ಅವನು ಮತ್ತು ನೆರಳು
ಬರಹ
ಒಮ್ಮೆ, ಒಬ್ಬಾನೊಬ್ಬ
ತನಗಿಂತಲೂ ದೊಡ್ಡದಾಗುತ್ತಿರುವ
ತನ್ನದೇ ನೆರಳಿಗೆ ಹೆದರಿ
ಗಡ ಗಡ ನಡುಗಿ
ಅದರಿಂದ ತಪ್ಪಿಸಿಕೊಳ್ಳಲೇ ಬೇಕೆಂದು
ಓಡಿದ, ಓಡಿದ, ಓಡಿದ.......
ದರಿದ್ರದ ನೆರಳು
ಅವನ ಇತಿಹಾಸ ನುಂಗಿ
ಬೃಹದಾಕರವಾಗಿ ಬೆಳೆದು
ಗಹಗಹಿಸಿ ನಕ್ಕಿತು.
ತಪ್ಪಿಸಿಕೊಂಡಷ್ಟೂ ಮತ್ತೆ ಮತ್ತೆ
ಕತ್ತಿಗೇ ಹತ್ತಿ ಕೂತು
ಕತ್ತಿ ಝಳುಪಿಸಿ
ಭೂತವನ್ನಾವಹಿಸುವ ವರ್ತಮಾನ
ಮತ್ತದರ ದುರಂತ ಛಾಯೆ........
ಮನೆಯ ಮಾಡಿಗೆ ಏರಿ
ಮಂಡಿಗೆ ತಲೆ ತೂರಿಸಿ ಕೂತು ಅತ್ತ.
ಕಣ್ಣು ತೆರೆದರೇನಾಶ್ಚರ್ಯ,
ನೆರಳೂ ಅವನ ಸಮಸಮನಾಗಿ
ಬೆನ್ನ ಮೇಲೆ ಕೈ ಇಟ್ಟು ಸಂತೈಸಿದೆ......
ಬಿಕ್ಕುತ್ತಲೇ ಅದಕ್ಕೆ ಕೈ ಮುಗಿದು
ಬೆಳಕಿನತ್ತ ಮೆಲ್ಲಗೆ ತೆವಳಿದ.
ಅರೆ ನೆರಳೀಗ ಮಾಯವಾಗಿದೆ
ಅವನನ್ನೆದುರಿಸದೇ ಕತ್ತಲಿಗೆ ಓಡಿದೆ.
ಅವನ ಮುಖದಲ್ಲೊಂದು ಮಂದಹಾಸ
ಮುಂದಿನ ದಾರಿ ಎಷ್ಟು ಸುಸೂತ್ರ!