ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ

ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ

ಬರಹ

ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ. ಸತ್ಯನಾರಾಯಣ ತುಂಬ ಕಡಿಮೆ ಆದರೆ ತುಂಬಾ ಅಚ್ಚುಕಟ್ಟಾಗಿ ಬರೆಯುತ್ತಾರೆ. ಅವರ ಬರೆಹ ನಂಬುವುದು ಬರೆಹದಲ್ಲಿನ ಶಕ್ತಿಯನ್ನು ಮಾತ್ರ. ಅವರ ಪ್ರಬಂಧಗಳನ್ನ ಓದಿದ್ದರೆ, ಕಥೆಗಳನ್ನ ಓದಿದ್ದರೆ ನಿಮಗೆ ಇದು ಮನಸ್ಸಿಗೆ ಬರುತ್ತದೆ.ಆದ್ದರಿಂದಲೆ ಒಂದು ತರಹೆ ಅನ್‌ ಕಾಂಪ್ರಮೈಸಿಂಗ್ ಬರಹಗಾರ ಇವರು ಅಂತ ನನಗೆ ಅನ್ನಿಸಿದೆ. ಈ ಕಾದಂಬರಿಯಲ್ಲಿ ನಿಜ ಹೇಳಬೇಕೆಂದರೆ ಅನ್ನೋ ಒಂದು ಸಾಲುಒಂದು ಭಾಗವಾಗಿದೆ. ಇದು ಕಥೆಯ protagonist ರಂಗನಾಥನ ಸಮಸ್ಯೆಯಾ? ಈ ರಂಗನಾಥ ನಾವೋ, ನೀವೋ, ಅಥವಾ ಸತ್ಯನಾರಾಯಣರಾ ಅಂತ ಕೇಳಿಕೊಂಡು ಕಾದಂಬರಿನ ಓದೋಕೆ ಶುರು ಮಾಡಿದಿರೋ ಪ್ರಾಬ್ಲಂ ಶುರುವಾಗುತ್ತೆ. ಅದಕ್ಕೇನೆ ನಿರಾಳವಾಗಿ ಓದಿ. ಇದರಲ್ಲಿ ತುಂಬಾ ಎಳೆಗಳಿದ್ದಾವೆ. ರಂಗನಾಥ ಮೊದಲು ಪ್ರವೇಶ ಮಾಡ್ತಾನೆ. ಆದ್ದರಿಂದ ಕಥೆಯ protagonist ಅವನು ಅಂದೆ. ಆದರೆ ಪ್ರಾರ್ಥನಾ, ಸುಧಾ, ಸ್ವಾಮಿನಾಥ, ಅವನ ತಂದೆ ನಾರಾಯಣ ಮೂರ್ತಿ ಇವರೆಲ್ಲ ಈ ಫ್ಯಾಬ್ರಿಕ್ಕಿನಲ್ಲಿ ವಾರ್ಫ್ ಮತ್ತು ವೆಫ್ಟ್ ಅಂತಾರಲ್ಲ ಹಾಗೆ ಕೂಡಿಕೊಂಡಿದ್ದಾರೆ. ಆದರೆ ಅವರು ಆ ಕ್ಷಣಕ್ಕೆ ಸಂತೆಗೆ ಬಂದವರ ಹಾಗೆ ಇದ್ದಾರೆ. ಪ್ರತಿಯೊಂದು ಎಳೆಯಲ್ಲು ಅವರವರು protagonist ಆಗಿದ್ದಾರೆ. ಹೀಗೆ ಬಿಡಿಬಿಡಿಯಾದರೂ ಅವೆಲ್ಲವೂ ಒಂದು ಆರ್ಗ್ಯಾನಿಕ್ ಆಗಿ ಕೂಡಿಕೊಳ್ಳುವುದು ಕಾದಂಬರಿಯನ್ನು ಓದಿ ಮುಗಿಸಿದ ಮೇಲೆಯೇ. ಸತ್ಯನಾರಾಯಣ ಬರೆಯುವ ಬಹಳ ಕಥೆಗಳು ಹೀಗೆ ಒಳಗೆ ಸೇರಿಕೊಳ್ಳುವ ಆಮೇಲೆ ದೊಡ್ಡದಾಗಿ ಬೆಳೆದು ಹೊಟ್ಟೆ ಸೀಳಿಕೊಂಡು ಹೊರಬರುವ ಹನುಮಂತನ ಗುಣವನ್ನ ಪಡೆದುಕೊಂಡಿರುತ್ತವೆ. ಸಾಮಾನ್ಯವಾಗಿ ಕವಿತೆ ಬೇಡುತ್ತಲ್ಲ ಓದಿನ ನಂತರ ಮೌನ ತಾಳಿ ನಮ್ಮೊಂದಿಗೆ ನಾವೇ ಅನುಸಂಧಾನದಲ್ಲಿ ತೊಡಗುವುದನ್ನು, ಅಂತಹ ಮನಸ್ಥಿತಿಯನ್ನು ಡಿಮ್ಯಾಂಡ್ ಮಾಡುತ್ತವೆ. ಅನುಭವಕ್ಕೆ ಬರದ್ದನ್ನು ಬರೆಯಬಾರದು ಎಂದು ಹಠ ತೊಟ್ಟಂತೆ ಬರೆಯುವ ಸತ್ಯನಾರಾಯಣ ಅಪ್ಪರ್(?) ಮಧ್ಯಮವರ್ಗದ ಮನೋಧಾರ್ಮಿಕ ಸಂಕಟಗಳನ್ನು ತಮ್ಮ ಬರವಣಿಗೆಯ ಮೂಲ ಕನ್ಸರ್ನ್ ಮಾಡಿಕೊಂಡಿದ್ದಾರೆ ಅನ್ನಿಸುತ್ತೆ.