ಕನ್ನಡ ಚಲನಚಿತ್ರಗಳು

ಕನ್ನಡ ಚಲನಚಿತ್ರಗಳು

ಬರಹ

ಕಳೆದ ರಾಜ್ಯೋತ್ಸವದಂದು ಕನ್ನಡದ ಚಲನಚಿತ್ರಗಳಿಗೆ ಕನ್ನಡದ ಹೆಸರಿದ್ದರೆ ಮಾತ್ರ ಚಿತ್ರವನ್ನು ನೋಡುತ್ತೇನೆ ಎಂದು ನಿರ್ಧರಿಸಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಆದರೆ ಕಳೆದ ಶನಿವಾರ ಬುದ್ದಿವಂತ ಚಲನ ಚಿತ್ರವನ್ನು ನೋಡಿದೆ. ಈ ಚಿತ್ರದ ಕಾಲು ಭಾಗ ತೆಲುಗಿನಲ್ಲಿದೆ. ಒಂದು ಹಾಡು ಕೂಡ ತೆಲುಗಿನಲ್ಲಿದೆ. ನನಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರದು. ತೆಲುಗು ಮತ್ತು ತಮಿಳಿಗೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕೂಡ ನನಗಾಗದು. ಹೀಗಿರುವಾಗ ಚಿತ್ರದ ಸುಮಾರು ಸಂಭಾಷಣೆಗಳು ಅರ್ಥವಾಗಲಿಲ್ಲ ಎಂದು ಬೇರೆ ಹೇಳಬೇಕಿಲ್ಲ.

ಕನ್ನಡದ ಸೆನ್ಸಾರ್ ಬೋರ್ಡ್ ನವಗಿಗೆ ತೆಲುಗು,ತಮಿಳು ಮಲಯಾಳಂ ಭಾಷೆಗಳು ಬರುತ್ತವೆಯಾ? ಅವರು ಹೇಗೆ ಅನ್ಯ ಭಾಷೆಯ ಸಂಭಾಷಣೆಗಳು ಸಭ್ಯವಾಗಿವೆ ಎಂದು ಗುರುತಿಸುತ್ತಾರೆ? ಅಥವಾ ಸುಮ್ಮನೆ ಸರ್ಟಿಫಿಕೇಟ್ ಕೊಡುತ್ತಾರೋ ಗೊತ್ತಿಲ್ಲ.

ಕನ್ನಡ ಚಿತ್ರಗಳಿಗೆ ಇರುವ ತೆರಿಗೆ ವಿನಾಯಿತಿ ಅನ್ಯ ಚಿತ್ರಗಳಿಗೆ ಇರುವುದಿಲ್ಲ. ಹೀಗಿರುವಾಗ ಬುದ್ದಿವಂತ ದಂತಹ ಚಲನಚಿತ್ರಗಳಿಗೆ ತೆರಿಗೆ ವಿನಾಯಿತಿ ಕೊಡುವುದು ನ್ಯಾಯವೇ?
ತೀರ್ಥಹಳ್ಳಿಯ ನನ್ನಂತ ಕನ್ನಡ ಮಾತ್ರ ತಿಳಿದಿರುವವರ ಅನುಕೂಲಕ್ಕೆ ಕನ್ನಡದಲ್ಲಿ ಸಬ್ ಟೈಟಲ್ ಕೊಟ್ಟರೆ ಅದನ್ನಾದರೂ ಓದಿಕೊಂಡು ಚ.ಚಿತ್ರವನ್ನು ಅರ್ಥಮಾಡಿಕೊಳ್ಳಬಹುದು. ಕೊಟ್ಟ ದುಡ್ಡಿಗೆ ಸಮಾಧಾನಪಡಬಹುದು.
ಭಿತ್ತಿಪತ್ರಗಳ ಮೇಲೆ ಕನ್ನಡ/ಕಲರ್ ಎಂದು ಬರೆದಿರುತ್ತಾರೆ. ಇನ್ನು ಮುಂದೆ ಕಡ್ಡಾಯವಾಗಿ ಕನ್ನಡ/ತೆಲುಗು, ಕನ್ನಡ/ಮಲಯಾಳಂ ಎಂದು ನಮೂದಿಸಿದರೆ, ಕನ್ನಡ ಮಾತ್ರ ತಿಳಿದ ಜನರು ಮೋಸ ಹೋಗುವುದು ತಪ್ಪುತ್ತದೆ.

ಚಿಕ್ಕವನಿರುವಾಗ ನಾನು ಒಂದು ಹಾಡು ಗೊಣಗುತ್ತಿದ್ದೆ. 'ಯಾರೆ ನೀನು ರೋಷಾ ಹೂವೆ....' ಎಂದು. ಎಷ್ಟೋ ವರ್ಷಗಳ ನಂತರ ತಿಳಿಯಿತು ಅದು ರೋಷಾ ಅಲ್ಲ, ರೋಜಾ ಅಂತ. ಕಳೆದ ತಿಂಗಳು ನಮ್ಮ ನೆಂಟರೊಬ್ಬರು ಸಾಯ್ಲೋ, ಸಾಯ್ಲೋ ಎಂದು ಗೊಣಗುತ್ತಿದ್ದರು. ಅವರಿಗೆ ಅದು ಸ್ಟೈಲೋ ಸ್ಟೈಲೋ ಅಂತ ಸರಿಯಾಗಿ ಹೇಳಿಕೊಟ್ಟೆ. ನಮ್ಮ ಮೆದುಳು ಕಿವಿಯ ಮೇಲೆ ಬಿದ್ದ ಪದವನ್ನು ಅದಕ್ಕೆ ಗೊತ್ತಿರುವ ಪದದೊಂದಿಗೆ ಹೊಂದಿಸುತ್ತದೆ. ಕನ್ನಡದಲ್ಲಿ ಯಾವುದೋ ಪದಗಳನ್ನು ತೂರಿಸಿ ಅವು ರಾಜ್ಯದ ಜನರಿಗೆಲ್ಲಾ ಗೊತ್ತು ಎಂದು ಭಾವಿಸುವುದು ತಪ್ಪು. ಈಗ ಸೈಕೋ ಎಂಬ ಚಿತ್ರ ಬಂದಿದೆ. ರಾಜ್ಯದ ಎಷ್ಟು ಜನರಿಗೆ ಈ ಪದದ ಅರ್ಥ ಗೊತ್ತು? ಈ ತರದ ಹೆಸರುಗಳ ಅರ್ಥವನ್ನು ಕನ್ನಡದಲ್ಲಿ ಎಲ್ಲಾದರೂ ಸಣ್ಣಗೆ ಬರೆದರೆ ನಮ್ಮೂರ ಜನರೂ ತಿಳಿದುಕೊಳ್ಳಬಲ್ಲರು.

ಚಲನ ಚಿತ್ರ ಮತ್ತು ಧಾರಾವಾಹಿಗಳಲ್ಲಿ ಲಾಯರ್ ಅಥವಾ ಡಾಕ್ಟರ್ ದೃಶ್ಯ ಬಂತು ಎಂದರೆ ಅಲ್ಲಿ ಇಂಗ್ಲೀಷ್ ವಾಖ್ಯಗಳು ಪುಂಖಾನು ಪುಂಖವಾಗಿ ಬಳಸಲಾಗುತ್ತದೆ. ಇಲ್ಲಿ ಕನ್ನಡ ಬಳಸಿದರೆ ಅವಮಾನವೇನು?

ಏಕೆ ಹೀಗೆ?