕರಿಯರು. ಬ್ರಿಟಿಷರೇ ಆಗಿದ್ದರು ಮುಸ್ಲಿಮರೆಂದರೆ ಎಲ್ಲಿಲ್ಲದ ಆತಂಕ ಇವರಿಗೆ. "ಬ್ಲಡಿ ಬ್ಲಾಕ್ ಬ್ಲಡಿ ಏಷ್ಯನ್ಸ್" ಎಂದು ಮೇಲ್ವಿಚಾರಕರು ಮರೆಯಲ್ಲಿದ್ದ ಕ್ಯಾಮೆರವನ್ನು ಗಮನಿಸದೆ ಬಯ್ದಾಡುವ ದೃಶ್ಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಏಷ್ಯನ್ನರು ವಿಮಾನ ಇಳಿದರೆಂದರೆ ಲಂಡನ್ ಒಳಕ್ಕೆ ಪ್ರವೇಶಿಸಲು ಸುಮಾರು ನಾಲ್ಕು ಘಂಟೆಗಳ ಕಾಲ ಬೇಕು. ಇತರರಿಗೆ ಅಂದರೆ ಯುರೋಪ್ ಅಮೇರಿಕದವರಿಗೆ ಅರ್ಧ ಗಂಟೆ ಕಾಲ ಸಾಕು. ಮೆಡಿಕಲ್ ಚೆಕಪ್ ಎಂದು ಸಾಲು ನಿಲ್ಲಿಸುತ್ತಾರೆ. ಎದೆಯ ಎಕ್ಸ್‌ರೇ ಅವಶ್ಯಕ. "ಎಕ್ಸ್‌ರೆ ಇದ್ದವರು ಮುಂದೆ ನಿಲ್ಲಿ, ಎಕ್ಸ್‌ರೆ ರಿಪೋರ್ಟ್ ಮಾತ್ರ ಇದ್ದವರು ಹಿಂದೆ ನಿಲ್ಲಿ", ಎಂಬ ಕಾವಲುಗಾರನ ಘೋಷಣೆ ಎಲ್ಲ ರೀತಿಯ ತರ್ಕವನ್ನು ಮೀರಿದ್ದು. ಎಕ್ಸ್‌ರೆ ಇಲ್ಲದಿದ್ದ ನಮ್ಮ ಗುಂಪು ಮುಂದುವರೆದದ್ದು ಹಿಂದಕ್ಕೆ! ಐದು ನಿಮಿಷಕ್ಕೊಮ್ಮೆ ಬೆಳೆಯುತ್ತಿದ್ದ ಕ್ಯೂ ಬೆಳೆದಷ್ಟೂ ವೇಗವಾಗಿ ನಾವು ಹಿಂದೆ ಸರಿಯಬೇಕಾಗಿತ್ತು. ಕೊನೆಗೆ ಊಟದ ವೇಳೆಗೆ ವೈದ್ಯರ ಕೋಣೆಗೆ ಪ್ರವೇಶ. ಟ್ಯೂಬರ್‌ಕ್ಯುಲೋಸಿಸ್ ಕಾಯಿಲೆ ತುಂಬಿತುಳುಕುತ್ತಿರುವ ದೇಹಗಳನ್ನು ಏಷ್ಯನ್ನರೆನ್ನುತ್ತಾರೆ ಎಂಬುದು ಬ್ರಿಟಿಷರ ನಂಬಿಕೆಗಳಲ್ಲೊಂದು. "ಎಕ್ಸ್‌ರೆ ಇಲ್ಲದಿದ್ದರೆ ಮದ್ರಾಸಿನ ಬ್ರಿಟಿಷ್ ಕೌನ್ಸಿಲ್‌ನವರು ವಿಸಾ ಹೇಗೆ ಕೊಡಿಸಿದರು? ನಾನು ಮತ್ತೆ ಎಕ್ಸ್‌ರೆ ತೆಗೆಸುವುದು ಅನವಶ್ಯಕ", ಎಂದೆ. "ನನಗೆ ಸುಸ್ತಾಗಿದೆ. ಈಗ ಊಟದ ಸಮಯ. ನಿಮ್ಮ ಇಲ್ಲಿನ ವಿಳಾಸ ನೀಡಿ. ಈ ಫಾರಂ ಭರ್ತಿ ಮಾಡಿ ನನಗೆ ಪೋಸ್ಟ್ ಮಾಡಿ," ಎಂದ ವೈದ್ಯೆ ಹೊರಕ್ಕೆ ಹೊರಟೇಬಿಟ್ಟರು, ನನ್ನ ಹಿಂದೆ. ಅಫ್ಘ್ಹಾನಿಸ್ತಾನ ಮುಂತಾದ ಯುದ್ಧ, ಕ್ಷಾಮ, ಬಡತನ ಪೀಡಿತ ದೇಶಗಳಿಂದ ಬರುವವರ ಬಗ್ಗೆ ಒಂದು ರೋಮಾಂಚಕ ನೈಜ ವರದಿಯಿದೆ. ಲಂಡನ್ನಿನ ನಿಲ್ದಾಣದಲ್ಲಿ ಇಳಿದ ವಲಸಿಗನೊಬ್ಬ ಪಾಸ್‌ಪೋರ್ಟನ್ನು ಹರಿದು, ಅಕ್ಷರಶ: ನುಂಗಿ, ನೀರು ಕುಡಿದುಬಿಟ್ಟನಂತೆ. ಇಮ್ಮಿಗ್ರೇಷನ್ ಆಫೀಸರರು ಸಾಧ್ಯವಿರುವ ಇಲ್ಲ ಭಾಷೆಗಳಲ್ಲೂ ಕೇಳಿಯಾದ ನಂತರ ಎಲ್ಲ ಪ್ರಶ್ನೆಗಳಿಗೂ ಹೊಸಹಾಗಿ ಮೂಗನಾದವನಂತೆ ಆಡಿ, ಆತ ತಲೆ ಕೆಡಿಸಿಟ್ಟನಂತೆ. ಐದು ನಿಮಿಷಕ್ಕೊಂದೊಂದು ಏರೋಪ್ಲೇನಿನಲ್ಲಿ ಭರ್ತಿ ಜನ ಬಂದಿಳಿಯುವ ಲಂಡನ್ನಿನ `ಹೀಥ್ರೂ' ವಿಮಾನ ನಿಲ್ದಾಣದಲ್ಲಿ ಈತನನ್ನು ವಿಶೇಷವಾಗಿ, ಗಂಟೆಗಟ್ಟಲೆ ವಿಚಾರಿಸಲಾಗದೆ, ಬಂದಲ್ಲಿಗೆ ಹಿಂದಿರುಗಿಸೋಣವೆಂದರೆ ಆತನ ಮೂಲವೇ ತಿಳಿಯದೆ ಪಜೀತಿಗಿಟ್ಟುಕೊಂಡಿತು ಸಂಬಂಧಪಟ್ಟ ಅಧಿಕಾರಿಗಳಿಗೆ. ಕೂಡಲೆ ಸರ್ಕಾರದ ಪರ ಹಾಗೂ ಈತನ ಪರ ಒಬ್ಬೊಬ್ಬ ಲಾಯರ್‌ಗಳ ನೇಮಕ, ಮೂರು ವರ್ಷದ ಕೇಸ್ ನಡೆವವರಿಗೂ ಈತನಿಗೆ ಇರಲೊಂದು ಮನೆ, ಊಟ ತಿಂಡಿ ಖರ್ಚಿಗೆ ಹಣವನ್ನು ತಿಂಗಳ ಲೆಕ್ಕದಲ್ಲಿ ನೀಡಿಬಿಟ್ಟರಂತೆ. ಮೂರುವರ್ಷದ ಕೇಸು ಐದು ವರ್ಷ ದಾಟಿದ್ದರಿಂದ ಈತನಿಗೆ ಸಂಪೂರ್ಣ ಬ್ರಿಟಿಷ್ ಪೌರತ್ವ ನೀಡಲಾಯಿತು. "ನನಗೆ ಇರಲು ಮನೆಯಿಲ್ಲ, ತಿನ್ನಲು ಊಟವಿಲ್ಲ, ಸಹಾಯ ಮಾಡಿ", ಎಂದು ಶುದ್ಧ ಇಂಗ್ಲೀಷಿನಲ್ಲಿ ಬೋರ್ಡ್ ತೂಗಿಹಾಕಿಕೊಂಡು ಲಂಡನ್ನಿನ ಟ್ಯೂಬ್ ಸ್ಟೇಷನ್‌ಗಳಲ್ಲಿ, ಬ್ರಿಜ್‌ಗಳ ಕೆಳಗೆ ಈತ ಕುಳಿತಿರುತ್ತಿದ್ದನಂತೆ, ಚಳಿಯನ್ನು ತಪ್ಪಿಸಿಕೊಳ್ಳಲು. ಬಂದ ಭಿಕ್ಷೆ ಆತನ ಮೇಲು ಖರ್ಚಿಗಾಯಿತು. ಲಂಡನ್ ಮೂಲಕ ಇಂಗ್ಲೆಂಡಿಗೆ ವಲಸೆ ಹೋಗುವುದು ಅದೆಷ್ಟು ಕಟ್ಟುನಿಟ್ಟಿನ ಕ್ರಮವೆಂಬುದಕ್ಕೆ ಇದೊಂದು ಕ್ಲಾಸಿಕ್ ಉದಾಹರಣೆಯಷ್ಟೇ.

ಕೊನೆಯಲ್ಲಿ "ಹಿಂದಿರುಗಿ ಭಾರತಕ್ಕೆ ಹೋಗುತ್ತಿದ್ದೀರ? ನಿಮಗೇನು ತಲೆಗಿಲೆ ಕೆಟ್ಟಿದೆಯೇ" ಎಂದು ಕೇಳಿದ ಅಲ್ಲಿನ ಭಾರತೀಯರು ಬಹುಮಂದಿ. "ನಿಮ್ಮದು ಪೇಪರ್ ಸೂರ್ಯ. ಭಾರತದ ಸೂರ್ಯನ ಬಿಸಿಲಿನ ಜಳಕ್ಕೆ ಏನನ್ನು ಬೇಕಾದರೂ ಕೊಟ್ಟೇನು--ಇಡೀ ಇಂಗ್ಲೆಂಡನ್ನೇ ತ್ಯಾಗಮಾಡಿಬಿಡಬಲ್ಲೆ" ಎಂದು ಹಿಂದಿರುಗಿ ನುಡಿದು, ಹಿಂದಿರುಗಿದ್ದೆ. "ಪಾಪ ಬ್ರಿಟಿಷರು" ಎನ್ನೋಣವೆಂದರೆ ಲಂಡನ್ ಎಂಬ ಬಹುವರ್ಣೀಯ, ಬಹುಭಾಷೀಯ ಮಿನಿ ಜಗತ್ತಿನಲ್ಲಿ ಅಂತಹವರ್ಯಾರೂ ಕಾಣಲಿಲ್ಲ. ಎಚ್. ಎ. ಅನಿಲ್ ಕುಮಾರ್